Andolana originals

ವೈಭವದ ವಸಂತ ಮಹಲ್‌ಗೆ ಬೇಕಿದೆ ಕಾಯಕಲ್ಪ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಗರಿಮೆಯ ಕಿರೀಟದಂತಿರುವ, ಅಚ್ಚ ಹಸಿರಿನ ನಡುವಿನ ೧೮೩ ವರ್ಷಗಳ ಇತಿಹಾಸವಿರುವ ಅರಮ ನೆಯೊಂದು ಶಿಥಿಲಗೊಂಡಿದೆ. ಪಾಳುಬಿದ್ದಂತಾಗಿ ಪಾರಂಪರಿಕತೆಗೆ ಧಕ್ಕೆಯಾಗಿದೆ. ರಾಜರ ಕಾಲದಿಂದ ಇಂದಿನವರೆಗೂ ಶಿಕ್ಷಣ ಕೇಂದ್ರವಾಗಿರುವ ‘ವಸಂತ ಮಹಲ್’ ಬಳಕೆಯಲ್ಲಿದ್ದರೂ ಕಟ್ಟಡ ಶಿಥಿಲವಾಗಿದ್ದು, ಅಂತಿಮ ದಿನಗಳನ್ನು ಎಣಿಸುತ್ತಿದೆ.

ಮೈಸೂರು ಸಂಸ್ಥಾನದಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದ್ದ ವಸಂತ ಮಹಲ್‌ನ ಅಸ್ತಿತ್ವವು ಇಂದು ಅವಸಾನದೆಡೆಗೆ ಸಾಗುತ್ತಿದೆ. ನಗರದ ಇಟ್ಟಿಗೆಗೂಡು ಮುಖ್ಯರಸ್ತೆಯಲ್ಲಿರುವ ವಸಂತ ಮಹಲ್, ವೈಭೋಗ ವಿಲಾಸಿಯ ಸಂಕೇತವಾಗಿದೆ. ಇಂದು ಅದರ ಕಟ್ಟಡ ಸಂಪೂರ್ಣವಾಗಿ ಹಾಳಾಗಿ ಎಂದು ಕುಸಿಯುತ್ತದೋ ಎಂಬ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗೋಡೆಗಳು ಬಣ್ಣ ಕಾಣದೇ ದಶಕಗಳೇ ಕಳೆದಿವೆ. ದಪ್ಪ ದಪ್ಪ ಗೋಡೆಗಳು ಬಿರುಕು ಬಿಟ್ಟು, ಗಾರೆ ಚಕ್ಕೆಗಳು ಉದುರಿ ಬಿದ್ದಿವೆ. ಮೇಲ್ಚಾವಣಿ ಮಳೆಯಲ್ಲಿ ನೆನೆದು, ಬಿಸಿಲಿನಲ್ಲಿ ಒಣಗಿ ಹಾಳಾಗಿದೆ. ಗೋಡೆಗಳ ಮೇಲೆ ಪಾಚಿ ಕಟ್ಟಿದ್ದು, ಗಿಡಗಂಟಿ ಬೆಳೆದುಕೊಂಡಿದೆ. ಶತಮಾ ನ ಕಂಡು ಪಾರಂಪರಿಕ ಹಿರಿಮೆಯ, ಆಳುವ ಅರಸರ ಬಂಗಲೆಯ ಕಟ್ಟಡ, ಶಿಥಿಲಗೊಂಡು ಜೀರ್ಣೋದ್ಧಾರವಾಗದೇ ಪಾಳುಬಿದ್ದಂತಾಗಿದೆ.

