ಹಾಡು ಪಾಡು

ಕಾರ್ತಿಕದ ಚಳಿ ಇರುಳಿನಲ್ಲಿ ಮಣ್ಣದೀಪಗಳ ಬೆಳದಿಂಗಳು

ಶುಭಮಂಗಳ ರಾಮಾಪುರ

ಒಂದಲ್ಲಾ ಒಂದು ದಿನ ಲಕ್ಷ್ಮಿ ಪಟಾಕಿಯನ್ನ ಕೈಯ್ಯಲ್ಲಿಡಿದು ಹಚ್ಚಿ ಢಂ ಅನ್ನಿಸಬೇಕು… ನಾನೇ ಹಚ್ಚಿದ ಟೆನ್ ಥೌಸಂಡ್ ವಾಲಾ ಪಟಪಟನೆ ಸಿಡಿಯುವಾಗ ಕದಲದೇ ನಿಲ್ಲಬೇಕು ಅನ್ನೋ ಆಸೆ ಇಂದಿಗೂ ಕನಸಾಗಿಯೇ ಉಳಿದು ಬಿಟ್ಟಿರುವುದಂತೂ ನಿಜ! ಅಕ್ಕಪಕ್ಕದ ಮನೆಯ ಹುಡುಗರು ದೊಡ್ಡದೊಡ್ಡ ಪಟಾಕಿಗಳನ್ನು ಹೊಡೆದು ಸಂಭ್ರಮಿಸುತ್ತಿದ್ದರೆ ಅದನ್ನು ದೂರದಿಂದಲೇ ನೋಡಿ ತೃಪ್ತಿಪಡುತ್ತಿದ್ದೆನೇ ಹೊರತು ಅಪ್ಪನನ್ನು ಪಟಾಕಿ ಕೊಡಿಸಿ ಅಂತ ಕೇಳುತ್ತಿರಲಿಲ್ಲ.

ಗೆಳೆಯರು ತುಪಾಕಿಗೆ ಮದ್ದಿನ ರೋಲ್ ತುಂಬಿಸಿ ಪಟ್ ಪಟ್ ಅಂತ ಶೂಟ್ ಮಾಡುತ್ತಿರುವುದನ್ನು ಕಂಡು ಅಮ್ಮನ ಸೆರಗು ಹಿಡಿದು ಹಿಂದಿಂದೆಯೇ ಸುತ್ತಿ ತುಪಾಕಿ ಕೊಡಿಸೋಕೆ ಅಪ್ಪನಿಗೆ ಹೇಳು ಅಂತ ಗೋಗರೆಯೋದನ್ನ ನೋಡಿದ ಅಜ್ಜಿ ‘ಹೆಣ್ಮಕ್ಕಳು ಹಂಗೆಲ್ಲ ತುಪಾಕಿ ಹಿಡಿಬಾರ್ದು ಸುಮ್ನಿರು’ ಅಂತ ಉಪದೇಶ ಹೇಳ್ತಿದ್ರು. ಅಪ್ಪ ಮಿಠಾಯಿಗೆಂದು ಕೊಡುತ್ತಿದ್ದ ಒಂದೋ ಎರಡೋ ರೂಪಾಯಿಯಲ್ಲಿ ಮದ್ದಿನ ರೋಲ್ ತೆಗೆದುಕೊಂಡು ಕಲ್ಲಿನಲ್ಲಿ ಚಚ್ಚಿ ಚಚ್ಚಿ ಟಪ್ ಟಪ್ ಅನ್ನಿಸಿ ಖುಷಿಪಟ್ಟು ಕೊಳ್ಳುತ್ತಿದ್ದೆವು ನಾನೂ ಮತ್ತು ಅಕ್ಕ. ಈಗ ಎಲ್ಲವೂ ಕೈಗೆಟಕುವಂತಿ ದ್ದರೂ ಪಟಾಕಿ ಹಚ್ಚಿ ಸಂಭ್ರಮಿಸುವ ಮನಸ್ಸೇ ಇಲ್ಲದಾಗಿದೆ.

