Andolana originals

ಲಾಬಿ ಆಧರಿತ ವಿದೇಶಾಂಗ ನೀತಿಯ ಲಾಭ-ನಷ್ಟಗಳು

ರಾಜರಾಂ ತಲ್ಲೂರು

ಅಮೆರಿಕದ ಅಧ್ಯಕ್ಷರ ಮೇಲೆ ಪ್ರಭಾವ ಬೀರಲು ಲಾಬಿ ಕಂಪೆನಿಗಳ ಬಳಕೆ

ಅಮೆರಿಕದ ಆಡಳಿತ ವ್ಯವಸ್ಥೆ, ಸಂಸತ್ ಮತ್ತಿತರ ಆಯಕಟ್ಟಿನ ಜಾಗಗಳಲ್ಲಿರುವವರ ಜೊತೆ ಸಂಪರ್ಕ ಸಾಧಿಸಲು, ಭಾರತ ಸರ್ಕಾರವು ಆ ವ್ಯವಸ್ಥೆಗೆ ನಿಕಟ ಇರುವ ಖಾಸಗಿ ವ್ಯಕ್ತಿಗಳು ನಡೆಸುವ ಲಾಬಿ (ದಳಿ) ಕಂಪೆನಿಗಳಿಗೆ ತನ್ನ ರಾಯಭಾರ ಕಚೇರಿಯ ಮೂಲಕ ಗುತ್ತಿಗೆ ವಹಿಸುವುದು ಮತ್ತು ಗಮನಾರ್ಹ ಪ್ರಮಾಣದಲ್ಲಿ ಹಣ ವ್ಯಯಿಸುವುದು ಹೊಸದೇನಲ್ಲ, ೧೯೪೮ನಿಂದಲೂ ಇದು ನಡೆಯುತ್ತಾ ಬಂದಿದೆ ಎಂದು ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಇತ್ತೀಚೆಗೆ (ನ. ೧೦) ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನಿ ಮೋದಿಯವರು ಭಾರತದಲ್ಲಿ ಎಲ್ಲರಿಗಿಂತ ಹೆಚ್ಚು ಕಾಲ ಪ್ರಧಾನಮಂತ್ರಿ ಆಗಿ ಸೇವೆ ಪೂರೈಸಿರುವುದನ್ನು ಅಭಿನಂದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕುವಂತೆ ಅಮೆರಿಕದ ಅಧ್ಯಕ್ಷರ ಮೇಲೆ ಪ್ರಭಾವ ಬೀರಲು ಈ ಲಾಬಿ ಕಂಪೆನಿಗಳ ಬಳಕೆ ಮಾಡಲಾಗಿದೆ. ಇಂತಹ ಕಂಪೆನಿಗಳಿಗೆ ಪ್ರತೀ ತಿಂಗಳು ಕೋಟಿ ರೂ.ಗಳಲ್ಲಿ ಪಾವತಿ ಮಾಡಲಾಗುತ್ತಿದೆ ಎಂಬ ಸುದ್ದಿ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆ ಹಿನ್ನೆಲೆಯಲ್ಲಿ ಜೈಸ್ವಾಲ್ ಸ್ಪಷ್ಟನೆ ನೀಡಿದ್ದರು. ಇದೇನೂ ನಿರಾಧಾರ ಆಪಾದನೆ ಆಗಿರಲಿಲ್ಲ. ಅಮೆರಿಕದ ವಿದೇಶಿ ಏಜೆಂಟರ ನೋಂದಣಿ ಕಾಯಿದೆ ೧೯೩೮ (ಎ-ಎ ಆರ್‌ಎ) ಅನ್ವಯ ವಿದೇಶಿ ಕಂಪೆನಿಗಳ ಜೊತೆ ವ್ಯವಹರಿಸುವ ಎಲ್ಲ ಅಮೆರಿಕದ ಸಂಸ್ಥೆಗಳೂ ಆ ಚಟುವಟಿಕೆಗಳ ಸ್ವರೂಪ, ವಿದೇಶಿ ಕಂಪೆನಿಯ ಜೊತೆ ತಮ್ಮ ಸಂಬಂಧ, ಅವರಿಂದ ಸ್ವೀಕರಿಸಿದ ಮೊತ್ತ ಇತ್ಯಾದಿ ಸಮಗ್ರ ಮಾಹಿತಿಗಳನ್ನು ಕಾಲಕಾಲಕ್ಕೆ ಅಮೆರಿಕದ ಕಾನೂನು ಇಲಾಖೆಗೆ ಸಲ್ಲಿಸಬೇಕಿದೆ. ಆ ದಾಖಲೆಗಳನ್ನು ಆಧರಿಸಿಯೇ ಈ ಸುದ್ದಿಗಳು ಪ್ರಕಟಗೊಂಡಿದ್ದವು (ಅಂತಹ ಒಂದು ಇತ್ತೀಚೆಗಿನ ದಾಖಲೆಗೆ ಲಿಂಕ್ ಇಲ್ಲಿದೆ. https://efile.fara.gov/dos/6170&Supplemental&statement&20260722.pdf

