ಆಂದೋಲನ ಪುರವಣಿ

ಕಾಡು ದೊಡ್ಡಿಯ ಬಿದಿರು ಅರಮನೆ

  ನನ್ನ ಕೈನಲ್ಲಿ ಮೊಬೈಲ್, ಕ್ಯಾಮೆರಾ ಬರುವ ಹೊತ್ತಿಗೆ, ದೊಡ್ಡಿಗಾಗಿ ಕಾಡಿಗೆ ಹೋಗುವುದೇ ನಿಂತು ಹೋಯಿತು. ಗೋವಿನ ಕತೆಯಲ್ಲಿ ಬರುವ ಗೊಲ್ಲಗೌಡನ ದೊಡ್ಡಿಯ ಸಾಲುಗಳನ್ನು ಕೇಳಿದರೆ ಈವತ್ತಿಗೂ ನನಗೆ ಕರುಳು ಕಿವುಚಿದಂತಾಗುತ್ತದೆ. ಮತ್ತೊಮ್ಮೆ ದೊಡ್ಡಿ ಜೀವನವನ್ನು ಅನುಭವಿಸಬೇಕೆಂಬ ನನ್ನ ಕನಸು ಕನಸಾಗಿೆುೀಂ ಉಳಿದುಬಿಟ್ಟಿದೆ. ಆಔಖ್ಕಿಆ

