Andolana originals

ಮುಂಗಾರು ಮುನಿದರೂ ಬೆಳೆ ವಿಮೆಗಿಲ್ಲ ರೈತರ ಆಸಕ್ತಿ

ಗಿರೀಶ್ ಹುಣಸೂರು

ಜಿಲ್ಲೆಯಲ್ಲಿ ಈವರೆಗೆ ೬,೯೧೦ ರೈತರಿಂದಷ್ಟೇ ಬೆಳೆ ವಿಮೆ ನೋಂದಣಿ

ಮೈಸೂರು: ಮುಂಗಾರು ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಪ್ರಸಕ್ತ ವರ್ಷ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಜಲಾಶಯಗಳು ಭರ್ತಿಯಾಗದೇ ಇರುವುದರಿಂದ ಸರ್ಕಾರ ಈಗಾಗಲೇ ಕೃಷಿಗಾಗಿ ನಾಲೆಗಳಿಗೆ ನೀರು ಹರಿಸುವುದಿಲ್ಲ, ಕುಡಿಯುವ ನೀರಿಗಾಗಿ ಕಾದಿಟ್ಟುಕೊಳ್ಳುವುದಾಗಿ ಹೇಳಿದೆ. ಇತ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ ಬಿತ್ತನೆ ಮಾಡಿದ ರೈತರು ಮಳೆಯಿಲ್ಲದೆ ಕಂಗಾಲಾಗಿದ್ದಾರೆ.

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಹದಗೊಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಮಳೆಯಿಲ್ಲದೆ ಹೊಗೆಸೊಪ್ಪು ಸಸಿ ನಿರೀಕ್ಷಿತ ಮಟ್ಟಕ್ಕೆ ಬೆಳೆಯದೇ ಇರುವುದರಿಂದ ಇಳುವರಿ ಕುಂಠಿತವಾಗಿದೆ. ಇನ್ನು ಮಳೆಯಾಶ್ರಿತ ಪ್ರದೇಶದಲ್ಲಿ ಭೂಮಿ ಹದಗೊಳಿಸಿ ಬಿತ್ತಿದ ಅಲಸಂದೆ, ಎಳ್ಳು, ಹೆಸರು, ಉದ್ದು, ಸೂರ್ಯಕಾಂತಿ, ಹತ್ತಿ, ಮುಸುಕಿನ ಜೋಳ, ರಾಗಿ ಬೆಳೆಗಳು ಮಳೆಯಿಲ್ಲದೆ ಒಣಗುತ್ತಿವೆ.

ಪೂರ್ವ ಮುಂಗಾರು ಕೂಡ ಈ ಬಾರಿ ಕೈಕೊಟ್ಟಿದ್ದು, ಮುಂಗಾರು ಆರಂಭದ ಒಂದೂವರೆ ತಿಂಗಳು ಕಳೆದಿದ್ದರೂ ವಾಡಿಕೆಯಂತೆ ಮಳೆಯಾಗದೇ ಇರುವುದರಿಂದ ಜಿಲ್ಲೆಯಲ್ಲಿ ಈ ಮುಂಗಾರಿಗೆ ಗುರಿ ಹಾಕಿಕೊಂಡಿದ್ದ ಪ್ರದೇಶದ ಪೈಕಿ ಅರ್ಧದಷ್ಟು ಜಮೀನುಗಳಲ್ಲಿ ಇನ್ನೂ ಬಿತ್ತನೆಯಾಗಿಲ್ಲ. ಶುಂಠಿ ಬೆಳೆಯ ಹಾವಳಿ: ಇನ್ನು ಭತ್ತ ಬೆಳೆಯುವ ಗದ್ದೆ ಬಯಲುಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಶುಂಠಿ ಬೆಳೆ ವ್ಯಾಪಿಸುತ್ತಿದ್ದು, ಬಹುತೇಕ ರೈತರು ಗದ್ದೆಗಳಲ್ಲಿ ಶುಂಠಿ ಬೆಳೆಗೆ ಕೇರಳದವರಿಗೆ ಗುತ್ತಿಗೆಗೆ ಕೊಡುತ್ತಿದ್ದಾರೆ. ಇಲ್ಲವೇ ತಾವೇ ಸ್ವತಃ ಶುಂಠಿ ಬೆಳೆಯಲು ಮುಂದಾಗುತ್ತಿರುವುದರಿಂದ ಭತ್ತ ಬೆಳೆಯುವ ಪ್ರದೇಶ ಕೂಡ ಕಡಿಮೆಯಾಗುತ್ತಿದೆ.

