‘ನೋಡಿ ಅಮ್ಮಾ… ನನ್ನ ಹತ್ರ ದುಡ್ಡಿಲ್ಲೆ ಇರ್ಬೋದು. ಆದ್ರೆ ನನ್ನಷ್ಟು ನೆಟ್ಟು ಇರೋರು ಇಂಡಿಯಾದಲ್ಲೇ ಯಾರೂ ಸಿಗಲ್ಲ. ಹುಡ್ಕಿ ಬೇಕಿದ್ರೆ..? ಎಂದು ನಗುತ್ತಾ ತನ್ನ ಪುಟ್ಟ ಪೀಠೋಪಕರಣದ ಅಂಗಡಿಯಲ್ಲಿ ಚೇರು, ಟೇಬಲುಗಳ ಮಧ್ಯೆ ಕಿಷ್ಕಂಧದಲ್ಲಿ ಕುಳಿತು ನಿಷ್ಕಲ್ಮಷವಾಗಿ, ಅಪ್ಪಟ ಆತ್ಮವಿಶ್ವಾಸದ ನಗು ನಗುತ್ತಾರೆ ಶೌಕತ್. ಅಂಗೈಯಗಲದ ಅಂಗಡಿಯಲ್ಲಿ ಜೀವನ ಮಾಡುತ್ತಿರುವ ಇವರದ್ದು ಕಲೆ, ಹಾಡು, ಕೂರ ವಿಧಿ, ನಗು ಹಾಗೂ ತುಂಬಾ ನೆನದಿ ತುಂಬಿದ ಬದುಕು. ಒಂದೇ ಹಾಡಿನಲ್ಲಿ ಅದೆಷ್ಟು ರಾಗಗಳು! ಒಂದೇ ಮುಖದಲ್ಲಿ ಅದೆಷ್ಟು ಭಾವಗಳು!
ಮೈಸೂರಿನಿಂದ ಕೊಂಚ ಮುಂದೆ ಹೋಗಿ ಐತಿಹಾಸಿಕ ಶ್ರೀರಂಗಪಟ್ಟಣವನ್ನು ತಲುಪಿ ಅಲ್ಲಿನ ಚಿಕ್ಕ ಮಸೀದಿಯ ಬಳಿ ಹೋದರೆ ಕಿಶೋರ್ ಕುಮಾರ್, ಮುಖೇಶ್ ಮೊಹಮದ್ ರಫಿ ಮುಂತಾದವರ ಅರ್ಧ ಶತಮಾನಕ್ಕೂ ಹಳೆಯ ಹಾಡುಗಳು ಕೇಳಿಸುತ್ತವೆ. ಇದು ಯಾವುದೇ ರೆಕಾರ್ಡ್ ಅಲ್ಲ. ಬದಲಿಗೆ ಶೌಕತ್ ಅಹಮದ್ ಅವರ ಅದ್ಭುತ ಧ್ವನಿಯಿಂದ ಮೂಡಿ ಬರುವ ಹಾಡುಗಳು. ಚಿಕ್ಕ ಮಸೀದಿಯ ಮುಂದೆಯೇ ಪುಟ್ಟ ಪೀಠೋಪಕರಣದ ಅಂಗಡಿಯೊಂದನ್ನು ಇಟ್ಟುಕೊಂಡಿರುವ ಇವರ ಜೀವನದ್ದು ಕಥೆಗಳನ್ನೂ ಮೀರಿಸುವ ಕಥೆ, ಶೌಕತ್, ಅವರ ತಂದೆ ಕೆಲಸ ಮಾಡುತ್ತಿದ್ದುದು ಕೆ.ಆರ್.ಮಿಲ್‌ನಲ್ಲಿ, ಅತ್ಯಂತ ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಇವರು ತಮ್ಮ ತಾಯಿ, ಸಹೋದರನ ಜೊತೆಗೆ ನೋಡಿದ್ದೆಲ್ಲಾ ಕಷ್ಟದ, ಬಿಕ್ಕಟ್ಟಿನ ಜೀವನ. ಇಪ್ಪತ್ತರ ಹರಯಕ್ಕೇ ಮದುವೆಯಾಗಿ ನಾಲ್ಕು ಮಕ್ಕಳು ಹಾಗೂ ಪತ್ನಿಯೊಂದಿಗೆ ಜೀವನ ನಡೆಸುತ್ತಿದ್ದ ಇವರು ಮೊದಲಿನಿಂದಲೂ ಮಾಡಿಕೊಂಡು ಬಂದಿರುವುದು ಪೀಠೋಪಕರಣಗಳ ಕೆಲಸವನ್ನೇ, ಶ್ರೀರಂಗಪಟ್ಟದ ಅಂಗಡಿಯಲ್ಲಿ ಕೆಲಸ ಮಾಡುವ ಜೊತೆಗೆ ಹತ್ತಿರದ ಬಾಬುರಾಯನಕೊಪ್ಪಲು ಹಾಗೂ ಸುತ್ತಮುತ್ತಲ ಸ್ಥಳಗಳಿಗೂ ಕೆಲಸ ಮಾಡಲು ಹೋಗುವ ಶೌಕತ್ ಸಂಪೂರ್ಣವಾಗಿ ಕಲೆಯನ್ನು ನಂಬಿ ಬದುಕು ಕಟ್ಟಿಕೊಂಡವರು.