ಸ್ವಾಮಿ ಪೊನ್ನಾಚಿ swamyponnachi123@gmail.com

ಅಟ್ಟಣಿಗೆಗೆ ಕಟ್ಟಿದ್ದ ಬಿದಿರು ಯಾವಾಗಲೋ ಒಣಗಿದ್ದರಿಂದ ಅಲ್ಲಲ್ಲಿ ದುಂಬಿಗಳು ಕೊರೆದು ಒಳಕ್ಕೆ ಹೋಗುವುದು ಮತ್ತು ಹೊರಕ್ಕೆ ಬರುವುದು ಮಾಡುತ್ತಿದ್ದವು. ಬಿದಿರ ತಡಿಕೆ ಮೇಲೆ ಅಂಗಾತ ಮಲಗಿ ಅವು ಹೋಗಿ ಬರುವಾಗ ಮಾಡುತ್ತಿದ್ದ ದುಂಬಿನಾದವನ್ನು ಕೇಳುತ್ತಾ ಇರುವಾಗ ಅದು ಯಾವ ಮಾೆುಂಯಲ್ಲಿ ಮಂಪರು ಹತ್ತಿತೋ ಕಾಣೆ. ಜೋರಾಗಿ ಗಾಳಿ ಬೀಸಿದರೆ ಬಿದಿರು ಮೆಳೆ ಲಟ್ ಅಂತ ಮುರಿಯುವ ಸದ್ದು. ಲಂಟಾನ ಪೊದೆಯಲ್ಲಿ ಆವಾಗೊಮ್ಮೆ ಈವಾಗೊಮ್ಮೆ ಗುಡುಗುಡಿಯ ಹಕ್ಕಿಗಳು ಪುರ್ರೆಂದು ಓಡುವ ಸದ್ದು ಬಿಟ್ಟರೆ ಇಡೀ ಕಾಡು ನೀರವ ಮೌನ. ಯಾರೋ ಪಡ್ಲು ಎಳೆವ ಸದ್ದು. ಮಂಪರಿನಲ್ಲಿದ್ದ ನನಗೆ ಇದು ಕನಸಲ್ಲಿ ಆಗುತ್ತಿರುವ ಸದ್ದಂತೆ ಭಾಸವಾದರೂ ಚಪ್ಪಲಿಯ ಚಟ್‌ಪಟ್ ಸದ್ದು ಕೇಳಿದ ಮೇಲೆ, ದೊಡ್ಡಿಗೆ ಯಾರೋ ಬಂದಿದ್ದಾರೆಂಬುದು ಖಾತ್ರಿಯಾಯಿತು. ಎದ್ದು ಅಟ್ಟಣಿಗೆಯಿಂದಲೇ ಕೆಳಕ್ಕೆ ಬಗ್ಗಿ ನೋಡಿದೆ. ನಾನು ಎದ್ದಾಗ ತಡಿಕೆ ಸದ್ದು ಅವರಿಗೂ ಕೇಳಿರಬೇಕು. ತಮಿಳಿನಲ್ಲಿ ಇಂಗ್ ಯಾರ ಇರಿಕ್ಕಿಂಗೆ ಎಂದರು. ಯಾರಾದರೂ ದೊಡ್ಡಿಗೆ ಹಾಲು ಕೇಳಿಕೊಂಡು ಬರುತ್ತಾರೆ. ಹೆದರಬೇಡ ಎಂದು ದನ ಬಿಟ್ಟುಕೊಂಡು ಹೋಗುವಾಗ ಚಿಕ್ಕಪ್ಪ ಹೇಳಿೆುೀಂ ಹೋಗಿದ್ದ. ನಾನು ಸ್ವಾಮಿ ಎಂದೆ. ಸಾಮಿಯ ಪರವಾಯಿಲ್ಲ್ತ್ಯೈ ವಾಂಗ ಕಾಟಿಂಗ ಪಾಲ್ ಎಂದ. ಬಿದಿರ ಸೀಬಿನಿಂದ ಮಾಡಿದ್ದ ಒಂಟಿ ಏಣಿಯ ಕವಲುಗಳ ಮೇಲೆ ಆ ಕಡೆಗೊಂಡು ಕಾಲು ಈ ಕಡೆಗೊಂದು ಕಾಲು ಹಾಕುತ್ತಾ ಕೆಳಗಿಳಿದು ಬಂದೆ. ಇಬ್ಬರು ಸಣಕಲು ವ್ಯಕ್ತಿಗಳು ಪಾಚಿ ಬಣ್ಣದ ಬಟ್ಟೆ ತೊಟ್ಟುಕೊಂಡು ಹೆಗಲಿನಲ್ಲಿ ಉದ್ದವಾದ ತುಪಾಕಿ ನೇತು ಹಾಕಿಕೊಂಡಿದ್ದರು. ಒಲೆಕಲ್ಲಿನ ಮೇಲೆ ಇದ್ದ ಮಣ್ಣಿನ ಮಡಕೆಯತ್ತ ಕೈ ತೋರಿದೆ. ಅಲ್ಲಿದ್ದ ಅಷ್ಟೂ ಹಾಲನ್ನು ತಮ್ಮ ಬಳಿ ಇದ್ದ ಕ್ಯಾನ್‌ಗೆ ಸುರುವಿಕೊಂಡು ನನ್ನ ಕೈಗೆ ಇಪ್ಪತ್ತು ರೂಪಾಯಿ ತುರುಕಿ ಪೊಲೀಸರೇಟ ಸೊಲ್ಲಾದೆ, ಸೊನ್ನ ಕೊಂಡ್ರುವೆ ಎಂದು ಗದುರುತ್ತಾ ಹಾಗೇ ಪಡ್ಲು ಎಳೆದುಕೊಂಡು ಮಾಮೂಲಿಯಂತೆ ಹೊರಟು ಹೋದರು. ಮೊದಲೇ ಚಿಕ್ಕಪ್ಪ ಹೇಳಿ ಹೋಗಿದ್ದರಿಂದ ನನಗೆ ಭಯವಾಗಲೀ, ಆಶ್ಚರ್ಯವಾಗಲಿ ಆಗಲಿಲ್ಲ.
ಹೌದು! ಸರಿಯಾಗಿ ೨೨ ವರ್ಷಗಳ ಹಿಂದೆ ನಾನು ಒಂಬತ್ತನೇ ತರಗತಿ ಓದುವಾಗ ಪಂಚಲಾಣೆ ಕಾಡಿನ ದೊಡ್ಡಿಯಲ್ಲಿ ವೀರಪ್ಪನ್ ಸಹಚರರನ್ನು ಬಲು ಹತ್ತಿರದಿಂದ ನೋಡಿದೆ. ಮೂರೋ ನಾಲ್ಕನೇ ತರಗತಿಯಲ್ಲಿದ್ದಾಗ ವೀರಪ್ಪನ್ ನಮ್ಮ ತೋಟಕ್ಕೆ ಬಂದು ನಮ್ಮ ತಾತನ ಕೈಯಿಂದ ಎಳನೀರು ಕೊಚ್ಚಿಸಿಕೊಂಡು ಕುಡಿಯುತ್ತಿದ್ದುದನ್ನು ದೂರದಲ್ಲೇ ನಿಂತು ನೋಡಿದುದನ್ನು ಬಿಟ್ಟರೆ ಅವನ ಸಹಚರರನ್ನು ಈಗಲೇ ನೋಡುತ್ತಿರುವುದು. ಅವರು ಹೋದ ಮೇಲೆ ಮಟಮಟ ಮಧ್ಯಾಹ್ನ ನನಗೆ ಭಯ ಶುರುವಾಯಿತು. ಮುಸಗಳು ಕಿಚಕಿಚ ಅಂತ ಕಿರುಚುತ್ತಾ ಮರದಿಂದ ಮರಕ್ಕೆ ನೆಗೆಯುವುದಕ್ಕೆ ಶುರು ಮಾಡಿದ್ದವು. ಬಹುಶಃ ಪಿಕಳಾರ ಹಕ್ಕಿ ಎಂದು ಕಾಣಿಸುತ್ತೆ. ಮಗು ಅತ್ತ ರೀತಿಯಲ್ಲಿ ಧ್ವನಿ ಹೊರಡಿಸುತ್ತಾ ಕೂಗುತಿತ್ತು. ಭಯ ಯಾಕಾಯಿತೆಂದು ಒಂದೇ ಕಾರಣ ಕೊಡಲಾಗುತ್ತಿಲ್ಲ. ಒಂದೋ ರಾಗಿ ಹಿಟ್ಟನ್ನು, ಅಕ್ಕಿ, ಬೇಳೆ, ಖಾರದಪುಡಿಯನ್ನು ಕದಿಯಲು ಬರುವ ಕಳ್ಳರ ಗುಂಪು. ಗುಂಪೆಂದರೆ ಹತ್ತಾರು ಮಂದಿಯಲ್ಲ. ಇಬ್ಬರು ಅಥವಾ ಮೂರು ಜನ. ಒಂದೆರಡು ಕೇಜಿ ಅಕಿ, ಬೇಳೆಗೆ ಬೆಜ್ಜಲಾಣೆ ದೊಡ್ಡಿಯಲ್ಲಿ ಒಬ್ಬನ ತಲೆ ಜಜ್ಜಿ ಹೋಗಿದ್ದರು. ಅಕಸ್ಮಾತ್ ಅವರು ಬಂದರೆ ಏನು ಮಾಡುವುದು. ಕೆಳಗಡೆ ಇಳಿಯಲೇ ಬೇಡ, ಸುಮ್ಮನೆ ಮೇಲೆ ಕುಳಿತುಕೋ, ಯಾರು ಏನೇ ಎತ್ತಿಕೊಂಡು ಹೋದರೂ ಸುಮ್ಮನಿರು ಎಂದು ಚಿಕ್ಕಪ್ಪ ಹೇಳಿದ್ದರು.

ಮತ್ತೊಂದು ದೆವ್ವದ್ದು. ಮಟಮಟ ಮಧ್ಯಾಹ್ನ ಮನುಷ್ಯರ ಹಾಗೆ ಕೂಗಿ ಅಲ್ಲಿಗೆ ಬಾ, ಇಲ್ಲಿಗೆ ಬಾ ಎಂದು ದೊಡ್ಡಿಯಿಂದ ಈಚೆ ಕರೆದು ದಾರಿ ತಪ್ಪಿಸಿ ಬಿಡುತ್ತಂತೆ. ಮನುಷ್ಯನನ್ನು ನೋಡದ ಹೊರತು ಯಾರ ಕೂಗಿಗೂ ಹೂಂ ಗುಟ್ಟಬಾರದೆಂದು ದೊಡ್ಡಿಯವರು ಹೇಳುತ್ತಿದ್ದ ಮಾತುಗಳನ್ನು ಜ್ಞಾಪಿಸಿಕೊಂಡೆ. ಆದರೆ ಇದು ಶುದ್ಧ ಸುಳ್ಳು ಎಂದು ನನಗೆ ಆ ಕಾಲದಲ್ಲಿ ಗೊತ್ತಾಗಿ ಹೋಗಿತ್ತು. ಕಾಡಿನಲ್ಲಿ ಚರ್ಮಕ್ಕೆ ಸೋಕಿದರೆ ಉರಿ ಬರಿಸುವ ತುರಿಶಿನ ಎಂಬ ಗಿಡವೊಂದಿದೆ. ಥೇಟ್ ಅದರಂತೆೆುೀಂ ಹೋಲುವ ದಾರಿ ತಪ್ಪಿಸುವ ಗಿಡವಿದೆ (ಇದರ ಕುರಿತು ಒಂದು ಕಥೆಯನ್ನೇ ಬರೆದಿರುವೆ). ಯಾವುದೋ ಗ್ಯಾನದಲ್ಲಿ ಕಾಡಿನಲ್ಲಿ ತಿರುಗಾಡುವಾಗ ಗೊತ್ತಿಲ್ಲದೆ ಈ ಎಲೆಯನ್ನು ಕಿತ್ತು ಹಿಚುಕಿ ಮೂಸಿದಾಗ ಅದರಲ್ಲಿರುವ ರಸಾಯನಿಕ ವಸ್ತುವಿಗೆ ಪ್ರಜ್ಞೆ ತಪ್ಪಿದಂತಾಗಿ ನಾವು ಎಲ್ಲಿದ್ದೇವೆ ಎತ್ತ ಹೋಗುತ್ತಿದ್ದೇವೆ ಎಂಬುದರ ಅರಿವಿಲ್ಲದೆ ಬಹಳ ಹೊತ್ತು ಅಲೆದಾಡಿದ ಮೇಲೆ ವಾಸ್ತವದ ಅರಿವಾಗುವುದುಂಟು. ವಾಪಸ್ ಬರಲು ಕಾಡಿನ ದಾರಿ ಗೊತ್ತಿಲ್ಲದ ಎಷ್ಟೋ ಮಂದಿ ಅತ್ತಿಂದಿತ್ತ ಅಲೆದು ಅಲೆದು ಸಾಕಾಗಿ ಕೊನೆಗೆ ಹೊಳೆಕೆರೆಗೆ ಹೋಗಿ ಅಲ್ಲಿಂದ ಗುರುತು ಹಿಡಿದುಕೊಂಡು ಊರಿಗೆ ಬರುತಿದ್ದರು. ಒಬ್ಬೊಬ್ಬರೇ ಇದ್ದಾಗ ಈಚೆ ಬರದಿರಲಿ ಎನ್ನುವ ಕಾರಣಕ್ಕೆ ಈ ದೆವ್ವದ ಕಥೆ ಹುಟ್ಟು ಹಾಕಿದ್ದಾರೆಂದು ಚೆನ್ನಾಗಿ ಗೊತ್ತಿದ್ದರೂ ಕೂಡ ಯಾಕೋ ಧೈರ್ಯವಾಗಿರಲು ಆಗುತ್ತಿರಲಿಲ್ಲ. ಎತ್ತರವಾದ ನಾಲ್ಕು ಕವೆಗಳ ಮೇಲೆ ಅಟ್ಟಣಿಗೆ ಮಾಡಿದ್ದು ಸುತ್ತ ಬೇಲಿ ಇರುವುದರಿಂದ ಕಿರುಬ ಬಂದು ಎತ್ತಿಕೊಂಡು ಹೋಗುತ್ತದೆಂಬ ಭಯ ಇರಲಿಲ್ಲ. ಅಟ್ಟಣಿಗೆಯ ಕೆಳಗೆ ಸದಾ ಮೋಟಿನಲ್ಲಿ ಬೆಂಕಿ ಉರಿಯುತ್ತಿರುತ್ತದೆ. ಬೆಂಕಿ ಇಲ್ಲ ಎಂದರೂ, ನಿಗಿನಿಗಿ ಕೆಂಡವಂತೂ ಅರಳಿಕೊಂಡಿರುತ್ತದೆ. ಹಾಗಾಗಿ ಕಿರುಬ, ದೊಡ್ಡನಾಯಿ ಯಾವುದೇ ಕಾರಣಕ್ಕೂ ದೊಡ್ಡಿಯೊಳಗೆ ಬರುವುದಿಲ್ಲ.