ನರಕಚತುರ್ದಶಿ ಮತ್ತು ಬಲಿಪಾಡ್ಯಮಿ ಇದರ ನಡುವೆ ಅಮಾವಾಸ್ಯೆಯ ಲಕ್ಷ್ಮೀ ಪೂಜೆ, ಮೂರುದಿನಗಳೂ ಬಹಳ ವಿಜೃಂಭಣೆಯಿಂದ ನಡೆಯುವ ಹಬ್ಬ ದೀಪಾವಳಿ. ನರಕಚತುರ್ದಶಿಯಂದು ಬೆಳ್ಳಂಬೆಳಿಗ್ಗೆ ಎದ್ದು ಅಮ್ಮ ಹದವಾಗಿ ಕಾಯಿಸಿದ ಎಣ್ಣೆಯನ್ನು ಹಚ್ಚಿ ಬಿಸಿನೀರಲ್ಲಿ ಮಿಂದೆದ್ದು ಪೂಜೆಯಲ್ಲಿ ಭಾಗಿಯಾಗುವುದು ಪ್ರತಿ ಮನೆಯಲ್ಲೂ ವಿಧಿಸಿದ ನಿಯಮ. ನರಕಾ ಸುರನನ್ನು ಕೊಂದ ಶ್ರೀಕೃಷ್ಣನನ್ನು ಆರಾಽಸುವುದು ಈ ದಿನದ ವಿಶೇಷ. ದೀಪಾವಳಿ ಹಬ್ಬದಲ್ಲಿ ದೀಪಗಳದ್ದೇ ಕಾರುಬಾರು. ಮಣ್ಣಿನ ದೀಪಗಳನ್ನು ಸಿದ್ಧಗೊಳಿಸಿ ಸೂರ್ಯಾಸ್ತದ ನಂತರ ಮನೆಯ ಮುಂದೆ ಹಚ್ಚಲಾಗುತ್ತದೆ.

ದೇವರಕೋಣೆ ಹಾಗೂ ಮನೆಯ ಮುಂದಿನ ಹೊಸ್ತಿಲಮೇಲೆ ಎರಡೆರಡು ದೀಪಗಳನ್ನು ಹಚ್ಚಿಡುವವರು ಕೆಲವರಾದರೆ ಸಂಪೂರ್ಣ ಮನೆಯನ್ನು ದೀಪ ಗಳಿಂದಲೇ ಬೆಳಗುವವರೇ ಹೆಚ್ಚು. ಎಷ್ಟೇ ಸಿರಿವಂತರಾಗಿದ್ದು ಹತ್ತಾರು ಬೆಳ್ಳಿ ದೀಪಗಳಿದ್ದರೂ ದೀಪಾವಳಿ ಹಬ್ಬದಲ್ಲಿ ಮಣ್ಣಿನ ಹಣತೆಯನ್ನೇ ಬಳಸುವುದು ಅದರ ಶ್ರೇಷ್ಠತೆಯನ್ನು ಹೇಳುತ್ತದೆ. ರಾತ್ರಿ ಊಟದ ನಂತರ ಊರಿನ ಜನರೆಲ್ಲಾ ಮಹದೇಶ್ವರನ ಗುಡಿಯ ಮುಂದೆ ಸೇರಿದರೆ ಅಲ್ಲಿ ಹರಿಕಥೆ ಭಜನಾ ಕಾರ್ಯಕ್ರಮಗಳು ನಡೆಯುತ್ತವೆ. ಪೌರಾಣಿಕ ನಾಟಕಗಳನ್ನು ನೋಡಲು ಮಧ್ಯಾಹ್ನದಿಂದಲೇ ಗುಡಿ ಮುಂದೆ ಟಿಕಾಣಿ ಹಾಕುವವರೂ ಉಂಟು.

