ಹಾಡು ಪಾಡು

ಬಲಿಯೇಂದ್ರ ಆಳಿದ ತುಳುನಾಡ ‘ದೀಪಾವಳಿ

ಅಕ್ಷತಾ

ತುಳಿಯುವವರು ಮತ್ತು ತುಳಿಯಲ್ಪಟ್ಟವರ ಸಾಂಕೇತಿಕ ರೂಪವಾಗಿರುವ ತುಳುನಾಡಿನ ಬಲಿ ಪಾಡ್ಯಮಿಯಂದು ಬರುವ ಬಲಿಯೇಂದ್ರ ಎಲ್ಲ ಕಾಲಕ್ಕೂ ಹೊತ್ತು ತರುವ ಸಂದೇಶ ಸಾರ್ವಕಾಲಿಕ ‘ತುಳಿದಷ್ಟು ಬೆಳೆಯುತ್ತೇವೆ!’

ದೀಪಾವಳಿ ಹಬ್ಬ ಪ್ರತಿಯೊಂದು ಕಡೆಯೂ ವಿಭಿನ್ನವಾಗಿ ಆಚರಿಸಲ್ಪಡುತ್ತದೆಯಾದರೂ ಅಸುರ ಸಂಹಾರ ಶಿಷ್ಟ ರಕ್ಷಣೆ ಎಂಬುದೇ ದೀಪಾವಳಿಯ ಮುಖ್ಯ ಸಂದೇಶ. ನರಕಾಸುರ ಸಂಹಾರ ಸಂಕೇತವಾಗಿ ನರಕ ಚತುರ್ದಶಿ, ಬಲಿ ಪಾತಾಳಕ್ಕಿಳಿದ ಸಂಕೇತವಾಗಿ ಬಲಿಪಾಡ್ಯಮಿಯಿದ್ದರೂ ತುಳುವರಿಗೆ ಬಲಿಯೇಂದ್ರ ಅಸುರನಲ್ಲ. ತುಳುನಾಡಿನಾದ್ಯಂತ ಬಲಿ ಚಕ್ರವರ್ತಿ ಸುಭಿಕ್ಷೆಯಿಂದ ರಾಜ್ಯವಾಳಿದ ಬಲಿಯರಸು.

ಇದೇ ಕಾರಣಕ್ಕೆ ಪಾತಾಳಕ್ಕಿಳಿದ ಬಲಿ ರಾಜನನ್ನು ವರ್ಷಕ್ಕೊಮ್ಮೆ ದೀಪಾವಳಿಯ ಮೂರನೇ ದಿನ ಎಂದರೆ ಅಮಾವಾಸ್ಯೆ ಮರುದಿನದ ಪಾಡ್ಯದಂದು ಭೂಮಿಗೆ ಆಹ್ವಾನಿಸುತ್ತಾರೆ. ತಾನು ಆಳಿದ ತನ್ನ ನೆಲವನ್ನು ನೋಡಲು ಆತ ಬಂದೇ ಬರುತ್ತಾನೆ ಎಂಬ ನಂಬಿಕೆ ತುಳುವರದ್ದಾದರೂ ಇಲ್ಲಿ ಆತ ಬರುತ್ತಾನೆಯೆನ್ನುವುದಕ್ಕಿಂತಲೂ ಅವನನ್ನು ಕರೆಯುವ ಪರಿ ಬಹಳ ಸೊಗಸಾದುದು.

