Andolana originals

ಗಾಂಧಿ ಅಭಿಯಾನ ಅರಿವಿನ ಯಾನ

ಬಾಪೂಜಿ ಮತ್ತು ವಾಜಪೇಯಿ ದಾರಿ ಬೇರೆಯಾಗಿದ್ದರೂ ನೈತಿಕತೆಗೆ ಮಾದರಿಯಾಗಿದ್ದರು

ರಾಜೀವ ಹೆಗಡೆ

ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿ ಆರಂಭಿ ಸಿದಾಗ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ೧೮ ವರ್ಷವಾಗಿತ್ತು. ಆಗಲೇ ಗಾಂಧಿಜಿಯ ಹೋರಾಟದ ಬಗ್ಗೆ ವಾಜಪೇಯಿ ತಮ್ಮ ಸ್ಪಷ್ಟ ನಿಲುವು ಹೊಂದಿದ್ದರು. ‘ಎರಡನೇ ವಿಶ್ವಯುದ್ಧ ನಡೆಯುತ್ತಿರುವಾಗ ಭಾರತವು ತನ್ನ ಸೇನೆಯನ್ನು ಬಲಿಷ್ಠ ಮಾಡಿಕೊಳ್ಳುವ ಬದಲಿಗೆ ಗಾಂಧೀಜಿಯು ಸತ್ಯಾಗ್ರಹ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದರು’ ಎನ್ನುವುದು ವಾಜಪೇಯಿ ನಿಲುವಾಗಿತ್ತು. ಇದಲ್ಲದೇ ಸ್ವಾತಂತ್ರ್ಯ ಹೋರಾಟದ ಅವಧಿಯ ಹಲವು ಸನ್ನಿವೇಶಗಳಲ್ಲಿ ಪಾಂಚಜನ್ಯದಲ್ಲಿ ಗಾಂಧೀಜಿಯ ಹೋರಾಟದ ವೈಖರಿ ಬಗ್ಗೆ ವಾಜಪೇಯಿ ಟೀಕೆ ಮಾಡಿದ್ದರು.

ಇವರಿಬ್ಬರಲ್ಲಿ ಸಾಕಷ್ಟು ವೈರುಧ್ಯಗಳಿವೆ. ಒಂದೊಮ್ಮೆ ಗಾಂಧಿಜಿ ಬದುಕಿದ್ದರೆ ವಾಜಪೇಯಿ ನಡೆಸಿದ್ದ ಅಣು ಪರೀಕ್ಷೆಯನ್ನು ಟೀಕಿಸುತ್ತಿದ್ದರು. ವಾಜಪೇಯಿ ಪಾಲಿಸುತ್ತಿದ್ದ ರಾಷ್ಟ್ರೀಯತೆ ಹಾಗೂ ಆರ್‌ಎಸ್‌ಎಸ್‌ನ ಬಲಪಂಥೀಯ ಸಿದ್ಧಾಂತವನ್ನು ಒಪ್ಪುವ ಸಾಧ್ಯತೆ ಇರಲಿಲ್ಲ. ಹಾಗೆಯೇ ಗಾಂಧಿಜಿ ಹಲವು ರಾಜಕೀಯ ನಿಲುವುಗಳನ್ನು ನೇರ ವಾಗಿಯೇ ವಾಜಪೇಯಿ ಪ್ರಶ್ನಿಸುತ್ತಿದ್ದರು.

ಹೀಗೆ ರಾಜಕೀಯವಾಗಿ ನೋಡಿದಾಗ ಗಾಂಧಿಜಿ ಹಾಗೂ ವಾಜಪೇಯಿ ಎರಡು ಭಿನ್ನ ಪಥದಲ್ಲಿ ಕಾಣಿಸುತ್ತಾರೆ. ಸಿದ್ಧಾಂತ, ರಾಜಕೀಯ ನಿಲುವು ಹಾಗೂ ಹಲವು ವಿಚಾರಗಳಲ್ಲಿ ವಿಭಿನ್ನವಾಗಿಯೇ ಗೋಚರವಾಗುತ್ತಾರೆ. ಆದರೆ ರಾಜಕೀಯ ನೈತಿಕತೆ ಎನ್ನುವ ವಿಚಾರದಲ್ಲಿ ಹಲವು ಸಾಮ್ಯತೆಗಳು ಕಾಣಿಸುತ್ತವೆ.

