Andolana originals

ಕಾವೇರಿ ಕಣಿವೆ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕುಸಿತ

ಕೆ.ಬಿ.ರಮೇಶನಾಯಕ

೨೦೧೫, ೨೦೧೬ರ ಅವಧಿಯಲ್ಲಿ ಇದ್ದಷ್ಟೇ ಈ ಬಾರಿಯೂ ಜಲಾಶಯಗಳಲ್ಲಿ ನೀರು

ಮೈಸೂರು: ಕೇರಳದ ವಯನಾಡು, ಕೊಡಗಿನ ಭಾಗಮಂಡಲ ಭಾಗದಲ್ಲಿ ವಾಡಿಕೆಯಂತೆ ಮುಂಗಾರು ಹಂಗಾಮಿನ ಮಳೆಯಾಗದೆ, ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ೩೫.೬೮೯ ಟಿಎಂಸಿ ನೀರು ಸಂಗ್ರಹವಿದ್ದು, ಬರದ ಛಾಯೆ ಆವರಿಸಿದೆ. ೨೦೧೫ ಮತ್ತು ೨೦೧೬ರಲ್ಲಿ ಇದೇ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದರಿಂದ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕರ್ನಾಟಕ ರಾಜ್ಯ ಜಲ ಮಾಹಿತಿ ಕೇಂದ್ರ ಹಾಗೂ ಸಮಗ್ರ ಜಲಸಂಪನ್ಮೂಲ ನಿರ್ವಹಣಾ ಉನ್ನತ ಕೇಂದ್ರದ ಪ್ರಕಾರ ಹಾರಂಗಿ, ಹೇಮಾವತಿ, ಕೃಷ್ಣರಾಜ ಸಾಗರ ಹಾಗೂ ಕಬಿನಿ ಜಲಾಶಯಗಳಲ್ಲಿ ಒಟ್ಟಾರೆ ೩೫.೬೮೯ ಟಿಎಂಸಿ ನೀರು ಇದ್ದು, ಮುಂದಿನ ದಿನಗಳಲ್ಲಿ ಮುಂಗಾರು ಮಳೆಯಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಹೆಚ್ಚಾಗದಿದ್ದರೆ ಮೈಸೂರು ಭಾಗದ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ.

ರೈತರ ಜೀವನಾಡಿಯಾದ ಕೃಷ್ಣರಾಜ ಸಾಗರ, ಕಬಿನಿ ಜಲಾಶಯಗಳಿಗೆ ಕಳೆದ ವಾರ ತುಸು ಹೆಚ್ಚಾಗಿದ್ದ ಒಳಹರಿವಿನ ಪ್ರಮಾಣ ಈಗ ಇನ್ನೂ ಕಡಿಮೆಯಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ರೈತರ ಬೆಳೆಗಳಿಗೆ ನೀರು ಹರಿಸದಿರುವ ಕುರಿತು ಚಿಂತನೆ ಮಾಡಿರುವ ರಾಜ್ಯ ಸರ್ಕಾರ ಪರ್ಯಾಯ ಬೆಳೆಗಳಿಗೆ ಆದ್ಯತೆ ನೀಡುವಂತೆ ವ್ಯಾಪಕ ಜಾಗೃತಿ ಮೂಡಿಸುವಂತೆ ಕಟ್ಟಾಜ್ಞೆ ಮಾಡಿದೆ. ಇದರಿಂದಾಗಿ ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ಚಟುವಟಿಕೆಗಳಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯ ಚಿಂತನೆಯನ್ನು ಬಿಟ್ಟು ಕಡಿಮೆ ನೀರಿನ ಬಳಕೆಯಲ್ಲಿ ಬೆಳೆಯುವ ಬೆಳೆಗಳ ಬಿತ್ತನೆಗೆ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ದಶಕಗಳ ಹಿಂದೆ ಇದೇ ಪರಿಸ್ಥಿತಿ: ೨೦೨೬ರಲ್ಲಿ ಕಾಣಿಸಿಕೊಂಡಿರುವ ಬರಗಾಲದ ಛಾಯೆಯು ೨೦೧೫ ಮತ್ತು ೨೦೧೬ರಲ್ಲಿ ಕಾಣಿಸಿಕೊಂಡಿದ್ದರಿಂದ ದಸರಾ ಮಹೋತ್ಸವವನ್ನು ಸರಳವಾಗಿ, ಸಂಪ್ರದಾಯಬದ್ಧವಾಗಿ ಆಚರಣೆ ಮಾಡಲಾಗಿತ್ತು. ೨೦೧೫ ಮತ್ತು ೨೦೧೬ರಲ್ಲಿ ಭೀಕರ ಬರಗಾಲ ಉಂಟಾಗಿ ೧೫೫ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿತ್ತು. ಈ ಬಾರಿಯೂ ಅದೇ ಪರಿಸ್ಥಿತಿ ಉಂಟಾಗಿ, ೨೦೧೬ರಲ್ಲಿ ಜಲಾಶಯಗಳಲ್ಲಿ ಇದ್ದ ನೀರಿನ ಮಟ್ಟದಷ್ಟೇ ಈಗಲೂ ಇದೆ.

