ಶೇಷಾದ್ರಿ ಗಂಜೂರು
ಇಂತಹ ಮಿತಿ ಮೀರಿದ ಹುಚ್ಚಾಟಗಳಿಂದ ಹಿರಿಯಣ್ಣನ ಮೇಲೆ ವಿಶ್ವಕ್ಕಿರುವ ಭರವಸೆ ಕುಸಿಯುತ್ತಿದೆ. ಅಮೆರಿಕನ್ ಸರ್ಕಾರದ ಬಾಂಡ್‌ಗಳ ಮೇಲೆ, ಕೊನೆಗೆ ವಿಶ್ವದ ಕರೆನ್ಸಿಯೇ ಎಂದೆನಿಸಿಕೊಂಡಿರುವ ಡಾಲರಿನ ಮೇಲೂ ಜನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇವೆಲ್ಲಾ ಇಡೀ ವಿಶ್ವದ ಆರ್ಥಿಕ ವ್ಯವಸ್ಥೆಯನ್ನೇ ತಲ್ಲಣಗೊಳಿಸಿದೆ.
ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಇನ್ನೂ ನೂರು ದಿನಗಳೂ ಆಗಿಲ್ಲ. ಆದರೆ, ಟ್ರಂಪ್ ಮತ್ತು ಅವರ ಸಚಿವ ಮಂಡಲದವರ ಬೇಜವಾಬ್ದಾರಿತನ, ಹುಚ್ಚಾಟಗಳು ಮಾತ್ರ ಲೆಕ್ಕ ಮೀರುತ್ತಿವೆ. ಉದಾಹರಣೆಗೆ, ಟ್ರಂಪ್ ಅವರೇ, ಕಾದಂಬರಿಕಾರ ಸರ್ವಾಂಟೆಸ್ಸನ ಭ್ರಮಾಧೀನ ನಾಯಕ ಡಾನ್ ಕಿಹೋಟೆಯಂತೆ ವಿಂಡ್ ಮಿಲ್ಗಳ ಮೇಲೆ ತರ್ಕ-ಆಧಾರಗಳಿಲ್ಲದೆ ಸಮರ ಸಾರಿದ್ದಾರೆ. ಅವರ ಪ್ರಕಾರ ವಿಂಡ್ ಮಿಲ್ಗಳು ಕ್ಯಾನ್ಸರ್ ಕಾರಕವಂತೆ! ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಯೋಗಶಾಲೆಗಳಲ್ಲಿ ವಂಶವಾಹಿಗಳನ್ನು ಬದಲಾವಣೆಮಾಡಿದ “ಟ್ರಾನ್ಸ್ ಜೆನಿಕ್” ಇಲಿಗಳನ್ನು ಉಪಯೋಗಿಸುವುದಿದೆ. ಈ ಇಲಿಗಳನ್ನು “ಟ್ರಾನ್ಸ್ ಜೆಂಡರ್” (ಲಿಂಗ ಬದಲಾವಣೆ ಮಾಡಿದ) ಇಲಿಗಳೆಂದು ಟ್ರಂಪ್ ತಪ್ಪಾಗಿ ಗ್ರಹಿಸಿ ಅವುಗಳ ಮೇಲೆ ನಿಷೇಧ ಹೇರುವ ಮಾತೂ ಆಗಿದೆ. ಸರ್ಕಾರದ ದುಂದುವೆಚ್ಚವನ್ನು ಕಡಿಯುವ ಭರದಲ್ಲಿ ಅಣ್ವಸ್ತ್ರ ಮೇಲ್ವಿಚಾರಕರು, ವಿಮಾನಯಾನ ನಿಯಂತ್ರಕರಂತಹ ಅತ್ಯವಶ್ಯಕ ಸರ್ಕಾರಿ ನೌಕರರನ್ನು ಕೆಲಸದಿಂದ ಕಿತ್ತುಹಾಕಿದ ಟ್ರಂಪ್ ಆಡಳಿತ, ನಂತರ, ಅವರನ್ನು ವಾಪಸು ಬನ್ನಿರೆಂದು ಗೋಗರೆದದ್ದೂ ನಡೆದಿದೆ.
