ಹಾಡು ಪಾಡು

ಅಪ್ಪಾಜಿಯ ವಾತ್ಸಲ್ಯದ ಛಡಿಯೇಟಿನ ‘ಪಾಠ’ಗಳು ನೆನಪಾಗುತ್ತಿವೆ…

ರವಿ ಕೋಟಿ

ಬಾಲ್ಯದಲ್ಲಿ ನಾನು ಕಂಟ್ರೋಲಿಗೆ ಬರದಷ್ಟು ತುಂಟನಾಗಿದ್ದೆ. ಯಾರೂ ನನ್ನನ್ನು ಕಂಟ್ರೋಲ್ ಮಾಡಲಾಗುತ್ತಿರಲಿಲ್ಲ. ಯಾಕೆಂದರೆ ನಾನೇ ನನ್ನ ಕಂಟ್ರೋಲಿನಲ್ಲಿ ಇರುತ್ತಿರಲಿಲ್ಲ! ನನ್ನಎನರ್ಜಿಗೆ ಕೊನೆಯೇ ಇರುತ್ತಿರಲಿಲ್ಲ. ಆಟವಾಡುವಾಗ, ಓದುವಾಗ ಮಾತ್ರ ಅದರಲ್ಲೇ ತಲ್ಲೀನನಾಗಿ ಬಿಡುತ್ತಿದ್ದೆನಂತೆ. ಆಗ ಮಾತ್ರ ಎಲ್ಲರೂ ನನ್ನ ಉಪಟಳದಿಂದ ತಪ್ಪಿಸಿಕೊಳ್ಳುತ್ತಿದ್ದರು!!

ನಾನು ಕ್ಲಾಸಿನಲ್ಲಿ ಹಲವು ಬಾರಿ ಮೊದಲನೇ ರ‍್ಯಾಂಕ್ ಪಡೆದಿದ್ದೆ. ಆಗ ಅಪ್ಪಾಜಿ-ಅಮ್ಮಣ್ಣಿ ನನಗೆ ಉಡುಗೊರೆಗಳನ್ನು ಕೊಡುತ್ತಿದ್ದರು. ನಾನಾಗಲಿ, ಅಕ್ಕಂದಿರಾಗಲಿ ಯಾರೇ ಮೊದಲ ೫ನೇ ರ‍್ಯಾಂಕಿನೊಳಗೆ ಅಂಕ ಗಳಿಸಿದರೆ, ಮನೆಯಲ್ಲಿ ಉಡುಗೊರೆಗಳನ್ನು ಬಹುಮಾನದ ರೂಪದಲ್ಲಿ ತೆಗೆದುಕೊಡುತ್ತಿದ್ದರು. ನಾನು ಆಟ ಹಾಗೂ ಓದುವುದನ್ನು ಬಿಟ್ಟು, ಉಳಿದಂತೆ ಬೇರೆ ಸಮಯದಲ್ಲಿ ಏನಾದರೊಂದು ಚೇಷ್ಟೆಯಲ್ಲಿ, ತರಲೆಯಲ್ಲಿ ತೊಡಗಿರುತ್ತಿದ್ದೆ. ಅಮ್ಮಣ್ಣಿನಿಗೆ ನನ್ನನ್ನು ಹಿಡಿಯಲು ಆಗುತ್ತಿರಲಿಲ್ಲ; ನನ್ನ ಈ ವರ್ತನೆಯಿಂದ ಅಪ್ಪಾಜಿಯೂ ರೋಸಿ ಹೋಗಿದ್ದರು. ಕೆ.ರಾಮದಾಸ್ ಮಾಮ ಅವರು ಇರಬಹುದು, ರಾಮು ಮಾಮ ಇರಬಹುದು… ಅಪರಿಚಿತರು ಬಂದರೂ ಸರಿ ನಾನು ಅವರ ಹೊಟ್ಟೆಯನ್ನು ಪಂಚಿಂಗ್ ಬ್ಯಾಗ್ ಆಗಿ ಬಳಸುತ್ತಿದ್ದೆ!

