ಸಹನ ಪುರುಷೋತ್ತಮ್
ಕೇವಲ ಮನರಂಜನೆಯ ಉತ್ಸವವಾಗದಿರಲಿ
ದಸರೆ ಯಶಸ್ಸಿಗೆ ಶ್ರಮಿಸುವ ಕೈಗಳಿಗೆ ಗೌರವ ಸಿಗಬೇಕು
ಮೈಸೂರು ದಸರಾ ಎಂದರೆ ಕೇವಲ ಒಂದು ಉತ್ಸವವಲ್ಲ; ಅದು ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಪರಂಪರೆ, ರಾಜವೈಭವ ಮತ್ತು ಜನರ ಭಾವನೆಗಳ ಸಂಗಮ. ಅರಮನೆಯ ಅಂಗಳದಲ್ಲಿ ಮೊಳಗುವ ವಾದ್ಯಗಳ ನಾದದಿಂದ ಹಿಡಿದು, ಅಂಬಾರಿ, ಗಜಗಾಂಭೀರ್ಯದವರೆಗೆ ಪ್ರತಿಯೊಂದಕ್ಕೂ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ಕಾಲ ಬದಲಾದಂತೆ ದಸರಾ ಆಚರಣೆಯಲ್ಲಿಯೂ ಅನೇಕ ಬದಲಾವಣೆಗಳಾಗಿವೆ. ತಂತ್ರಜ್ಞಾನ ಬೆಳೆದಿದೆ, ಪ್ರವಾಸಿಗರ ಸಂಖ್ಯೆ ಹೆಚ್ಚಿದೆ, ಜಾಗತಿಕ ಮಟ್ಟದಲ್ಲಿ ದಸರಾ ಪರಿಚಯವೂ ವಿಸ್ತರಿಸಿದೆ. ಇತ್ತೀಚೆಗೆ ದಸರೆಯ ಅಧಿಕೃತ ಜಾಲತಾಣವು ವಿಶ್ವದ ೧೦೬ ದೇಶಗಳ ಜನರ ಗಮನ ಸೆಳೆದಿರುವುದು ಇದಕ್ಕೆ ಸಾಕ್ಷಿ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಒಂದು ಪ್ರಶ್ನೆ ನಮ್ಮನ್ನು ಕಾಡಬೇಕು, ದಸರಾದ ಹೊರಗಿನ ವೈಭವದ ಜೊತೆಗೆ ಅದರ ಒಳಗಿನ ವ್ಯವಸ್ಥೆಯೂ ಅಷ್ಟೇ ಸುಂದರವಾಗಿದೆಯೇ?
ದಸರಾ ಆರಂಭವಾದ ಕ್ಷಣದಿಂದಲೇ ಮೈಸೂರು ನಗರದ ಸ್ವಚ್ಛತೆ, ಸೌಂದರ್ಯ ಮತ್ತು ಮೂಲಸೌಕರ್ಯವನ್ನು ಕಾಪಾಡುವ ಬಹುದೊಡ್ಡ ಜವಾಬ್ದಾರಿ ಮಹಾನಗರ ಪಾಲಿಕೆಯ ಹೆಗಲೇರಿರುತ್ತದೆ. ಅದರಲ್ಲೂ ಪೌರಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದು. ಲಕ್ಷಾಂತರ ಜನರು ಸೇರುವ ಸಂದರ್ಭದಲ್ಲಿ ಹಗಲು-ರಾತ್ರಿ ಎನ್ನದೆ ನಗರದ ಸ್ವಚ್ಛತೆಗಾಗಿ ಶ್ರಮಿಸುವ ಅವರ ಕೊಡುಗೆ ಅನನ್ಯ. ಆದರೆ ದಸರೆಯ ಸಂಭ್ರಮದಲ್ಲಿ ಅವರಿಗೂ ಪಾಲು ದೊರೆಯುತ್ತಿದೆಯೇ?
