ಅಂಕಣಗಳು

ಊನಗೊಂಡ ಕಾಲುಗಳಲ್ಲೇ ಟ್ರೆಕ್ಕಿಂಗ್ ಮಾಡಿದ ಶಿಜೋಯ್

ಪಂಜುಗಂಗೊಳ್ಳಿ ಅವರ ವಾರದ ಅಂಕಣ 

ಕಾಂಬೋಡಿಯಾದಿಂದ ವಿಯಾಟ್ನಾಮ್‌ಗೆ ಸೈಕಲ್ ತುಳಿದ ಧೀರ 

ಮುಂಬೈಯ ವಿಕ್ರೋಲಿ ಎಂಬಲ್ಲಿನ ಶಿಜೊಯ್  ಜಾಕೋಬ್ ಹುಟ್ಟಿದಾಗ ಅವನ ಎರಡೂ ಕಾಲುಗಳು ಒಳ ಮುಖವಾಗಿ ಬಾಗಿ ತೀವ್ರವಾಗಿ ಊನಗೊಂಡಿದ್ದವು. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ ‘ಕ್ಲಬ್ ಫೂಟ್’ ಅಥವಾ ‘ಕಾಂಜೆನಿಟಲ್ ಟ್ಯಾಲಿಪಿಸ್ ಇಕ್ಯೂನೋವೇರಸ್’ ಎಂದು ಹೆಸರು. ಇದು ೧೦೦೦ ಶಿಶುಗಳಲ್ಲಿ ಒಂದರಲ್ಲಿ ಕಾಣಿಸಿಕೊಳ್ಳುತ್ತದೆ. ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಎರಡು ಪಟ್ಟು ಹೆಚ್ಚು. ಹುಟ್ಟಿದ ಒಂದೆರಡು ವಾರಗಳಲ್ಲಿ ಶಿಜೋಯ್‌ಯ ತಾಯಿ ಪುಷ್ಪಾ ಜಕೋಬ್ ಪ್ರತೀ ದಿನ ಅವನನ್ನು ವಿಕ್ರೋಲಿಯಿಂದ ೨೩ ಕಿಮೀ.ದೂರದಲ್ಲಿರುವ ವರ್ಲಿ ಎಂಬಲ್ಲಿರುವ ಒಂದು ಆಸ್ಪತ್ರೆಗೆ ಎತ್ತಿಕೊಂಡು ಹೋಗಲು ಶುರು ಮಾಡಬೇಕಾಯಿತು. ಪುಷ್ಪಾ ಜಾಕೋಬ್ ಸ್ವತಃ ಒಬ್ಬ ಅಸ್ತಮಾ ಮತ್ತು ಅಪಸ್ಮಾರ ರೋಗಿ. ಶಾರ್ಟ್ ಹ್ಯಾಂಡ್ ಟೈಪಿಸ್ಟ್ ಉದ್ಯೋಗಸ್ಥೆಯಾಗಿದ್ದ ಅವರು ಮಗನ ಆರೈಕೆಗಾಗಿ ಕೆಲಸ ಬಿಡಬೇಕಾಯಿತು.