ಒಂದು ಸಲ ರಾಮು ಮಾಮನ ಹೊಟ್ಟೆಗೆ ನಾನು ಜೋರಾಗಿ ಗುದ್ದಿದ್ದೆ; ಆ ಹೊಟ್ಟೆ ನೋವು ಹೋಗೇ ಇರಲಿಲ್ಲವಂತೆ. ಇದನ್ನು ತೋರಿಸಲು ವೈದ್ಯರ ಬಳಿ ಹೋದಾಗ, ರಾಮು ಮಾಮನಿಗೆ ಸಕ್ಕರೆ ಕಾಯಿಲೆ ಇರುವುದು ಗೊತ್ತಾಯಿ ತಂತೆ. ಈ ಘಟನೆಯನ್ನು ರಾಮು ಮಾಮ ತಮಾಷೆಯಾಗಿ-“ನನಗೆ ಸಕ್ಕರೆ ಕಾಯಿಲೆ ಇರುವುದನ್ನು ಕಂಡು ಹಿಡಿದದ್ದೇ ರವಿ” ಎಂದು ಹೇಳುತ್ತಿದ್ದರು! ಹೀಗೆ ನನ್ನ ತುಂಟಾಟ, ಉಪಟಳ ದಿನೇ ದಿನೇ ಹೆಚ್ಚುತ್ತಲೇ ಇತ್ತು. ಇದರಿಂದ ಅತಿಥಿಗಳ ಬಳಿ ಅಮ್ಮಣ್ಣಿ ಹಲವು ಬಾರಿ ಕ್ಷಮೆಯಾಚಿಸುತ್ತಾ, ಕಣ್ಣೀರು ಹಾಕುತ್ತಿದ್ದರು. ಆದರೂ, ನನ್ನ ತುಂಟಾಟವೇನು ನಿಂತಿರಲಿಲ್ಲ. ನನ್ನನ್ನು ಬೋರ್ಡಿಂಗ್ ಸ್ಕೂಲ್‌ಗೆ ಸೇರಿಸಿಬಿಡುವುದಾಗಿ ಅಮ್ಮಣ್ಣಿ ಹೆದರಿಸುತ್ತಿದ್ದರು. ಬೆದರಿಕೆಗೆ ನಾನು ಸುಧಾರಿಸಬಹುದೇನೋ ಎಂದು ಅಮ್ಮಣ್ಣಿ ಯೋಚಿಸಿದ್ದರೋ ಏನೋ. ಆದರೆ, ನಾನು ಅದಕ್ಕೆಲ್ಲಾ ಹೆದರುವ ಮಗನಾಗಿರಲಿಲ್ಲ! ಆಗ ನಾನು ೪ನೇ ಕ್ಲಾಸಿನಲ್ಲಿದ್ದೆ. ಒಂದು ಬೆದರಿಕೆ ಹಾಕೇ ನೋಡೋಣ ಎಂದು ಇರಬೇಕೇನೋ -ಹಾಸ್ಟೆಲ್‌ಗೆ ಸೇರಿಸುತ್ತೇವೆ ಎಂದು ಹೇಳಿ ಅಪ್ಪಾಜಿ-ಅಮ್ಮಣ್ಣಿ ನನ್ನನ್ನು ಊಟಿಯಲ್ಲಿರುವವುಡ್‌ಸೈಡ್ ಎಂಬ ವಸತಿಶಾಲೆಗೆ ಕರೆದುಕೊಂಡು ಹೋದರು. ಶಾಲೆಯ ಮುಂದೆ ನನ್ನನ್ನು ನಿಲ್ಲಿಸಿ, “ನಾವು ಹೇಳಿದ ಮಾತನ್ನು ನೀನು ಕೇಳುತ್ತೀಯಾ ಎಂದರೆ ಮನೆಗೆ ಹಿಂದಕ್ಕೆ ಕರೆದುಕೊಂಡು ಹೋಗುತ್ತೇವೆ. ಇಲ್ಲದಿದ್ದರೆ, ನಿನ್ನನ್ನು ಈ ಶಾಲೆಗೆ ಸೇರಿಸಿ, ನಾವು ಮೈಸೂರಿಗೆ ಹೋಗುತ್ತೇವೆ. ಏನು ಹೇಳ್ತಿಯಾ” ಎಂದು ಕೇಳಿದರು. ನಾನು ಇದಕ್ಕೆಲ್ಲಾ ಜಗ್ಗುವ ಮಗನೇ!?