ಗಾಂಧಿಜಿ ಹಾಗೂ ವಾಜಪೇಯಿ ಅವರು ಎಂದಿಗೂ ಅಧಿಕಾರದ ಹಿಂದೆ ಓಡಿ ಹೋಗಲಿಲ್ಲ. ಏಕೆಂದರೆ, ವಾಜಪೇಯಿ ಅವರ ರಾಜಕೀಯ ವಿರೋಧಿಗಳು ‘Right man in wrong party ಎಂದು ಹೇಳುತ್ತಿದ್ದುದರ ಜೊತೆಗೆ, ಅಧಿಕಾರದ ಜೋಳಿಗೆ ಹಿಡಿದುಕೊಂಡು ಆಹ್ವಾನಿಸುತ್ತಲೇ ಇದ್ದರು. ಆದರೆ ವಾಜಪೇಯಿ ಎಂದಿಗೂ ಅಧಿಕಾರಕ್ಕಾಗಿ ತಮ್ಮ ಸಿದ್ಧಾಂತ ಹಾಗೂ ನಂಬಿದ ವಿಚಾರಗಳಿಗೆ ಮೋಸ ಮಾಡುವ ಪ್ರಯತ್ನ ಮಾಡಲಿಲ್ಲ. ಹಾಗೆಯೇ ಗಾಂಧಿಜಿ ಕೂಡ ಕಾಂಗ್ರೆಸ್ ಪಕ್ಷ ಅಥವಾ ನಂತರದ ಸರ್ಕಾರಗಳಲ್ಲಿ ಅಧಿಕಾರದ ಹಿಂದೆ ಓಡಿ ಹೋಗಲಿಲ್ಲ. ಅವರು ನಂಬಿದ ಸಿದ್ಧಾಂತಗಳ ಬಗ್ಗೆ ಹಲವರಿಗೆ ಆಕ್ಷೇಪಗಳಿರ ಬಹುದು.

ಆದರೆ ಆ ಸಿದ್ಧಾಂತಕ್ಕೆ ಗಾಂಧಿಜಿ ಅಂಟಿಕೊಂಡಿದ್ದರು ಹಾಗೂ ಅದಕ್ಕಾಗಿ ಅಧಿಕಾರದ ಗದ್ದುಗೆಯನ್ನೂ ಏರಲಿಲ್ಲ. ಗಾಂಧಿಜಿಯ ಪ್ರಕಾರ ತತ್ವವಿಲ್ಲದ ರಾಜಕಾರಣವು ಸಾಮಾಜಿಕ ಪಿಡುಗು. ಅಟಲ್ ಬಿಹಾರಿ ವಾಜಪೇಯಿ ಕೂಡ ೧೯೯೬ರಲ್ಲಿ ಬಹುಮತ ಸಾಬೀತು ಮಾಡಲು ವಿಫಲವಾಗುವ ಮುನ್ನ ಲೋಕಸಭೆಯಲ್ಲಿ ಮಾಡಿದ ಐತಿಹಾಸಿಕ ಭಾಷಣದ ಸಾರಾಂಶ\ ಕೂಡ ಇದುವೇ ಆಗಿತ್ತು. ಕೇವಲ ಒಂದು ಮತದಿಂದ ವಿಶ್ವಾಸಮತ ಗಳಿಸುವಲ್ಲಿ ಸೋತಿದ್ದ ವಾಜಪೇಯಿ ಅವರ ಗೆಲುವಿಗೆ ಕೇವಲ ನೈತಿಕತೆ ಅಡ್ಡಿಯಾಗಿತ್ತು.

‘ಸರ್ಕಾರ ಬರುತ್ತದೆ ಮತ್ತು ಹೋಗುತ್ತದೆ. ಪಕ್ಷಗಳ ರಚನೆಯಾಗುತ್ತದೆ. ಒಡೆಯುತ್ತದೆ. ಆದರೆ ಈ ದೇಶ ಹಾಗೂ ಪ್ರಜಾಪ್ರಭುತ್ವಕ್ಕೆ ಯಾವುದೇ ಧಕ್ಕೆಯಾಗಕೂಡದು’ ಎಂದು ಲೋಕಸಭೆ ಯಲ್ಲಿ ವಾಜಪೇಯಿ ಗುಡುಗಿದ್ದರು. ಭಾರತದಲ್ಲಿ ರಾಜಕೀಯ ಅಧಃಪತನದ ಯಾವುದೇ ಘಟನೆಗಳು ನಡೆದಾಗಲೆಲ್ಲ, ವಾಜಪೇಯಿ ಅವರ ಈ ಭಾಷಣವು ಮುನ್ನೆಲೆಗೆ ಬರುತ್ತಿರುತ್ತದೆ. ಅಂದ್ಹಾಗೆ ಇವರಿಬ್ಬರೂ ವಿಭಿನ್ನವಾದ ರಾಷ್ಟ್ರೀಯತೆಯಲ್ಲಿ ನಂಬಿಕೆ ಇರಿಸಿ ಕೊಂಡಿದ್ದರು. ಎಲ್ಲರನ್ನೂ ಒಳಗೊಂಡಿರುವ ರಾಷ್ಟ್ರೀಯತೆಯನ್ನು ಗಾಂಧಿಜಿ ನಂಬಿದ್ದರೆ, ಸಾಂಸ್ಕೃತಿಕ ಹಾಗೂ ಪ್ರಜಾತಾಂತ್ರಿಕ ರಾಷ್ಟ್ರೀಯತೆಯನ್ನು ವಾಜಪೇಯಿ ಪ್ರತಿಪಾದಿಸುತ್ತಿದ್ದರು.

