• ಬಾನು ಮುಷಾಕ್
ಅರಸೀಕೆರೆಯ ಉರ್ದು ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸ ಅತ್ಯಂತ ದಯನೀಯವಾಗಿ ಕುಂಟುತ್ತಾ ಸಾಗಿತ್ತು. ಆಗ ನನಗೆ ಏಳು ವರ್ಷಗಳಿ ಗಿಂತಲೂ ಹೆಚ್ಚು ವಯಸ್ಸಾಗಿತ್ತು. ನನ್ನ ತಂದೆಗೆ ನನ್ನ ವಿದ್ಯಾಭ್ಯಾಸದ ಬಗ್ಗೆ ಅಪಾರ ಚಿಂತೆ ಆಗಿತ್ತು. ಹೀಗಾಗಿ ಸ್ವಲ್ಪ ಭಿನ್ನವಾಗಿ ಆಲೋಚನೆ ಮಾಡಿದ ನನ್ನ ತಂದೆ ನನ್ನನ್ನು ತಮ್ಮ ಕಚೇರಿಯ ಸಮೀಪವಿದ್ದ ಕಾನ್ವೆಂಟ್ ಶಾಲೆಗೆ ಸೇರಿಸಲು ನಿರ್ಧರಿಸಿದರು. ನನಗೆ ನೆನಪಿರುವ ಹಾಗೆ, ನಾನು ನನ್ನ ತಂದೆಯ ಕೈ ಹಿಡಿದು ಆ ಕಾನ್ವೆಂಟ್ ಶಾಲೆಯ ಬಾರಿ ಕಟ್ಟಡಗಳನ್ನು ನೋಡುತ್ತಾ
ಮುಖ್ಯೋಪಾಧ್ಯಾಯಿನಿಯ ಕಚೇರಿಯ ಒಳಗೆ ಹೋದೆ.
ನನ್ನ ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ಮದರ್ ಎಂದು ಸಂಬೋಧಿಸಲಾಗುವ ಕ್ರೈಸ್ತ ಸನ್ಯಾಸಿನಿ ಮತ್ತು ಅವರ ಉಡುಗೆ – ತೊಡುಗೆ, ಮಾತು ಹಾಗೂ ನಯ-ವಿನಯದ ಜೊತೆಗೆ ಶಿಸ್ತಿನ ಭಾಷೆಯನ್ನು ಕಂಡೆ. ಆ ಮುಖ್ಯೋಪಾ ಧ್ಯಾಯಿನಿ ನನಗೆ ಕೆಲವು ಪ್ರಶ್ನೆಗಳನ್ನು ಕೇಳಿದಾಗ ನಾನು ಸಮರ್ಪಕ ವಾಗಿಯೇ ಉತ್ತರಿಸಿದೆ ಎಂದು ಕಾಣುತ್ತದೆ. ಆದರೂ ಆಕೆಯ ಸಂಶಯ ದೂರವಾಗಲಿಲ್ಲ. ಆಗ ಆಕೆ ನನ್ನ ತಂದೆಯತ್ತ ತಿರುಗಿ, ‘ನಿಮ್ಮ ಮಗಳನ್ನು ಈಗ ಶಾಲೆಗೆ ಸೇರಿಸಿಕೊಳ್ಳುತ್ತೇನೆ. ಅವಳ ಪ್ರೋಗ್ರೆಸ್ ಚೆನ್ನಾಗಿದ್ದಲ್ಲಿ ಮಾತ್ರ ನಾನು ಅವಳನ್ನು ನಮ್ಮ ಶಾಲೆಯಲ್ಲಿ ಮುಂದುವರಿಸುತ್ತೇನೆ. ಇಲ್ಲವಾದಲ್ಲಿ, ಆರು ತಿಂಗಳಲ್ಲಿ ನಡೆಯಲಿರುವ ಕಿರುಪರೀಕ್ಷೆಯ ಫಲಿತಾಂಶ ವನ್ನು ನೋಡಿ ಆಕೆಯ ಟೀಸಿಯನ್ನು