ಡಾ.ಶುಭಶ್ರೀ ಪ್ರಸಾದ್, ಮಂಡ್ಯ
ದೀಪಾವಳಿ ಕೇವಲ ಬೆಳಕಿನ ಹಬ್ಬವಾಗಿರದೆ, ಬೆಳಕಿನ ಬದುಕಿನ ಸಂಕಲ್ಪವಾಗಲಿ. ಹೊರಗಿನ ಕತ್ತಲನ್ನು ಓಡಿಸಲು ದೀಪ ಹಚ್ಚುವುದರ ಜೊತೆಗೆ ನಮ್ಮೊಳಗಿನ ಅಜ್ಞಾನ ಮತ್ತು ಆಡಂಬರದ ಕತ್ತಲೆಯನ್ನೂ ಕಳೆಯೋಣ
ದೀಪಾವಳಿ ಎನ್ನುವ ಪದವೇ ಕಣ್ತುಂಬ ಬೆಳಕನ್ನು ತುಂಬುತ್ತದೆ. ಕಣ್ಣು ಹಾಯಿಸಿದಲ್ಲೆಲ್ಲ ದೀಪಗಳ ಬೆಳಕು, ಪಟಾಕಿಗಳ ಸದ್ದು. ಸಂಭ್ರಮ, ಸಡಗರ, ಸಿಹಿ ತಿಂಡಿ, ಹೊಸ ಬಟ್ಟೆ, ಉಡುಗೆ-ತೊಡುಗೆಗಳು ಹಬ್ಬಕ್ಕೆ ಮತ್ತಷ್ಟು ಮೆರುಗು ತರುತ್ತವೆ. ಆದರೆ ಈ ಸಂಭ್ರಮದ ನಡುವೆ ದೀಪಾವಳಿಯ ಮೂಲ ಆಶಯವನ್ನು ನಾವು ಮರೆತುಬಿಟ್ಟಿದ್ದೇವೆಯೇ ಎಂಬ ಪ್ರಶ್ನೆಯೂ ಕಾಡುತ್ತದೆ. ಇಂದು ಪಟಾಕಿಗಳು ಕಿವಿಗಡಚಿಕ್ಕುವುದಷ್ಟೇ ಅಲ್ಲ, ದೀಪದ ಬೆಳಕನ್ನೂ ಮೀರಿಸುವಷ್ಟು ಹೊಗೆಯನ್ನು ವಾತಾವರಣಕ್ಕೆ ಸೇರಿಸುತ್ತಿವೆ. ಹಿಂದೆ ದೀಪಾವಳಿ ಆಚರಣೆ ಯಾವ ಉದ್ದೇಶದಿಂದ ಆರಂಭವಾಗಿರಬಹುದು? ಕಾಲಕ್ರಮೇಣ ಅದರ ಆಚರಣೆಯಲ್ಲಿ ಎಂತಹ ಬದಲಾವಣೆಗಳಾಗಿವೆ? ಒಮ್ಮೆ ಹಿಂದಿರುಗಿ ನೋಡಿದರೆ, ನಮ್ಮ ಬದುಕಿನ ಇತರ ಕ್ಷೇತ್ರಗಳಂತೆ ಹಬ್ಬಗಳ ಆಚರಣೆಯೂ ಸಾಕಷ್ಟು ಬದಲಾಗಿದೆ ಎಂಬುದು ಅರಿವಾಗುತ್ತದೆ.