“ಇಲ್ಲೇ ಬಿಟ್ಟು ಹೋಗಿ” ಎಂದು ಹೇಳಿಬಿಟ್ಟೆ! ಇವನು ಬದಲಾಗುವುದಿಲ್ಲ ಎಂದು ಅವರಿಗೆ ಎನಿಸಿರಬೇಕು. ನನ್ನನ್ನು ಅಲ್ಲೇ ಬಿಟ್ಟು ಹೋದರು. ಆಗ ಅಮ್ಮಣ್ಣಿ ಕಣ್ಣಲ್ಲಿ ನೀರು ಹರಿಯುತ್ತಿರುವುದನ್ನು ನೋಡಿದೆ. ಮುಂದೆ ನಾನು ಬಿಬಿಎಂ ವಿಷಯ ಆಯ್ಕೆ ಮಾಡಿಕೊಂಡು ಮಹಾಜನ ಕಾಲೇಜಿನಲ್ಲಿ ಪದವಿ ಶಿಕ್ಷಣ ಮಾಡುತ್ತಿರುವಾಗ ಅಂತಿಮ ವರ್ಷದಲ್ಲಿ ಕ್ಯಾಂಪಸ್ ಇಂಟರ್‌ವ್ಯೂ ಇತ್ತು. ಅಂತಿಮ ವರ್ಷದಲ್ಲಿದ್ದ ವಿದ್ಯಾರ್ಥಿಗಳೆಲ್ಲ ಪಾಲ್ಗೊಂಡಿದ್ದರು. ಆ ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ನನಗೆ ಹಾಗೂ ನನ್ನ ಇಬ್ಬರು ಸ್ನೇಹಿತರಿಗೆ ಅಮೆರಿಕ ಕಂಪೆನಿಯಲ್ಲಿ ಕೆಲಸವೂ ಸಿಕ್ಕಿತು. ನಾನು ಅಮೆರಿಕಗೆ  ಹೋಗಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡೆ. ಆಗ ನನಗೆ ೨೦ ವಯಸ್ಸು; ಅಪ್ಪಾಜಿಗೆ ೬೦ ವರ್ಷ. ರಮ್ಯಾ ಅಕ್ಕನ ಗಂಡ ಸಪನ್ ಭಾವ ನನಗೆ ಬುದ್ಧಿ ಹೇಳಿದರು- “ಈ ಇಳಿವಯಸ್ಸಿನಲ್ಲಿ ಅಪ್ಪಾಜಿಯನ್ನು ಬಿಟ್ಟು ಹೊರಡುತ್ತಿದ್ದೀಯಲ್ಲಾ… ಅವರಿಗೆ ಆಸರೆ ಆಗಬೇಕಾದ ಸಮಯದಲ್ಲಿ ಮಗನಾಗಿ ನೀನು ಹೀಗೆ ಮಾಡುವುದು ಸರಿಯೇ? ದೊಡ್ಡಕ್ಕ ಬಾಂಬೆಗೆ ಮದುವೆಯಾಗಿ ಹೋಗಿದ್ದಾರೆ; ಚಿಕ್ಕಕ್ಕ ದಾವಣೆಗೆರೆಗೆ. ಅಪ್ಪಾಜಿ-ಅಮ್ಮಣ್ಣಿ ಜೊತೆ ಮೈಸೂರಿನಲ್ಲಿ ಇರುವುದು ನೀನೊಬ್ಬನೇ. ನೀನು ಕೂಡ ಅಮೆರಿಕಗೆ ಹೋಗಿಬಿಟ್ಟರೆ?!”. ಸಾಕಷ್ಟು ಯೋಚಿಸಿದ ಬಳಿಕ, ಭಾವ ಹೇಳುತ್ತಿರುವುದು ಸರಿಯಿದೆ ಎಂದು ನನಗೂ ಎನಿಸಿ, ಅಮೆರಿಕಗೆ ಹೋಗುವ ಆಸೆಗೆ ಗುಡ್‌ಬೈ ಹೇಳಿ, ಮೈಸೂರಿನಲ್ಲೇ ಉಳಿದೆ. ಒಂದೊಂದೇ ಹೆಜ್ಜೆ ಪತ್ರಿಕೆಯೊಳಗೆ ಕಾಲಿಟ್ಟೆ. ಕೆಲಸ ಶುರು ಮಾಡಿದ ಹಲವು ತಿಂಗಳುಗಳ ಬಳಿಕ ಒಂದು ಬೆಳಿಗ್ಗೆ ಕಚೇರಿಗೆ ಹೋಗಲು ಶೂ ಹಾಕಿ ಕೊಳ್ಳುತ್ತಿದ್ದೆ; ಪಕ್ಕ ಬಂದು ಕುಳಿತ ಅಪ್ಪಾಜಿ ಐನೂರರ ಒಂದು ನೋಟು ಕೈಗಿಟ್ಟರು. ಹಾಗೂ ಅದು ನನ್ನ ವಾರದ ಸಂಬಳ ಎಂದರು. ಅದೇ ನಾನು ಮೊದಲು ದುಡಿದ ಸಂಬಳ; ನಾನು ದುಡಿದು ಗಳಿಸಿದ ಹಣ ನನ್ನ ಕೈ ಸೇರಿದಾಗ ಸಿಕ್ಕಾಪಟ್ಟೆ ಖುಷಿಯಾಗಿತ್ತು.

ನಾನು ಪತ್ರಿಕೆಯಲ್ಲಿ ಮೊದಲು ಕೆಲಸ ಮಾಡಿದ್ದು ಪ್ರೂಫ್ ರೀಡರ್ ಆಗಿ. ಸುದ್ದಿಯನ್ನು ಬರೆಯುವ ಬಗೆಯನ್ನು ಅರ್ಥ ಮಾಡಿಕೊಳ್ಳಲು ಇದು ಸಹಾಯವಾಯಿತು. ಇದಾದ ಬಳಿಕ ಒಂದೊಂದೇ ವಿಭಾಗಗಳಲ್ಲಿ ಕೆಲಸ ಮಾಡಿಸುತ್ತಾ, ಪತ್ರಿಕೆಯ ಎಲ್ಲಾ ವಿಭಾಗಗಳನ್ನು ಅಪ್ಪಾಜಿ ನನಗೆ ಪರಿಚಯ ಮಾಡಿಸಿಕೊಟ್ಟರು.ಪ್ರೂಫ್ ರೀಡಿಂಗ್ ಬಳಿಕ ಸಂಕ್ಷಿಪ್ತ ಸುದ್ದಿಗಳನ್ನು ಮಾಡುವುದು, ‘ನಗರದಲ್ಲಿಂದು’ವಿನ ಮಾದರಿ, ಮೇಲ್ ಚೆಕ್ ಮಾಡುವುದನ್ನು ಕಲಿತೆ. ಇದಾದ ಮೇಲೆ ಒಳಗಿನ ಪುಟಗಳನ್ನು ಎಡಿಟ್ ಮಾಡಿ, ನಿರ್ವಹಣೆ ಮಾಡುವ ಉಪಸಂಪಾದಕನ ಜವಾಬ್ದಾರಿ ನನ್ನ ಹೆಗಲಿಗೆ ಬಿತ್ತು.