ಮರ್ಕ್ಯುರಿ ಪಬ್ಲಿಕ್ ಅಫೇರ್ಸ್, ಎಸ್‌ಎಚ್‌ಡ್ಲ್ಯು ಪಾರ್ಟ್‌ನರ‍್ಸ್ ಎಂಬೆರಡು ಅಮೆರಿಕದ ‘ಲಾಬಿ’ ಸಂಸ್ಥೆಗಳು ಈಗ ಈ ವಿಚಾರದಲ್ಲಿ ಸುದ್ದಿಯಲ್ಲಿವೆ. ಈ ಎರಡೂ ಕಂಪೆನಿಗಳ ನಾಯಕತ್ವ ವಹಿಸಿರುವ ಹಲವಾರು ಮಂದಿ, ಅಧ್ಯಕ್ಷ ಟ್ರಂಪ್ ಮತ್ತವರ ಆಡಳಿತದ ನಿಕಟವರ್ತಿಗಳು. ಉದಾಹರಣೆಗೆ, ಎಸ್‌ಎಚ್ಡ್ಲ್ಯು ಸಂಸ್ಥೆಯ ಜಸನ್ ಜೇಮ್ಸ ಮಿಲ್ಲರ್ ಅವರು ಟ್ರಂಪ್ ರಾಜಕೀಯ ತಂತ್ರಗಾರಿಕೆ ಮತ್ತು ಪ್ರಚಾರಗಳಲ್ಲಿ ಆಯಕಟ್ಟಿನ ಜಗದಲ್ಲಿದ್ದ ನಿಕಟವರ್ತಿ. ಹಾಗೆಯೇ, ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥೆ, ಟ್ರಂಪ್ ಚುನಾವಣಾ ಪ್ರಚಾರದ ಭಾಗ ಆಗಿದ್ದ ಸೂಸಿ ವೈಲ್ಸ, ಟ್ರಂಪ್ ಅಧಿಕಾರ ಸ್ವೀಕಾರದ ವೇಳೆ ಸಂವಹನ ನಿರ್ದೇಶಕ ಆಗಿದ್ದ ಬ್ರಯಾನ್ ಲಾಂಝಾ ಇಬ್ಬರೂ ಮರ್ಕ್ಯುರಿ ಸಂಸ್ಥೆಯ ಪಾಲುದಾರರು. ಅಮೆರಿಕದಲ್ಲಿರುವ ಇಂತಹ ದಳಿ ಸಂಸ್ಥೆಗಳನ್ನು ಭಾರತ ತನ್ನ ಜಿಯೊಪೊಲಿಟಿಕಲ್ ಉದ್ದೇಶಪೂರ್ತಿಗಾಗಿ ಅಥವಾ ಆರ್ಥಿಕ-ವಿದೇಶಾಂಗ ನೀತಿಗಳಲ್ಲಿ ಅನುಕೂಲ ಪಡೆಯುವುದಕ್ಕಾಗಿ ನೇಮಕ ಮಾಡಿಕೊಳ್ಳುವುದು ಹೊಸದಲ್ಲ. ಇಂತಹ ಡಜನುಗಟ್ಟಲೆ ಸಂಸ್ಥೆಗಳೊಂದಿಗೆ ಭಾರತ ವ್ಯವಹರಿಸಿದ ಉದಾಹರಣೆಗಳಿವೆ. ಎಪ್ರಿಲ್ ೨೦೨೫ ರಿಂದ ಮರ್ಕ್ಯುರಿ ಜೊತೆ ಇದ್ದ ಭಾರತದ ವ್ಯವಹಾರ ಈ ಜೂನ್‌ನಲ್ಲಿ ಮಿಲ್ಲರ್ ಅವರು ಟ್ರಂಪ್ ಆಡಳಿತದ ಭಾಗವಾಗಿ ಸೇರ್ಪಡೆಗೊಂಡಾಗ ಮುಗಿದು, ಈಗ ಎಸ್‌ಎಚ್‌ಡ್ಲ್ಯು ಜೊತೆ ವ್ಯವಹಾರ ನಡೆಯುತ್ತಿದೆಯಂತೆ.