ಆಹಾರ ಕೂಡ ಬದುಕಿಗಾಗಿ, ಆರೋಗ್ಯಕ್ಕಾಗಿ ಎನ್ನುವುದನ್ನು ಮೀರಿ ಆಡಂಬರ ಮತ್ತು ಅಂತಸ್ತಿನ ಪ್ರದರ್ಶನದ ಸಾಧನವಾಗಿರುವ ಈ ಕಾಲದಲ್ಲಿ, ದೀಪ ಹಚ್ಚುವುದು ಮತ್ತು ಪಟಾಕಿ ಸಿಡಿಸುವುದು ವೈಭವದ ಪ್ರದರ್ಶನವಾಗಿ ಮಾರ್ಪಟ್ಟಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಹಿಂದೆ ವಿದ್ಯುತ್ ದೀಪಗಳಿರಲಿಲ್ಲ. ಕಾರ್ತಿಕ ಮಾಸದ ಅಮಾವಾಸ್ಯೆಯ ಕತ್ತಲು ದಟ್ಟವಾಗಿರುತ್ತಿತ್ತು. ರಾತ್ರಿ ಹೊತ್ತಿನಲ್ಲಿ ಮನೆಯ ಸುತ್ತಮುತ್ತಲಿನ ಸಣ್ಣಪುಟ್ಟ ಚಟುವಟಿಕೆಗಳಿಗೂ ಬೆಳಕಿನ ಅಗತ್ಯವಿತ್ತು. ಆಗ ಗಾಣದಿಂದ ತೆಗೆದ ಎಣ್ಣೆ, ಕೈಯಲ್ಲಿ ಹೊಸಕಿದ ಹತ್ತಿಯ ಬತ್ತಿ ಮತ್ತು ಕುಂಬಾರ ಮಾಡಿದ ಮಣ್ಣಿನ ಹಣತೆಗಳೇ ಬೆಳಕಿನ ಆಧಾರವಾಗಿದ್ದವು. ಮನೆಯ ಹೊಸ್ತಿಲ ಮೇಲೊಂದು ದೀಪವಿಟ್ಟರೆ ಒಳಗೂ ಹೊರಗೂ ಬೆಳಕು ಬೀರುತ್ತಿತ್ತು. ಮನೆಯ ವಿವಿಧ ಭಾಗಗಳಲ್ಲಿ ಅಗತ್ಯಕ್ಕೆ ತಕ್ಕಂತೆ ದೀಪಗಳನ್ನು ಇರಿಸುತ್ತಿದ್ದರು. ದಟ್ಟ ಕತ್ತಲಿನಲ್ಲಿ ಮನೆಯ ಹೊರಗೂ ದೀಪ ಇರಿಸುತ್ತಿದ್ದರು. ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವ ಪದ್ಧತಿಯ ಹಿಂದೆ ಇಂತಹ ಪ್ರಾಯೋಗಿಕ ಅಗತ್ಯಗಳೂ ಇದ್ದಿರಬಹುದು.
ಆದರೆ ಇಂದು ಇಪ್ಪತ್ನಾಲ್ಕು ಗಂಟೆಯೂ ವಿದ್ಯುತ್ ಬೆಳಕಿರುವ ಮನೆಗಳಲ್ಲಿಯೂ ಮತ್ತಷ್ಟು ವಿದ್ಯುತ್ ದೀಪಗಳು, ಪ್ಲಾಸ್ಟಿಕ್ ಹಣತೆಗಳು, ಅಲಂಕಾರಿಕ ವಸ್ತುಗಳನ್ನು ಬಳಸಿ ಹಬ್ಬವನ್ನು ವೈಭವೀಕರಿಸುತ್ತಿದ್ದೇವೆ. ಇದು ನಿಜಕ್ಕೂ ಅಗತ್ಯವೇ? ಹಿಂದಿನ ಕಾಲದ ರಂಗೋಲಿಗೂ ಒಂದು ವಿಶೇಷ ಅರ್ಥವಿತ್ತು. ಅಕ್ಕಿಯನ್ನು ನೆನೆಸಿ ರುಬ್ಬಿದ ಹಿಟ್ಟಿನಿಂದ ಮನೆಯ ಹೊಸ್ತಿಲಲ್ಲಿ] ರಂಗೋಲಿ ಬಿಡಿಸುತ್ತಿದ್ದರು. ಆಹಾರ ಹುಡುಕಿಕೊಂಡು ಬರುವ ಸಣ್ಣಪುಟ್ಟ ಕೀಟಗಳು ಆ ಹಿಟ್ಟನ್ನು ತಿಂದು ಹೋಗಲಿ ಎಂಬ ಜೀವಪರ ಕಾಳಜಿಯೂ ಅದರ ಹಿಂದಿರಬಹುದೆಂಬ ಒಂದು ವ್ಯಾಖ್ಯಾನವಿದೆ. ಆದರೆ ಈಗ ಜಲ್ಲಿ ಪುಡಿಯೋ ಅಥವಾ ಪೇಂಟ್ ಇಟ್ಟು ರಂಗೋಲಿ ಎನ್ನುತ್ತೇವೆ.
ಊಟದ ಸಮಯದಲ್ಲಿ ಎಲೆಯ ಸುತ್ತ ನೀರು ಹಾಕಿ, ಅದರ ಹೊರಭಾಗದಲ್ಲಿ ಅನ್ನದ ಅಗುಳನ್ನು ಇಡುವ ಸಂಪ್ರದಾಯವೂ ಇತ್ತು. ಈಗಲೂ ಹಲವು ಕುಟುಂಬಗಳಲ್ಲಿ ಇದು ನಡೆದುಕೊಂಡುಬಂದಿದೆ. ಇಂತಹ ಆಚರಣೆಗಳಲ್ಲಿ ಪ್ರಕೃತಿಯ ಇತರ ಜೀವಿಗಳನ್ನೂ ಗಮನದಲ್ಲಿಟ್ಟುಕೊಂಡ ಬದುಕಿನ ಕ್ರಮ ಕಾಣುತ್ತದೆ. ದೀಪಾವಳಿಯ ಅಮಾವಾಸ್ಯೆಯಂದು ಲಕ್ಷ್ಮಿಯನ್ನು ಪೂಜಿಸುವ ಪದ್ಧತಿಯೂ ಕಾಲಕ್ರಮೇಣ ಬೆಳೆದಿದೆ. ಲಕ್ಷ್ಮಿ ಎಂದರೆ ಕೇವಲ ಹಣ, ಚಿನ್ನ, ಆಭರಣಗಳಲ್ಲ. ಭೂಮಿಯಿಂದ ದೊರೆಯುವ ಆಹಾರ, ಸಮೃದ್ಧಿ ಮತ್ತು ಬದುಕಿಗೆ ಆಧಾರವಾಗುವ ಸಂಪತ್ತೂ ಹೌದು.
