ಚಿತ್ರದುರ್ಗ, ಯಾನೆ ‘ಚಿತ್ರಕಲ್ ದುರ್ಗ’ಕ್ಕೆ ಅರಿವು ಮೂಡಿದ ದಿನಗಳಲ್ಲಿ ಮೊದಲ ಬಾರಿಗೆ ಹೋದಾಗ ನಾನು ತುಂಬಾ ಚಿಕ್ಕವಳು. ಬಹುಶಃ ಎರಡನೇ ಅಥವಾ ಮೂರನೇ ಕ್ಲಾಸ್ ಇದ್ದಿರಬೇಕು. ದಾವಣಗೆರೆಯಲ್ಲಿ ಗಣಿತದ ಪ್ರೊಫೆಸರ್ ಹಾಗೂ ಧ ರಾ ಮ ಕಾಲೇಜಿನ ಪ್ರಾಂಶುಪಾಲರಾದ ನನ್ನ ಅಪ್ಪ ಕೆಲಸದ ಮೇಲೆ ಚಿತ್ರ ದುರ್ಗಕ್ಕೆ ಹೊರಟಿದ್ದರು. ‘‘ತಿರುಗಲ ತಿಪ್ಪಿ’’ ಎಂದೆನಿಸಿಕೊಳ್ಳಲು ಹಂಬಲಿ ಸುತ್ತಿದ್ದ ನಾನು ಅವರ ಜೊತೆಯೇ ಹೋದೆ. ಹೇಗೂ ಎರಡು ದಿನಗಳ ಕೆಲಸ ಒಂದು ದಿನ ಹೋಗಿ ಮತ್ತೊಂದು ದಿನ ಬರೋದು ಅನ್ನುವ ಲೆಕ್ಕ. ಆಗಿನ ಹೆದ್ದಾರಿಗಳನ್ನು ಕಂಡವರಿಗೆ ಗೊತ್ತಿರಬಹುದು. ಎರಡೂ ಊರುಗಳ ನಡುವಿನ ಅಂತರ ೬೦ ಕಿ.ಮೀ. ಮಾತ್ರವೇ ಇದ್ದರೂ ಪ್ರಯಾಣ ಮೂರು ತಾಸಾದರೂ ತೆಗೆದುಕೊಳ್ಳುತ್ತಿತ್ತು. ಮಧ್ಯದಲ್ಲಿ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿಯ ಆಕರ್ಷಣೆ ಬೇರೆ.

ಬಯಲು ಸೀಮೆಯಲ್ಲಿ, ಬಿಸಿಲು ನಾಡುಗಳಲ್ಲಿ ದೇವಸ್ಥಾನಗಳಿಗೆ ಆಗ ಘನ ಗಂಭೀರ ವೈಭವೋಪೇತ ಕವಚಗಳು ಇರುತ್ತಿರಲಿಲ್ಲ. ಈ ಸದರಿ ಸೂಫಿ ಸಂತ ಯಾನೆ ದೇವರೂ ಆಗಿರುವ ತಿಪ್ಪೇರುದ್ರಸ್ವಾಮಿಯ ಆಶೀರ್ವಾದದ ಬಲದಿಂದ ಹೈದರಾಲಿಗೆ ಟಿಪೂ ಸುಲ್ತಾನ ಎಂಬ ಮಗ ಜನಿಸಿದ್ದ ಕಾರಣಕ್ಕೆ, ರಾಜನಂಥ ರಾಜನೇ ಇಲ್ಲಿಗೆ ಬಂದು ತಲೆಬಾಗುತ್ತಿದ್ದ ಎಂಬ ನೆನಪಿಗೆ ಇಲ್ಲಿನ ಜನಸಮೂಹ ತಲೆದೂಗುತ್ತದೆ. ಅದೇ ಹೈದರಾಲಿ ನಂತರ ದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ಹೋಗಿ ಒನಕೆ ಓಬವ್ವನ ಕೈಗೆ ಸಿಕ್ಕ ಅವನ ಸೈನಿಕರು ಪಚಡಿಯಾಗಿ ನಂತರ ಆ ಬೃಹತ್ ಏಳು ಸುತ್ತಿನ ಕೋಟೆಯ ಕಳ್ಳಗಿಂಡಿ ಓಬವ್ವನ ಕಿಂಡಿ ಎಂಬ ವೀರ ಗುರುತಾಗಿ ಬದಲಾದ ಬಗ್ಗೆ ಇತಿಹಾಸ ಎಷ್ಟು ಸಂಕೀರ್ಣ ಎನ್ನುವ ಕಲ್ಪನೆ ಕೊಡುತ್ತದೆ.