ಕೊಟ್ಟುಬಿಡುತ್ತೇನೆ. ಆಗ ನೀವು ತಕರಾರು ಮಾಡುವಂತಿಲ್ಲ’ ಎಂದು ಕರಾರನ್ನು ವಿಧಿಸಿದರು. ನನ್ನ ತಂದೆಯ ಆತ್ಮವಿಶ್ವಾಸವೋ ಅಥವಾ ನನ್ನ ಮೇಲಿದ್ದ ಅಪಾರ ನಂಬಿಕೆಯೋ ನನಗೆ ತಿಳಿಯದು. ನನ್ನ ತಂದೆ ಅದಕ್ಕೆ ಒಪ್ಪಿದರು. ಕೂಡಲೇ ಪುಸ್ತಕ, ಬ್ಯಾಗ್ ಮತ್ತು ಒಂದು ಪುಟ್ಟ ಛತ್ರಿಯನ್ನು ಖರೀದಿಸಿ, ನನ್ನನ್ನು ಮನೆಗೆ ಕರೆತಂದರು.ನಾನು ನಿಯಮಿತವಾಗಿ ಶಾಲೆಗೆ ಹೋಗಲಾರಂಭಿಸಿದೆ. ಬೆಳಿಗ್ಗೆ ನನ್ನ ತಂದೆಯೇ ನನ್ನನ್ನು ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟು, ಸಂಜೆ ಅವರ ಕಚೇರಿಯ ವೇಳೆ ಮುಗಿದಾಗ ನನ್ನನ್ನು ಜೊತೆಯಲ್ಲಿ ಕರೆದುಕೊಂಡು ಬರುತ್ತಿದ್ದರು.
ಹೀಗೆ ಆರಂಭವಾದ ನನ್ನ ವಿದ್ಯಾಭ್ಯಾಸ ಅಡೆತಡೆ ಇಲ್ಲದೆ ಮುಂದೆ ಸಾಗತೊಡಗಿತು. ಕನ್ನಡದ ಅಕ್ಷರಗಳು ನನ್ನನ್ನು ಬಹುವಾಗಿ ಆಕರ್ಷಿಸಿದವು. ನಾನು ಬಹುಬೇಗನೆ ಅಕ್ಷರಗಳನ್ನು ಕಲಿತೆ ಮತ್ತು ಕಾಗುಣಿತವನ್ನು ನನ್ನ ತಂದೆಯೇ ಮನೆಯಲ್ಲಿ ಹೇಳಿಕೊಟ್ಟರು. ಹೀಗಾಗಿ ಶಾಲೆಯಲ್ಲಿ ಉಪಾಧ್ಯಾಯಿನಿ ಕಲಿಸುವುದಕ್ಕೆ ಮೊದಲೇ ನಾನು ನನ್ನ ತಂದೆಯ ಮೂಲಕ ಕನ್ನಡದ ಹೆಸರಾಂತ ಕಥೆಗಾರ್ತಿ ಬಾನು ಮುಫ್ಲಾಕ್ ಅವರ ‘ಹಸೀನಾ ಮತ್ತು ಇತರ ಕಥೆಗಳು’ ಇಂಗ್ಲಿಷಿಗೆ ಭಾಷಾಂತರಗೊಂಡು ಇದೀಗ ಪ್ರತಿಷ್ಠಿತ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿದೆ. ಕನ್ನಡದ ಕೃತಿಯೊಂದು ಇದೇ ಮೊದಲ ಬಾರಿಗೆ ಈ ಪಟ್ಟಿಯ ಯೋಗ ಪಡೆದಿರುವ ಹೆಮ್ಮೆಯ ಈ ಹೊತ್ತಲ್ಲಿ ಬಾನು ಮುಫ್ಲಾಕ್ ಅವರು ಬರೆಯುತ್ತಿರುವ ಅಪ್ರಕಟಿತಆತ್ಮ ಕಥೆಯ ಭಾಗವೊಂದು ಇಲ್ಲಿದೆ.
