ಹಾಡು ಪಾಡು

ವೀರಗಾಸೆಯೇ ಜೀವವಾಗಿರುವ ಕಿರಾಳು ಮಹೇಶ್

ಸಿರಿ ಮೈಸೂರು

ಮುಖಕ್ಕೆ ಪ್ರಸಾದನ ಮಾಡಿಕೊಂಡು, ಭಾರೀ ವಸ್ತ್ರ ಧರಿಸಿ, ಕತ್ತಿ ಹಿಡಿದು, ವೀರಭದ್ರನ ಧ್ಯಾನ ಮಾಡಿ ವೇದಿಕೆ ಏರಿ ಬಿಟ್ಟರೆ ಮುಗಿಯಿತು. ಗಂಟೆಗಟ್ಟಲೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಎಲ್ಲ ಕಲಾವಿದರಿಗೂ ಇದೇ ಅನುಭವವಾಗುತ್ತದಾದರೂ ವೀರಗಾಸೆ ಕಲಾವಿದರಿಗೆ ಇದು ಕಲೆಯ ಜೊತೆಗೆ ದೈವತ್ವದ ಅನುಭವ. ಅದಕ್ಕಾಗಿಯೇ ವೀರಗಾಸೆಗೆ ತನ್ನದೇ ಆದ ಛಾಪಿದೆ. ವೀರಗಾಸೆ ಕರ್ನಾಟಕದಾದ್ಯಂತ ಬಹಳ ಪ್ರಸಿದ್ಧಿ ಪಡೆದಿದೆಯಾದರೂ ಹಳೇ ಮೈಸೂರು ಭಾಗದಲ್ಲಿ ಇದು ಒಂದು ಕೈ ಹೆಚ್ಚೇ ಜನಪ್ರಿಯ.

ಅದರಲ್ಲೂ ಮೈಸೂರು, ಚಾಮರಾಜನಗರ ಭಾಗದಲ್ಲಿ ಎಷ್ಟೋ ಶುಭಸಮಾರಂಭಗಳಲ್ಲಿ, ಸಾರ್ವಜನಿಕ ಸಮಾರಂಭ ಗಳಲ್ಲಿ ವೀರಗಾಸೆ ನೃತ್ಯ ನೋಡಲು ಕಾಣುತ್ತದೆ. ಇದೇ ಕಲೆಯನ್ನು ನಂಬಿ ಈ ಭಾಗದಲ್ಲಿ ನೂರಾರು ಕುಟುಂಬಗಳು, ಸಾವಿರಾರು ಜನರು ಜೀವನ ನಡೆಸುತ್ತಿದ್ದಾರೆ. ಈ ಪೈಕಿ ಒಬ್ಬರು ಕಿರಾಳು ಮಹೇಶ್.