ಇಂತಹದು ಇನ್ನೂ ಎಷ್ಟೋ ಇವೆ. ಇಂತಹ ಹುಚ್ಚಾಟಗಳು ಡಾನ್ ಕಿಹೋಟೆಯಂತಹ ಕಾದಂಬರಿಯೊಂದರಲ್ಲಿ ಕಂಡರೆ, ಓದಿ ನಗುತ್ತಾ ಆನಂದಿಸಬಹುದು ಅಥವಾ ಯಾವುದೋ ಒಂದು ಸಣ್ಣ ಬಡ ರಾಷ್ಟ್ರವೊಂದರಲ್ಲಿ ಕಂಡರೆ ಮರುಕ ಪಡಲೂಬಹುದು. ಆದರೆ, ಇವೆಲ್ಲಾ ಇಂದು ಆಗುತ್ತಿರುವುದು ವಿಶ್ವದ “ಹಿರಿಯಣ್ಣ” ಎಂದೆನಿಸಿಕೊಳ್ಳುವ ಜಗತ್ತಿನ ಅತ್ಯಂತ ಬಲಿಷ್ಠ ದೇಶದಲ್ಲಿ. ಹೀಗಾಗಿ ಅವುಗಳ ಪರಿಣಾಮ ಆಗುವುದು ಕೇವಲ ಅಮೆರಿಕದ ೩೫ ಕೋಟಿ ಪ್ರಜೆಗಳ ಮೇಲಷ್ಟೇ ಅಲ್ಲ, ಇಡೀ ವಿಶ್ವದ ಮೇಲೆ. ಆರೋಗ್ಯ ವಿಜ್ಞಾನದ ವಿಷಯದಲ್ಲಿ, ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಗಿಂತ ಪ್ರತಿಷ್ಠಿತ ಸಂಸ್ಥೆ ಇನ್ನೊಂದು ಇರಲಿಕ್ಕಿಲ್ಲ. ಈ ಸಂಸ್ಥೆಯಲ್ಲಿ ಕೆಲಸ ಮಾಡಿದ ಅಥವಾ ಅದರಿಂದ ಅನುದಾನ ಪಡೆದ ಸುಮಾರು ನೂರು ಮಂದಿ ವಿಜ್ಞಾನಿಗಳು ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ. ಕ್ಯಾನ್ಸರ್, AIDS, ಹೃದಯ ಸಂಬಂಧಿ ಕಾಯಿಲೆಗಳಿಂದ ಹಿಡಿದು ಎಷ್ಟೋ ಮಾರಕ ಕಾಯಿಲೆಗಳನ್ನು ಎದುರಿಸಲು ಇಂದು ವಿಶ್ವಾದ್ಯಂತ ಬಳಸುತ್ತಿರುವ ಹಲವಾರು ಔಷಧಿ-ಚಿಕಿತ್ಸೆಗಳ ಹಿಂದೆ, NIH ವಿಜ್ಞಾನಿಗಳ ಹಲವು ದಶಕಗಳ ಪರಿಶ್ರಮ ಇದೆ. ಕೋವಿಡ್ ಅನ್ನು ಎದುರಿಸಲು ಬಳಕೆಯಾದ mRNA ವ್ಯಾಕ್ಸಿನ್ ಸಹ NIH ಅಧ್ಯಯನಗಳ ಫಲವೇ. ಆದರೆ, ಇಂದು, ಅದೇ NIH , ಟ್ರಂಪ್ ಹುಚ್ಚಾಟಕ್ಕೆ ಸಿಕ್ಕಿ ನಜ್ಜು-ಗುಜ್ಜಾಗುತ್ತಿದೆ. ನೂರಾರು ಪ್ರಯೋಗ-ಅಧ್ಯಯನಗಳನ್ನು ಟ್ರಂಪ್ ಆಜ್ಞೆಯ ಮೇರೆಗೆ ಈಗಾಗಲೇ ನಿಲ್ಲಿಸಲಾಗಿದೆ. ಪ್ರಯೋಗ ಶಾಲೆಗಳನ್ನು ಮುಚ್ಚಲಾಗುತ್ತಿದೆ. ತಜ್ಞತೆಯ ಉತ್ತುಂಗದಲ್ಲಿರುವ ವಿಜ್ಞಾನಿಗಳು ತಮ್ಮ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದೆಲ್ಲವೂ, ಟ್ರಂಪ್ ಸಚಿವ ಸಂಪುಟದಲ್ಲಿ ಆರೋಗ್ಯ ಸಚಿವರಾಗಿರುವ ರಾಬರ್ಟ್ ಕೆನಡಿಯವರ ಮೇಲುಸ್ತುವಾರಿಯಲ್ಲಿ ನಡೆಯುತ್ತಿದೆ. ಆರೋಗ್ಯ ಸಚಿವರಾಗಲು ಈ ಕೆನಡಿಯವರಿಗೆ ಇರುವ ಅನುಭವ-ಅರ್ಹತೆಯಾದರೂ ಏನು? ಹಲವು ದಶಕಗಳಿಂದ ವ್ಯಾಕ್ಸಿನ್ಗಳ ಬಗೆಗೆ ಆಧಾರರಹಿತ ಸಂಚು-ಪಿತೂರಿಯ ಕತೆಗಳನ್ನು ಹರಡುವುದು, ಅಷ್ಟೇ!
ವ್ಯಾಕ್ಸಿನ್ನ ಸೂಕ್ತ ಬಳಕೆಯಿಂದಾಗಿ ಅಮೆರಿಕದಲ್ಲಿ ಕಳೆದ ೨೫ ವರ್ಷಗಳಿಂದ ಹತೋಟಿಯಲ್ಲಿದ್ದ ಮೀಸಲ್ಸ್(ದಡಾರ), ಕೆನಡಿಯವರ ವ್ಯಾಕ್ಸಿನ್ ವಿರೋಧಿ ಮೂರ್ಖತನದಿಂದ ಇಂದು ಹೆಮ್ಮಾರಿಯಾಗುವ ಲಕ್ಷಣಗಳನ್ನು ತೋರುತ್ತಿದೆ; ಇಸವಿ ೨೦೦೦ದಿಂದ ೨೦೨೪ರವರೆಗೆ ಅಮೆರಿಕದಲ್ಲಿ ಮೀಸಲ್ಸ್ನಿಂದ ಸತ್ತವರ ಸಂಖ್ಯೆ ಕೇವಲ ಮೂರು. ಕಳೆದ ಮೂರೇ ತಿಂಗಳಲ್ಲಿ ಆ ಸಂಖ್ಯೆಯನ್ನು ಮೀರಿದ್ದಾಗಿದೆ.
ಇದು ಕೇವಲ ಮೀಸಲ್ಸ್ ಅಥವಾ ಅಮೆರಿಕದ ಆಂತರಿಕ ವಿಚಾರವಲ್ಲ. ಹಲವು ದಶಕಗಳಿಂದ ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ತಲೆ ಎತ್ತುವ ಮಂಕಿ ಪಾಕ್ಸ್, ಈಬೋಲಾದಂತಹ ಎಷ್ಟೋ ಪಿಡುಗುಗಳು ವಿಶ್ವಾದ್ಯಂತ ಹಬ್ಬದಂತೆ ನಿಯಂತ್ರಿಸುವಲ್ಲಿ ಅಮೆರಿಕದ ನಾಯಕತ್ವ ಮತ್ತು ಧನ ಸಹಾಯ ಮಹತ್ವದ ಪಾತ್ರವಹಿಸಿವೆ. ಆದರೆ, ಟ್ರಂಪ್-ಕೆನಡಿಗಳು ಅವಕ್ಕೆ ಈಗಾಗಲೇ ತೆರೆ ಎಳೆದಿದ್ದಾರೆ. ಅಷ್ಟೇ ಅಲ್ಲ, ಕೋವಿಡ್ ವ್ಯಾಕ್ಸಿನ್ ಕಡ್ಡಾಯ ಮಾಡಿರುವ ಎಲ್ಲ ಶಾಲಾ ಕಾಲೇಜುಗಳಿಗೆ, ಇನ್ನು ಮುಂದೆ ಅಮೆರಿಕದ ಕೇಂದ್ರ ಸರ್ಕಾರ ಯಾವುದೇ ಧನಸಹಾಯ ನೀಡುವುದಿಲ್ಲವೆಂದು ಘೋಷಿಸಿದ್ದಾರೆ. ಲೆಕ್ಕವಿಲ್ಲದಷ್ಟು ಮಕ್ಕಳನ್ನು ಬಲಿ ತೆಗೆದುಕೊಂಡು ವಿಕಲಾಂಗರನ್ನಾಗಿಸಿದ ಪೋಲಿಯೋ ಇಂದು ನಿರ್ನಾಮದ ಅಂಚಿಗೆ ಬಂದಿದೆ. ಅದಕ್ಕೆ ಮುಖ್ಯಕಾರಣ ಅಮೆರಿಕದ ವಿಜ್ಞಾನಿ ಜೋನಾಸ್ ಸಾಲ್ಕ್ ಕಂಡು ಹಿಡಿದ ಪೋಲಿಯೋ ವ್ಯಾಕ್ಸಿನ್. ಆದರೆ ಇಂದು, ಅಂತಹ ಪೋಲಿಯೋ ವ್ಯಾಕ್ಸಿನ್ ಕೂಡ ಕೆನಡಿಯಯವರ ಕೆಂಗಣ್ಣಿಗೆ ಕಾರಣವಾಗಿದೆ ಎಂದರೆ, ಟ್ರಂಪರ ಹುಚ್ಚಾಟ ಯಾವ ಮಟ್ಟ ಮುಟ್ಟಿದೆ ಎಂದು ಊಹಿಸಬಹುದು.
ಕಳೆದ ಶತಮಾನವನ್ನು “ಅಮೆರಿಕನ್ ಯುಗ” ವೆಂದೇ ಕರೆಯಬಹುದು. ವಿಮಾನಗಳಿಂದ ಹಿಡಿದು ವ್ಯಾಕ್ಸಿನ್ಗಳವರೆಗೆ, ಟೆಲಿಫೋನ್, ಟಿ.ವಿ. ಶೋಗಳು, ಹಾಲಿವುಡ್ ಸಿನೆಮಾ, ಫಾಸ್ಟ್ ಫುಡ್, ಕ್ರೆಡಿಟ್ ಕಾರ್ಡ್, ಕಂಪ್ಯೂಟರ್, ಇಂಟರ್ನೆಟ್, ಆನ್ಲೈನ್ ಶಾಪಿಂಗ್, ಇತ್ತೀಚಿನ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್… ಹೀಗೆ ಇಂದು ವಿಶ್ವದಮೂಲೆ ಮೂಲೆಗಳನ್ನೂ ಆವರಿಸಿರುವ ಪ್ರತಿಯೊಂದೂ ಅಮೆರಿಕನ್ ಉತ್ಪನ್ನಗಳೇ. ಮಾನವ ಇತಿಹಾಸದಲ್ಲಿ ತನ್ನ “ಸಾಫ್ಟ್ ಪವರ್” ಮೂಲಕವೇ ಇಡೀ ವಿಶ್ವವನ್ನು ತನ್ನ “ಸಾಮ್ರಾಜ್ಯ” ಮಾಡಿಕೊಂಡ ಉದಾಹರಣೆ ಅಮೆರಿಕವನ್ನು ಬಿಟ್ಟರೆ ಬೇರೊಂದಿಲ್ಲ.
