ನವೀನ್ ಡಿಸೋಜ
ವಿಪತ್ತು ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ; ಸಂತ್ರಸ್ತರನ್ನು ರಕ್ಷಿಸುವ ವಿಧಾನ, ದೋಣಿ ಮೋಟಾರ್‌ಗಳನ್ನು ಚಾಲನೆ ಮಾಡುವ ಬಗ್ಗೆ ತರಬೇತಿ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭಾವ್ಯ ಪ್ರಾಕೃತಿಕ ವಿಕೋಪ ಎದುರಿಸಲು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಸಜ್ಜಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿಪತ್ತಿನ ಸಮಯದಲ್ಲಿ ಜನರ ಪ್ರಾಣ, ಆಸ್ತಿ ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲ ಆರಂಭದ ಲಕ್ಷಣಗಳು ಕಾಣಿಸಿಕೊಂಡಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆಗಾಗ್ಗೆ ಮಂಜು ಮುಸುಕಿದ ವಾತಾವರಣ ಕಂಡುಬಂದಿದೆ. ಅಲ್ಲಲ್ಲಿ ತುಂತುರು, ಸಾಧಾರಣ ಮಳೆ ಬರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆಯನ್ನೂ ನೀಡಿದೆ. ಅವಧಿಗೆ ಮುಂಚಿತವಾಗಿ ಅಂದರೆ ಮೇ ೨೫ರ ಆಸುಪಾಸಿನಲ್ಲಿ ಮುಂಗಾರು ಕಾಲಿಡುವ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಅಣಕು ಪ್ರದರ್ಶನ ಮೂಲಕ ರಕ್ಷಣಾ ಸಿಬ್ಬಂದಿಗೆ ಕಾರ್ಯಾಚರಣೆಯ ಚಿತ್ರಣದ ಅರಿವು ಮೂಡಿಸುವುದರ ಜತೆಗೆ ಸಾರ್ವಜನಿಕರಲ್ಲಿ ಸುರಕ್ಷತೆಯ ಭಾವನೆ ಮೂಡಿಸಲಾಗುತ್ತಿದೆ.
ಕೊಡಗಿನಲ್ಲಿ ವರ್ಷದ ಆರು ತಿಂಗಳು ಮಳೆ ಸುರಿಯಲಿದ್ದು, ಪ್ರಕೃತಿಯ ಈ ವಿದ್ಯಮಾನಕ್ಕೆ ಇಲ್ಲಿನವರು ಹೊಂದಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ೨೦೧೮ರಿಂದ ಈಚೆಗೆ ಮಳೆಗಾಲ ಶುರುವಾಗುತ್ತದೆ ಎಂದ ಕೂಡಲೇ ಸ್ಥಳೀಯರಲ್ಲಿ ಒಂದು ರೀತಿಯ ಭಯ ಕಾಡುತ್ತದೆ. ೨೦೧೮ರಲ್ಲಿ ಕೊಡಗಿನ ಹಲವೆಡೆ ಸಂಭವಿಸಿದ್ದ ಪ್ರಾಕೃತಿಕ ವಿಕೋಪದ ವೇಳೆ ೨೪ ಮಂದಿ ಮೃತಪಟ್ಟಿದ್ದರಲ್ಲದೆ, ಕೋಟ್ಯಂತರ ರೂ. ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿತ್ತು. ೨೦೧೯-೨೦೨೦ರಲ್ಲೂ ಬಹುತೇಕ ಇದೇ ಪರಿಸ್ಥಿತಿ ಮರುಕಳಿಸಿತ್ತು.