ಹಬ್ಬದ ಎರಡನೆಯ ದಿನ ಅಮಾವಾಸ್ಯೆ, ಈ ದಿನ ಲಕ್ಷ್ಮೀದೇವಿಯನ್ನು ಆರಾಧಿಸುತ್ತಾರೆ. ನರಕಚತುರ್ದಶಿಗೂ ಸರ್ಕಾರಿ ರಜೆ, ಬಲಿಪಾಡ್ಯಮಿಗೂ ಸರ್ಕಾರಿ ರಜೆ. ಮಧ್ಯದಲ್ಲೊಂದು ದಿನ ಯಾಕಾದ್ರೂ ಈ ಸ್ಕೂಲು ಮಾಡ್ತಾರೋ ಅಂತ ಬೈಕೊಂಡು ಅಮ್ಮನನ್ನು ಗೋಗರೆದು ಶಾಲೆಗೆ ಚಕ್ಕರ್ ಹಾಕಿ ಲಕ್ಷ್ಮೀಪೂಜೆಗೆ ಹಾಜರಾಗ್ತಾ ಇದ್ವಿ. ಲಕ್ಷ್ಮೀದೇವಿಯ ಅವತಾರವಾದ ಸೀತಾಮಾತೆಯು ಶ್ರೀರಾಮಚಂದ್ರ ಲಕ್ಷ್ಮಣ ಸಮೇತ ವನವಾಸ ಮುಗಿಸಿ ಅಯೋಧ್ಯೆಗೆ ಹಿಂತಿರುಗಿದ್ದು, ಸಮುದ್ರ ಮಂಥನದಲ್ಲಿ ಐಶ್ವರ್ಯದೇವಿಯಾದ ಮಹಾಲಕ್ಷ್ಮಿಯು ಪ್ರಕಟವಾದ ದಿನವೇ ಈ ಅಮಾವಾಸ್ಯೆಯೆಂಬುದು ನನ್ನ ಜನರ ನಂಬಿಕೆ. ಹಾಗಾಗಿ ಈ ದಿನ ಅಷ್ಟಲಕ್ಷ್ಮಿಯರನ್ನು ಪೂಜಿಸಿ ಮುತ್ತೈದೆಯರಿಗೆ ಅರಿಶಿನ ಕುಂಕುಮ ತಾಂಬೂಲ ಕೊಟ್ಟು ಆಶೀರ್ವಾದ ಪಡೆಯುತ್ತಾರೆ. ಅದಲ್ಲದೇ ಧನಧಾನ್ಯ ಸಿರಿಸಂಪತ್ತು ವೃದ್ಧಿಯಾಗಲೆಂದೂ ಸಿರಿತನವು ಲಭಿಸಲೆಂದು ಬಡಬಗ್ಗರಿಗೆ ಧನಧಾನ್ಯವನ್ನು ದಾನವಾಗಿ ನೀಡುತ್ತಾರೆ. ಈ ಹಬ್ಬದ ಮತ್ತೊಂದು ವಿಶೇಷತೆಯೆಂದರೆ ಪೂಜೆಗೆಂದು ಮನೆಗೆ ಬರುವ ಮುತ್ತೈದೆಯರಿಗೆ ಒಂದು ಜೊತೆ ಮಣ್ಣಿನ ದೀಪಗಳನ್ನು ತಾಂಬೂಲದ ಜೊತೆಯಲ್ಲಿಟ್ಟು ನೀಡಲಾಗುತ್ತದೆ. ಮನೆಮನದ ಕತ್ತಲೆಯನ್ನು ಓಡಿಸಿ ಜ್ಞಾನದ ಬೆಳಕನ್ನು ಹಚ್ಚುವುದರ ಸಂಕೇತ ಇದಾಗಿದೆ. ಮುತ್ತೈದೆಯರು ತಾವು ಪಡೆದ ದೀಪ ಗಳೊಂದಿಗೆ ಇನ್ನಷ್ಟು ದೀಪಗಳನ್ನು ಸೇರಿಸಿ ಒಂದು ತಿಂಗಳು ಪೂರ್ತಿ ಅಂದರೆ ಇಡೀ ಕಾರ್ತಿಕ ಮಾಸ ಈ ದೀಪಗಳನ್ನು ಮನೆಯ ಮುಂದೆ ಹಚ್ಚುತ್ತಾರೆ. ಪರಸ್ಪರ ದೀಪಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಪರಸ್ಪರ ಬಾಂಧವ್ಯ ವೃದ್ಧಿಯಾಗುವುದೆಂಬ ನಂಬಿಕೆ ಈಗಲೂ ನನ್ನ ಜನರಲ್ಲಿದೆ.