ಕನ್ನಡದ ಅಕ್ಷರ ಲೋಕಕ್ಕೆ ಕಾಲಿಟ್ಟೆ. ಈ ನಿಟ್ಟಿನಲ್ಲಿ ನನಗೆ ಇದ್ದ ಅಪಾರ ಉತ್ಸಾಹವು ನನ್ನ ಸ್ವಂತ ಪರಿಶ್ರಮಕ್ಕೆ ಪ್ರೇರಣೆಯಾಯಿತು. ಒತ್ತಕ್ಷರವನ್ನು ಮತ್ತು ಕಾಗುಣಿತವನ್ನು ನನ್ನದೇ ಕ್ರಮದಲ್ಲಿ ಬಹು ವೇಗವಾಗಿ ಮತ್ತು ಶೀಘ್ರವಾಗಿ ಕಲಿತ ನಾನು ನನ್ನ ಪಾಂಡಿತ್ಯವನ್ನು ಮನೆಯ ಕೆಂಪು ಸಿಮೆಂಟಿನ ನೆಲ ಮತ್ತು ಗೋಡೆಯ ಮೇಲೆ ಪ್ರದರ್ಶಿಸತೊಡಗಿದೆ. ಗೋಡೆಗಳ ಮೇಲೆ ಇದ್ದಿಲಿನಿಂದ ಮತ್ತು ಕೆಂಪು ನೆಲದ ಮೇಲೆ ಬಳಪದಿಂದ ಬರೆದು ಬರೆದು ಸಂಭ್ರಮಿಸಿದೆ. ಅದೆಲ್ಲವನ್ನು ನೋಡಿದ ನನ್ನ ತಂದೆಗೆ ಅಪಾರ ಸಂತೋಷವಾದರೆ, ಆಂಟಿಗೆ ತುಂಬಾ ಆತಂಕವಾಗಿತ್ತು. ಅವಳು ಸದಾ ನೆಲ ಒರೆಸುವ ಬಟ್ಟೆಯನ್ನು ಕೈಯಲ್ಲಿ ಹಿಡಿದೇ ಇರುತ್ತಿದ್ದಳು. ನೆಲದ ಮೇಲೆ ಚಾಕ್ ಪೀಸ್ ನಿಂದ ಬರೆದರೆ ಮನೆಯೊಡೆಯನಿಗೆ ಮೈ ತುಂಬಾ ಸಾಲವಾಗುವುದೆಂದು ಅವಳು ವಿನಾಕಾರಣ ಭಯಗ್ರಸ್ಥಳಾಗಿರುತ್ತಿದ್ದಳು. ಹೀಗಾಗಿ ನಾನು ಬರೆದದ್ದನ್ನು ಅಳಿಸುವ ಮಹತ್‌ಕಾರ್ಯದಲ್ಲಿ ಅವಳು ಬಸವಳಿದು ಹೋಗುತ್ತಿದ್ದಳು.
1973ರ ಮಧ್ಯಭಾಗ ಎಂದು ನೆನಪು, ಕಾಲೇಜು ವಿದ್ಯಾಭ್ಯಾಸ ಆಗ ತಾನೇ ಮುಗಿದಿತ್ತು. ನಾನಾಗ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳಗೋಡಿನಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕಿಯಾಗಿದ್ದೆ. ಇನ್ನೂ ವಿವಾಹ ಆಗಿರಲಿಲ್ಲ. ಸಂಪೂರ್ಣವಾಗಿ ನಗರದಲ್ಲೇ ಬೆಳೆದಿದ್ದ ನನಗೆ ಬೆಳಗೋಡಿನ ವಾತಾವರಣ, ಗ್ರಾಮಾಂತರ ವಿದ್ಯಾರ್ಥಿಗಳ ಸಮಸ್ಯೆ ಹೊಸದು. ಹಾಸನ ನಗರದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಆಗಿದ್ದ ನನಗೆ ಕೆಲವೇ ಮಂದಿ ಸ್ನೇಹಿತೆಯರಿದ್ದರು. ಅವರಲ್ಲಿ ಸುಕನ್ಯಾ ಒಬ್ಬಳು. ನಾನು ಕೆಲಸಕ್ಕೆ ಸೇರಿದ ನಂತರ ನನ್ನ ಕಾಲೇಜು ಗೆಳತಿಯರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅವರ ನೆನಪು ಬಹಳ ಕಾಡಿಸುತ್ತಿತ್ತು.