ಸಹಜವಾಗಿ ಯಾವುದು ನಡೆಯುವುದಿಲ್ಲವೋ… ಅಸಹಜತೆ ಎಂದು ಭೂಮಿಯಲ್ಲಿ ತಾಂಡವವಾಡುವುದೋ ಅಂದು ತನ್ನ ರಾಜ್ಯದ ಸಂಪತ್ತನ್ನು ಮತ್ತೆ ಗಳಿಸಿಕೊಳ್ಳುವುದಕ್ಕೆ ಬಲಿಯೇಂದ್ರ ಬರುತ್ತಾನೆಯೆನ್ನುವ ‘ಬಲಿ ಲೆಪ್ಪು’ ಎಂದರೆ ‘ಬಲಿಯನ್ನು ಕರೆಯುವ ಸಾಲು’ ಬಹುರಂಜನೀಯ! ‘ಕರ್ಗಲ್ಲು ಕಾಯಾದರೆ, ಬೆಳ್ಕಲ್ಲು ಹೂವಾದರೆ, ಉಪ್ಪು ಕರ್ಪೂರವಾದರೆ, ಉದ್ದು ಮದ್ದಳೆಯಾದರೆ, ಗೊಡ್ಡೆಮ್ಮೆ ಕೋಣ ಆದರೆ, ತುಂಬೆ ಗಿಡದಡಿ ಸಭೆ ಸೇರಿದರೆ, ನೆಕ್ಕಿ ಗಿಡದಡಿ ಆಟ ನಡೆದರೆ, ಬಿರಿದ ನೆಲಕ್ಕೆ ಸೇತುವೆ ಹಾಕಿದರೆ ಮಜ್ಜಿಗೆಯೊಳಗೆ ಬೆಣ್ಣೆ ಮುಳುಗಿದರೆ, ಗುಲಗಂಜಿಯ ಕಲೆ ಮಾಸಿದರೆ, ಈ ಊರಿನ ಬರವನ್ನು ನೀಗಿಸು ಆ ಊರಿನ ಸಂಪತ್ತನ್ನು ಕರುಣಿಸು ಬಲಿಯೇಂದ್ರ ಕೂ…ಕೂ…ಕೂ…’ ಎನ್ನುವ ಪ್ರಜೆಗಳ ಕರೆಗೆ ಅರಗಿನ ದೋಣಿಯಲ್ಲಿ ಸೊಟ್ಟಗಿನ ಹರಿಗೋಲು ಹಿಡಿದು ಬರುವ ಬಲಿಯೇಂದ್ರ ತಾನು ಬರುವುದಕ್ಕಿಂತಲೂ ಮೊದಲು ಆಷಾಢದಲ್ಲಿ ತನ್ನ ತಾಯಿಯನ್ನು, ಶ್ರಾವಣದಲ್ಲಿ ಕೆಲಸದಾಳನ್ನು ಕಳುಹಿಸಿ ಆತ ಮಾತ್ರ ದೀಪಾವಳಿಯ ಮೂರನೇ ದಿನ ರಾಜ್ಯ ಸುಭೀಕ್ಷೆ ನೋಡಲು ಬರುವನೆಂಬ ಪ್ರತೀತಿ ಇರುವುದರಿಂದ ಅವನಿಗಾಗಿ ಹುಡಿ ಅವಲಕ್ಕಿ, ಬೆಲ್ಲ, ತಮ್ಮ ಹೊಲದಲ್ಲಿ ಅಥವಾ ತುಳಸಿಕಟ್ಟೆಯೆದುರು ಬಡಿಸಿ ಆತಿಥ್ಯ ನೀಡುವುದು  ತುಳುನಾಡಿನ ಸಂಪ್ರದಾಯ.

ಬಾಳೆಯ ದಿಂಡಿನಿಂದ ಬಲೀಂದ್ರನ ಆಕೃತಿಯನ್ನು ಮಾಡಿ ‘ಚಪ್ಪೆ ಗಟ್ಟಿ’ ಎಂದರೆ ಸಪ್ಪೆ ಕಡುಬಿನ ನೈವೇದ್ಯವೂ ಬಲಿಯೇಂದ್ರ ಪೂಜೆಯ ವಿಶೇಷ. ದೀಪಾವಳಿಯ ಮೊದಲ ದಿನ ದಿಂದಲೇ ಕೃಷಿ ಪರಿಕರಗಳನ್ನಿಟ್ಟು ಪೂಜಿಸಿ ಮುಸ್ಸಂಜೆ ಹೊತ್ತಲ್ಲಿ ಬಲಿಯೇಂದ್ರನನ್ನು ಕೂಗಿದರೆ ಬಲಿ ಪಾಡ್ಯಮಿಯಂದು ಆತ ಬಂದೇ ಬರುತ್ತಾನೆ ಎನ್ನುವುದು ರೂಢಿ ಮಾತಾದರೂ ಹೀಗೆ ಬಂದಾತ ಇರುವುದು ಮುಕ್ಕಾಲು ಮೂರು ಘಳಿಗೆ ಮಾತ್ರ ಎನ್ನುವುದು ತಲೆತಲಾಂತರದ ಬಾಯ್ದೆರೆ ಮಾತು.