ಮೂಲತಃ ಮೈಸೂರಿನ ವರುಣ ಹೋಬಳಿಯ ಕಿರಾಳಿನವರಾದ ಮಹೇಶ್ ಹುಟ್ಟಿದ್ದೇ ವೀರಗಾಸೆ ಕಲಾವಿದರಕುಟುಂಬದಲ್ಲಿ. ನಾಗಪ್ಪ ಹಾಗೂ ಚೆನ್ನಮ್ಮ ಎಂಬ ದಂಪತಿಯ ಪುತ್ರನಾಗಿ ಜನಸಿದ ಮಹೇಶ್ ಅವರಿಗೀಗ ಭರ್ತಿ ಅರವತ್ತೆರಡು ವರ್ಷಗಳು. ಕಳೆದ ನಾಲ್ಕೂವರೆ ದಶಕದಿಂದ ವೀರಗಾಸೆಯನ್ನೇ ನಂಬಿ ಬದುಕು ನಡೆಸುತ್ತಿರುವ ಹೆಗ್ಗಳಿಕೆ ಇವರದ್ದು. ಇವರ ತಾತ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಸ್ಥಾನದಲ್ಲಿ ವೀರಗಾಸೆ ಮಾಡುತ್ತಿದ್ದರಂತೆ. ‘ಒಮ್ಮೆ ನಾಲ್ವಡಿಯವರ ಆಸ್ಥಾನಕ್ಕೆ ಬಂದಿದ್ದವರೊಬ್ಬರು ವೀರಗಾಸೆ ಕಲಾವಿದರ ಬಗ್ಗೆ ಮಾತನಾಡುತ್ತಾ ಅವರಿಗೆ ಕಾಲು ಸುಟ್ಟುಕೊಳ್ಳದೇ ಕೊಂಡ ಹಾರಲು ಅಸಾಧ್ಯ ಎಂದು ಅಪಹಾಸ್ಯ ಮಾಡಿದ್ದರಂತೆ. ಇದನ್ನು ಸವಾಲಾಗಿ ಸ್ವೀಕರಿಸಿದ ನಮ್ಮ ತಾತ ಆ ದಿನವೇ ಅವರ ಮುಂದೆಯೇ ಕಾಲು ಸುಟ್ಟುಕೊಳ್ಳದೆ ಕೊಂಡ ಹಾರಿ ತೋರಿಸಿ ಭಕ್ತಿ ಹಾಗೂ ಕಲೆಗೆ ಇರುವ ಶಕ್ತಿಯನ್ನು ಸಾಬೀತು ಮಾಡಿದ್ದರಂತೆ. ಇದನ್ನು ನೋಡಿ ಆಶ್ಚರ್ಯಚಕಿತರಾದ ನಾಲ್ವಡಿಯವರು ತಾವೇ ಇಳಿದುಬಂದು ನಮ್ಮ ತಾತನವರನ್ನು ತಬ್ಬಿದರಂತೆ’ ಎನ್ನುತ್ತಾ ತಮ್ಮ ಹಿಂದಿನ ಪೀಳಿಗೆಯ ಕಲಾಸಕ್ತಿಯನ್ನು ಬಿಚ್ಚಿಡುತ್ತಾರೆ ಮಹೇಶ್. ಈಗಲೂ ಮೈಸೂರು ಅರಮನೆಯ ಒಳಗೆ ವೀರಗಾಸೆ ಮಾಡಲು ಅವಕಾಶವಿರುವುದು ಇವರಿಗೆ ಮಾತ್ರ.

ಯದುವೀರ್-ತ್ರಿಷಿಕಾ ಅವರ ವಿವಾಹದ ಸಮಯದಲ್ಲಿ ಸ್ವತಃ ಮಹೇಶ್ ಅವರೇ ವೀರಗಾಸೆ ನೃತ್ಯ ಮಾಡಿದ್ದರು. ಬಾಲ್ಯದಿಂದಲೇ ತಾತ-ತಂದೆಯನ್ನು ನೋಡುತ್ತಾ ತಮ್ಮ ಸಹೋದರನೊಂದಿಗೆ ವೀರಗಾಸೆ ಕಲಿತ ಮಹೇಶ್ ಅವರು ಬರುಬರುತ್ತಾ ತಾವೇ ಕಾರ್ಯಕ್ರಮಗಳನ್ನು ಕೊಡಲು, ಸ್ವತಂತ್ರವಾಗಿ ವೇದಿಕೆಗಳನ್ನೇರಲು ಆರಂಭಿಸಿದರು. ಅವರ ನಾಲ್ಕೂವರೆ ದಶಕಗಳ ದೀರ್ಘ ಪ್ರಯಾಣದಲ್ಲಿ ಸಾಕಷ್ಟು ಊರುಗಳಲ್ಲಿ, ಸಾವಿರಾರು ವೇದಿಕೆಗಳಲ್ಲಿ ಗಂಟೆಗಟ್ಟಲೆ ಕಾರ್ಯಕ್ರಮ ನೀಡಿರುವ ಹೆಗ್ಗಳಿಕೆ ಮಹೇಶ್ ಅವರದ್ದು. ‘ಮುಂಚೆಯೆಲ್ಲಾ ಕಲ್ಲಿದ್ದಲು, ನೈಸರ್ಗಿಕ ಬಣ್ಣಗಳನ್ನು ಬಳಸಿ ಮೇಕಪ್ ಮಾಡಿಕೊಳ್ಳುತ್ತಿದ್ದೆ. ಈಗ ಕಾಲ ಬದಲಾ ದಂತೆ ಹೊಸ ಹೊಸ ಉತ್ಪನ್ನ ಗಳನ್ನು ಬಳಸುತ್ತೇವೆ.