ಹೀಗಾಗಿಯೇ ೨೦೦೨ರಲ್ಲಿ ಗಾಂಧಿಜಿ ಹೆಸರನ್ನು ರಸ್ತೆಯೊಂದಕ್ಕೆ ನಾಮಕರಣ ಮಾಡುವ ವೇಳೆ ವಾಜಪೇಯಿ ಈ ರೀತಿ ಹೇಳಿದ್ದರು. ‘ತಮ್ಮ ಜೀವನಪರ್ಯಂತ ಜಗತ್ತಿನ ಎಲ್ಲ ಧರ್ಮಗಳ ಸಹಬಾಳ್ವೆಯನ್ನು ಗಾಂಧಿಜಿ ಸಾರಿಕೊಂಡು ಬಂದರು. ಭಾರತದ ನಾಗರಿಕತೆ ಹೇಳುವಂತೆ ಸತ್ಯ ಒಂದೇ ಆಗಿರುತ್ತದೆ. ಆದರೆ ಅದರ ವ್ಯಾಖ್ಯಾನವು ವಿಭಿನ್ನವಾಗಿರುತ್ತದೆ’. ಭಾರತವು ಕೇವಲ ರಾಜತಾಂತ್ರಿಕ ಹಾಗೂ ಸಾಂವಿಧಾನಿಕ ಚೌಕಟ್ಟಿನ ಮೇಲೆ ನಿರ್ಮಾಣವಾದ ದೇಶವಲ್ಲ. ಭಾರತದ ಸಾಂಸ್ಕೃತಿಕ, ನೈತಿಕ ಹಾಗೂ ಪ್ರಾಚೀನ ನಾಗರಿಕತೆಯ ಮೇಲೆ ಕಟ್ಟಿಕೊಂಡಿರುವ ದೇಶವಾಗಿದೆ. ಇದರಲ್ಲಿ ಸಹಭಾಗಿತ್ವ ಹಾಗೂ ನಾಗರಿಕತೆಯ ಶ್ರೀಮಂತಿಕೆ ಇದೆ ಎನ್ನುವುದು ಗಾಂಧಿಜಿಯ ನಂಬಿಕೆಯಾಗಿತ್ತು. ವಾಜಪೇಯಿ ಕೂಡ ಇದನ್ನೇ ಬಲಪಂಥೀಯ ವಿಚಾರಧಾರೆಯಲ್ಲಿ ಪ್ರತಿಧ್ವನಿಸುತ್ತಿದ್ದರು. ಭಾರತದ ಶ್ರೀಮಂತ ಇತಿಹಾಸ ಹಾಗೂ ಶ್ರೇಷ್ಠತೆಯ ಬಗ್ಗೆ ಹೆಮ್ಮೆಯನ್ನು ಎಂದಿಗೂ ವ್ಯಕ್ತಪಡಿಸುತ್ತಿದ್ದರು.

ಗಾಂಧಿಜಿ ಕಾಲಘಟ್ಟದಲ್ಲಿ ರಚನೆಯಾದ ಪಾಕಿಸ್ತಾನದ ಜೊತೆಗೆ ಅಚ್ಚರಿಯ ರೀತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಶಾಂತಿ ಮಾತುಕತೆಗೆ ಮುಂದಾಗಿದ್ದರು. ಭಾರತದಿಂದ ವಿಶೇಷ ಬಸ್‌ನಲ್ಲಿ ತೆರಳಿ ಸಂವಹನದ ಪ್ರಾಮಾಣಿಕ ಪ್ರಯತ್ನ ನಡೆಸಿದ್ದರು. ತಮ್ಮ ಸೈದ್ಧಾಂತಿಕ ನಿಲುವಿನಿಂದ ಹೊರಬಂದು, ಪಾಕಿಸ್ತಾನದ ಜೊತೆಗೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿ ಕೊಳ್ಳಬಹುದು ಎನ್ನುವುದನ್ನು ಜಗತ್ತಿಗೆ ತೋರಿಸುವ ಪ್ರಯತ್ನ ಮಾಡಿದ್ದರು. ಈ ವಿಚಾರದಲ್ಲಿ ಪಾಕಿಸ್ತಾನವು ಎಂದಿನಂತೆ ವಾಜಪೇಯಿ ಅವರ ಬೆನ್ನಿಗೂ ಚೂರಿ ಇರಿಯುವ ಕೆಲಸ ಮಾಡಿತು. ಆದರೆ ಗಾಂಧಿ ತತ್ವದಂತೆ ವಾಜಪೇಯಿ ಸಮಸ್ಯೆಗಳಿಗೆ ಮಾತುಕತೆ ಮೂಲಕ ಶಾಂತಿ ಸ್ಥಾಪನೆ ಮಾಡುವ ಪ್ರಯತ್ನ ಮಾಡಿದರು. ಒಂದರ್ಥದಲ್ಲಿ ದಶಕಗಳ ಹಿಂದೆ ಗಾಂಽ ನಿಲುವನ್ನು ಟೀಕಿಸಿದ್ದ ವಾಜ ಪೇಯಿ ಯವರೇ ಮಾತುಕತೆಯ ಬಾಗಿಲನ್ನು ತೆರೆದಿದ್ದರು

