ಹಾಡು ಪಾಡು

ಮಹಾರಾಜರನ್ನು ಹೊತ್ತಿದ್ದ ಮಂದಗಮನ ಗಜರಾಜ

ಪದ್ಮಾ ಶ್ರೀರಾಮ

ಸುಮಾರು ೭೦-೭೨ ವರ್ಷಗಳ ಹಿಂದೆ ‘ದಸರಾ’ ಉತ್ಸವದ ಬಗ್ಗೆ ನಮಗಿದ್ದ ಆಕರ್ಷಣೆ, ಮೈಸೂರಿಗೆ ಹೋಗಬೇಕು, ಅಲ್ಲಿನ ಎಲ್ಲ ಉತ್ಸವಗಳು, ಅರಮನೆಯ ದೀಪಾಲಂಕಾರ, ಜಂಬೂಸವಾರಿ ಇವುಗಳನ್ನು ನೋಡಬೇಕೆಂಬ ತವಕ, ಬೇರೆ ಊರಿನ ಎಳೆಯರಾದ ನಮ್ಮನ್ನು ಹೇಗೆ ಆಕ್ರಮಿಸಿರುತ್ತಿದ್ದವು ಎನ್ನುವುದನ್ನು ಈಗ ಹೇಳ ಹೊರಟ ನನಗೆ, ಮತ್ತೊಮ್ಮೆ ಮಾನಸಿಕವಾಗಿ ಬಾಲ್ಯವನ್ನು ಸವಿದಂತೆ.

ಆಗಿನ ದಿನಗಳಲ್ಲಿ ನಮ್ಮ ಶಾಲೆಗಳಿಗೆ ಹದಿನೈದು ದಿನಗಳ ಕಾಲ ದಸರಾ ರಜಾ ಸಿಗುತ್ತಿತ್ತು. ಜೊತೆಗೆ ನನ್ನ ತಂದೆ-ತಾಯಂದಿರಿಗೆ ‘ಮೈಸೂರಿಗೆ ಹೋಗೋಣ, ದಸರಾ ನೋಡಬೇಕು’ ಎನ್ನುವ ನನ್ನ ಕಾಟ ಶುರುವಾಗುತ್ತಿತ್ತು. ನಮ್ಮ ತಾಯಿಯವರೊಂದಿಗೆ ಹೊರಟರೆ ರೈಲಿನಲ್ಲಿ ಹೆಂಗಸರ ಕಂಪಾರ್ಟ್‌ಮೆಂಟ್‌ನಲ್ಲಿ ಪಯಣಿಸಬೇಕಿತ್ತು ಮತ್ತು ಜಾಗಕ್ಕಾಗಿ ಹಳ್ಳಿ ಹೆಂಗಸರ ಜಗಳ ಜೂಟಿ ನೋಡಿ ಸಹಿಸಬೇಕಿತ್ತು. ತಂದೆಯವರು ಜೊತೆಗಿದ್ದರೆ ಸೆಕೆಂಡ್ ಕ್ಲಾಸ್ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣ, ಜೊತೆಗೆ ಮೈಸೂರಿನ ಗರ್ಗೇಶ್ವರಿ ಚೌಕ, ಇರ್ವಿನ್ ರಸ್ತೆ, ಇತ್ಯಾದಿ ಕಡೆಗಳಲ್ಲಿ ವಾಸವಿರುವ ಸೇಟುಗಳ ಮನೆಗಳಿಗೆ ‘ದಸರಾ’ ನೋಡಲು ಬರುತ್ತಿದ್ದ ಬಾಂಬೆ ಸೇಟುಗಳು ತಮ್ಮ ತಿಂಡಿ ಡಬ್ಬಿಗಳನ್ನು ತೆಗೆದು ‘ಸ್ವಾಹ’ ಮಾಡುವ ಬಗೆಯನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದೆ. ಮೈಸೂರು ತಲುಪಿ, ನಮ್ಮ ಚಿಕ್ಕಜ್ಜಿಯ ಮನೆಗೆ ದಾಖಲಾಗುತ್ತಿದ್ದೆವು.

