ಎಂ.ನಾರಾಯಣ
ತಿ.ನರಸೀಪುರ: ನ.೨೯ರಂದು ಮಾಜಿ ಸಿಎಂ ಸಿದ್ದರಾಮಯ್ಯ, ಗಣ್ಯರಿಂದ ಉದ್ಘಾಟನೆ
ತಿ.ನರಸೀಪುರ: ಪಟ್ಟಣದ ಸೌಂದರ್ಯೀಕರಣ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ವ್ಯವಸ್ಥಿತ ವ್ಯಾಪಾರ ವಹಿವಾಟಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿನ ಪುರಸಭೆ ಕೈಗೊಂಡಿದ್ದ ಮಹತ್ವಾಕಾಂಕ್ಷಿ ಯೋಜನೆ ಕೊನೆಗೂ ಸಾಕಾರಗೊಂಡಿದೆ. ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ನೂತನ ತರಕಾರಿ ಮಾರುಕಟ್ಟೆ ಹಾಗೂ ನವೀಕರಣಗೊಂಡ ಮಾಂಸದ ಮಾರುಕಟ್ಟೆ ನವೆಂಬರ್ ೨೯ರಂದು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಯಾಗಲಿವೆ.
ಪಟ್ಟಣದಲ್ಲಿ ನಡೆಯಲಿರುವ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಸಂಸದ ಸುನಿಲ್ ಬೋಸ್ ಅವರು ಈ ನೂತನ ಮಾರುಕಟ್ಟೆಗಳನ್ನು ಉದ್ಘಾಟಿಸಲಿದ್ದಾರೆ.
ಒಂದೇ ಸೂರಿನಡಿ ವ್ಯವಸ್ಥಿತ ವ್ಯಾಪಾರ ವಲಯ: ಪಟ್ಟಣದ ಲಿಂಕ್ ರಸ್ತೆಯಲ್ಲಿ ಈ ಹಿಂದೆ ಮಾಂಸದ ವ್ಯಾಪಾರ ನಡೆಯುತ್ತಿದ್ದ ಸ್ಥಳವನ್ನು ತೆರವುಗೊಳಿಸಿ, ಆ ಜಾಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಇದೇ ಆವರಣದಲ್ಲಿದ್ದ ಬಳಕೆಗೆ ಯೋಗ್ಯವಲ್ಲದ ಹಳೆಯ ಮಾಂಸದ ಮಾರುಕಟ್ಟೆಯನ್ನು ಸಂಪೂರ್ಣ ದುರಸ್ತಿಗೊಳಿಸಿ ನವೀಕರಿಸಲಾಗಿದ್ದು, ಮಾಂಸ ಮಾರಾಟಗಾರರಿಗೆ ಶುಚಿತ್ವದೊಂದಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಇದಲ್ಲದೆ, ಮಾರುಕಟ್ಟೆ ರಸ್ತೆಯಲ್ಲಿದ್ದ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ಮಾರುಕಟ್ಟೆಯನ್ನು ತೆರವುಗೊಳಿಸಿ, ಹೂವಿನ ವ್ಯಾಪಾರಿಗಳ ಅನುಕೂಲಕ್ಕಾಗಿ ನೂತನ ಮಳಿಗೆಗಳನ್ನು ನಿರ್ಮಿಸಲಾಗಿದೆ. ಇದರಿಂದ ತರಕಾರಿ, ಹಣ್ಣು, ಸೊಪ್ಪು, ಹೂವು ಹಾಗೂ ಮಾಂಸ ಮಾರಾಟಗಾರರು ಒಂದೇ ವ್ಯವಸ್ಥಿತ ವ್ಯಾಪಾರ ವಲಯದಲ್ಲಿ ವಹಿವಾಟು ನಡೆಸಲು ಸಾಧ್ಯವಾಗಲಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಹಿಂದೆ ಪಟ್ಟಣದ ಲಿಂಕ್ ರಸ್ತೆ ಮತ್ತು ಮಾರುಕಟ್ಟೆ ರಸ್ತೆಯ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ನಡೆಸುತ್ತಿದ್ದ ತರಕಾರಿ, ಸೊಪ್ಪು, ಹಣ್ಣು ಹಾಗೂ ಹೂವಿನ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ವ್ಯಾಪಾರಿಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಆದರೆ, ವ್ಯಾಪಾರಿಗಳ ಜೀವನೋಪಾಯಕ್ಕೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಪುರಸಭೆ ನೀಡಿತ್ತು.
