ಹಾಡು ಪಾಡು

ಮಂಗಳಮುಖಿಯರ ‘ಮನೆ ನ್ಯಾಯ!’

ಅಕ್ಷತಾ

ತೃತೀಯ ಲಿಂಗಿಗಳ ಮೇಲೆ ದೌರ್ಜನ್ಯ, ಕಿರುಕುಳ, ಅಪಹರಣ ದಂತಹ ಪ್ರಕರಣಗಳು ದಿನೇದಿನೇ ಕೇಳಿ ಬರುತ್ತಿವೆ. ಪ್ರತೀ ಸಲ ಇಂತಹ ಘಟನೆ ನಡೆದಾಗ ಬೆರಳು ತೋರುವುದು, ಕುಹಕ ವಾಡುವುದು ತೃತೀಯ ಲಿಂಗಿಗಳ ಕುರಿತೇ ಆಗಿದೆ. ಸಂದರ್ಭದ ಒಳಹೊಕ್ಕು ಪರಿಸ್ಥಿತಿ ವಿಶ್ಲೇಷಣೆ ಮಾಡುವ ಅಥವಾ ಅವರೂ ಮನುಷ್ಯರೇ ಎಂದು ಅರಿತುಕೊಳ್ಳುವ ಮನಸ್ಥಿತಿ ಸಮಾಜ ಎಷ್ಟೇ ಮುಂದುವರಿದರೂ ಇನ್ನೂ ನಮ್ಮ ನಡುವೆ ಇಲ್ಲ. ಇದಕ್ಕೆ ಕಾರಣಗಳು ಅನೇಕ ಎಂಬುದು ಹಲವರ ಅಭಿಪ್ರಾಯವಾದರೆ, ತೃತೀಯ ಲಿಂಗಿಗಳ ಸೋಗಿನಲ್ಲಿ ಅಕ್ರಮ ಚಟುವಟಿಕೆ ಮಾಡುವ ಘಟನೆಗಳು ನಡೆಯುತ್ತಿರುವುದರಿಂದ ಅವರ ಕುರಿತಾದ ‘ಸಾಫ್ಟ್ ಕಾರ್ನರ್’ ಕಡಿಮೆಯಾಗುತ್ತದೆ ಎನ್ನುವವರೂ ಇದ್ದಾರೆ. ಆದರೆ ಈ ತರಹದ ಯೋಚನೆಗಳು ಹೀಗೆಯೇ ಮುಂದುವರಿದರೆ ಎಲ್ಲಕ್ಕೂ ಮೀರಿದ ‘ಜೀವ ಪರತೆಯ ನ್ಯಾಯ’ ಸೊರಗುವುದಂತೂ ಹೌದು!

ಕಾನೂನು ತೃತೀಯ ಲಿಂಗಿಗಳ ಪರವಾಗಿಯೂ ಇದೆ ಎನ್ನುವುದು ನಿಜವಾದರೂ ದಾರಿ ಇನ್ನೂ ಸುಗಮವಾಗಿಲ್ಲ. ಆಕೆ ತನಗೆ ಸಿಗಬೇಕಾದ ನ್ಯಾಯಕ್ಕಾಗಿ ಹೋರಾಡುವುದಂತೂ ಇದ್ದೇ ಇದೆ. ‘ಹೇಳಿಕೊಳ್ಳುವುದಕ್ಕೆ ನಾವು ಮಂಗಳಮುಖಿಯರು, ಆದರೆ ಹೆಸರಿನೊಡನೆ ‘ಮಂಗಳ’ ಎಂಬುವುದು ಇದೆ ಎಂಬುದನ್ನು ಬಿಟ್ಟರೆ ಮತ್ತೆಲ್ಲ ಕಡೆಯೂ ನೋಡುವ ದೃಷ್ಟಿ, ಆಡುವ ಮಾತು ಅಮಂಗಳವೇ. ಈ ಬದುಕು ನಾವು ಇಷ್ಟಪಟ್ಟಿರುವುದು ಅಲ್ಲವಾದರೂ ಗಂಡಾಗಿ ಹುಟ್ಟಿ ಹೆಣ್ಣಾಗುವ ಪರಿವರ್ತನೆ ಚಿಟ್ಟೆ ಯಷ್ಟು ಚೆಂದದ್ದಲ್ಲ. ಚಿಟ್ಟೆಗಾದರೂ ಕಂಬಳಿಹುಳ ಎಂಬ ಮುಸುಕು ಕಳಚಿ ರೆಕ್ಕೆ ಮೂಡಿದರೆ ಹಾರುವ ಸುಖವಿದೆ. ಆದರೆ ನಮಗೆ! ಹೆಣ್ಣಾಗಬೇಕೆಂಬ ಕನಸು ಈಡೇರಿದರೂ ಜನರ ನೋಟ ಮಾತ್ರ ‘ಇನ್ನೂ ಕಂಬಳಿಹುಳ’ ಎಂಬಂತೆ. ‘ನಮ್ಮ ಬದುಕು ಬೆಳಕಿನ ಚುಂಬನಕ್ಕೆ ಸಿಕ್ಕ ದೀಪದ ಹಾತೆ ಯಂತೆ’ ಎನ್ನುತ್ತಾರೆ ಮಾತಿಗೆ ಸಿಕ್ಕ ಮಂಗಳಮುಖಿಯೊಬ್ಬರು.

ಮಂಗಳಮುಖಿಯರ ಮೇಲೆ ಇತರರಿಂದ ಆಗುವ ಅನ್ಯಾಯಗಳ ವಿರುದ್ಧವಾಗಿ ಹಲವು ಕಾನೂನುಗಳಿವೆ ಹೌದು. ಆದರೆ ಅವರ ಪಂಗಡದೊಳಗೆ ನಡೆಯುವ ನ್ಯಾಯ ತೀರ್ಮಾನ ಹೇಗಿರುತ್ತದೆ? ಎಂದು ಹುಡುಕಿ ಹೊರಟಾಗ ಸಿಕ್ಕ ಸಾಂಪ್ರದಾಯಿಕ ನ್ಯಾಯ ತೀರ್ಮಾನದ ಮಾಹಿತಿಯಲ್ಲಿ ಬಹಳ ಕುತೂಹಲಕರವಾಗಿರುವುದು ‘ಮನೆ’ಗಳ ಪರಿಕಲ್ಪನೆ. ಮಂಗಳ ಮುಖಿಯರು ನೆಲೆಸಿರುವ ಪ್ರತೀ ಭಾಗದಲ್ಲೂ ಏಳು ಮನೆಗಳಿದ್ದು ಆಯಾ ಮನೆಗೆ ಓರ್ವ ಹಿರಿಯ ಮಂಗಳಮುಖಿ ಮುಖಂಡರಾಗಿರುತ್ತಾರೆ. ಪ್ರತೀ ಮನೆಯಲ್ಲಿ ಎಷ್ಟು ಜನವಾದರೂ ಇರಬಹುದು ಅಷ್ಟೇ ಅಲ್ಲ, ಒಂದು ಮನೆ ತನಗೆ ಇಷ್ಟವಾಗದಿದ್ದರೆ ಆಕೆ ಇನ್ನೊಂದು ಮನೆಯೊಡತಿಯ ಅಪ್ಪಣೆ ಪಡೆದು ಅಲ್ಲಿರುವವ ರೊಡನೆ ವಾಸಿಸಬಹುದು. ಯಾವ ಮನೆಯಲ್ಲಿ ತಾನು ವಾಸಿಸಬೇಕು ಎಂಬುದನ್ನು ನಿರ್ಧರಿಸುವುದು ಪ್ರತಿಯೊಬ್ಬ ಮಂಗಳಮುಖಿಯ ಸ್ವತಂತ್ರ ಆಯ್ಕೆಯಾಗಿರುತ್ತದೆ.

ಮನೆಯ ಸದಸ್ಯರ ನಡುವೆ ಯಾವುದೇ ರೀತಿಯ ವೈಮನಸ್ಸು, ಜಗಳ ಅಥವಾ ಸಮಸ್ಯೆ ಎದುರಾದರೆ ಸದಸ್ಯರು ಮನೆಯ ಹಿರಿಯ ಮುಖಂಡರೆದುರು ವಿಷಯ ಪ್ರಸ್ತಾಪ ಮಾಡದೆಯೇ ಸ್ವತಃ ನಿರ್ಧಾರ ತೆಗೆದುಕೊಳ್ಳುವಂತಿಲ್ಲ. ಬೇರೆ ಬೇರೆ ಮನೆಗಳ ಸದಸ್ಯರ ಮಧ್ಯೆ ಜಗಳವಾದರೆ ಎರಡೂ ಮನೆಗಳ ಮುಖಂಡರು ಒಟ್ಟಾಗಿ ಸೇರಿ ತೆಗೆದುಕೊಳ್ಳುವ ನಿರ್ಧಾರ ಅಂತಿಮವಾಗಿರುತ್ತದೆ. ಅದನ್ನು ಯಾರೂ ಮೀರುವಂತಿಲ್ಲ ಮತ್ತು ಧಿಕ್ಕರಿಸುವಂತಿಲ್ಲ. ಸಮಾಜದಲ್ಲಿ ನ್ಯಾಯ ಮತ್ತು ಹಕ್ಕಿನ ರೀತಿ ನೀತಿ, ರಿವಾಜುಗಳು ಕಾಲಕ್ಕೆ ತಕ್ಕಂತೆ ಪರಿಷ್ಕೃತಗೊಂಡರೂ ಮಂಗಳಮುಖಿಯರ ಈ ಸಾಂಪ್ರದಾಯಿಕ ‘ಮನೆ ನ್ಯಾಯ’ ಈಗಲೂ ಚಾಲ್ತಿಯಲ್ಲಿದೆ. ಇದೇ ಕಾರಣಕ್ಕೆ ಒಬ್ಬ ಮಂಗಳಮುಖಿಗೆ ಅನ್ಯಾಯವಾಗಿದೆ ಯೆಂದು ತಿಳಿದರೆ ಪಂಗಡವೇ ಆಕೆಗೆ ಒತ್ತಾಸೆಯಾಗಿ ನಿಲ್ಲುತ್ತದೆ.

