Andolana originals

ಒಂದು ಬಾಣ ಎರಡು ಗುರಿ

ಆರ್.ಟಿ.ವಿಠ್ಠಲಮೂರ್ತಿ

ಡಿಕೆಶಿ ಕ್ಯಾಂಪ್, ಕೈ ಹೈಕಮಾಂಡ್‌ಗೆ ಸಿಎಂ ಸ್ಪಷ್ಟ ಸಂದೇಶ ರವಾನೆ

ತಮ್ಮ ನಾಯಕತ್ವಕ್ಕೆ ಅಡ್ಡಿ ಬಂದರೆ ಸಹಿಸುವುದಿಲ್ಲ ಎಂಬ ಎಚ್ಚರಿಕೆ 

ಬೆಂಗಳೂರು: ಪದೇ ಪದೇ ಕೇಳಿ ಬರುತ್ತಿದ್ದ ಅಧಿಕಾರ ಹಂಚಿಕೆಯ ಮಾತಿಗೆ ಮಿಂಚಿನ ವೇಗದಲ್ಲಿ ಬ್ರೇಕ್ ಹಾಕಿದ ಸಿಎಂ ಸಿದ್ದರಾಮಯ್ಯ ಅವರ ನಡೆ ಇದೀಗ ರಾಜಕೀಯ ವಲಯಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಧಿಕಾರ ಹಂಚಿಕೆಯ ಮಾತು ಮೇಲಿಂದ ಮೇಲೆ ಕೇಳಿ ಬರುತ್ತಿದ್ದರೂ ಸಿದ್ದರಾಮಯ್ಯ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ಹಲ ಸಚಿವರು ಮತ್ತು ಶಾಸಕರನ್ನು ತಮ್ಮೆಡೆ ಸೆಳೆಯುವಲ್ಲಿ ಸಫಲರಾಗಿದ್ದಲ್ಲದೆ, ತಮಗೆ ಶಾಸಕಾಂಗ ಪಕ್ಷದಲ್ಲೂ ಗಣನೀಯ ಬಲವಿದೆ ಎಂದು ದಿಲ್ಲಿ ವರಿಷ್ಠರಿಗೆ ವಿವರಿಸಿದ್ದರು.

ಹೀಗೆ ತಮಗೆ ಬೆಂಬಲವಾಗಿ ನಿಂತ ಬಹುತೇಕರು ಹೈಕಮಾಂಡ್ ನಿರ್ದೇಶನವನ್ನು ಕಾಯುತ್ತಿದ್ದು, ನಾಯಕತ್ವ ಬದಲಾವಣೆ ಮಾಡುವುದಾಗಿ ಹೈಕಮಾಂಡ್ ಘೋಷಿಸಿದರೆ ಇವರೆಲ್ಲ ಬಹಿರಂಗವಾಗಿ ತಮ್ಮ ಪರ ನಿಲ್ಲಲಿದ್ದಾರೆ ಎಂದು ಹೇಳಿಕೊಂಡಿದ್ದರೆನ್ನಲಾಗಿದೆ.

ಮೂಲಗಳ ಪ್ರಕಾರ, ಇತ್ತೀಚೆಗೆ ಎರಡು ಬಾರಿ ರಾಜ್ಯಕ್ಕೆ ಬಂದಿದ್ದ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡಾ ಇದಕ್ಕೆ ಪುಷ್ಟಿ ನೀಡುವಂತಹ ವರದಿಯನ್ನು ನೀಡಿದ್ದರು. ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತ ಅನುದಾನ ದೊರಕುತ್ತಿಲ್ಲ ಎಂದು ಶಾಸಕರು ಹೇಳಿದ್ದನ್ನೇ ನಾಯಕತ್ವದ ವಿರುದ್ಧದ ಅಸಮಾಧಾನ ಎಂಬಂತೆ ಸುರ್ಜೇವಾಲ ಪ್ರತಿಬಿಂಬಿಸಿದ್ದರಿಂದ ದಿಲ್ಲಿ ಮಟ್ಟದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿತ್ತು. ಇದನ್ನರಿತ ಸಿದ್ದರಾಮಯ್ಯ ಅವರು ಡಿಕೆಶಿ ತಂತ್ರಕ್ಕೆ ಪ್ರತಿತಂತ್ರ ಹೆಣೆದಿದ್ದಲ್ಲದೆ ಇದರ ಭಾಗವಾಗಿ ದಿಲ್ಲಿಗೆ ಹೋದರು.

ಹೀಗೆ ಹೋದವರು ಐದು ವರ್ಷಗಳ ಕಾಲ ತಾವೇ ಸಿಎಂ ಎಂದಿದ್ದಲ್ಲದೆ, ಡಿಕೆಶಿ ಅವರಿಗೆ ಶಾಸಕರ ಬಲವಿಲ್ಲ ಎಂದು ಗುಡುಗಿ ಏಕಕಾಲಕ್ಕೆ ಡಿಕೆಶಿ ಕ್ಯಾಂಪಿಗೆ ಮತ್ತು ವರಿಷ್ಠರಿಗೆ ಸ್ಪಷ್ಟ ಸಂದೇಶ ರವಾನಿಸಿದರು. ಹೀಗೆ ಸಿದ್ದರಾಮಯ್ಯ ಅವರು ದಿಲ್ಲಿಯಲ್ಲಿ ತಮ್ಮ ನಾಯಕತ್ವಕ್ಕೆ ಅಡ್ಡಿ ಬಂದರೆ ಸಹಿಸುವುದಿಲ್ಲ ಎಂದು ದಿಲ್ಲಿಯಲ್ಲಿ ಮೆಸೇಜು ಕೊಟ್ಟರೆ, ಕರ್ನಾಟಕದಲ್ಲಿ ಅವರ ಆಪ್ತ, ಹಿರಿಯ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ನಿರ್ಣಾಯಕ ಹೊಡೆತ ಬಾರಿಸಿದರು.