ಆಂದೋಲನ ಡೆಸ್ಕ್

Recent Posts

ಮೂರು ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ ; ಉಭಯ ಸದನಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಬೆಂಗಳೂರು : ವಾಲ್ಮೀಕಿ ನಿಗಮ ಹಗರಣ ಸಂಬಂಧ ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ತೀವ್ರ ಪ್ರತಿಭಟನೆಗೆ ಸಾಕ್ಷಿಯಾದ…

2 mins ago

ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ ; ತಮಿಳುನಾಡಿಗೆ 9,000 ಕ್ಯುಸೆಕ್‌ ನೀರು ಹರಿಸಲು ಆದೇಶ

ಬೆಂಗಳೂರು : ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಸವಾಲು ಎದುರಾಗಿದೆ. ತಮಿಳುನಾಡಿಗೆ ಬಿಳಿಗುಂಡ್ಲುವಿನಲ್ಲಿ ಮುಂದಿನ 15 ದಿನಗಳ…

2 hours ago

ಮಳೆ ಕೊರತೆ ನೀಗಿಸಲು ಕೃತಕ ಮಳೆ ಅಸ್ತ್ರ : ಮೋಡ ಬಿತ್ತನೆಗೆ ಸರ್ಕಾರ ಗ್ರೀನ್ ಸಿಗ್ನಲ್

ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಹತ್ವದ ಸಭೆ ಜಲಾಶಯಗಳಲ್ಲಿ ನೀರು ಕುಸಿತ - ನಾಳೆಯೇ ಏಜೆನ್ಸಿ ಅಂತಿಮ ಬೆಂಗಳೂರು : ರಾಜ್ಯದ…

4 hours ago

ವರ್ಷಕ್ಕೆ ಮೂರು ಸಿಲಿಂಡರ್ ಉಚಿತ – ತಮಿಳುನಾಡು ಜನರಿಗೆ ವಿಜಯ್‌ ಸರ್ಕಾರದ ಬಂಪರ್‌ ಆಫರ್‌!

ಚೆನ್ನೈ: ತಮಿಳುನಾಡಿನ ಜನರಿಗೆ ವಿಜಯ್‌ ಸರ್ಕಾರದಿಂದ ಭರ್ಜರಿ ಗುಡ್‌ನ್ಯೂಸ್‌ ನೀಡಲಾಗಿದ್ದು, ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ವಿಚಾರದಲ್ಲಿ ಮಹತ್ವದ…

10 hours ago

ತಮಿಳುನಾಡಿಗೆ ಕಾವೇರಿ ನೀರು: ಸೋಮವಾರಕ್ಕೆ ವಿಚಾರಣೆ ಮುಂದೂಡಿಕೆ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿವಾದಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆ ನಡೆದಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ…

10 hours ago

ಕಲಾಪಗಳೇ ನಡೆಯದ ಅಧಿವೇಶನ

ಸಂಸತ್ತಿನಲ್ಲಾಗಲಿ ಅಥವಾ ರಾಜ್ಯಗಳ ವಿಧಾನಸಭೆ ಹಾಗೂ ವಿಧಾನಪರಿಷತ್ತುಗಳಲ್ಲಾಗಲಿ ಕೆಲವು ವರ್ಷಗಳಿಂದ ಕಲಾಪಗಳೇ ಸುಸೂತ್ರವಾಗಿ ನಡೆಯದೆ ಗದ್ದಲ, ಧರಣಿ, ಪ್ರತಿ ಭಟನೆಗಳು…

11 hours ago