ಇದಾದ ಕೆಲವು ವರ್ಷಗಳ ಬಳಿಕ ಮುಖಪುಟವನ್ನು ಕೂಡ ನಿರ್ವಹಿಸುವ ಅವಕಾಶ ನನಗೆ ಸಿಕ್ಕಿತು. ಮುಖಪುಟದ ‘ಡಮ್ಮಿ’ ಅನ್ನು ಸಿದ್ಧಪಡಿಸಿ, ಅಪ್ಪಾಜಿಗೆ ಫೋನಿನ ಮುಖಾಂತರ ವಿವರಿಸುತ್ತಿದ್ದೆ; ಅಪ್ಪಾಜಿ ಹೇಳುವ ಬದಲಾವಣೆಗಳನ್ನು ಅಳವಡಿಸಿಕೊಂಡು, ಮುಖಪುಟ ಸಿದ್ಧಪಡಿಸುತ್ತಿದ್ದೆ. ಮುಖಪುಟ ಸಿದ್ಧವಾದ ಬಳಿಕ, ಅದರ ಪ್ರಿಂಟ್ ತೆಗೆದು ಮನೆಯಲ್ಲಿರುತ್ತಿದ್ದ ಅಪ್ಪಾಜಿಗೆ ಕಳಿಸುತ್ತಿದ್ದೆ. ಅವರು ಮುಖಪುಟವನ್ನು (ಜೊತೆಗೆ ಎಲ್ಲಾ ಪುಟಗಳನ್ನು) ಕೂಲಂಕಷವಾಗಿ ಗಮನಿಸುತ್ತಿದ್ದರು; ಅಗತ್ಯ ಬದಲಾವಣೆಗಳಿದ್ದಲ್ಲಿ ಮತ್ತೆ ಮಾಡಿಸುತ್ತಿದ್ದರು.

ಹೀಗೆ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡುತ್ತಾ, ಅದನ್ನು ಅರ್ಥ ಮಾಡಿಕೊಳ್ಳುವಷ್ಟರಲ್ಲಿ ೬ ವರ್ಷಗಳೇ ಕಳೆದುಹೋಗಿದ್ದವು. ಇದಾದ ಬಳಿಕ ಅಕೌಂಟ್ಸ್ ವಿಭಾಗ, ಜಾಹೀರಾತು ವಿಭಾಗ, ಪ್ರಸಾರ ವಿಭಾಗ ಹಾಗೂ ಇತರೆ ವಿಭಾಗಗಳಲ್ಲಿ ಕೆಲಸ ಮಾಡತೊಡಗಿದೆ. ದಿನನಿತ್ಯದ ಲೆಕ್ಕಗಳನ್ನು ಗಮನಿಸುವುದು, ನಮಗೆ ಮಿಸ್ ಆದ ಜಾಹೀರಾತುಗಳು ಯಾವ್ಯಾವು? ಏಕೆ ಮಿಸ್ ಆಯಿತು? ಜಾಹೀರಾತು ಕೊಟ್ಟವರು ಹಣ ಪಾವತಿಸಿದ್ದಾರೆಯೇ? ಸಮಯಕ್ಕೆ ಸರಿಯಾಗಿ ಎಲ್ಲೆಡೆ ಪತ್ರಿಕೆ ತಲುಪುತ್ತಿದೆಯೇ? ಏಜೆಂಟರುಗಳಲ್ಲಿ ಯಾರಿಗಾದರೂ ಸಮಸ್ಯೆ ಆಗುತ್ತಿದೆಯೇ? ಪ್ರಸಾರ ಹೆಚ್ಚಿಸಲು ಕ್ರಮಗಳೇನು?… ಹೀಗೆ ಎಲ್ಲಾ ವಿಭಾಗಗಳಲ್ಲಿ ಕೆಲಸ ಕಲಿಯತೊಡಗಿದೆ. ಜೊತೆಗೆ ಎಲ್ಲಾ ವಿಭಾಗದವರ ಕೆಲಸದ ನಿತ್ಯ ರಿಪೋರ್ಟ್ ತೆಗೆದುಕೊಳ್ಳುವುದನ್ನೂ ಕಲಿತೆ.

