ಹಾಡು ಪಾಡು

ಇತಿಹಾಸದ ಕಥೆ ಹೇಳುವ ಗ್ಯಾರಿಸನ್ ಗೋರಿಗಳು

ಸಿರಿ ಮೈಸೂರು

ಕಣ್ಣಂಚಿನಲ್ಲಿ ಕಂಬನಿಯಾಡುವ ನೂರಾರು ಕಥೆಗಳನ್ನು ಇಲ್ಲಿನ ಒಂದೊಂದು ಗೋರಿಯೂ ಹೇಳುತ್ತದೆ. ಇದು ಪರದೇಶದಿಂದ ಬಂದು ಇಲ್ಲಿ ನೆಲೆಸಿದ್ದವರು ಶ್ರೀರಂಗಪಟ್ಟಣದ ಮಣ್ಣಲ್ಲಿ ಮಣ್ಣಾದ ಕಥೆಗಳು.

ತಾಯಿ ಇಸಾಬೆಲ್ಲಾ ಸ್ಕಾಟ್ ಹಾಗೂ ಮಗಳು ಇಲ್ಲಿ ನಿಶ್ಚಿಂತೆಯಿಂದ ಕಳೆದ ಇನ್ನೂರು ವರ್ಷಗಳಿಂದ ಇಲ್ಲಿ ಮಲಗಿದ್ದಾರೆ. ಅತ್ತ ತಂದೆ ಇವರಿಬ್ಬರ ಅಗಲಿಕೆಯನ್ನು ತಡೆಯಲಾರದೆ ಮತಿಭ್ರಮಣೆಗೊಂಡು ದೇಶ ಬಿಟ್ಟು ಹೋದರೆ ಇತ್ತ ತಾಯಿ-ಮಗಳಿಬ್ಬರೂ ಯಾವುದೇ ಪರಿವೆಯಿಲ್ಲದೆ ಗೋರಿಯಲ್ಲಿ ಮಲಗಿದ್ದಾರೆ. ತಾಯಿ ಇಸಾಬೆಲ್ಲಾ ಎರಡನೆಯ ಮಗುವಿಗೆ ಜನ್ಮ ನೀಡುವಾಗ ನೋವು ತಾಳಲಾರದೆ ಕೊನೆಯುಸಿರೆಳೆದರೆ, ಪುಟ್ಟ ಮಗಳನ್ನು ಸಾವು ಕೈಬೀಸಿ ಕರೆದದ್ದು ಕಾಲರಾ ಎಂಬ ಮಹಾಮಾರಿ.