ಹಾಗಾಗಿ ನಂತರದ ವರ್ಷಗಳಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಮಳೆಗಾಲಕ್ಕೆ ಮುಂಚಿತವಾಗಿ ಮುಂಗಾರು ಎದುರಿಸುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತದೆ. ಮತ್ತೊಂದು ಕಡೆ ಪೊಲೀಸ್ ಇಲಾಖೆಯೂ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತದೆ. ಪ್ರವಾಹದಂಥ ಸಂದರ್ಭವನ್ನು ಎದುರಿಸಲು ಅಗತ್ಯ ಉಪಕರಣಗಳ ಬಳಕೆ, ಸಂತ್ರಸ್ತರ ರಕ್ಷಣಾ ವಿಧಾನಗಳು, ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಅಣಕು ಪ್ರದರ್ಶನದ ಮೂಲಕ ಕರಗತ ಮಾಡಿಕೊಳ್ಳಲಾಗುತ್ತದೆ. ಭಾರೀ ಪ್ರಮಾಣದ ಮಳೆ ಒಂದೇ ದಿನ ಸುರಿದು ಅನಾಹುತ ಸೃಷ್ಟಿಯಾದ ಸಂದರ್ಭದಲ್ಲಿ ವಿಕೋಪವನ್ನು ಎದುರಿಸುವುದು ರಕ್ಷಣಾ ತಂಡಗಳ ಪಾಲಿಗೆ ದೊಡ್ಡ ಸವಾಲಾಗಿದೆ. ಹಾಗಾಗಿ ಮಳೆಗಾಲ ಆರಂಭವಾಗುವುದಕ್ಕೆ ಮುಂಚಿತವಾಗಿ ಸಂಭಾವ್ಯ ಪ್ರಾಕೃತಿಕ ವಿಕೋಪಗಳ ವೇಳೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪೊಲೀಸ್ ಸಿಬ್ಬಂದಿಗೆ ಪರಿಣತರಿಂದ ತರಬೇತಿಯನ್ನೂ ಕೊಡಲಾಗುತ್ತದೆ.
ಸತತ ೮ ವರ್ಷಗಳಿಂದ ಪ್ರತಿ ವರ್ಷವೂ ಪೊಲೀಸರು ಸೇರಿದಂತೆ ರಕ್ಷಣಾ ಸಿಬ್ಬಂದಿ ವರ್ಷದಿಂದ ವರ್ಷಕ್ಕೆ ಮಳೆಗಾಲದ ಸಂದರ್ಭದಲ್ಲಿ ಹಾನಿಯ ಪ್ರಮಾಣ ಗಣನೀಯವಾಗಿ ಇಳಿಕೆ ಆಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ೨೦೧೮ರಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತ, ೨೦೧೯ರಲ್ಲಿ ಭಾರೀ ಪ್ರವಾಹ, ೨೦೨೦ರಲ್ಲಿ ಮತ್ತೆ ಮರುಕಳಿಸಿದ ಪ್ರವಾಹ ಮತ್ತು ಭೂಕುಸಿತ ಹೀಗೆ ಪ್ರತಿ ವರ್ಷವೂ ಹೊಸ ಹೊಸ ಸವಾಲುಗಳ ಮಧ್ಯೆ ಹಿಂದಿನ ವರ್ಷಗಳ ಅನುಭವದ ಆಧಾರದಲ್ಲಿ ರಕ್ಷಣಾ ಕಾರ್ಯಾಚರಣೆ ವಿಧಾನಗಳಲ್ಲಿ ಕಾಲ ಕಾಲಕ್ಕೆ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಬರಲಾಗುತ್ತಿದ್ದು, ಜನಸಾಮಾನ್ಯರ ಸುರಕ್ಷತೆಗೆ ಆದ್ಯತೆ ಕೊಡಲಾಗಿದೆ.
ಅಧಿಕಾರಿ, ಸಿಬ್ಬಂದಿಗೆ ಅಗತ್ಯ ತರಬೇತಿ: ಕೊಡಗು ಎಸ್‌ಪಿ ಆರ್.ಎನ್.ಬಿಂದುಮಣಿ ನೇತೃತ್ವದಲ್ಲಿ ನಡೆದ ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ಮೂವರು ಡಿವೈಎಸ್‌ಪಿಗಳು, ೬ ಮಂದಿ ವೃತ್ತ ನಿರೀಕ್ಷಕರು, ೧೫ ಮಂದಿ ಸಬ್‌ಇನ್‌ಸ್ಪೆಕ್ಟರ್‌ಗಳು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ೧೫ ಸಿಬ್ಬಂದಿ, ಗೃಹರಕ್ಷಕ ದಳದ ೭ ಸಿಬ್ಬಂದಿ, ೪೧ ಮಂದಿ ಮುಖ್ಯ ಪೇದೆ ಮತ್ತು ಪೇದೆಗಳು ಪಾಲ್ಗೊಂಡು ಮಳೆಗಾಲದ ಸಂಭಾವ್ಯ ಅನಾಹುತಗಳ ಸಂದರ್ಭದಲ್ಲಿ ಸಾರ್ವಜನಿಕರ ಪ್ರಾಣ, ಆಸ್ತಿ ಪಾಸ್ತಿ ರಕ್ಷಣೆಯ ಬಗ್ಗೆ ತರಬೇತಿ ಪಡೆದುಕೊಂಡರು.