ಮರೆಯಲಾರದ ಕೆಲವು ಘಟನೆಗಳು: 

* ಕೆಲಸ ಶುರು ಮಾಡಿದ ಆರಂಭದ ದಿನಗಳಲ್ಲೇ ಹಿರಿಯ ಡಿಸೈನರ್ ಆದ ಕುಮಾರ್ ಅವರ ಜೊತೆ ನಾನು ಎಲ್ಲರ ಮುಂದೆ ಅಗೌರವವಾಗಿ ವರ್ತಿಸಿದೆ. ಆಗ, ಕುಮಾರ್ ಅವರು ನನ್ನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ, “ನನ್ನ ಜೊತೆ ಹೀಗೆ ವರ್ತಿಸಬೇಡಿ” ಎಂದು ತಿಳಿ ಹೇಳುತ್ತಾರೆ. ಆದರೆ, ಅವರ ಆ ಮಾತನ್ನು ನಾನು ಲೆಕ್ಕಿಸಲಿಲ್ಲ. ಕುಮಾರ್ ಅವರು ನಡೆದ ಘಟನೆಯನ್ನು ಅಪ್ಪಾಜಿ ಗಮನಕ್ಕೆ ತರುತ್ತಾರೆ. ಆಗ, “ಕುಮಾರ್ ಅವರಲ್ಲಿ ಕ್ಷಮೆ ಕೇಳು” ಎಂದು ಅಪ್ಪಾಜಿ ತುಂಬಾ ಕಟುವಾಗಿ ಹೇಳುತ್ತಾರೆ. ನನಗೆ ತುಂಬಾ ಕಷ್ಟವಾಗುತ್ತದೆ; ಆದರೂ, ಎಲ್ಲರ ಎದುರೇ ಕುಮಾರ್ ಅವರಲ್ಲಿ ನಾನಾಗ ಕ್ಷಮೆ ಕೇಳುತ್ತೇನೆ. ಈ ಘಟನೆಯಿಂದ ತಪ್ಪು ಮಾಡಿದಾಗ ಯಾವುದೇ ಮುಲಾಜಿಲ್ಲದೆ, ಅದನ್ನು ಒಪ್ಪಿಕೊಂಡು, ಕ್ಷಮೆ ಕೇಳುವ ಮನಸ್ಥಿತಿ ನನ್ನಲ್ಲಿ ಬೆಳೆಯಿತು. ಈ ಮನಸ್ಥಿತಿ ಇಡೀ ಕಚೇರಿಯಲ್ಲೂ ಇದೆ.

* ‘ಆಂದೋಲನ’ದ ಸಿದ್ಧಾಂತ, ನಿಲುವುಗಳನ್ನು ಮೆಚ್ಚಿ ಸಾಕಷ್ಟು ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದರು,ಮಾಡುತ್ತಿದ್ದಾರೆ. ಆದರೆ, ಕೆಲವು ಮಂದಿ ಕುಚೇಷ್ಟೆ ಮಾಡುವವರು ಕೂಡ ಈ ಹಿಂದೆ ಇಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ಕೆಲಸದ ಆರಂಭದ ದಿನಗಳಲ್ಲಿ ಇವರುಗಳನ್ನು ನಿಯಂತ್ರಿಸಲು ನನಗೆ ಆಗುತ್ತಿರಲಿಲ್ಲ; ಅಷ್ಟೇ ಅಲ್ಲ, ಸಂಪಾದಕರ ಮಗನಾದ ನನ್ನ ಮೇಲೆ ಕೂಡ ‘ಸವಾರಿ’ ಮಾಡುತ್ತಿದ್ದಾರೆ ಎಂದು ಆಗ ನನಗೆ ಅಸಾಧ್ಯ ಕೋಪ ಬಂದಿತ್ತು. ಮನೆಯಲ್ಲಿ ಅಪ್ಪಾಜಿ ಕುಳಿತಿದ್ದಾಗ, ಈ ವಿಚಾರವನ್ನು ಅಳುತ್ತಲೇ ನಾನವರ ಗಮನಕ್ಕೆ ತಂದೆ. ನನ್ನನ್ನು ಸಮಾಧಾನಪಡಿಸಿದ ಅಪ್ಪಾಜಿ, “ಕೆಲಸವನ್ನು ಕಲಿ. ಯಾರ್ಯಾರು ನಿನ್ನ ಮೇಲೆ ಈಗ ‘ಸವಾರಿ’ ಮಾಡುತ್ತಿದ್ದಾರೋ, ಅವರೇ ನಿನ್ನ ಬಳಿ ಬಂದು ಕೆಲಸ ಕಲಿಯುವಷ್ಟು ಕೆಲಸ ಕಲಿ. ಅದಕ್ಕೆ ಇದೇ ಮದ್ದು” ಎಂದು ಹೇಳುತ್ತಾರೆ. ಅಂದಿನಿಂದ ಚಿಂತಿಸದೆ, ತಲೆಬಗ್ಗಿಸಿ ನಾನು ಕೆಲಸ ಕಲಿಯತೊಡಗಿದೆ.