ಇವರ ಅಂಗಡಿಯಲ್ಲಿ ಕಾಣಸಿಗುವುದೆಲ್ಲಾ ಹಳೆಯ ಕಾಲದ ವಿನ್ಯಾಸವುಳ್ಳ ವಿಶೇಷ ಕುರ್ಚಿಗಳು, ಮೇಜುಗಳು, ಪುಸ್ತಕದ ಸ್ಟಾಂಡ್, ಕಪಾಟು, ಅಲಂಕಾರಕ್ಕೆ ಇಡುವ ಆನೆ ಮತ್ತಿತರ ವಸ್ತುಗಳು. ಒಂದೊಂದರ ಮೇಲೂ ವಿಶಿಷ್ಟ ಹಾಗೂ ಸೂಕ್ಷ್ಮ ಕುಸುರಿಯ ಕಲೆಗಳನ್ನು ಕಾಣಬಹುದು. ಒಮ್ಮೊಮ್ಮೆ ಹಳೆಯ ವಸ್ತುಗಳಿಗೇ ಮರುವಿನ್ಯಾಸ, ಪಾಲಿಷ್ ಮಾಡಿ ಹೊಸ ಕಳೆ ನೀಡಿದರೆ ಮತ್ತೆ ಕೆಲವನ್ನು ತಾವೇ ಹೊಸದಾಗಿ ತಯಾರಿಸುತ್ತಾರೆ. ಅಂದಹಾಗೆ ಇವರ ಜೀವನವೆಲ್ಲಾ ಇದೇ ಅಂಗಡಿಯಲ್ಲಿ, ಸಂಜೆಯಾಗುತ್ತಿದ್ದಂತೆ ಎಲ್ಲ ವಸ್ತುಗಳನ್ನೂ ಬದಿಗಿರಿಸಿ ಒಂದು ಚಾದರ ಹಾಸಿ, ದಿಂಬು ಹಾಕಿ ಮಲಗಿದರೆ ಮತ್ತೆ ಬೆಳಿಗ್ಗೆ ಎದ್ದು ಎಲ್ಲವನ್ನೂ ಜೋಡಿಸಿ ವ್ಯಾಪಾರ ಮುಂದುವರಿಸುವುದು ಇವರ ಸೀದಾಸಾದಾ ದಿನಚರಿ.