ಇತ್ತ ಶುಂಠಿ ಬೆಳೆ ಕೂಡ ರೋಗಬಾಧೆಯಿಂದ ಹೆಚ್ಚಿನ ರೈತರ ಕೈಹಿಡಿಯುತ್ತಿಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕುತ್ತಿರುವ ರೈತರ ಹಿತರಕ್ಷಣೆಗಾಗಿಯೇ ಸರ್ಕಾರ ಜಾರಿಗೆ ತಂದಿರುವ ಬೆಳೆ ವಿಮೆಗೆ ರೈತರನ್ನು ನೋಂದಾಯಿಸಲು ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಹರಸಾಹಸಪಡುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಗುತ್ತಿಲ್ಲ.

ಕೃಷಿ ಇಲಾಖೆಯು ರೈತ ಸಂಪರ್ಕ ಕೇಂದ್ರಗಳ ಮೂಲಕ ಬೆಳೆ ವಿಮೆ ಕುರಿತು ಹಳ್ಳಿ ಹಳ್ಳಿಗಳಲ್ಲಿ ವ್ಯಾಪಕ ಪ್ರಚಾರ ಮಾಡುತ್ತಿದೆ. ಮೈಸೂರು ಜಿಲ್ಲೆಗೆ ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಕಂಪೆನಿ ವಿಮಾ ಸಂಸ್ಥೆಯಾಗಿ ಆಯ್ಕೆಯಾಗಿದ್ದು, ರೈತ ಸಂಪರ್ಕ ಕೇಂದ್ರಗಳು, ಗ್ರಾಮಗಳಲ್ಲಿನ ಗ್ರಾಮ ಒನ್ ಕೇಂದ್ರಗಳಲ್ಲೇ ಪ್ರತಿ ಎಕರೆಗೆ ನಿಗದಿಪಡಿಸಿದ ವಿಮಾ ಕಂತು ಪಾವತಿಸಿ ಬೆಳೆ ವಿಮೆ ಮಾಡಿಸಬಹುದಾಗಿದೆ. ಆದರೆ, ಬಹುತೇಕ ರೈತರು ಬೆಳೆವಿಮೆ ಮಾಡಿಸಲು ಆಸಕ್ತಿ ತೋರುತ್ತಿಲ್ಲ. ಜಿಲ್ಲೆಯಲ್ಲಿಕಳೆದ ವರ್ಷ ೭,೦೦೦ ರೈತರು ಬೆಳೆ ವಿಮೆ ಮಾಡಿಸಿದ್ದರು.

ಈ ವರ್ಷ ಮಳೆ ಕ್ಷೀಣವಾಗಿದ್ದರೂ, ಜು.೨೩ರಂದು ಬೆಳಿಗ್ಗೆವರೆಗೆ ೬,೯೧೦ ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ. ಜಿಲ್ಲೆಯಲ್ಲಿ ಮಳೆಯಾಶ್ರಿತ ಪ್ರದೇಶದ ಬೆಳೆಗಳಾದ ಹತ್ತಿ, ಮುಸುಕಿನ ಜೋಳ, ರಾಗಿ, ತೊಗರಿ,ನೀರಾವರಿ ಪ್ರದೇಶದಲ್ಲಿನ ಮುಸುಕಿನ ಜೋಳ, ರಾಗಿ ಹಾಗೂ ತೋಟಗಾರಿಕೆ ಬೆಳೆ ಅರಿಶಿನ ಬೆಳೆಗೆ ವಿಮೆ ಮಾಡಿಸಲು ಜುಲೈ ೩೧ರವರೆಗೆ ಅವಕಾಶವಿದೆ. ಹುರುಳಿ ಬೆಳೆಗೆ ಆ.೧೪ರವರೆಗೆ ವಿಮೆಗೆ ಅವಕಾಶ ಕಲ್ಪಿಸಲಾಗಿದೆ. ಹತ್ತಿ ಬೆಳೆ ಹೊರತುಪಡಿಸಿದರೆ ಮುಸುಕಿನ ಜೋಳ, ರಾಗಿ ಬೆಳೆಗೆ ವಿಮಾ ಕಂತಿನ ಮೊತ್ತ ಪ್ರತಿ ಎಕರೆಗೆ ಕ್ರಮವಾಗಿ ೫೪೭ ರೂ., ೪೦೪ ರೂ. ಇದೆ. ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡುವ ರೈತರು, ವಿಮಾ ಕಂತಿನ ಅಲ್ಪ ಮೊತ್ತವನ್ನೂ ಪಾವತಿಸಿ ಬೆಳೆ ವಿಮೆ ಮಾಡಿಸಿದರೆ ಸಂಕಷ್ಟ ಕಾಲದಲ್ಲಿ ರೈತರ ನೆರವಿಗೆ ಬರಲಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ ೮೩೭.೪ ಮಿ.ಮೀ. ಆಗಿದ್ದು, ಜುಲೈ ೧೫ರ ನಂತರ ವಾಡಿಕೆ ಮಳೆ ೩೫೫.೮ ಮಿ.ಮೀ. ಆಗಿದ್ದು, ಈವರೆಗೆ ಬಿದ್ದ ಮಳೆ ೨೦೩.೨ ಮಿ.ಮೀ. ಅಂದರೆ ಶೇ.೪೨.೮ರಷ್ಟು ಕೊರತೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.೧೩ರಷ್ಟು ಅಧಿಕ ಅಂದರೆ ೪೦೦ ಮಿ.ಮೀ. ಮಳೆಯಾಗಿತ್ತು. ಜೂನ್ ಮತ್ತು ಜುಲೈ ತಿಂಗಳಲ್ಲಿ ಕ್ರಮವಾಗಿ ಶೇ.೫೬ ಮತ್ತು ಶೇ.೫೪ ರಷ್ಟು ಮಳೆ ಕೊರತೆ ಉಂಟಾಗಿದೆ.

