ಹಾಡು ಪಾಡು

ಚಿಕಾಗೋ ಸರಸ್ವತಿ ಮತ್ತು ಮೈಸೂರು ವೀಣೆ

• ಕೀರ್ತಿ ಬೈಂದೂರು

ಸರಸ್ವತಿ ರಂಗನಾಥನ್ ಅವರು ಮೂಲತಃ ಮೈಸೂರಿನವರು. ಗ್ರಾಮಾಫೋನ್ ರೆಕಾರ್ಡ್ ಕಂಪೆನಿಯ ಸ್ಥಾಪಕರಾದ ಶ್ರೀರಂಗಂ ನಾರಾಯಣ ಅಯ್ಯರ್ ಅವರ ಮರಿಮೊಮ್ಮಗಳು, ಸ್ಪಷ್ಟ ಗಾನ ಕಲಾಮಣಿ ಸುಲೋಚನ ಮಹಾದೇವ ಅವರ ಮೊಮ್ಮಗಳಾದ ಸರಸ್ವತಿ ಅವರ ಇಡೀ ಕುಟುಂಬದವರು ಸಂಗೀತ ಪರಂಪರೆಯ ಅಪ್ಪಟ ಆರಾಧಕರಾಗಿದ್ದರು. ದಿನ ಬೆಳಗಾದರೆ ಸಂಗೀತ ಸ್ವರಗಳಿಂದ ಆಲಾಪಿಸುತ್ತಿದ್ದ ಮನೆಯ ವಾತಾವರಣ ಸಹಜವಾಗಿಯೇ ಇವರನ್ನೂ ಸೆಳೆಯಿತು.

ಸರಸ್ವತಿ ಅವರಿಗಾಗ ಆರು ವರ್ಷ. ತಾಯಿ ಶಾಂತ ರಂಗನಾಥನ್ ಅವರು ಮನೆ ಮಕ್ಕಳಿಗೆ ವಾದ್ಯ ಸಂಗೀತವನ್ನು ಕಲಿಸಬೇಕೆಂದು, ಒಬ್ಬೊಬ್ಬರಿಗೆ ಒಂದೊಂದು ವಾದ್ಯಗಳನ್ನು ನೀಡಿದರು. ಸರಸ್ವತಿ ಅವರಿಗೆ ಸಿಕ್ಕಿದ್ದು ವೀಣೆ, ಅದು ಬರಿಯ ವೀಣೆ ಆಗಿರಲಿಲ್ಲ. ಶಾಂತ ಅವರಿಗೆ ಬಾಲ್ಯದಲ್ಲಿ ಬಹುಮಾನವಾಗಿ ದೊರೆತ ಚಿಕ್ಕ ವೀಣೆಯದು. ಸರಸ್ವತಿ ಅವರ ಕೈಯಲ್ಲಿ ವೀಣೆ ಕಂಡ ಮೇಲೆ, ಎಷ್ಟು ಚೆನ್ನಾಗಿ ಕಾಣಿಸುತ್ತಿದೆ! ಎಂದು ಖುಷಿ ಪಟ್ಟರು. ತಾಯಿ ನುಡಿಸಿದಂತೆ ನುಡಿಸಲು ಪ್ರಯತ್ನಿಸುವುದು, ನಿತ್ಯವೂ ತಪ್ಪದ ಸಂಗೀತಾಭ್ಯಾಸ, ಸರಸ್ವತಿ ಅವರ ಈ ಆಸಕ್ತಿಯನ್ನು ಗಮನಿಸಿದ ಮನೆಯವರೆಲ್ಲ ಮೊದಲಿಗೆ ವಾಣಿ ಸಂಸ್ಥೆಯಲ್ಲಿ, ನಂತರ ಕರ್ನಾಟಕ ಕಲಾಶ್ರೀ ಇ.ಪಿ. ಅಲಮೇಲು ಅವರ ಬಳಿ ಸಂಗೀತ ಕಲಿಕೆಗೆಂದು ಕಳಿಸಿದರು. ಆಗ ಸರಸ್ವತಿ ಅವರು ಏಳನೇ ತರಗತಿ ಓದುತ್ತಿದ್ದರು. ವಿಜ್ಞಾನ ಪದವಿ ಮುಗಿವ ತನಕ ಅಂದರೆ ಸುಮಾರು ಎಂಟು ವರ್ಷಗಳವರೆಗೆ ಅವರಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದರು. ಹೀಗೆ ಆರಂಭವಾದ ಸರಸ್ವತಿ ಅವರ ವೀಣಾ ಪಯಣ ಚಿಕಾಗೋ ಕಡೆ ಸಾಗಿತು.