ಆಗಿನ್ನೂ ಮಹಿಳೆಯರ ಹಕ್ಕುಗಳ ಬಗ್ಗೆ ಪ್ರಜ್ಞೆ, ಅರಿವು, ಹೋರಾಟದ ಪರಿಕಲ್ಪನೆ ಸಾರ್ವಜನಿಕವಾಗಿಯೂ ಇರಲಿಲ್ಲ. ಈ ಬಗ್ಗೆ ಯಾವುದೇ ಸಂಘಟನೆಗಳು ಸಕ್ರಿಯವಾಗಿರಲಿಲ್ಲ ಮತ್ತು ನನಗೆ ಸ್ಪಷ್ಟತೆ ಇರಲಿಲ್ಲ. ಆ ಸಂದರ್ಭದಲ್ಲಿ, ಯಾರಿಂದಲೋ ಒಂದು ಸುದ್ದಿಯನ್ನು ಕೇಳಿದೆ. ಒಬ್ಬಳು ಹೆಣ್ಣು ಮಗಳು ಬೆಂಕಿಯಲ್ಲಿ ಸುಟ್ಟು ಸತ್ತಳಂತೆ ಎಂದು. ಈ ಸುದ್ದಿ ಅಂದು ಕೂಡ ಬಹಳ ಸಾಧಾರಣವಾದದ್ದು. ಇಂದಿಗಂತೂ ಪತ್ರಿಕೆಗಳ ಪ್ರತಿದಿನದ ಸರ್ವೇ ಸಾಧಾರಣ ಸುದ್ದಿ. ಹೆಸರುಗಳು ಮತ್ತು ಜಾಗಗಳು ಬದಲಾಗ ಬಹುದು ಅಷ್ಟೇ. ಆದರೆ ಯಾಕೋ ಆ ಸುದ್ದಿ ನನ್ನನ್ನು ತೀವ್ರವಾಗಿ ಕಾಡಲಾರಂಭಿಸಿತು. ಕುಳಿತಲ್ಲಿ, ನಿಂತಲ್ಲಿ, ಮಂಪರು ಆವರಿಸಿದಾಗ, ಶಾಲೆಯಲ್ಲಿ, ಬಸ್ ಪ್ರಯಾಣದಲ್ಲಿ… ಎಲ್ಲೆಲ್ಲೂ ಆ ಹೆಣ್ಣು ಮಗಳು ನನ್ನನ್ನು ಕಾಡತೊಡಗಿದಳು. ನನ್ನನ್ನು ಕಾಡಿದಷ್ಟೂ ಆಕೆ ನನ್ನ ಆತ್ಮೀಯಳಾಗ ತೊಡಗಿದಳು. ಹಾಗಾಗಿ ಅವಳಿಗೆ ನನ್ನ ಆತ್ಮೀಯ ಸ್ನೇಹಿತೆಯ ಹೆಸರು ಸುಕನ್ಯಾ ಎಂದುಕೊಟ್ಟೆ. ಆದರೆ ಕೊನೆಯಲ್ಲಿ ಆಕೆ ಬೆಂಕಿ ಹಚ್ಚಿಕೊಂಡು ಸಾಯುವುದರಿಂದ ಗೆಳತಿಯನ್ನು ಸಾಯಿಸುವ ಮನಸ್ಸು ಕೂಡ ಆಗಲಿಲ್ಲ.
ಹೀಗಾಗಿ ಇನ್ಯಾವುದೋ ಬೇರೆ ಹೆಸರನ್ನು ಕೊಟ್ಟೆ. ಆದರೆ ಸುಕನ್ಯಾ ಎಂಬ ಹೆಸರನ್ನು ಕೊಟ್ಟಾಗ ಮನದ ಅಂಗಳದಲ್ಲಿ ಮೂಡುತ್ತಿದ್ದ ಚಿತ್ರಣ, ಬೇರೆ ಹೆಸರನ್ನು ಕೊಟ್ಟಾಗ ಮೂಡಲೇ ಇಲ್ಲ. ಅವಳ ಹೆಸರಿನಲ್ಲೇ ಮುಂದುವರಿಸಿದೆ.