ದುರ್ಗ ಯಾನೆ ಚಿತ್ರದುರ್ಗ, ಹಂಪಿ ಯಾನೆ ಹಂಪೆ ಇಲ್ಲೆಲ್ಲಾ ಬಿಸಿಲೆಂದರೆ ಬರೀ ಬಿಸಿಲಲ್ಲ, ಸಾಕ್ಷಾತ್ ದೇವರ ಶಾಪವೇ ಧರೆಗಿಳಿದು ನಮ್ಮನ್ನು ನಮ್ಮ ಕುಕೃತ್ಯಗಾಳಿ ಗಾಗಿ ಸುಡುತ್ತಿದೆಯೇನೋ ಅನ್ನಿಸದೆ ಇರದು. ಬೆಳಗಿನ ಸಮಯದಲ್ಲಿ ಸೂರ್ಯನ ಕಿರಣಗಳು ಬೃಹತ್ ಬಂಡೆಗಳ ಮೇಲೆ ಪ್ರತಿಫಲಿತವಾಗಿ ಮೂರು ಪಟ್ಟು ಬೆಂಕಿ ಹೊತ್ತು ಜನಗ ಳನ್ನು ಸುಡುತ್ತವೆ. ಇದು ಸಂಜೆಯ ತನಕ ನಡೆದರೆ, ಸಂಜೆ ಬಿಸಿಲಿಳಿದು ಸೂರ್ಯ ತಾಚಿ ಮಾಡಿದ ಮೇಲೂ ದಿನವಿಡೀ ತಮ್ಮನ್ನು ಉಸ್ ಎನ್ನಿಸಿದ ಎಂಬ ಸಿಟ್ಟಿಗೋ ಏನೋ ಬಂಡೆಗಳು ಕಾವನ್ನು ಹೊರ ಹಾಕುತ್ತಲೇ ಇರುತ್ತವೆ. ಕಡೆಗೂ ಇವುಗಳು ತಂಪಾಗುವುದು ಬಹುತೇಕ ಮಧ್ಯರಾತ್ರಿಯ ಹೊತ್ತು. ಆಮೇಲೆ ಬೆಳಗಿನ ತಂಪು ಕಿರಣಗಳು ಅದ್ಯಾವಾಗ ಶಾಪಗ್ರಸ್ತ ದೇವತೆಗಳಾಗಿ ಬದಲಾಗುತ್ತವೋ ದೇವರಿಗೇ ಗೊತ್ತು.

ಈ ಬಗೆಗಿನ ಜಾನಪದ ದಂತಕಥೆ ಇದ್ದು, ಹಿಡಿಂಬಾಸುರ ಎಂಬ ನರಭಕ್ಷಕ ದೈತ್ಯ ಚಿತ್ರದುರ್ಗ ಬೆಟ್ಟದ ಮೇಲೆ ವಾಸಿಸುತ್ತಿದ್ದ ಎನ್ನುತ್ತದೆ. ಪಾಂಡವರು ತಮ್ಮ ಅಜ್ಞಾತ ವಾಸದ ಸಮಯದಲ್ಲಿ ಅವರ ತಾಯಿ ಕುಂತಿಯ ಜೊತೆ ಇಲ್ಲಿಗೆ ಬಂದಿದ್ದ ಬಗ್ಗೆ ನಂಬಿಕೆ ಇದೆ.

‘‘ಚಿತ್ರದುರ್ಗದಾ ಕಲ್ಲಿನ ಕೋಟೆ.. ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ.. ಹೈದರಾಲಿಯ ಮದವಡಗಿಸಿದ ಮದಕರಿ ನಾಯಕನಾಳಿದ ಕೋಟೆ..’’ ಎಂದು ಮೈಸೂರಿನ ಸಂಪತ್ ಕುಮಾರ್ ಅಲಿಯಾಸ್ ವಿಷ್ಣುವರ್ಧನ್ ಕೈ ಆಡಿಸಿ ಹೇಳುವಾಗ ಎರಡು ಜಡೆ ಹಾಕಿಕೊಂಡು ಕಣ್ಣಲ್ಲಿ ತಮಾಷೆ ತುಂಬಿಸಿಕೊಂಡ ಸ್ಕೂಲಿನ ಹೆಣ್ಣು ಮಕ್ಕಳು ಎದುರಿಗೆ ಕೂತು ಕೇಳುವ ಹಾಡು ದುರ್ಗದ ಭದ್ರತೆಯನ್ನು, ವೈರಿಗಳ ಪಾಲಿಗೆ ದುರ್ಗಮಾತೆಯನ್ನು, ವೀರ ವನಿತೆ ಓಬವ್ವನನ್ನು ಸಂಭ್ರಮದಿಂದ ಸಾದರಪಡಿಸುತ್ತದೆ.

ನಾಗರ ಹಾವೇ ಅಲ್ಲದೆ ಹಂಸಗೀತೆ ಎನ್ನುವ ಇನ್ನೊಂದು ಮೈಲಿಗಲ್ಲಿನ ಚಿತ್ರವೂ ದುರ್ಗದಲ್ಲೇ ಅರಳಿದ್ದು,

ಚಿಕ್ಕವಳಿದ್ದಾಗ ನೋಡಿದ ದುರ್ಗ ಅನೂಹ್ಯ, ರಮಣೀಯ. ಕಥೆಯೇ ಕಲ್ಲಾಗಿ ನಿಂತ ಹಾಗೆ ಒಂದು ಸೋಜಿಗ. ಆಮೇಲೆ ದುರ್ಗದ ಮೇಲಿಂದ ಹಾದು ಹೋಗುವಾಗ ದುರ್ಗ ಜಡಗಟ್ಟಿದ್ದ ಮಠ ಸಂಸ್ಕೃತಿಯಲ್ಲಿ ಪ್ರಗತಿಪರತೆಗೆ ಒಂದು ಪ್ರತೀಕ ಎಂಬಂತಿತ್ತು. ಇತಿಹಾಸಕ್ಕೆ, ಕಂದಾಚಾರಕ್ಕೆ, ಸಂಪ್ರದಾಯ ಎಂದು ಶತಮಾನಗಳಿಂದ ಕಟ್ಟಿ ಹಾಕಿರುವ ಸುತ್ತಿನಸುಳಿಗಳಿಗೆ ಒಂದು ನಿಖರ ಉತ್ತರದ ಹಾಗಿತ್ತು.

ಮೊನ್ನೆಯವರೆಗೂ ಹೊರಗಿನಿಂದ ಬೆರಗುಗಂಗಳಿಂದ ನೋಡಿದ ನಮಗೆಲ್ಲರಿಗೂ ದುರ್ಗ ಒಂದು ಬಗೆಯ ನಾಳೆಯ ಕನಸಿನ ಹಾಗೆ ಅನ್ನಿಸಿತ್ತು. ಆದರೆ ಆ ಕನಸು ಮುರಿದು ಬಿದ್ದಾಗ ದರ್ಶನವಾದ ಘೋರ ಸತ್ಯಗಳಿಗಿನ್ನೂ ಕಣ್ಣು, ಮನಸ್ಸು ತಕ್ಷಣಕ್ಕೆ ಹೊಂದಿಕೊಳ್ಳುತ್ತಿಲ್ಲ.

ಚಿಕ್ಕವಳಿದ್ದಾಗ ನೋಡಿದ ದುರ್ಗ ಬೃಹತ್ ಊರು. ಎಲ್ಲವೂ ಎತ್ತರೆತ್ತರ. ಎಲ್ಲವೂ ಎಷ್ಟೆಷ್ಟು ದೊಡ್ಡ ಗಾತ್ರ! ಅಲ್ಲಿನ ಪರಂಪರೆ, ಗುರುಗಳು, ಇತಿಹಾಸ, ಲಕ್ಷ್ಮೀ ಟಿಫನ್ ರೂಮಿನ ದೋಸೆ, ಪುಟ್ಟ ಬಟ್ಟಲಿನಲ್ಲಿ ಚಿಳ್ಳನೆ ಕರಗುವ ತುಪ್ಪ, ಗಟ್ಟಿ ಚಟ್ನಿ, ಪೂನಾ – ಬೆಂಗಳೂರು ರಸ್ತೆ ಪಕ್ಕ ಘನಗಂಭೀರ ಶತಮಾನಗಳನ್ನು ಹೊತ್ತ ಕಲ್ಲಿನ ಕಮಾನೊಂದು ಕಾಲಾತೀತವಾಗಿ ನಿಂತ ಹಾಗೆ ಮಠದ ಆವಾರ.

ಬರುಬರುತ್ತಾ ಅಲ್ಲಿ ಕಲ್ಲಿನ ಬೆಟ್ಟ ಗುಡ್ಡಗಳಿಗೆ ಒಂದೇ ಒಂದು ಸೂಜಿ ಮಲ್ಲಿಗೆ ಮೂಡಿಸಿದ ಹಾಗೆ ಅಲ್ಲಲ್ಲಿ ವಿಂಡ್ ಮಿಲ್ಲುಗಳು ಪುಟಕ್ಕನೆ ತಲೆ ಎತ್ತಿ ನಿಂತಾಗ ಚಿತ್ರದುರ್ಗ ಮುರುಘಾರಾಜೇಂದ್ರ ಬೃಹನ್ಮಠ ಶಾಖಾ ಮಠಗಳಾಗಿ ಕೆಳ ಜಾತಿಗಳು ಎಂದು ಪರಿಭಾವಿಸುವ ಜಾತಿಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಅಲ್ಲಲ್ಲಿ ಸ್ವಾಮೀಜಿಗಳನ್ನು ಸ್ಥಾಪಿಸಿ ಬಹಳ ಕಾಲವೇ ಆಗಿತ್ತು. ಮುಸ್ಲಿಂ ಒಬ್ಬರನ್ನು ಕರೆತಂದು ಲಿಂಗದೀಕ್ಷೆ ಕೊಟ್ಟು ಅವರಿಗೊಂದು ಪೀಠದ ಜವಾಬ್ದಾರಿ ಕೊಡುವಾಗ ರಾಜ್ಯದ ರಾಜಕೀಯ ನಿಧಾನವಾಗಿ ಪಲ್ಲಟಗೊಳ್ಳುತ್ತಿತ್ತು.

ಈವತ್ತು ಅಲ್ಲೀಗ ತುಟಿ ಬಿಗಿದ ಮೌನ. ಆಗಬಾರದ ಘಟಿತಕ್ಕೆ ಸಾಕ್ಷಿಯಾಗಿ ನಿಲ್ಲಬೇಕಾದ ಅನಿವಾರ್ಯತೆ.ಬಂದೊದಗಿದಾಗ ಕಣ್ಣಲ್ಲಿ ಚಿಮ್ಮುತ್ತಿರುವ ಸಿಟ್ಟು, ಕಣ್ಣೀರು ಎರಡನ್ನೂ ಸಂಭಾಳಿಸಿ ಬದುಕಿನ ದಾಸೋಹ ಮುಂದುವರಿಸಬೇಕಾದ ಅನಿವಾರ್ಯ.

ಅಲ್ಲಿದ್ದ ಕಾರಣಕ್ಕೇ, ಮಠವನ್ನು ನಂಬಿದ ಮಾತ್ರಕ್ಕೆ ಮಾಡಿದವರ ತಪ್ಪು, ಅನುಭವಿಸಿದವರ ಸಂಕಟ ಎರಡನ್ನೂ ಮೈವೆತ್ತಿಕೊಂಡುಪಡುವ ಸಂಕಟ ಇದೆ ಯಲ್ಲ ಅದು ಈಗಿನ ದಿನಗಳಲ್ಲಿ ಶತ್ರುಗಳಿಗೂ ಬೇಡ.

ಕಾಲದ ಸಂಕಟದಲ್ಲಿ ನಮ್ಮ ಪಾಲೂ ಇದೆ. ಈಗೀಗ ಇಲ್ಲಿ ಸಂಭ್ರಮದ ಜಾಗದಲ್ಲಿ ಪೊಲೀಸ್ ಸೈರನ್ ಇದೆ. ಕಣ್ಗಾವಲಿದೆ. ಕರಗಿ ಹೋದ ಚೀತ್ಕಾರಗಳ ಧ್ವನಿ ಇಷ್ಟಿಷ್ಟೇ ಹೊರಗೆ ಬರುತ್ತಿದೆ ಎಂದು ಇಲ್ಲಿನ ಜನ ಹೇಳುತ್ತಿ ದ್ದಾರೆ. ರಾಜ್ಯಕ್ಕೆ ರಾಜ್ಯವೇ ನಿಂತರೂ ಇಲ್ಲಿನ ನೆಲವೀಗ ಹುದುಲು ತುಂಬಿದೆ. ಇಷ್ಟಿಷ್ಟೇ ಕುಸಿಯುತ್ತಿದೆ. ಆದರೆ ಇದು ಕೆಲ ದಿನಗಳ ಮಟ್ಟಿಗೆ ಮಾತ್ರ. ವ್ಯಕ್ತಿಗಿಂತ ಸಂಸ್ಥೆ ದೊಡ್ಡದು ಎಂದಾದ ದಿನ ದುರ್ಗ ಎಂದಿನಂತೆಯೇ ಕಲೆಗಳನ್ನು ಕೊಡವಿ ನಿಂತು ಕಳೆಗಟ್ಟಲಿ ಎಂದು ಹೊರಗೆ ನಿಂತ ಎಲ್ಲರೂ ಆಶಿಸುತ್ತಿದ್ದಾರೆ.

ಕಾಲ ಎಲ್ಲವನ್ನೂ ಜೀರ್ಣಿಸಿಕೊಂಡಿದೆ. ಇದಕ್ಕೂ ಒಂದು ಮದ್ದು ಇರಲೇಬೇಕಲ್ಲ! ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ ನಡುಗುವ ಮಾತೇ ಇಲ್ಲ.

andolana

Recent Posts

ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಮೈಸೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ 2025-26ನೇ ಸಾಲಿನ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ…

18 mins ago

ತೊಗರಿ – ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ ; ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

ಹೊಸದಿಲ್ಲಿ : ಕರ್ನಾಟಕ ರಾಜ್ಯದಲ್ಲಿ‌ ಭಾರತದ ರಾಷ್ಟ್ರೀಯ ಕೃಷಿ‌ ಸಹಕಾರಿ ಮಾರುಕಟ್ಟೆ ಒಕ್ಕೂಟ ಹಾಗೂ ಭಾರತದ ರಾಷ್ಟ್ರೀಯ ಸಹಕಾರಿ ಗ್ರಾಹಕರ…

45 mins ago

ಹಾಡಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ತಲುಪಿಸಿ: ಅರುಣ್ ಕುಮಾರ್

ಮೈಸೂರು : ಜಿಲ್ಲೆಯಲ್ಲಿರುವ ಹಾಡಿಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ತಲುಪಿಸಿ, ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ…

1 hour ago

ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ: ಕೆ.ಎನ್.ರಾಜಣ್ಣ

ಬೆಳಗಾವಿ: ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ, ಗ್ಯಾರಂಟಿ ಯೋಜನೆಗಳ ಜೊತೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಕೂಡ…

3 hours ago

ಡೆವಿಲ್‌ ಸಿನಿಮಾ ಬ್ಲಾಕ್‌ ಬಸ್ಟರ್‌ ಆಗಲಿ: ನಟ ದರ್ಶನ್‌ಗೆ ರಿಷಬ್‌ ಶೆಟ್ಟಿ ವಿಶ್‌

ಬೆಂಗಳೂರು: ನಾಳೆ ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಡಿ ಬಾಸ್‌ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.…

3 hours ago

ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆ ಬಗೆಹರಿಸಲು ಸರಿಯಾದ ನಾಯಕತ್ವ ಬೇಕಿದೆ. ಆದರೆ ರೈತರಿಗೆ ಕಾಂಗ್ರೆಸ್‌ ಸರ್ಕಾರ ಪರಿಹಾರ ನೀಡಿಲ್ಲ, ಮನೆ…

3 hours ago