ಸಂಜೆ ತಂದೆಯವರೊಡನೆ ಟಾಂಗಾದಲ್ಲಿ ಹೋಗಿ, ಅರಮನೆ ಆವರಣಕ್ಕೆ ಕಾಲಿಟ್ಟರೆ ಅದೊಂದು ಜಗಮಗ ದೀಪಗಳ ಮಾಯಾಲೋಕ. ಇದೆಲ್ಲವನ್ನು ಬೆರಗಾಗಿ ನೋಡುತ್ತಿದ್ದ ನನ್ನನ್ನು ತಂದೆಯವರು ಎಚ್ಚರಿಸಿ ‘ಅಲ್ನೋಡು ಮಹಾರಾಜರು ದರ್ಬಾರ್‌ನಲ್ಲಿ ಸಿಂಹಾಸನದ ಮೇಲೆ ಕುಳಿತಿದ್ದಾರೆ’ ಎಂದು ಅರಮನೆ ದಿಕ್ಕಿಗೆ ಕೈಮಾಡಿ ತೋರಿಸಿದರು. ನೋಡಿದೆ. ಅರಮನೆಯೆಲ್ಲಾ ದೀಪಗಳಿಂದ ಜಗಜಗಿಸುತ್ತಿವೆ. ದೊಡ್ಡ ದರ್ಬಾರ್ ಹಾಲ್ ಕಾಣುತ್ತಿದೆ ಆದರೆ ಮಹಾರಾಜರು ಯಾರು? ಗೊತ್ತಾಗಲಿಲ್ಲವಲ್ಲಾ? ಆಗೊಬ್ಬ ಒಂದು ಸ್ಟೂಲ್ ಹಿಡಿದು ಬರುತ್ತಿದ್ದವನನ್ನು ತಂದೆಯವರು ಕೂಗಿ ಕರೆದು, ಅವನು ಕೇಳಿದಷ್ಟು ದುಡ್ಡು ಕೊಟ್ಟು, ನನಗೆ ಮಹಾರಾಜರನ್ನು ತೋರಿಸು ಎಂದು ಹೇಳಿದರು. ಅವನು ನನ್ನನ್ನು ಸ್ಟೂಲ್ ಮೇಲೆ ನಿಲ್ಲಿಸಿ, ಒಂದು ದುರ್ಬೀನನ್ನು ನನ್ನ ಕೈಗೆ ಕೊಟ್ಟು, ಅದನ್ನು ಎರಡೂ ಕೈಗಳಲ್ಲಿ ಹಿಡಿದು ಅದರ ಮೂಲಕ ದರ್ಬಾರ್ ನಡೆಯುತ್ತಿರುವ ಕಡೆಗೆ ನೋಡು ಎಂದು ಹೇಳಿಕೊಟ್ಟ. ನೋಡಿದೆ! ಮಾರಾಜರು ಕಾಣಿಸುತ್ತಿದ್ದಾರೆ! ಚಿನ್ನದ ಸಿಂಹಾಸನದ ಮೇಲೆ ಚಿನ್ನದ ಬಣ್ಣದ ಮೆರುಗಿನ ವೇಷಭೂಷಣ, ಪೇಟ, ಕೊರಳಲ್ಲಿ ಹಾರಗಳನ್ನು ಧರಿಸಿದ ಮಹಾರಾಜರು ಗಂಭೀರವಾಗಿ ಕುಳಿತಿದ್ದಾರೆ!

