ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಅವರ ಈ ಪ್ರವಾಸದ ಹಿಂದೆ ತಮ್ಮ ರಾಜ್ಯದ ಪ್ರವಾಸೋದ್ಯಮವನ್ನು ಮತ್ತೆ ಹಿಂದಿನಂತೆ ಮೆರೆಸುವ ಇರಾದೆ ಇತ್ತು. ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಸಹಜವಾಗಿಯೇ ಇಳಿಮುಖವಾಗಿತ್ತು. ಪ್ರವಾಸೋದ್ಯಮವೇ ಮೂಲ ಆದಾಯ ಆಗಿರುವ ಆ ರಾಜ್ಯ ಮತ್ತೆ ಚೇತರಿಸಿಕೊಳ್ಳಲು ಹೇಗಾದರೂ ಅಲ್ಲಿ ಪ್ರವಾಸಿಗರು ಹೆಚ್ಚು ಹೆಚ್ಚು ಬರುವಂತೆ ಮಾಡಬೇಕು.
ಕಾಶ್ಮೀರದಲ್ಲಿ ಸಾಕಷ್ಟು ಚಿತ್ರಗಳ ಚಿತ್ರೀಕರಣ ಆಗುತ್ತದೆ. ಕಾಶ್ಮೀರ ಎಂದಲ್ಲ, ಭಾರತದ ಬಹುತೇಕ ರಾಜ್ಯಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪೂರಕವಾಗಿ ಚಲನಚಿತ್ರ ಪ್ರವಾಸೋದ್ಯಮ ನೀತಿ ಇದೆ. ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಿದರೆ ಏನೆಲ್ಲ ಸೌಲಭ್ಯಗಳನ್ನು, ಏನೆಲ್ಲ ಉತ್ತೇಜನಗಳನ್ನು ನೀಡುವ ವ್ಯವಸ್ಥೆ ಇದೆ ಎನ್ನುವುದನ್ನು ಹೇಳಲು, ಕರ್ನಾಟಕದ ಪ್ರಮುಖ ನಿರ್ಮಾಪಕರನ್ನು ಭೇಟಿಯಾಗಲು ಓಮರ್ ಅಬ್ದುಲ್ಲಾ ಅವರು ನಿರ್ಧರಿಸಿದ್ದರು. ಕೆಲವು ನಿರ್ಮಾಪಕರು ಅವರನ್ನು ಭೇಟಿಯಾದರು.
ಅವರಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ. ಜಿ. ರಾಮಮೂರ್ತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಸುಂದರರಾಜ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ಮಾಪಕ ಎನ್. ಎಸ್. ರಾಜಕುಮಾರ್, ಇನ್ನೋವೇಟಿವ್ ಪ್ರಸಾದ್, ನಿರ್ಮಾಪಕರ ಸಂಘದ ಜಂಟಿ ಕಾರ್ಯದರ್ಶಿ ರಮೇಶ್ ಯಾದವ್ ಮುಂತಾದವರಿದ್ದರು. ನಿರ್ಮಾಪಕ ಎನ್. ಎಸ್. ರಾಜಕುಮಾರ್ ಈ ಭೇಟಿಯ ವ್ಯವಸ್ಥೆಯನ್ನು ಮಾಡಿದ್ದರು.
ಓಮರ್ ಅಬ್ದುಲ್ಲಾ ಕನ್ನಡ ಚಿತ್ರಗಳ ಚಿತ್ರೀಕರಣಕ್ಕೆ ಜಮ್ಮು-ಕಾಶ್ಮೀರದಲ್ಲಿ ಸೂಕ್ತ ವ್ಯವಸ್ಥೆ ಹಾಗೂ ಭದ್ರತೆ ನೀಡುವುದರ ಜೊತೆಗೆ ಹೊಸ ಚಲನಚಿತ್ರ ನೀತಿಯಂತೆ ಸಹಾಯಧನ ಮತ್ತಿತರ ಸೌಲಭ್ಯಗಳನ್ನು ನೀಡುವುದಾಗಿ ಹೇಳಿದ್ದಾರೆ. ಕರ್ನಾಟಕದಲ್ಲಿ ನಿರ್ಮಾಪಕರನ್ನು ಭೇಟಿ ಮಾಡಿದ ಓಮರ್ ಅಬ್ದುಲ್ಲಾ ಅವರು, ಕರ್ನಾಟಕ ಸೇರಿದಂತೆ, ದಕ್ಷಿಣ ಭಾರತದ ಪ್ರಮುಖ ನಿರ್ಮಾಪಕರನ್ನು ಕಾಶ್ಮೀರಕ್ಕೆ ಆಹ್ವಾನಿಸಿದ್ದಾರೆ. ಇಷ್ಟರಲ್ಲೇ ಒಂದು ತಂಡ ಅಲ್ಲಿಗೆ ತೆರಳುವ ವ್ಯವಸ್ಥೆ ಆಗುತ್ತಿದೆ ಎಂದು ಈ ಭೇಟಿಯ ವ್ಯವಸ್ಥೆ ಮಾಡಿದ ರಾಜಕುಮಾರ್ ಹೇಳುತ್ತಾರೆ.
ಚಲನಚಿತ್ರ ನೀತಿ ಮತ್ತು ಚಲನಚಿತ್ರ ಪ್ರವಾಸೋದ್ಯಮ ನೀತಿ ಈಗ ಭಾರತದ ಬಹುತೇಕ ರಾಜ್ಯಗಳಲ್ಲಿ ಇವೆ. ಆಯಾ ರಾಜ್ಯಗಳ ಭಾಷಾ ಚಿತ್ರರಂಗಗಳಿಗೆ ನೀಡಲಾಗುವ ಸೌಲಭ್ಯ, ಸಹಾಯಧನ, ಅಲ್ಲಿರುವ ಮೂಲಸೌಲಭ್ಯಗಳೇ ಮೊದಲಾದ ವಿವರ-ವಿಷಯಗಳು ಅದರಲ್ಲಿ ಸೇರಿರುತ್ತವೆ. ಸ್ಥಳೀಯ ರಾಜ್ಯಭಾಷೆ ಮತ್ತು ಉಪಭಾಷೆಗಳ ಚಿತ್ರಗಳಿಗೆ ಮಾತ್ರವಲ್ಲ, ಇತರ ಭಾರತೀಯ ಭಾಷಾ ಚಿತ್ರಗಳಿಗೂ ಆ ರಾಜ್ಯಗಳಲ್ಲಿ ಉತ್ತೇಜನ ಇದೆ. ಸಹಾಯಧನ ನೀಡಲಾಗುತ್ತದೆ.
ಸಹಾಯಧನದ ಮೊತ್ತ ಬೇರೆಬೇರೆ ರಾಜ್ಯಗಳಲ್ಲಿ ಒಂದು ಕೋಟಿ ರೂ. ನಿಂದ ಮೊದಲ್ಗೊಂಡು ಷರತ್ತುಗಳಿಗೆ ಅನುಗುಣವಾಗಿ ಐದು ಕೋಟಿ ರೂ. ಗಳವರೆಗೆ ಇದೆ. ಅದು ಸ್ಥಳೀಯ ಕಲಾವಿದರನ್ನು ಬಳಸಿದರೆ ಇಷ್ಟು ಹೆಚ್ಚು, ತಂತ್ರಜ್ಞರನ್ನು ಬಳಸಿದರೆ ಇಷ್ಟು, ಅಲ್ಲಿನ ಲ್ಯಾಬ್‌ಗಳ ಬಳಕೆಯಾದರೆ ಇಷ್ಟು, ಹೀಗೆ ಸಹಾಯಧನದ ಮೊತ್ತ ಏರುತ್ತಾ ಹೋಗುತ್ತದೆ. ಅಲ್ಲಿ ಚಿತ್ರೀಕರಣ ಮಾಡಿದ ದಿನಗಳು, ಇಡೀ ಚಿತ್ರದಲ್ಲಿ ಅಲ್ಲಿನ ಪ್ರವಾಸಿ ತಾಣಗಳು ಕಾಣಿಸಿಕೊಳ್ಳುವ ಅವಧಿ, ಅಲ್ಲಿನ ಜನಜೀವನ, ಸಂಸ್ಕೃತಿಗಳ ಪರಿಚಯ ಇವು ಕೂಡ ಸಹಾಯ ಧನ ಹೆಚ್ಚು ಪಡೆಯಲು ಅನುಕೂಲವಾಗುತ್ತದೆ.