ಅವು ಹಾಗೆ ಕಾಲಿಡದಿರುವುದಕ್ಕೆ ಮತ್ತೊಂದು ಕಾರಣವೂ ಇದೆ. ಅದು ಎಷ್ಟು ದಿಟವೋ ಸುಳ್ಳೋ ಗೊತ್ತಿಲ್ಲ. ಆದರೆ ದೊಡ್ಡಿ ಮಾಡಿಕೊಂಡು ಕಾಡಿನಲ್ಲಿರುವ ಎಲ್ಲರೂ ಕೂಡ ಇಂತಹದೊಂದು ದಿಗ್ಬಂಧನವನ್ನು ಚಾಚೂತಪ್ಪದೆ ಪಾಲಿಸಿರುತ್ತಾರೆ. ಗೊಟ್ಟಿ ಮರದ ತೊಗಟೆಯನ್ನು ದೊಡ್ಡಿ ಯಾವ ಆಕಾರದಲ್ಲಿರುವುದೋ ಹಾಗೇ ಕತ್ತರಿಸಿ ನಾಲ್ಕೂ ದಿಕ್ಕಿನಲ್ಲಿಟ್ಟು ಪೂಜೆ ಮಾಡುತ್ತಾರೆ. ಹೀಗೆ ಪೂಜೆ ಮಾಡಿ ಬಿಟ್ಟರೆ ಯಾವ ಕಿರುಬ ಮತ್ತು ದೊಡ್ಡನಾಯಿಯೂ ದನ ಕರುಗಳನ್ನು ಹೊತ್ತೊಯ್ಯಲು ದೊಡ್ಡಿ ಒಳಗೆ ನುಗ್ಗುವುದಿಲ್ಲ ಎಂಬುದು ದೊಡ್ಡಿ ಶುರುವಾದಾಗಿನಿಂದ ನಂಬಿಕೊಂಡು ಬಂದಿದ್ದ ನಂಬಿಕೆ. ಆದರೆ ಈ ಬಡ್ಡೀಮಗಂದು ಆನೆ ಇದ್ಯಲ್ಲ ಅದನ್ನ ಮಾತ್ರ ಯಾವ ದಿಗ್ಬಂಧನ, ಮಂತ್ರ ತಂತ್ರವೂ ತಡೆಯುವುದಿಲ್ಲ. ದೊಡ್ಡಿಯ ಬೇಲಿಯನ್ನು ಹಪ್ಪಳ ನುರುಕಿದ ಹಾಗೆ ನುರುಕಿ, ಅಟ್ಟಣಿಗೆಯ ಹತ್ತಿರವೇ ಬಂದು ಅದರ ಕವೆಗೆ ತನ್ನ ಕೆರೆತದ ಬೆನ್ನು ತೀಡುತ್ತಾ ನಿಂತುಕೊಳ್ಳುತ್ತದೆ. ಅಟ್ಟಣಿಗೆ ಕವೆ ಭದ್ರವಾಗಿತ್ತೋ ಬಚಾವ್! ಇಲ್ಲ ಒಂದೇ ಸಲಕ್ಕೆ ನೀರಿನ ಟ್ಯಾಂಕ್ ನೆಲಕ್ಕೆ ಉರುಳಿದಂತೆ ಇಡೀ ಬಿದಿರಿನ ಅಟ್ಟಣಿಗೆ ಕೆಳಕ್ಕೆ ಉದುರಿ ಬಿಡುತ್ತದೆ. ನಾನಿರುವ ಅಟ್ಟಣಿಗೆ ಬಸಿರಿ ಮರದ್ದು. ಅದು ಆಗಲೇ ಚಿಗುರೊಡೆದು ಮರವಾಗೇ ಬಿಟ್ಟಿದೆ. ಸದ್ಯಕ್ಕೆ ಮುರಿದು ಬೀಳುವುದಿಲ್ಲ. ಈ ಆನೆ ಮಾಡುವ ಹಾವಳಿಯಿಂದ ತಪ್ಪಿಸಿಕೊಳ್ಳಲು ಮೂರು ದೊಡ್ಡ ಮರ ಒಟ್ಟಿಗೆ ಇರುವ ಜಾಗದಲ್ಲಿ ಮರಗಳ ಕವಲಿಗೇ ಬಿದಿರು ಬಂಬುಗಳ ಜೋಡಿಸಿ ಅಟ್ಟಣಿ ಮಾಡಿಕೊಂಡಿರುತ್ತಾರೆ. ಒಂದೋ ಎರಡೋ ಸಲ ಹೀಗೆ ಆಗಿರುವುದು ಬಿಟ್ಟರೆ ಉಳಿದಂತೆ ಯಾವ ಅಟ್ಟಣಿಗೆಯನ್ನೂ ಆನೆ ಉರುಳಿಸಿದ ಉದಾಹರಣೆಗಳಿಲ್ಲ. ಅಟ್ಟಣಿಗೆ ಹಾಕುವ ಹಂಚಿ ಒಣಗಿ ಹೋಗಿರುವುದರಿಂದ ಕಾಡಿನಲ್ಲಿ ಹಸೀ ಸೊಪ್ಪು ಯಥೇಚ್ಛವಾಗಿ ಸಿಗುವುದರಿಂದ ಅದರ ತಂಟೆಗೆ ಹೆಚ್ಚು ಬರುವುದಿಲ್ಲ.