ಸೂರ್ಯ, ಭೂಮಿ, ಗಾಳಿ, ನೀರು ಮತ್ತು ಅವುಗಳಿಂದ ದೊರೆಯುವ ಉತ್ಪನ್ನಗಳೇ ನಮ್ಮ ಬದುಕಿನ ನಿಜವಾದ ಆಧಾರಗಳು. ಇದೇ ನಮ್ಮ ನಿಜದ ದೇವರುಗಳು. ಈ ಅರ್ಥವನ್ನು ಅರಿತರೆ ಸಂಪತ್ತಿನ ಪ್ರದರ್ಶನಕ್ಕಿಂತ ಪ್ರಕೃತಿಯ ಕೊಡುಗೆಗೆ ಕೃತಜ್ಞತೆ ಸಲ್ಲಿಸುವುದೇ ಮುಖ್ಯವೆನಿಸುತ್ತದೆ.
ಕೆಲವು ಜನಪದ ನಂಬಿಕೆಗಳ ಪ್ರಕಾರ, ಅಮಾವಾಸ್ಯೆಯಂದು ಅಗಲಿದ ಹಿರಿಯರು ಮನೆಗೆ ಬರುತ್ತಾರೆ; ಅವರಿಗೆ ಮನೆಯ ದಾರಿ ತಿಳಿಯಲೆಂದು ದೀಪದ ಸಾಲುಗಳನ್ನು ಹಚ್ಚಿಡಲಾಗುತ್ತದೆ ಎನ್ನಲಾಗುತ್ತದೆ. ಇಂತಹ ನಂಬಿಕೆಗಳು ದೀಪಾವಳಿಯ ಆಚರಣೆಗೆ ವಿಭಿನ್ನ ಸಾಂಸ್ಕ ತಿಕ ಅರ್ಥಗಳನ್ನು ನೀಡಿವೆ.
ಬಹುಶಃ ಹಿಂದಿನ ಕಾಲದಲ್ಲಿ ಕತ್ತಲಿನ ಸಂದರ್ಭದಲ್ಲಿ ಅನಾರೋಗ್ಯ ಉಂಟು ಮಾಡಬಹುದಾದ ಸಣ್ಣಪುಟ್ಟ ಕ್ರಿಮಿಕೀಟಗಳನ್ನು ನಾಶಪಡಿಸುವ ಉದ್ದೇಶದಿಂದ ಚಿಕ್ಕ ಚಿಕ್ಕ ಮದ್ದುಗಳನ್ನು ಸಿಡಿಸುವ ಪದ್ಧತಿ ಆರಂಭವಾಗಿರಬಹುದು. ಆದರೆ ಇಂದು ನಮ್ಮ ಆರೋಗ್ಯ, ಶ್ವಾಸಕೋಶ, ಕಿವಿ, ಕಣ್ಣು, ಹಣ ಮತ್ತು ಮುಖ್ಯವಾಗಿ ಪರಿಸರಕ್ಕೆ ಹಾನಿಯಾಗುವಷ್ಟು ಪಟಾಕಿ ಸಿಡಿಸುವ ಅಗತ್ಯವಿದೆಯೇ? ಈಗಾಗಲೇ ವಾಹನಗಳ ಹೊಗೆ ಮತ್ತು ಇತರ ಮಾಲಿನ್ಯಗಳಿಂದ ವಾತಾವರಣದ ಮೇಲೆ ಒತ್ತಡ ಹೆಚ್ಚಾಗಿದೆ. ಅದರ ನಡುವೆ ಪಟಾಕಿಯ ಹೊಗೆಯನ್ನೂ ಸೇರಿಸುವುದು ನಮ್ಮ ಆರೋಗ್ಯ ಮತ್ತು ಪರಿಸರದ ದೃಷ್ಟಿಯಿಂದ ಸರಿಯಲ್ಲ. ಲರ್ನಿಂಗ್ ಸುಲಭ, ಅನ್‌ಲರ್ನಿಂಗ್ ತುಂಬಾ ಕಷ್ಟ. ನಾವು ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಹೊಸ ಪದ್ಧತಿಗಳನ್ನು ರೂಢಿಸಿಕೊಂಡಿದ್ದೇವೆ. ಅವುಗಳಲ್ಲಿ ಕೆಲವು ಪ್ರಕೃತಿಗೆ ಹಾನಿಯನ್ನೂ ಉಂಟುಮಾಡಿವೆ.