ಸಾಮಾಜಿಕ ಜಾಲತಾಣದ ಪ್ರಭಾವಿಗಳಿಗೆ ಆಹ್ವಾನ ನೀಡಿ ದಸರೆಯ ವೈಭವವನ್ನು ಪರಿಚಯಿಸುವ ಪ್ರಯತ್ನದ ಜೊತೆಗೆ, ನಗರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡುವ ಪೌರಕಾರ್ಮಿಕರಿಗೂ ವಿಶೇಷ ಆಹ್ವಾನ ನೀಡುವಂತಾಗಬೇಕು. ಅವರಿಗೆ ಜಂಬೂಸವಾರಿ ಹಾಗೂ ಅಂಬಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಬೇಕು. ಜನಸಂದಣಿಯನ್ನು ನಿಯಂತ್ರಿಸುವುದು, ಸಂಚಾರ ವ್ಯವಸ್ಥೆ ಸುಗಮಗೊಳಿಸುವುದು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವುದು ಪೊಲೀಸರ ಪ್ರಮುಖ ಕರ್ತವ್ಯ. ಆದರೆ ಭದ್ರತೆಯ ಹೆಸರಿನಲ್ಲಿ ಸಾರ್ವಜನಿಕರಿಗೆ ಅನಗತ್ಯ ತೊಂದರೆಯಾಗಬಾರದು.
ಟಿಕೆಟ್ ಹೊಂದಿದ್ದರೂ ಕೆಲವರಿಗೆ ಮೆರವಣಿಗೆಯನ್ನು ವೀಕ್ಷಿಸಲು ಅವಕಾಶ ದೊರೆಯದಂತಹ ಅನುಭವಗಳು ಮರುಕಳಿಸಬಾರದು. ಟಿಕೆಟ್ ವಿತರಣೆಯಷ್ಟೇ ಅಲ್ಲದೆ, ಪ್ರವೇಶ ವ್ಯವಸ್ಥೆಯೂ ಅಚ್ಚುಕಟ್ಟಾಗಿರಬೇಕು. ಪೊಲೀಸ್ ಸಿಬ್ಬಂದಿ ಕರ್ತವ್ಯದ ಗಾಂಭೀರ್ಯವನ್ನು ಕಾಪಾಡುವುದರ ಜೊತೆಗೆ ಜನಸ್ನೇಹಿ ನಡವಳಿಕೆಯನ್ನೂ ಅಳವಡಿಸಿಕೊಳ್ಳಬೇಕು. ದಸರಾ ನೋಡಲು ದೂರದ ಊರುಗಳಿಂದ ಬರುವ ಜನರು ನಿರಾಸೆಯಿಂದ ಹಿಂದಿರುಗುವಂತಾಗಬಾರದು.
ಮೈಸೂರು ಅರಮನೆಯ ವಿದ್ಯುದ್ದೀಪಾಲಂಕಾರ ಕಣ್ಣಿಗೆ ಹಬ್ಬ ನೀಡುವ ಅದ್ಭುತ ದೃಶ್ಯ. ನಗರದ ಪ್ರಮುಖ ರಸ್ತೆಗಳು ಬೆಳಕಿನ ಸೌಂದರ್ಯದಲ್ಲಿ ಮಿಂದೇಳುವುದನ್ನು ನೋಡುವುದೇ ಒಂದು ಅನುಭವ. ಆದರೆ ಮೈಸೂರಿನ ವೈಭವವನ್ನು ಕೇವಲ ದೀಪಗಳ ಮೂಲಕವೇ ಪರಿಚಯಿಸುವುದು ಅದರ ಸಾಂಸ್ಕೃತಿಕ ಶ್ರೀಮಂತಿಕೆಗೆ ಸೀಮಿತ ಅರ್ಥ ನೀಡಿದಂತಾಗುತ್ತದೆ. ಮೈಸೂರಿನ ಇತಿಹಾಸ, ಒಡೆಯರುಗಳ ಕೊಡುಗೆ, ಶಿಲ್ಪಕಲೆ, ಮೈಸೂರು ಚಿತ್ರಕಲೆ, ರೇಷ್ಮೆ, ಗಂಧದ ಕೆತ್ತನೆ, ಜಾನಪದ ಕಲೆ, ಯಕ್ಷಗಾನ, ಶಾಸ್ತ್ರೀಯ ಸಂಗೀತ ಹಾಗೂ ಸಾಹಿತ್ಯಪರಂಪರೆಯನ್ನು ಪ್ರತಿಬಿಂಬಿಸುವ ವಿಶಿಷ್ಟ ಪ್ರದರ್ಶನಗಳು ಮತ್ತು ಆಕರ್ಷಣೆಗಳು ದಸರೆಯ ಭಾಗವಾಗಬೇಕು. ನಗರದ ಪ್ರಮುಖ ವೃತ್ತಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮೈಸೂರಿನ ಇತಿಹಾಸ ಹಾಗೂ ಸಂಸ್ಕ ತಿಯನ್ನು ಸಾರುವ ಕಲಾತ್ಮಕ ವಿನ್ಯಾಸಗಳನ್ನು ರೂಪಿಸಬಹುದು.