ದೊಡ್ಡಿಯಲ್ಲಿ ತಂಗಿರುವವರಿಗೆ ದನ ಕರುಗಳು ದೂರದಲ್ಲಿರುವಾಗಲೇ ಗೊತ್ತಾಗಿ ಬಿಡುತ್ತದೆ. ನಮ್ಮ ಚಿಕ್ಕಪ್ಪ ಎಲ್ಲರಿಗಿಂತ ಮೊದಲೇ ಬಂದು ಪಡ್ಲು ತೆಗೆದು, ತೇಗದ ಮರದ ಜೊನ್ನೆಯಲ್ಲಿ ತಂದಿದ್ದ ಕೋಲು ಜೇನು ಕೊಟ್ಟರು. ಉಳಿದ ಜತೆಗಾರರಿಗೆ ಅಡುಗೆ ಮಾಡಲು ಬೆಂಕಿ ಹತ್ತಿಸಿ, ಮಡಿಕೆ ಹೆಗಲಿಗೇರಿಸಿ ನೀರು ತರಲು ಹೊರಟರು. ನೀರೆಂದರೆ ಸುಲಭಕ್ಕೆ ಹತ್ತಿರದಲ್ಲೇ ಇರುವುದಿಲ್ಲ. ಬರೋಬ್ಬರಿ ಒಂದು ಒಂದೂವರೆ ಕಿಲೋಮೀಟರ್ ನಡೆದು ದೂರದಲ್ಲಿ ಸಣ್ಣಗೆ ಜಿನುಗುವ ಹಳ್ಳದಿಂದ ಹೊತ್ತು ತರಬೇಕು. ಎರಡು ಸಲ ತಂದು ಮಡಿಕೆಗೆ ತುಂಬಿ ಬಿಟ್ಟರೆ ಬೆಳಿಗ್ಗೆ ತನಕ ನಾಕು ಜನರ ತಂಡಕ್ಕೆ ಅದು ಸಾಕು. ಹತ್ತಿರದಲ್ಲೇ ದೊಡ್ಡಿ ಮಾಡಿದರೆ ನೀರು ಕುಡಿಯಲು ಬರುವ ಕಾಡು ಪ್ರಾಣಿಗಳಿಂದ ದನಕರುಗಳಿಗೆ ತೊಂದರೆಯಾಗುತ್ತದೆಂಬ ಉದ್ದೇಶದಿಂದ ದೂರದಲ್ಲಿ ದೊಡ್ಡಿ ಕಟ್ಟುತ್ತಿದ್ದರು. ಅದಾಗಿಯೂ ಹಳ್ಳಕ್ಕೆ ನೀರು ಕುಡಿಯಲು ಸಂಜೆ ಹೊತ್ತಿಗೆ ಆನೆಗಳು ಬರುವುದರಿಂದ ಅವು ನೀರು ತೆಗೆದುಕೊಳ್ಳಲು ಇವರಿಗೆ ದಾರಿ ಕೊಡದೆ ಎಷ್ಟೋ ಸಲ ರಾತ್ರಿಯಲ್ಲಿ ಎವರೆಡಿ ಸೆಲ್ಲಿನ ಬ್ಯಾಟರಿಯಲ್ಲಿ ಬೇಗ ಸೆಲ್ಲು ಹಾಳಾಗಬಾರದೆಂದು ಲೈಟು ಆಫ್ ಆನ್ ಮಾಡುತ್ತಾ ನೀರು ತರುತ್ತಿದ್ದರು. ಒಮ್ಮೊಮ್ಮೆ ನೀರು ಖಾಲಿಯಾಗಿ ರಾತ್ರಿ ಬಾಯಾರಿಕೆಯಾದರೆ ಮಡಕೆಯಲ್ಲಿರುವ ಕಾಯಿಸಿ ಹೆಪ್ಪು ಹಾಕಿದ್ದ ಹಾಲನ್ನೇ ಚೊಂಬುಗಟ್ಟಲೇ ಕುಡಿದು ಕಾಲ ಕಳೆಯುತ್ತಿದ್ದರು. ನೂರೈವತ್ತರಿಂದ ಇನ್ನೂರರವರೆಗೆ ದನಗಳು ಇರುತ್ತಿದ್ದುದರಿಂದ ಕಡಿಮೆ ಎಂದರೂ ಹತ್ತರಿಂದ ಇಪ್ಪತ್ತು ಲೀಟರ್ ಹಾಲು ಸಿಕ್ಕುತಿತ್ತು. ಎಲ್ಲಾ ಕರುವಿನ ಹಸುಗಳಲ್ಲಿ ಸ್ವಲ್ಪ ಸ್ವಲ್ಪ ಹಾಲು ಕರೆದುಕೊಂಡು ಮನಸೋ ಇಚ್ಛೆ ಸಾಕು ಬೇಕು ಅನ್ನುವಷ್ಟು ಕುಡಿದು, ಉಳಿದ ಹಾಲಿಗೆ ಬೆಪ್ಪಾಲೆ ಮರದ ತೊಗಟೆ ಜಜ್ಜಿ ಹೆಪ್ಪಿನಂತೆ ಉಪೋಂಗಿಸಿ ಮೊಸರು ಮಾಡಿಕೊಳ್ಳುತ್ತಿದ್ದರು. ಬೆಳಿಗ್ಗೆ ಕೇಕಿನಂತೆ ಗಟ್ಟಿಯಾಗುತ್ತಿದ್ದ ಮೊಸರನ್ನು ತೇಗದೆಲೆಗೆ ಬಡಿಸಿಕೊಂಡು ರಾತ್ರಿ ಮಾಡಿದ ಮುದ್ದೆಗೆ ಕಲಸಿಕೊಂಡು ಕುಡಿದರೆ ಸ್ವರ್ಗ ಮೂರೇ ಗೇಣು. ತಿನ್ನಲು ಜನವಿಲ್ಲದೆ ಎಷ್ಟೋ ಸಲ ಮಡಕೆಗಟ್ಟಲೇ ಮೊಸರನ್ನು ತಿಪ್ಪೆಗೆ ಚೆಲ್ಲಿ ಮುಚ್ಚಿಬಿಡುತ್ತಿದ್ದರು.
ನೋಡ ನೋಡುತ್ತಿದ್ದಂತೇ ದೊಡ್ಡಿಯ ಒಳಗೆ ದನಗಳು ತುಂಬಿಕೊಂಡವು. ಅಟ್ಟಣಿಗೆ ಪಕ್ಕ ಪುಟ್ಟ ಕರುಗಳಿಗಾಗಿ ಮಾಡಿಕೊಂಡಿದ್ದ ಕೊಟ್ಟಿಗೆಯಿಂದ ಕರುಗಳನ್ನು ಬಿಟ್ಟು ಹಾಲು ಕರೆದದ್ದಾಯಿತು. ಸಂಜೆ ಹೊತ್ತು ಹೆಗ್ಗಡಜದಂತಹ ಕೀಟವೊಂದು ತನ್ನ ಉದ್ದನೆ ಸೂಜಿಯಂತ ಮೂತಿಯಿಂದ ಕೈ ಕಾಲುಗಳನ್ನೆಲ್ಲಾ ಕಡಿಯುವುದಕ್ಕೆ ಶುರು ಮಾಡಿದ್ದವು. ಅವು ಕಡಿದ ಜಾಗದಲ್ಲಿ ಬೊಬ್ಬೆ ಬರುವುದಕ್ಕೆ ಶುರುವಾಯಿತು. ಉರಿ ತಡೆಯಲಾರದೆ ಕೆರೆದುಕೊಳ್ಳುತ್ತಿರಬೇಕಾದರೆ ನಿನಗೆ ಇದೆಲ್ಲಾ ಬೇಕಿತ್ತಾ ಬೆಳಿಗ್ಗೆ ಬೇಡ ಬೇಡ ಅಂದ್ರೂ, ಊರಿಂದ ಹೊರಟೆ ಒಂದು ವಾರ ಇಸ್ಕೂಲಿಗೆ ಹೋಗಬೇಕಾಯ್ತದೆ ಅಂತ ದೊಡ್ಡಿಗೆ ಬಂದ್ಯಾ? ಎಂದು ನನ್ನ ರೇಗಿಸುತ್ತಾ ಇದ್ದ ಸೋಲಿಗರ ನಾಗಣ್ಣ, ಒಂದು ಜಾತಿಯ ಸೊಪ್ಪು ತಂದು ಹಿಚುಕಿ ರಸ ಬರಿಸಿ ನನ್ನ ಕೈ ಕಾಲುಗಳಿಗೆಲ್ಲಾ ಹಚ್ಚಿದರು. ಆ ಹೆಗ್ಗಡಜದಂತ ಸೊಳ್ಳೆ ನನ್ನ ಕಚ್ಚುವುದು ತಪ್ಪಿತು. ನೀರು ತಂದ ಚಿಕ್ಕಪ್ಪ ಮುದ್ದೆ ಮಾಡಲು ಇದ್ದ ಮಡಿಕೆಗೆ ನೀರಿಟ್ಟರು. ನಮ್ಮ ಚಿಕ್ಕಪ್ಪನ ಜತೆ ಮೂರು ಜನ ಸೋಲಿಗರೇ ಇದ್ದುದರಿಂದ ಅಡುಗೆ ಕರ್ತವ್ಯವೆಲ್ಲ ಚಿಕ್ಕಪ್ಪನ ಮೇಲೇ ಬಿದ್ದಿತ್ತು. ಉಳಿದ ಕೆಲಸಗಳನ್ನು ಅವರು ನೋಡಿಕೊಳ್ಳುತ್ತಿದ್ದರು. ಅಲ್ಲೇ ಬೆಳೆದಿದ್ದ ಕಾರೇ ಸೊಪ್ಪನ್ನು ಬಿಡಿಸಿಕೊಂಡ ಚಿಕ್ಕಪ್ಪ, ಒಂದು ಮಡಕೆ ಹಾಲಿಗೆ ಉಪ್ಪು, ಖಾರ ಹಾಕಿ ಕಾಯಿಸಿ ರಾಗಿ ಹಿಟ್ಟು ಉದುರಿಸಿ ಕಾರೇ ಸೊಪ್ಪು ಬೇಯಿಸಿಕೊಂಡು ಅದರೊಳಗೆ ಹಾಕಿದರು. ರುಚಿಕರವಾದ ಹಾಲುಳಿ ಸಿದ್ಧವಾಗಿತ್ತು. ಅಕ್ಕಿ ಹೆಚ್ಚು ಸಿಗುತ್ತಿರಲಿಲ್ಲವಾದ್ದರಿಂದ ವಾರಕ್ಕೊಮ್ಮೆ ಅನ್ನ ಮಾಡುತ್ತಿದ್ದರು. ಉಳಿದ ಎರಡೂ ಹೊತ್ತು ರಾಗಿ ಮುದ್ದೆ, ಹಾಲುಳಿ, ಸಾಂಬಾರ್ ಬಿಟ್ಟರೆ ಕಾಡಿನಲ್ಲಿ ಸಿಗುವ ಸೀಗೇಸೊಪ್ಪು, ಸಳ್ಳೆಸೊಪ್ಪು, ಗುಳಕಾಯಿ ಮುಂತಾದುವುಗಳಿಂದ ಸಾಂಬಾರ್ ಮಾಡುತ್ತಿದ್ದರು. ವಾರಕ್ಕೊಮ್ಮೆ ಸೋಮವಾರ ಯಾರಾದರೊಬ್ಬರು ಸರದಿಯಂತೆ ಊರಿಗೆ ಹೋಗಿ ನಾಲ್ಕೂ ಜನರ ಮನೆಗಳಿಂದ ರಾಗಿಹಿಟ್ಟು, ಬೆಲ್ಲ, ಬೀಡಿ, ಬೆಂಕಿಪೊಟ್ಟಣ, ಬ್ಯಾಟರಿ ಸೆಲ್ಲು, ಗೋಣಿ ಚೀಲಗಳನ್ನು ತರುತ್ತಿದ್ದರು. ವಾರದ ನಡುವೆ ಅನಿರೀಕ್ಷಿತ ಅತಿಥಿಗಳಿಂದ ಅಥವಾ ವೀರಪ್ಪನ್ ಕಡೆಯವರು ಇಲ್ಲಾ ಎಸ್‌ಟಿಎಫ್ ತಂಡದವರು ಬಂದರೆ ಅಷ್ಟೂ ಸಾಮಾನುಗಳು ಖಾಲಿಯಾಗಿ ಬಿಡುತ್ತಿದ್ದವು. ಅಕ್ಕಪಕ್ಕದ ದೊಡ್ಡಿಯವರಿಂದ ಆಗೆಲ್ಲಾ ಕಡ ಇಸಗೊಂಡು ಬರುತ್ತಿದ್ದರು. ಬೆಂಕಿಯ ಹೊಂಡದ ಸುತ್ತಾ ಕುಳಿತುಕೊಂಡು ತೇಗದೆಲೆಗಳ ಮೇಲೆ ಮುದ್ದೆ ಹಾಲುಳಿ ಬಡಿಸಿಕೊಂಡು ತಿಂದೆವು. ಈವತ್ತಿನ ಯಾವ ಫೈವ್ ಸ್ಟಾರ್ ಹೋಟೆಲಿನ ಮೃಷ್ಟಾನ್ನವೂ ಕೂಡ ಅದರ ಮುಂದೆ ಸಮವಾಗಲಾರದು. ಆ ತಿಂಗಳ ಬೆಳಕಿನಲ್ಲಿ ಬೆಂಕಿ ಹೊಂಡದ ಎದುರು ಲೋಕಾಭಿರಾಮವಾಗಿ ಊರಿನ ಸುದ್ದಿಗಳನ್ನು ಮಾತಾಡಿಕೊಳ್ಳುತ್ತಾ ಬಿಸಿಬಿಸಿ ರಾಗಿಮುದ್ದೆಯ ತುತ್ತನ್ನು ಹಾಲುಳಿಗೆ ಅಜ್ಜಿ ಗುಳುಂ ಎನ್ನಿಸಿದರೆ ಅದರ ಮಜವೇ ಬೇರೆ. ಈವತ್ತಿನವರೆಗೂ ನನಗೆ ಆ ತರಹದ ಒಂದು ರೋಮಾಂಚನ ಅನುಭವ ಉಂಟಾಗಲೇ ಇಲ್ಲ. ದುರದೃಷ್ಟವಶಾತ್ ಅರಣ್ಯ ಇಲಾಖೆಯವರ ಕಟ್ಟುನಿಟ್ಟಿನ ಕಾನೂನಿಂದಾಗಿ, ದೊಡ್ಡಿಯನ್ನು ಯಾರೂ ಮಾಡಿಕೊಳ್ಳದಂತಾಗಿ ಮತ್ತೆ ದೊಡ್ಡಿಗೆ ಹೋಗುವ ಪ್ರಸಂಗವೇ ಬರಲಾಗದಿದ್ದುದು ಮಾತ್ರ ನನ್ನ ಜೀವನದ ದುರಂತವೆಂದೇ ಭಾವಿಸುತ್ತೇನೆ.

ಎಲ್ಲರದ್ದೂ ಊಟವಾದ ಮೇಲೆ ನಾಕು ಜನವೂ ಬೀಡಿ ಹಚ್ಚಿದರು. ನಾಗಣ್ಣ ನನ್ನೆಡೆಗೆ ಒಂದು ಬೀಡಿ ನೀಡುತ್ತಾ, ತಗೊಪ್ಪಾ ಕಂದ ಒಂದು ದಮ್ ಎಳಿ ಚಳಿಗೆ ಸರೋಯ್ತದೆ ಎಂದು ಕಿಚಾಯಿಸಿದ. ಚಿಕ್ಕಪ್ಪ ಅವನನ್ನು ಗದರಿ ಓದೋ ಹೈಕ್ಳುನ್ನೆಲ್ಲಾ ಹಾಳು ಮಾಡ್ಬೇಡ ಸುಮ್ಮನಿರು ಎಂದು ನನ್ನನ್ನು ಮೇಲೆ ಹೋಗಿ ಮಲಗುವಂತೆ ಹೇಳಿದರು. ದೂರದಲ್ಲಿ ಅಲ್ಲಲ್ಲಿ ಬೆಂಕಿ ಉರಿಸುತ್ತಿರುವ ದೊಡ್ಡಿಗಳು ಕಂಡವು. ಬಹಳ ಹೊತ್ತಿನವರೆಗೂ ನಾಗಣ್ಣ ಹೇಳುತ್ತಿದ್ದ ಪೋಲಿ ಜೋಕುಗಳಿಗೆ ಚಿಕ್ಕಪ್ಪ, ಮಾರ ಎಲ್ಲಾ ಬಿದ್ದು ಬಿದ್ದು ನಗುತ್ತಾ ಇದ್ದರು. ಬೆಂಕಿ ಉಕ್ಕಡ ಜೋರಾಗಿ ಇಡೀ ಅಟ್ಟಣಿಗೆ ಬೆಚ್ಚಗಾಗತೊಡಗಿತು. ಅದ್ಯಾವ ಘಳಿಗೆಯಲ್ಲಿ ನಿದ್ದೆ ಹತ್ತಿತೋ ಗೊತ್ತಾಗಲಿಲ್ಲ.