ಶಿಕ್ಷಣ ಕೇಂದ್ರ ವಸಂತ ಮಹಲ್
೩೬ ಎಕರೆ ವಿಸ್ತೀರ್ಣದ ವಿಶಾಲವಾದ ಜಾಗದಲ್ಲಿ ಅಚ್ಚ ಹಸಿರಿನ ವಾತಾವರಣದಲ್ಲಿ ವಸಂತ್ ಮಹಲ್‌ಅನ್ನು ೧೮೪೨ರಲ್ಲಿ ಮೈಸೂರು ಒಡೆಯರು ನಿರ್ಮಾಣ ಮಾಡಿದ್ದರು. ಅಂದಿನಿಂದಲೂ ರಾಜ ಮನೆತನದ ಶಿಕ್ಷಣ ಕೇಂದ್ರವಾಗಿ ಈ ಅರಮನೆ ಬಳಕೆಯಾಗುತ್ತಿತ್ತು. ಮಹಡಿಯನ್ನೊಳಗೊಂಡಂ ತಹ ಅರಮನೆ ಟಸ್ಕನ್ ಶೈಲಿಯಲ್ಲಿ ಕಟ್ಟಲಾಗಿದ್ದು, ಅರಮನೆಯ ಮುಂಭಾಗವನ್ನು ಮೃದುವಾದ ಕಬ್ಬಿಣದಿಂದ ನಿರ್ಮಿಸಲಾಗಿದೆ. ಈ ಕಟ್ಟಡವ ನ್ನು ಹಲವು ವರ್ಷಗಳ ಹಿಂದೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಗೆ ನೀಡಲಾಗಿದ್ದು, ಸಂಸ್ಥೆ ಆಡಳಿತ ನಡೆಸುತ್ತಿದೆ. ಸಂಪೂರ್ಣ ಶಿಥಿಲವಾಗಿರುವ ಕಟ್ಟಡ ಈವರೆಗೂ ದುರಸ್ತಿಯನ್ನೇ ಕಂಡಿಲ್ಲ. ಶಿಥಿಲಾವಸ್ಥೆಯ ಕಟ್ಟಡದಲ್ಲಿಯೇ ಅಧಿಕಾರಿಗಳು ಆತಂಕದಲ್ಲಿ ಕೆಲಸ ನಿರ್ವಹಿಸುವ ಪರಿಸ್ಥಿತಿ ಇದೆ.

ಪಾಳು ಬಿದ್ದಂತಿರುವ ಕಟ್ಟಡ
ವೈಭವದ ಈ ಅರಮನೆ ನೂರು ವರ್ಷಗಳನ್ನು ಪೂರೈಸಿದ್ದು, ಒಮ್ಮೆಯೂ ದುರಸ್ತಿ ಕಾರ್ಯ ನಡೆಯದ ಪರಿಣಾಮ ಕಟ್ಟಡ ಸಂಪೂರ್ಣ ಹಾಳಾಗಿದೆ. ಮೊದಲ ಮಹಡಿಯಲ್ಲಿ ಮೇಲ್ಚಾವಣಿ ಬಿರುಕು ಬಿಟ್ಟಿದ್ದು ಮಳೆಗಾಲದಲ್ಲಿ ನೀರು ಸೋರುತ್ತದೆ. ಸೂಕ್ತ ನಿರ್ವಹಣೆಯಿಲ್ಲದೇ ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಕಾರಣ ಗೋಡೆಗಳೆಲ್ಲ ವಸ್ತಿ ಹಿಡಿಯುತ್ತವೆ.

ಮೇಲ್ಚಾವಣಿ ಕೆಲವೆಡೆ ಮುರಿದುಬಿದ್ದಿದ್ದು, ಮರದಿಂದ ನಿರ್ಮಿತವಾದ ಕಿಟಕಿ ಬಾಗಿಲುಗಳು ದುಸ್ಥಿತಿಯಲ್ಲಿವೆ. ಈ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ನಿರ್ವಹಣೆ ಯಾರ ಜವಾಬ್ದಾರಿ?
ವಸಂತ ಮಹಲ್ ನೂರು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಪಾರಂಪರಿಕ ಕಟ್ಟಡ ಎಂದು ಪಾರಂಪರಿಕ ಇಲಾಖೆಗೆ ಸೇರಿಸಲಾಗಿದೆ. ಆದರೆ ಈ ಕಟ್ಟಡ ದಲ್ಲಿ ಡಯಟ್ ಸಂಸ್ಥೆಯು ಆಡಳಿತ ನಡೆಸುತ್ತಿದೆ. ಇದರ ನಿರ್ವಹಣೆಯನ್ನು ಸಂಸ್ಥೆಯೇ ಮಾಡಬೇಕಾಗಿದೆ. ಆದರೆ ಜೀರ್ಣೋದ್ಧಾರ ಕಾರ್ಯ ಯಾರದ್ದು ಎಂಬ ಗೊಂದಲವಿದ್ದು, ಅದರ ಜೀರ್ಣೋದ್ಧಾರ ಕೆಲಸವು ಪಾರಂಪರಿಕ ಇಲಾಖೆಗೆ ಸಂಬಂಧಿಸಿದ್ದು ಎಂಬ ಅನುಮಾನವಿದೆ.