ಹಬ್ಬಗಳ ರಾಜ ಎಂದು ಕರೆಯುವ ದೀಪಾವಳಿಯಂದು ಈ ಬಗ್ಗೆ ಹೊಸ ಸಂಕಲ್ಪ ಮಾಡೋಣ. ಪರಿಸರ ಸ್ನೇಹಿ ಹಣತೆಗಳನ್ನು ಹಚ್ಚೋಣ, ಅನಗತ್ಯ ಪ್ಲಾಸ್ಟಿಕ್ ಅಲಂಕಾರಗಳನ್ನು ತಪ್ಪಿಸೋಣ, ಪಟಾಕಿಗಳ ಅಬ್ಬರವನ್ನು ಕಡಿಮೆ ಮಾಡೋಣ. ಮುಂದಿನ ತಲೆಮಾರಿಗೆ ನಾವು ಯಾವ ರೀತಿಯ ಪ್ರಕೃತಿಯನ್ನು ಬಿಟ್ಟುಹೋಗುತ್ತಿದ್ದೇವೆ ಎಂಬುದನ್ನು ಯೋಚಿಸಬೇಕಾದ ಸಮಯವಿದು. ಮುಂದಿನ ಸಾವಿರಾರು ವರ್ಷಗಳೂ ಪ್ರಕೃತಿ ಹಸಿರಿನಿಂದ ನಳನಳಿಸಲಿ, ಕಾಲಕಾಲಕ್ಕೆ ಮಳೆ-ಬೆಳೆ ಆಗಲಿ, ಪರಿಸರದ ಸಮತೋಲನ ಉಳಿಯಲಿ ಎಂಬ ಜವಾಬ್ದಾರಿ ನಮ್ಮೆಲ್ಲರ ಮೇಲಿde.
ಹಾಸನ: ಹಾಸನದಲ್ಲಿ ಸರ್ಕಾರಿ ಕಡತಗಳ ವಿಲೇವಾರಿಗೆ ಲಕ್ಷಾಂತರ ರೂಪಾಯಿ ಹಣದ ಬೇಡಿಕೆ ಇಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ…
ಟೋಕಿಯೋ: ಜಪಾನ್‌ನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೂಕಂಪಕ್ಕೆ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ. ಅಂಗಡಿಗಳ ಕಿಟಕಿ ಗಾಜುಗಳು ಪುಡಿಯಾಗಿದ್ದು, ಭಯಭೀತರಾದ…
ಹಾಸನ: ಕುಟುಂಬ ಸಮೇತರಾಗಿ ಹಾಸನಾಂಬ ದೇವಿಯ ದರ್ಶನ ಪಡೆದ ಡಿ.ಕೆ. ಶಿವಕುಮಾರ್, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ನರಕ ಚತುರ್ದಶಿ ಹಿನ್ನೆಲೆಯಲ್ಲಿ…
ಬಸ್ತಾರ್: ಬೆಳಕಿನ ಹಬ್ಬ ದೀಪಾವಳಿಯನ್ನು ಭದ್ರತಾ ಸಿಬ್ಬಂದಿಯೊಂದಿಗೆ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ, ‘ನೀವೆಲ್ಲರೂ ನನ್ನ ಕುಟುಂಬದ ಸದಸ್ಯರು’ ಎಂದು…
ನಂಜನಗೂಡು ತಾಲ್ಲೂಕು ಕೂಡ್ಲಾಪುರ ಗ್ರಾಮದ ರಸ್ತೆಯು ತೀರ ಹದಗೆಟ್ಟಿರುತ್ತದೆ. ಡಾಂಬರು ಇಲ್ಲದೆ ಕಲ್ಲುಮಣ್ಣುಗಳಿಂದ ಕೂಡಿದ್ದು ಸಂಚಾರ ದುರ್ಲಭವೆನಿಸಿದೆ. ಕಚ್ಚಾ ರಸ್ತೆಯಂತಿರುವ…
ತಮಿಳುನಾಡಿಗೆ ಪ್ರತಿನಿತ್ಯ ಮೂರು ಸಾವಿರ ಕ್ಯೂಸೆಕ್ ನೀರನ್ನು ಹರಿಸಲು ರಾಜ್ಯಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಶಿಫಾರಸು ಮಾಡಿರುವುದು ಘೋರ…