ಅಕ್ಕಪಕ್ಕಗಳಲ್ಲಿ ಮಹಾರಾಜರ ದರ್ಬಾರಿಗೆ ಆಹ್ವಾನಿತರಾದ ಜನ ತಕ್ಕ ವೇಷಭೂಷಣ, ಪೇಟ ಧರಿಸಿ ಕುಳಿತಿದ್ದಾರೆ! ಆಗಿನ ದಿನಗಳಲ್ಲಿ ದಸರಾ ದರ್ಬಾರಿಗೆ ಆಹ್ವಾನಿತರಾಗುವುದು ಒಂದು ದೊಡ್ಡ ಗೌರವವಾಗಿತ್ತು. ಎಲ್ಲೆಲ್ಲೂ ಬೆಳಕು, ಬೆಳಕು! ‘ವಿಜಯದಶಮಿ’ ದಿನ ಜಂಬೂಸವಾರಿ. ಇದನ್ನು ನಮ್ಮ ಹಳ್ಳಿ ಕಡೆ ‘ಪೌಜು’ ಎನ್ನುತ್ತಿದ್ದರು. ಆಗ ಈಗಿನಂತೆ ಜಂಬೂಸವಾರಿ ನೋಡಲು ಟಿಕೆಟ್, ಜಂಬೂಸವಾರಿ ದಾರಿಯಲ್ಲಿ ಜಾಗ ಕಾಯ್ದಿರಿಸುವಿಕೆ ಏನೂ ಇರಲಿಲ್ಲ. ಮೆರವಣಿಗೆ ನೋಡಲು ಕಾತುರರಾದ ಜನ, ಜಂಬೂಸವಾರಿಯ ದಾರಿಯಲ್ಲಿ ಸಿಗುವ ಕಟ್ಟಡಗಳು, ಮಹಡಿಗಳು, ದೊಡ್ಡ ಮರಗಳ ಕವಲುಗಳಲ್ಲಿ ಕುಳಿತು ಕಾಯುತ್ತಿದ್ದರು. ತಂದೆಯವರು ನನ್ನನ್ನು ಕೆ.ಆರ್.ಆಸ್ಪತ್ರೆ ಒಳಗಡೆ ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿಕೊಂಡರು. ‘ಧಾಮ್ ಧೂಮ್’ ಬ್ಯಾಂಡಿನ ಶಬ್ದ ಕೇಳಿಬರತೊಡಗಿತು. ‘ಬತ್ತಾವ್ರೆ’ ಎಂಬ ಮಾತಿನೊಂದಿಗೆ ನಿಧಾನವಾಗಿ ಬಂದರು. ಕಾಲಾಳುಗಳು, ಸೈನಿಕರು, ಅಶ್ವಾರೋಹಿಗಳು, ಮಂದಗತಿಯಲ್ಲಿ ಪಟ್ಟದಾನೆ ಬರುತ್ತಿದೆ! ಆನೆ ಮೇಲೆ ಚಿನ್ನದ ಅಂಬಾರಿ ಕಾಣಿಸುತ್ತಿದೆ! ಪಟ್ಟ ದಾನೆ ಗಂಭೀರವಾಗಿ ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಮಾವುತನನ್ನ ತಲೆಯ ಮೇಲೆ ಇಟ್ಟುಕೊಂಡು ಬರುತ್ತಿದೆ! ಬ್ಯಾಂಡ್, ಓಲಗಗಳ ಸಮೇತ ಆನೆ, ಅಂಬಾರಿ ಹತ್ತಿರವಾದಂತೆ ಚಿನ್ನದ ಬಣ್ಣದ ಡ್ರೆಸ್ ಹಾಕಿ, ತಲೆಗೆ ಚಿನ್ನದ ಪೇಟ, ಕೊರಳಲ್ಲಿ ಸರಗಳನ್ನು ಹಾಕಿ, ತಲೆ ಮೇಲೆ ಬಂಗಾರದ ಬಣ್ಣದ ಪೇಟ, ಕಣ್ಣುಗಳಿಗೆ ಕೂಲಿಂಗ್ ಗ್ಲಾಸ್ ಹಾಕಿದ ಮಹಾರಾಜರು, ಆಗಾಗ ಆ ಕಡೆ, ಈ ಕಡೆ ನೋಡಿ ಕೈಮುಗಿಯುತ್ತಿದ್ದಾರೆ! ಹತ್ತಿರ ಬಂದಂತೆ ಇನ್ನೊಬ್ಬರು ಮಹಾ ರಾಜರ ಹಿಂದೆ ಕುಳಿತಿರುವುದು ಕಾಣಿಸಿತು. ಅವರೂ ಒಳ್ಳೆ ವೇಷ ಭೂಷಣ, ಪೇಟ ಹಾಕಿದ್ದಾರೆ! ಇವರ‍್ಯಾರು? ತಂದೆಯವರು ‘ಅವರು ಮಹಾರಾಜರ ಸೋದರಮಾವ. ಹೀಗೆ ರಾಜರ ಹಿಂದೆ ಅವರ ಸೋದರ ಮಾವ ಕೂರುವುದು ಪದ್ಧತಿ’ ಎಂದು ಹೇಳಿದರು.