ಕಾರ್ತಿಕಮಾಸ ಬರಲು ನನ್ನೂರು ಬೆಳಕಿನಲ್ಲಿ ಮಿಂದೇಳುತ್ತದೆ. ಮಣ್ಣ ಹಣತೆಗೆ ಸಣ್ಣದಾದ ಎಳೆಯ ಬತ್ತಿ ಯನಿಟ್ಟು ಹರಳೆಣ್ಣೆ ಹೊಯ್ದು ಇಡಿ ರಾತ್ರಿ ದೀಪಗಳು ಉರಿಯುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಬಣ್ಣಬಣ್ಣದ ಎಲೆಕ್ಟ್ರಿಕ್ ದೀಪಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಕಾರ್ತಿಕಮಾಸಕ್ಕೆ ಮಣ್ಣಿನ ದೀಪವೇ ಆಗಬೇಕು. ಪ್ರತೀ ಮನೆಯ ಮುಂದೆ ಚಂದದಲಿ ಉರಿವ ದೀಪಗಳ ಚೆಲುವ ನೋಡುವುದೇ ಆನಂದ! ‘ಕೊಟ್ಟು ಕೆಟ್ಟವನಾರು? ಕೊಡದೆ ಕೆಟ್ಟವನಾರು? ಮುಟ್ಟಿ ಕೆಟ್ಟವನಾರು? ಮುಟ್ಟದೇ ಕೆಟ್ಟವನಾರು?’ ಅಂತ ಅಜ್ಜಿ ಕೇಳೋ ಒಗಟಿನ ರೂಪದ ಪ್ರಶ್ನೆಗೆ ನಾನೂ ನನ್ನ ಗೆಳತಿಯರು ತಲೆ ಕೆರೆದುಕೊಂಡು ‘ಉತ್ತರ ಹೇಳಜ್ಜಿ’ ಅಂತ ಗೋಗರೆಯುತ್ತಿದ್ದೆವು. ‘ಕೊಟ್ಟು ಕೆಟ್ಟನಾ ಕರ್ಣ, ಕೊಡದೆ ಕೌರವನು, ಮುಟ್ಟಿ ಕೆಟ್ಟನಾ ಇಂದ್ರ, ಮುಟ್ಟದೆಯೆ ಕೆಟ್ಟವನು ರಾವಣಾಸುರ’ ಎನ್ನಲು ಅಜ್ಜಿಯ ಸಾಮರ್ಥ್ಯಕ್ಕೆ ಬೆರಗಾಗಿ ನೋಡುತ್ತಿದ್ದೆವು. ಕೊಟ್ಟು ಕೆಟ್ಟಂಥ ಇನ್ನೊಬ್ಬ ಭೂಪನಿದ್ದಾನೆ ಕೇಳಿ ಅಂತ ಕೃಷ್ಣ ವಾಮನಾವತಾರದಲ್ಲಿ ಬಂದು ಬಲಿ ಚಕ್ರವರ್ತಿಯನ್ನು ವಧಿಸಿದ ಕತೆಯನ್ನು ಚಂದದಲ್ಲಿ ಹೇಳುತ್ತಿದ್ದರು ನನ್ನಜ್ಜಿ. ಬಲಿ ಚಕ್ರವರ್ತಿಯ ಜನಪ್ರಿಯತೆ ಹೆಚ್ಚಿದಂತೆ ದೇವತೆಗಳ ಬೇಡಿಕೆಯಂತೆ ವಿಷ್ಣು ವಾಮನನ ಅವತಾರದಲ್ಲಿ ಬಂದು ಬಲಿಚಕ್ರವರ್ತಿಯಿಂದ ಮೂರು ಹೆಜ್ಜೆ ಜಾಗವನ್ನು ದಾನವಾಗಿ ಪಡೆದು ಮೊದಲ ಹೆಜ್ಜೆಯಿಂದ ಭೂಲೋಕ, ಎರಡನೆಯ ಹೆಜ್ಜೆಯಿಂದ ಸ್ವರ್ಗಲೋಕವನ್ನು ಆವರಿಸುತ್ತಾನೆ. ಕೊನೆಗೆ ಮೂರನೇ ಹೆಜ್ಜೆ ಯನ್ನು ಬಲಿಯ ತಲೆಯ ಮೇಲಿಟ್ಟ ಕತೆಯನ್ನು ವರ್ಣಿಸುತ್ತಾ ಹೇಳುವಾಗ ಬಾಯೊಳಗೆ ನೊಣದ ಪ್ರವೇಶವಾದರೂ ಅರಿವಿಗೆ ಬರುತ್ತಿರಲಿಲ್ಲ. ಅಷ್ಟು ಚಂದ ಅಜ್ಜಿಯ ಕತೆ ಎಣೆಯುವ ಪರಿ.