” ಪ್ರಾಕೃತಿಕ ವಿಕೋಪ ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಪೊಲೀಸ್ ಇಲಾಖೆಯಿಂದ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯಿಂದ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಹಾರಂಗಿ ಹಿನ್ನೀರಿನಲ್ಲಿ ವಿಪತ್ತು ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ ನಡೆಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ದೋಣಿಗಳನ್ನು ಬಳಸುವಾಗ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಜೊತೆಗೆ ಎಲ್ಲಾ ಸುರಕ್ಷತಾ ಸಾಧನಗಳನ್ನು ಪ್ರದರ್ಶಿಸಿ ಅವುಗಳನ್ನು ಬಳಸುವ ಸರಿಯಾದ ವಿಧಾನಗಳನ್ನು ತೋರಿಸಿ ಕೊಡಲಾಗಿದೆ. ಅಪಾಯಕಾರಿ ವಲಯಗಳಿಂದ ಸಂತ್ರಸ್ತರನ್ನು ರಕ್ಷಿಸುವ ವಿಧಾನಗಳು ಹಾಗೂ ದೋಣಿ ಮತ್ತು ಮೋಟಾರ್‌ಗಳನ್ನು ಚಾಲನೆ ಮಾಡುವ ವಿಧಾನಗಳ ಬಗ್ಗೆ ತರಬೇತಿ ನೀಡಲಾಗಿದೆ.”
-ಆರ್.ಎನ್.ಬಿಂದುಮಣಿ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಬಾಪೂಜಿ ಮತ್ತು ವಾಜಪೇಯಿ ದಾರಿ ಬೇರೆಯಾಗಿದ್ದರೂ ನೈತಿಕತೆಗೆ ಮಾದರಿಯಾಗಿದ್ದರು ರಾಜೀವ ಹೆಗಡೆ ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿ ಆರಂಭಿ ಸಿದಾಗ…
ಸುಧಾರಣೆ ನೆಪದಲ್ಲಿ ಎಚ್ಚರ ತಪ್ಪಿದೆ. ಪ್ರೌಢಶಾಲೆಯಲ್ಲಿ ನನಗೆ ಆಪ್ತ ಸ್ನೇಹಿತರು ಬಹಳ ಕಡಿಮೆಯಿದ್ದರು. ಅಲ್ಲಿ ಬೇರೆ ಬೇರೆ ಕಾಲದಲ್ಲಿ ನನಗೆ…
ಪ್ರಶಾಂತ್ ಎಸ್. ಮೈಸೂರು: ಯಾವುದೋ ಕಾರಣಕ್ಕೆ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವ ಬಹುತೇಕ ಮಂದಿ ಮನೆ ಹಾಗೂ ಕುಟುಂಬದವರಿಂದ ದೂರವಾಗುವುದು ಸಹಜ.…
ಗಿರೀಶ್ ಹುಣಸೂರು ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ದಾಖಲೆ ಫಲಿತಾಂಶ ಹಿನ್ನೆಲೆ ಮೈಸೂರು: ಶೈಕ್ಷಣಿಕ ವರ್ಷದ ಆರಂಭಕ್ಕೆ ದಿನಗಣನೆ ಆರಂಭ ವಾಗಿರುವ…
ಕೆ.ಬಿ.ರಮೇಶನಾಯಕ ೨ನೇ, ೪ನೇ ಶನಿವಾರ, ಭಾನುವಾರ ಬಾಗಿಲು ಹಾಕಿದರೆ ಶಿಸ್ತುಕ್ರಮ ಮೈಸೂರು: ವಾರದ ಭಾನುವಾರವೂ ಸೇರಿದಂತೆ ಸರ್ಕಾರಿ ರಜಾ ದಿನಗಳಂದು…