ಪಟ್ಟದ ಆನೆ ನಾವು ನಿಂತ ನೇರಕ್ಕೆ ಬಂದಾಗ, ದರ್ಬಾರ್ ಡ್ರೆಸ್ಸಿನ ಒಬ್ಬ ಮಹನೀಯರು ಹಾರ ಹಿಡಿದು ಕಾಯುತ್ತಿದ್ದರು. ಆನೆ ನಿಂತಿತು. ತುದಿಯಲ್ಲಿ ತಟ್ಟೆಯಿದ್ದ ಉದ್ದನೆಯ ಕೋಲನ್ನು ಹಿಡಿದ ಒಬ್ಬನು ಹತ್ತಿರ ಬಂದಾಗ ಈ ಮಹನೀಯರು ತಟ್ಟೆಯಲ್ಲಿ ಹಾರವನ್ನಿಟ್ಟು, ಕೈಮುಗಿದು ನಿಂತುಕೊಂಡರು. ತಟ್ಟೆಯಲ್ಲಿದ್ದ ಹಾರವನ್ನು ಕೋಲು ಹಿಡಿದಾತ ಅಂಬಾರಿಯ ಎತ್ತರಕ್ಕೆ ಹಿಡಿದಾಗ ಮಹಾರಾಜರು ಹಾರವನ್ನು ಸ್ವೀಕರಿಸಿ, ಕೈಮುಗಿದರು. ಬಂಗಾರದ ಅಂಬಾರಿಯಲ್ಲಿ ಆಸೀನರಾಗಿದ್ದ ಮಹಾರಾಜರನ್ನು ಹೊತ್ತ ಪಟ್ಟದಾನೆ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ಮಂದಗಮನದಲ್ಲಿ ಸಾಗಿತು. ಜನರು ಚಿನ್ನದ ಅಂಬಾರಿಯಲ್ಲಿ ಆಸೀನರಾಗಿದ್ದ ಮಹಾರಾಜರಿಗೆ ಜಯಕಾರ ಹಾಕಿದಾಗ ಅವರು ಎರಡೂ ಕಡೆಯ ಜನರಿಗೆ ಕೈಮುಗಿಯುತ್ತಿದ್ದರು. ಅಂಬಾರಿಯ ಹಿಂದೆ ಅರಮನೆ, ಕೋಚ್‌ಗಾಡಿಗಳೂ ಸಾಗಿದವು. ಅರಮನೆ ಬ್ಯಾಂಡ್ ಮಧ್ಯೆ ಮಧ್ಯೆ ಪಟಾಕಿ ಸದ್ದು ನಿಧಾನವಾಗಿ ಕರಗ ತೊಡಗಿದವು. ಬಂಗಾರದ ಅಂಬಾರಿ, ಅಂಬಾರಿಯಲ್ಲಿ ಜಯ ಚಾಮರಾಜೇಂದ್ರ ಒಡೆಯರು, ಜನರ ಜಯಕಾರಕ್ಕೆ ಅವರು ಕೈಮುಗಿಯುತ್ತಿದ್ದ ರೀತಿ ಇನ್ನೂ ನನ್ನ ನೆನಪಿನ ಕಣ್ಣಿನಲ್ಲಿ ಉಳಿದಿದೆ.