ಪಾರಂಪರಿಕ ಇಲಾಖೆಯ ವ್ಯಾಪ್ತಿಗೆ ವಸಂತ್ ಮಹಲ್ ಒಳಪಟ್ಟರೂ ಅದರಲ್ಲಿ ಆಡಳಿತ ನಡೆಸುವ ಸಂಸ್ಥೆಯೇ ದುರಸ್ತಿಯ ಹೊಣೆ ಹೊರಬೇಕಿದೆ ಎಂದು ಪಾರಂಪರಿಕ ಇಲಾಖೆಯ ಸೂಚನೆಯಿದೆ. ೨೦೨೦ರ ಬಳಿಕ ಪಾರಂಪರಿಕ ಇಲಾಖೆಯ ನೇತೃತ್ವದಲ್ಲಿ ಆಯಾ ಜಿಲ್ಲೆಯ ಪಾರಂಪರಿಕ ಕಟ್ಟಡಗಳ ಜವಾಬ್ದಾರಿಯನ್ನು ನಿರ್ವಹಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಾರಂಪರಿಕ ಸಮಿತಿ ರಚಿಸಿದ್ದು, ಮಾರ್ಗಸೂಚಿ ಮೇರೆಗೆ ಕಟ್ಟಡ ನಿರ್ವಹಣೆಯ ಸಂಸ್ಥೆಗಳು ದುರಸ್ತಿ ಕಾರ್ಯ ನಡೆಸಬೇಕಿದೆ.

ಒಮ್ಮೆಯೂ ದುರಸ್ತಿ ಕಾಣದ ಕಟ್ಟಡ
೨೦೦೭-೦೮ರಲ್ಲಿ ಡಯಟ್ ಸಂಸ್ಥೆಯಿಂದ ಸಣ್ಣಪುಟ್ಟದಾಗಿ ತೇಪೆ ಹಚ್ಚುವ ಕೆಲಸ ಮಾಡಲಾಗಿತ್ತು. ಈ ಕಟ್ಟಡ ಬಳಕೆಗೆ ಯೋಗ್ಯವಾಗಿದ್ದು, ಇದರ ಪುನಶ್ಚೇತನ ಅವಶ್ಯ ಎಂದು ಪಾರಂಪರಿಕ ಇಲಾಖೆ ಪರಿಶೀಲನೆ ನಡೆಸಿ ೨೦೧೯-೨೦ನೇ ಸಾಲಿನಲ್ಲಿ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಿ ದುರಸ್ತಿಗೆ ೩ ಕೋಟಿ ರೂ. ಅನುದಾನ ನೀಡುವಂತೆ ಡಯಟ್ ಸಂಸ್ಥೆಯ ಸಹಯೋಗದಲ್ಲಿ ಮನವಿ ಸಲ್ಲಿಸಲಾಗಿತ್ತು.

ಆದರೆ, ಅನುದಾನ ಮೊತ್ತ ಹೆಚ್ಚೆಂದು ಸರ್ಕಾರ ಈವರೆಗೂ ಅನುಮೋದನೆ ನೀಡಿಲ್ಲ. ಈವರೆಗೂ ಎರಡು ಮೂರು ಬಾರಿ ಮನವಿ ಸಲ್ಲಿಸಿದರೂ ಸರ್ಕಾರಗಳು ಗಮನಹರಿಸಿಲ್ಲ. ಆ ಮೂಲಕ ಪಾರಂಪರಿಕ ಕಟ್ಟಡ ಉಳಿವಿಗೆ ಸರ್ಕಾರಗಳು ನಿರ್ಲಕ್ಷ್ಯ ತೋರುತ್ತಿವೆಯೇ ಎಂಬ ಪ್ರಶ್ನೆ ಮೂಡುತ್ತಿದೆ.