ಸದ್ಯಕ್ಕೆ ಹಾಲಿ ಇರುವ ೩೫ ಟಿಎಂಸಿಯಲ್ಲಿ ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಬಹುದಾಗಿದ್ದು, ಡಿಸೆಂಬರ್ ಹೊತ್ತಿಗೆ ಮಳೆಯಾಗದೆ ಇದ್ದರೆ ಏರುಪೇರಾಗುವ ಸಂಭವವಿದೆ ಎನ್ನಲಾಗಿದೆ. ಕಬಿನಿ ಜಲಾಶಯವು ಬೇಗನೆ ಭರ್ತಿಯಾಗುತಿತ್ತಾದರೂ ಸದ್ಯಕ್ಕೆ ಪೂರ್ಣವಾಗುವ ಲಕ್ಷಣವೇ ಕಂಡುಬಂದಿಲ್ಲ. ಹಾರಂಗಿ ಜಲಾಶಯ ಭರ್ತಿಯಾಗುವ ನಿರೀಕ್ಷೆ ಹುಸಿಯಾಗುವ ಹಂತಕ್ಕೆ ಬಂದಿದೆ.

೨೦೩.೨ ಮಿ.ಮೀ. ಮಳೆ: ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ ೮೩೭.೪ ಮಿ.ಮೀ.ಗಳಾಗಿದ್ದು , ಜುಲೈ ೧೫ರ ನಂತರ ವಾಡಿಕೆ ಮಳೆ ೩೫೫.೮ ಮಿ.ಮೀ.ಗಳಾಗಿದ್ದು, ಈವರೆಗೆ ಬಿದ್ದ ಮಳೆ ೨೦೩.೨ ಮಿ.ಮೀ. ಅಂದರೆ ಶೇ.೪೨.೮ ರಷ್ಟು ಕೊರತೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.೧೩ ರಷ್ಟು ಅಧಿಕ ಅಂದರೆ ೪೦೦ ಮಿ.ಮೀ. ಮಳೆಯಾಗಿತ್ತು. ಜೂನ್ ಮತ್ತು ಜುಲೈ ತಿಂಗಳಲ್ಲಿ ಕ್ರಮವಾಗಿ ಶೇ.೫೬ ಮತ್ತು ಶೇ.೫೪ ರಷ್ಟು ಮಳೆ ಕೊರತೆ ಉಂಟಾಗಿದೆ. ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಶೇ.೪೬ರಷ್ಟು , ಹುಣಸೂರು ತಾಲ್ಲೂಕಿನಲ್ಲಿ ಶೇ.೫೩ರಷ್ಟು , ಕೆ.ಆರ್.ನಗರ ತಾಲ್ಲೂಕಿನಲ್ಲಿ ಶೇ.೪೬ ರಷ್ಟು , ಮೈಸೂರಿನಲ್ಲಿ ಶೇ.೨೯ರಷ್ಟು, ನಂಜನಗೂಡು ತಾಲ್ಲೂಕಿನಲ್ಲಿ ಶೇ.೩೨ರಷ್ಟು, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಶೇ.೪೪ರಷ್ಟು, ತಿ.ನರಸೀಪುರ ತಾಲ್ಲೂಕಿನಲ್ಲಿ ಶೇ. ೨೫ರಷ್ಟು, ಸರಗೂರು ಶೇ.೪೫ರಷ್ಟು, ಸಾಲಿಗ್ರಾಮ ಶೇ.೩೯ರಷ್ಟು ವಾಡಿಕೆ ಮಳೆಯಲ್ಲಿ ಕೊರತೆ ಉಂಟಾಗಿದೆ.