ದಸರೆಯನ್ನು ನೋಡಲು ಬರುವ ಪ್ರವಾಸಿಗರು ಕೇವಲ ಬೆಳಕಿನ ಸೌಂದರ್ಯವನ್ನಷ್ಟೇ ಅಲ್ಲದೆ, ಮೈಸೂರಿನ ಸಾಂಸ್ಕೃತಿಕ ಅಸ್ಮಿತೆಯನ್ನೂತಮ್ಮೊಂದಿಗೆ ಕೊಂಡೊಯ್ಯುವಂತಾಗಬೇಕು. ದಸರಾ ಹಬ್ಬವು ದೊಡ್ಡ ವೇದಿಕೆಗಳ ಕಾರ್ಯಕ್ರಮಗಳ ನಡುವೆ ಗ್ರಾಮೀಣ ಕಲಾವಿದರು, ಜಾನಪದ ಕಲಾವಿದರು, ಕರಕುಶಲಗಾರರು ಮತ್ತು ಸಣ್ಣ ಉದ್ಯಮಿಗಳಿಗೆ ಸೂಕ್ತ ಅವಕಾಶ ಕಲ್ಪಿಸಬೇಕು. ಮೈಸೂರು ರೇಷ್ಮೆ, ಗಂಧದ ಉತ್ಪನ್ನಗಳು, ಸಾಂಪ್ರದಾಯಿಕ ಕರಕುಶಲ ವಸ್ತುಗಳು ಹಾಗೂ ಸ್ಥಳೀಯ ಆಹಾರ ಪದ್ಧತಿಗಳನ್ನು ಪರಿಚಯಿಸುವ ಮಳಿಗೆಗಳಿಗೆ ಆದ್ಯತೆ ನೀಡಬೇಕು. ಇದರಿಂದ, ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸುವ ವೇದಿಕೆಯಾಗುತ್ತದೆ. ದಸರೆಯ ಪರಂಪರೆ ಮುಂದಿನ ಪೀಳಿಗೆಗೂ ತಲುಪಬೇಕು.
ಆಧುನಿಕತೆಯನ್ನು ಸ್ವಾಗತಿಸುವ ಭರದಲ್ಲಿ ನಮ್ಮ ಹಳೆಯ ಸಂಪ್ರದಾಯಗಳು ಮರೆಯಾಗಬಾರದು. ಅರಮನೆಯ ಧಾರ್ಮಿಕ ವಿಧಿವಿಧಾನಗಳು, ಜಂಬೂ ಸವಾರಿ, ಅಂಬಾರಿ ಮೆರವಣಿಗೆ, ಗೊಂಬೆ ಹಬ್ಬ, ಸಾಂಪ್ರದಾಯಿಕ ಸಂಗೀತ ಮತ್ತು ಜಾನಪದ ಕಲೆಗಳು ದಸರೆಯ ಆತ್ಮವಾಗಿವೆ. ಇವುಗಳಿಗೆ ಧಕ್ಕೆಯಾಗದಂತೆ ಹೊಸತನವನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಮತ್ತು ಯುವಜನರಿಗೆ ಇತಿಹಾಸವನ್ನು ಪರಿಚಯಿಸುವ ವಿಶೇಷ ಕಾರ್ಯಕ್ರಮಗಳು, ಛಾಯಾಚಿತ್ರ ಪ್ರದರ್ಶನಗಳು, ಐತಿಹಾಸಿಕ ಮಾಹಿತಿ ಕೇಂದ್ರಗಳು ಹಾಗೂ ಡಿಜಿಟಲ್ ಸಂಗ್ರಹಾಲಯಗಳನ್ನು ರೂಪಿಸಬಹುದು. ಇದರಿಂದ ದಸರಾ ಕೇವಲ ಉತ್ಸವವಾಗದೆ, ತಿಳಿದುಕೊಳ್ಳುವ ಮತ್ತು ಅನುಭವಿಸುವ ಸಾಂಸ್ಕೃತಿಕ ಪರಂಪರೆಯಾಗುತ್ತದೆ.
