Andolana originals

‘ಸಂವಿಧಾನದ ಹೆಸರಿನಲ್ಲಿ ಪ್ರತ್ಯೇಕ ವೇದಿಕೆ ಸೃಷ್ಟಿಸದಿರಿ’

ಸಂವಿಧಾನ ದಿನಾಚರಣೆ ಹೆಸರಲ್ಲಿ ಮೇಲಾಟಕ್ಕೆ ಪ್ರಗತಿಪರ ಚಿಂತಕರು, ಸಂಸ್ಕೃತಿ ಚಿಂತಕರು, ರೈತರು, ಕಾರ್ಮಿಕರ ಬೇಸರ 

ನವೆಂಬರ್ ೨೬ರಂದು ಮೈಸೂರಿನಲ್ಲಿ ಸಂವಿಧಾನ ದಿನ ಆಚರಿಸಲಾಗುತ್ತದೆ. ಒಂದೆಡೆ ರಾಜ್ಯ ಸರ್ಕಾರವೇ ಆಚರಿಸುವ ಸಂವಿಧಾನ ದಿನಾಚರಣೆ. ಮತ್ತೊಂದೆಡೆ ಅದೇ ದಿನ ಸಂಘಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ಸಂವಿಧಾನ ದಿನಾಚರಣೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ನಡುವಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಇದಕ್ಕೆ ವಿಶೇಷ ಮಹತ್ವ. ಈ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಡಾ.ಮಹದೇವಪ್ಪ ಅವರಿಗೆ ಸ್ಪಷ್ಟತೆ ಇದ್ದರೂ ಕೆಲವರಿಗೆ ವ್ಯಕ್ತಿ ಪ್ರತಿಷ್ಠೆಗಳ ಅಖಾಡ. ಇಲ್ಲಿ ಸಂವಿಧಾನದ ಆಶಯಗಳು ಮುಖ್ಯವಾಗಬೇಕೇ ವಿನಾ ವೈಯಕ್ತಿಕ ಅಜೆಂಡಾಗಳಲ್ಲ. ಇದು ರಾಜಕೀಯ ಹಿತಾಸಕ್ತಿಗಳ ಆಡುಂಬೋಲ ಅಲ್ಲ. ಈ ಹಿನ್ನೆಲೆಯಲ್ಲಿ ಯಾರು ಏನು ಹೇಳಿದ್ದಾರೆ? ಓದಿ

ಸಂವಿಧಾನ ದಿನಾಚರಣೆ ಸ್ಪರ್ಧೆಯಲ್ಲ, ತತ್ವಗಳ ಬದ್ಧತೆಯ ಸಂಕೇತವಾಗಲಿ:  ಸಂವಿಧಾನ ದಿನಾಚರಣೆಯನ್ನು ಯಾರು ಎಲ್ಲಿ ಬೇಕಾದರೂ ಆಚರಿಸಲಿ. ಸರ್ಕಾರ ಮಾಡಲಿ, ಮಹದೇವಪ್ಪನವರು ಮಾಡಲಿ ಅಥವಾ ಇತರೆ ಸಂಘಟನೆಗಳು ಮಾಡಲಿ. ಇದರಲ್ಲಿ ಯಾವುದೇ ಸ್ಪರ್ಧೆ ಇರಬಾರದು. ಹೆಚ್ಚು ಹೆಚ್ಚು ಜನರು ಭಾಗವಹಿಸುವುದು ಮುಖ್ಯ. ಇಂದು ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನವನ್ನು ಉಳಿಸುವುದು ಅತ್ಯಂತ ಮುಖ್ಯ. ಧರ್ಮಗಳು ದ್ವೇಷವನ್ನಲ್ಲ, ಮಾನವೀಯತೆ ಮತ್ತು ಸಹಬಾಳ್ವೆಯನ್ನು ಕಲಿಸಬೇಕು. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೇ ಹೊರತು ದ್ವೇಷಿಸಬಾರದು. ಸಂವಿಧಾನ ದಿನಾಚರಣೆ ಕೇವಲ ಆಚರಣೆಯಾಗದೆ, ಅಂಬೇಡ್ಕರ್ ಅವರನ್ನು ಗೌರವಿಸುವ ಮತ್ತು ಸಂವಿಧಾನದ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರತಿಜ್ಞೆಯಾಗಬೇಕು.