ಮೊದಲೆಲ್ಲಾ ನಮ್ಮೂರಿನಂತಹ ಕಾಡಂಚಿನ ಊರುಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ದನಕರುಗಳನ್ನು ಹೆಚ್ಚೆಚ್ಚು ಸಾಕುತ್ತಿದ್ದುದರಿಂದ ಊರಿನಲ್ಲಿ ಹೊಲಗಳಿಗೆ ಬೆಳೆ ಹಾಕಿದ ಸಮಯದಲ್ಲಿ ಅಂದರೆ ಜುಲೈ ತಿಂಗಳಿಗೆ ಸರಿಯಾಗಿ ನಾಲ್ಕೆ ದು ಜನಗಳ ಗುಂಪು ಮಾಡಿಕೊಂಡು ತಮ್ಮ ದನಕರುಗಳನ್ನು ಕಾಡಿಗೆ ಹೊಡೆದುಕೊಂಡು ಹೋಗಿ ಅಲ್ಲೇ ಸಂಕ್ರಾಂತಿ ಬರುವವರೆಗೂ ಬೀಡು ಬಿಡುತ್ತಿದ್ದರು. ಊರಿನಿಂದ ಹತ್ತಾರು ಮೈಲಿ ದೂರದಲ್ಲಿ ಕಾಡಿನ ಆಯಕಟ್ಟಿನ ಜಾಗಗಳಲ್ಲಿ ದೊಡ್ಡಿ ಮಾಡಿಕೊಂಡು ಕಾಲ ಕಳೆಯುತ್ತಿದ್ದರು. ಆಗೆಲ್ಲಾ ಅರಣ್ಯ ಇಲಾಖೆಯವರು ಇದಕ್ಕೆ ಅಡ್ಡಿ ಪಡಿಸುತ್ತಿರಲಿಲ್ಲ. ಪಂಚಲಾಣೆ, ಬೆಜ್ಜಲಾಣೆ, ಕೆಂಬರೆ, ನಾಮದರೆ ಬಯಲು, ದೇವಾಲೆ ಗುಡಿಬಯಲು… ಹೀಗೇ ನಮ್ಮೂರ ಕಾಡ ವ್ಯಾಪ್ತಿಯಲ್ಲಿ ಎಪ್ಪತ್ತೊಂದು ದೊಡ್ಡಿಗಳಿರುತ್ತಿದ್ದವು. ಊರಿನಿಂದ ವಾರಕ್ಕೊಮ್ಮೆ ಅಗತ್ಯವಾಗಿ ಬೇಕಾಗುವ ಬೆಲ್ಲ, ಟೀ ಪುಡಿ, ರಾಗಿಹಿಟ್ಟು, ಅಕ್ಕಿ, ಬೆಂಕಿ ಪೊಟ್ಟಣ, ಬೀಡಿ, ಬ್ಯಾಟರಿ ಸೆಲ್ಲು ಮುಂತಾದವುಗಳನ್ನು ಆಯಾ ಮನೆಯವರು ಭಾನುವಾರವೇ ಸಿದ್ಧಪಡಿಸಿಟ್ಟುಕೊಂಡಿದ್ದರೆ, ಸರದಿಯ ಆಳು ಬಂದು ಅವುಗಳನ್ನು ದೊಡ್ಡಿಗೆ ತೆಗೆದುಕೊಂಡು ಹೋಗುತ್ತಿದ್ದ. ಹಾಗಂತ ದೊಡ್ಡಿಜೀವನ ಹೇಳಿಕೊಳ್ಳುವಷ್ಟೂ ಸುಖಕರವಾಗಿಯೂ ಇರುತ್ತಿರಲಿಲ್ಲ. ಕಿರುಬ, ದೊಡ್ಡನಾಯಿ, ಆನೆಗಳ ಕಾಟದ ಜತೆಗೆ ವೀರಪ್ಪನ್ ತಂಡದವರಿಗೆ ಬೇಕಾದ ಸಾಮಾನುಗಳನ್ನು, ಹಾಲು ಮೊಸರನ್ನೂ ಕದ್ದೂ ಮುಚ್ಚಿ ಕೊಡಬೇಕಾಗಿತ್ತು. ವಿರೋಧಿಸಿದರೆ ಗೊತ್ತಲ್ಲ ವೀರಪ್ಪನ್ ಬಳಿ ಮುಲಾಜೇ ಇರುತ್ತಿರಲಿಲ್ಲ. ಈ ವೀರಪ್ಪನ್‌ನನ್ನು ಹುಡುಕಿ ಹೊರಡುತ್ತಿದ್ದ ಈ ಎಸ್‌ಟಿಎಫ್‌ನವರು ಕಾಡು ತಿರುಗಲು ಆಗದೇ ದೊಡ್ಡಿಯಲ್ಲೇ ಒಮ್ಮೊಮ್ಮೆ ಉಳಿದುಕೊಂಡು ಬಿಡುತ್ತಿದ್ದರು. ಅವರಿಗೆಲ್ಲಾ ಅಡುಗೆ ಮಾಡಿ ನೀರು ಪೂರೈಸುವಷ್ಟೊತ್ತಿಗೆ ಸಾಕುಸಾಕಾಗಿಬಿಡುತಿತ್ತು. ಅವರಿಗೆ ಗೊತ್ತಾಗದಂತೆ ಇವರನ್ನು, ಇವರಿಗೆ ಗೊತ್ತಾಗದಂತೆ ಅವರನ್ನು ಬ್ಯಾಲೆನ್ಸ್ ಮಾಡಲಾಗದೆ ಎಷ್ಟೋ ಮಂದಿ ಜೈಲು ಸೇರಿದ್ದಾರೆ ಕೂಡ. ಪೊಲೀಸರಿಗೆ ಸುಳಿವು ಕೊಡುತ್ತೀರೆಂದು ಒಮ್ಮೆ ವೀರಪ್ಪನ್ ದೊಡ್ಡಿಯಲ್ಲಿ ಹಾಡು ಹಗಲೇ ಒಬ್ಬನನ್ನು ಗುಂಡಿಕ್ಕಿ ಕೊಂದಿದ್ದ.

ಈವತ್ತಿನ ಆಧುನಿಕ ಕಾಲದ ಹಾಗೆ ಚಾರ್ಚೆಬಲ್ ಬ್ಯಾಟರಿಗಳಾಗಲೀ, ಮೊಬೈಲ್ ಫೋನುಗಳಾಗಲೀ ಇರಲಿಲ್ಲ. ಅಪರೂಪಕ್ಕೆ ಸ್ಥಿತಿವಂತರು ಜತೆಯಲ್ಲಿ ಯಾವಾಗಲೂ ಒಂದು ರೇಡಿಯೋ ಇಟ್ಟುಕೊಂಡಿರುತ್ತಿದ್ದರು. ಅದೂ ಜೋಪಾನವಾಗಿ ದಿನಕ್ಕೆ ಒಂದೇ ಸಲ ಬಳಸುತ್ತಿದ್ದುದು. ವಾರಕ್ಕೆ ಒಮ್ಮೆ ಮಾತ್ರ ಹಳ್ಳದಲ್ಲಿ ಸ್ನಾನ ಅದೂ ಅಂಟುವಾಳಕಾಯಿಯಲ್ಲಿ. ಸೋಪು ಪೇಸ್ಟಂತೂ ಕನಸಿನ ಮಾತು. ಚಳಿ ತಡೆಯುವುದಕ್ಕೆ ಒಂದು ಕಂಬಳಿ, ಒಂದಷ್ಟು ಬೀಡಿ ಇದ್ದರೆ ಅವನೇ ದೊಡ್ಡಿಯಲ್ಲಿ ಸುಖಜೀವಿ. ಮಳೆಗಾಲದಲ್ಲಿ ಮಾತ್ರ ಸ್ವಲ್ಪ ಹಿಂಸೆಯಾಗುತ್ತಿದ್ದುದು ಬಿಟ್ಟರೆ ದೊಡ್ಡಿ ಜೀವನವನ್ನು ಅವರು ಬಹಳ ಸಂತೋಷದಿಂದ ಅನುಭವಿಸುತ್ತಿದ್ದರು. ಕಾಡಲ್ಲಿ ಸಿಗುವ ಕೌಳಿಹಣ್ಣು, ಸೊಡ್ಲಿಹಣ್ಣು, ನೆಲ್ಲಿ, ತೂಪರದ ಹಣ್ಣುಗಳನ್ನು ತಿನ್ನುತ್ತಾ ಗೆಡ್ಡೆಗೆಣಸು ಅಗೆದು ಬೇಯಿಸಿಕೊಳ್ಳುತ್ತಾ ಮನಸ್ಸೋ ಇಚ್ಛೆ ಹಾಲು, ಮೊಸರು, ತುಪ್ಪ ಸೇವಿಸುತ್ತಾ ಆರಾಮಾಗಿರುತ್ತಿದ್ದರು. ಊರಿನಲ್ಲಿ ಇವರು ಹೇಳುವ ದೊಡ್ಡಿ ಅನುಭವಗಳನ್ನು ಕೇಳಿಯೇ ಮಠದಲ್ಲಿ ಓದಿಕೊಂಡಿದ್ದ ನಾನು ಒಂದು ವಾರ ಚಕ್ಕರ್ ಹೊಡೆದು ಅತ್ತೂ ಕರೆದು ಚಿಕ್ಕಪ್ಪನಾದ ಮಲ್ಲೇಶಪ್ಪನೊಂದಿಗೆ ದೊಡ್ಡಿಗೆ ಬಂದದ್ದು. ಈ ಕ್ಯಾಮೆರಾಗಳೂ, ಮೊಬೈಲ್ ಫೋನುಗಳು ಆಗೆಲ್ಲಾ ಸುಲಭವಾಗಿ ಸಿಕ್ಕಿದ್ದರೆ ಎಷ್ಟೊಂದು ರೋಚಕ ಸಂಗತಿಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯಬಹುದಿತ್ತು.

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

5 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

5 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

6 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

6 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

6 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

6 hours ago