ಹಾಡು ಪಾಡು

ಹೊಕ್ಕುಳಿಗಂಟಿದ ಕನ್ನಡದ ನಂಟು

ಕನ್ನಡ ಎಂಬ ಕಾಮನಬಿಲ್ಲು 

ಕನ್ನಡವು ನನಗೆ ಒಲಿದಿದೆ ಎಂಬುದಕ್ಕೂ ಹೆಚ್ಚಾಗಿ ನಾನು ಅದಕ್ಕೆ ಒಲಿದಿದ್ದೇನೆಂಬುದು ಹೆಚ್ಚು ಸರಿಯೆನಿಸುತ್ತದೆ. ಅದು ನನ್ನನ್ನು ಒಲಿಸಿಕೊಂಡಿದೆಯೆಂಬುದು ಇನ್ನಷ್ಟು ಸರಿಯೆನಿಸುತ್ತದೆ

ಅದೇನು ಮಾಯೆಯೋ, ಕನ್ನಡವೆಂಬುದು ನನ್ನೊಳಗೆ ಎಲ್ಲ ಕಾಲಕ್ಕೂ ಇತ್ತು. ಒಡನೊಡನೆಂದೋ ಒಡನಾಗಿತ್ತು. ಎದೆಯನ್ನೆಂದೋ ಹೊಕ್ಕು ಉಳಿದಿತ್ತು. ಹೊಕ್ಕುಳಿಗಂಟಿದ ನಂಟು ಸಾಧಿಸಿತ್ತು. ಒಳದನಿಯೆಂಬಂತೆ ಸದಾ ಇದ್ದು ಆಡುತ್ತಿತ್ತು. ತಿದ್ದಿ ತೀಡುತ್ತಿತ್ತು. ಒಳಗಿನ ಯೋಚನೆಗೆ ಮಾಧ್ಯಮವಾಗಿತ್ತು. ಕೂಡಿ ಕಳೆದು ಗುಣಿಸಿ ಭಾಗಿಸುವ ಲೆಕ್ಕವನ್ನೆಲ್ಲ ತನ್ನ ಮೂಲಕವೇ ಮಾಡುತ್ತಿತ್ತು. ಮಾಡಿಸುತ್ತಿತ್ತು. ಇನ್ನು ಈ ಹೊತ್ತಿಗೂ ಅಷ್ಟೆ, ನಾನೆನ್ನುವ ನಾನು ಹೊರಗಿನಿಂದ ಅದೇನೇ ಇದ್ದರೂ ಒಳಗೆ ಅದೇ ಆಗಿದ್ದೇನೆ. ಕನ್ನಡವನ್ನೇ ಉಸುರುತ್ತೇನೆ. ಬಗೆಯುತ್ತೇನೆ ಮತ್ತು ಜಪಿಸುತ್ತೇನೆ. ಕನ್ನಡವು ನನಗೆ ಒಲಿದಿದೆ ಎಂಬುದಕ್ಕೂ ಹೆಚ್ಚಾಗಿ ನಾನು ಅದಕ್ಕೆ ಒಲಿದಿದ್ದೇನೆಂಬುದು ಹೆಚ್ಚು ಸರಿಯೆನಿಸುತ್ತದೆ. ಅದು ನನ್ನನ್ನು ಒಲಿಸಿಕೊಂಡಿದೆಯೆಂಬುದು ಇನ್ನಷ್ಟು ಸರಿಯೆನಿಸುತ್ತದೆ.