ನಮಗೆ ಇಡೀ ಕಾರ್ತಿಕ ಮಾಸವೇ ಹಬ್ಬದಂತೆ ಭಾಸವಾಗುತ್ತದೆ. ಪ್ರತಿ ದಿನವೂ ಗುಡಿಯಲ್ಲಿ(ಮಠ) ದೀಪೋತ್ಸವ ನಡೆಯುತ್ತದೆ. ಕೊನೆಯದಿನ ಎಲ್ಲಾ ಮನೆಯವರು ಸೇರಿ ಸಹಸ್ರ ದೀಪಗಳನ್ನು ಬೆಳಗಿ ಕಾರ್ತಿಕಮಾಸವನ್ನು ಯಶಸ್ವಿಯಾಗಿ ಬೀಳ್ಕೊಡುತ್ತಾರೆ. ಪಟಾಕಿಗಳಿಲ್ಲದೆ ಯಾವ ದೀಪಾವಳಿ ಹಬ್ಬ? ನಮಗೆ ಪಟಾಕಿಗಳು ಬೇಕೇ ಬೇಕು ಅನ್ನೋ ಹಿರಿಮಗ, ಅಪ್ಪನ ಕೈಹಿಡ್ಕೊಂಡು ನಾನೂ ಪಟಾಕಿ ಹೊಡಿತೀನಿ ಅಂತ ನಿಂತಿರೋ ಕಿರಿಮಗನ ಹಠದ ಮುಂದೆ, ಪರಿಸರ ಹಾಳಾಗುತ್ತೆ ವಾಯುಮಾಲಿನ್ಯ ಶಬ್ದಮಾಲಿನ್ಯ ಆಗೋದು ಬೇಡ, ಹಬ್ಬಕ್ಕೆ ಪಟಾಕಿ ನಿಷೇಧ ಅನ್ನೋ ನನ್ನ ಹಠ ಜಯಿಸಲಾದೀತೇ?