ಕೃಷಿ ಪದ್ಧತಿ ಇದ್ದ ಕಾಲದಲ್ಲಿ ದೀಪಾವಳಿಗೆ ಬಲಿಯನ್ನು ಕರೆಯುವುದೇ ಮನೆ ಮಕ್ಕಳಿಗೆ ಸಂಭ್ರಮ. ಹಿರಿಯರೊಡನೆ ಸೇರಿಕೊಂಡು ಬುಟ್ಟಿಯಲ್ಲಿ ಪೂಜಾ ಸಾಮಗ್ರಿಗಳನ್ನೂ ಅವಲಕ್ಕಿ, ಬೆಲ್ಲದ ಗಂಟನ್ನೂ ಹೊತ್ತುಕೊಂಡು ಗದ್ದೆ ಬದುವಿನಲ್ಲಿ ಸಾಗಿ ಹೊಲದ ಮಧ್ಯೆ ‘ಬಲೇಕಿ ಮರ’ ನೆಟ್ಟು ದೀಪ ಬೆಳಗಿ ಬಲಿಯೇಂದ್ರನನ್ನು ಹಿರಿಯರು ಕರೆದರೆ ಮಕ್ಕಳೆಲ್ಲರದ್ದೂ ಕೂ… ಎಂಬ ಸಹಸ್ವರ! ಕತ್ತಲೆಯ ಹೊತ್ತಲ್ಲಿ ಹೊಲದಲ್ಲಿ ಕಾಣಿಸಿಕೊಳ್ಳುವ ಆ ಬೆಳಕು ದೀಪಾವಳಿಯ ನಿಜಾರ್ಥದಂತಿತ್ತು. ಭರವಸೆಯ ಬೆಳಕಾಗಿತ್ತು. ಆದರೆ ಈಗ ಆ ತರಹ ಸಂಭ್ರಮಿಸುವುದಕ್ಕೆ…!? ಬಲಿ ರಾಜ್ಯದಲ್ಲಿ ಉಳಿದಿರುವ ಹೊಲ ಗದ್ದೆಗಳೇ ಲೆಕ್ಕ ಮಾತ್ರದ್ದು. ಸಂಪತ್ತು ಅಳಿದ ಕಾಲಕ್ಕೆ ಬರಬೇಕಾದ ಬಲಿಯೇಂದ್ರನಿಗೇ ದಾರಿ ತಪ್ಪಿದೆ ಈ ಫ್ಲಾ ಟು-ಕಾಂಕ್ರೀಟು ಬಜಾರಿನೊಳಗೆ!

ಪ್ರತಿಯೊಂದು ಸಂಪ್ರದಾಯ ಅಥವಾ ಆಚರಣೆ ಸುಖಾ ಸುಮ್ಮನೆ ಬಂದಿಲ್ಲ. ಬಲಿಯೇಂದ್ರನನ್ನು ಕರೆಯುವ ಆಚರಣೆಯ ಹಿಂದಿನ ಅರ್ಥವೂ ವಿಶಾಲ. ಇಲ್ಲಿನ ಬಲಿಯೇಂದ್ರ ಓರ್ವ ಅನಾರ್ಯ ರಾಜ. ಕೃಷಿ ಬದುಕನ್ನು ನಂಬಿದ ವ್ಯವಸಾಯ ಗಾರನನ್ನು ಮೋಸದಿಂದ ರಾಜ್ಯಭ್ರಷ್ಟನನ್ನಾಗಿ ಮಾಡಿ ಪಾತಾಳಕ್ಕೆ ಅಟ್ಟಲಾಗುತ್ತದೆ ಎಂಬ ಐತಿಹ್ಯವಿದ್ದು ತುಳುವರ ಬಲಿ ಯೇಂದ್ರನ ಕಥಾ ನಿರೂಪಣೆ ಪುರಾಣ ಮಾದರಿಯಲ್ಲಿ ಇಲ್ಲ ಎಂಬುದು ಗಮನಿಸಬೇಕಾದದ್ದು. ಇಲ್ಲಿ ಬಲಿಯೇಂದ್ರ ದಮ ನಿತ ಅರಸನ ಪ್ರತೀಕವಾಗಿ ಕಂಡುಬಂದರೆ ವಾಮನ ಓರ್ವ ಬಲಿಷ್ಠ ತುಳಿವ  ವರ್ಗದವನಾಗಿ ಕಾಣುತ್ತಾನೆ. ತುಳುನಾಡಿನ ವಾಮನ ಮತ್ತು ಬಲಿಗೆ ದೇವ ರೂಪವನ್ನು ಕೊಟ್ಟಿದ್ದಿಲ್ಲ. ತುಳಿಯುವವರು ಮತ್ತು ತುಳಿ ಯಲ್ಪಟ್ಟವರ ಸಾಂಕೇತಿಕ ರೂಪವಾಗಿರುವ ತುಳುನಾಡಿನ ದೀಪಾವಳಿಯ ಬಲಿ ಪಾಡ್ಯಮಿಯಂದು ಬರುವ ಬಲಿಯೇಂದ್ರ ಎಲ್ಲ ಕಾಲಕ್ಕೂ ಹೊತ್ತು ತರುವ ಸಂದೇಶ ಸಾರ್ವಕಾಲಿಕ ‘ತುಳಿದಷ್ಟು ಬೆಳೆಯುತ್ತೇವೆ!’