2003ರಲ್ಲಿ ಚಿಕಾಗೋದ ಲಯೋಲ ವಿಶ್ವವಿದ್ಯಾನಿಲಯದಲ್ಲಿ ಎಂ.ಬಿ.ಎ. ಓದುತ್ತಿರುವಾಗ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ನಡೆಯಿತು. ವಿಶ್ವದ ಸಂಗೀತ, ಸಂಸ್ಕೃತಿಗಳೆಲ್ಲ ಅಲ್ಲಿ ಸಮಾಗಮಗೊಂಡಿತ್ತು. ಕಲಾರಾಧಕರ ಸಂಭ್ರಮದಲ್ಲಿ ತಾನೂ ಪಾಲ್ಗೊಳ್ಳಬೇಕೆಂಬ ಆಸೆ ಸರಸ್ವತಿ ಅವರಲ್ಲಿ ಚಿಗುರೊಡೆಯಿತು. ಹಾಗಂದುಕೊಂಡಿದ್ದೇ, ತಂದಿದ್ದ ವೀಣೆಯನ್ನು ಹೊರತೆಗೆದರು. ಹತ್ತು ನಿಮಿಷಗಳ ಮಟ್ಟಿಗೆ ವೇದಿಕೆಯಲ್ಲಿ ವೀಣೆಯನ್ನು ನುಡಿಸುವ ಅವಕಾಶ ದೊರೆಯಿತು. ಮೈಮರೆತು ನುಡಿಸುತ್ತಿದ್ದಂತೆಯೇ ಅದಕ್ಕೆ ತಕ್ಕನಾಗಿ ಕರೇಬಿಯನ್ ನೃತ್ಯಗಾರ್ತಿಯರು ಹೆಜ್ಜೆ ಹಾಕಿದ್ದರು. ಜನರೆಲ್ಲ ಸಂತಸದಿಂದ ಹರ್ಷೋದ್ಗಾರ ಮಾಡುತ್ತಿದ್ದುದ್ದನ್ನು ಕಂಡು ಸರಸ್ವತಿ ಅವರಿಗೆ ಕರ್ನಾಟಿಕ್ ರಾಗವನ್ನು ಆರಾಧಿಸುವವರು ಎಷ್ಟೆಲ್ಲ ಜನರಿದ್ದಾರಲ್ಲಾ ಎಂದು ಅಚ್ಚರಿಯಾಯಿತು. ಕಾಲ, ದೇಶ, ಜನ, ಭಾಷೆ ಸೀಮೆಗಳನ್ನು ಮೀರಿ ರಾಗವೊಂದೇ ಎಲ್ಲರನ್ನೂ ಹೇಗೆ ಒಳಗೊಳ್ಳುತ್ತದಲ್ಲಾ ಅನಿಸಿತು. ಸಂಗೀತ ಸೇತುವಿನಲ್ಲಿ ವಿಶ್ವವನ್ನೇ ಬೆಸೆಯಬಹುದು. ಹಾಗೆಯೇ ಸರಸ್ವತಿ ಅವರಿಗೆ ತಾನು ಕಲಿತ ವೀಣೆಯ ರಾಗಗಳನ್ನು ಜಗದ ಜನರೊಂದಿಗೆ ಹಂಚಿಕೊಳ್ಳುವ ಮನಸಾಯಿತು.

ಮುಂದೆ ಸರಸ್ವತಿ ಅವರು ವರ್ಲ್ಡ್ ಮ್ಯೂಸಿಕ್ ಬ್ಯಾಂಡ್, ‘ಸುರಭಿ ಎನ್ಸೆಂಬಲ್’ ಆರಂಭಿಸಿದರು. ಇಟಲಿ, ಪ್ಯಾಲೆಸ್ಟೀನಿಯ, ಮೆಕ್ಸಿಕೊ, ಅಮೆರಿಕ, ಆಫ್ರಿಕಾ, ಸ್ಪೇನ್ ಸೇರಿದಂತೆ ವಿಶ್ವದ ಬೇರೆ ಭಾಗಗಳ ಕಲಾವಿದರ ಬಳಗವೇ ಈ ಸಂಗೀತ ಬ್ಯಾಂಡ್‌ಗೆ ಜೊತೆಯಾಗಿದೆ. ವಿವಿಧ ಬಗೆಯ ನೃತ್ಯ ಕಲಾವಿದರೂ ತಂಡದಲ್ಲಿದ್ದಾರೆ. ಒಂದು ಕುಟುಂಬದಂತೆ ಬದುಕುವ ಧೈಯವನ್ನು ಇಟ್ಟುಕೊಂಡ ಈ ಬ್ಯಾಂಡ್ ಹನ್ನೆರಡು ವರ್ಷಗಳಿಂದ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದು, ಸಂಗೀತದ ಜೊತೆಗೆ ಸಾಮರಸ್ಯದ ಸೂತ್ರವನ್ನು ಜಗತ್ತಿನಾದ್ಯಂತ ಬೆಸೆಯುತ್ತಿದೆ. ಎರಡು ದಶಕಗಳಿಂದ ವಿಶ್ವದೆಲ್ಲೆಡೆ ಸಂಗೀತ ಕಚೇರಿಯನ್ನು ನಿರಂತರವಾಗಿ ನೀಡುತ್ತಾ ಬಂದಿದೆ.