ದಸರಾ ಇನ್ನಷ್ಟು ಸುಂದರವಾಗಿರಲು ನಿಮ್ಮ ಸಲಹೆ ಏನು?: ಮೈಸೂರು ದಸರಾ ಇನ್ನಷ್ಟು ಸುಂದರವಾಗಿರಬೇಕಾದರೆ, ಇನ್ನಷ್ಟು ಸುಸೂತ್ರವಾಗಿರಬೇಕಾದರೆ, ಇನ್ನಷ್ಟು ಸಂಘಟಿತವಾಗಿರಬೇಕಾದರೆ ಹೊಸತು ಏನೆಲ್ಲಾ ಇರಬೇಕು? ಹಳತು ಏನೆಲ್ಲಾ ಇರಬಾರದು? ಎಂಬುದರ ಕುರಿತು ‘ಆಂದೋಲನ’ ದಿನಪತ್ರಿಕೆ ಓದುಗರ ಸಲಹೆ-ಸೂಚನೆಗಳನ್ನು ಆಹ್ವಾನಿಸಿತ್ತು. ಅದರಂತೆ ನ.೨೧ರಿಂದ ವಿವಿಧ ಕ್ಷೇತ್ರಗಳ ಗಣ್ಯರು ಮಂಡಿಸಿದ ಅಭಿಪ್ರಾಯಗಳನ್ನು ಪತ್ರಿಕೆ ಪ್ರಕಟಿಸಿ ವರ್ಷದ ಮುಂಚೆಯೇ ಸರ್ಕಾರದ ಗಮನಸೆಳೆಯುವ ಕೆಲಸ ಮಾಡಿದೆ.
ದಸರಾ ಆಗಲಿ ವಿಶ್ವ ವಿಖ್ಯಾತ ನಾಡಹಬ್ಬ: ಮೈಸೂರು ದಸರಾ ತನ್ನದೇ ಆದ ವಿಶಿಷ್ಟ ಪರಂಪರೆ ಹೊಂದಿದೆ. ಅಂದಿನ ಮಹಾರಾಜರು ಜನಸಾಮಾನ್ಯರಿಗಾಗಿ ದಸರಾ ಆರಂಭ ಮಾಡಿದರು ಎಂಬುದು ಜನಜನಿತ. ಇದಕ್ಕೆ ವ್ಯತಿರಿಕ್ತವಾಗಿ ಇಂದಿನ ಸರ್ಕಾರಗಳು ಮತ್ತು ಆಡಳಿತ ವ್ಯವಸ್ಥೆ ನಡೆದುಕೊಳ್ಳುತ್ತಿರುವುದು ಬೇಸರದ ಸಂಗತಿ . ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ದೂರದ ಊರುಗಳಿಂದ ಬಂದವರು ಅತೃಪ್ತರಾಗದಂತೆ, ಪಾಸ್ ಪಡೆದವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ದಸರಾ ಹಬ್ಬವನ್ನು ಆಚರಣೆ ಮಾಡಬೇಕಿದೆ.
ಎಂ.ಪಿ.ದರ್ಶನ್ ಚಂದ್ರ, ಮುಕ್ಕಡಹಳ್ಳಿ
ದಸರಾ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ: ದಸರಾ ಹೆಸರಿನಲ್ಲಿ ನಡೆಯುವ ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು. ಸಾರ್ವಜನಿಕರ ತೆರಿಗೆ ಹಣ ಪಾರದರ್ಶಕವಾಗಿ ಮತ್ತು ಅಗತ್ಯವಿರುವ ಕಡೆ ಮಾತ್ರ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಕೊನೆ ಕ್ಷಣದ ತರಾತುರಿ ಹಾಗೂ ಗೊಂದಲಗಳನ್ನು ತಪ್ಪಿಸಲು ಕನಿಷ್ಠ ಆರು ತಿಂಗಳು ಮುಂಚಿತವಾಗಿಯೇ ಸಿದ್ಧತೆ ಆರಂಭಿಸಬೇಕು. ಸ್ಥಳೀಯ ಕಲಾವಿದರು ಮತ್ತು ಮೈಸೂರಿನ ಜನತೆಗೆ ಹೆಚ್ಚಿನ ಆದ್ಯತೆ ನೀಡಿ ನಾಡಹಬ್ಬದ ಮೂಲ ಆಶಯವನ್ನು ಉಳಿಸಬೇಕು.
ಹೇಮಂತ್, ಕಲ್ಲಹಳ್ಳಿ ,ಕೃಷ್ಣರಾಜನಗರ
ಹೆಚ್ಚು ಸೌಕರ್ಯಕೊಟ್ಟಷ್ಟೂ ಜನಕ್ಕೆ ಹಬ್ಬ ಇಷ್ಟ ಆಗುತ್ತೆ: ದಸರಾ ಕಾರ್ಯಕ್ರಮಗಳನ್ನು ಜನ ಆರಾಮಾಗಿ ಬಂದು ನೋಡೋಕೆ ಏನ್ ವ್ಯವಸ್ಥೆ ಮಾಡಬೇಕು ಅನ್ನೋದನ್ನು ಮೊದಲು ವಿಚಾರ ಮಾಡಬೇಕು. ನೀವು ಹೆಚ್ಚು ಸೌಕರ್ಯ ಕೊಟ್ಟಷ್ಟೂ ಜನಕ್ಕೆ ಹಬ್ಬ ಇಷ್ಟ ಆಗುತ್ತೆ. ಕುಟುಂಬದ ಜೊತೆ ಬಂದು ಕಣ್ತುಂಬಿಕೊಳ್ಳೋತರ ವ್ಯವಸ್ಥೆ ಮಾಡಲಿ. ಎಲ್ಲಾ ಜನರ ಮನಸ್ಥಿತಿ ಒಂದೇ ತರ ಇರೋಲ್ಲ , ತಾಯಿ ಚಾಮುಂಡಿ ಬಗ್ಗೆ ಭಯ ಭಕ್ತಿ ಇದ್ರೆ ಇದೆಲ್ಲ ಆಗೋಲ್ಲ , ನಮ್ಮ ಜನ ಇನ್ನೂ ಈ ವಿಷ್ಯದಲ್ಲಿ ತುಂಬಾ ಹಿಂದೆ ಇದ್ದಾರೆ. ಜಂಬೂಸವಾರಿ ದಿನ ಒಂದು ಬೌಂಡರಿ ಹಾಕಿ ಅಲ್ಲೇ ಗಾಡಿ ನಿಲ್ಲಿಸಿ ಅಲ್ಲಿಂದ ಅರಮನೆ ಆವರಣದ ಒಳಗೆ ಬರೋಕೆ ಒಳ್ಳೆ ವ್ಯವಸ್ಥೆ ಮಾಡಿ ಆಗ ಈ ಗಾಡಿಗಳ ಸದ್ದು ಗದ್ದಲ ಇರೋಲ್ಲ.
ಶಿವರಾಜು,ಮಂಡ್ಯ
ಮಹಿಳೆಯರಿಗಾಗಿ ಪ್ರತ್ಯೇಕ ಹೆಲ್ಪ್ಲೈನ್ ವ್ಯವಸ್ಥೆಯಾಗಲಿ: ಮೈಸೂರು ದಸರಾ ಮಹೋತ್ಸವಕ್ಕೆ ದೇಶ-ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಅನ್ಯಭಾಷಿಕರಿಗೆ ಅನುಕೂಲವಾಗುವಂತೆ ಹಿಂದಿ, ಇಂಗ್ಲಿಷ್, ಮಲಯಾಳಂ, ತೆಲುಗು, ಮರಾಠಿ, ತಮಿಳು, ಫ್ರೆಂಚ್ ಇತ್ಯಾದಿ ಭಾಷೆಗಳನ್ನು ಮಾತನಾಡುವವರನ್ನು ಹೆಲ್ಪ್ಲೈನ್ ಡೆಸ್ಕ್ಗಳಲ್ಲಿ ನೇಮಿಸಬೇಕು. ತಲಾ ಒಂದೊಂದು ಭಾಷೆಗೆ ಒಂದೊಂದು ಮೊಬೈಲ್ ನಂಬರ್ ಅನ್ನು ನೀಡಬೇಕು. ಮಹಿಳೆಯರಿಗಾಗಿ ಪ್ರತ್ಯೇಕ ಹೆಲ್ಪ್ಲೈನ್ ವ್ಯವಸ್ಥೆ ಮಾಡಬೇಕು. ಆ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ನಗರದಾದ್ಯಂತ ಸೂಚನಾ ಫಲಕಗಳೊಂದಿಗೆ ಪ್ರಕಟಿಸಬೇಕು.
