Andolana originals

ಮಲೆನಾಡಿನಲ್ಲಿ ಏಲಕ್ಕಿ ಕೃಷಿ ಅವಸಾನದತ್ತ

ಲಕ್ಷ್ಮೀಕಾಂತ್ ಕೊಮಾರಪ್ಪ

ಅಕಾಲಿಕ ಮಳೆ, ರೋಗಬಾಧೆ, ಕಾರ್ಮಿಕರ ಕೊರತೆ 

ಸೋಮವಾರಪೇಟೆ: ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದ್ದ ಏಲಕ್ಕಿ ಕೃಷಿ ಇದೀಗ ಕೊಡಗು ಜಿಲ್ಲೆಯಲ್ಲಿ ಕ್ಷೀಣಿಸುತ್ತಿದೆ. ಒಂದು ಕಾಲದಲ್ಲಿ ರೈತರ ಆರ್ಥಿಕ ಆಸರೆಯಾಗಿದ್ದ ಏಲಕ್ಕಿ ಕೃಷಿ, ಅಕಾಲಿಕ ಮಳೆ, ರೋಗಬಾಧೆ, ಕಾರ್ಮಿಕರ ಕೊರತೆಯಿಂದಾಗಿ ಅವಸಾನದ ಅಂಚಿಗೆ ತಲುಪಿದೆ.

ಪಶ್ಚಿಮಘಟ್ಟದ ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದ ಏಲಕ್ಕಿ ಕೃಷಿಯಿಂದ ವಾರ್ಷಿಕ ನೂರಾರು ಕೆ.ಜಿ. ಇಳುವರಿ ಪಡೆದು ಆದಾಯ ಗಳಿಸುತ್ತಿದ್ದ ಕೃಷಿಕರು ಇದೀಗ ತೋಟಗಳ ನಿರ್ವಹಣೆ ಸಾಧ್ಯವಾಗದೆ ಕೃಷಿಯಿಂದಲೇ ದೂರ ಸರಿಯುತ್ತಿದ್ದಾರೆ.

ಅಕಾಲಿಕ ಮಳೆ, ಕೊಳೆ ಹಾಗೂ ಕಟ್ಟೆ ರೋಗದಿಂದ ಏಲಕ್ಕಿ ಗಿಡಗಳನ್ನು ರಕ್ಷಿಸುವುದು ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಸುಧಾರಿತ ತಳಿಗಳನ್ನು ಬೆಳೆಸಿದರೂ ಅವು ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳದೆ ನಷ್ಟ ಉಂಟುಮಾಡುತ್ತಿವೆ. ಇದರಿಂದಾಗಿ ಕೃಷಿಕರು ಏಲಕ್ಕಿ ಬೆಳೆಯುವ ಆಸಕ್ತಿಯನ್ನೇ ಕಳೆದು ಕೊಳ್ಳುತ್ತಿದ್ದಾರೆ.

ವಾರ್ಷಿಕ ಸರಾಸರಿ ೧೫೦ರಿಂದ ೨೫೦ ಇಂಚು ಮಳೆಯಾಗುವ ಪ್ರದೇಶಗಳಲ್ಲಿ ಏಲಕ್ಕಿ ಕೃಷಿ ಹೆಚ್ಚು ಕಂಡುಬರುತ್ತದೆ. ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಪುಷ್ಪಗಿರಿ ಬೆಟ್ಟದ ತಪ್ಪಲಿನ ಪ್ರದೇಶಗಳು, ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ಕರಿಕೆ ಹಾಗೂ ವಿರಾಜಪೇಟೆ ತಾಲ್ಲೂಕಿನ ಬಿರುನಾಣಿ, ಬಿ. ಶೆಟ್ಟಿಗೇರಿ ಭಾಗಗಳಲ್ಲಿ ಏಲಕ್ಕಿ ಪ್ರಮುಖ ವಾಣಿಜ್ಯ ಬೆಳೆಯಾಗಿತ್ತು.

ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಎದುರಾಗುತ್ತಿರುವ ಅಕಾಲಿಕ ಮಳೆ, ರೋಗಬಾಧೆ, ಕಾರ್ಮಿಕರ ಅಭಾವ, ಅಧಿಕ ಉತ್ಪಾದನಾ ವೆಚ್ಚ, ಇಳುವರಿ ಕುಸಿತ ಹಾಗೂ ಕಾಫಿ ಕೃಷಿಯತ್ತ ಬೆಳೆಗಾರರ ಒಲವು ಸೇರಿದಂತೆ ಹಲವು ಕಾರಣಗಳಿಂದ ನೂರಾರು ಕೃಷಿಕರು ಏಲಕ್ಕಿ ತೋಟಗಳ ನಿರ್ವಹಣೆಯನ್ನು ಕೈಬಿಟ್ಟಿದ್ದಾರೆ. ಕೆಲವರು ಏಲಕ್ಕಿ ತೋಟಗಳನ್ನು ಕಾಫಿ ತೋಟಗಳಾಗಿ ಪರಿವರ್ತಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಸುಮಾರು ೫,೮೦೦ ಹೆಕ್ಟೇರ್ ಪ್ರದೇಶದಲ್ಲಿ ಏಲಕ್ಕಿ ಬೆಳೆಯಲಾಗುತ್ತಿದ್ದು, ಸೋಮವಾರಪೇಟೆ ತಾಲ್ಲೂಕಿನ ಒಂದರಲ್ಲೇ ಸುಮಾರು ೧,೭೦೦ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತಿತ್ತು.

ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಏಲಕ್ಕಿಗೆ ೨,೫೦೦ರಿಂದ ೩,೦೦೦ ರೂ.ವರೆಗೆ ಬೆಲೆ ಇದೆ. ಮಾರುಕಟ್ಟೆಯಲ್ಲಿ ಆಶಾದಾಯಕ ಬೆಲೆ ಇದ್ದರೂ ಉತ್ಪಾದನೆ ಮಾಡುವಷ್ಟು ಏಲಕ್ಕಿ ಗಿಡಗಳು ತೋಟಗಳಲ್ಲಿ ಉಳಿದಿಲ್ಲ ಎಂಬುದು ವಿಪರ್ಯಾಸ. ಪುಷ್ಪಗಿರಿ ಬೆಟ್ಟಶ್ರೇಣಿ ವ್ಯಾಪ್ತಿಯಲ್ಲಿ ಶೇ.೨೦ರಷ್ಟು ಕೃಷಿಕರು ಮಾತ್ರ ಇಂದಿಗೂ ಏಲಕ್ಕಿಯನ್ನು ಪ್ರಧಾನ ಬೆಳೆಯಾಗಿ ಮುಂದುವರಿಸಿದ್ದಾರೆ. ಉಳಿದವರು ಕಾಫಿ ಕೃಷಿಯತ್ತ ಮುಖ ಮಾಡಿದ್ದಾರೆ.

” ಅಕಾಲಿಕ ಮಳೆ ಹಾಗೂ ರೋಗಬಾಧೆಯಿಂದ ಶಾಂತಳ್ಳಿ ಹೋಬಳಿಯಲ್ಲಿ ಏಲಕ್ಕಿ ಕೃಷಿ ಅವಸಾನದ ಅಂಚಿಗೆ ತಲುಪಿದೆ. ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ಕೆ.ಜಿ.ಗೆ ೪,೦೦೦ರಿಂದ ೫,೦೦೦ ರೂ. ಬೆಲೆ ಸಿಕ್ಕರೆ ಮಾತ್ರ ಏಲಕ್ಕಿ ಕೃಷಿಯನ್ನು ಮುಂದುವರಿಸಲು ಸಾಧ್ಯ. ಸರ್ಕಾರ ರೈತರಿಗೆ ಪ್ರತಿ ಎಕರೆಗೆ ೫೦ ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು.”

-ರಾಮಪ್ಪ, ಏಲಕ್ಕಿ ಬೆಳೆಗಾರ, ತೋಳೂರುಶೆಟ್ಟಳ್ಳಿ 

ವೈಜ್ಞಾನಿಕ ಕೃಷಿ ಪದ್ಧತಿ ಅಗತ್ಯ…:  ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಏಲಕ್ಕಿ ಕೃಷಿಯನ್ನು ಮತ್ತೆ ಲಾಭದಾಯಕವಾಗಿಸಲು ಸಾಧ್ಯವಿದೆ. ರೋಗರಹಿತ ಏಲಕ್ಕಿ ಸಸಿಗಳನ್ನು ನಾಟಿ ಮಾಡಬೇಕು. ನರ್ಸರಿಗಳಲ್ಲಿ ರಿಯಾಯಿತಿ ದರದಲ್ಲಿ ಸಸಿಗಳು ಲಭ್ಯವಿದ್ದು, ಕಟ್ಟೆ ರೋಗ ಪೀಡಿತ ಗಿಡಗಳಿಂದ ಬೀಜ ಸಂಗ್ರಹಿಸಿ ನರ್ಸರಿ ಮಾಡಬಾರದು. ರೋಗ ನಿಯಂತ್ರಣ ಹಾಗೂ ನಿರ್ವಹಣೆ ಕುರಿತು ತಜ್ಞರಿಂದ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಂಬಾರ ಮಂಡಳಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.