‘ತಮ್ಮ ಪತ್ನಿ, ಮಕ್ಕಳು ಜೊತೆಗಿಲ್ಲವೇ?’ ಎಂಬ ಪ್ರಶ್ನೆಗೆ ವಿಷಾದದ ನಗುವಿನೊಂದಿಗೆ ಉತ್ತರಿಸುವ ಇವರು, ‘ಮನುಷ್ಯನಿಗೆ ದುಡ್ಡಿದ್ದರೆ ಮಾತ್ರ ಬೆಲೆ. ಇಲ್ಲ ಅಂದ್ರೆ ಯಾರೂ ತಿರುಗಿ ನೋಡಾಕಿಲ್ಲ. ಏನೇ ಆದ್ರೂ ನನಗಂತೂ ಏನೂ ಬೇಜಾರಿಲ್ಲ. ನಾನು ಖುಷಿಯಿಂದಿದ್ದೇನೆ. ನಾವು ಮತ್ತೆ ಹುಟ್ತೀವಿ, ಇನ್ನೊಂದು ಜನ್ಮ ಇದೆ ಅನ್ನೋದನ್ನೆಲ್ಲಾ ನಾನು ನಂಬಲ್ಲ. ಇರೋ ಅಷ್ಟು ದಿನ ಸಿಕ್ಕಿದ್ದರಲ್ಲಿ ನೆಮ್ಮದಿ ಕಂಡುಕೊಳ್ಳೋಕು. ಹಾಗೆ ಇಂತಹದ್ದರಲ್ಲೇ ನೆಮ್ಮದಿ ಹುಡುಕ್ತೀನಿ ಅಂತ ಹೋದ್ರೆ ಯಾವುದ್ರಲ್ಲೂ ನೆಮ್ಮದಿ ಸಿಗಲ್ಲ. ಒಂದು ಸಿಕ್ರೆ, ಇನ್ನೊಂದು ಬೇಕು ಅನ್ಸತ್ತೆ. ಇನ್ನೊಂದು ಸಿಕ್ರೆ ಮತ್ತೊಂದು ನನಗೆ ನೋವನ್ನೆಲ್ಲಾ ಮರೆಸೋದು ಹಳೇ ರೆಕಾರ್ಡ್‌ಗಳು, ಉದಾಹರಣೆಗೆ… ಎನ್ನುತ್ತಾ ‘ಕೋಯಿ ಹಮ್ ದಮ್ ನಾ ರಹಾ, ಕೋಯಿ ಸಹಾರಾ ನಾ ರಹಾ…’ ಎಂಬ ಕಿಶೋರ್ ಕುಮಾರ್ ಅವರ ಹಳೆಯ ರೆಕಾರ್ಡ್ ಅನ್ನು ಸುಶ್ರಾವ್ಯ ವಾಗಿ ಪ್ರಸ್ತುತಪಡಿಸುತ್ತಾರೆ ಶೌಕತ್.
‘ಇಷ್ಟೆಲ್ಲಾ ಕಷ್ಟದ ನಡುವೆ ನಿಮ್ಮ ಆರೋಗ್ಯ ಹೇಗೆ ನೋಡಿಕೊಳ್ತೀರ? ’ ಎಂದು ಕೇಳಿದರೆ, ಶೌಕತ್ ಮನಃಪೂರ್ತಿಯಾಗಿ ನಗುತ್ತಾರೆ. ‘ಈಗ ನನಗೆ ನಲವತ್ತೊಂಬತ್ತು ತುಂಬಿದೆ. ಮುಂಚೆಯೆಲ್ಲಾ ಚಟುವಟಿಕೆಯಿಂದ ಇರ್ತಿದ್ವಿ. ಯಾವ್ದಕ್ಕೂ ಮಷೀನ್‌ಗಳು ಇರ್ತಿರ್ಲಿಲ್ಲ. ಅನಿವಾರ್ಯವಾಗಿ ನಮ್ಮ ಆರೋಗ್ಯ ಹತೋಟಿಯಲ್ಲಿರ್ತಿತ್ತು.
ಈಗಿನ ಥರ ಯೋಗ ಮಾಡೋ ಅವಶ್ಯಕತೆ ಇರ್ಲಿಲ್ಲ. ಮಾಡೋ ಕೆಲ್ಸದಲ್ಲೇ ಯೋಗ, ವರ್ಕೌಟ್, ವ್ಯಾಯಾಮ ಎಲ್ಲಾ ಇತ್ತು. ದೇವರ ದಯದಿಂದ ಆರೋಗ್ಯ ಇನ್ನೂ ಹೀಗಿದೆ. ಇರೋ ಅಷ್ಟು ದಿನ ನೆಮ್ಮದಿಯಿಂದ ಇದ್ರೆ ಸಾಕು ಬಿಡಿ’ ಎನ್ನುತ್ತಾ ನಗುತ್ತಲೇ ಮಾತು ಮುಗಿಸುತ್ತಾರೆ.