ಉತ್ತರ ಪ್ರದೇಶ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಽನದ ಫಿಲಂ ಬಂಧು, ಸಿನಿಮಾ ಸಂಬಂಧಿಸಿದ ಎಲ್ಲ ಕೆಲಸಗಳನ್ನೂ ಮಾಡುತ್ತದೆ. ಅಲ್ಲಿನ ಪ್ರವಾಸೋದ್ಯಮ ಇಲಾಖೆ ಜಾಹೀರಾತಿಗಾಗಿ ಪಾವತಿಸುವ ಮೊತ್ತವನ್ನು ಸಿನಿಮಾ ಸಹಾಯಧನ ನೀಡಲು ಬಳಸುತ್ತದೆ. ಆ ಮೂಲಕ ತಮ್ಮ ಪ್ರವಾಸೋದ್ಯಮ ತಾಣಗಳ ಪರಿಚಯ ಆಗುತ್ತದೆ ಎನ್ನುವುದು ಸರ್ಕಾರದ ನಿಲುವು.
ಚಲನಚಿತ್ರಗಳು ಪ್ರವಾಸೋದ್ಯಮವನ್ನು ಬೆಳೆಸಲು ಸಹಕಾರಿ ಎನ್ನುವುದಕ್ಕೆ ೧೯೯೬ರಲ್ಲಿ ತೆರೆಕಂಡ ಚಿತ್ರ ‘ನಮ್ಮೂರ ಮಂದಾರ ಹೂವೇ’ ಚಿತ್ರ ಜ್ವಲಂತ ಉದಾಹರಣೆ. ಆ ಚಿತ್ರದಲ್ಲಿ ಯಾಣವನ್ನು ತೋರಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಳಿ ಪಶ್ಚಿಮ ಘಟ್ಟಗಳ ಕಾಡುಗಳ ನಡುವೆ ಇರುವ ಯಾಣ, ಆ ಚಿತ್ರದಲ್ಲಿ ಬಳಕೆಯಾದ ನಂತರ ಅಲ್ಲಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಚಾರಣಿಗರ, ನಿಸರ್ಗ ಪ್ರೇಮಿಗಳ, ಪ್ರವಾಸಿಗರ ಈ ನೆಚ್ಚಿನ ತಾಣ ಕಳೆದ ತಿಂಗಳಲ್ಲಿ ‘ರಾಷ್ಟ್ರೀಯ ಮಹತ್ವದ ಭೂ ಪಾರಂಪರಿಕ ತಾಣ’ ಎಂದು ಮಾನ್ಯತೆ ಪಡೆದಿದೆ. ೨೭೦ ಕೋಟಿ ವರ್ಷಗಳಷ್ಟು ಹಳೆಯದು ಎನ್ನಲಾದ ಭೈರವೇಶ್ವರ (೧೨೦ ಅಡಿ) ಮತ್ತು ಮೋಹಿನಿ (೯೦ ಅಡಿ) ಎರಡು ಶಿಖರಗಳು ಇಲ್ಲಿನ ಮುಖ್ಯ ಆಕರ್ಷಣೆ.