ಜಿ.ಪಿ.ಬಸವರಾಜು, ಹಿರಿಯ ಪತ್ರಕರ್ತ

ಯುವ ಜನರಿಗೆ ಸಂವಿಧಾನದ ಮೌಲ್ಯ ಪರಿಚಯಿಸುವುದು ಅಗತ್ಯ:  ಸಂವಿಧಾನ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಾಗಬಾರದು. ಯುವಜನರಲ್ಲಿ ಸಂವಿಧಾನದ ಬಗ್ಗೆ ಆಸಕ್ತಿ ಬೆಳೆಸುವ, ಅದರ ಮೌಲ್ಯಗಳು ಮತ್ತು ಆಶಯಗಳನ್ನು ತಲುಪಿಸುವ ನಿರಂತರ ಪ್ರಯತ್ನವಾಗಬೇಕು. ಈ ಹಿಂದೆ ಅಂಬೇಡ್ಕರ್ ಕೇಂದ್ರಗಳ ಮೂಲಕ ವರ್ಷವಿಡೀ ವಿವಿಧ ಸಂಸ್ಥೆಗಳು, ಕಾಲೇಜುಗಳು ಹಾಗೂ ಶಾಲೆಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ ಪರಿಚಯಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಅಂತಹ ಪ್ರಯತ್ನಗಳನ್ನು ಮುಂದುವರಿಸಿಕೊಂಡು ಹೋಗಬೇಕು.

ಪ್ರೊ.ಆರ್.ಇಂದಿರಾ, ಸಮಾಜಶಾಸ್ತ್ರಜ್ಞರು 

ಸರ್ಕಾರ ಸಂಘಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು:  ಸಂವಿಧಾನ ದಿನಾಚರಣೆ ಕಾರ್ಯಕ್ರಮ ಆಯೋಜನೆಗೂ ಮುನ್ನ ಸರ್ಕಾರ ಎಲ್ಲ ಸಂಘ-ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಬೇಕಿತ್ತು. ಸರ್ಕಾರ ಮತ್ತು ದಲಿತ ಸಂಘಟನೆಗಳು ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರಿಂದ ಸಂಘಟನೆಗಳ ನಡುವೆ ಒಡಕು ಮೂಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವ ಸಾಧ್ಯತೆಯಿದೆ.

ಬಡಗಲಪುರ ನಾಗೇಂದ್ರ, ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ

ಸಂವಿಧಾನ ಜಾಗೃತಿ ಕಾರ್ಯಕ್ರಮಗಳು ಹೆಚ್ಚಬೇಕು:  ಸಂವಿಧಾನದ ಆಶಯ ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಯಾರೇ ಕಾರ್ಯಕ್ರಮ ನಡೆಸಿದರೂ ತಪ್ಪಿಲ್ಲ. ಸಂವಿಧಾನದ ಕುರಿತು ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ಕಾರ್ಯ ವೈಖರಿಯನ್ನು ಜನರಿಗೆ ತಿಳಿಸಬೇಕು. ಸಂವಿಧಾನ ರಚನಾ ಸಮಿತಿಯಲ್ಲಿ ೧೬ ಹೆಣ್ಣು ಮಕ್ಕಳು ಇದ್ದರು. ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ ಮುಂದಿಟ್ಟಾಗ ಅದನ್ನು ಯಾರು ವಿರೋಧಿಸಿದರು ಎಂಬುದನ್ನು ಜನತೆ ಮುಂದಿಡಬೇಕು.

ರತಿರಾವ್, ಹೋರಾಟಗಾರ್ತಿ

ಪ್ರತ್ಯೇಕ ಕಾರ್ಯಕ್ರಮ ಸರಿಯಲ್ಲ:  ಸಂವಿಧಾನ ದಿನಾಚರಣೆ ಎನ್ನುವುದು ಪ್ರತಿಯೊಬ್ಬರೂ ಸೇರಿಕೊಂಡು ಆಚರಿಸಬೇಕಾದ ಕಾರ್ಯಕ್ರಮ. ಇಲ್ಲಿ ಒಬ್ಬೊಬ್ಬರು ತಮ್ಮದೇ ಸಿದ್ಧಾಂತಗಳನ್ನು ಮುಂದಿಟ್ಟುಕೊಂಡು ಪ್ರತ್ಯೇಕವಾಗಿ ಸಂವಿಧಾನ ದಿನಾಚರಣೆ ಮಾಡಲು ಮುಂದಾಗುವುದು ಸರಿಯಲ್ಲ. ಇಡೀ ಭಾರತೀಯರಿಗೆ ಇರುವುದು ಒಂದೇ ಸಂವಿಧಾನ. ಅದನ್ನು ನಮಗೆ ಬೇಕಾದಂತೆ ಅರ್ಥೈಸಿಕೊಳ್ಳುವ ಬದಲು, ಸಂವಿಧಾನದಲ್ಲಿ ಏನಿದೆಯೋ ಅದನ್ನು ಯಥಾವತ್ತಾಗಿ ಅರ್ಥಮಾಡಿಕೊಂಡು ಪಾಲಿಸುವುದು ಮುಖ್ಯ.

ಸ್ಟ್ಯಾನ್ಲಿ ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ

ಪ್ರತಿ ಮನೆಗೂ ಸಂವಿಧಾನದ ಆಶಯ ತಲುಪಲಿ:  ಸಂವಿಧಾನದ ಚೌಕಟ್ಟಿನಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನಾವು ಸ್ವಾಗತಿಸುತ್ತೇವೆ. ಮತಗಳಿಕೆಗಾಗಿ ಸಂವಿಧಾನ ಪರಿಪಾಲಕರು ನಾವು ಎಂದು ತೋರಿಸಬಾರದು. ಸಂವಿಧಾನದ ಪ್ರಸ್ತಾವನೆಯ ಆಶಯಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯಗಳು ನಡೆಯಬೇಕು. ಸಂವಿಧಾನದ ಆಶಯವನ್ನು ದೇಶದ ಪ್ರತಿ ಮನೆ ಮನೆಗೂ ತಲುಪಿಸುವ ಕೆಲಸವಾಗಲಿ.

ಎಂ.ಎನ್.ಸುಮನ, ಹೋರಾಟಗಾರ್ತಿ

ಪರಸ್ಪರ ವಿರೋಧಿಗಳಾಗದಿರಲಿ:  ಸಂವಿಧಾನ ದಿನಾಚರಣೆ ಇಡೀ ಭರತ ಖಂಡಕ್ಕೆ ಹಾಗೂ ಜನಕೋಟಿಗೆ ಆದರ್ಶಪ್ರಾಯವಾದದ್ದು. ಇಂತಹ ಮಹತ್ವದ ದಿನವನ್ನು ಎಲ್ಲರೂ ಒಟ್ಟಾಗಿ ಆಚರಿಸಿದರೆ ಬಹಳ ಒಳ್ಳೆಯದು. ಏಕೆಂದರೆ ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ. ಆದರೆ ಅವು ಪರಸ್ಪರ ವಿರೋಧಿಗಳಾಗದೆ ಪೂರಕವಾಗಿರಬೇಕು.

ಪ್ರೊ.ಕಾಳೇಗೌಡ ನಾಗವಾರ, ಸಂಸ್ಕೃತಿ ಚಿಂತಕ

ಪ್ರತ್ಯೇಕ ಕಾರ್ಯಕ್ರಮಗಳಿಂದ ಬೇಸರ:  ಸಂವಿಧಾನ ದಿನಾಚರಣೆಯ ಅಂಗವಾಗಿ ಮೈಸೂರಿನಲ್ಲಿ ಎರಡು ಪ್ರತ್ಯೇಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಬೇಸರದ ಸಂಗತಿ. ಎಲ್ಲರೂ ಸೇರಿಕೊಂಡು ಒಂದೇ ವೇದಿಕೆಯಲ್ಲಿ ಸಂವಿಧಾನ ದಿನಾಚರಣೆ ಆಚರಿಸಿದರೆ ಸಂವಿಧಾನದ ಆಶಯ ಮತ್ತು ಅದರ ಉದ್ದೇಶಕ್ಕೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಮೈಸೂರಿನಲ್ಲಿ ಎರಡು ಕಾರ್ಯಕ್ರಮಗಳು ನಡೆಯುತ್ತಿರುವುದು ಮನಸ್ಸಿಗೆ ನೋವುಂಟು ಮಾಡಿದೆ.

ನಾರಾಯಣ, ಮಾಜಿ ಮಹಾಪೌರ

 

 

 

ಆಂದೋಲನ ಡೆಸ್ಕ್

Recent Posts

ವಿನಯ್‌ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ ಹಿನ್ನಡೆ: ಜಾಮೀನು ರದ್ದು, ಶರಣಾಗಲು 2 ವಾರ ಗಡುವು!

ನವದೆಹಲಿ: ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ವಿನಯ್‌ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ ಹಿನ್ನಡೆಯಾಗಿದೆ. ಹೈಕೋರ್ಟ್‌ ನೀಡಿದ್ದ ಜಾಮೀನನ್ನು ರದ್ದುಗೊಳಿಸಿರುವ ನ್ಯಾಯಾಲಯ, ಎರಡು…

1 hour ago

ಓದುಗರ ಪತ್ರ: ಬ್ರೇಕ್ ಬೀಳಬೇಕು ಅತಿಯಾಸೆಗೆ!

ಬ್ರೇಕ್ ಬೀಳಬೇಕು ಅತಿಯಾಸೆಗೆ! ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಇನ್ನೆಲ್ಲಿಗೆ ಹೋಗಬೇಕೆಂಬುದು ತಿಳಿಯದೆ ವಿಲವಿಲ ಒzಡಿತು ಕಾಡಾನೆ ಪಡೆ!ಹೊಸದೇನಲ್ಲ ಮಾನವ-ವನ್ಯಜೀವಿಗಳ ಸಂಘರ್ಷ! ಬೆಳೆದಂತೆಲ್ಲ…

2 hours ago

ಓದುಗರ ಪತ್ರ: ಬಸ್‌ಗಳಲ್ಲಿ ಈ ಫಲಕ ಇನ್ನೂ ಇರಬೇಕೆ?

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಮೊದಲ ಎರಡು ಸೀಟುಗಳಲ್ಲಿ ವಿಧಾನಸಭಾ ಸದಸ್ಯರು ಮತ್ತು ಲೋಕಸಭಾ ಸದಸ್ಯರು ಹಾಗೂ…

2 hours ago

ಓದುಗರ ಪತ್ರ: ಜನಸಾಮಾನ್ಯರಿಗೂ ಸಂವಿಧಾನದ ಮಹತ್ವ ತಿಳಿಯಬೇಕು

ನವೆಂಬರ್ ೨೬ರಂದು ಆಚರಿಸಲಾಗುವ ಸಂವಿಧಾನ ದಿನಾಚರಣೆ ಕೇವಲ ಸರ್ಕಾರ, ರಾಜಕಾರಣಿಗಳು, ಜನಪ್ರತಿನಿಧಿಗಳು, ಸರ್ಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳಿಗೆ ಸೀಮಿತವಾಗಬಾರದು. ಕಟ್ಟಕಡೆಯ…

3 hours ago

ದಸರಾಗೆ ಅದ್ಭುತ ಬ್ರ್ಯಾಂಡಿಂಗ್ ಅಗತ್ಯ

ಗಿರಿಧರ ಗುಂಜಗೋಡು, ಐಟಿ ಉದ್ಯೋಗಿ ಮತ್ತು ಪ್ರವಾಸಿ ಲೇಖಕ ಅರಮನೆ ಸುತ್ತಮುತ್ತ ಖಾಸಗಿ ವಾಹನಗಳ ನಿಷೇಧವಿರಲಿ ಮೈಸೂರಿಗರಿಗೆ ಇಲ್ಲಿನ ಇತಿಹಾಸ,…

3 hours ago

ಊನಗೊಂಡ ಕಾಲುಗಳಲ್ಲೇ ಟ್ರೆಕ್ಕಿಂಗ್ ಮಾಡಿದ ಶಿಜೋಯ್

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಾಂಬೋಡಿಯಾದಿಂದ ವಿಯಾಟ್ನಾಮ್‌ಗೆ ಸೈಕಲ್ ತುಳಿದ ಧೀರ  ಮುಂಬೈಯ ವಿಕ್ರೋಲಿ ಎಂಬಲ್ಲಿನ ಶಿಜೊಯ್  ಜಾಕೋಬ್ ಹುಟ್ಟಿದಾಗ…

3 hours ago