ಇಂತಹ ಸಾಮ್ರಾಜ್ಯಕ್ಕೆ ಬುನಾದಿ: ವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಸರ್ಕಾರಿ ವ್ಯವಸ್ಥೆಯ ಅಧಿಕಾರದ ಬಲವನ್ನು ವಿಕೇಂದ್ರಿಕರಿಸಿ ಮೊಟಕುಗೊಳಿಸಿರುವ ಅಮೆರಿಕನ್ ಸಂವಿಧಾನ. ಇಂದು ಅಮೆರಿಕದಲ್ಲಿ ಅತ್ಯುನ್ನತ ವಿಶ್ವವಿದ್ಯಾಲಯಗಳು, ವೈಜ್ಞಾನಿಕ ಪ್ರಯೋಗಶಾಲೆಗಳು, ಅಮೆರಿಕನ್ ಅಧ್ಯಕ್ಷನನ್ನೇ ಕೆಳಗಿಳಿಸಬಲ್ಲ ಮೀಡಿಯಾ ಸಂಸ್ಥೆಗೆಳು, ಅತಿ ಯಶಸ್ವಿ
ವ್ಯಾಪಾರಿ ಸಂಸ್ಥೆಗಳು ಇವೆಲ್ಲಾ ಇದ್ದರೆ, ಅವೆಲ್ಲವೂ ಆ ಬುನಾದಿಯ ಮೇಲೆಯೇ ನಿಂತಿವೆ. ಇವು, ಐನ್ಸ್ಟೈನ್ – ಸುಬ್ರಮಣ್ಯಂ ಚಂದ್ರಶೇಖರ್, ನಬಕೋವ್-ಸಲ್ಮಾನ್ ರಷ್ದಿ, ಮಾರ್ಟಿನಾ ನವ್ರಾಟಿಲೋವಾ, ಗೂಗಲ್ ಸ್ಥಾಪಕ ಸರ್ಗೆ ಬ್ರಿನ್ ಅಂತಹ ವಿವಿಧ ರಂಗಗಳ ಮಹಾತಾರೆಯರನ್ನೇ ತನ್ನೆಡೆಗೆ ಆಕರ್ಷಿಸಿವೆ. ಭಾರತವೂ ಸೇರಿದಂತೆ ವಿಶ್ವದ ಮೂಲೆ-ಮೂಲೆಗಳಿಂದ ಬಂದ ಲೆಕ್ಕವಿಲ್ಲದಷ್ಟು ಮಂದಿ ಇಂಜಿನಿಯರುಗಳು, ವಿಜ್ಞಾನಿಗಳು, ವೈದ್ಯರು, ಕಲಾವಿದರು, ಕ್ರೀಡಾಪಟುಗಳು, ಬ್ಯುಸಿನೆಸ್ ತಜ್ಞರು, ಕೊನೆಗೆ ಕೃಷಿ ನೌಕರರು, ಕಾರ್ಮಿಕರು, ಟ್ಯಾಕ್ಸಿ ಡ್ರೈವರುಗಳು, ಹೋಟೆಲ್ ವೇಟರುಗಳು ಅಮೆರಿಕವನ್ನು ತಮ್ಮ ಮನೆಯಾಗಿಸಿಕೊಂಡು ಅಲ್ಲಿಯೇ ತಮ್ಮ ಸೌಧಗಳನ್ನು ನಿರ್ಮಿಸಿಕೊಳ್ಳುವ ಕನಸು ಕಂಡಿದ್ದಾರೆ; ಕಾಣುತ್ತಿದ್ದಾರೆ, ನನಸಾಗಿಸಿಕೊಂಡಿದ್ದಾರೆ ಕೂಡ. ಇವರ ಕನಸಿನ ಸೌಧಗಳಿಗೂ ಅಮೆರಿಕದ ಸಂವಿಧಾನದಲ್ಲಿರುವ ಸ್ವಾತಂತ್ರ್ಯಗಳ ಭರವಸೆಯೇ ಬುನಾದಿ.