ಹುಟ್ಟಾ ಕಟ್ಟಾ ಕನ್ನಡದ ಮನೆತನದ ಕೂಸು ನಾನು. ಅಣ್ಣ ಅಂದರೆ ನನ್ನ ಅಪ್ಪ ಅಪ್ಪಟ ಮಲೆನಾಡಿನ ಜನ. ಅಣ್ಣನ ಪೂರ್ವಿಕರು ಚಿಕ್ಕಮಗಳೂರಿಗೆ ಸಮೀಪದ ವಸ್ತಾರೆಯವರಂತೆ. ಬಾಳೇಹೊನ್ನೂರು, ಜಯಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆ, ಆಲ್ದೂರು, ನರಸಿಂಹರಾಜಪುರ… ಆಡುವಳ್ಳಿ, ಮೇಲ್ಪಾಲು, ಗಡಿಗೇಶ್ವರ, ಕಡಲೇಮಕ್ಕಿ, ಅರಳೀಕಟ್ಟೆ, ಸೀಗೋಡು, ಕುದುರೇಗುಂಡಿ… ಇತ್ಯಾದಿ ಜಿಯೋಗ್ರಫಿಯನ್ನು ಜಿಹ್ವೆಯಲ್ಲಿ ಕಾಪಿಟ್ಟುಕೊಂಡಿದ್ದ ಅಣ್ಣ ರಾಮಸ್ವಾಮಿ, ಸದಾ, ಅಲ್ಲಿನ ಸೊಗಡನ್ನೇ ಮಾತಿನಲ್ಲಿ ತೊಟ್ಟವರು. ಅಮ್ಮ ಶಾಂತಾಮಣಿ ಮೈಸೂರು ಕಡೆಯವಳು. ಕೆ.ಆರ್. ನಗರದ ಬಳಿಯಿರುವ ಮಾರಗೌಡನಹಳ್ಳಿ ಅವಳ ತಂದೆಯ ಮೂಲ. ಅವಳ ಅಮ್ಮ ಅಂದರೆ ನನ್ನ ಅಜ್ಜಿ ಹಾಸನದವರು. ಹೀಗಾಗಿ, ಈ ಕಾವೇರಿ ಸೀಮೆಯ ಮಾತು‘ಕತೆ’ ಅಮ್ಮನ ನಾಲಗೆಯಲ್ಲಿ ಸದಾ ನಲಿಯುವುದು. ಅವಳು ಎಸ್‌ಎಸ್‌ಎಲ್‌ಸಿಯವರೆಗೆ ಮೈಸೂರಿನಲ್ಲಿ ಓದಿದ್ದರಿಂದ ಸಯ್ಯಾಜಿರಾವ್ ರೋಡು, ಕೆ.ಆರ್.ಆಸ್ಪತ್ರೆ, ರಾಮಾನುಜ ರಸ್ತೆ, ಒಂಟಿಕೊಪ್ಪಲು, ಕುಕ್ಕರಹಳ್ಳಿಕೆರೆ, ಕನ್ನಂಬಾಡಿಕಟ್ಟೆ… ದೊಡ್ಡ ಗಡಿಯಾರ, ಮರಿಮಲ್ಲಪ್ಪಾಸ್, ಮಹಾರಾಣೀಸ್, ಶಾರದಾ ವಿಲಾಸ್… ಇಂಥವೆಲ್ಲ ಆಗಿಂದಾಗ ಇಣುಕಿ ಇಲ್ಲವಾಗುವವು.

ದೋಸೆಯನ್ನು ದ್ವಾಸೆಯೆನ್ನುವ, ಏನನ್ನು ಎಂತವೆನ್ನುವ, ಎತ್ತುವುದನ್ನು ಹೆಕ್ಕುವುದೆನ್ನುವ, ಹೋಗಿಬರುವುದನ್ನು ಹೋಪೆಬಪ್ಪೆಯೆನ್ನುವ, ಮಾತುಮಾತಿಗೂ ಮಾರಾಯಿತಿ ಬೆರೆಸುವ… ನೆಂಚಿಕೊಳ್ಳುವುದನ್ನು ‘ನಾಲಿಗ್ಗೆ’ ಅಂತನ್ನುವ, ನನಗೆ ನನ್ನಮ್ಮನಿಗೆ ಕಡೆವರೆಗೂ ಅರ್ಥವಾಗಿದ್ದಿರದ ‘ಆಗತ್ಯ’ವೆಂದೊಂದನ್ನು ಪದೇಪದೇ ಬಳಸುವ ಅಣ್ಣನ ಮಾತು- ಸದರಿ ದಾಂಪತ್ಯದಲ್ಲುಂಟಾದ ಮೂರು ಮಕ್ಕಳ ಸಂಸಾರದ ಸಂವಿಧಾನವಾಯಿತು. ಚೆನ್ನಾಯ್ತು, ನೇರ್ಪಾಯ್ತು, ಒರಟಾಯ್ತು, ಒಡ್ಡೊಡ್ಡಾಯ್ತು… ಮೂರೂ ಮೂರು ತೀರಾದವು, ಮುಖ ಮೂರ್ಕಡೆಯಾಯ್ತು… ಒಂಚೂರಾದರೂ ಚೆನ್ನುಚಾರ ಬೇಡವಾ… ಈ ಬಗೆಯ ಮಾತುಗಳಲ್ಲದೆ- ರುಬ್ಬುವುದನ್ನು ತಿರುವುವುದೆನ್ನುವ, ಸಾಣಿಸುವುದನ್ನು ಸೋಸುವುದೆನ್ನುವ, ಜರಡಿಯನ್ನು ವಂದರಿಯೆನ್ನುವ, ಒನಕೆಯನ್ನು ಹಾರೆಯೆನ್ನುವ, ವಂತಿಗೆಯನ್ನು ಒಬ್ಬೆಯೆನ್ನುವ, ಸ್ನಾನವನ್ನು ಮಡಿಯುಡುವುದೆನ್ನುವ, ಮಲಗೆಂಬುದನ್ನು ಮಲೀಕೋ ಅಂತನ್ನುವ, ಬಗ್ಗಡವನ್ನು ಚರಟವೆನ್ನುವ, ಕಡಲೇಕಾಯಿಯ ಎಣ್ಣೆಗೆ ಒಳ್ಳೆಣ್ಣೆಯೆನ್ನುವ, ಹರಳೆಣ್ಣೆಗೆ ಕಯ್ಯೆಣ್ಣೆಯೆನ್ನುವ, ಸಾರಿನ ತಳವನ್ನು ಚರಟವೆನ್ನುವ… ಅಮ್ಮನ ಖಾಸಾ ಸಂಗತಿಯೆಲ್ಲ ನಮ್ಮ ಒಳಮನೆಯ ಪದಕೋಶವನ್ನು ಭರ್ತಿಮಾಡಿದವು.