ಆದರೆ ಎಷ್ಟೇ ಬದಲಾವಣೆಗಳಾದರೂ ನನ್ನ ಮೇಕಪ್ ಮಾತ್ರ ನಾನೇ ಮಾಡಿ ಕೊಳ್ಳುತ್ತೇನೆ. ಅದನ್ನು ಯಾರಿಗೂ ಕೊಡುವುದಿಲ್ಲ. ಹೆಚ್ಚೂಕಡಿಮೆ ಅರ್ಧ ಗಂಟೆ ಸಮಯ ಮೇಕಪ್ ಮಾಡಿಕೊಳ್ಳಲೆಂದೇ ಮೀಸಲಿಡಬೇಕು. ನಮಗೆ] ಅದು ಬಹಳ ಪವಿತ್ರ ಕಾರ್ಯ. ಆನಂತರ ವಸ್ತ್ರಗಳನ್ನು ಧರಿಸಿ ಆಮೇಲೆ ವೇದಿಕೆ ಹತ್ತಬೇಕು’ ಎನ್ನುತ್ತಾ ತಮ್ಮ ಪೂರ್ವತಯಾರಿಯನ್ನು ವಿವರಿಸುತ್ತಾರೆ ಮಹೇಶ್. ವೀರಗಾಸೆಯಲ್ಲಿ ವಿವಿಧ ಪ್ರಸಂಗಗಳಿರುತ್ತವೆ. ಸಂದರ್ಭಾನುಸಾರ ಪ್ರಸಂಗಗಳನ್ನು ಪ್ರದರ್ಶಿಸುವ ಕೆಲಸ ಕಲಾವಿದರದ್ದು. ಇವರು ಇದೇ ವೃತ್ತಿಯಲ್ಲಿರುವ ಕಾರಣ ನಿರಂತರ ತಯಾರಿ ಇದ್ದೇ ಇರುತ್ತದೆ. ಒಮ್ಮೊಮ್ಮೆ ಇವರು ಯಾವ ಪ್ರಾಂತ್ಯದಲ್ಲಿ, ಯಾವ ಸಂದರ್ಭದಲ್ಲಿ ಪ್ರದರ್ಶನ ನೀಡಲು ಹೋಗುತ್ತಿರುತ್ತಾರೋ ಅದಕ್ಕೆ ತಕ್ಕಂತೆ ತಮ್ಮ ಇಡೀ ಪ್ರದರ್ಶನವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಇದು ಬಹಳ ಸಮಯ ಹಿಡಿಯುವ ಕೆಲಸ. ಜೊತೆಗೆ ಶ್ರದ್ಧೆ ಬೇಡುವ ಕೆಲಸ.

ದಶಕಗಳ ಹಿಂದೆ ಅಭಿನವ ವೀರಭದ್ರೇಶ್ವರ ನೃತ್ಯ ಕಲಾತಂಡ ಎಂಬ ಸಂಸ್ಥೆಯನ್ನು ಆರಂಭಿಸುವ ಮೂಲಕ ಮಹೇಶ್ ತಾವು ಮಾತ್ರ ಈ ವೃತ್ತಿಯಲ್ಲಿರುವುದಲ್ಲದೆ ಅದೆಷ್ಟೋ ಮಕ್ಕಳಿಗೆ ಖುದ್ದಾಗಿ ವೀರಗಾಸೆ ಕಲೆಯನ್ನು ಕಲಿಸಿದ್ದಾರೆ, ಕಲಿಸುತ್ತಿದ್ದಾರೆ. ಸ್ವತಃ ಇವರ ಮಗ ಸಹ ಈಗ ವೀರಗಾಸೆ ಕಲಾವಿದರು. ಮಗಳು ಕೂಡ ವೀರಗಾಸೆ ಕಲಿತಿದ್ದಾರೆ. ‘ಇಷ್ಟೆಲ್ಲಾ ಮಾಡೋಕೆ ನಮಗೆ ಶಕ್ತಿ ಕೊಡೋನೆ ವೀರಭದ್ರ. ವೀರಭದ್ರನ ಪೂಜೆ ಮಾಡದೆ ನಾವು ಎಂದಿಗೂ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಪ್ರತಿ ವೇದಿಕೆ ಹತ್ತೋಕು ಮುನ್ನ ಅವನ ಧ್ಯಾನ ಮಾಡುತ್ತೇವೆ. ಆಗ ನಮಗೇ ತಿಳಿಯದಂತೆ ಅದೆಂತಹದ್ದೋ ಶಕ್ತಿ ನಮ್ಮನ್ನಾವರಿಸಿಬಿಡುತ್ತದೆ. ಆದ್ದರಿಂದಲೇ ಅಷ್ಟು ದೊಡ್ಡ ದೊಡ್ಡ ವಸ್ತ್ರಗಳನ್ನು ಧರಿಸಿ ಗಂಟೆ ಗಟ್ಟಲೆ ದಣಿವರಿಯದಂತೆ ಪ್ರದರ್ಶನ ನೀಡುತ್ತೇವೆ’ ಎಂದು ತಮ್ಮ ವೇದಿಕೆಯ ಹಿಂದಿನ ಅನುಭವ ಗಳನ್ನು ಹೇಳುತ್ತಾರೆ ಮಹೇಶ್.

ಈವರೆಗೂ ಅದೆಷ್ಟೋ ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವ ಮಹೇಶ್ ಅವರಿಗೆ ನೂರಾರು ಪ್ರಶಸ್ತಿಗಳು ಸಂದಿವೆ. ಬಹಳಷ್ಟು ಮನ್ನಣೆ ಸಿಕ್ಕಿದೆ. ಎಲ್ಲಕ್ಕೂ ಕಾರಣ ಕಲೆ ಎನ್ನುವ ಮೂಲಕ ತಮ್ಮ ಬದುಕು ರೂಪಿಸಿಕೊಟ್ಟ ವೀರ ಗಾಸೆಗೆ ಋಣಿಯಾಗಿರು ತ್ತೇನೆ ಎನ್ನುವ ಮಾತು ಮಹೇಶ್ ಅವರದ್ದು.

ಪಾರ್ವತಿಯ ತಂದೆ ದಕ್ಷಬ್ರಹ್ಮ ಒಮ್ಮೆ ಯಾಗವೊಂದನ್ನು ಮಾಡಲು ಮುಂದಾಗುತ್ತಾನೆ. ಆದರೆ ಶಿವ ಹಾಗೂ ಪಾರ್ವತಿಗೆ ಆ ಯಾಗಕ್ಕೆ ಆಹ್ವಾನ ಇರುವುದಿಲ್ಲ. ಆಹ್ವಾನ ಇಲ್ಲದ ಕಡೆಗೆ ಹೋಗುವುದು ಬೇಡ ಎಂದು ಶಿವ ಹೇಳಿದರೂ ಕೇಳದೆ ಪಾರ್ವತಿ ಯಾಗಕ್ಕೆ ತೆರಳುತ್ತಾಳೆ. ಆದರೆ ಆಕೆಯ ತಂದೆ ದಕ್ಷಬ್ರಹ್ಮನಿಂದ ಅವಮಾನಿತಳಾಗುತ್ತಾಳೆ. ಇದರಿಂದ ಅವಮಾನಗೊಂಡ ಪಾರ್ವತಿ ತನ್ನನ್ನು ತಾನು ಅಗ್ನಿಗೆ ಅರ್ಪಿಸಿಕೊಳ್ಳುತ್ತಾಳೆ. ಇದರಿಂದಾಗಿ ಕೋಪಗೊಂಡ ಶಿವ ಯಜ್ಞದ ಜಾಗಕ್ಕೆ ಬಂದು ರುದ್ರತಾಂಡವವಾಡಿ ತನ್ನ ಕೂದಲಿನ ಗಂಟನ್ನು ಭೂಮಿಯ ಮೇಲೆ ಎಸೆಯುತ್ತಾನೆ. ಆಗ ವೀರಭದ್ರನ ರೌದ್ರಾವತಾರ ಸೃಷ್ಟಿಯಾಗುತ್ತದೆ. ಆ ಸಮಯದಲ್ಲಿ ಯಜ್ಞವನ್ನು ನಾಶಗೊಳಿಸಲು ವೀರಭದ್ರ ಮಾಡಿದ ನೃತ್ಯದ ವಿವಿಧ ಆಯಾಮಗಳನ್ನು ವೀರಗಾಸೆಯ ರೂಪದಲ್ಲಿ ಇಂದಿಗೂ ಕೊಂಡಾಡಲಾಗುತ್ತದೆ ಎಂಬುದು ಇತಿಹಾಸ. ವಿಶೇಷವಾಗಿ ಶಿವನ ರೌದ್ರಾವತಾರ ವೀರಭದ್ರನ ಸಲುವಾಗಿ ಹುಟ್ಟಿದ ಕಲೆ ವೀರಗಾಸೆ.

ಇಂತಹ ಐತಿಹಾಸಿಕ ಮಹತ್ವವುಳ್ಳ ಕಲೆಯನ್ನು ಆಗಿನ ಕಾಲದಿಂದ ಪೋಷಿಸುತ್ತಾ ಬಂದಿರುವ ಕೀರ್ತಿ ಮಹೇಶ್ ರಂತಹ ಸಾವಿರಾರು ಕಲಾವಿದರದ್ದು. ಇಂದಿಗೂ ಕರ್ನಾಟಕದ ಸಾಂಸ್ಕ ತಿಕ ಕಲಾಪ್ರಕಾರಗಳ ಪಟ್ಟಿಯಲ್ಲಿ ಡೊಳ್ಳು ಕುಣಿತ, ಕಂಸಾಳೆ, ಯಕ್ಷಗಾನಗಳ ಜೊತೆಗೆ ಪ್ರಮುಖವಾಗಿ ಅಗ್ರಸ್ಥಾನದಲ್ಲಿ ಗುರುತಿಸಿಕೊಳ್ಳುವ ಹೆಸರು ವೀರಗಾಸೆ. ಇಂತಹ ಕೀರ್ತಿಪ್ರಾಯವಾದ ಕಲೆ ನಮ್ಮ ಮೈಸೂರು ಭಾಗದ ಹೆಮ್ಮೆಯೂ ಹೌದು. ಇದನ್ನು ಉಳಿಸಿಕೊಂಡು, ಬೆಳೆಸಿ ಕೊಂಡು ಹೋಗುತ್ತಿರುವ ಕಲಾವಿದರಿಗೆ ಸೂಕ್ತ ಅವಕಾಶಗಳು ಹಾಗೂ ಅದರ ಮೂಲಕ ಜೀವನೋಪಾಯಕ್ಕಾಗುವಷ್ಟು ಆದಾಯ ದೊರೆತರೆ ಇನ್ನೂ ಹೆಚ್ಚೆಚ್ಚು ಜನರು ಈ ಕಲೆಗಳನ್ನು ಕಲಿತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವೀರಗಾಸೆಯನ್ನು ಮೆರೆಸಿ ಆ ಮೂಲಕ ನಮ್ಮೂರಿಗೆ ಕೀರ್ತಿ ತರುವುದರಲ್ಲಿ ಒಂದಿನಿತೂ ಅನುಮಾನವಿಲ್ಲ.