ಆಂದೋಲನ ಡೆಸ್ಕ್

Recent Posts

ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ CWRC ಶಿಫಾರಸು

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್‌ ಕಾವೇರಿ…

7 mins ago

ಓದುಗರ ಪತ್ರ: ಮನವಿಗೆ ಸ್ಪಂದಿಸಿದಕ್ಕಾಗಿ ಅಭಿನಂದನೆಗಳು

ಮೈಸೂರಿನ ವಿ.ವಿ.ಮೊಹಲ್ಲದ ೨ನೇ ಮುಖ್ಯರಸ್ತೆಯಲ್ಲಿರುವ (ಕ್ಲಬ್ ಹಿಂಭಾಗ) ವಾರ್ಡ್ ಸಂಖ್ಯೆ ೧೯ರ ವ್ಯಾಪ್ತಿಗೆ ಒಳಪಡುವ ಕನ್ಸರ್‌ವೆನ್ಸಿಯಲ್ಲಿ ಗಿಡ ಗಂಟಿಗಳು ಬೃಹದಾಕಾರವಾಗಿ…

8 hours ago

ಓದುಗರ ಪತ್ರ: ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಲಿ

ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ತಾಲ್ಲೂಕು ವನಸಿರಿ ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಹಾಗೆ ಹಲವು ದೇವಾಲಯಗಳ ಬೀಡು, ಈ…

8 hours ago

ಓದುಗರ ಪತ್ರ: ಹಳೆ ಪಿಂಚಣಿ ಮರುಜಾರಿಯಿಂದ ಖಜಾನೆಗೆ ಭಾರ ಆಗದೇ?

ಚುನಾವಣಾ ಲಾಭಕ್ಕಾಗಿ ಹಳೆ ಪಿಂಚಣಿ ಯೋಜನೆ ಮರುಜರಿಗೆ ಹೊರಟಿರುವುದು ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ೩.೫…

8 hours ago

ಓದುಗರ ಪತ್ರ: ದಸರಾ ಚಲನಚಿತ್ರೋತ್ಸವ ಕೈಬಿಡಬಾರದು

ಮೈಸೂರಿನ ದಸರಾ ಚಲನಚಿತ್ರೋತ್ಸವವನ್ನು ಕಳೆದ ಸುಮಾರು ೫೦ ವರ್ಷಗಳಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಪ್ರೇಕ್ಷಕರ ಭಾಗವಹಿಸುವಿಕೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈ…

8 hours ago

ವರ್ಷದಲ್ಲಿ 180 ದ್ವಿಚಕ್ರ ವಾಹನಗಳ ಕಳ್ಳತನ!

ಎಚ್.ಎಸ್.ದಿನೇಶ್ ಕುಮಾರ್ ವರ್ಷದಿಂದೀಚೆಗೆ ೯೬ ವಾಹನಗಳ ಪತ್ತೆ; ೧೦ಕ್ಕೂ ಹೆಚ್ಚು ಆರೋಪಿಗಳ ಬಂಧನ ವಾಹನ ಸವಾರರಿಗೆ ಮುನ್ನೆಚ್ಚರಿಕೆ * ವಾಹನ…

8 hours ago