” ೨೦೨೬-೨೭ನೇ ಸಾಲಿನಲ್ಲಿ ಏಲಕ್ಕಿ ಕೃಷಿಯ ಪುನಶ್ಚೇತನಕ್ಕಾಗಿ ಸಂಬಾರ ಮಂಡಳಿಯಿಂದ ಹಲವು ಸಹಾಯಧನ ಯೋಜನೆಗಳನ್ನು ರೂಪಿಸಲಾಗಿದೆ. ಏಲಕ್ಕಿ ಮರುನಾಟಿ ಹಾಗೂ ನರ್ಸರಿ ಅಭಿವೃದ್ಧಿಗೆ ಸಾಕಷ್ಟು ಅರ್ಜಿಗಳು ಬಂದಿವೆ. ಕೃಷಿಕರಿಗೆ ಅಗತ್ಯ ಮಾಹಿತಿ ಮತ್ತು ತರಬೇತಿ ನೀಡಲಾಗುತ್ತಿದ್ದು, ಹಂತ ಹಂತವಾಗಿ ವಿವಿಧ ಸಹಾಯಧನ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಬೆಳೆಗಾರರು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು.”

-ಎನ್.ಬಿ.ಲೋಕೇಶ್, ಸಂಬಾರ ಮಂಡಳಿ ಕ್ಷೇತ್ರಾಧಿಕಾರಿ, ಸೋಮವಾರಪೇಟೆ 

 

 

ಆಂದೋಲನ ಡೆಸ್ಕ್

Recent Posts

ಊನಗೊಂಡ ಕಾಲುಗಳಲ್ಲೇ ಟ್ರೆಕ್ಕಿಂಗ್ ಮಾಡಿದ ಶಿಜೋಯ್

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಾಂಬೋಡಿಯಾದಿಂದ ವಿಯಾಟ್ನಾಮ್‌ಗೆ ಸೈಕಲ್ ತುಳಿದ ಧೀರ  ಮುಂಬೈಯ ವಿಕ್ರೋಲಿ ಎಂಬಲ್ಲಿನ ಶಿಜೊಯ್  ಜಾಕೋಬ್ ಹುಟ್ಟಿದಾಗ…

4 mins ago

ಬೀದಿಬದಿ ವ್ಯಾಪಾರಿಗಳಿಗೆ ಕೊನೆಗೂ ಸುಸಜ್ಜಿತ ಮಾರುಕಟ್ಟೆ ಸೌಲಭ್ಯ

ಎಂ.ನಾರಾಯಣ ತಿ.ನರಸೀಪುರ: ನ.೨೯ರಂದು ಮಾಜಿ ಸಿಎಂ ಸಿದ್ದರಾಮಯ್ಯ, ಗಣ್ಯರಿಂದ ಉದ್ಘಾಟನೆ ತಿ.ನರಸೀಪುರ: ಪಟ್ಟಣದ ಸೌಂದರ್ಯೀಕರಣ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ವ್ಯವಸ್ಥಿತ…

21 mins ago

ತಾ.ಪಂ.–ಜಿ.ಪಂ. ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ಚುನಾವಣೆ ಸಾಧ್ಯತೆ ಎಂದ ಖಂಡ್ರೆ!

ಬೆಂಗಳೂರು: ರಾಜ್ಯದ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರಗಳ ಮೀಸಲಾತಿಯ ಅಂತಿಮ ಅಧಿಸೂಚನೆ ಪ್ರಕಟವಾಗಿದೆ ಎಂದು ಸಚಿವ…

18 hours ago

ಚೀರನಹಳ್ಳಿಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ: ಸಾ.ರಾ.ಮಹೇಶ್ ಸಮ್ಮುಖದಲ್ಲಿ 10 ಕುಟುಂಬಗಳು ಜೆಡಿಎಸ್‌ಗೆ ಸೇರ್ಪಡೆ

ಕೆ.ಆರ್.ನಗರ : ಚೀರನಹಳ್ಳಿ ಗ್ರಾಮದ ಅಭಿವೃದ್ಧಿಗೆ ಬದಲು ಇಲ್ಲಿನ ಕಾಂಗ್ರೆಸ್ ಮುಖಂಡರ ಮನೆ ಅಭಿವೃದ್ಧಿ ಆಗಿದೆ ಗ್ರಾಮದಲ್ಲಿ ಚರಂಡಿ ಕೂಡ…

19 hours ago

ಆನೆ–ಮಾನವ ಸಂಘರ್ಷಕ್ಕೆ ಆನೆಧಾಮ ಪರಿಹಾರ: ಈಶ್ವರ್‌ ಖಂಡ್ರೆ ಅಭಿಪ್ರಾಯ!

ಬೆಂಗಳೂರು: ಕಾಡಿನಂಚಿನ ಗ್ರಾಮಗಳಲ್ಲಿ ಹೆಚ್ಚುತ್ತಿರುವ ಆನೆ–ಮಾನವ ಸಂಘರ್ಷಕ್ಕೆ ಆನೆಧಾಮ ಸ್ಥಾಪನೆಯಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವ ಈಶ್ವರ್‌ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.…

19 hours ago