‘ನಮ್ಮೂರ ಮಂದಾರ ಹೂವೇ’ ಚಿತ್ರದ ನಿರ್ಮಾಪಕರು ಜಯಶ್ರೀದೇವಿ. ನಿರ್ದೇಶಕರು ಸುನಿಲ್ ಕುಮಾರ್ ದೇಸಾಯಿ. ಶಿವರಾಜ್‌ಕುಮಾರ್, ರಮೇಶ್, ಪ್ರೇಮಾ ಮುಖ್ಯಭೂಮಿಕೆಯ ಈ ಚಿತ್ರ ಯಾಣದ ಸುತ್ತಮುತ್ತ ಚಿತ್ರೀಕರಣ ಆದ ನಂತರ ಅದು ಜನಪ್ರಿಯ ಪ್ರವಾಸಿ ತಾಣವಾಗಿ ಬದಲಾಯಿತು. ಇತ್ತೀಚೆಗೆ ಚಿತ್ರ ನಿರ್ಮಾಪಕರು ಹಾಡುಗಳ ಚಿತ್ರೀಕರಣಕ್ಕೆ ವಿದೇಶಗಳಿಗೆ ತೆರಳುತ್ತಾರೆ. ಅದರಲ್ಲೂ ಹೆಚ್ಚು ಮಂದಿ ಸ್ವಿಟ್ಜರ್‌ಲ್ಯಾಂಡಿನಲ್ಲಿ ತಮ್ಮ ಚಿತ್ರದ ಹಾಡುಗಳನ್ನು ಚಿತ್ರಿಸುತ್ತಾರೆ. ಈಗ ಅಲ್ಲಿನ ಸರ್ಕಾರವೂ ಅಲ್ಲಿ ಚಿತ್ರೀಕರಿಸಿದ ಚಿತ್ರಗಳಿಗೆ ಸಹಾಯಧನ ಮತ್ತು ಇತರ ನೆರವನ್ನು ನೀಡುತ್ತದೆ. ಅಲ್ಲಿ ಮಾತ್ರವಲ್ಲ, ಇಂಗ್ಲೆಂಡ್ ಸೇರಿದಂತೆ ಬೇರೆ ಬೇರೆ ದೇಶಗಳಲ್ಲೂ ಈ ಉತ್ತೇಜನದ ವ್ಯವಸ್ಥೆ ಇದೆ.
ಭಾರತದ ರಾಜ್ಯಗಳ ಉತ್ತೇಜನ ಮತ್ತು ಉದ್ದೇಶವನ್ನು ಗಮನಿಸೋಣ. ಎಲ್ಲ ರಾಜ್ಯಗಳ ಚಲನಚಿತ್ರ ನೀತಿಗಳ ಉದ್ದೇಶವೂ ಒಂದೇ. ತಮ್ಮ ರಾಜ್ಯ, ಭಾರತದ ಚಲನಚಿತ್ರ ಕೇಂದ್ರ ಎನಿಸಿಕೊಳ್ಳಬೇಕು ಎನ್ನುವುದು. ಅದಕ್ಕಾಗಿಯೇ ಇತರ ಭಾರತೀಯ ಭಾಷಾ ಚಿತ್ರಗಳು ತಮ್ಮ ರಾಜ್ಯದಲ್ಲಿ ಚಿತ್ರೀಕರಣ ಆದರೆ, ವಿಶೇಷ ಸೌಲಭ್ಯ, ಉತ್ತೇಜನ, ಸಹಾಯಧನ ನೀಡುವ ಯೋಜನೆ.
ಹಾಗೆ ನೋಡಿದರೆ, ಇತರ ಭಾಷಾ ಚಿತ್ರಗಳಿಗೂ ಕರ್ನಾಟಕ ಆರಂಭದ ದಿನಗಳಲ್ಲಿ ಸಹಾಯಧನ ನೀಡಿದ ಉದಾಹರಣೆಗಳಿವೆ. ಈ ಅಂಕಣದಲ್ಲಿ ಹಿಂದೊಮ್ಮೆ ಪ್ರಸ್ತಾಪಿಸಿದ ಹಾಗೆ, ರಾಮನಗರದಲ್ಲಿ ಚಿತ್ರೀಕರಣವಾದ ‘ಶೋಲೆ’ ಚಿತ್ರಕ್ಕೆ ಸಹಾಯಧನ ನೀಡಲಾಗಿತ್ತು. ಎಂ. ಜಿ. ರಾಮಚಂದ್ರನ್ ಅಭಿನಯದ ಚಿತ್ರವೊಂದು ಮೈಸೂರಲ್ಲಿ ಚಿತ್ರೀಕರಣ ಆಗಿತ್ತು. ಆ ಚಿತ್ರವೂ ಸಹಾಯಧನ ಪಡೆದಿತ್ತು.