*ನಾನು ಕೆಲಸ ಶುರು ಮಾಡಿ ಒಂದೆರಡು ವರ್ಷಗಳು ಮಾತ್ರ ಆಗಿರುತ್ತದೆ. ಈ ಸಂದರ್ಭದಲ್ಲಿ ನನ್ನೆದುರೇ ಆಗಿನ ಆಡಳಿತಾಧಿಕಾರಿಯಾಗಿದ್ದ ಸೂರ್ಯ ವಂಶಿ ಸರ್ ಹಾಗೂ ಅಪ್ಪಾಜಿ ನಡುವೆ ಒಂದು ಚರ್ಚೆ ಆಗುತ್ತದೆ. (‘ವಿಜಯ ಕರ್ನಾಟಕ’ ಪತ್ರಿಕೆ ಆರಂಭವಾದ ಬಳಿಕ ಆರ್ಥಿಕ ಸಂಕಷ್ಟಕ್ಕೆ ‘ಆಂದೋಲನ’ ಸಿಲುಕಿದ್ದ ಹಿನ್ನೆಲೆಯಲ್ಲಿ ನಡೆಯುವ ಚರ್ಚೆಯಿದು.) ಸೂರ್ಯವಂಶಿ ಸರ್ ಅವರು, “ರವಿ ಅವರನ್ನು ಸಂಪಾದಕೀಯ ವಿಭಾಗದ ಬದಲು ನನ್ನ ಜೊತೆ ಕೂರಿಸಿ. ಕಲೆಕ್ಷನ್, ಜಾಹೀರಾತು ಹಾಗೂ ಅಕೌಂಟ್ಸ್ ಅನ್ನು ನಾನು ಅವರಿಗೆ ಹೇಳಿಕೊಡುತ್ತೇನೆ. ಈ ವಿಭಾಗಗಳಿಗೆ ರವಿ ಅವರ ಅಗತ್ಯವಿದೆ. ಹೀಗಾದರೆ ಆರ್ಥಿಕ ಸಮಸ್ಯೆಯಿಂದ ಪತ್ರಿಕೆಯನ್ನು ಹೊರತರಲು ಸಾಧ್ಯವಾಗುತ್ತದೆ” ಎಂದು ಹೇಳುತ್ತಾರೆ. ಇದಕ್ಕೆ ಅಪ್ಪಾಜಿ, “ವ್ಯವಹಾರ ಜ್ಞಾನವನ್ನು ಮೊದಲು ಕಲಿಸಿದರೆ, ಸಂಪಾದಕೀಯ ವಿಭಾಗದ ಬಗ್ಗೆ ರವಿಗೆ ಮುಂದಿನ ದಿನಗಳಲ್ಲಿ ಆಸಕ್ತಿಯೇ ಬರುವುದಿಲ್ಲ. ಪತ್ರಿಕೆಯ ಮಹತ್ವವೇನು ಎನ್ನುವುದೂ ಅವನಿಗೆ ತಿಳಿಯುವುದಿಲ್ಲ. ತಾನು ಪತ್ರಿಕೆಗಾಗಿ ಕೆಲಸ ಮಾಡುತ್ತಿದ್ದೇನೆ ಎಂಬ ಭಾವನೆ ಅವನೊಳಗೆ ಆಳವಾಗಿ ಬೇರೂರಬೇಕು. ಸಂಪಾದಕೀಯ ವಿಭಾಗ ಕಲಿತ ಬಳಿಕವಷ್ಟೇ, ಬೇರೆ ವಿಭಾಗಗಳಲ್ಲಿ ಕೆಲಸ ಮಾಡಲಿ” ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಈ ಘಟನೆಯಿಂದ ‘ಆಂದೋಲನ’ದಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕು ಎಂಬ ವಿಚಾರ ನನಗೆ ಮನವರಿಕೆ ಆಯಿತು.

