ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು
ಅಮೆರಿಕ ಮಧ್ಯಂತರ ಚುನಾವಣೆಯ ಸ್ವಾರಸ್ಯಗಳು
ಮೊನ್ನೆಯ ಚುನಾವಣೆಯಲ್ಲಿ, ಅಮೆರಿಕದ ಸಂಸತ್ತಿನ ಮೇಲ್ಮನೆಗೆ (ಸೆನೆಟ್) ಮಿಷಿಗನ್ ರಾಜ್ಯದಿಂದ ಡಾ.ಅಬ್ದುಲ್ಲಾ ಅಲ್-ಸಯೀದ್ ಚುನಾಯಿತರಾಗಿದ್ದಾರೆ. (ಅಂದಹಾಗೆ, ಅಮೆರಿಕದಲ್ಲಿ, ಮೇಲ್ಮನೆ-ಕೆಳಮನೆ ಎರಡಕ್ಕೂ ಜನಸಾಮಾನ್ಯರೇ ನೇರವಾಗಿ ಮತಹಾಕುತ್ತಾರೆ; ನಮ್ಮ ರಾಜ್ಯಸಭೆ, ವಿಧಾನಪರಿಷತ್ ತರಹ ಅಲ್ಲ) ಅವರು, ಅಮೆರಿಕದ ಸೆನೆಟ್ಗೆ ಆಯ್ಕೆಯಾಗಿರುವ ಪ್ರಪ್ರಥಮ ಮುಸ್ಲಿಂ. ಅವರ ಪತ್ನಿ ಡಾ.ಸಾರಾ ನಮ್ಮ ಭಟ್ಕಳದ ಮೂಲದವರಂತೆ.
ಅಮೆರಿಕದಲ್ಲಿರುವ ಭಾರತೀಯ ಮೂಲದವರ ಸಂಖ್ಯೆ ಶೇ.೧.೫ಗಿಂತ ಕಡಿಮೆ. ಆದರೆ, ಭಾರತೀಯ ಮೂಲದವರು, ಉಳಿದವರಿಗಿಂತ ಹೆಚ್ಚಿನ ವಿದ್ಯಾವಂತರೂ, ಉದ್ಯಮ, ವಿಜ್ಞಾನ, ಇಂಜಿನಿಯರಿಂಗ್, ಕಲೆ ಇತ್ಯಾದಿಗಳಲ್ಲಿ ಯಶಸ್ಸು ಪಡೆದವರೂ ಆಗಿರುವುದರಿಂದ ರಾಜಕೀಯದಲ್ಲೂ ಅವರು ತಮ್ಮ ಸಂಖ್ಯೆಗಿಂತ ಹೆಚ್ಚಿನ ಪ್ರಾತಿನಿಧ್ಯ ಪಡೆದಿದ್ದಾರೆ. ಕೆಲವು ಮೂಲಗಳ ಪ್ರಕಾರ, ಇತ್ತೀಚಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಭಾರತೀಯ ಮೂಲದವರ ಸಂಖ್ಯೆ ೬೦ಕ್ಕೂ ಹೆಚ್ಚಂತೆ. ಅವರಲ್ಲಿ, ಹಲವರು ಯಶವನ್ನೂ ಕಂಡಿದ್ದಾರೆ. ಈ ಲೇಖನ ಬರೆಯುವ ವೇಳೆಗೆ ಬಂದ ತಾಜಾ ಸುದ್ದಿಗಳ ಪ್ರಕಾರ, ಅಮೆರಿಕದ ಎರಡನೇ ಅತಿ ದೊಡ್ಡ ನಗರವಾದ ಲಾಸ್ ಏಂಜಲೀಸ್ ನಗರದ ಮೇಯರ್ ಆಗಿ ನಿತ್ಯಾ ರಾಮನ್ ಆಯ್ಕೆಯಾಗಿದ್ದಾರೆ. ಅವರು ಕೇರಳದಲ್ಲಿ ಹುಟ್ಟಿದವರು. ಈ ಮೂಲಕ, ಅಮೆರಿಕದ ಎರಡು ಅತಿ ದೊಡ್ಡ ನಗರಗಳ ಮೇಯರ್ಗಳು ಭಾರತೀಯ ಮೂಲದವರೇ; ನ್ಯೂಯಾರ್ಕ್ ನಗರದ ಮೇಯರ್ ಜ಼ೋಹ್ರಾನ್ ಮಮ್ದಾನಿ, ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕಿ ಮೀರಾ ನಯಾರ್ ಅವರ ಮಗ.
ಅಮೆರಿಕದ ಚುನಾವಣಾ ರಾಜಕೀಯದಲ್ಲಿ ಇಂತಹ ಯಶಸ್ಸಿಗೆ ಹಲವು ದಶಕಗಳ ಇತಿಹಾಸವೇ ಇದೆ. ೧೯೫೦ರ ದಶಕದಲ್ಲೇ, ಡಾ.ದಲೀಪ್ ಸಿಂಗ್ ಸೌಂದ್ ಅಮೆರಿಕದ ಸಂಸತ್ತಿಗೆ ಕ್ಯಾಲಿಫೋರ್ನಿಯಾ ರಾಜ್ಯದಿಂದ ಆಯ್ಕೆಯಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ, ಈ ಸಂಖ್ಯೆ ಏರುತ್ತಲೇ ಇದೆ. ೨೦೨೪ರ ಚುನಾವಣೆಯಲ್ಲಿ, ೬ ಮಂದಿ ಭಾರತೀಯ ಸಂಜಾತರು ಅಮೆರಿಕದ ಕೆಳಮನೆಗೆ ಆಯ್ಕೆಯಾಗಿದ್ದರು. ಅವರಲ್ಲಿ, ರೋ ಖನ್ನಾ ಅಂತಹ ಸಂಸದರು, ಸಂಸತ್ತಿನ ನಾಯಕತ್ವದ ಮೆಟ್ಟಿಲನ್ನೂ ಏರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ, ಪಿಯಾ ದಾಂಡಿಯಾ ಅಂತಹ ಹೊಸಬರೂ ಆಯ್ಕೆಯಾಗಿದ್ದಾರೆ. ಆದರೆ, ಇಲ್ಲಿಯವರೆಗೆ, ಸಂಸತ್ತಿನ ಮೇಲ್ಮನೆಗೆ ಚುನಾಯಿತರಾದ ಒಬ್ಬರೇ ಭಾರತೀಯ ಮೂಲದವರೆಂದರೆ, ಕಮಲಾ ಹ್ಯಾರಿಸ್ ಮಾತ್ರ. ರಾಜ್ಯ ಮಟ್ಟದ ರಾಜಕಾರಣದಲ್ಲೂ, ನಬೀಲಾ ಸಯದ್, ಜೆನಿಫರ್ ರಾಜಕುಮಾರ್, ರಂಜೀವ್ ಪುರಿ ಅಂತಹ ಇನ್ನೆಷ್ಟೋ ಯುವ ಜನರು ಯಶಸ್ವಿಯಾಗಿ, ರಾಷ್ಟ್ರೀಯ ರಾಜಕಾರಣದ ಕದ ತಟ್ಟಲು ಸಿದ್ಧವಾಗುತ್ತಿದ್ದಾರೆ. ನಬೀಲಾ, ನಮ್ಮ ಹೈದರಾಬಾದ್ ಮೂಲದ ಯುವತಿ. ಅವರು, ನಾಲ್ಕು ವರ್ಷದ ಹಿಂದೆ ಇಲಿನಾಯ್ ರಾಜ್ಯದ ಕೆಳಮನೆಗೆ ಆಯ್ಕೆಯಾದಾಗ ಅವರ ವಯಸ್ಸು ಕೇವಲ ೨೩! ಈ ಬಾರಿಯ ಚುನಾವಣೆಯಲ್ಲಿ ಇನ್ನಷ್ಟು ಯಶ ಕಂಡಿರುವ ಅವರು ತಮ್ಮ ಪ್ರತಿ ಸ್ಪರ್ಧಿಯನ್ನು ದೊಡ್ಡ ಅಂತರದಿಂದ ಹಿಂದಿಕ್ಕಿ ಇಲಿನಾಯ್ ರಾಜ್ಯದ ಸೆನೆಟ್ ಅನ್ನು ಇದೇ ಮೊದಲ ಬಾರಿಗೆ ಪ್ರವೇಶಿಸಿದ್ದಾರೆ. ರಂಜೀವ್ ಪುರಿ ಮಿಷಿಗನ್ ರಾಜ್ಯದ ಶಾಸನ ಸಭೆಗೆ ಚುನಾಯಿತರಾಗಿದ್ದಲ್ಲದೆ, ಅದರ ಸ್ಪೀಕರ್ ಸ್ಥಾನಕ್ಕೂ ಆಯ್ಕೆಯಾಗಿದ್ದಾರೆ. (ಅಮೆರಿಕದ ರಾಜಕೀಯ ವ್ಯವಸ್ಥೆಯಲ್ಲಿ, ಸ್ಪೀಕರ್ ಹುದ್ದೆ ನಮ್ಮ ದೇಶದ ಸ್ಪೀಕರ್ ಹುದ್ದೆಗಿಂತ ಪ್ರಭಾವಶಾಲಿಯಾದದ್ದು; ಒಂದು ರೀತಿಯಲ್ಲಿ ನಮ್ಮ ಮುಖ್ಯಮಂತ್ರಿ ಹುದ್ದೆಗೆ ಹೋಲಿಸಬಹುದು) ಅಮೆರಿಕದ ರಾಜಕೀಯದಲ್ಲಿ ಯಶ ಕಂಡಿರುವ ಭಾರತೀಯ ಸಂಜಾತರಲ್ಲಿ ಬಹುಪಾಲು ಮಂದಿ, ಅಲ್ಲಿನ ಎಡ ಪಂಥೀಯ ಪಕ್ಷವಾದ ಡೆಮೋಕ್ರಟಿಕ್ ಪಕ್ಷದವರೇ. ಕಳೆದ ಐವತ್ತು ವರ್ಷಗಳಲ್ಲಿ, ಈ ಪಕ್ಷ, ಭಾರತೀಯ ಸಂಜಾತರೂ ಸೇರಿದಂತೆ, ಆಫ್ರಿಕನ್ ಅಮೆರಿಕನ್ನರು, ಅಮೆರಿಕದ ಮೂಲ ನಿವಾಸಿಗಳು, ಚೈನಾ-ಜಪಾನ್ ಮೂಲದವರು, ಅರಬ್ಬರು, ಮಹಿಳೆಯರು, ಲೈಂಗಿಕ ಅಲ್ಪ ಸಂಖ್ಯಾತರು, ಇಂತಹವರನ್ನೆಲ್ಲಾ ಹೆಚ್ಚು ಹೆಚ್ಚು ಆಕರ್ಷಿಸಿದೆ. ಅಮೆರಿಕದ ಅಧ್ಯಕ್ಷ ಪೀಠವನ್ನೇರಿದ ಮೊಟ್ಟ ಮೊದಲ ಆಫ್ರಿಕನ್ ಅಮೆರಿಕನ್ (ಬರಾಕ್ ಒಬಾಮ), ಉಪಾಧ್ಯಕ್ಷ ಪದವಿಗೇರಿದ ಮೊಟ್ಟ ಮೊದಲ ಮಹಿಳೆ (ಕಮಲಾ ಹ್ಯಾರಿಸ್), ಮೊಟ್ಟಮೊದಲ ಬಾರಿಗೆ ರಾಜ್ಯವೊಂದರ ಗವರ್ನರ್ ಆಗಿ ಈ ಬಾರಿ ಆಯ್ಕೆಯಾದ ಅಮೆರಿಕದ ಮೂಲ ನಿವಾಸಿ ಮಹಿಳೆ (ಡೆಬ್ ಹಾಲಾಂಡ್) ಇವರೆಲ್ಲಾ ಡೆಮೊಕ್ರಾಟರೇ ಆಗಿರುವುದು ಕಾಕತಾಳೀಯವೇನಲ್ಲ. ಸಮಾನ ಆದರ್ಶ, ಆಸಕ್ತಿ, ಗುರಿಗಳನ್ನು ಹೊಂದಿರುವ ಸಂಸದರು, ಪಕ್ಷಾತೀತವಾಗಿ ಬಣಗಳನ್ನು ಮಾಡಿಕೊಳ್ಳುವ ಪರಿಪಾಠ ಸಹ ಅಮೆರಿಕದಲ್ಲಿದೆ. ಇಂತಹ ಬಣಗಳನ್ನು ‘ಕಾಕಸ್’ಗಳೆನ್ನುತ್ತಾರೆ. ಇಂತಹ ಬಣಗಳು ಹಲವು ಬಾರಿ ಪಕ್ಷಾತೀತವಾಗಿ ಇರುತ್ತವೆ. ಅಮೆರಿಕದಲ್ಲಿ ಪಕ್ಷಾಂತರ ನಿಷೇಧ ಕಾಯಿದೆ ಇಲ್ಲ. ಹಾಗೆಯೇ, ಶಾಸನ ಸಭೆಗಳಲ್ಲಿ ತಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ, ತಮ್ಮ ಪಕ್ಷದ ನಾಯಕರು ಒಪ್ಪದ ಮತ ಹಾಕುವುದು ಅಲ್ಲಿ ಸರ್ವೇ ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ, ಪಕ್ಷಾತೀತವಾದ ಈ ಬಣಗಳು ಅತ್ಯಂತ ಪ್ರಭಾವಶಾಲಿ. ಭಾರತೀಯ ಮೂಲದ ಸಂಸದರು ಹೆಚ್ಚುತ್ತಿರುವಂತೆಯೇ, ಕಳೆದ ಕೆಲ ವರ್ಷಗಳಿಂದ ಅವರದೂ ಒಂದು ಬಣ ಸೃಷ್ಟಿಯಾಗಿದೆ. ಅದರ ಹೆಸರು ‘ಸಮೋಸಾ ಕಾಕಸ್’. ಇದು, ಭಾರತೀಯ ಮೂಲದವರದ್ದೇ ಆದರೂ, ಭಾರತ ಸರ್ಕಾರದೊಂದಿಗಿನ ಸಂಬಂಧ ಅಷ್ಟಕ್ಕಷ್ಟೇ. ಈ ಬಣದ ಎಲ್ಲ ಸದಸ್ಯರೂ ಎಡ ಪಂಥೀಯ ಡೆಮೋಕ್ರಾಟರೇ ಆಗಿರುವುದರಿಂದ, ಪತ್ರಿಕಾ ಸ್ವಾತಂತ್ರ್ಯ, ಧಾರ್ಮಿಕ ಅಲ್ಪಸಂಖ್ಯಾತರ ವಿಷಯದಲ್ಲಿ ಮೋದಿ ಸರ್ಕಾರದ ನಡೆ ಇವೆಲ್ಲಾ ಈ ಬಣದ ಖಂಡನೆಗೆ ಗುರಿಯಾಗುತ್ತಲೇ ಇರುತ್ತದೆ. ಹೀಗಾಗಿ, ಭಾರತ ಸರ್ಕಾರದ ಪ್ರತಿನಿಧಿಗಳು ಈ ಸಮೋಸಾ ಬಣದೊಂದಿಗೆ ಕುಳಿತು ಚಾ-ಸಮೋಸಾ ಸೇವಿಸುವ ಸಾಧ್ಯತೆಗಳು ಕಡಿಮೆ.
ಅಮೆರಿಕದ್ದು ಬಹು ಮಟ್ಟಿಗೆ ದ್ವಿಪಕ್ಷೀಯ ರಾಜಕಾರಣ. ಒಂದು ಎಡ ಪಂಥೀಯ ಡೆಮೋಕ್ರಟಿಕ್ ಪಕ್ಷವಾದರೆ, ಇನ್ನೊಂದು, ಬಲ ಪಂಥೀಯ ರಿಪಬ್ಲಿಕನ್ ಪಕ್ಷ. ಕಳೆದ ಹಲವು ದಶಕಗಳಿಂದ ಅದು ಹೆಚ್ಚು-ಹೆಚ್ಚು ಬಿಳಿ ಜನಾಂಗದ ಕ್ರಿಶ್ಚಿಯನ್ ಸಂಪ್ರದಾಯಿಕ ಪಕ್ಷವಾಗಿ ರೂಪ ಪಡೆಯುತ್ತಿದೆ. ಒಂದು ಕಾಲದಲ್ಲಿ, ಇದೇ ಪಕ್ಷ, ಕಪ್ಪು ಜನಾಂಗದ ಗುಲಾಮಗಿರಿ ನಿಷೇಧಿಸಲು ಸಮರವನ್ನೇ ಸಾರಿದ ‘ಅಬ್ರಹಾಂ ಲಿಂಕನ್ನನ ಪಕ್ಷ’ವಾಗಿತ್ತು ಎನ್ನುವುದು ಒಂದು ಹಳೆಯ ವ್ಯಂಗ್ಯ. ಕಳೆದ ಹತ್ತು ವರ್ಷಗಳಲ್ಲಿ, ಟ್ರಂಪ್ ಆ ಪಕ್ಷದ ನಾಯಕತ್ವ ವಹಿಸಿದ ಮೇಲಂತೂ, ಆ ಪಕ್ಷದ ಧೋರಣೆ ಮತ್ತು ನಡಾವಳಿಗಳಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಸಹಿಷ್ಣುತೆ ಇನ್ನಷ್ಟು ತೀವ್ರವಾಗಿದೆ. ಆದರೂ, ಭಾರತೀಯ ಮೂಲದ ಕೆಲ ಅಮೆರಿಕನ್ನರು, ಆ ಪಕ್ಷದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಕೊಂಚ ರಾಜಕೀಯ ಯಶಸ್ಸುಗಳಿಸಿದ್ದಾರೆ ಕೂಡ; ನಿಕ್ಕಿ (ನಮರತಾ) ಹೇಲಿ ಮತ್ತು ಬಾಬ್ಬಿ (ಪಿಯೂಷ್) ಜಿಂದಾಲ್, ಇಬ್ಬರೂ, ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಿ ಗವರ್ನರ್ ಆದವರು; ಈರ್ವರೂ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದನ್ನೂ ಇಲ್ಲಿ ಗಮನಿಸಬೇಕು.
೨೦೧೭ರಲ್ಲಿ ಟ್ರಂಪ್ ಪ್ರಥಮ ಬಾರಿಗೆ ಅಮೆರಿಕದ ಅಧ್ಯಕ್ಷರಾದಾಗ, ಪ್ರಧಾನಿ ಮೋದಿಯವರೊಂದಿಗೆ ಅವರ ಮೈತ್ರಿ ಚೆನ್ನಾಗಿತ್ತು. ಆ ಸಮಯದಲ್ಲಿ, ಭಾರತೀಯ ಮೂಲದ ಹಲವು ಕಟ್ಟಾ ಹಿಂದುತ್ವವಾದಿಗಳು ರಿಪಬ್ಲಿಕನ್ ಪಕ್ಷದೆಡೆಗೆ ವಾಲಿದರು. ಸ್ವತಃ ಮೋದಿಯವರೇ ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಸ್ಲೋಗನ್ನಿಗೆ ತಮ್ಮ ದನಿ ಸೇರಿಸಿದ್ದನ್ನೂ ಇಲ್ಲಿ ನೆನಪು ಮಾಡಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ, ರಿಪಬ್ಲಿಕನ್ ಪಕ್ಷದ ರಾಜಕಾರಣದಲ್ಲಿ ಮುನ್ನೆಲೆಗೆ ಬಂದವರು ವಿವೇಕ್ ರಾಮಸ್ವಾಮಿ. ವಿವೇಕ್ ರಾಮಸ್ವಾಮಿ, ಮೂಲತಃ, ತಾವೇ ಹೇಳಿಕೊಂಡಿರುವಂತೆ, ‘ತಮಿಳು ಬ್ರಾಹ್ಮಣರು’. ಚಿಕ್ಕ ವಯಸ್ಸಿನಲ್ಲೇ ಮಹಾ ಶ್ರೀಮಂತನಾಗಿ, ಅಮೆರಿಕದ ಅಧ್ಯಕ್ಷ ಪದವಿಗೂ ಪ್ರಯತ್ನಿಸಿದವರು. ಕೆಲ ವರ್ಷಗಳಿಂದ ಟ್ರಂಪ್ ಅವರ ಭಟ್ಟಂಗಿಯಾದಂತಿರುವ ಅವರು, ಮೊನ್ನಿನ ಚುನಾವಣೆಯಲ್ಲಿ ಸ್ಪರ್ಧಿಸಿದ ಭಾರತೀಯ ಮೂಲದ ಅತಿ ಪ್ರಮುಖ ರಾಜಕಾರಣಿ. ಈ ಚುನಾವಣೆಯಲ್ಲಿ, ಒಹಾಯೋ ರಾಜ್ಯದ ಗವರ್ನರ್ ಹುದ್ದೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಅವರ ಎದುರಾಳಿ, ಡೆಮೋಕ್ರಟಿಕ್ ಪಕ್ಷದ ಡಾ.