” ಪಟಾಕಿ ಹೊಡೆಯೋದೇ ದೀಪಾವಳಿ ಹಬ್ಬ, ದೀಪಾವಳಿ ಹಬ್ಬವೆಂದರೆ ಪಟಾಕಿ ಹೊಡೆಯೋದು ಮಾತ್ರ ಅನ್ನೋ ಕಲ್ಪನೆ ಹಲವರಲ್ಲಿದೆ. ಆದರೆ ಅದನ್ನು ಮೀರಿದ ಆಚರಣೆಗಳೂ ಇವೆ”

 

 

ಆಂದೋಲನ ಡೆಸ್ಕ್

Recent Posts

ಹಾಸನದಲ್ಲಿ ‘ಲಂಚದ ಚಾಟ್’ ಸಂಚಲನ: ಡಿಸಿ–ಸಚಿವರ ವಿರುದ್ಧ ಕುಮಾರಸ್ವಾಮಿ ಆರೋಪ!

ಹಾಸನ: ಹಾಸನದಲ್ಲಿ ಸರ್ಕಾರಿ ಕಡತಗಳ ವಿಲೇವಾರಿಗೆ ಲಕ್ಷಾಂತರ ರೂಪಾಯಿ ಹಣದ ಬೇಡಿಕೆ ಇಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ…

6 hours ago

ಜಪಾನ್‌ನಲ್ಲಿ 5.7 ತೀವ್ರತೆಯ ಭೂಕಂಪ

ಟೋಕಿಯೋ: ಜಪಾನ್‌ನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೂಕಂಪಕ್ಕೆ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ. ಅಂಗಡಿಗಳ ಕಿಟಕಿ ಗಾಜುಗಳು ಪುಡಿಯಾಗಿದ್ದು, ಭಯಭೀತರಾದ…

6 hours ago

ಹಾಸನಾಂಬೆ ದರ್ಶನ ಪಡೆದ ಸಿಎಂ ಡಿ.ಕೆ.ಶಿವಕುಮಾರ್‌

ಹಾಸನ: ಕುಟುಂಬ ಸಮೇತರಾಗಿ ಹಾಸನಾಂಬ ದೇವಿಯ ದರ್ಶನ ಪಡೆದ ಡಿ.ಕೆ. ಶಿವಕುಮಾರ್, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ನರಕ ಚತುರ್ದಶಿ ಹಿನ್ನೆಲೆಯಲ್ಲಿ…

7 hours ago

ಬಸ್ತಾರ್‌ನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಬಸ್ತಾರ್: ಬೆಳಕಿನ ಹಬ್ಬ ದೀಪಾವಳಿಯನ್ನು ಭದ್ರತಾ ಸಿಬ್ಬಂದಿಯೊಂದಿಗೆ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ, ‘ನೀವೆಲ್ಲರೂ ನನ್ನ ಕುಟುಂಬದ ಸದಸ್ಯರು’ ಎಂದು…

7 hours ago

ಓದುಗರ ಪತ್ರ: ರಸ್ತೆ ಅಗಲೀಕರಣದ ಜತೆ ಡಾಂಬರು ಹಾಕಲಿ

ನಂಜನಗೂಡು ತಾಲ್ಲೂಕು ಕೂಡ್ಲಾಪುರ ಗ್ರಾಮದ ರಸ್ತೆಯು ತೀರ ಹದಗೆಟ್ಟಿರುತ್ತದೆ. ಡಾಂಬರು ಇಲ್ಲದೆ ಕಲ್ಲುಮಣ್ಣುಗಳಿಂದ ಕೂಡಿದ್ದು ಸಂಚಾರ ದುರ್ಲಭವೆನಿಸಿದೆ. ಕಚ್ಚಾ ರಸ್ತೆಯಂತಿರುವ…

10 hours ago

ಓದುಗರ ಪತ್ರ: ಕಾವೇರಿ ನೀರು: ಪೆಟ್ಟಿನ ಮೇಲೆ ಪೆಟ್ಟು!

ತಮಿಳುನಾಡಿಗೆ ಪ್ರತಿನಿತ್ಯ ಮೂರು ಸಾವಿರ ಕ್ಯೂಸೆಕ್ ನೀರನ್ನು ಹರಿಸಲು ರಾಜ್ಯಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಶಿಫಾರಸು ಮಾಡಿರುವುದು ಘೋರ…

10 hours ago