Andolana originals

ಸರಸ್ವತಿಪುರಂ ಕಲ್ಯಾಣಿಗೆ ಪುನಶ್ಚೇತನ

ಎಚ್.ಎಸ್.ದಿನೇಶ್‌ಕುಮಾರ್

ಮೈಸೂರು: ಮೈಸೂರು ಸಂಸ್ಥಾನದ ಕೊನೆಯ ಅರಸ, ದೇಶ ಸ್ವತಂತ್ರಗೊಂಡ ನಂತರ ರಾಜ ಪ್ರಮುಖರಾಗಿ ಸೇವೆ ಸಲ್ಲಿಸಿದ್ದ ಜಯಚಾಮರಾಜ ಒಡೆಯರ್ ಅವರು ನಗರದಲ್ಲಿ ಕಟ್ಟಿಸಿದ್ದ ಸುಮಾರು ೭೬ ವರ್ಷಗಳ ಇತಿಹಾಸವುಳ್ಳದುರ್ಗಯ್ಯನ ಕೊಳ (ಸರಸ್ವತಿಪುರಂ ಕಲ್ಯಾಣಿ)ವನ್ನು ಸುಮಾರು ೪ ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನ ಗೊಳಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದ್ದು, ಕಡೆಗೂ ಕಲ್ಯಾಣಿಗೆ ರಾಜಯೋಗ ಬಂದಿದೆ.

ಅದು ೧೯೫೦ರ ದಶಕದ ಇತಿಹಾಸ, ರಾಜ ವಂಶಸ್ಥರಾದ ಜಯಚಾಮ ರಾಜ ಒಡೆಯರ್ ಅವರು ಕ್ಷೌರ (ಹೇರ್ ಕಟಿಂಗ್-ಶೇವಿಂಗ್) ಮಾಡಿಸಲು ಬರುತ್ತಿದ್ದ ಸ್ಥಳ. ಅವರು ಅಲ್ಲಿಗೆ ಬರುತ್ತಿದ್ದಾರೆ ಎಂದು ಗೊತ್ತಾ ಗುತ್ತಿದ್ದಂತೆ ಸುತ್ತಮುತ್ತಲಿನ ಊರುಗಳ ನೂರಾರು ಜನರು ಅಲ್ಲಿ ಜಮಾಯಿಸುತ್ತಿದ್ದರು ಎಂದು ಸಾಕಷ್ಟು ಹಿರಿಯರು ಹೇಳುತ್ತಾರೆ. ಈ ಕಲ್ಯಾಣಿ ಇರುವುದು ಸರಸ್ವತಿಪುರಂ ಈಜುಕೊಳದ ಬಳಿ. ಹಳೆಯ ಶಿಲಾ ಫಲಕವೊಂದರಲ್ಲಿ ಇರುವಂತೆ ಅದು ದುರ್ಗಯ್ಯನ ಕೊಳ.

ಕಾಲಾನಂತರದಲ್ಲಿ ಅದರ ಹೆಸರು ಸರಸ್ವತಿಪುರಂ ಕಲ್ಯಾಣಿ ಎಂದು ಬದಲಾಗಿದೆ. ಆದರೆ, ದುರ್ಗಯ್ಯ ಯಾರು?. ಆತನ ಹೆಸರಿನಲ್ಲಿ ಕೊಳವನ್ನು ಕಟ್ಟಿಸಿದ್ದೇಕೆ ಎಂಬ ಮಾಹಿತಿ ಇಲ್ಲ. ಆದರೀಗ ದುರ್ಗಯ್ಯನ ಕೊಳದಲ್ಲಿ ಕಸಕಡ್ಡಿಗಳದ್ದೇ ಕಾರುಬಾರು. ಪ್ಲಾಸ್ಟಿಕ್ ವಸ್ತುಗಳು, ಮದ್ಯ ಸೇವನೆ ಮಾಡಿ ಎಸೆದ ಬಾಟಲಿಗಳು, ಹಳೆಯ ಟೈರ್‌ಗಳು, ಬೆಳೆದು ನಿಂತ ಕುರು ಚಲು ಗಿಡಗಳು ಜನರಲ್ಲಿ ಬೇಸರ ಹುಟ್ಟಿಸುತ್ತವೆ.