ಕೇಳಿದರೆ ಕಣ್ಣಂಚಿನಲ್ಲಿ ಕಂಬನಿಯಾಡುವ ಇಂತಹ ನೂರಾರು ಶೋಕದ ಕಥೆಗಳನ್ನು ಇಲ್ಲಿನ ಒಂದೊಂದು ಗೋರಿಯೂ ಹೇಳುತ್ತದೆ. ಇದು ಪರದೇಶದಿಂದ ಇಲ್ಲಿ ಬಂದು ನೆಲೆಸಿದ್ದವರು ನಮ್ಮ ಮಣ್ಣಲ್ಲಿ ಮಣ್ಣಾದ ಕಥೆಗಳು. ಅಂದಹಾಗೆ ಈ ಸ್ಮಶಾನ ಮೀಸಲಿರುವುದೇ ಇಂತಹ ಗೋರಿಗಳಿಗೆ. ಇದು ಶ್ರೀರಂಗಪಟ್ಟಣದಲ್ಲಿರುವ ಗ್ಯಾರಿಸನ್ ಸ್ಮಶಾನ. ನಾಲ್ಕನೆಯ ಆಂಗ್ಲೋ -ಮೈಸೂರು ಯುದ್ಧದ ಸಂದರ್ಭದಲ್ಲಿ ಟಿಪ್ಪು ಸುಲ್ತಾನನ ಕೇಂದ್ರಸ್ಥಾನವಾಗಿದ್ದ ಈ ಸ್ಥಳದಲ್ಲಿ ನೆಲೆಸಿದ್ದವರೆಲ್ಲರೂ ವಿದೇಶಿಗರು. ಮುಖ್ಯವಾಗಿ ಫ್ರೆಂಚ್‌ನವರು. ಇವರ ಅಂತಿಮ ದಿನಗಳ ಕಥೆಗಳನ್ನು ಹೇಳುವ ಸುಮಾರು ಮುನ್ನೂರು ಗೋರಿಗಳನ್ನು ನಾವು ಇಲ್ಲಿ ಕಾಣಬಹುದು. ೧೮೦೦ರಿಂದ ೧೮೬೭ರವರೆಗೂ ಕೊನೆಯುಸಿರೆಳೆದವರನ್ನು ಇಲ್ಲಿ ಮಣ್ಣು ಮಾಡಲಾಗಿದೆ. ಮೈಸೂರು -ಬೆಂಗಳೂರು ಹೆದ್ದಾರಿಯಲ್ಲಿ ಚಲಿಸಿ ಶ್ರೀರಂಗಪಟ್ಟಣ ತಲುಪುತ್ತಿದ್ದಂತೆ ಬಲಗಡೆ ಕಾಣಸಿಗುವ ಪರಿವರ್ತನಾ ಎಂಬ ಶಾಲೆಯ ಹಿಂದೆ ಅಡಗಿ ಕುಳಿತಿದೆ ಈ ಇತಿಹಾಸ ಪ್ರಸಿದ್ಧ ಸ್ಮಶಾನ.

ಮತ್ತೆ ಕೆರೊಲಿನಾ ಇಸಾಬೆಲ್ಲಾ ಸ್ಕಾಟ್ ಅವರ ಕಥೆಗೆ ಮರಳುವುದಾದರೆ, ಈಕೆ ಲೆಫ್ಟಿನೆಂಟ್ ಕರ್ನಲ್ ಎಲ್.ಜಿ.ಸ್ಕಾಟ್‌ನ ಪತ್ನಿ. ಸ್ಕಾಟ್ ೧೭೯೯ರಲ್ಲಿ ನಡೆದ ನಾಲ್ಕನೆಯ ಆಂಗ್ಲೋ- ಮೈಸೂರು ಯುದ್ಧದಲ್ಲಿ ಭಾಗವಹಿಸಿದ್ದ. ಆನಂತರ ಇಲ್ಲಿನ ಕೋಟೆಯಲ್ಲಿ ಗನ್ ಕ್ಯಾರಿಯೇಜ್‌ಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದ. ಈತ ತನ್ನ ಕಾರ್ಯವೈಖರಿ, ಚಾಕಚಕ್ಯತೆ ಹಾಗೂ ಕರಾರುವಾಕ್ಕಾದ ಕೆಲಸಕ್ಕೆ ಹೆಸರಾಗಿದ್ದ. ಮಡ್ರಾಸ್ ಆರ್ಮಿಯ ಭಾಗವಾದ ಈತನನ್ನು ಹೊಗಳದ ಹಿರಿಯ ಅಽಕಾರಿಗಳಿಲ್ಲ. ಇಷ್ಟು ಒಳ್ಳೆಯ ಹೆಸರು ಪಡೆದಿದ್ದ ಸ್ಕಾಟ್ ವಾಸವಾಗಿದ್ದುದು, ಇಲ್ಲೇ ಕಾವೇರಿ ನದಿಯ ತೀರದಲ್ಲಿ ಇಂದಿಗೂ ನಗುತ್ತಾ ನಿಂತಿರುವ ಶತಮಾನಗಳ ಹಳೆಯ ಸ್ಕಾಟ್ ಬಂಗ್ಲೋದಲ್ಲಿ. ಕಾಲರಾ ತಗುಲಿದ್ದ ಕಾರಣ ೧೮೧೭ರ ಮಾರ್ಚ್ ೧೯ರಂದು ಸ್ಕಾಟ್‌ನ ಪತ್ನಿ ಇಸಾಬೆಲ್ಲಾ ಹಾಗೂ ಮಕ್ಕಳು ಅಸುನೀಗುತ್ತಾರೆ. ಕೆಲಸದ ನಿಮಿತ್ತ ಒಂದು ದಿನ ಹೊರಗೆ ಹೋಗಿದ್ದ ಸ್ಕಾಟ್ ಮರಳಿ ಬಂದು ನೋಡುವಾಗಾಗಲೇ ಪತ್ನಿ ಮಕ್ಕಳಿಬ್ಬರೂ ಅಸುನೀಗಿರುತ್ತಾರೆ. ಈಕೆಯ ಸಾವಿಗೆ ಕಾರಣ ಪ್ರಸವ ಬೇನೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಕಾಲರಾ ಎನ್ನುತ್ತಾರೆ.

ಈ ಆಘಾತ ತಡೆಯಲಾರದೆ ಮತಿಭ್ರಮಣೆಗೊಂಡ ಸ್ಕಾಟ್ ತನ್ನ ಕುದುರೆ ಹತ್ತಿ ಅಲ್ಲೇ ಇದ್ದ ಕಾವೇರಿಯಲ್ಲಿ ಮುಳುಗಿಹೋದ ಎನ್ನುತ್ತಾರೆ ಕೆಲವರು. ಮತ್ತೊಂದು ಇತಿಹಾಸದ ಪ್ರಕಾರ ಸ್ಕಾಟ್ ತನ್ನ ಕುಟುಂಬದ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮಡ್ರಾಸಿಗೆ ಮರಳಿ ಅಲ್ಲಿಂದ ಲಂಡನ್‌ಗೆ ತೆರಳಿ ಅಲ್ಲೇ ಅಸುನೀಗಿದ. ಏಕೆಂದರೆ ಮಾರ್ಚ್ ತಿಂಗಳಿನಲ್ಲಿ ಯಾರೂ ಮುಳುಗಿ ಪ್ರಾಣ ಕಳೆದುಕೊಳ್ಳುವಷ್ಟು ವೇಗವಾಗಿ ಕಾವೇರಿ ಹರಿಯುವುದಿಲ್ಲವಂತೆ. ಒಟ್ಟಿನಲ್ಲಿ ಸ್ಕಾಟ್ ಕಣ್ಮರೆಯಾದರೂ ಅವನು ಮರಳುತ್ತಾನೆ ಎಂಬ ಆಶಯದಲ್ಲಿ ಈ ಬಂಗಲೆಯನ್ನು ಮೈಸೂರಿನ ಒಡೆಯರ್‌ಗಳು ಉಳಿಸಿಕೊಂಡಿದ್ದರು. ಕೊನೆಗೆ ಆತ ಮರಳದಿದ್ದಾಗ ಲೆಫ್ಟಿನೆಂಟ್ ಜನರಲ್ ಜಾರ್ಜ್ ಹ್ಯಾರಿಸ್ ಹಾಗೂ ದಿವಾನ್ ಪೂರ್ಣಯ್ಯ ಅವರೂ ಈ ಬಂಗಲೆಯಲ್ಲಿ ವಾಸಿಸಿದ್ದರಂತೆ. ನಂತರ ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಮಹಿಳೆಯೊಬ್ಬರು ಈ ಬಂಗಲೆಯನ್ನು ಖರೀದಿಸಿದ್ದಾರೆ ಎನ್ನುತ್ತಾರೆ.

ಈ ಕರುಣಾಜನಕ ಕಥೆ ಹೊರತುಪಡಿಸಿ ಇಲ್ಲಿರುವುದು ಇಂಗ್ಲೆಂಡ್, ಸ್ವಿಡ್ಜರ್‌ಲ್ಯಾಂಡ್, ಫ್ರಾನ್ಸ್ ದೇಶಗಳ ಜನರ ಗೋರಿಗಳು. ಈ ಗೋರಿಗಳ ಮೇಲೆ ಸಮಾಧಿಯಾಗಿರುವ ವ್ಯಕ್ತಿಗಳ ಕಿರುಪರಿಚಯವಿದೆ. ಏಕೆ ಸತ್ತರು? ಹೇಗೆ ಸತ್ತರು? ಯಾವಾಗ ಸತ್ತರು ಎಂಬ ಮಾಹಿತಿ ಇದೆ. ಇವುಗಳ ಪೈಕಿ ಕೆಲವನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇನ್ನು ಕೆಲವನ್ನು ನೋಡಿದರೆ ಮರುಕ ಹುಟ್ಟುತ್ತದೆ. ಒಟ್ಟಾರೆ ಕಳೆದು ಹೋದ ಕಾಲದ ನೆನಪುಗಳನ್ನು ಮತ್ತೆ ಜೀವಿಸಿ ಬಂದಂತಾಗುತ್ತದೆ. ಸ್ಮಶಾನದಲ್ಲಿರುವ ಕೆಲವು ಗೋರಿಗಳು ಬಿಳಿ ಗೋಪುರಗಳನ್ನು ಹೋಲುತ್ತವೆ ಹಾಗೂ ಇನ್ನು ಹಲವು ಸರಳ ಶೈಲಿಯದ್ದು, ಆಗಿನ ಕಾಲದಲ್ಲಿ ಮಹಿಳೆಯರು ಸಾಮಾನ್ಯವಾಗಿ ಹೆರಿಗೆಯಿಂದ ಕೊನೆಯುಸಿರೆಳೆಯುತ್ತಿದ್ದರು. ಇನ್ನು ಕೆಲವರು ಟೈಫಾಯ್ಡ್ ಮತ್ತು ಪ್ಲೇಗ್‌ನಂತಹ ರೋಗಗಳಿಂದ ಮೃತಪಟ್ಟಿದ್ದರು. ಮತ್ತೆ ಕೆಲವರು ಯುದ್ಧದಲ್ಲಿ ಮರಣ ಹೊಂದಿದ್ದರು. ಇಂತಹ ನೂರಾರು ಜನರ ಗೋರಿಗಳು ಇಲ್ಲಿವೆ.

ಇಲ್ಲಿರುವ ಮೂಕ ಗೋರಿಗಳು ನೂರಾರು ಕಥೆಗಳನ್ನು ಹೇಳುತ್ತವೆ. ಒಂದು ಗೋರಿ ಸೈನ್ಯಧಿಕಾರಿಯದ್ದು. ಆತ ೩೨ ವರ್ಷದವನಿದ್ದಾಗ ಪ್ಲೇಗ್ ಬಂದು ಸಾಯುತ್ತಾನೆ. ಇನ್ನೊಬ್ಬ ಸೈನಿಕ ಸೈಕಲ್ ಮೇಲಿಂದ ಬಿದ್ದು ತಲೆಗೆ ಏಟಾಗಿ ಸಾಯುತ್ತಾನೆ. ಆತ ಕೂಡಾ ಒಂದು ಗೋರಿಯಲ್ಲಿ ಮಲಗಿದ್ದಾನೆ. ಮತ್ತೊಬ್ಬನಿಗೆ ಹಾವು ಕಚ್ಚಿದ್ದರಿಂದ ಸಾವನ್ನಪ್ಪಿದ್ದಾನೆ.. ಇನ್ನೊಬ್ಬ ವೈದ್ಯ ಮೈಸೂರು ಸುತ್ತಮುತ್ತಲ ಜನರಿಗೆ ಹರಡಿದ್ದ ಪ್ಲೇಗ್ ಮತ್ತಿತರ ಸಾಂಕ್ರಾಮಿಕ ರೋಗಗನ್ನು ತಡೆಗಟ್ಟಲು ಶ್ರಮಿಸುತ್ತಿದ್ದ. ಆದರೆ ಆತನಿಗೂ ಸಾಂಕ್ರಾಮಿಕ ರೋಗ ಆವರಿಸುತ್ತದೆ. ನರಳಿ ಸಾಯುತ್ತಾನೆ.

೧೭೯೯ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ಶ್ರೀರಂಗಪಟ್ಟಣ ಕೋಟೆಯನ್ನು ಮಿಲಿಟರಿ ಗ್ಯಾರಿಸನ್ ಆಗಿ ಪರಿವರ್ತಿಸಿತು. ಇಲ್ಲಿ ನೂರಾರು ಯುರೋಪಿಯನ್ ಸೈನಿಕರ ದೇಹಗಳನ್ನು ಹೂಳಲಾಯಿತು. ಸ್ವಿಡ್ಜರ್ಲೆಂಡ್ ನಿಂದ ಬಂದ ೮೦ ಸೈನಿಕರ ‘ಡಿ ಮ್ಯೂರನ್ ರೆಜಿಮೆಂಟ್’ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಭಾಗವಾಗಿತ್ತು. ‘ಚಾರ್ಲ್ಸ್ ಡ್ಯಾನಿಯಲ್ ಮ್ಯೂರನ್’ ಈ ಪಡೆಯ ಮುಖ್ಯಸ್ಥ. ಈ ಸೈನ್ಯ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ಪರ ಹೋರಾಡಿತ್ತು. ಯುದ್ಧದಲ್ಲಿ ಸತ್ತ ಸೈನಿಕರನ್ನು ಕಾವೇರಿ ನದಿ ತೀರದಲ್ಲಿ ಸಮಾಧಿ ಮಾಡಲಾಯಿತು. ೧೭೯೯ರಲ್ಲಿ ಟಿಪ್ಪು ಸುಲ್ತಾನ್ ಸತ್ತ ನಂತರವೂ ಈ ಸೈನಿಕರು ಮೈಸೂರು ಪ್ರಾಂತ್ಯದಲ್ಲೇ ಇದ್ದರು. ಅವರ ಕುಟುಂಬ ಸದಸ್ಯರನ್ನೂ ಅದೇ ಜಾಗದಲ್ಲಿ ಅಂತ್ಯಸಂಸ್ಕಾರ ಮಾಡಿ ಗೋರಿ ಕಟ್ಟಲಾಯಿತು. ಆ ಸ್ಥಳ ಗ್ಯಾರಿಸನ್ ಸ್ಮಶಾನ ಎಂಬ ಹೆಸರು ಪಡೆಯಿತು. ೧೮೦೦ರಿಂದ ೧೮೬೦ರವರೆಗೆ ಮೃತಪಟ್ಟ ೮೦ ಸೈನಿಕರು ಹಾಗೂ ೨೨೭ ಕುಟುಂಬ ಸದಸ್ಯರು ಸೇರಿ ೩೦೭ ಗೋರಿಗಳು ಇಲ್ಲಿವೆ.