ಉದಾರೀಕೃತ ಜಗತ್ತಿನಲ್ಲಿ ರಾಜಕೀಯ ದಳಿ ವೃತ್ತಿ ಕೂಡ ಲಾಭದ್ದೇ. ಸರ್ಕಾರ, ರಾಜಕೀಯಸ್ಥರು, ಮಾಧ್ಯಮ ಮತ್ತು ಉದ್ಯಮಿಗಳು ಈ ನಾಲ್ಕು ವಲಯಗಳ ನಡುವಣ ಸಂವಹನ ಜಲದಂತೆ ವರ್ತಿಸುವ ಈ ದಳಿ ವೃತ್ತಿ ಭಾರತದಲ್ಲೂ ಇದೀಗ ಶೈಶವದಲ್ಲಿದೆ. ಇಂದು ಜಗತ್ತೇ ನಡೆಯುತ್ತಿರುವುದು ಹೀಗಾದ್ದರಿಂದ, ಭಾರತ ಇದನ್ನು ಬಳಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ, ಸರ್ಕಾರಿ ಬೊಕ್ಕಸದಿಂದ ಇಷ್ಟೊಂದು ದುಬಾರಿ ಹಣ ತೆತ್ತು, ಈ ದಳಿ ಸಂಸ್ಥೆಗಳಿಂದ ಯಾವ ರೀತಿಯ ಸೇವೆ ಪಡೆಯಲಾಗುತ್ತಿದೆ? ಮತ್ತು ಅದರಿಂದ ದೇಶಕ್ಕೇನು ಲಾಭ ಆಗಿದೆ? ಎಂಬುದು ಪ್ರಶ್ನೆ.

ಅಮೆರಿಕದಲ್ಲಿ ಈ ರೀತಿಯ ವ್ಯವಹಾರಗಳನ್ನು ಎಷ್ಟು ಪಾರದರ್ಶಕವಾಗಿಡಲಾಗಿದೆ ಎಂಬುದು ಮೇಲೆ ನೀಡಿರುವ ಲಿಂಕ್ ಗಮನಿಸಿದರೆ ಸ್ವಯಂವೇದ್ಯ. ಭಾರತಕ್ಕೆ ಕೂಡ ಇಂತಹದೊಂದು ಪಾರದರ್ಶಕವಾದ ವ್ಯವಸ್ಥೆ ಅಗತ್ಯವಿದೆ ಮತ್ತು ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಬಳಸಲಾಗಿರುವ ಹಣ ಹೇಗೆ ಬಳಕೆ ಆಗಿದೆ ಎಂಬುದನ್ನು ದೇಶಕ್ಕೆ ತಿಳಿಸುವ ಉತ್ತರದಾಯಿತ್ವ ಸರ್ಕಾರಕ್ಕೆ ಇರಬೇಕಾಗುತ್ತದೆ. ಅಮೆರಿಕದ ಅಧ್ಯಕ್ಷರ ದುಂಡಾವರ್ತನೆಗಳು ಕಳೆದ ಎರಡು ವರ್ಷಗಳಲ್ಲಿ ಭಾರತಕ್ಕೆ ಉಪಕರಿಸಿದ್ದಕ್ಕಿಂತ ಹಾನಿ ಮಾಡಿದ್ದೇ ಹೆಚ್ಚು. ದಂಡ ಸುಂಕಗಳು, ದೇಶದ ತೈಲ ಆಮದು ನಿರ್ಧಾರಗಳಲ್ಲಿ ಸಾರ್ವಭೌಮತೆಗೆ ಧಕ್ಕೆ ಬರುವಂತೆ ವರ್ತಿಸಿದ್ದು, ಎಚ್೧ಬಿ ವೀಸಾಗಳ ಮೇಲೆ ನಿರ್ಬಂಧಗಳನ್ನು ಹೇರಿದ್ದು, ಭಾರತವನ್ನು ನಿರ್ಜೀವ ಆರ್ಥಿಕತೆ (ಡೆಡ್ ಎಕಾನಮಿ) ಎಂದದ್ದು…. ಇವೆಲ್ಲವೂ ದಳಿಗಳಿಗೆ ದುಡ್ಡು ತೆತ್ತು ನಾವು ಪಡೆದ ಲಾಭ ಎಂದಾದರೆ, ಅಲ್ಲಿ ಸಮಸ್ಯೆ ಇದೆ. ಒಂದೋ ಸರ್ಕಾರದ ಬಳಿ ವಿದೇಶಾಂಗ ನೀತಿಗೆ ಸಂಬಂಧಿಸಿದ ಸ್ಪಷ್ಟ ಕಾಣ್ಕೆಗಳಿಲ್ಲ ಅಥವಾ ಸಮರ್ಥ ದಳಿಗಳನ್ನು ಹಿಡಿಯುವುದು ಸರ್ಕಾರಕ್ಕೆ ಸಾಧ್ಯ ಆಗಿಲ್ಲ ಎಂದೇ ಈ ಬೆಳವಣಿಗೆಗಳು ಸೂಚಿಸುವುದು. ರೂ. ಕೋಟಿಗಟ್ಟಲೆ ತೆತ್ತು, ಸರ್ಕಾರದ ಮುಖ್ಯಸ್ಥರ ಪರ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿಸಿಕೊಳ್ಳುವುದೇ ಸಾಧನೆ ಎಂದಾದರೆ, ಅದು ತುಂಬಾ ದುಬಾರಿ ಸಾಧನೆ!

” ಉದಾರೀಕೃತ ಜಗತ್ತಿನಲ್ಲಿ ರಾಜಕೀಯ ದಾಳಿ ವೃತ್ತಿ ಕೂಡ ಲಾಭದ್ದೇ. ಸರ್ಕಾರ, ರಾಜಕೀಯಸ್ಥರು, ಮಾಧ್ಯಮ ಮತ್ತು ಉದ್ಯಮಿಗಳು ಈ ನಾಲ್ಕು ವಲಯಗಳ ನಡುವಣ ಸಂವಹನ ಜಲದಂತೆ ವರ್ತಿಸುವ ಈ ದಾಳಿ ವೃತ್ತಿ ಭಾರತದಲ್ಲೂ ಇದೀಗ ಶೈಶವದಲ್ಲಿದೆ. ಇಂದು ಜಗತ್ತೇ ನಡೆಯುತ್ತಿರುವುದು ಹೀಗಾದ್ದರಿಂದ, ಭಾರತ ಇದನ್ನು ಬಳಸಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ, ಸರ್ಕಾರಿ ಬೊಕ್ಕಸದಿಂದ ಇಷ್ಟೊಂದು ದುಬಾರಿ ಹಣ ತೆತ್ತು, ಈ ದಾಳಿ ಸಂಸ್ಥೆಗಳಿಂದ ಯಾವ ರೀತಿಯ ಸೇವೆ ಪಡೆಯಲಾಗುತ್ತಿದೆ? ಮತ್ತು ಅದರಿಂದ ದೇಶಕ್ಕೇನು ಲಾಭ ಆಗಿದೆ? ಎಂಬುದು ಪ್ರಶ್ನೆ. ”