ಕರ್ನಾಟಕದಲ್ಲಿ ತಯಾರಾದ ಗುಣಮಟ್ಟದ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಲನಚಿತ್ರಗಳಿಗೆ ಈಗ ಸಹಾಯಧನ ನೀಡಲಾಗುತ್ತಿದೆ. ಉಳಿದ ಚಿತ್ರಗಳಿಗೆ ೧೦ ಲಕ್ಷ ರೂ. ಸಹಾಯಧನವಾದರೆ, ಪ್ರವಾಸೋದ್ಯಮವನ್ನು ಉತ್ತೇಜಿಸುವ ನಾಲ್ಕು ಚಿತ್ರಗಳು ತಲಾ ೨೫ಲಕ್ಷ ರೂ. ಸಹಾಯಧನ ಪಡೆಯಲು ಅರ್ಹ. ಹಾಗೆಯೇ ಸಾಹಿತ್ಯ ಕೃತಿ ಆಧರಿಸಿದ ಉತ್ತಮ ಗುಣಮಟ್ಟದ ಐದು ಚಿತ್ರಗಳಿಗೆ ತಲಾ ೧೫ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ.
ಎಸ್.ವಿ.ರಾಜೇಂದ್ರ ಸಿಂಗ್ (ಬಾಬು) ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದ ವೇಳೆ ‘ಜೇನುಗೂಡು’ ಯೋಜನೆಯನ್ನು ಮುಂದಿಟ್ಟಿದ್ದರು. ಚಲನಚಿತ್ರಗಳಿಗೆ ಬೇಕಾದ ಸಾಹಿತ್ಯಕೃತಿಗಳ ಸಂಗ್ರಹ, ಅವುಗಳು ಚಲನಚಿತ್ರವಾದರೆ ಅದರ ಲೇಖಕರಿಗೆ ಮತ್ತು ಚಿತ್ರಕ್ಕೆ ವಿಶೇಷ ಸಹಾಯಧನ ನೀಡುವ ಯೋಜನೆ ಅದು. ಆದರೆ ಅದಿನ್ನೂ ಕಾರ್ಯಗತವಾಗಿಲ್ಲ.
ಇಂತಹದೇ ಪ್ರಸಂಗ ಚಲನಚಿತ್ರ ಪ್ರವಾಸೋದ್ಯಮ ನೀತಿಯದು. ೨೦೧೮ರಲ್ಲಿ ಜಾರಿಗೆ ಬಂದ ಈ ನೀತಿಯ ಪ್ರಕಾರ, ಪ್ರತಿ ವರ್ಷ ರಾಜ್ಯದ ಪ್ರವಾಸಿ ತಾಣಗಳನ್ನು ಬಳಸಿ ತಯಾರಾಗುವ ಮೂರು ಚಿತ್ರಗಳಿಗೆ ತಲಾ ೨. ೫ ಕೋಟಿ ರೂ. , ಐದು ಚಿತ್ರಗಳಿಗೆ ತಲಾ ಒಂದು ಕೋಟಿ ರೂ. ಗಳ ಸಹಾಯಧನ ಪ್ರವಾಸೋದ್ಯಮ ಇಲಾಖೆ ನೀಡುತ್ತದೆ. ಈ ನೀತಿ ೨೦೨೫ರಲ್ಲಿ ಹೊಸ ಪ್ರವಾಸೋದ್ಯಮ ನೀತಿ ಬಂದಾಗ ಬದಲಾಯಿತು. ಪ್ರತ್ಯೇಕ ಚಲನಚಿತ್ರ ಪ್ರವಾಸೋದ್ಯಮ ನೀತಿಯನ್ನು ಹೊರತರಲಾಗುವುದು ಎಂದು ಅದರಲ್ಲಿ ಹೇಳಲಾಗಿತ್ತು.
ಕರ್ನಾಟಕದ ಹೊಸ ಚಲನಚಿತ್ರ ಪ್ರವಾಸೋದ್ಯಮ ನೀತಿಯಂತೆ ಪ್ರತಿ ವರ್ಷ ಚಿತ್ರಗಳಿಗೆ ಸಹಾಯಧನ ನೀಡಲಿದೆ, ಅದರ ಷರತ್ತುಗಳೇನು ಎನ್ನುವ ವಿವರವನ್ನು ಸಂಬಂಧಪಟ್ಟವರು ತಿಳಿಸಿ, ಆಸಕ್ತರು ಬರುವ ಹಾಗೆ ನೋಡಬೇಕು. ಈ ನೀತಿ ಕನ್ನಡ ಚಿತ್ರಗಳಿಗೆ ಮಾತ್ರ ಸೀಮಿತವೇ, ಅಥವಾ ಯಾವುದೇ ಭಾಷೆಯ, ಯಾವುದೇ ದೇಶದ ಚಿತ್ರಗಳಿಗೆ ಅನ್ವಯವೋ ಗೊತ್ತಿಲ್ಲ.
