ಸ್ವಾಮಿ ಪೊನ್ನಾಚಿ
ಮಹದೇಶ್ವರನ ಬೆಟ್ಟದ ಪೋಡಿನಿಂದ ಬಂದು ನಮ್ಮ ಮನೆಯಲ್ಲಿ ದನ ಮೇಯಿಸುತ್ತಿದ್ದ ಬೊಮ್ಮ ನನ್ನು ಕಂಡರೆ ನನಗೆ ಅಸಾಧ್ಯ ಪ್ರೀತಿ. ಪ್ರತಿದಿನ ಕಾಡಿ ನಿಂದ ಬರುವಾಗ ಸೊಡ್ಲಿಹಣ್ಣು, ಈಚಲ ಹಣ್ಣು, ಇಲ್ಲ ಅಂದರೆ ಆಟ ಆಡುವುದಕ್ಕೆ ಬಿದಿರಿನ ಚಿಟ್ಟಂ ಪಟ್ಲಾ ಮಾಡಿ ತರುತ್ತಿದ್ದ. ರಾತ್ರಿ ಊಟ ಮಾಡುವಾಗ ಕಾಡಿನಲ್ಲಿ ನಡೆದ ಸಂಗತಿಗಳನ್ನು ರಸವತ್ತಾಗಿ ಹೇಳುತ್ತಿದ್ದ. ಅವನು ಹೇಳುವ ಕಥೆಗಳಿಗಾಗಿ ಅವನ ಪಕ್ಕದಲ್ಲಿ ಮಲಗಲು ಹೋಗುತ್ತಿದ್ದೆವು.
ಬೇಸಿಗೆಯಲ್ಲಿ ಮಾತ್ರ ಸರಿಯಾಗಿ ರಾತ್ರಿ ಹೊತ್ತು ಮನೆಯಲ್ಲಿ ಇರುತ್ತಿರಲಿಲ್ಲ. ನಮಗೆಲ್ಲ ಆಗ ಬೋರೋ ಬೋರು. ಅವನು, ರಾತ್ರಿ ನಮ್ಮೂರಿನ ಸೋಲಿಗರನ್ನು ಜತೆ ಹಾಕಿಕೊಂಡು ಕಾಡಿಗೆ ಬೆಂಕಿ ಹಚ್ಚುವುದಕ್ಕೆ ಹೋಗುತ್ತಿದ್ದ. ಕೈಯಲ್ಲಿ ಸೂಟೆ ಸಿದ್ಧ ಮಾಡಿ ಕೊಂಡ ಎಂದರೆ ಆವತ್ತು ಅವನು ರಾತ್ರಿ ಕಾಡಿಗೆ ಹೋದ ಅಂತಲೇ ಅರ್ಥ.
ಅವನು ಹೋಗುವ ಮುನ್ನ ಇಂತಹ ದಿಕ್ಕಿನ ಬೆಟ್ಟ ನೋಡು ಎಂದು ಹೇಳಿ ಹೋಗುತ್ತಿದ್ದ. ರಾತ್ರಿ ಬೇಸಿಗೆಯ ಅಂಗಳ ದಲ್ಲಿ ಕೂತು ಊಟ ಮಾಡುವಾಗ ಮನೆಯ ಎದುರೇ ಕಾಣುವ ಕಾಡಿನ ಬೆಟ್ಟದಲ್ಲಿ ದೂರದಲ್ಲಿ ಸಾಲಾಗಿ ದೀಪ ಹಚ್ಚಿ ಟ್ಟಂತೆ ಬೆಂಕಿ ಉರಿಯುತ್ತಿತ್ತು. ಯಾರೋ ಬೆಟ್ಟಗಳ ನಡುವೆ ಸೀರಿಯಲ್ ಸೆಟ್ ಹಾಕಿಬಿಟ್ಟಿದ್ದಾರೆ ದೀಪಾವಳಿಗೆ ಎನ್ನುವಷ್ಟು ಚಂದದ ದೃಶ್ಯ ಅದು. ಬಹಳ ಹೊತ್ತಿನ ತನಕ ಅದು ಚಲಿಸುತ್ತಾ ಉರಿಯುತ್ತಿತ್ತು. ಮಧ್ಯರಾತ್ರಿಯಲ್ಲೋ ಇಲ್ಲ ಬೆಳಗಿನ ಜಾವಕೋ ಬಂದಿರುತ್ತಿದ್ದ ಬೊಮ್ಮ ಬೆಳಿಗ್ಗೆ ಸೋಲಿಗರೊಂದಿಗೆ ಹರಟುತ್ತಿರುವುದು ಕೇಳುತ್ತಿತ್ತು. ‘ಬಡ್ಡಿಮಗಂದು ಈ ಸಲ ಹೆಂಗೆ ಹುಲ್ಲು ಕಿತ್ಕ ಬರುತ್ತೆ ನೋಡ್ತಾ ಇರಿ, ಬಿತ್ತನೆ ಬಿತ್ತೋ ಟೈಮಿಗೆ ಹಸ ಕರುಗಳಿಗೆ ಬಿತ್ತನೆ ಮೇವಾಯಿತು ಕಾಡಲ್ಲಿ ಈ ಸಲ, ಎನ್ನುತ್ತಿದ್ದ. ಅವನ ಮಾತನ್ನು ಅನುಮೋದಿಸುವವರಂತೆ ನಮ್ಮೂರಿನ ಸೋಲಿಗರು ಹೌದೌದು, ಆ ಬ್ರಹ್ಮಜ್ಜಿ ಬರೆ ಕಾಡು ಸ್ವಲ್ಪ ಕಷ್ಟ, ಬೆಂಕಿ ಜೋರಾಗುತ್ತದೆ. ಇನ್ನು ಈ ಗೌಣ ಬರೆ, ಬೋಳಿ ಬೆಟ್ಟದ ಕಾಡೆಲ್ಲಾ ಚಟಪಟ ಅಂತ ಉರಿದುಹೋಯ್ತದೆ. ಕಾಡು ಮಿಕಗಳಿಗೇನು ತೊಂದರೆ ಆಗುವುದಿಲ್ಲ ಎನ್ನುತ್ತಿದ್ದರು.
ಬೇಸಿಗೆ ಅಷ್ಟೊತ್ತಿಗೆ ಕಾಡಿನ ದೊಡ್ಡ ಮರಗಳನ್ನು ಬಿಟ್ಟು ಪುಳ್ಳೆ ಪುರ್ಲೆಗಳು ಚೆನ್ನಾಗಿ ಒಣಗಿರುತ್ತವೆ. ಪೊದೆಗಳೆಲ್ಲ ಕಾವಿಗೆ ಬಿರ್ಕೊಂಡಿರುತ್ತವೆ. ಬೆಂಕಿ ಹಾಕಿದ ಕೂಡಲೇ ಪಳಚ್ನೆ ಉರಿದು ಕಾಡು ನೀಟ್ ಆಗುತ್ತದೆ. ನಾಲ್ಕು ಹನಿ ಮಳೆ ಬಿದ್ದ ಕೂಡಲೇ ಭೂಮಿಲಿ ಚಿಗುರು ಬರುತ್ತದೆ. ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ಓಡಾಡೋಕೆ ತೊಂದರೆ ಇಲ್ಲದೆ ಅಲ್ಲಲ್ಲಿ ಬಯಲು ಇರುವುದರಿಂದ ಯಾವ ಕಾಡು ಪ್ರಾಣಿಗಳೂ ಬೆಂಕಿಗೆ ಸಿಲುಕುವುದಿಲ್ಲ. ಪಕ್ಷಿಗಳು ಎತ್ತರದ ಮರದಲ್ಲಿ ಗೂಡು ಕಟ್ಟಿಕೊಳ್ಳುವುದರಿಂದ ಬೆಂಕಿ ಉರಿ ಅಲ್ಲಿಗಂಟ ಹೋಗುವುದಿಲ್ಲ ಎಂಬುದು ನಮ್ಮೂರ ಸೋಲಿಗರ ಅವೈಜ್ಞಾನಿಕ ತರ್ಕ; ಇರಲಿ. ಬೇಸಿಗೆ ಬಂತು ಎಂದರೆ ಅರಣ್ಯ ಇಲಾಖೆ ಸಿಬ್ಬಂದಿಗಳದ್ದು ನಾಯಿ ಪಾಡು. ಕಾಡಿನ ಮೂಲೆ ಮೂಲೆಗಳಲ್ಲಿ ನೀರು ಸ್ಟಾಕಿಟ್ಟುಕೊಂಡು ಎಲ್ಲಿಗೆ ಬೆಂಕಿ ಬೀಳುವುದೋ ಎಂಬ ಭಯದಿಂದಲೇ ಕಾವಲು ಕಾಯುತ್ತಿರುತ್ತಾರೆ. ಅದಾಗಿಯೂ ತಪ್ಪಿ ಬೆಂಕಿ ಬಿತ್ತು ಎಂದರೆ ಅದರ ಬಾಲವನ್ನು ಆರಿಸಲು ಸಹ ಇವರಿಗೆ ಸಾಧ್ಯವಾಗುವುದಿಲ್ಲ. ನೂರಾರು ಎಕರೆ ಕಾಡು, ಸಾವಿರಾರು ವನ್ಯಪ್ರಾಣಿಗಳು ಭಸ್ಮ. ಕಾಡಿನಲ್ಲಿರುವ ಒಂದು ಮರವನ್ನು ಕಡಿಯದಂತೆ, ಮೇವಿಗೆ ಜಾನುವಾರುಗಳನ್ನು ಬಿಡದಂತೆ ಕಾಡನ್ನು ಬಹಳ ಜತನದಿಂದ ಕಾಪಾಡುತ್ತಾರೆ.
ಆದರೆ ನನಗೆ ಈಗಲೂ ಒಂದು ಸೋಜಿಗವೆಂದರೆ ನಾನು ಚಿಕ್ಕಂದಿನಲ್ಲಿ ನೋಡಿದ್ದ ಕಾಡಿಗೂ ಇವತ್ತಿನ ಅರಣ್ಯ ಇಲಾಖೆಯ ಸಂರಕ್ಷಿತ ಕಾಡಿಗೂ ಇರುವ ಸಂಬಂಧವೇ ಇಲ್ಲದ ವ್ಯತ್ಯಾಸ. ಇಷ್ಟು ರಕ್ಷಣೆ ಮಾಡಿದ್ದ ಕಾಡು ಎಷ್ಟು ದಟ್ಟವಾಗಿರಬೇಕು!? ವನ್ಯ ಪ್ರಾಣಿಗಳು ಕಾಡಿನಿಂದ ಆಚೆಗೆ ಬರಬಾರದು. ಅಷ್ಟೊಂದು ಸಮೃದ್ಧಿಯಾಗಿರಬೇಕು. ಆದರೆ ಕಾಡು ನೋಡುವ ಎಂದು ಹೋದರೆ, ಇಡೀ ಕಾಡಿನ ತುಂಬಾ ದಟ್ಟವಾಗಿ ಲಂಟಾನ ಬೆಳೆದು ಕೊಂಡಿದೆ. ಕಾಡಿಗೆ ಬೆಂಕಿ ಬೀಳದಿರುವುದರಿಂದ ಮತ್ತು ಲಂಟಾನ ಬೆಳವಣಿಗೆಯನ್ನು ತಡೆಯಲು ಅಸಾಧ್ಯವಾಗಿರುವು ದರಿಂದ ಆ ಪೊದೆಗಳ ಅಮರುವಿಕೆಯಿಂದಾಗಿ ಕೆಳಗಡೆ ಹುಲುಸಾಗಿ ಹುಲ್ಲು ಬೆಳೆಯುವುದಿಲ್ಲ. ಮೇಲೆ ಎತ್ತರವಾಗಿ ಹೊಸ ಗಿಡಗಳು ಬೆಳೆದು ಹೆಮ್ಮರವಾಗಿರುವುದಿಲ್ಲ. ಕಾಡು ಬೆಳೆಯುವುದಿಲ್ಲ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ವಚ್ಛಂದ ವಾಗಿ ಓಡಾಡಲು ಸಾಧ್ಯವಾಗದೆ ಕಾಡು ಮಿಕಗಳು ಉದ್ದಕ್ಕೂ ರಸ್ತೆಗುಂಟ ಜನರಿಗೆ ಕಾಣಸಿಗುತ್ತವೆ. ಮೇವಿಲ್ಲದ ಕಾಡುಪ್ರಾಣಿಗಳು ಕಾಡಂಚಿನ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತವೆ. ಮನುಷ್ಯರ ಮೇಲೆ ದಾಳಿ ಕೂಡ ಮಾಡುತ್ತವೆ. ಹಾಗಾಗಿ ಅರಣ್ಯ ಇಲಾಖೆ ಮತ್ತು ರೈತನ ನಡುವಿನ ಸಂಘರ್ಷ ಮೊದಲಿಗಿಂತ ತುಸು ಹೆಚ್ಚೇ ಭುಗಿಲೆದ್ದಿದೆ. ಹುಲಿಗಳಂತಹ ಅಮೂಲ್ಯ ಪ್ರಾಣಿಗಳನ್ನು ವಿಷ ಇಟ್ಟು ಕೊಲ್ಲುವಂತಹ ಸ್ಥಿತಿಗೂ ಜನ ತಲುಪುವಂತಾಗಿದೆ.