ಈಗ ಕಥೆ ಕೂಡ ಮರೆತುಹೋಗಿದೆ. ಆದರೆ, ಸಾಮಾಜಿಕ ವೈರುಧ್ಯಗಳಡಿ ಹೆಣ್ಣು ತನ್ನನ್ನೇ ಕೊನೆಗಾಣಿಸಬೇಕಾದ ಮೌಲ್ಯಗಳನ್ನು ಪ್ರಶ್ನಿಸುವ ಸನ್ನಿವೇಶ ದಿಂದ ಕೂಡಿತ್ತು. ಹೀಗಾಗಿ ಆ ಕಥೆಯ ಶೀರ್ಷಿಕೆ ‘ನಾನು ಅಪರಾಧಿಯೇ?’ ಎಂದು ಇತ್ತು. ಈ ಹಿನ್ನೆಲೆಯಲ್ಲಿ ತನ್ನದಲ್ಲದ ಅಪರಾಧಕ್ಕೆ ಪ್ರಾಣದ ಬೆಲೆ ತೆರ ಬೇಕಾದ ಹೆಣ್ಣೆಂದು, ಆ ಸಂದರ್ಭದಲ್ಲಿ ಸಮಾಜಕ್ಕೆ ಪ್ರಶ್ನೆಗಳನ್ನೊಗೆಯುವ ನನ್ನ ಆಂತರ್ಯದ ಕುಡಿತವಿತ್ತು. ಆದರೆ ಇದ್ಯಾವುದನ್ನೂ ಪ್ರಜ್ಞಾಪೂರ್ವಕ ವಾಗಿ ಯಾವುದೇ ಸೈದ್ಧಾಂತಿಕ ನೆಲೆಗಟ್ಟಿನ ಆಧಾರದ ಮೇಲೆ ಪ್ರಶ್ನಿಸಿರಲಿಲ್ಲ. ಆದರೆ ಯಾವುದೇ ಸಂದರ್ಭದಲ್ಲಿ ಹೆದ್ದೂಬ್ಬಳು ಸಮಾಜವನ್ನೆದುರಿಸದೆ ಸಾಯುವುದು ಮಾತ್ರ, ಸಮಾಜದ ಮಹಾಪರಾಧ ಎನ್ನುವುದು ಖಚಿತ ನಿಲುವಾಗಿತ್ತು ಆ ದಿನಗಳಲ್ಲಿಯೂ.
ಹೀಗಾಗಿ ಮೂಡಿಬಂದ ಕಥೆ ‘ನಾನು ಅಪರಾಧಿಯೇ?’ ಒಂದರ್ಥದಲ್ಲಿ ಅವಳ ಪರವಾಗಿ ನಾನು ಆರಂಭಿಸಿದ ಹೋರಾಟವಾಗಿತ್ತೆಂದು ನನಗೆ ಈಗ ಅನಿಸುತ್ತದೆ. ಆಗ ಮಾತ್ರ ಆ ಕಥೆ ಬರೆಯಬೇಕಾದರೆ ಅದರ ಅಂತ್ಯದಲ್ಲಿ ನನಗೆ ತುಂಬಾ ಅಳು ಬಂದು, ಅತ್ತು, ಕಣ್ಣೀರೊರೆಸಿಕೊಂಡು ಮತ್ತೆ ಮುಂದುವರಿಸಿದ್ದೆ ಎಂದು ನೆನಪು.
ಆಗ ಇನ್ನೊಂದು ಸಂದರ್ಭ ಎಂದರೆ, ನಾನು ಬರೆಯುವುದನ್ನೆಲ್ಲಾ ಕದ್ದು ಮುಚ್ಚಿ ಬರೆಯಬೇಕಾಗಿತ್ತು. ಮನೆಯವರ ಹೆದರಿಕೆಯಿಂದಲ್ಲ; ಬದಲಿಗೆ ನನಗೇ ಆತ್ಮವಿಶ್ವಾಸದ ಕೊರತೆ ಇದ್ದುದರಿಂದ, ಮತ್ತೆ ಯಾರಾದರೂ ನಾನು ಬರೆದುದನ್ನು ಓದಲು ಪ್ರಯತ್ನಪಟ್ಟಲ್ಲಿ ನನಗೆ ತುಂಬಾ ಅವಮಾನವೆಂದೆನಿಸುತ್ತಿತ್ತು.