ಏಮಿ ಆಕ್ಟನ್. ಚುನಾವಣೆಯ ಅಂತಿಮ ದಿನಗಳಲ್ಲಿ, ರಾಮಸ್ವಾಮಿ ಬಳಸಿದ ಟಿ.ವಿ.ಜಾಹೀರಾತೊಂದು ಅತ್ಯಂತ ವಿವಾದಾಸ್ಪದವೆನ್ನಿಸಿತು. ರಾಮಸ್ವಾಮಿಯವರ ರಿಪಬ್ಲಿಕನ್ ಪಕ್ಷದ ಕೆಲ ನಾಯಕರೇ, ಅದನ್ನು, ‘ಅಮೆರಿಕನ್ ರಾಜಕಾರಣದ ಅತಿ ಹೇಯ ಜಾಹೀರಾತು’ ಎಂದು ಖಂಡಿಸಿದರು. ಅದನ್ನು ಹಿಂದೆಗೆಯುವಂತೆ ರಾಮಸ್ವಾಮಿಯವರಿಗೆ ಕರೆ ಸಹ ನೀಡಿದರು.
ಆ ಜಾಹೀರಾತಿನಲ್ಲಿ, ಡಾ.ಏಮಿ ಆಕ್ಟನ್ ಅವರ ಸ್ವಂತ ತಾಯಿಯೇ ‘ನನ್ನ ಮಗಳು ಸುಳ್ಳುಗಾರ್ತಿ. ಗವರ್ನರ್ ಪದವಿಗೆ ಖಂಡಿತಾ ಅರ್ಹಳಲ್ಲ’ ಎನ್ನುತ್ತಾಳೆ. ಈ ಜಾಹೀರಾತಿಗೆ ಒಂದು ಹಿನ್ನೆಲೆಯೂ ಇದೆ. ಸುಮಾರು ಐವತ್ತು ವರ್ಷಗಳ ಹಿಂದೆ, ಏಮಿ ಆಕ್ಟನ್ ಇನ್ನೂ ಬಾಲ್ಯದಲ್ಲಿದ್ದಾಗ, ಅವರ ತಾಯಿ ತನ್ನ ಮೊದಲ ಗಂಡನನ್ನು (ಏಮಿಯ ತಂದೆಯನ್ನು) ತೊರೆದು ಇನ್ನೊಬ್ಬನನ್ನು ಮದುವೆಯಾಗುತ್ತಾಳೆ. ಅತಿ ಬಡತನದಲ್ಲಿದ್ದ ಏಮಿ ಮತ್ತು ಅವರ ಕುಟುಂಬ, ಇರಲು ಮನೆಯೂ ಇಲ್ಲದೆ, ಕೆಲ ಕಾಲ ಟೆಂಟೊಂದರಲ್ಲಿ ಜೀವನ ನಡೆಸುತ್ತದೆ. ಆ ಸಮಯದಲ್ಲಿ, ಏಮಿಯ ಮಲತಂದೆ ಹನ್ನೆರಡು ವರ್ಷದ ಏಮಿಯ ಮೇಲೆ ಲೈಂಗಿಕ ಅತ್ಯಾಚಾರ ಎಸಗುತ್ತಾನೆ. ಅದು ಪೊಲೀಸ್ ಕೇಸ್ ಆಗುತ್ತದೆ. ಆ ಸಂದರ್ಭದಲ್ಲಿ ತನ್ನ ಮಗಳ ಪರ ನಿಲ್ಲಬೇಕಿದ್ದ ಏಮಿಯ ತಾಯಿ, ಬದಲಿಗೆ, ತನ್ನ ಗಂಡನೊಡನೆ ತಲೆಮರೆಸಿಕೊಂಡು ಓಡಿ ಹೋಗುತ್ತಾಳೆ. ಅಂದಿನಿಂದ ಏಮಿ ಮತ್ತು ಅವರ ತಾಯಿಯ ಸಂಬಂಧ ಪೂರ್ಣವಾಗಿ ಕಡಿದು ಬೀಳುತ್ತದೆ. ಅದೆಲ್ಲವನ್ನೂ ಸ್ವಪ್ರಯತ್ನದಿಂದ ಮೀರಿ ನಿಲ್ಲುವ ಏಮಿ, ವೈದ್ಯೆಯಾಗಿ ಯಶ ಕಾಣುತ್ತಾರೆ. ಐವತ್ತು ವರ್ಷದ ಹಿಂದಿನ ವಿಚಾರಗಳು ಅಂದಿನ ಪತ್ರಿಕೆಗಳಲ್ಲಿ ಸುದ್ದಿಯಾಗಿದ್ದರೂ, ಬೆಳೆದು ನಿಲ್ಲುವ ಏಮಿ, ತಮ್ಮ ಅತಿ ನೋವಿನ ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸುವುದಿಲ್ಲ. ಆದರೆ, ಈ ಹಿನ್ನೆಲೆ ಪೂರ್ತಿ ಗೊತ್ತಿದ್ದೂ, ರಾಮಸ್ವಾಮಿ ಆ ಜಾಹೀರಾತನ್ನು ಪ್ರಚುರಪಡಿಸುತ್ತಾರೆ. ಅದರಲ್ಲಿ ತಪ್ಪೇನಿಲ್ಲವೆಂದು, ಟ್ರಂಪ್ ಅದಕ್ಕೆ ಕುಮ್ಮಕ್ಕು ನೀಡುತ್ತಾರೆ
” ನೆಮ್ಮದಿಯ ವಿಷಯವೆಂದರೆ, ಒಹಾಯೋ ರಾಜ್ಯದ ಮತದಾರರು ವಿವೇಕದಿಂದ ಮತ ಚಲಾಯಿಸುತ್ತಾರೆ. ಡಾ.ಏಮಿ ಆಕ್ಟನ್, ವಿವೇಕ್ ರಾಮಸ್ವಾಮಿಯವರನ್ನು ಮೂರು ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋಲಿಸುತ್ತಾರೆ. ”
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವರಾದ ಎಚ್. ಡಿ. ಕುಮಾರಸ್ವಾಮಿ ಅವರನ್ನು ಅವರೇನು ಹಳ್ಳಿ ಗುಗ್ಗುನಾ? ಎಂದು…
ರಾಜ್ಯದ ೬೩ ಪೆಟ್ರೋಲ್ ಬಂಕ್ಗಳಿಂದ ಸಂಗ್ರಹಿಸಿದ ಮಾದರಿಗಳನ್ನುಎನ್ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಇಂಧನದಲ್ಲಿ ಶೇಕಡಾ ೩೫ರಷ್ಟು ಎಥೆನಾಲ್ ಮಿಶ್ರಣವಾಗಿರುವುದು…
ಪಂಜುಗಂಗೊಳ್ಳಿ ಅವರ ವಾರದ ಅಂಕಣ ೨೦೨೧ರಲ್ಲಿ ‘ಸ್ನೇಹ ಸಾಂದ್ರಂ ಚಾರಿಟೆಬಲ್ ಟ್ರಸ್ಟ್’ ಅಸ್ತಿತ್ವಕ್ಕೆ ೨೦೧೦ರ ಮಾರ್ಚ್ ೨೫ರಂದು ಕೇರಳದ ತಿರುವನಂತರಪುರದ…
ಲಕ್ಷ್ಮೀಕಾಂತ್ ಕೊಮಾರಪ್ಪ ಭತ್ತದ ಪೈರು, ಕಾಳುಮೆಣಸಿನ ಬಳ್ಳಿಗಳಿಗೆ ಹಾನಿ; ಫಸಲು ಉಳಿಸಿಕೊಳ್ಳಲು ರಾತ್ರಿ ಕಾವಲು ಸೋಮವಾರಪೇಟೆ: ಮಳೆ ಕೊರತೆ ಮೊದಲಾದ…
ಮಹೇಂದ್ರ ಹಸಗೂಲಿ ಒಂದು ಕಾರು ಪಾರ್ಕಿಂಗ್ಗೆ ೧೧೮ ರೂ. ಶುಲ್ಕ ; ಪ್ರವಾಸಿಗರ ಆಕ್ರೋಶ ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ…