Andolana originals

3 ದಿನಗಳಲ್ಲಿ ಎಲ್ಲರ ಬಯೋಮೆಟ್ರಿಕ್ ಆಗುತ್ತಾ.?

ಚಾಮರಾಜನಗರ ಜಿಲ್ಲೆಯಲ್ಲಿ ಸರ್ವರ್ ಸಮಸ್ಯೆ 

ಚಾಮರಾಜನಗರ: ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ (ಪಿಡಿಎಸ್) ನ್ಯಾಯಬೆಲೆ ಅಂಗಡಿ, ಸೊಸೈಟಿಗಳ ಮೂಲಕ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ಆಹಾರ ಧಾನ್ಯ ವಿತರಿಸಲು ಅಗತ್ಯ ಇರುವ ತಾಂತ್ರಿಕ ‘ಸರ್ವರ್’ ನಿಧಾನಗತಿಯಲ್ಲಿ ಸಿಗುತ್ತಿದ್ದು, ಇದರಿಂದಾಗಿ ತ್ವರಿತವಾಗಿ ಬಯೋಮೆಟ್ರಿಕ್ ಆಗದೇ ಪಡಿತರ ಆಹಾರ ಹಂಚಿಕೆ ಆಮೆಗತಿಯಲ್ಲಿ ಸಾಗುತ್ತಿದೆ.

ಪಾರದರ್ಶಕ ಪಡಿತರ ವಿತರಣೆಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಲ್ಲಿದ್ದು ಫಲಾನುಭವಿಗಳು ಪಡಿತರ ಪಡೆಯಬೇಕೆಂದರೆ ನ್ಯಾಯಬೆಲೆ ಅಂಗಡಿ ಅಥವಾ ಸೊಸೈಟಿಗೆ ಹೋಗಿ ಅಲ್ಲಿ ತಮ್ಮ ಹೆಬ್ಬೆರಳು ಗುರುತು (ಬಯೋಮೆಟ್ರಿಕ್) ನೀಡುವುದು ಕಡ್ಡಾಯ. ಕಳೆದ ೮-೧೦ ದಿನಗಳಿಂದ ತಾಂತ್ರಿಕ ಸರ್ವರ್ ಸಮಸ್ಯೆಯಿಂದಾಗಿ ಬಯೋಮೆಟ್ರಿಕ್ ದೃಢೀಕರಣ ವಿಫಲವಾಗುತ್ತಿದೆ. ಕೆಲವೊಮ್ಮೆ ನಿಧಾನವಾಗಿ ಸಿಗುತ್ತಿದ್ದು, ಇಂಥ ಸಂದರ್ಭದಲ್ಲಿ ಒಬ್ಬೊಬ್ಬ ಪಡಿತರ ಫಲಾನುಭವಿಯ ಬೆರಳಚ್ಚು ಪೂರ್ಣವಾಗಲು ೨೦ರಿಂದ ೨೫ ನಿಮಿಷ ಬೇಕಾಗುತ್ತಿದೆ!

ಸರ್ವರ್ ಸಿಕ್ಕರೂ ಬಯೋಮೆಟ್ರಿಕ್ ತೀರಾ ವಿಳಂಬವಾಗುತ್ತಿರುವುದು, ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಬಯೋ ಮೆಟ್ರಿಕ್ ಆಗದಿರುವುದು ಪಡಿತರ ಫಲಾನುಭವಿಗಳು ಕಾದು ಕಾದು ಸುಸ್ತಾಗುವಂತೆ ಮಾಡಿದೆ. ಸುಡು ಬಿಸಿಲ ಈ ದಿನಗಳಲ್ಲಿ ಕಾದು ನಿಂತು ಹೆಬ್ಬೆರಳಿಟ್ಟ ಮೇಲೂ ಸರ್ವರ್ ಸಿಗದೆ ನಿರಾಸೆಯಿಂದ ಹಿಂದಿರುಗುವುದು ಸಾಮಾನ್ಯವಾಗಿದೆ. ಪಡಿತರ ವಿತರಕರು ಕೂಡ ಇದರಿಂದ ಹೈರಾಣಾಗಿದ್ದಾರೆ. ಸರ್ವರ್ ತೊಡಕಿನಿಂದಾಗಿ ಪಡಿತರ ವಿತರಕರು ಅತ್ತಿತ್ತ ಕದಲದೇ ಮತ್ತೆ ಮತ್ತೆ ಲಾಗಿನ್ ಆಗಬೇಕಿದೆ. ಮೊದಲೆಲ್ಲಾ ಕೆಲವೇ ಸೆಕೆಂಡುಗಳಲ್ಲಿ ಬಯೋಮೆಟ್ರಿಕ್ ಆಗುತ್ತಿತ್ತು. ಈಗ ನಿಮಿಷಗಟ್ಟಲೆ, ತಾಸು ಕಾಲ ಕಾಯಬೇಕಿರುವುದು, ಕಾದರೂ ಬಯೋಮೆಟ್ರಿಕ್ ಆಗದೇ ಹಿಂದಿರುಗುವ ಪರಿಸ್ಥಿತಿ ಎದುರಾಗಿರುವುದು ಪಡಿತರದಾರರಿಗೆ ಮತ್ತು ವಿತರಕರಿಗೆ ತೊಂದರೆಯಾಗಿ ಪರಿಣಮಿಸಿದೆ.

ಪಡಿತರವನ್ನು ಆಯಾ ತಿಂಗಳೇ ಪಡೆದುಕೊಳ್ಳುವುದು ಕಡ್ಡಾಯ. ಈ ಪ್ರಕಾರ ಇನ್ನು ೩ ದಿನಗಳಲ್ಲಿ ಅಂದರೆ ಏಪ್ರಿಲ್ ೩೦ರವರೆಗೆ ಬಯೋಮೆಟ್ರಿಕ್ ನೀಡಿ ಪಡಿತರವನ್ನು ಫಲಾನುಭವಿಗಳು ಪಡೆದುಕೊಳ್ಳದಿದ್ದರೆ ಈ ತಿಂಗಳ ಪಡಿತರದಿಂದ ವಂಚಿತರಾಗಬೇಕಾಗುತ್ತದೆ. ಇದರಿಂದ ಫಲಾನುಭವಿಗೆ ಮಾತ್ರ ನಷ್ಟ ಆಗುವುದಿಲ್ಲ. ವಿತರಕರಿಗೂ ನಷ್ಟ! ಯಾಕೆಂದರೆ, ವಿತರಕರಿಗೆ ಕ್ವಿಂಟಾಲ್‌ಗೆ ಇಂತಿಷ್ಟು ಎಂದು ಕಮಿಷನ್ ನಿಗದಿಪಡಿಸಲಾಗಿದೆ. ವಿತರಣೆ ಕಡಿಮೆಯಾದಷ್ಟೂ ಅವರಿಗೆ ಸಿಗುವ ಸಂಭಾವನೆ ಇಳಿಕೆಯಾಗುತ್ತದೆ.

ಬೆಳಿಗ್ಗೆ ೮ರಿಂದ ರಾತ್ರಿ ೮ರ ಅವಧಿಯ ಲಾಗಿನ್ ಸಮಯದಲ್ಲಿ ಎತ್ತಲೂ ಕದಲದೇ ಬೆರಳಚ್ಚು ಹಾಕಿಸುವ ಪ್ರಯತ್ನದಲ್ಲಿ ವಿತರಕರಾದ ನಾವಿದ್ದೇವೆ. ಆದರೆ ಸರ್ವರ್ ಕೈಕೊಟ್ಟರೆ ನಾವು ಏನು ಮಾಡಲು ಸಾಧ್ಯ? ೮-೧೦ ದಿನಗಳಿಂದ ಸರ್ವರ್ ಸಿಗದೇ ಫಲಾನುಭವಿಗಳಿಗೆ, ನಮಗೆ ಇಬ್ಬರಿಗೂ ಸಾಕಾಗಿ ಹೋಗಿದೆ ಎಂದು ಹೆಸರು ಹೇಳಲು ಇಚ್ಛಿಸದ ವಿತರಕರೊಬ್ಬರು ಬೇಸರ ವ್ಯಕ್ತಪಡಿಸಿದರು.

” ಸರ್ವರ್ ಸಮಸ್ಯೆಯಿಂದ ೩೨೦ ಪಡಿತರ ಫಲಾನುಭವಿಗಳ ಪೈಕಿ ೧೮೦ ಜನರ ಬಯೋ ಮೆಟ್ರಿಕ್ ಮಾತ್ರ ಆಗಿದೆ. ಇನ್ನೂ ೧೪೦ ಜನರ ಬಯೋಮೆಟ್ರಿಕ್ ಆಗಬೇಕಿದೆ.”

-ಜಡೇಸ್ವಾಮಿ, ನ್ಯಾಯಬೆಲೆ ಅಂಗಡಿ ಮಾಲೀಕರು, ಹಾವಿನಮೂಲೆ

೧೧ ಕಡೆ ಚೆಕ್ ಲಿಸ್ಟ್ ವ್ಯವಸ್ಥೆಯಡಿ ವಿತರಣೆ: 

ಬಯೋಮೆಟ್ರಿಕ್‌ಅನ್ನು ಮೊಬೈಲ್ ಹಾಟ್‌ಸ್ಪಾಟ್ ಬದಲಿಗೆ ಬ್ರಾಡ್ ಬ್ಯಾಂಡ್‌ನಲ್ಲಿ ಪಡೆದರೆ ಸರ್ವರ್ ವೇಗವಾಗಿ ಸಿಗುವುದರಿಂದ ಎಲ್ಲರೂ ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಸಲಹೆ ನೀಡಲಾಗಿದೆ. ಗಿರಿಜನರು ನೆಲೆಸಿರುವ ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇರುವ ಕಾರಣ ೧೧ ಕಡೆಗಳಲ್ಲಿ ಬಯೋಮೆಟ್ರಿಕ್ ಬದಲಿಗೆ ಚೆಕ್ ಲಿಸ್ಟ್ ಮುಖಾಂತರ ಪಡಿತರ ಚೀಟಿದಾರರನ್ನು ಖಾತರಿ ಮಾಡಿಕೊಂಡು ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ ೨, ಹನೂರು ತಾಲ್ಲೂಕಿನಲ್ಲಿ ೮ ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ ೧ ಕಡೆ ಚೆಕ್‌ಲಿಸ್ಟ್ ವ್ಯವಸ್ಥೆ ಇದೆ ಎಂದು ಆಹಾರ ಇಲಾಖೆ ಅಧಿಕಾರಿ ಸ್ಪಷ್ಟಪಡಿಸಿದರು.

” ಸರ್ವರ್ ಸಮಸ್ಯೆ ಒಂದು ವಾರದಿಂದಲೂ ಕಾಡುತ್ತಿದೆ. ಬೆರಳಚ್ಚು ಆಗದೇ ಪಡಿತರ ಫಲಾನುಭವಿಗಳು ಎಡತಾಕುವಂತಾಗಿದೆ. ಏ.೩೦ರವರೆಗೆ ಬೆರಳಚ್ಚು ಪೂರ್ಣ ಮಾಡಬೇಕಿರುವ ಕಾರಣ ಬಯೋಮೆಟ್ರಿಕ್ ಪಡೆಯುವ ಅವಧಿಯನ್ನು ವಿಸ್ತರಣೆ ಮಾಡಿದರೆ ಒಳ್ಳೆಯದು.”

-ಎಸ್.ಪ್ರಭುಪ್ರಸಾದ್, ತಾಲ್ಲೂಕು ಅಧ್ಯಕ್ಷರು, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ, ಯಳಂದೂರು

” ಜಿಲ್ಲೆಯಲ್ಲಿ ಬಿಪಿಎಲ್ ಹಾಗೂ ಅನ್ನಭಾಗ್ಯ ಯೋಜನೆಯ ೨.೮೨ ಲಕ್ಷ ಪಡಿತರ ಚೀಟಿದಾರರ ಪೈಕಿ ಸೋಮವಾರ ಮಧ್ಯಾಹ್ನ ತನಕ ಶೇ.೭೬.೦೫ರಷ್ಟು ಮಂದಿ ಬಯೋಮೆಟ್ರಿಕ್ ನೀಡಿ ಪಡಿತರ ಪಡೆದಿದ್ದಾರೆ. ಸೋಮವಾರ ಬೆಳಿಗ್ಗೆ ಎಲ್ಲಾ ಕಡೆ ನೆಟ್ ವರ್ಕ್ ಚೆನ್ನಾಗಿ ಸಿಕ್ಕಿದ್ದು, ಇನ್ನು ಮೂರು ದಿನಗಳಲ್ಲಿ ಉಳಿದವರ ಬಯೋಮೆಟ್ರಿಕ್ ಸಂಪೂರ್ಣ ಆಗಲಿದೆ. ಆದರೂ ಬಯೋಮೆಟ್ರಿಕ್ ಅವಧಿಯನ್ನು ಬೆಳಿಗ್ಗೆ ೬ರಿಂದ ರಾತ್ರಿ ೧೦ರತನಕ ವಿಸ್ತರಿಸುವಂತೆ ಇಲಾಖೆ ಆಯುಕ್ತರಲ್ಲಿ ಮನವಿ ಮಾಡಲಾಗಿದೆ.”

-ವಸುಂದರಾ ಹೆಗಡೆ, ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

 

 

ಆಂದೋಲನ ಡೆಸ್ಕ್

Recent Posts

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

3 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

4 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

4 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

4 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

4 hours ago

ಮಹಾಪಂಚ್ ಕಾರ್ಟೂನ್‌

ಮಹಾಪಂಚ್ ಕಾರ್ಟೂನ್‌ | ಸೆಪ್ಟಂಬರ್‌ 18 ಶುಕ್ರವಾರ

5 hours ago