ಹಾಗಂತ ಕಾಡಿಗೆ ಬೆಂಕಿ ಕೊಟ್ಟು ಸ್ಪೇಸ್ ಜಾಸ್ತಿ ಮಾಡಿ ಎನ್ನಲಾಗುವುದಿಲ್ಲ. ೧೯೪೦ರ ಆಸುಪಾಸಿನಲ್ಲಿ ಬಿಳಿಗಿರಂಗನ ಬೆಟ್ಟದ ಕಾಡಿಗೆ ಪ್ರಸಿದ್ಧ ಬೇಟೆಗಾರ ಕೆನತ್ ಅಂಡರ್ಸನ್ ಅವರ ಮಗ ಡೋನಾಲ್ಡ್ ಅಂಡರ್ಸನ್ ಭೇಟಿ ನೀಡಿದಾಗ ಅಲ್ಲಿ ಕಾಡಿನಲ್ಲಿ ಸಿಕ್ಕ ದೃಶ್ಯವನ್ನು ನೋಡಿ ದಂಗಾಗುತ್ತಾನೆ.
ನೂರರಿಂದ ಇನ್ನೂರರವರೆಗೆ ಕಾಡಮ್ಮೆಗಳ ಹತ್ತಾರು ಗುಂಪುಗಳು. ಐವತ್ತರಿಂದ ರಿಂದ ಅರವತ್ತರ ತನಕ ಆನೆಗಳ ಹಿಂಡನ್ನು ನೋಡುತ್ತಾನೆ. ಇಂತಹ ದೃಶ್ಯವನ್ನು ನೋಡಿದ ಅವನ ಖುಷಿ ಬಹಳ ಕಾಲ ಉಳಿಯಲಿಲ್ಲ. ಆಗತಾನೇ ಪಸರಿಸುತ್ತಿದ್ದ ಲಂಟಾನ ಗಿಡವನ್ನು ನೋಡಿ ಆತಂಕ ವ್ಯಕ್ತಪಡಿಸುತ್ತಾನೆ. ಈ ಗಿಡವನ್ನು ನಾಶ ಮಾಡದೆ ಹೀಗೆ ಬಿಟ್ಟರೆ ಮುಂದೊಂದು ದಿನ ಈ ಬಿಳಿಗಿರಂಗನ ಬೆಟ್ಟದ ಕಾಡುಗಳಲ್ಲಿ ಇಂತಹ ದೃಶ್ಯವನ್ನು ಮತ್ತೊಮ್ಮೆ ಕಾಣಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಅವನು ಹೇಳಿದ ಎಂಬತ್ತು ವರ್ಷಗಳ ನಂತರ ಇವತ್ತಿನ ಬಿಳಿಗಿರಿ ರಂಗನ ಬೆಟ್ಟದ ಕಾಡುಗಳಲ್ಲಿ ಹತ್ತರ ಗುಂಪಿನ ಕಾಡೆಮ್ಮೆಗಳು ಸಿಗುವುದೇ ಅಪರೂಪ ಇನ್ನೂ ಆನೆಗಳ ಹಿಂಡು ಮತ್ತೂ ಅಪರೂಪ. ಈಗ ವಿಷಯಕ್ಕೆ ಬರುವುದಾದರೆ ಈ ಹಳ್ಳಿಗರು ಕಾಡಿಗೆ ಬೆಂಕಿ ಕೊಟ್ಟು ಕೂಡ ಕಾಡನ್ನು ಕಾಪಾಡುತ್ತಿದ್ದುದಕ್ಕೂ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಅರಣ್ಯ ಇಲಾಖೆಯವರು ಕಾಡು ಕಾಪಾಡುತ್ತಿರುವುದನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಯಾವುದು ಅವೈಜ್ಞಾನಿಕವಾದದ್ದು ಎಂಬ ಜಿಜ್ಞಾಸೆ ಕಾಡದಿರದು. ಒಂದು ಮರಕ್ಕೂ ಬೆಂಕಿ ಬೀಳದ ಹಾಗೆ ಕಣಿವೆಗಳ ಕಡೆ ಬೆಂಕಿ ಹಬ್ಬದ ಹಾಗೆ ಕಾಡಿನಲ್ಲಿ ಬೆಂಕಿ ಮಾರ್ಗ ಮಾಡಿಕೊಂಡು ಕಾಡಿಗೆ ಬೆಂಕಿ ಇಟ್ಟು ಬೇಯಿಸುತ್ತಿದ್ದಾಗಲೇ ಕಾಡು ಸಮೃದ್ಧಿ ಇತ್ತೇನೋ ಎನಿಸುತ್ತದೆ. (ಮಣ್ಣಿನ ಸೂಕ್ಷ್ಮಜೀವಿಗಳು, ಉರಗಗಳು, ಅಪರೂಪ ತಳಿಯ ಬೀಜಗಳು ಸುಟ್ಟು ನಷ್ಟವಾಗುತ್ತವೆ ಎನ್ನುವುದು ಬೇರೆ ಮಾತು. ನಮ್ಮೂರ ಸೋಲಿಗರನ್ನು ಕೇಳಿದರೆ ಇದಕ್ಕೂ ಪರಿಹಾರವನ್ನು ಕಂಡುಕೊಂಡೇ ಬೆಂಕಿ ಹಾಕುತ್ತಿದ್ದು ಎನ್ನುತ್ತಾರೆ )
ಸಣ್ಣ ಪುಟ್ಟ ವಿಷಯಗಳಿಗೆ ಕಾಡು ತಿರುಗುತ್ತಿದ್ದ ಹಳ್ಳಿಗರನ್ನು ತಡೆದು, ದನ ಮೇಯಿಸುವುದನ್ನು ನಿರ್ಬಂಽಸಿ ಕಾಡಿನಲ್ಲಿ ಸಂಚಾರ ನಿಯಂತ್ರಣವಾದ ಮೇಲೆಯೇ ಈ ಲಂಟಾನ ಕಾಡು ಪಾಲಾದದ್ದು. ಪ್ರಾಣಿಗಳು ಮತ್ತು ಮನುಷ್ಯರು ಎಲ್ಲೆಂದರಲ್ಲಿ ತಿರುಗಾಡಿಕೊಂಡಿರುತ್ತಿದ್ದ ಕಾಡಿನ ಜಾಗದಲ್ಲೆಲ್ಲ ಲಂಟನಾ ಪೊದೆ ಬೆಳೆದುಕೊಂಡಿತು.ಅರಣ್ಯ ಇಲಾಖೆಯವರು ಲಂಟಾನ ಬೆಳೆದಿರುವುದನ್ನೇ ಸಮೃದ್ಧಿಯಾಗಿ ಕಾಡು ಬೆಳೆಸಿದ್ದೇವೆ ಎಂದು ಕೊಳ್ಳುವಂತಾಯಿತು. ಆಗೆಲ್ಲ ಕಾಡಿಗೆ ಬೆಂಕಿ ಇಟ್ಟರೆ ಪುರ್ರನೇ ಉರಿದು ಸಾಗಿ ಬಿಡುತ್ತಿತ್ತು. ಆದರೆ ಈಗ ಹಾಗಿಲ್ಲ. ಒಮ್ಮೆ ಕಿಡಿ ಸಿಕ್ಕರೆ ಸಾಕು ಇಡೀ ಕಾಡು ಪೊದೆಗಳಿಂದಾಗಿ ಗಂಟೆಗಟ್ಟಲೆ ಉರಿಯುತ್ತದೆ. ಆ ಉರಿಯ ಕಾವಿಗೆ ಹಸಿ ಹಸಿ ಮರಗಳು ಹತ್ತಿಕೊಳ್ಳುತ್ತವೆ. ಓಡಾಡಲು ಜಾಗ ಸಿಕ್ಕದೆ ಒಳಗಡೆ ಸಿಕ್ಕಿ ಪ್ರಾಣಿ ಪಕ್ಷಿಗಳು ಸುಲಭವಾಗಿ ಬೆಂಕಿಯಲ್ಲಿ ಬೆಂದು ಅಪಾರ ಪ್ರಾಣಹಾನಿ ಆಗುತ್ತದೆ. ಈಗ ಕಾಡಿಗೆ ಬೆಂಕಿ ಬೀಳುವುದನ್ನು ನೆನೆಸಿಕೊಂಡರೆ ಭಯವಾಗುತ್ತದೆ. ಒಂದು ಕಾಲದಲ್ಲಿ ಯಾವ ನಮ್ಮನೆ ಎದುರಿನ ಬೋಳಿಗೆ ಬೆಂಕಿ ಬಿದ್ದಾಗ ದೀಪಾವಳಿಯ ಸಾಲು ದೀಪದಂತೆ ದೃಶ್ಯ ಕಾಣುತ್ತಿತ್ತೋ ಅದೇ ಬೋಳಿಬೆಟ್ಟಕ್ಕೆ ಮೊನ್ನೆ ಬೆಂಕಿ ಬಿದ್ದು ಎರಡು ದಿನ ಪೂರ್ತಿ ಕಾಡು ಹೊತ್ತಿಕೊಂಡು ಉರಿಯಿತು. ಅಲ್ಲಿ ಉರಿದ ಬೆಂಕಿಯ ಬೂದಿ ಗಾಳಿಗೆ ಹಾರಿ ಇಡೀ ಊರಿನ ಮನೆ ಬೀದಿಗಳನ್ನು ಬಣ್ಣ ಬಳಿದ ಹಾಗೆ ಮಾಡಿತ್ತು. ಎರಡು ದಿನ ಬಿಟ್ಟು ನೋಡಿದರೆ ಇಡೀ ಬೋಳಿಬೆಟ್ಟ ಬೋಳು ಬೋಳಾಗಿತ್ತು. ಬೆಂಕಿ ಬಿದ್ದು ಎರಡು ವರ್ಷಗಳಾದರೂ ಅಲ್ಲಿ ಮರ ಬೆಳೆದಿಲ್ಲ. ಮತ್ತೆ ಲಂಟಾನದ ಪೊದೆ ಸೃಷ್ಟಿಯಾಗಿ ಬೆಂಕಿಗೆ ಕಾದು ಕುಳಿತುಕೊಂಡಿದೆ. ಇತ್ತೀಚೆಗೆ ಊರಿಗೆ ಹೋದಾಗ ತಾಳು ಬೆಟ್ಟದಿಂದ ಪೊನ್ನಾಚಿಯ ರಸ್ತೆ ಉದ್ದಕ್ಕೂ ಅರಣ್ಯ ಸಿಬ್ಬಂದಿ ನೀರಿನ ಟ್ಯಾಂಕ್ ನಿಲ್ಲಿಸಿಕೊಂಡು ಕಾಡು ಕಾಯುತ್ತಿರುವುದನ್ನು ಕಂಡು ಇವೆಲ್ಲವೂನೆನಪಾಯಿತು. ಜೊತೆಗೆ ಕಾಡು ಪ್ರಾಣಿಗಳಿಂದ ರೈತನಿಗೆ ಹಾನಿಯಾದರೆ ಸೂಕ್ತ ಸಮಯಕ್ಕೆ ಸೂಕ್ತ ಪರಿಹಾರ ಕೊಡದೆ ರೈತರನ್ನು ರೊಚ್ಚಿಗೆಬ್ಬಿಸಿ ತಮ್ಮ ಜಾನುವಾರುಗಳ ರಕ್ಷಣೆ ತಾವೇ ಮಾಡಿಕೊಳ್ಳಲು ಹುಲಿ ಚಿರತೆಗಳಿಗೆ ಪರಂಪರೆಯ ಪದ್ಧತಿಯಂತೆ ವಿಷ ಹಾಕಲು ಅವಕಾಶ ಮಾಡಿಕೊಟ್ಟು ಆಮೇಲೆ ಹುಲಿ ಸತ್ತವು, ಚಿರತೆ ಸತ್ತವು ಎಂದು ಬೊಬ್ಬಿರಿಯುತ್ತ ಸಿಕ್ಕಸಿಕ್ಕ ರೈತರ ಮೇಲೆ ಕೇಸಾಕುವುದು ಕಂಡು ನಗು ಬಂದಿತು
” ಸೋಜಿಗವೆಂದರೆ ನಾನು ಚಿಕ್ಕಂದಿನಲ್ಲಿ ನೋಡಿದ್ದ ಕಾಡಿಗೂ ಇವತ್ತಿನ ಅರಣ್ಯ ಇಲಾಖೆಯ ಸಂರಕ್ಷಿತ ಕಾಡಿಗೂ ಇರುವ ಸಂಬಂಧವೇ ಇಲ್ಲದಷ್ಟು ವ್ಯತ್ಯಾಸ! ಇಷ್ಟು ರಕ್ಷಣೆ ಮಾಡಿದ್ದ ಕಾಡು ಎಷ್ಟು ದಟ್ಟವಾಗಿರಬೇಕು! ಆದರೆ ಕಾಡು ನೋಡುವ ಎಂದು ಹೋದರೆ, ಇಡೀ ಕಾಡಿನ ತುಂಬಾ ದಟ್ಟವಾಗಿ ಲಂಟಾನವೇ ಬೆಳೆದುಕೊಂಡಿದೆ”
ಅಕ್ಷತಾ ಹೆಣ್ಣಿನ ತಾಯ್ತನ ಆಕೆ ಗರ್ಭವತಿಯೆಂದು ತಿಳಿದಾಗಿನಿಂದಲೇ ಜಾಗೃತವಾಗುತ್ತದೆ. ತನಗೆ ಹುಟ್ಟಲಿರುವ ಮಗುವಿನ ಬಗ್ಗೆ ಅಂದಿನಿಂದಲೇ ಬಣ್ಣಬಣ್ಣದ ಕನಸುಗಳನ್ನು ಕಾಣಲಾರಂಭಿಸುತ್ತಾಳೆ.…
ಸಿರಿ ಮೈಸೂರು ಮುಖಕ್ಕೆ ಪ್ರಸಾದನ ಮಾಡಿಕೊಂಡು, ಭಾರೀ ವಸ್ತ್ರ ಧರಿಸಿ, ಕತ್ತಿ ಹಿಡಿದು, ವೀರಭದ್ರನ ಧ್ಯಾನ ಮಾಡಿ ವೇದಿಕೆ ಏರಿ…
ಸಿದ್ದೇಗೌಡ ಕೊಡಿಯಾಲ ಸಮಯಕ್ಕೆ ಬಾರದ ಅಧಿಕಾರಿ-ಸಿಬ್ಬಂದಿ:ಜನತೆ ಹೈರಾಣ ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ನಾಡಕಚೇರಿಯು ಅವ್ಯವಸ್ಥೆಯ ಗೂಡಾಗಿ ಮಾರ್ಪಟ್ಟಿದೆ. ಈ ನಾಡಕಚೇರಿಯಲ್ಲಿ…
ಲಕ್ಷ್ಮೀಕಾಂತ್ ಕೋಮಾರಪ್ಪ ಫಸಲು ನಾಶ, ಕಂಗಾಲಾದ ಕೃಷಿಕರು; ಸೂಕ್ತ ಕ್ರಮಕ್ಕೆ ಬೆಳೆಗಾರರ ಒತ್ತಾಯ ಸೋಮವಾರಪೇಟೆ: ತಾಲ್ಲೂಕಿನ ಗಣಗೂರು ಗ್ರಾಮ ಪಂಚಾಯಿತಿ…
ಎಚ್.ಎಸ್.ದಿನೇಶ್ ಕುಮಾರ್ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ನಿಲ್ಲದ ದಂಧೆ; ಪ್ರತಿ ಬಾರಿಯೂ ದಂಧೆಗೆ ಹೊಸ ದಾರಿ ಹುಡುಕುವ ದುರುಳರು ಮೈಸೂರು:…