ಹತ್ತು ನಿಮಿಷದ ಮಾತುಕತೆಯಲ್ಲಿ ಒಂದು ದಶಕಕ್ಕಾಗುವಷ್ಟು ಪಾಠಗಳನ್ನು ಹೇಳಿದ ಶೌಕತ್ ಅವರದ್ದು ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ ಇರಲು ಮನೆಯಿಲ್ಲ, ತನ್ನವರೆನ್ನುವ ಜನರು ಸನಿಹ ಇಲ್ಲ, ಹೇಳಿಕೊಳ್ಳುವಂತಹ ದೊಡ್ಡ ಸಂಗತಿಗಳೇನೂ ಬದುಕಿನಲ್ಲಿ ನಡೆಯುತ್ತಿಲ್ಲ, ಎಲ್ಲವನ್ನೂ ಸರಿಮಾಡಿಕೊಳ್ಳಲು ಹರಯವೂ ಇಲ್ಲ ಎಂದಾಗಲೂ ಮುಖದ ನಗುವನ್ನು ಸ್ವಲ್ಪವೂ ಬಾಡಿಸದೆ ಬದುಕನ್ನು ಬಂದಂತೆ ಸ್ವೀಕರಿಸುವ ದಿಟ್ಟತನದ ಪ್ರಾಮುಖ್ಯತೆ ತಿಳಿಸಿಕೊಡುತ್ತಾರೆ ಶೌಕತ್. ಅಸಲಿಗೆ ನಮಗೆ ಬದುಕಲು ಬೇರೆಯವರಿಂದ ಅಥವಾ ಈ ಜಗತ್ತು, ಸಮಾಜದಿಂದ ಏನೂ ಬೇಕಿಲ್ಲ. ಬೇಕಾದ್ದು, ಅತ್ಯಂತ ಅವಶ್ಯಕವಾದದ್ದೆಲ್ಲವೂ ನಮ್ಮೊಳಗೇ ಇವೆ. ಮನುಷ್ಯ ಸಂಬಂಧಗಳು, ಹಣ, ಜೀವನದ ಅವಶ್ಯಕತೆಗಳು… ಹೀಗೆ ನಾವು ‘ಬದುಕಲು ಬೇಕೇ ಬೇಕು’ ಎಂದುಕೊಳ್ಳುವ ಎಷ್ಟೋ ಅಂಶಗಳು ಇದ್ದಕ್ಕಿದ್ದಂತೆ ನಮ್ಮಿಂದ ದೂರ ಮುಖ ಹೋಗಬಹುದು, ಹೋಗುತ್ತವೆ.
ಹಾಗಾದಾಗಲೂ ನಮಗೆ ಜೀವಿಸಲು ಬೇಕಾದ್ದು ಆತ್ಮವಿಶ್ವಾಸ, ಛಲ ಹಾಗೂ ಧೈರ್ಯವಷ್ಟೇ. ಅದು ನಮ್ಮೊಳಗೇ ಇರುವ ನಮ್ಮ ಸ್ವಂತದ ಅಸ್ತ್ರ ಎಂಬ ಬಹಳ ಅಗಾಧ ಅರ್ಥ ವಿರುವ ಜೀವನದ ಪಾಠ ಕಲಿಸಿಕೊಟ್ಟ ಇವರ ಕಂಠ ದಲ್ಲಿ ಮೂಡಿಬರುವುದೆಲ್ಲವೂ ಇಂತಹ ಸಂಗತಿ ಗಳನ್ನು ಕಲಿಸುವ ಹಾಡುಗಳೇ ಎಂಬುದು ವಿಶೇಷ.
ಬದುಕು ಒಬ್ಬ ಮನುಷ್ಯನನ್ನು ಎಷ್ಟು ಬಗ್ಗಿಸಿದರೂ, ಮಾಗಿಸಿದರೂ ಆತ ನಗು, ನೆಮ್ಮದಿ ಯನ್ನು ಹೇಗೆ ಉಳಿಸಿಕೊಂಡು ಹೋಗಬಹುದು ಎಂಬುದಕ್ಕೆ ನಿದರ್ಶನವಾಗಿ ನಿಲ್ಲುವ ಶೌಕತ್, “ಎಕ್ ದಿನ್ ಬಿಕ್ ಜಾಯೇಗ ಮಟ್ಟ ಕೇ ಮೋಲ್…” ಎಂಬ ಮುಖೇಶ್ ಅವರ ಹಾಡಿ ನೊಂದಿಗೆ ಮಾತು ಮುಗಿಸಿ ತಮ್ಮ ನೆಚ್ಚಿನ ಮೇಜಿಗೆ ಪಾಲಿಷಿಂಗ್ ಕೆಲಸವನ್ನು ಮುಂದುವರಿಸಿದರು.
sirimysuru18@gmail.com
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…
ಮಂಡ್ಯ: ಸುಮಾರು 15 ತಿಂಗಳಿನಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ…
ಹಾಸನ: ಗ್ಯಾರಂಟಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡ್ತಿರೋದು ಸಮಾನತೆ ತರಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಹಾಸನದಲ್ಲಿ…