ಇದೀಗ ಡಯಟ್ ಎಕ್ಸಲೆನ್ಸ್ ವತಿಯಿಂದ ಡಯಟ್ ಗೆ ಪ್ರತ್ಯೇಕ ಕಟ್ಟಡ ನಿರ್ಮಿಸಿಕೊಳ್ಳಲು ೭ ಕೋಟಿ ರೂ. ಅನುದಾನ ನೀಡಲು ಮುಂದಾಗಿದ್ದು, ಈ ಹಣವನ್ನು ವಸಂತ್ ಮಹಲ್ ದುರಸ್ತಿಗೆ ಬಳಸುವಂತಿಲ್ಲ. ಒಂದು ವೇಳೆ ಡಯಟ್ ಸಂಸ್ಥೆಗೆ ಪ್ರತ್ಯೇಕ ಹೊಸ ಕಟ್ಟಡ ನಿರ್ಮಾಣವಾದರೆ, ವಸಂತ ಮಹಲ್ ಸ್ಥಿತಿ ಅವಸಾನವಾಗುತ್ತದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಏನೇ ಆಗಲಿ ಪಾರಂಪರಿಕ ಕಟ್ಟಡಗಳ ಉಳಿವಿನ ಜವಾಬ್ದಾರಿ ಸರ್ಕಾರಗಳದ್ದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರಗಳು ವಸಂತ್ ಮಹಲ್‌ಅನ್ನು ದುರಸ್ತಿಗೊಳಿಸಿ ಮೈಸೂರಿನ ಪಾರಂಪರಿಕತೆಯನ್ನು ಕಾಪಾಡುವ ಹೊಣೆಯನ್ನು ಹೊರಬೇಕಿದೆ.

ಆಂದೋಲನ ಡೆಸ್ಕ್

Recent Posts

ವಿರಾಜಪೇಟೆ | ಅವಘಡಕ್ಕಾಗಿ ಕಾಯುತ್ತಿದೆ ಮಾರುಕಟ್ಟೆ ಹಳೇ ಕಟ್ಟಡ..!

ಕುಸಿಯುವ ಹಂತದಲ್ಲಿದ್ದರೂ ಕ್ರಮ ಕೈಗೊಳ್ಳದ ಸ್ಥಳೀಯ ಆಡಳಿತ; ಸೂಕ್ತ ಕ್ರಮಕ್ಕೆ ಒತ್ತಾಯ ಕಾಂಗೀರ ಬೋಪಣ್ಣ ವಿರಾಜಪೇಟೆ : ಪಟ್ಟಣದ ಖಾಸಗಿ…

1 hour ago

ಗುಂಡ್ಲುಪೇಟೆ | ಶಿಥಿಲಗೊಂಡಿರುವ ಅಂಗನವಾಡಿ, ಶಾಲೆ ಕಟ್ಟಡಗಳು

ಗುಂಡ್ಲುಪೇಟೆ ತಾಲ್ಲೂಕಿನ ಕೆಲ ಗ್ರಾಮಗಳ ಅಂಗನವಾಡು, ಶಾಲೆಗಳಲ್ಲಿ ಮೇಲ್ಚಾವಣೆ ಸೋರಿಕೆ ಗುಂಡ್ಲುಪೇಟೆ : ತಾಲ್ಲೂಕಿನ ಸೋಮಹಳ್ಳಿ ಗ್ರಾಮದ ಎರಡನೇ ಅಂಗನವಾಡಿಯ…

1 hour ago

ನಂಜನಗೂಡು ನಗರಸಭೆ ವಾರ್ಡ್ ವಿಂಗಡಣೆ ; ಒಂದರಲ್ಲಿ ಸಾವಿರ ; ಮತ್ತೊಂದರಲ್ಲಿ 6 ಸಾವಿರ ಜನ

ಅವೈಜ್ಞಾನಿಕ ಜನಸಂಖ್ಯೆ ವಿಂಗಡಣೆ ಬಗ್ಗೆ ಸಾರ್ವಜನಿಕರ ಆಕ್ಷೇಪ ಎಸ್. ಎಸ್. ಭಟ್ ನಂಜನಗೂಡು : ನಗರದಲ್ಲಿ ೧,೦೨೩ ಜನರಿಗೆ ಒಂದು…

1 hour ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಮೇ 07 ಶುಕ್ರವಾರ  

5 hours ago

ಟಿವಿಕೆ ಗೆಲುವು : ಹನೂರಲ್ಲಿ ಸಂಭ್ರಮಾಚರಣೆ

ಹನೂರು : ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿರುವುದಕ್ಕೆ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ…

16 hours ago

ಪ.ಬಂಗಾಳ | ವಿಟೋ ಅಧಿಕಾರ ಬಳಸಿ ಮಂತ್ರಿಮಂಡಳ ವಿಸರ್ಜಿಸಿದ ರಾಜ್ಯಪಾಲ ; ದೀದಿಗೆ ಹಿನ್ನೆಡೆ

ಕೋಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಬಹು ಮತ ಗಳಿಸದೇ ಸೋಲನ್ನು ಅನುಭವಿಸಿದರೂ ಮುಖ್ಯಮಂತ್ರಿ…

16 hours ago