* ೨೦೧೩ರಲ್ಲಿ ಅಪ್ಪಾಜಿಗೆ ಹೃದಯಾಘಾತವಾಗಿ ಅವರು ಸುಮಾರು ಮೂರು ವಾರಗಳ ಕಾಲ ಆಸ್ಪತ್ರೆಯಲ್ಲೇ ಇದ್ದರು. ಅಪ್ಪಾಜಿ ಗುಣಮುಖರಾಗಿ ಮನೆಗೆ ಹಿಂದಿರುಗಿದ ಮೇಲೆ, ನಿತ್ಯ ಬೆಳಿಗ್ಗೆ ನನಗೆ ‘ಪಾಠ’ ಹೇಳಲು ಶುರು ಮಾಡಿದರು. ನಾನು ಪತ್ರಿಕೆಯ ಎಲ್ಲಾ ಕೆಲಸ ಮುಗಿಸಿ, ಮಲಗುತ್ತಿದ್ದದ್ದು ರಾತ್ರಿ ೨ಕ್ಕೆ. ಅಪ್ಪಾಜಿ ಕೂಡ ಸುಮಾರು ಇದೇ ಸಮಯಕ್ಕೆ ನಿದ್ರೆ ಮಾಡುತ್ತಿದ್ದ ರಾದರೂ ಬೆಳಿಗ್ಗೆಯೇ ಎದ್ದು ಎಲ್ಲಾ ಪತ್ರಿಕೆಗಳನ್ನು ಓದಿ, ನನಗಾಗಿ ಕಾಯುತ್ತಿ ದ್ದರು. ನಾನು ಬೆಳಿಗ್ಗೆ ಎದ್ದು ಬರುತ್ತಿದ್ದಂತಯೇ ಪತ್ರಿಕೆಯಲ್ಲಾಗಿರುವ ತಪ್ಪು ಗಳನ್ನು ತಿಳಿಸುತ್ತಿದ್ದರು; ಇನ್ನೂ ಚೆನ್ನಾಗಿ ಕವರ್ ಮಾಡಬೇಕಾಗಿದ್ದ ವಿಚಾರಗಳನ್ನು ನನ್ನ ಗಮನಕ್ಕೆ ತರುತ್ತಿದ್ದರು; ಅವರ ಒಂದೊಂದು ‘ಪಾಠ’ವೂ ನನಗೆ ಛಡಿಯೇಟಿನಂತೆ ಭಾಸವಾಗುತ್ತಿತ್ತು. ಎಷ್ಟೋ ದಿನಗಳು ಅಪ್ಪಾಜಿಯ ಈ ‘ಪಾಠ’ ತಪ್ಪಿಸಿಕೊಳ್ಳುವ ಸಲುವಾಗಿ, ಅವರು ಶೌಚಾಲಯಕ್ಕೆ ಹೋಗುವುದನ್ನೇ ಕಾದು, ಕಚೇರಿಗೆ ಓಡಿಹೋಗುತ್ತಿದ್ದೆ! ಆದರೀಗ, ಅಪ್ಪಾಜಿಯ ಆ ‘ಪಾಠ’ಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹೃದಯಾಘಾತದಿಂದ ಚೇತರಿಸಿಕೊಳ್ಳಬೇಕಾದ ಸಂದರ್ಭದಲ್ಲೂ ಅಪ್ಪಾಜಿ ತರಾತುರಿಯಲ್ಲಿ ಮಾಡುತ್ತಿದ್ದ ಆ ವಾತ್ಯಲ್ಯದ ‘ಛಡಿಯೇಟು’ ಪಾಠಗಳು ನೆನಪಾಗುತ್ತಿವೆ. ನನ್ನ ಕಣ್ಣುಗಳಲ್ಲಿ ನೀರಾಡುತ್ತಿದೆ.

” ಬೆಟ್ಟದಷ್ಟು ಕನಸುಗಳನ್ನು ತಲೆಯೊಳಗೆ ಹೊತ್ತುಕೊಂಡು, ಹೆಗಲಲ್ಲಿ ಒಂದು ಬ್ಯಾಗನ್ನಷ್ಟೇ ನೇತುಹಾಕಿಕೊಂಡು ಅಪ್ಪಾಜಿ ಮೈಸೂರಿಗೆ ೧೯೭೪ರಲ್ಲಿ ಬಂದಿಳಿದರು. ಬರಿಗೈಯಲ್ಲೇ ಬಂದರೂ ಮೈಸೂರಿನ ಹೃದಯವಂತ ಜನರ ಅಪಾರ ಪ್ರೀತಿಯನ್ನು ಗಳಿಸಿದರು; ನಿಮ್ಮೆಲ್ಲರ ಅಚ್ಚುಮೆಚ್ಚಿನ ‘ಆಂದೋಲನ’ವನ್ನು ಕಟ್ಟಿ, ಬೆಳೆಸಿದರು. ಈಗ ೫೩ರ ಹರೆಯದ ‘ಆಂದೋಲನ’ ಮತ್ತೊಂದು ಮೈಲುಗಲ್ಲನ್ನು ಮುಟ್ಟಿದೆ. ನಿಮ್ಮೆಲ್ಲರ, ಅಂದರೆ ಅಪಾರ ಓದುಗ ಬಳಗದ ಬೆಂಬಲವನ್ನು ಗುರುತಿಸಿ, ರಾಜ್ಯ ಸರ್ಕಾರವು ‘ಆಂದೋಲನ’ವನ್ನು ರಾಜ್ಯಮಟ್ಟದ ಪತ್ರಿಕೆಯಾಗಿ ಘೋಷಿಸಿದೆ; ಅದಕ್ಕಾಗಿ ‘ಆಂದೋಲನ’ದ ಪರವಾಗಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ. ರಾಜ್ಯಮಟ್ಟದ ಪತ್ರಿಕೆಯಾಗಿ ವಿಸ್ತರಿಸಿಕೊಂಡ ಈಹೊತ್ತಿನಲ್ಲಿ ಸಂಸ್ಥೆಯ ಒಳಗೂ-ಹೊರಗೂ ಬಹಳಷ್ಟು ಸವಾಲುಗಳು ಎದುರಾಗಿವೆ. ಇವೆಲ್ಲವುಗಳನ್ನೂ ನಿಭಾಯಿಸಿಕೊಂಡು ಪತ್ರಿಕೆಯನ್ನು ಮುನ್ನಡೆಸಬಹುದೇ ಎನ್ನುವ ಆತಂಕದ ಹೊತ್ತಲ್ಲಿ ಅಪ್ಪಾಜಿಯ ಮುಖ ನನ್ನ ಕಣ್ಣ ಮುಂದೆ ಬಂತು; ನನ್ನನ್ನು ಪತ್ರಿಕಾ ರಂಗಕ್ಕೆ ಪಳಗಿಸಲು ನೆರವಾದ ಅವರ ವಾತ್ಯಲ್ಯದ ಛಡಿಯೇಟುಗಳು ನೆನಪಾದವು. ಅಪ್ಪಾಜಿ ‘ನೀನು ನಿಭಾಯಿಸಬಲ್ಲೆ’ ಎಂದು ಹೇಳುತ್ತಿರುವಂತೆ ಭಾಸವಾಯಿತು. ಆ ವಾತ್ಸಲ್ಯದ ಛಡಿಯೇಟುಗಳಲ್ಲಿ ಒಂದಿಷ್ಟನ್ನು ನಿಮ್ಮ ಮುಂದಿಡುತ್ತಿರುವೆ.”