೨೦೦ ವರ್ಷಗಳಿಂದ ಈ ಸ್ಮಶಾನ ನಿಗೂಢವಾಗಿಯೇ ಇತ್ತು. ಆದರೆ ೨೦೦೭ರಲ್ಲಿ ಡಿ ಮ್ಯೂರನ್ ರೆಜಿಮೆಂಟ್ ಮುಖ್ಯಸ್ಥ ಚಾರ್ಲ್ಸ್ ಡ್ಯಾನಿಯಲ್ ಮ್ಯೂರನ್ ಕುಟುಂಬದ ಹೊಸ ತಲೆಮಾರು ತಾತನ ಸಮಾಧಿ ಅರಸಿ ಶ್ರೀರಂಗಪಟ್ಟಣಕ್ಕೆ ಬಂತು. ಫ್ರಾನ್ಸ್‌ನಲ್ಲಿ ನೆಲೆಸಿದ್ದ ಲೂಯಿಸ್ ಡಾಮಿನಿಕ್ ಡಿ ಮ್ಯೂರನ್ ಹಾಗೂ ಆತನ ಪತ್ನಿ ಮ್ಯೂನಿಕ್ ಸಮಾಧಿಗಳ ಸ್ಥಿತಿ ಕಂಡು ಮರುಗಿದರು. ಸ್ಮಾರಕದ ಉಳಿವಿಗಾಗಿ ಟೊಂಕಕಟ್ಟಿ ನಿಂತ ಈ ದಂಪತಿ ರಾಜ್ಯ ಪ್ರಾಚ್ಯವಸ್ತು ಸಂಗ್ರಹ ನಿರ್ದೇಶನಾಲಯದ ಸಹಾಯದೊಂದಿಗೆ ಸಮಾಧಿಗಳ ಜೀರ್ಣೋದ್ಧಾರ ಆರಂಭಿಸಿದರು.

೨೦೧೨ರಲ್ಲಿ ಲೂಯಿಸ್ ಮೃತಪಟ್ಟ ನಂತರ ಅವರ ಮಗ ಜೀನ್ ಡಿ ಮ್ಯೂರನ್ ಹಾಗೂ ಡಾ.ಸೋಫಿಯಾ ದಂಪತಿ ಸಮಾಧಿ ಉಳಿಸುವ ಕಾರ್ಯ ಮುಂದುವರಿಸಿದರು. ಜೊತೆಗೆ ಇಂಗ್ಲೆಂಡ್, ಫ್ರಾನ್ಸ್‌ನಲ್ಲಿ ನೆಲೆಸಿರುವ ಹೊಸ ತಲೆಮಾರಿನ ಸದಸ್ಯರೂ ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಪ್ರಾಚ್ಯವಸ್ತು ಸಂಗ್ರಹನಿರ್ದೇಶನಾಲಯ ಈ ಜಾಗವನ್ನು ಸಂರಕ್ಷಿಸಿದೆ. ಈಗಲೂ ಇಲ್ಲಿಗೆ ದೇಶ-ವಿದೇಶಗಳಿಂದ ಜನರು ಬರುತ್ತಾರೆ. ಇಲ್ಲಿರುವ ಗೋರಿಗಳನ್ನು ನೋಡಿಕೊಂಡು ಹೋಗುತ್ತಾರೆ. ಇನ್ನು ಇತಿಹಾಸದ ಬಗ್ಗೆ ಆಸಕ್ತಿ ಇರುವವರು ಇಲ್ಲಿ ಸಂಶೋಧನೆಗಾಗಿ ಬರುತ್ತಾರೆ. ಗ್ಯಾರಿಸನ್ ಸ್ಮಶಾನವು ಪ್ರಸ್ತುತ ಸೇಂಟ್ ಬಾರ್ತಲೋಮೆವ್ ಚರ್ಚ್‌ನ ಆಶ್ರಯದಲ್ಲಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಮುನ್ನೂರು ಮೀಟರ್ ದೂರದಲ್ಲಿರುವ ಗ್ಯಾರಿಸನ್ ಸ್ಮಶಾನವನ್ನು ಪತ್ತೆ ಮಾಡುವುದು ಸ್ವಲ್ಪ ಕಷ್ಟವಾದರೂ ಇಲ್ಲಿ ನೋಡಿ ತಿಳಿಯುವ ಸಂಗತಿಗಳು ಬಹಳಷ್ಟಿವೆ

ಆಂದೋಲನ ಡೆಸ್ಕ್

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

4 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

17 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

17 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

18 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

18 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

18 hours ago