ಇದರೊಂದಿಗೆ ಸರಸ್ವತಿ ಅವರು ಚಿಕಾಗೋದಲ್ಲಿದ್ದಾಗ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ವೀಣೆ ನುಡಿಸುತ್ತಾ, ಅವರೊಂದಿಗೆ ಒಂದಷ್ಟು ಸಮಯ ಕಳೆಯುವುದು, ಉದ್ಯಾನವನಕ್ಕೆ ತೆರಳಿ, ಅಲ್ಲಿದ್ದವರೆದುರು ವೀಣೆ ನುಡಿಸುವುದು… ಹೀಗೆ ಜನರೊಂದಿಗೆ ಸಂಗೀತ ಒಡನಾಟವನ್ನು ಬೆಸೆದುಕೊಂಡಿದ್ದರು. ಇದನ್ನು ಗಮನಿಸಿದ ಡಿಸ್ನಿ ಜಂಗಲ್ ಬುಕ್ ಥಿಯೇಟ್ರಿಕಲ್ ಪ್ರೊಡಕ್ಷನ್ ಸಂಸ್ಥೆ ಇವರನ್ನು ಗುರುತಿಸಿ, ಅವರ ರಂಗಪ್ರಯೋಗಗಳಿಗೆ ವೀಣೆಯನ್ನು ನುಡಿಸುವಂತೆ ಕೇಳಿದ್ದರು. ಡಿಸ್ನಿ ಜಂಗಲ್ ಬುಕ್‌ನ ಆರ್ಕೆಸ್ಟ್ರಾ ಸದಸ್ಯರಾದ ಸರಸ್ವತಿ ಅವರು ಅಂದು ನುಡಿಸಿದ ರಾಗ ಹೊಸ ಇತಿಹಾಸವನ್ನೇ ಬರೆಯಿತು.

ಮೈಸೂರಿನ ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಟರಿನಲ್ಲಿ ಕಳೆದ ಮಂಗಳವಾರ ನಡೆದ ಇವರ ತಂಡದ ಸಂಗೀತ ಕಚೇರಿ ಆರಂಭಕ್ಕೂ ಮುನ್ನ ಮೈಕ್ ಟೆಸ್ಟ್ ಮಾಡುತ್ತಿದ್ದ ಆಯೋಜಕರು ಸರಸ್ವತಿ ಅವರಲ್ಲಿ ‘ಏನಾದ್ರೂ ಮಾತಾಡಿ’ ಎಂದರು. ಸರಸ್ವತಿ ಅವರು ‘ಹಾಡೇ ಹೇಳ್ತೀನಿ ಬಿಡಿ’ ಎನ್ನುತ್ತಾ, ‘ಅನಿಸುತಿದೆ ಯಾಕೋ ಇಂದು’ ಗುನುಗುತ್ತಿದ್ದಂತೆಯೇ ತಂಡದವರೆಲ್ಲ ತಂತಮ್ಮ ವಾದ್ಯಗಳನ್ನು ನುಡಿಸಲು ಶುರುವಿಟ್ಟರು! ಕೂತ ಪ್ರೇಕ್ಷಕರೂ ಅಷ್ಟೆ, ಮುಂಗಾರು ಮಳೆಯ ನೆನಪಿನಲ್ಲಿ ಮೈದೂಗುತ್ತಾ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ‘ಸಂಗೀತ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುತ್ತದೆ’ ಎಂಬ ನಂಬಿಕೆ, ಭರವಸೆಯೊಂದಿಗೆ ಬದುಕುತ್ತಿರುವ ಸರಸ್ವತಿ ಅವರಿಗೆ ಸಂಗೀತವೇ ಉಸಿರು, ವೀಣೆಯೇ ಬದುಕು.

keerthisba2018@gmail.com

 

ಆಂದೋಲನ ಡೆಸ್ಕ್

Recent Posts

ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ

ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…

4 hours ago

ಅರಮನೆ ಫಲಪುಷ್ಪ ಪ್ರದರ್ಶನ | ಸಂಗೀತ ಸಂಜೆಯಲ್ಲಿ ಪ್ರೇಕ್ಷಕರು ತಲ್ಲೀನ

ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…

6 hours ago

ಎತ್ತಿನ ಗಾಡಿಗೆ ಸಾರಿಗೆ ಬಸ್‌ ಡಿಕ್ಕಿ : ಎತ್ತು ಸಾವು

ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…

6 hours ago

ಮುತ್ತತ್ತಿ : ಕಾವೇರಿ ನದಿ ಸೆಳೆತಕ್ಕೆ ಸಿಲುಕಿ ಯುವಕ ಸಾವು

ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…

6 hours ago

ಪೊಲೀಸ್‌ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ ದಲಿತ ಮಹಿಳೆಯರು : ಶಾಂತಿ ಸಭೆಯಲ್ಲಿ ಪಂಚ ಬೇಡಿಕೆ

ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…

6 hours ago

ಅಕ್ರಮ ವಿದ್ಯುತ್‌ ಸಂಪರ್ಕ: 31 ಪ್ರಕರಣ ದಾಖಲು, 2.17 ಲಕ್ಷ ರೂ. ದಂಡ

ಮೈಸೂರು : ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…

7 hours ago