” ಇಂದಿನ ಹೊಸಿಲಲ್ಲಿ ನಿಂತು, ಅಂದಿನ ‘ದಸರಾ’ವನ್ನು ನೆನೆಯುವುದು ಎಂದರೆ ಕಾಲಚಕ್ರದ ಪಯಣದಲ್ಲಿ ಮತ್ತೆ ಹುಡುಗಿಯಾಗುವುದು ಎಂದೆನಿಸುತ್ತದೆ.”

 

 

ಆಂದೋಲನ ಡೆಸ್ಕ್

Recent Posts

ಪ್ರೇಮದಲ್ಲಿ ರಾಕ್ಷಸನೂ ಮಗುವೇ ತಾನೇ…

ಕೃಪಾ ದೇವರಾಜ್, ಮಡಿಕೇರಿ ಒಮ್ಮೆ ಮನೆಗೆ ತಮ್ಮ ಬಂದಿದ್ದ, ‘ಒಂದು ನಾಯಿ ತಂದಿದ್ದೀನಿ ಕಣೇ... ಒಂದು ಲಕ್ಷದ ಹತ್ತು ಸಾವಿರ’…

3 mins ago

ಬಾಗೆಯ ಮರದಿಂದ ಕಂಡ ಜಂಬೂಸವಾರಿ

ಸ್ವಾಮಿ ಪೊನ್ನಾಚಿ ಕೆ.ಆರ್.ಸರ್ಕಲ್ಲಿನ ಪೊಲೀಸು ಆ ಪೆಂಡಾಲ್ ಕೆಳಗಿನಿಂದ ಆಚೆ ನೂಕುವವರೆಗೂ ದಸರಾ ಕಾರ್ಯಕ್ರಮ ಹತ್ತಿರದಿಂದ ನೋಡಲು ಒಂದು ಪಾಸ್…

8 mins ago

ಮಂಡ್ಯದ ಹುಡುಗಿ ಮಹಾರಾಜರಿಲ್ಲದ ಅಂಬಾರಿ ನೋಡಿದ್ದು

ಡಾ.ಶೋಭಾ ದಿನೇಶ್ ತಮಾಷೆ ವಿಷಯ ಗೊತ್ತಾ! ನಮ್ಮೂರು ಬೆಂಗಳೂರಿಗಿಂತ ಮೈಸೂರಿಗೆ ಹತ್ತಿರ ಇದ್ದರೂ ಕೂಡ ನಮ್ಮ ದರ್ಬಾರೆಲ್ಲಾ ಬೆಂಗಳೂರು ಕಡೆಗೇನೇ.…

12 mins ago

ರೇಣುಕಾಸ್ವಾಮಿಯ ಶವ ಮಲಗಿಸಿದ್ದ ಸ್ಥಳದಲ್ಲಿ ಸಾಕ್ಷ್ಯಗಳ ಸಂಗ್ರಹ

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಬೇರೆಬೇರೆ ಆಂಗಲ್‌ಗಳಲ್ಲಿ ಸರಣಿ ಫೋಟೋಗಳ ಸೆರೆ  ಪಟ್ಟಣಗೆರೆ ಶೆಡ್‌ನಲ್ಲಿ ಮಹಜರ್ ಮಾಡುವಾಗ ಪೊಲೀಸರು ಕೃತ್ಯ…

41 mins ago

ಜನರ ಕಣ್ಮನ ಸೆಳೆಯುತ್ತಿರುವ ಬೊಂಬೆಗಳ ಪ್ರದರ್ಶನ

ಭೇರ್ಯ ಮಹೇಶ್ ಹೆಬ್ಬಾಳು ಗ್ರಾಮದ ಸುರೇಶ್ ಕಶ್ಯಪ್, ಅರ್ಚಕರಾದ ಶ್ರೀನಿವಾಸಭಟ್ ಅವರ ಮನೆಯಲ್ಲಿ ಆಯೋಜನೆ  ಕೆ.ಆರ್.ನಗರ: ನಾಡಹಬ್ಬ ದಸರಾ ಸಂದರ್ಭದಲ್ಲಿ…

51 mins ago