ಆಂದೋಲನ ಡೆಸ್ಕ್

Recent Posts

ಹಾಸನದಲ್ಲಿ ‘ಲಂಚದ ಚಾಟ್’ ಸಂಚಲನ: ಡಿಸಿ–ಸಚಿವರ ವಿರುದ್ಧ ಕುಮಾರಸ್ವಾಮಿ ಆರೋಪ!

ಹಾಸನ: ಹಾಸನದಲ್ಲಿ ಸರ್ಕಾರಿ ಕಡತಗಳ ವಿಲೇವಾರಿಗೆ ಲಕ್ಷಾಂತರ ರೂಪಾಯಿ ಹಣದ ಬೇಡಿಕೆ ಇಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ…

5 hours ago

ಜಪಾನ್‌ನಲ್ಲಿ 5.7 ತೀವ್ರತೆಯ ಭೂಕಂಪ

ಟೋಕಿಯೋ: ಜಪಾನ್‌ನಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೂಕಂಪಕ್ಕೆ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ. ಅಂಗಡಿಗಳ ಕಿಟಕಿ ಗಾಜುಗಳು ಪುಡಿಯಾಗಿದ್ದು, ಭಯಭೀತರಾದ…

5 hours ago

ಹಾಸನಾಂಬೆ ದರ್ಶನ ಪಡೆದ ಸಿಎಂ ಡಿ.ಕೆ.ಶಿವಕುಮಾರ್‌

ಹಾಸನ: ಕುಟುಂಬ ಸಮೇತರಾಗಿ ಹಾಸನಾಂಬ ದೇವಿಯ ದರ್ಶನ ಪಡೆದ ಡಿ.ಕೆ. ಶಿವಕುಮಾರ್, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ನರಕ ಚತುರ್ದಶಿ ಹಿನ್ನೆಲೆಯಲ್ಲಿ…

5 hours ago

ಬಸ್ತಾರ್‌ನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಬಸ್ತಾರ್: ಬೆಳಕಿನ ಹಬ್ಬ ದೀಪಾವಳಿಯನ್ನು ಭದ್ರತಾ ಸಿಬ್ಬಂದಿಯೊಂದಿಗೆ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ, ‘ನೀವೆಲ್ಲರೂ ನನ್ನ ಕುಟುಂಬದ ಸದಸ್ಯರು’ ಎಂದು…

6 hours ago

ಓದುಗರ ಪತ್ರ: ರಸ್ತೆ ಅಗಲೀಕರಣದ ಜತೆ ಡಾಂಬರು ಹಾಕಲಿ

ನಂಜನಗೂಡು ತಾಲ್ಲೂಕು ಕೂಡ್ಲಾಪುರ ಗ್ರಾಮದ ರಸ್ತೆಯು ತೀರ ಹದಗೆಟ್ಟಿರುತ್ತದೆ. ಡಾಂಬರು ಇಲ್ಲದೆ ಕಲ್ಲುಮಣ್ಣುಗಳಿಂದ ಕೂಡಿದ್ದು ಸಂಚಾರ ದುರ್ಲಭವೆನಿಸಿದೆ. ಕಚ್ಚಾ ರಸ್ತೆಯಂತಿರುವ…

8 hours ago

ಓದುಗರ ಪತ್ರ: ಕಾವೇರಿ ನೀರು: ಪೆಟ್ಟಿನ ಮೇಲೆ ಪೆಟ್ಟು!

ತಮಿಳುನಾಡಿಗೆ ಪ್ರತಿನಿತ್ಯ ಮೂರು ಸಾವಿರ ಕ್ಯೂಸೆಕ್ ನೀರನ್ನು ಹರಿಸಲು ರಾಜ್ಯಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಶಿಫಾರಸು ಮಾಡಿರುವುದು ಘೋರ…

9 hours ago