ಅಂದು ಪುರಸಭೆ ಮುಖ್ಯಾಧಿಕಾರಿ ಸಿ. ಶ್ರೀನಿವಾಸ್ ಹಾಗೂ ಸಿಪಿಐ ಧನಂಜಯ್ ಅವರು ವ್ಯಾಪಾರಿಗಳೊಂದಿಗೆ ಸೌಹಾರ್ದಯುತ ಸಮಾಲೋಚನೆ ನಡೆಸಿ, ಸುಸಜ್ಜಿತ ಮಳಿಗೆಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ನೀಡಿದ್ದ ಮಾತಿನಂತೆ ಮಾರುಕಟ್ಟೆ ನಿರ್ಮಾಣ ಹಾಗೂ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ವ್ಯಾಪಾರಿಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ.
ನ.೨೯ರಂದು ಅಧಿಕೃತ ಪರವಾನಗಿ ವಿತರಣೆ: ನವೆಂಬರ್ ೨೯ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಅರ್ಹ ನೈಜ ವ್ಯಾಪಾರಸ್ಥರಿಗೆ ಅಧಿಕೃತ ವ್ಯಾಪಾರ ಪರವಾನಗಿ ಪತ್ರಗಳನ್ನು ವಿತರಿಸಲು ಪುರಸಭೆ ನಿರ್ಧರಿಸಿದೆ. ಈ ಸಂಬಂಧ ತರಕಾರಿ, ಹಣ್ಣು, ಸೊಪ್ಪು, ಹೂವು ಹಾಗೂ ಮಾಂಸ ಮಾರಾಟಗಾರರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ಭರದಿಂದಸಾಗಿದೆ. ನೂತನ ಮಳಿಗೆಗಳು ಕಾರ್ಯಾರಂಭ ಮಾಡಿದ ಬಳಿಕ ಪಟ್ಟಣದಲ್ಲಿ ಫುಟ್‌ಪಾತ್ ಒತ್ತುವರಿ ಹಾಗೂ ಬೀದಿ ಬದಿ ವ್ಯಾಪಾರಕ್ಕೆ ಶಾಶ್ವತ ಕಡಿವಾಣ ಬೀಳಲಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೂ ಮುಕ್ತ ಅವಕಾಶ ದೊರೆಯಲಿದೆ.
ಸಾರ್ವಜನಿಕರ ಮೆಚ್ಚುಗೆ: ವ್ಯಾಪಾರಿಗಳ ಬದುಕಿಗೆ ಭದ್ರತೆ ಒದಗಿಸುವುದರ ಜೊತೆಗೆ ಪಟ್ಟಣದ ರಸ್ತೆ ಮತ್ತು ಫುಟ್‌ಪಾತ್‌ಗಳನ್ನು ಸುಂದರಗೊಳಿಸುವ ಪುರಸಭೆಯ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಲಕ್ಷ್ಮೀಕಾಂತ್ ಕೊಮಾರಪ್ಪ ಅಕಾಲಿಕ ಮಳೆ, ರೋಗಬಾಧೆ, ಕಾರ್ಮಿಕರ ಕೊರತೆ ಸೋಮವಾರಪೇಟೆ: ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದ್ದ ಏಲಕ್ಕಿ ಕೃಷಿ…
ಬೆಂಗಳೂರು: ರಾಜ್ಯದ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರಗಳ ಮೀಸಲಾತಿಯ ಅಂತಿಮ ಅಧಿಸೂಚನೆ ಪ್ರಕಟವಾಗಿದೆ ಎಂದು ಸಚಿವ…
ಕೆ.ಆರ್.ನಗರ : ಚೀರನಹಳ್ಳಿ ಗ್ರಾಮದ ಅಭಿವೃದ್ಧಿಗೆ ಬದಲು ಇಲ್ಲಿನ ಕಾಂಗ್ರೆಸ್ ಮುಖಂಡರ ಮನೆ ಅಭಿವೃದ್ಧಿ ಆಗಿದೆ ಗ್ರಾಮದಲ್ಲಿ ಚರಂಡಿ ಕೂಡ…
ಬೆಂಗಳೂರು: ಕಾಡಿನಂಚಿನ ಗ್ರಾಮಗಳಲ್ಲಿ ಹೆಚ್ಚುತ್ತಿರುವ ಆನೆ–ಮಾನವ ಸಂಘರ್ಷಕ್ಕೆ ಆನೆಧಾಮ ಸ್ಥಾಪನೆಯಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವ ಈಶ್ವರ್ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.…
ಬೆಂಗಳೂರು: ಕೆಆರ್‌ಎಸ್ ಜಲಾಶಯದ ಒಳಹರಿವು ಕ್ಷೀಣಿಸಿರುವ ನಡುವೆಯೇ ಹೊರಹರಿವು ಹೆಚ್ಚಳವಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ತಮಿಳುನಾಡಿಗೆ ನೀರು ಬಿಡುಗಡೆ ಹಿನ್ನೆಲೆಯಲ್ಲಿ…