 

 

 

ಆಂದೋಲನ ಡೆಸ್ಕ್

Recent Posts

ಸಾವಿರಾರು ಸೈನಿಕರ ಜೀವನ್ಮರಣದ ಪ್ರಶ್ನೆಯಾಗಿತ್ತು

ಕೈಲಾಶ್ ಶ್ರೇಣಿಯ ರೇಚಿನ್ ಲಾ ಪಾಸ್‌ನತ್ತ ಮುನ್ನುಗ್ಗುತ್ತಿರುವ ಚೀನಾದ ಟ್ಯಾಂಕ್‌ಗಳನ್ನು ತಡೆಯಲು ಒಂದೇ ಒಂದು ಗುಂಡು ಹಾರಿಸಿದರೂ ಆ ದೇಶದೊಂದಿಗೆ…

42 mins ago

ಸಹಸ್ರಾರು ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ಅಮಾನ್ಯ

ಬೋಗಸ್ ಕಾರ್ಡ್ ಹೆಸರಿನಲ್ಲಿ ಕ್ರಮ; ನೈಜ ಕಾರ್ಮಿಕರಿಗೆ ಸಮಸ್ಯೆ ಕೃಷ್ಣ ಸಿದ್ದಾಪುರ ಸಿದ್ದಾಪುರ: ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ…

54 mins ago

ದೇವರಗುಡ್ಡನಾಗಬೇಕಿದ್ದ ದುಂಡು ಮಾದೇವಸ್ವಾಮಿ ಚಿತ್ರಗಾರನಾದ ವೃತ್ತಾಂತ

ಸ್ವಾಮಿ ಪೊನ್ನಾಚಿ ದಿನಬೆಳಗಾದರೆ ಮಾದಪ್ಪ, ಮಂಟೇಸ್ವಾಮಿಯ ಹಾಡು ಹಾಡಿಕೊಂಡು ಬರುವ ಜನಪದರ ದಂಡು. ಸುತ್ತಮುತ್ತ ದೇವರಗುಡ್ಡ ನೀಲಗಾರರ ಹಿಂಡು. ಊರೂರಿ…

59 mins ago

ಹೀಗಾದರೂ ಆದರೆ ಭ್ರಮೆಗಳು ಕರಗಿ ಆಧ್ಯಾತ್ಮಿಕ ವಿನಯದ ಪರಿಚಯವಾಗಬಹುದೇನೋ…

ಸುಕನ್ಯಾ ಕನಾರಳ್ಳಿ ಒಂದು ಮಠ. ಅಲ್ಲಿ ಮರಿಸ್ವಾಮಿಯಾಗಿದ್ದವರು ಪೀಠಾಧಿಪತಿ ತೀರಿಕೊಂಡ ಮೇಲೆ ಏನೇನೋ ಕಾರಣಗಳ ದೆಸೆಯಿಂದ ಪೀಠವನ್ನು ಏರಲು ಆಗದೆ…

1 hour ago

ಅಳಿಯುತ್ತಿರುವ ಸೋಬಾನೆ ಹಾಡುಗಳ ಕಲಿಸುತ್ತಿರುವ ಕಲೆಗಾರ

ಡಾ.ಮೈಸೂರು ಉಮೇಶ್ ಸೋಬಾನೆ ಪದಗಳು ಗ್ರಾಮೀಣ ಮಹಿಳೆಯರಿಗೆ ಒಲಿದು ಬಂದಿರುವ ಜನಪದ ಗಾಯನ ಪ್ರಕಾರ. ಇದಕ್ಕೆ ಅಪವಾದವೆಂಬಂತೆ ಮಂಡ್ಯ ಜಿಲ್ಲೆಯ…

1 hour ago

ಸರ್ಕಾರವನ್ನು ಉರುಳಿಸಲು…” ಪತ್ರವೊಂದರಲ್ಲಿ ಸಜೀವವಾಗಿರುವ ಒಂದು ಪೀಳಿಗೆಯ ಕಥೆ

ಚಿತ್ರ,ಲೇಖನ: ರಶ್ಮಿ ಕೋಟಿ “ನಿನ್ನೆ ಹುಬ್ಬಳ್ಳಿಯಲ್ಲಿ ಬಹಿರಂಗ ಸಭೆ ಇತ್ತು. ಎಲ್ಲ ಕಾಲೇಜುಗಳ ಬಂದ್ ಆಗಿತ್ತು. ಸುಮಾರು ೫,೦೦೦ ಜನರ…

1 hour ago