ಆದರೆ, ಸರ್ವಾಧಿಕಾರಿಯಾಗುವ ಆಶಯ ಹೊಂದಿರುವ ಟ್ರಂಪ್, ಕಳೆದ ಮೂರು ತಿಂಗಳಿನಿಂದ ಆ ಬುನಾದಿಯ ಮೇಲೆ ನಿರ್ಮಿಸಿರುವ ಪ್ರತಿ ಸಂಸ್ಥೆ-ಪರಿಕಲ್ಪನೆಗಳನ್ನೂ ಬೀಳಿಸಿ, ಕೊನೆಗೆ ಆ ಬುನಾದಿಯನ್ನೇ ಅಲುಗಾಡಿಸುವ ಪ್ರಯತ್ನದಲ್ಲಿದ್ದಾರೆ. ಉದಾಹರಣೆಗೆ, ಅಮೆರಿಕದ ಎರಡೂವರೆ ಶತಮಾನಗಳ ಇತಿಹಾಸದಲ್ಲಿ, ಯಾವುದೇ ಆಡಳಿತ ಅಲ್ಲಿನ ಸುಪ್ರೀಂ ಕೋರ್ಟಿನ ಆದೇಶವನ್ನು ಧಿಕ್ಕರಿಸಿಲ್ಲ. ಆದರೆ, ಇಂದು, ಟ್ರಂಪ್ ಸರ್ಕಾರ ಅಂತಹ ಉದ್ಧಟತನ ತೋರುತ್ತಿದೆ; ಕೋರ್ಟ್ ಆದೇಶದ ವಿರುದ್ಧವಾಗಿ ಅಮೆರಿಕದ ನೆಲೆಸಿಗನೊಬ್ಬನನ್ನು ವಿದೇಶವೊಂದರ ಕುಖ್ಯಾತ ಜೈಲೊಂದಕ್ಕೆ ಕಳುಹಿಸಿರುವ ಟ್ರಂಪ್ ಸರ್ಕಾರ, ತನ್ನ ತಪ್ಪನ್ನು ಒಪ್ಪಿಕೊಂಡರೂ ಆತನನ್ನು ವಾಪಸು ತರುವುದಿಲ್ಲವೆನ್ನುತ್ತಿದೆ. ಹಾಗೆಯೇ, ಅಮೆರಿಕದ ಸಂವಿಧಾನ ಗ್ಯಾರಂಟಿ ನೀಡುವ ಮೊಟ್ಟ ಮೊದಲ ಹಕ್ಕೇ ಪತ್ರಿಕಾ ಸ್ವಾತಂತ್ರ್ಯವಾದರೂ, ಟ್ರಂಪ್ ಸರ್ಕಾರ ವಾರ್ತಾ ಸಂಸ್ಥೆಗಳ ಮೇಲೆ ನಿರ್ಬಂಧ ಹೇರುತ್ತಿದೆ.
ಜೊತೆಗೆ ಸ್ವತಃ ಟ್ರಂಪ್ ಅವರೇ ತಮ್ಮ ಭಾಷಣಗಳಲ್ಲಿ-ಟ್ವೀಟ್ಗಳಲ್ಲಿ ಹಲವಾರು ಪತ್ರಿಕೆಗಳನ್ನು, ಚಾನೆಲ್ಗಳನ್ನು, ಪತ್ರಕರ್ತರನ್ನು ವೈಯಕ್ತಿಕವಾಗಿ ಹಿಗ್ಗಾಮುಗ್ಗಾ ನಿಂದಿಸುವುದೂ, ಬೆದರಿಕೆ ಹಾಕುವುದೂ ದಿನ ನಿತ್ಯದ ವಾಡಿಕೆಯಾಗಿಹೋಗಿದೆ. ಟ್ರಂಪ್ ಆಡಳಿತದ ವಾಣಿಜ್ಯ ನೀತಿಯಂತೂ, ಹುಚ್ಚನೊಬ್ಬನ ಸ್ವಗತದಂತೆ ಕಾಣಲಾರಂಭಿಸಿದೆ. ಒಂದು ದಿನ ಕೆನಡಾ, ಮೆಕ್ಸಿಕೋಗಳ ಮೇಲೆ ೧೦% ಆಮದು ಸುಂಕ ಹಾಕುವ ಮಾತನಾಡುವ ಟ್ರಂಪ್, ಮಾರನೆಯ ದಿನ ಅದನ್ನು ೨೫%ಗೆ ಏರಿಸಿ ನಂತರ ಸದ್ಯಕ್ಕೆ ಸುಂಕ ಹಾಕುವುದಿಲ್ಲ ಎನ್ನುತ್ತಾರೆ. ಹಾಗೆಯೇ ಇಡೀ ವಿಶ್ವದ ಮೇಲೆ — ಮನುಷ್ಯರೇ ಇಲ್ಲದ ಕೇವಲ ಪೆಂಗ್ವಿನ್ ಗಳೇ ವಾಸವಿರುವ ದ್ವೀಪಗಳೂ ಸೇರಿದಂತೆ! — ೧೦% ಆಮದು ಸುಂಕ ಹಾಕುವ ಟ್ರಂಪ್ ಇದ್ದಕ್ಕಿದ್ದಂತೆ ಭಾರತದ ಮೇಲೆ ೨೬% ಎಂದು ನಂತರ ಅದನ್ನು ೧೦%ಗೆ ಇಳಿಸಿ ಕೊನೆಗೆ ೯೦ ದಿನ ಯಾವುದೇ ಬದಲಾವಣೆ ಇಲ್ಲ ಎನ್ನುತ್ತಾರೆ. ಚೈನಾ ವಿಷಯದಲ್ಲಂತೂ, ಅದು ೧೦%, ೨೬%, ೮೪%, ೧೨೫%, ೧೪೫% ನಿಂದ ಈ ಲೇಖನ ಬರೆಯುವ ವೇಳೆಗೆ ೨೪೫% ಮುಟ್ಟಿದೆ!ಹಾಗಿದ್ದರೆ, ಇದು ಅಮೆರಿಕನ್ ಸಾಮ್ರಾಜ್ಯದ ಕೊನೆಯ ದಿನಗಳೇ? ಈ ಪ್ರಶ್ನೆಯನ್ನು ಉತ್ತರಿಸುವ ಮುನ್ನ ಅಮೆರಿಕದ ಪ್ರಮುಖ ಟಿ.ವಿ. ಚಾನೆಲ್ಗಳಲ್ಲಿ ಪ್ರತಿ ರಾತ್ರಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಕೊಂಚ ಗಮನಿಸಬೇಕು. ಈ ಚಾನೆಲ್ಗಳಲ್ಲಿ ಹಲವು ದಶಕಗಳಿಂದ ಪ್ರತಿ ರಾತ್ರಿ ಹತ್ತು ಗಂಟೆಯ ನಂತರ ಆ ದಿನ/ವಾರದ ಆಗುಹೋಗುಗಳ ಬಗೆಗೆ ವಿಡಂಬನೆ ಮಾಡುವ ಕಾರ್ಯಕ್ರಮಗಳ ಸಂಪ್ರದಾಯವೊಂದು ಇದೆ. ಆ ಕಾರ್ಯಕ್ರಮಗಳು ಇನ್ನೂ ಪ್ರಸಾರವಾಗುತ್ತಿವೆ; ಟ್ರಂಪ್ ರವರ ದಿನ ನಿತ್ಯದ ಹುಚ್ಚಾಟವನ್ನು ನೋಡಿ ತಿಳಿಯಲು-ನಗಲು ಅವಕ್ಕಿಂತ ಇನ್ನೇನೂ ಬೇಡ. ಒಟ್ಟಿನಲ್ಲಿ, ಉಳಿದವರನ್ನು ಬೆತ್ತಲೆಯಾಗಿಸುವ ಪ್ರಯತ್ನದಲ್ಲಿ ತನ್ನ ಉಡುಪನ್ನು ತಾನೇ ಕಳಚಿಕೊಳ್ಳುವ ಭಾವಿ ಚಕ್ರವರ್ತಿ ಟ್ರಂಪ್ರ ಹುಚ್ಚಾಟವನ್ನು ನೋಡಿ ನಗುವ ಸ್ವಾತಂತ್ರ್ಯ ಅಮೆರಿಕನ್ನರಿಗೆ ಇರುವವರೆಗೆ ಅಮೆರಿಕನ್ ಯುಗ ಮುಗಿಯಿತೆನ್ನಲಾಗುವುದಿಲ್ಲ. ಇದು ಅಮೆರಿಕನ್ ಪೌರನೊಬ್ಬನ ಅಶಾವಾದವಷ್ಟೇ ಸಹ ಇರಬಹುದು.
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…
ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…
ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಈ…
ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್…
ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…