ಒಡಹುಟ್ಟಿದವರ ನಡುವೆಯೇ ನಾನಾ ಕಾರಣಕ್ಕಾಗಿ ದ್ವೇಷ ಹುಟ್ಟಿಕೊಂಡು ಒಬ್ಬರ ಮೇಲೊಬ್ಬರು ದೂರು ಕೊಟ್ಟು ಆರೋಪಗಳ ಸುರಿಮಳೆಗೈಯುವ ಈಗಿನ ಕಾಲದಲ್ಲಿ ಎಲ್ಲೋ ಹುಟ್ಟಿ ಒಂದೇ ಸೂರಿನಡಿ ಬದುಕುವ ಮಂಗಳಮುಖಿಯರೊಳಗೆ ಇಂತಹ ಆರೋಪ ಪ್ರತ್ಯಾರೋಪ, ಕೋರ್ಟು ಕೇಸ್ ಎಂಬ ಪ್ರಕರಣಗಳು ಕೇಳಿ ಬರುವುದು ಬೆರಳೆಣಿಕೆಯಷ್ಟು. ತಮ್ಮ ರಕ್ತಸಂಬಂಧಿಗಳಿಂದ ದೂರವಾಗಿ ಜಾತಿ, ಧರ್ಮಗಳಾಚೆ ‘ಮನೆ’ಯೆಂಬ ಸೂರಿನಡಿ ಬದುಕುವ ಮಂಗಳಮುಖಿಯರು ಕಲಿಸುವ ಬದುಕಿನ ಪಾಠ ‘ಜಾತಿ ಧರ್ಮಗಳಾಚೆಗಿನ ಮಾನವೀಯತೆಯ ನ್ಯಾಯ!’

” ನಮ್ಮಲ್ಲಿ ನಾನಾ ಜಾತಿ ಧರ್ಮಗಳಲ್ಲಿ ಹುಟ್ಟಿದವರಿರುತ್ತೇವೆ. ಆದರೂ ನಮ್ಮೊಳಗೆ ಎಂದಾದರೂ ಜಾತಿ ಧರ್ಮದ ವಿಚಾರದಲ್ಲಿ ಜಗಳ ನಡೆದ ಪ್ರಕರಣಗಳೇ ಇಲ್ಲ. ಪ್ರತಿಯೊಬ್ಬರೂ ಬೇರೆ ಬೇರೆ ದೇವರನ್ನು ನಂಬುವಂತೆ ಮಂಗಳಮುಖಿಯರಾದ ನಮ್ಮ ದೇವರು ಹುಂಜದ ಮೇಲೆ ಕುಳಿತಿರುವ ‘ಮುರ್ಗಿ ಮಾತಾ’. ಆಕೆಯ ಮುಂದೆ ನಮ್ಮ ಕಷ್ಟಗಳನ್ನೂ ಭಾವನೆಗಳನ್ನೂ ಹಂಚಿಕೊಳ್ಳುತ್ತೇವೆ. ನಾವು ಯಾವುದೇ ಸಮುದಾಯದಿಂದ ಬಂದಿದ್ದರೂ ನಮ್ಮೊಳಗಿನ ನ್ಯಾಯ ತೀರ್ಮಾನ ಮಾತ್ರ ಪಾರದರ್ಶಕ ಮತ್ತು ಜಾತಿ, ಧರ್ಮ ಮೀರಿದ್ದು!”

” ಮಂಗಳಮುಖಿಯರ ಮೇಲೆ ಇತರರಿಂದ ಆಗುವ ಅನ್ಯಾಯಗಳ ವಿರುದ್ಧವಾಗಿ ಹಲವು ಕಾನೂನುಗಳಿವೆ. ಆದರೆ ಅವರ ಪಂಗಡದೊಳಗೇ ನಡೆಯುವ ಆಂತರಿಕ ನ್ಯಾಯ ತೀರ್ಮಾನ ಹೇಗಿರುತ್ತದೆ?”

 

 

ಆಂದೋಲನ ಡೆಸ್ಕ್

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

7 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

7 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

13 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

13 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

13 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

13 hours ago