ಮುಂದೆ ಶಿಜೋಯ್‌ಯ ಕಾಲುಗಳಿಗೆ ಶಸಚಿಕಿತ್ಸೆ ಮಾಡಲಾಯಿತು. ಅವನು ಬೆಳೆದಂತೆ ಅಂಬೆಗಾಲಿಡಲು ಹಾಗೂ ನಡೆಯಲು ಅನುಕೂಲವಾಗಲು ಅವನ ಕಾಲು ಗಂಟುಗಳಿಗೆ ವಿಶೇಷ ರೀತಿಯ ಶೂಗಳನ್ನು ಅಳವಡಿಸಲಾಯಿತು. ನಂತರ ಎಂಟು ವರ್ಷವಾದಾಗ ಅವನ ಕಾಲುಗಳಿಗೆ ಆರ್ಥೋಪೆಡಿಕ್ ಬೂಟುಗಳನ್ನು ತೊಡಿಸಲಾಯಿತು. ಅಷ್ಟೆಲ್ಲ ಮಾಡಿದರೂ ಫಲಿತಾಂಶ ಹೆಚ್ಚಿರಲಿಲ್ಲ. ಶಿಜೋಯ್ ಚಿಕ್ಕವನಿರುವಾಗ ಅವನಿಗೆ ಅವೆಲ್ಲ ಸಮಸ್ಯೆಗಳಾಗಿ ಕಾಣ ಬರುತ್ತಿರಲಿಲ್ಲ. ಆದರೆ, ದೊಡ್ಡವನಾಗುತ್ತ ಬಂದಂತೆ ತನಗೆ ಇತರ ಮಕ್ಕಳಂತೆ ಓಡಲು, ನೆಗೆಯಲು, ಕುಣಿಯಲು ಆಗದಿರುವುದು ಅವನ ಅನುಭವಕ್ಕೆ ಬರತೊಡಗಿ, ಬೇಸರ ಪಟ್ಟುಕೊಳ್ಳುತ್ತಿದ್ದನು. ‘ತಾನು ಯಾವಾಗ ಇದನ್ನೆಲ್ಲ ಮಾಡಲು ಶಕ್ಯನಾಗುತ್ತೇನೆ? ತನಗೆ ಇದನ್ನೆಲ್ಲ ಮಾಡಲು ಸಾಧ್ಯವಾಗುವುದೇ?’ ಎಂದು ಆಲೋಚಿಸುತ್ತಿದ್ದನು. ಆದರೆ, ಅವನ ತಾಯಿ ‘ಖಂಡಿತಾ ನೀನು ಇದನ್ನೆಲ್ಲ ಮಾಡಬಲ್ಲೆ’ ಎಂದು ಹೇಳುತ್ತ ಅವನ ದುಗುಡವನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದರು.

ಶಿಜೋಯ್ ಒಂಬತ್ತು ವರ್ಷದವನಾದಾಗ ಆ ವಿಶೇಷ ಬೂಟುಗಳನ್ನು ಧರಿಸುವುದನ್ನು ಬಿಟ್ಟು, ನಿಧಾನವಾಗಿ ಇತರ ಸಾಮಾನ್ಯ ಮಕ್ಕಳಂತೆ ಸಾಮಾನ್ಯ ಚಟುವಟಿಕೆಗಳನ್ನು ಮಾಡಲು ಪ್ರಾರಂಭಿಸಿದನು. ಆದರೆ, ಪ್ರತೀ ಬಾರಿ ಪ್ರಯತ್ನಿಸುವಾಗ ತಾನು ಬಿದ್ದು, ಕಾಲುಗಳು ಇನ್ನಷ್ಟು ಘಾಸಿಗೊಳ್ಳಬಹುದು ಎಂಬ ಭಯ ಸದಾ ಅವನನ್ನು ಕಾಡುತ್ತಿತ್ತು. ಆದರೆ, ತಾಯಿ ಪುಷ್ಪಾ ಜಾಕೋಬ್ ಗೆ ಮಗನ ಒಂದೊಂದು ಹೆಜ್ಜೆ ಗುರುತೂ ಒಂದೊಂದು ಮೈಲಿಗಲ್ಲಿನಂತೆ ಕಾಣುತ್ತಿತ್ತು.

ಶಿಜೋಯ್ ಹೀಗೆ ಕೆಲವು ವರ್ಷಗಳ ಕಾಲ ಅತ್ಯಂತ ಜಾಗರೂಕತೆಯಿಂದ ತನ್ನ ದೈಹಿಕ ಚಟುವಟಿಕೆಗಳನ್ನು ಮುಂದುವರಿಸಿದನು. ಮುಂದೆ, ಕಾಲೇಜಿಗೆ ಹೋದಾಗ ತನ್ನ ದೈಹಿಕ ಮಿತಿ ಎಷ್ಟೆಂಬುದನ್ನು ಸ್ವತಃ ಪರೀಕ್ಷೆ ಮಾಡಲು ಮುಂದಾಗಿ, ಸ್ವಲ್ಪ ಸ್ವಲ್ಪವಾಗಿ ಓಡಲು ಶುರು ಮಾಡಿದನು. ನಂತರ, ಕ್ರಿಕೆಟ್ ಆಡಲು ಶುರು ಮಾಡಿದನು. ಹೀಗೆ ಮಾಡುತ್ತ ಅವನ ಆತ್ಮವಿಶ್ವಾಸ ಹೆಚ್ಚಿ, ೨೦೧೪-೧೫ರಲ್ಲಿ ಪ್ರಪ್ರಥಮ ಬಾರಿಗೆ ೧೦ ಕಿಮೀ ರೇಸಿನಲ್ಲಿ ಭಾಗವಹಿಸಿದನು. ಆ ಹತ್ತು ಕಿಮೀ ರೇಸನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದುದು ಅವನ ಬದುಕಿನ ಅತ್ಯಂತ ಪ್ರಮುಖ ಮೈಲಿಗಲ್ಲಾಯಿತು.