ಶಶಿಕಲಾ ಅಶೋಕ್, ಸಂಸ್ಥಾಪಕಿ, ಶಶಿ ಕಲ್ಚರಲ್ ಸೆಂಟರ್
ಪಾಸ್ ವ್ಯವಸ್ಥೆ ರದ್ದಾಗಲಿ: ವಿವಿಐಪಿ, ವಿಐಪಿ ಪಾಸ್ಗಳನ್ನು ಮೊದಲು ರದ್ದು ಮಾಡಬೇಕು. ಬೇಗ ಬರುವವರಿಗೆ ಆಸನ ವ್ಯವಸ್ಥೆ ಮಾಡಬೇಕು. ಅರಮನೆ ಸುತ್ತಲೂ ಪಾದಚಾರಿಗಳು ಓಡಾಡಲು ಫುಟ್ಪಾತ್ಗಳನ್ನು ಸ್ವಚ್ಛಗೊಳಿಸುವ ಜೊತೆಗೆ ಮುರಿದಿರುವ ಸ್ಲ್ಯಾಬ್ಗಳನ್ನು ಸರಿಪಡಿಸಬೇಕು. ಲೈಟಿಂಗ್ಸ್ ವೇಳೆಗೆ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನಗಳನ್ನು ಪ್ರತ್ಯೇಕವಾಗಿ ಸಂಚರಿಸುವಂತೆ ಮಾರ್ಗಸೂಚಿಗಳನ್ನು ಅಳವಡಿಸಬೇಕು. ಮರಗಳಿಗೆ ದೀಪಾಲಂಕಾರ ಮಾಡುವುದರಿಂದ ಪಕ್ಷಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪ್ರಸಿದ್ಧ ವೃತ್ತಗಳಿಗೆ ಮಾತ್ರ ದೀಪಾಲಂಕಾರ ಮಾಡಬೇಕು.
ಭಾನು ಮೋಹನ್, ಪರಿಸರವಾದಿ
ಸಂಚಾರ ದಟ್ಟಣೆ ನಿವಾರಿಸಬೇಕು: ಮೈಸೂರು ದಸರಾ ವೇಳೆ ವಿವಿಧ ರಾಜ್ಯಗಳಿಂದ ವ್ಯಾಪಾರಕ್ಕಾಗಿ ಬರುವ ವಲಸಿಗರು ತಂಗಲು ಭದ್ರತೆಯ ಆಶ್ರಯ ಒದಗಿಸಬೇಕು. ಮೈಸೂರು ನಗರಕ್ಕೆ ಒಳಪಡುವ ಲಿಂಕ್ ರೋಡ್ಗಳಲ್ಲಿ ಟ್ರಾಫಿಕ್ ಜಾಮ್ ಆಗದಂತೆ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಟ್ರಾಫಿಕ್ ಜಾಮ್ ಕುರಿತು ತಜ್ಞರು ಸರಿಯಾದ ಕ್ರಮ ಕೈಗೊಳ್ಳಬೇಕು.
ಜಿ.ಎಸ್.ಸೀಮಾ, ಸಾಮಾಜಿಕ ಹೋರಾಟಗಾರ್ತಿ
ಕ್ಯೂಆರ್ ಕೋಡ್ ಮೂಲಕ ಮಾತ್ರ ಪ್ರವೇಶ ನೀಡಿ: ದಸರಾ ಸುಂದರವಾಗಿರಲು ಮೊದಲು ಜಂಬೂ ಸವಾರಿ ಸಾಗುವ ದಾರಿಯಲ್ಲಿ ಪ್ರದರ್ಶನಕಾರರು ಮತ್ತು ಪೊಲೀಸರನ್ನು ಬಿಟ್ಟು (ಪತ್ರಕರ್ತರನ್ನು ಹೊರತುಪಡಿಸಿ)ಬೇರೆ ಯಾರೂ ಕೂಡ ಇರಬಾರದು. ವಿಶೇಷವಾಗಿ ಜಂಬೂ ಸವಾರಿ ಸುತ್ತಲೂ ಸೆಕ್ಯೂರಿಟಿ ಬಿಟ್ಟು ಬೇರೆ ಯಾರೂ ಇರಕೂಡದು. ಟಿಕೆಟ್ ನೀಡಿದ ಮೇಲೆ ಕ್ಯೂಆರ್ ಕೋಡ್ ಮೂಲಕ ಮಾತ್ರ ಪ್ರವೇಶ ಇರಬೇಕು. ವಿಶೇಷವಾಗಿ ಅಧಿಕಾರಿಗಳು ಮತ್ತು ಪೊಲೀಸರ ಸಂಬಂಧಿಕರ ಅನಧಿಕೃತ ಎಂಟ್ರಿ (ಟಿಕೆಟ್ ಪ್ರವೇಶ ಇರುವ ಕಡೆ) ನಿಲ್ಲಿಸಬೇಕು.