ಕಲ್ಯಾಣಿಗೆ ಇದೆ ಸುದೀರ್ಘ ಇತಿಹಾಸ: ನಗರದ ಮಧ್ಯಭಾಗದಲ್ಲಿ ಅದೂ ಕುಕ್ಕರಹಳ್ಳಿ ಕೆರೆ ಬಳಿ ಇರುವ ಈ ಕಲ್ಯಾಣಿ ಇಂದು ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಒಂದು ಕಾಲದಲ್ಲಿ ಮಹಾ ರಾಜರೇ ಈ ಕೊಳದತ್ತ ಬರುತ್ತಿದ್ದರೇ ಎಂಬ ಅನುಮಾನ ಹುಟ್ಟಿಸುವಂತಿದೆ. ಈ ಬಗ್ಗೆ ಕೊನೆಗೂ ಎಚ್ಚೆತ್ತಿರುವ ಮೈಸೂರು ಮಹಾನಗರ ಪಾಲಿಕೆ ಈ ಕಲ್ಯಾಣಿಯ ಅಭಿವೃದ್ಧಿಗೆ ಮುಂದಾಗಿದೆ. ಕೆರೆಯ ಹೂಳೆತ್ತಲು, ಸುತ್ತಲೂ ಕಟ್ಟೆ ಕಟ್ಟಲು ಹಾಗೂ ಅದರ ಸುತ್ತ ಮುತ್ತ ಉದ್ಯಾನ ನಿರ್ಮಿಸಿ ಸೌಂದರ್ಯಗೊಳಿಸಲು ಮುಂದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಕೆರೆಗಳ ಅಭಿವೃದ್ಧಿ ಅನುದಾನದಲ್ಲಿ ೪ ಕೋಟಿ ರೂ.ಹಣವನ್ನು ಮೀಸಲಿಡಲಾಗಿದೆ. ಕಳೆದ ಜ.೨೧ರಂದು ನಡೆದ ಸಭೆಯಲ್ಲಿ ಡಿಪಿಆರ್ ಮಂಡಿಸಿ ಅನುಮೋದನೆ ಪಡೆಯಲಾಗಿದ್ದು, ದಾಖಲೆಗಳನ್ನು ಪೌರಾಡಳಿತ ಇಲಾಖೆಗೆ ಕಳುಹಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಮುಂದಿನ ಆರು ತಿಂಗಳ ಒಳಗಾಗಿ ಕಲ್ಯಾಣಿಯನ್ನು ಪುನಶ್ಚೇತನಗೊಳಿಸಲಾಗುತ್ತದೆ. ಕಲ್ಯಾಣಿಯ ಇತಿಹಾಸ: ಇದು ೧೯೫೧ರಲ್ಲಿ ನಿರ್ಮಾಣವಾದ ಕೊಳ. ಅಂದಿನ ಮೈಸೂರು ಮಹಾ ರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಅಲ್ಲಿಗೆ ಕ್ಷೌರ ಮಾಡಿ ಸಿಕೊಳ್ಳಲು ಬರುವ ಸಮಯದಲ್ಲಿ ನಗರದ ಕೆ.ಜಿ. ಕೊಪ್ಪಲು, ತೊಣಚಿ ಕೊಪ್ಪಲು, ಕುಕ್ಕರಹಳ್ಳಿ, ಬೋಗಾದಿ, ಮಳಲವಾಡಿ ಸೇರಿದಂತೆ ವಿವಿಧ ಊರುಗಳಿಂದ ನೂರಾರು ಜನರು ಬಂದು ತಮ್ಮ ಹಳ್ಳಿಯ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದರು ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಿದ್ದರು ಎಂದು ಬಲ್ಲವರು ಹೇಳುತ್ತಾರೆ.

ಇದೇ ವೇಳೆ ಬೋಗಾದಿ, ಮರಟೀಕ್ಯಾತನಹಳ್ಳಿ ಸೇರಿದಂತೆ ವಿವಿಧ ಊರುಗಳಿಂದ ಎತ್ತಿನ ಗಾಡಿಯಲ್ಲಿ ವ್ಯಾಪಾರಕ್ಕಾಗಿ ಮೈಸೂರಿಗೆ ಬರುತ್ತಿದ್ದ ಜನರಿಗೆ ಕುಡಿಯುವ ನೀರಿಗೆ ಈ ಕಲ್ಯಾಣಿಯೇ ಆಧಾರವಾಗಿತ್ತು. ಎತ್ತಿನಗಾಡಿಗಳನ್ನು ಕಲ್ಯಾಣಿಯ ಬಳಿ ನಿಲ್ಲಿಸಿ ತಾವೂ ನೀರು ಕುಡಿಯುವುದಲ್ಲದೆ ಎತ್ತುಗಳಿಗೆ ನೀರು ಕುಡಿಸುತ್ತಿದ್ದರು. ನಂತರ ತಾವು ತಂದ ಬುತ್ತಿಯನ್ನು ಸೇವಿಸಿ ಅಲ್ಲಿಂದ ತೆರಳುತ್ತಿದ್ದರು.

ಕಾಲಾನಂತರದಲ್ಲಿ ಕಲ್ಯಾಣಿಯ ನೀರಿನ ಅವಶ್ಯಕತೆ ಕಡಿಮೆಯಾದಂತೆ ಕೊಳ ಕೂಡ ಮಲಿನವಾಗತೊಡಗಿತು. ಜನರು ಬೇಡವಾದ ವಸ್ತುಗಳನ್ನು ಅಲ್ಲಿ ಎಸೆದು ಹೋಗುವ ಪ್ರವೃತ್ತಿ ಹೆಚ್ಚಾಗತೊಡಗಿತು. ನಂತರ ಸ್ಥಳೀಯವಾಗಿ ಇತಿಹಾಸ ತಜ್ಞ ಪ್ರೊ.ಎನ್.ಎಸ್.ರಂಗರಾಜು ಅವರು ಕಲ್ಯಾಣಿಯನ್ನು ಉಳಿಸಿ ಎಂದು ಹೋರಾಟ ಆರಂಭಿಸಿದ್ದರು. ಆರ್.ಲಿಂಗಪ್ಪ ಅವರು ಮಹಾಪೌರರಾಗಿದ್ದ ವೇಳೆ ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಮುಂದಾದರು. ನಮ್ಮ ಮೈಸೂರು ತಂಡ ಹಾಗೂ ಇನ್ನಿತರರು ಸೇರಿ ಸುಮಾರು ೫೦ ಲಾರಿಯಷ್ಟು ಹೂಳನ್ನು ತೆಗೆಯಲಾಗಿತ್ತು. ಲಿಂಗಪ್ಪ ಅವರು ಕಲ್ಯಾಣಿಗೆ ಶಾಶ್ವತ ಕಾಯಕಲ್ಪ ನೀಡಬೇಕು ಎಂದು ಉದ್ದೇಶಿಸಿ ಅಂದಾಜು ವೆಚ್ಚವನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಮುಂದೆ ಅವರ ಅವಧಿ ಪೂರ್ಣಗೊಂಡಿತ್ತು. ಕಲ್ಯಾಣಿಯನ್ನು ಪುನರುಜ್ಜೀವನಗೊಳಿಸುವ ಕೆಲಸ ಕೂಡ ನಿಂತಿತು.

” ಸರಸ್ವತಿಪುರಂನಲ್ಲಿರುವ ಕಲ್ಯಾಣಿಯ ಅಭಿವೃದ್ಧಿಗೆ ನಗರಪಾಲಿಕೆ ಮುಂದಾಗಿದೆ. ಈ ಸಂಬಂಧ ಡಿಪಿಆರ್ ಸಿದ್ಧಪಡಿಸಲಾಗಿದೆ. ೪ ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣಿಯನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗುವುದು. ಕಲ್ಯಾಣಿಯ ಸುತ್ತಲೂ ಕಟ್ಟೆಗಳನ್ನು ಕಟ್ಟುವ ಮೂಲಕ ಜನಸ್ನೇಹಿ ಯಾಗಿ ರೂಪುಗೊಳಿಸಲಾಗುವುದು.”‌

-ಶೇಖ್ ತನ್ವೀರ್ ಆಸೀಫ್, ನಗರಪಾಲಿಕೆ ಆಯುಕ್ತರು

” ನಾನು ಮಹಾಪೌರನಾಗಿದ್ದ ವೇಳೆ ಕಲ್ಯಾಣಿಯನ್ನು ಹೂಳು ತೆಗೆಯುವ ಮೂಲಕ ಸ್ವಚ್ಛಗೊಳಿಸಲಾಗಿತ್ತು. ಅಲ್ಲಿ ಮಹಾರಾಜರು ಬಂದು ಕುಳಿತುಕೊಳ್ಳುತ್ತಿದ್ದ ಸ್ಥಳವಿತ್ತು. ಒಂದು ಕಮಾನು ಕೂಡ ಇತ್ತು. ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಇತಿಹಾಸ ಹೇಳಬೇಕಾಗಿದ್ದ ನಗರಪಾಲಿಕೆ ಅಧಿಕಾರಿಗಳು ಅದನ್ನು ಕೆಡವಿದ್ದಾರೆ. ಈಗಲಾದರೂ ಕಲ್ಯಾಣಿಯನ್ನು ಉಳಿಸಿ ನಮ್ಮ ಮಕ್ಕಳಿಗೆ ಅದರ ಇತಿಹಾಸ ಹೇಳಬೇಕಿದೆ.”

-ಆರ್.ಲಿಂಗಪ್ಪ, ಮಾಜಿ ಮಹಾಪೌರರು

 

 

ಆಂದೋಲನ ಡೆಸ್ಕ್

Recent Posts

ಬಿಸಿಲ ಝಳಕ್ಕೆ ನೀರಿಗಿಳಿಯುವ ಮುನ್ನಇರಲಿ ಎಚ್ಚರ..!

ನವೀನ್ ಡಿಸೋಜ ಕೊಡಗು ಜಿಲ್ಲೆಯಲ್ಲಿ ಇವೆ ಅಪಾಯಕಾರಿ ಸ್ಥಳಗಳು; ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸಲಹೆ ಮಡಿಕೇರಿ:ಬೇಸಿಗೆಯಲ್ಲಿ ಬಿಸಿಲ ಝಳಕ್ಕೆ ನೀರಿಗಿಳಿದು…

1 hour ago

ಹಾಲಿ-ಮಾಜಿ ಶಾಸಕರಿಗೆ ಕ್ಷೇತ್ರ ಪುನರ್‌ವಿಂಗಡಣೆ ಗುಮ್ಮ!

ಕೆ.ಬಿ.ರಮೇಶನಾಯಕ ಶೇ.೩೩ ಮಹಿಳಾ ಮೀಸಲು ಜಾರಿಯಾದರೆ ಐದು ಸ್ಥಾನ ಮೀಸಲು  ಚಾಮುಂಡೇಶ್ವರಿ, ಕೃಷ್ಣರಾಜ, ನರಸಿಂಹರಾಜ ಕ್ಷೇತ್ರದ ಕೆಲ ಭಾಗಗಳನ್ನು ಬೇರ್ಪಡಿಸಿ…

1 hour ago

150 ವರ್ಷಕ್ಕೆ ಸಾಕ್ಷಿಯಾದ ಸರ್ಕಾರಿ ಶಾಲೆ!

ಹೇಮಂತ್‌ಕುಮಾರ್ ಮಂಡ್ಯ: ಜಿಲ್ಲೆಯ ಮೇಲುಕೋಟೆ ಪ್ರಖ್ಯಾತ ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರವಾಗಿದ್ದು, ಹತ್ತಾರು ಶತಮಾನಗಳ ವಿಶೇಷತೆಗಳನ್ನು ಒಳಗೊಂಡಿದೆ. ಈ ಪಟ್ಟಿಯಲ್ಲಿ…

1 hour ago

ದ್ರಾವಿಡ ಚಳವಳಿಗಾರ ಡಾ.ಕೆ.ವೀರಮಣಿ ಅವರಿಗೆ ಬೋಧಿ ವೃಕ್ಷ ಪ್ರಶಸ್ತಿ

ದ್ರಾವಿಡ ಚಳವಳಿಗಾರ ಡಾ.ಕೆ.ವೀರಮಣಿ ಅವರಿಗೆ ಬೋಧಿ ವೃಕ್ಷ ಪ್ರಶಸ್ತಿ   ಪೆರಿಯಾರ್ ರಾಮಸ್ವಾಮಿ ಅವರ ಸೈದ್ಧಾಂತಿಕ ಉತ್ತರಾಧಿಕಾರಿ ಬೆಂಗಳೂರು: ಮೌಢ್ಯ…

2 hours ago

ಮಂಗಳಮುಖಿ ವೇಷ; ಲೈಂಗಿಕ ಪಾಶ

೫ ತಿಂಗಳ ಹಿಂದೆ ಯುವಕನನ್ನು ಮೈಸೂರಿನಿಂದ ಅಪಹರಿಸಿ ಕರೆದೊಯ್ದಿದ್ದ ತಂಡ ಮಂಗಳೂರಿನಿಂದ ತಪ್ಪಿಸಿಕೊಂಡು ಬಂದು ಲಷ್ಕರ್‌ ಠಾಣೆಗೆ ದೂರು  ಮೈಸೂರು:…

2 hours ago