ಅದರ ನಂತರ ಅವನಿಗೆ ತನ್ನ ದೇಹದ ಮೇಲಿನ ಆತಂಕ ಕಡಿಮೆಯಾಗುತ್ತ, ಮುಂದೆ ಹೆಚ್ಚು ದೀರ್ಘದ ಓಟ, ಪರ್ವತಾರೋಹಣ ಮೊದಲಾದ ಹೆಚ್ಚಿನ ದೈಹಿಕ ಕ್ಷಮತೆಯನ್ನು ಬೇಡುವ ಚಟುವಟಿಕೆಗಳಲ್ಲಿ ಭಾಗವಹಿಸತೊಡಗಿದನು. ೨೦೨೧ ಮತ್ತು ೨೦೨೨ರಲ್ಲಿ ನಡೆದ ಎರಡು ಘಟನೆಗಳು ಶಿಜೋಯ್‌ಯ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದವು. ಮಹಾರಾಷ್ಟ್ರದ ಸಂಧಾನ್ ಕಣಿವೆಯಲ್ಲಿ ಪರ್ವತಾರೋಹಣ ನಡೆಸುತ್ತಿದ್ದಾಗ ಕೆಳಕ್ಕೆ ಬಿದ್ದು, ಅವನ ತೋಳ ಸಂಧಿ ಕಳಚಿತು. ಆಗ ಅವನು ಎದೆಗುಂದದೆ ಆ ತೋಳಿಗೆ ಒಂದು ಬಟ್ಟೆ ತುಂಡನ್ನು ಬಿಗಿದು, ಪುನಃ ಹತ್ತಿ, ಬೆಟ್ಟದ ತುದಿಯನ್ನು ಯಶಸ್ವಿಯಾಗಿ ತಲುಪಿದನು. ಶಿಜೋಯ್ ತನ್ನ ಕಾಲಿನ ನ್ಯೂನತೆಯ ನಡುವೆಯೂ ಬಾಲ್ಯದಲ್ಲಿ ಇತರ ಮಕ್ಕಳಂತೆ ಸೈಕಲ್ ನಡೆಸುವುದನ್ನು ಕಲಿತಿದ್ದನು. ೨೦೨೨ರಲ್ಲಿ ಆತನ ಮೂವರು ಸ್ನೇಹಿತರು ಮಂಗಳೂರಿನಿಂದ ಗೋವಾಕ್ಕೆ ಸೈಕಲ್ ರೈಡ್ ಮಾಡುವ ಯೋಚನೆ ಮಾಡಿದರು. ಶಿಜೋಯ್ ಮೊದಲಿಗೆ ಹಿಂಜರಿದನಾದರೂ ನಂತರ ‘ಪ್ರಯತ್ನ ಮಾಡಬಾದರದೇಕೆ’ ಎಂದು ಆಲೋಚಿಸಿ ಆ ಸಾಹಸಕ್ಕೆ ಒಪ್ಪಿಕೊಂಡನು. ಆತನ ಸ್ನೇಹಿತರು ಶಿಜೋಯ್ ಹಿಂದುಳಿದು, ಅವನಿಗಾಗಿ ಕಾಯಬೇಕಾಗಿ ಬರಬಹುದೆಂದು ಯೋಚಿಸಿದ್ದರು. ಆದರೆ, ಶಿಜೋಯ್ ಅವರಿಗೆ ಸಮಾನವಾಗಿ ಸೈಕಲ್ ತುಳಿದು ಆ ಪ್ರಮೇಯವೇ ಬಾರದಂತೆ ನೋಡಿಕೊಂಡನು. ಮಂಗಳೂರು-ಗೋವಾ ಸೈಕಲ್ ರೈಡ್ ನಂತರ ಮುಂದೆ ಅವರು ತಮಿಳುನಾಡು ಮತ್ತು ಕೇರಳಕ್ಕೂ ಸೈಕಲ್ ರೈಡ್ ನಡೆಸಿದರು. ಅದರ ನಂತರ ಶಿಜೋಯ್‌ಗೆ ತನ್ನ ದೈಹಿಕ ಕ್ಷಮತೆಯ ಬಗ್ಗೆ ಯಾವುದೇ ಅನುಮಾನಗಳು ಉಳಿಯಲಿಲ್ಲ. ೨೦೨೪ರಲ್ಲಿ ನಾಲ್ವರು ಸ್ನೇಹಿತರು ಶ್ರೀಲಂಕಾಕ್ಕೆ ಹೋಗಿ, ದ್ವೀಪ ರಾಷ್ಟ್ರವನ್ನು ಸೈಕಲಲ್ಲಿ ಒಂದು ಸುತ್ತು ಹಾಕಿ ಬಂದರು. ೨೦೨೬ರಲ್ಲಿ ಕಾಂಬೋಡಿಯಾದಿಂದ ವಿಯಾಟ್ನಾಮ್‌ಗೆ ಸೈಕಲ್ ರೈಡ್ ಮಾಡಿದರು.

ಸೈಕ್ಲಿಂಗ್ ಶಿಜೋಯ್‌ಗೆ ಒಂದು ಹಂತದ ಆತ್ಮವಿಶ್ವಾಸವನ್ನು ಕೊಡಿಸಿದರೆ, ಟ್ರೆಕ್ಕಿಂಗ್ ಅವನಲ್ಲಿ ಇನ್ನೊಂದು ಹಂತದ ಆತ್ಮವಿಶ್ವಾಸವನ್ನು ತುಂಬಿತು. ೨೦೨೬ರಲ್ಲಿ ಹಿಮಾಲಯ ಟ್ರೆಕ್ಕಿಂಗ್‌ಗಾಗಿ ಒಬ್ಬಂಟಿಯಾಗಿ ಮುಂಬೈಯಿಂದ ಪ್ರಯಾಣಿಸಿ, ಒಂದು ಟ್ರೆಕ್ಕಿಂಗ್ ತಂಡವನ್ನು ಸೇರಿ, ೧೪ ಕೆಜಿ ಬ್ಯಾಕ್ ಪ್ಯಾಕ್ ಹೊತ್ತು, ಮಳೆ, ಶೀತ, ಹಿಮಪಾತ, ಆಮ್ಲಜನಕ ಕೊರತೆ ಮೊದಲಾದ ಅಡೆತಡೆಗಳನ್ನು ಎದುರಿಸಿ, ನಡುವೆ ಅನಾರೋಗ್ಯ ಪೀಡಿತನಾದರೂ ಛಲ ಬಿಡದೆ ಏಳು ದಿನಗಳಲ್ಲಿ ಯಶಸ್ವಿಯಾಗಿ ೧೫,೦೦೦ ಅಡಿಗಳ ಟ್ರೆಕ್ಕಿಂಗ್ ನಡೆಸಿದುದು ಶಿಜೋಯ್ ಬದುಕಿನ ಅತ್ಯಂತ ದೊಡ್ಡ ಮೈಲಿಗಲ್ಲು. ಒಂದೊಮ್ಮೆ ಮುಂದೆ ತಾನು ನಡೆಯಬಲ್ಲೆನೋ ಎಂದು ಅನುಮಾನಿಸುತ್ತಿದ್ದ ಶಿಜೋಯ್ ಜಾಕೋಬ್ ಎಲ್ಲಾ ಅಂಗಾಂಗಗಳು ಸರಿಯಾಗಿರುವವರೂ ಮಾಡದ ಸಾಹಸಗಳನ್ನು ಮಾಡಲು ಸಾಧ್ಯವಾಗಿರುವುದು ತನ್ನ ದೈಹಿಕ ಕ್ಷಮತೆಗಿಂತ ಹೆಚ್ಚಾಗಿ ತನ್ನ ಮಾನಸಿಕ ದೃಢತೆ ಹೆಚ್ಚು ಕಾರಣ ಎಂದು ಹೇಳುತ್ತಾನೆ.

ಈಗ ೩೮ ವರ್ಷ ಪ್ರಾಯವಾಗಿರುವ ಶಿಜೋಯ್ ಜಾಕೋಬ್ ಒಂದು ಬಹುರಾಷ್ಟ್ರ ಕಂಪೆನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗಿಯಾಗಿದ್ದಾನೆ. ಪ್ರತೀ ದಿನ ಆತ ೧೦೦ ಕಿಮೀಗಿಂತ ಹೆಚ್ಚು ಸೈಕಲ್ ನಡೆಸುತ್ತಾನೆ. ಮುಂದೆ ಸೈಕಲ್‌ನಲ್ಲಿ ಹೆಚ್ಚು ಹೆಚ್ಚು ದೇಶಗಳನ್ನು ಸುತ್ತುವುದು ಆತನ ಗುರಿ.

” ಈಗ ೩೮ ವರ್ಷ ಪ್ರಾಯವಾಗಿರುವ ಶಿಜೋಯ್ ಜಾಕೋಬ್ ಒಂದು ಬಹುರಾಷ್ಟ್ರ ಕಂಪೆನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗಿಯಾಗಿದ್ದಾನೆ. ಪ್ರತೀ ದಿನ ಆತ ೧೦೦ ಕಿಮೀಗಿಂತ ಹೆಚ್ಚು ಸೈಕಲ್ ನಡೆಸುತ್ತಾನೆ. ಮುಂದೆ ಸೈಕಲ್‌ನಲ್ಲಿ ಹೆಚ್ಚು ಹೆಚ್ಚು ದೇಶಗಳನ್ನು ಸುತ್ತುವುದು ಆತನ ಗುರಿ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಜನಸಾಮಾನ್ಯರಿಗೂ ಸಂವಿಧಾನದ ಮಹತ್ವ ತಿಳಿಯಬೇಕು

ನವೆಂಬರ್ ೨೬ರಂದು ಆಚರಿಸಲಾಗುವ ಸಂವಿಧಾನ ದಿನಾಚರಣೆ ಕೇವಲ ಸರ್ಕಾರ, ರಾಜಕಾರಣಿಗಳು, ಜನಪ್ರತಿನಿಧಿಗಳು, ಸರ್ಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳಿಗೆ ಸೀಮಿತವಾಗಬಾರದು. ಕಟ್ಟಕಡೆಯ…

21 seconds ago

ದಸರಾಗೆ ಅದ್ಭುತ ಬ್ರ್ಯಾಂಡಿಂಗ್ ಅಗತ್ಯ

ಗಿರಿಧರ ಗುಂಜಗೋಡು, ಐಟಿ ಉದ್ಯೋಗಿ ಮತ್ತು ಪ್ರವಾಸಿ ಲೇಖಕ ಅರಮನೆ ಸುತ್ತಮುತ್ತ ಖಾಸಗಿ ವಾಹನಗಳ ನಿಷೇಧವಿರಲಿ ಮೈಸೂರಿಗರಿಗೆ ಇಲ್ಲಿನ ಇತಿಹಾಸ,…

5 mins ago

ಮಲೆನಾಡಿನಲ್ಲಿ ಏಲಕ್ಕಿ ಕೃಷಿ ಅವಸಾನದತ್ತ

ಲಕ್ಷ್ಮೀಕಾಂತ್ ಕೊಮಾರಪ್ಪ ಅಕಾಲಿಕ ಮಳೆ, ರೋಗಬಾಧೆ, ಕಾರ್ಮಿಕರ ಕೊರತೆ  ಸೋಮವಾರಪೇಟೆ: ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದ್ದ ಏಲಕ್ಕಿ ಕೃಷಿ…

22 mins ago

ಬೀದಿಬದಿ ವ್ಯಾಪಾರಿಗಳಿಗೆ ಕೊನೆಗೂ ಸುಸಜ್ಜಿತ ಮಾರುಕಟ್ಟೆ ಸೌಲಭ್ಯ

ಎಂ.ನಾರಾಯಣ ತಿ.ನರಸೀಪುರ: ನ.೨೯ರಂದು ಮಾಜಿ ಸಿಎಂ ಸಿದ್ದರಾಮಯ್ಯ, ಗಣ್ಯರಿಂದ ಉದ್ಘಾಟನೆ ತಿ.ನರಸೀಪುರ: ಪಟ್ಟಣದ ಸೌಂದರ್ಯೀಕರಣ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ವ್ಯವಸ್ಥಿತ…

28 mins ago

ತಾ.ಪಂ.–ಜಿ.ಪಂ. ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ಚುನಾವಣೆ ಸಾಧ್ಯತೆ ಎಂದ ಖಂಡ್ರೆ!

ಬೆಂಗಳೂರು: ರಾಜ್ಯದ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರಗಳ ಮೀಸಲಾತಿಯ ಅಂತಿಮ ಅಧಿಸೂಚನೆ ಪ್ರಕಟವಾಗಿದೆ ಎಂದು ಸಚಿವ…

18 hours ago