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ : ದೇಶವನ್ನು ಒಂದುಗೂಡಿಸಿದ ಖಾದಿ ಮಂತ್ರ

ಡಾ.ಪ್ರಮೀಳಾದೇವಿ ಬಿ.ಕೆ ಖಾದಿಯಿಂದ ದೇಶವನ್ನು ಒಂದು ಗೂಡಿಸುವುದು ಸಾಧ್ಯವೇ? ಇಂದು ಸಾಮಾನ್ಯವಾಗಿ ಕೇಳಬಹುದಾದ ಪ್ರಶ್ನೆ. ಸ್ವಾತಂತ್ರ್ಯ ಬಂದು ಏಳು ದಶಕ…

1 hour ago

ಗಾಂಧಿ ಅಭಿಯಾನ ಅರಿವಿನ ಯಾನ : ನಿದ್ದೆ ಇಲ್ಲದ ಇಂಗ್ಲೆಂಡಿನ ಮೊದಲ ದಿನಗಳು

ಜಹಜಿನಲ್ಲಿ ನನಗೆ ಸಮುದ್ರ ಪ್ರಯಾಣದ ಯಾವ ತೊಂದರೆಯೂ ಆಗಲಿಲ್ಲ. ದಿನಗಳು ಕಳೆದಂತೆಲ್ಲ ನನ್ನ ಮನಸ್ಸು ಸಂದಿಗ್ಧ ಪರಿಸ್ಥಿತಿಗೆ ಬೀಳತೊಡಗಿದ್ದಿತು. ಹಡಗಿನ…

2 hours ago

ಮಳೆಗಾಲದಲ್ಲೇ ವೈಟ್‌ ಟಾಪಿಂಗ್‌ ಆಗಬೇಕೆ?

ವಸಂತ್‌ ಕುಮಾರ್‌, ಮೈಸೂರು ಮಠ ಪ್ರತಿ ವರ್ಷವೂ ಪಾಲಿಕೆಯ ಬಜೆಟ್‌ನಲ್ಲಿ ರಸ್ತೆ ದುರಸ್ತಿಗಾಗಿ ಇಂತಿಷ್ಟು ಹಣವನ್ನು ನಿಗದಿಪಡಿಸಲಾಗುತ್ತದೆ. ೨೦೨೪-೨೦೨೫ರಲ್ಲಿ ಕೊಟ್ಟ…

2 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 11 , ಶನಿವಾರ

3 hours ago

ದಸರಾ ಉನ್ನತ ಮಟ್ಟದ ಸಭೆ: ದಸರಾ ಪಾಸ್‌ಗಳನ್ನು ಸಂಪೂರ್ಣ ತಿರಸ್ಕರಿಸಿದ ಸಂಸದ ಯದುವೀರ್‌ ಒಡೆಯರ್‌

ಬೆಂಗಳೂರು: ಇಂದು ನಡೆದ ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಭೆಯಲ್ಲಿ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು…

18 hours ago

ಜೀಪಿನ ಮೇಲೆ ಬಿದ್ದ ಮರದ ಕೊಂಬೆ: ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ

ಗೋಣಿಕೊಪ್ಪ: ಪೊನ್ನಂಪೇಟೆ ಪಟ್ಟಣದಲ್ಲಿ ಭಾರಿ ಗಾಳಿ-ಮಳೆಯ ನಡುವೆ ಚಲಿಸುತ್ತಿದ್ದ ಜೀಪಿನ ಮೇಲೆ ಮರದ ಬೃಹತ್ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ…

19 hours ago