 

 

 

ಆಂದೋಲನ ಡೆಸ್ಕ್

Recent Posts

ದಸರಾ: ಸಂಪ್ರದಾಯ ಉಳಿಯಲಿ, ಆಧುನಿಕತೆ ಹೆಚ್ಚಲಿ

ಸಹನ ಪುರುಷೋತ್ತಮ್ ಕೇವಲ ಮನರಂಜನೆಯ ಉತ್ಸವವಾಗದಿರಲಿ ದಸರೆ ಯಶಸ್ಸಿಗೆ ಶ್ರಮಿಸುವ ಕೈಗಳಿಗೆ ಗೌರವ ಸಿಗಬೇಕು ಮೈಸೂರು ದಸರಾ ಎಂದರೆ ಕೇವಲ…

3 mins ago

ಕೋಟೆಯಲ್ಲಿ ಪ.ಜಾತಿಗೆ ಏಕೈಕ ಜಿಪಂ ಕ್ಷೇತ್ರ ಮೀಸಲು!

ಮಂಜುಕೋಟೆ ದಲಿತ ಸಮುದಾಯದ ಆಕಾಂಕ್ಷಿಗಳಲ್ಲಿ ಅಸಮಾಧಾನ; ಬಿಸಿಎಂ ಎ ವರ್ಗದಲ್ಲಿ ಸಂತಸ ಎಚ್.ಡಿ. ಕೋಟೆ: ತಾಲ್ಲೂಕಿನ ಇತಿಹಾಸದಲ್ಲೇ ಪರಿಶಿಷ್ಟ ಜಾತಿಗೆ…

36 mins ago

ಲಾಲ್‌ಬಾಗ್‌ ಮೂಲಕ ಸುರಂಗ ಮಾರ್ಗ ಕೈಬಿಟ್ಟ ಸರ್ಕಾರ: ಎರಡು ಪರ್ಯಾಯ ಮಾರ್ಗಗಳ ಪರಿಶೀಲನೆ!

ಬೆಂಗಳೂರು: ಪರಿಸರವಾದಿಗಳ ವಿರೋಧದ ಬೆನ್ನಲ್ಲೇ ಲಾಲ್‌ಬಾಗ್‌ ಮೂಲಕ ಸುರಂಗ ರಸ್ತೆ ನಿರ್ಮಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಈ ಕುರಿತು…

19 hours ago

ಚುಂಚನಕಟ್ಟೆ ಸಮೀಪ ನಾಲೆಯಲ್ಲಿ ಮೊಸಳೆ ಪ್ರತ್ಯಕ್ಷ: ಬಲೆಹಾಕಿ ಸೆರೆಹಿಡಿದ ತಂಡ!

ಕೆ.ಆರ್‌.ನಗರ: ಇಲ್ಲಿನ ಚುಂಚನಕಟ್ಟೆ ಸಮೀಪದ ಮಾಳನಾಯಕನಹಳ್ಳಿ ಬಳಿ ಚಾಮರಾಜ ಎಡದಂಡೆಯ ಕಿರು ನಾಲೆಯಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ಸೆರೆಹಿಡಿಯಲಾಗಿದೆ. ಮೊಸಳೆಯನ್ನು ಗಮನಿಸಿದ…

21 hours ago

‘ಸಂವಿಧಾನದ ಹೆಸರಿನಲ್ಲಿ ಪ್ರತ್ಯೇಕ ವೇದಿಕೆ ಸೃಷ್ಟಿಸದಿರಿ’

ಸಂವಿಧಾನ ದಿನಾಚರಣೆ ಹೆಸರಲ್ಲಿ ಮೇಲಾಟಕ್ಕೆ ಪ್ರಗತಿಪರ ಚಿಂತಕರು, ಸಂಸ್ಕೃತಿ ಚಿಂತಕರು, ರೈತರು, ಕಾರ್ಮಿಕರ ಬೇಸರ  ನವೆಂಬರ್ ೨೬ರಂದು ಮೈಸೂರಿನಲ್ಲಿ ಸಂವಿಧಾನ…

22 hours ago