ಭಾರತದ ಮಾಹಿತಿ ತಂತ್ರಜ್ಞಾನ ನಗರ ಎಂದು ಬೆಂಗಳೂರು ಹೆಸರಾದಂತೆ, ಕರ್ನಾಟಕವನ್ನು ಭಾರತದ ಚಲನಚಿತ್ರ ಕೇಂದ್ರ ಎಂದು ಬೆಳಸಲು ಚಲನಚಿತ್ರ ಪ್ರವಾಸೋದ್ಯಮ ಬೆಳೆಸುವ ಮೂಲಕ ಮಾಡಲು ಸಾಧ್ಯ. ಆದರೆ ಅದಕ್ಕೆ ಇಚ್ಛಾಶಕ್ತಿಯ ಕೊರತೆ ಇರಬಾರದು. ಅಂತಾರಾಷ್ಟ್ರೀಯ ಮಟ್ಟದ ಅನಿಮೇಶನ್ ಚಿತ್ರಗಳಿಗೆ ಕರ್ನಾಟಕದಲ್ಲಿ ಸಾಕಷ್ಟು ಸಹಾಯಧನ ನೀಡುವುದನ್ನು ಮೂರನೇ ಎವಿಜಿಸಿ- ಎಕ್ಸ್‌ಆರ್ ನೀತಿ ಹೇಳಿದೆ. ಆದರೆ ಈ ಮಾಹಿತಿ, ಉದ್ಯಮದಲ್ಲಿ, ಸಂಬಂಧಪಟ್ಟ ಎಷ್ಟು ಮಂದಿಗೆ ಗೊತ್ತಿದೆಯೋ ಏನೋ. ಈ ನಿಟ್ಟಿನಲ್ಲಿ ಕೆಲಸಗಳು ಮೊದಲು ಆಗಬೇಕು. ಅದು ಚಲನಚಿತ್ರ ಪ್ರವಾಸೋದ್ಯಮ ನೀತಿ ಇರಲಿ, ಎವಿಜಿಸಿ- ಎಕ್ಸ್‌ಆರ್ ನೀತಿ ಇರಲಿ, ಸಂಬಂಧಪಟ್ಟವರ ಗಮನಕ್ಕೆ ಬರುವಂತಾಗಬೇಕು.
ಕೆ.ಆರ್.ನಗರ : ಹಣದಾಸಗೆ ವೃದ್ದೆಯನ್ನು ಕೊಲೆಗೈದು ಶೌಚಾಲಯದ ಯುಜಿಡಿ ಗುಂಡಿಯಲ್ಲಿ ಹೂತು ಹಾಕಿರುವ ಘಟನೆ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದೆ.…
ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಟಿಎಂಸಿ ಆಡಳಿತಕ್ಕೆ ತೆರೆ ಎಳೆದು ಐತಿಹಾಸಿಕ ಗೆಲುವು ಸಾಧಿಸಿರುವ ಬಿಜೆಪಿ, ಮೇ…
ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿವಿಕೆ ಸರ್ಕಾರ ರಚಿಸಲು…
ಹಾಸನ : ಮಾಧ್ಯಮಗಳಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವರದಿಗಳು ಹರಿದಾಡುತ್ತಿದ್ದವು. ಆದರೆ ವಿಜಯ್ ಅವರ ಈಗಿನ ಸಾಧನೆಯನ್ನು…
ವಾಷಿಂಗ್ಟನ್ : ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಮೂರು ಯುದ್ಧನೌಕೆಗಳ ಮೇಲೆ ಇರಾನ್ ಕ್ಷಿಪಣಿ, ಡ್ರೋನ್ ಮತ್ತು ಸಣ್ಣ ದೋಣಿಗಳ ಮೂಲಕ…
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಗರಿಮೆಯ ಕಿರೀಟದಂತಿರುವ, ಅಚ್ಚ ಹಸಿರಿನ ನಡುವಿನ ೧೮೩ ವರ್ಷಗಳ ಇತಿಹಾಸವಿರುವ ಅರಮ ನೆಯೊಂದು…