ಎಚ್.ಗುರುಮೂರ್ತಿ, ಶ್ರೀರಾಂಪುರ ೨ನೇ ಹಂತ, ಮೈಸೂರು
” ದಸರಾ ಯಶಸ್ಸನ್ನು ಕೇವಲ ಬಂದ ಪ್ರವಾಸಿಗರ ಸಂಖ್ಯೆ, ನಡೆದ ಕಾರ್ಯಕ್ರಮಗಳ ವೈಭವ ಅಥವಾ ಅರಮನೆಯ ದೀಪಾಲಂಕಾರದ ಆಧಾರದ ಮೇಲೆ ಅಳೆಯಬಾರದು. ದಸರೆಯ ಸಂದರ್ಭದಲ್ಲಿ ನಗರ ಎಷ್ಟು ಸ್ವಚ್ಛವಾಗಿತ್ತು, ಸಾರ್ವಜನಿಕರಿಗೆ ಎಷ್ಟು ಉತ್ತಮ ವ್ಯವಸ್ಥೆ ಕಲ್ಪಿಸಲಾಗಿತ್ತು, ಸ್ಥಳೀಯ ಕಲಾವಿದರಿಗೆ ಎಷ್ಟು ಪ್ರೋತ್ಸಾಹ ದೊರೆಯಿತು, ಶ್ರಮಿಕರಿಗೆ ಎಷ್ಟು ಗೌರವ ಸಿಕ್ಕಿತು ಮತ್ತು ನಮ್ಮ ಸಂಸ್ಕೃತಿ ಎಷ್ಟು ಸಮರ್ಥವಾಗಿ ಅನಾವರಣಗೊಂಡಿತು ಎಂಬುದೂ ಯಶಸ್ಸಿನ ಮಾನದಂಡಗಳಾಗಬೇಕು.”
ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗೆ ರಾಜ್ಯಾದ್ಯಂತ ಏಕರೂಪದ ಪ್ರಶ್ನೆಪತ್ರಿಕೆ ಜಾರಿಗೆ ತಂದಿರುವ ಸರ್ಕಾರದ ನಿರ್ಧಾರ ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ಅತ್ಯಂತ…
ಮೈಸೂರಿನ ಕೆಆರ್ಎಸ್ ರಸ್ತೆಯ ವೆಂಕಟರಮಣ ಸ್ವಾಮಿ ದೇವಸ್ಥಾನ ಎದುರಿನ ಸರ್ಕಾರಿ ಹಿರಿಯ ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಯು ಮುಚ್ಚುವ ಹಂತಕ್ಕೆ…
ರಾಜರಾಂ ತಲ್ಲೂರು ಅಮೆರಿಕದ ಅಧ್ಯಕ್ಷರ ಮೇಲೆ ಪ್ರಭಾವ ಬೀರಲು ಲಾಬಿ ಕಂಪೆನಿಗಳ ಬಳಕೆ ಅಮೆರಿಕದ ಆಡಳಿತ ವ್ಯವಸ್ಥೆ, ಸಂಸತ್ ಮತ್ತಿತರ…
ಮಂಜುಕೋಟೆ ದಲಿತ ಸಮುದಾಯದ ಆಕಾಂಕ್ಷಿಗಳಲ್ಲಿ ಅಸಮಾಧಾನ; ಬಿಸಿಎಂ ಎ ವರ್ಗದಲ್ಲಿ ಸಂತಸ ಎಚ್.ಡಿ. ಕೋಟೆ: ತಾಲ್ಲೂಕಿನ ಇತಿಹಾಸದಲ್ಲೇ ಪರಿಶಿಷ್ಟ ಜಾತಿಗೆ…
ಬೆಂಗಳೂರು: ಪರಿಸರವಾದಿಗಳ ವಿರೋಧದ ಬೆನ್ನಲ್ಲೇ ಲಾಲ್ಬಾಗ್ ಮೂಲಕ ಸುರಂಗ ರಸ್ತೆ ನಿರ್ಮಿಸುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಈ ಕುರಿತು…