ನಾನು ಕನ್ನಡದಲ್ಲಿ ಬರೆಯತೊಡಗಿದ ಸುಮಾರಿನಲ್ಲಿ ಅಪರ್ಣೆ ನನ್ನ ಬದುಕಿನಲ್ಲಿ ಅಡಿಯಿಟ್ಟಳು. ಅಣಿಗನ್ನಡದ ಇನಿಗಾತಿಯೂ, ಇನಿಗನ್ನಡದ ಅಣಿಗಾತಿಯೂ ಆಗಿದ್ದ ಈ ಹೆಣ್ಣು ನನ್ನೊಳಗಿನ ಕನ್ನಡವನ್ನು ಸೊಕ್ಕಿಸಿದ್ದೂ ಸಿರಿಗತೆಯೇ ಹವುದು.

– ನಾಗರಾಜ ವಸ್ತಾರೆ, ಹೆಸರಾಂತ ಬರಹಗಾರ ಮತ್ತು ಖ್ಯಾತ ವಾಸ್ತುಶಿಲ್ಪಿ 

 

 

ಆಂದೋಲನ ಡೆಸ್ಕ್

Recent Posts

ಹಾಸನಾಂಬೆ ದರ್ಶನಕ್ಕೆ ಹರಿದುಬಂದ ಭಕ್ತಸಾಗರ! ಕಿಲೋಮೀಟರ್‌ಗಟ್ಟಲೆ ಸರತಿ ಸಾಲು

ಹಾಸನ: ಹಾಸನದಲ್ಲಿ ಹಾಸನಾಂಬೆ ದರ್ಶನದ ಸಂಭ್ರಮ ಮುಂದುವರಿದಿದೆ. ದರ್ಶನದ ಮೂರನೇ ದಿನವಾದ ಇಂದು ತಾಯಿಯ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ…

1 hour ago

ದೆಹಲಿಯಲ್ಲಿ ಮಾಲಿನ್ಯಕ್ಕೆ ಕಡಿವಾಣ: ಶೇ.50 ಸಿಬ್ಬಂದಿಗೆ ಮನೆಯಿಂದಲೇ ಕೆಲಸ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ವರದಿಯಾಗಿದೆ.…

1 hour ago

ಕರ್ನಾಟಕಕ್ಕೆ ₹4,504 ಕೋಟಿ ಹೆಚ್ಚುವರಿ ತೆರಿಗೆ ಪಾಲು ಬಿಡುಗಡೆ!

ನವದೆಹಲಿ: ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೆಚ್ಚುವರಿ ತೆರಿಗೆ ಪಾಲಿನ ಕಂತನ್ನು ಬಿಡುಗಡೆ ಮಾಡಿದ್ದು, ಕರ್ನಾಟಕಕ್ಕೆ 4,504 ಕೋಟಿ ರೂಪಾಯಿ ಹಂಚಿಕೆಯಾಗಿದೆ…

1 hour ago

ಎಲ್ಲೆಡೆ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ!

ಮೈಸೂರು: ಹಳದಿ–ಕೆಂಪಿನ ರಂಗು… ಕನ್ನಡದ ಕಂಪು… ಕರುನಾಡೆಲ್ಲ ರಾಜ್ಯೋತ್ಸವದ ಸಂಭ್ರಮ! ನಮ್ಮ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಹೆಮ್ಮೆಯಿಂದ…

1 hour ago

ಧಾರವಾಡದ ‘ಅಗ್ದಿ ಖರೆ’ ಕನ್ನಡ

‘ಅವರಿಲ್ರಿ ಮನ್ಯಾಗ ಹಿಂದಾಗಡೆ ಬರ್ರಿ’ ಎಂದು ಹೇಳಿದ ಧಾರವಾಡ ಮಹಿಳೆಗೆ ಬೆಂಗಳೂರಿಗನೊಬ್ಬ ಹಿಂದಗಡೆ ಹೋಗಿದ್ದನಂತೆ ‘ಹವಣಿ ಇರಲಿ’ ಉಳ್ಳಾಗಡ್ಡಿ ಹೆಚ್ಚುವ…

2 hours ago

ಕುಂದಾಪ್ರ ಕನ್ನಡವೆಂದರೆ ‘ಭಾಷಿ ಅಲ್ಲ; ಬದ್ಕ್

‘ಒಣ ಮೀನ್ ಚಟ್ನಿ, ಕೊಚ್ಚಕ್ಕಿ ಗಂಜಿ ಇದ್ರೆ ಉಂಡಾತ್’ ಎನ್ನುವ ನಮ್ಮೂರವರಿಗೆ ಕುಂದಾಪ್ರ ಕನ್ನಡ ಬದುಕೇ ಹೌದು ಆಷಾಢ ಮಾಸದ…

2 hours ago