ಬಿತ್ತನೆ ವಿವರ: ಜಿಲ್ಲೆಯಲ್ಲಿ ಬಿತ್ತನೆ ಗುರಿ ೩,೭೬,೬೦೯ ಹೆಕ್ಟೇರ್ ಪ್ರದೇಶದ ಬದಲಾಗಿ ಈವರೆಗೆ ೧,೬೪,೩೫೫ ಹೆಕ್ಟೇರ್ ಪ್ರದೇಶ ಮಾತ್ರ ಬಿತ್ತನೆಯಾಗಿದೆ. ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಶೇ.೫೯. ೮೬, ಸರಗೂರು ತಾಲ್ಲೂಕಿನಲ್ಲಿ ಶೇ.೫೭.೭೧, ಹುಣಸೂರು ತಾಲ್ಲೂಕಿನಲ್ಲಿ ಶೇ.೪೧.೭೫, ಕೆ.ಆರ್. ನಗರ ತಾಲ್ಲೂಕಿನಲ್ಲಿ ಶೇ.೪೩.೩, ಸಾಲಿಗ್ರಾಮತಾಲ್ಲೂಕಿನಲ್ಲಿ ಶೇ.೪೦.೫೬, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಶೇ.೫೪.೦೨, ಮೈಸೂರು ತಾಲ್ಲೂಕಿನಲ್ಲಿ ಶೇ.೪೩.೧೧, ನಂಜನಗೂಡು ತಾಲ್ಲೂಕಿನಲ್ಲಿ ಶೇ.೩೯.೮೨, ತಿ.ನರಸೀಪುರ ತಾಲ್ಲೂಕಿನಲ್ಲಿ ಶೇ.೧೫.೪ ರಷ್ಟು ಮಾತ್ರ ಬಿತ್ತನೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ಶೇ.೪೩.೭೫ರಷ್ಟು ಪ್ರದೇಶದಲ್ಲಿ ಮಾತ್ರ ಈವರೆಗೆ ಬಿತ್ತನೆಯಾಗಿದೆ.

” ಬೆಳೆವಿಮೆ ಬಗ್ಗೆ ರೈತರಿಗೆ ಹೆಚ್ಚಿನ ಭರವಸೆ ಇಲ್ಲ. ಷರತ್ತುಗಳನ್ನು ಪೂರೈಸಿ ರೈತರು ವಿಮೆ ಮಾಡಿಸುವುದು ಸುಲಭವಾಗಿಲ್ಲ. ಅದೊಂದು ರೀತಿ ಸಿಕ್ಕವರಿಗೆ ಸೀರುಂಡೆ ಎಂಬಂತಾಗಿದೆ. ಬದಲಿಗೆ ಸರ್ಕಾರ ಬರ ಘೋಷಣೆ ಮಾಡಿ, ಹೆಚ್ಚಿನ ಪರಿಹಾರ ನೀಡಬೇಕು.”