ಕೊನೆಗೂ ಧೈರ್ಯ ಮಾಡಿ ‘ಪ್ರಜಾಮತ’ ವಾರಪತ್ರಿಕೆಗೆ ಆ ಕಥೆಯನ್ನು ಕಳಿಸಿಕೊಟ್ಟೆ. ಆಗ ನಾನಿನ್ನೂ ಅವಿವಾಹಿತೆಯಾಗಿದ್ದರಿಂದ ಮತ್ತು ಆಗ ಗಂಡ ಸರ ಹೆಸರನ್ನು ತಮ್ಮ ಹೆಸರಿಗೆ ಜೋಡಿಸಿಡುವುದು ಫ್ಯಾಷನ್ ಆದದ್ದರಿಂದ ನಾನು ರೆಹಮಾನ್ ಎಂಬ ನನ್ನ ತಂದೆಯ ಹೆಸರನ್ನು ಜೋಡಿಸಿಕೊಂಡು ‘ಬಾನು ರೆಹಮಾನ್’ ಎಂಬ ಹೆಸರಿನಲ್ಲಿ ನನ್ನ ಕಥೆಯನ್ನು ಕಳಿಸಿಬಿಟ್ಟೆ. ಆಗ ವಹೀದಾ ರೆಹಮಾನ್ ಕೂಡ ಖ್ಯಾತ ನಟಿಯಾಗಿದ್ದುದರಿಂದ ನಾನು ಕೂಡ ಅವಳಷ್ಟೇ ಖ್ಯಾತಿಯನ್ನು ಪಡೆಯುತ್ತೇನೆ ಎಂಬ ಕನಸಿನೊಡನೆ! ಕಥೆ ಕಳಿಸಿದ ನಂತರ ಕಥೆ ಪ್ರಕಟವಾಗಲಿಲ್ಲ. ನಾನು ಕೂಡ ಅದನ್ನು ಮರೆತುಬಿಟ್ಟೆ.
ಈ ನಡುವೆ 1974ರಲ್ಲಿ ಮದುವೆ ಕೂಡ ನಡೆದು ಹೋಯಿತು.
ಅದೊಂದು ದಿನ ಬೇಲೂರಿನ ನನ್ನ ತವರು ಮನೆಗೆ ಹೋಗಿದ್ದೆವು. ಬೆಳಗಿನ ತಿಂಡಿಯಾದ ನಂತರ ಸ್ವಲ್ಪ ಸುತ್ತಾಡಿಕೊಂಡು ಬರಲು ಹೋದ ಮುಸ್ತಾಕ್, ಬೀಗುತ್ತಾ ಖುಷಿಯಿಂದ ಬಂದು ‘ಪ್ರಜಾಮತ’ ವಾರ ಪತ್ರಿಕೆಯನ್ನು ಬಿಡಿಸಿದರು. ಸುಲಕ್ಷಣಾ ಪಂಡಿತ್ ಎಂಬ ನಟಿಯ ಮುಖಪುಟವನ್ನು ಹೊಂದಿದ್ದ ಪ್ರಜಾಮತದಲ್ಲಿ ನನ್ನ ಕಥೆ ಪ್ರಕಟವಾಗಿತ್ತು.
ನನ್ನ ಸಹಪಾಠಿಯಾಗಿದ್ದ ಕೀ.ರಂ.ಜಯಲಕ್ಷ್ಮಿ ನಾಲ್ಕಾರು ತಿಂಗಳುಗಳ ನಂತರ ರಸ್ತೆಯಲ್ಲಿ ಸಿಕ್ಕಿದಳು. ಈಕೆ ಕೀ.ರಂ.ನಾಗರಾಜ್ ಅವರ ತಂಗಿ. ‘ಬಾನು… ನಿನ್ನನ್ನು ಸುಕನ್ಯಾ ಹುಡುಕುತ್ತಿದ್ದಾಳೆ, ಗತಿ ಕಾಣಿಸ್ತಾಳೆ’ ಎಂದು ಗುಟ್ಟಾಗಿ ಸಂದೇಶವನ್ನು ನೀಡಿದಳು. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಅಂದಿನಿಂದ ಇದುವರೆಗೂ ನಾನು ಮತ್ತು ಸುಕನ್ಯಾ ಭೇಟಿಯಾಗಿಲ್ಲ. ಬಹುಶಃ ಈಗ ಭೆಟ್ಟಿಯಾದರೆ ಸುಕನ್ಯಾ ನಕ್ಕು ಬಿಡಬಹುದೇನೋ!
skbanumushtaq@gmail.com
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…