-ಹೊಸೂರು ಕುಮಾರ್, ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂಘ

” ಬೆಳೆ ವಿಮೆ ಕುರಿತು ಜಿಲ್ಲೆಯಲ್ಲಿ ಕೃಷಿ ಇಲಾಖೆ ವತಿಯಿಂದ ಆಟೋ ಪ್ರಚಾರ, ಕರಪತ್ರ ಹಂಚಿಕೆ ಮಾಡಲಾಗುತ್ತಿದೆ. ಆದರೂ ನಮ್ಮ ರೈತರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಸದ್ಯ ಜಿಲ್ಲೆಯಲ್ಲಿ ಜು.೩೧ರವರೆಗೆ ರಾಗಿ ಬೆಳೆಗೆ ವಿಮೆ ಮಾಡಿಸಲು ಅವಕಾಶವಿದೆ. ಜು.೨೩ರ ಬೆಳಿಗ್ಗೆವರೆಗೆ ಜಿಲ್ಲೆಯಲ್ಲಿ ೬,೯೧೦ ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ.”

ಕೆ.ಎಚ್.ರವಿ, ಜಂಟಿ ಕೃಷಿ ನಿರ್ದೇಶಕರು, ಮೈಸೂರು

” ಜೂನ್ ತಿಂಗಳಿಂದಲೇ ರೈತರು ಬಿತ್ತನೆ ಮಾಡುವ ಅಲಸಂದೆ, ಎಳ್ಳು, ಹೆಸರು, ಉದ್ದು, ಸೂರ್ಯಕಾಂತಿ, ನೆಲಗಡಲೆ, ಟೊಮೆಟೊ, ಎಲೆಕೋಸು, ಜೋಳಕ್ಕೆ ವಿಮೆ ಮಾಡಿಸುವುದಕ್ಕೆ ನೀಡಿದ್ದ ಗಡುವು ಮುಗಿದಿದೆ”

 

 

ಆಂದೋಲನ ಡೆಸ್ಕ್

Recent Posts

ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ CWRC ಶಿಫಾರಸು

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್‌ ಕಾವೇರಿ…

7 mins ago

ಓದುಗರ ಪತ್ರ: ಮನವಿಗೆ ಸ್ಪಂದಿಸಿದಕ್ಕಾಗಿ ಅಭಿನಂದನೆಗಳು

ಮೈಸೂರಿನ ವಿ.ವಿ.ಮೊಹಲ್ಲದ ೨ನೇ ಮುಖ್ಯರಸ್ತೆಯಲ್ಲಿರುವ (ಕ್ಲಬ್ ಹಿಂಭಾಗ) ವಾರ್ಡ್ ಸಂಖ್ಯೆ ೧೯ರ ವ್ಯಾಪ್ತಿಗೆ ಒಳಪಡುವ ಕನ್ಸರ್‌ವೆನ್ಸಿಯಲ್ಲಿ ಗಿಡ ಗಂಟಿಗಳು ಬೃಹದಾಕಾರವಾಗಿ…

8 hours ago

ಓದುಗರ ಪತ್ರ: ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಲಿ

ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ತಾಲ್ಲೂಕು ವನಸಿರಿ ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಹಾಗೆ ಹಲವು ದೇವಾಲಯಗಳ ಬೀಡು, ಈ…

8 hours ago

ಓದುಗರ ಪತ್ರ: ಹಳೆ ಪಿಂಚಣಿ ಮರುಜಾರಿಯಿಂದ ಖಜಾನೆಗೆ ಭಾರ ಆಗದೇ?

ಚುನಾವಣಾ ಲಾಭಕ್ಕಾಗಿ ಹಳೆ ಪಿಂಚಣಿ ಯೋಜನೆ ಮರುಜರಿಗೆ ಹೊರಟಿರುವುದು ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ೩.೫…

8 hours ago

ಓದುಗರ ಪತ್ರ: ದಸರಾ ಚಲನಚಿತ್ರೋತ್ಸವ ಕೈಬಿಡಬಾರದು

ಮೈಸೂರಿನ ದಸರಾ ಚಲನಚಿತ್ರೋತ್ಸವವನ್ನು ಕಳೆದ ಸುಮಾರು ೫೦ ವರ್ಷಗಳಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಪ್ರೇಕ್ಷಕರ ಭಾಗವಹಿಸುವಿಕೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈ…

8 hours ago

ವರ್ಷದಲ್ಲಿ 180 ದ್ವಿಚಕ್ರ ವಾಹನಗಳ ಕಳ್ಳತನ!

ಎಚ್.ಎಸ್.ದಿನೇಶ್ ಕುಮಾರ್ ವರ್ಷದಿಂದೀಚೆಗೆ ೯೬ ವಾಹನಗಳ ಪತ್ತೆ; ೧೦ಕ್ಕೂ ಹೆಚ್ಚು ಆರೋಪಿಗಳ ಬಂಧನ ವಾಹನ ಸವಾರರಿಗೆ ಮುನ್ನೆಚ್ಚರಿಕೆ * ವಾಹನ…

8 hours ago