ಇದರ ಭಾಗವಾಗಿಯೇ ಜಮೀರ್ ಅಹ್ಮದ್, ಸತೀಶ್ ಜಾರಕಿಹೊಳಿ, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಸಚಿವರ ಜತೆ ಬೆಂಗಳೂರಿನಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿದ್ದಲ್ಲದೆ ನಾಯಕತ್ವ ಬದಲಾವಣೆಗೆ ಕೈ ಹಾಕಿದರೆ ಸರ್ಕಾರಕ್ಕೆ ಅಪಾಯವಾಗಲಿದೆ ಎಂಬ ಎಚ್ಚರಿಕೆ ನೀಡಿದರು.

ಮೂಲಗಳ ಪ್ರಕಾರ, ನಾಯಕತ್ವ ಬದಲಾವಣೆಗೆ ವರಿಷ್ಠರು ಕೈ ಹಾಕಿದರೆ ಅರವತ್ತಕ್ಕೂ ಹೆಚ್ಚು ಸಚಿವರು, ಶಾಸಕರು ಪಕ್ಷ ತೊರೆಯಬಹುದು ಎಂದು ಹೆಚ್.ಸಿ.ಮಹದೇವಪ್ಪನವರು ಖರ್ಗೆ ಅವರಿಗೆ ವಿವರಿಸಿದ್ದಾರೆ. ಹೀಗೆ ಸಚಿವ ಹೆಚ್.ಸಿ.ಮಹದೇವಪ್ಪ ಅವರು ಅಂಕಿ-ಅಂಶಗಳ ಸಮೇತ ನಾಯಕತ್ವ ಬದಲಾವಣೆಯ ಅಪಾಯದ ಬಗ್ಗೆ ವಿವರಿಸಿದನಂತರ ದಿಲ್ಲಿಗೆ ತೆರಳಿದ ಖರ್ಗೆ ಗುರುವಾರ ವರಿಷ್ಠರಿಗೆ ಇದನ್ನೇ ವಿವರಿಸಿದರೆನ್ನಲಾಗಿದೆ.

ಹೀಗೆ ದಿಲ್ಲಿ ಮತ್ತು ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಕರ್ನಾಟಕದಲ್ಲಿ ಮಹದೇವಪ್ಪ ನೇತೃತ್ವದ ಆಪ್ತರ ಪಡೆ ನಡೆಸಿದ ಮಿಂಚಿನಕಾರ್ಯಾಚರಣೆ ಡಿಕೆಶಿ ಮಾತ್ರವಲ್ಲದೆ ವರಿಷ್ಠರನ್ನೂ ಸ್ತಂಭೀಭೂತಗೊಳಿಸಿದೆ. ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ಮುಂಚಿನಿಂದಲೂ ಸಿದ್ದರಾಮಯ್ಯ ನಾಯಕತ್ವದ ಪರವಾಗಿದ್ದರೆ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಽಯವರು ಡಿಕೆಶಿ ಅವರಿಗೆ ಒಂದು ಅವಕಾಶ ಸಿಗಬೇಕು ಎಂಬ ಯೋಚನೆಯಲ್ಲಿದ್ದಾರೆ.

ಆದರೆ ಯಾವಾಗ ಸಿದ್ದರಾಮಯ್ಯ ದಿಲ್ಲಿಗೆ ಬಂದು ತಮ್ಮ ನಾಯಕತ್ವವನ್ನು ಸಮರ್ಥಿಸಿಕೊಂಡರೋ ಮತ್ತು ನಾಯಕತ್ವ ಬದಲಾವಣೆಯಾದರೆ ಸರ್ಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ಮಹದೇವಪ್ಪ ನೇತೃತ್ವದ ಸಚಿವರ ಪಡೆ ಖರ್ಗೆಯವರಿಗೆ ಸಂದೇಶ ನೀಡಿತೋ ಇದಾದ ನಂತರ ಸೋನಿಯಾ, ಪ್ರಿಯಾಂಕ ಗಾಂಧಿ ಅವರು ಮೌನವಾಗಿದ್ದಾರೆ ಮತ್ತು ಇದನ್ನೇ ಮುಖ್ಯವಾಗಿಟ್ಟುಕೊಂಡ ರಾಹುಲ್ ಗಾಂಧಿಯವರು ಬಿಹಾರ, ಕೇರಳ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ನಾಯಕತ್ವದ ಬಗ್ಗೆ ಚರ್ಚೆ ಬೇಡ ಎಂದು ಕೈ ತೊಳೆದುಕೊಂಡಿದ್ದಾರೆ.

ಆಪ್ತ ಸಚಿವರ ಕಾರ್ಯತಂತ್ರ: 

” ಸಿದ್ದರಾಮಯ್ಯ ಅವರು ತಮ್ಮ ನಾಯಕತ್ವಕ್ಕೆ ಅಡ್ಡಿ ಬಂದರೆ ಸಹಿಸುವುದಿಲ್ಲ ಎಂದು ದಿಲ್ಲಿಯಲ್ಲಿ ಮೆಸೇಜು ಕೊಟ್ಟರೆ, ಅವರ ಆಪ್ತ ಹಿರಿಯ ಸಚಿವರು ಬೆಂಗಳೂರಿನಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿದ್ದಲ್ಲದೆ ನಾಯಕತ್ವ ಬದಲಾವಣೆಗೆ ಕೈ ಹಾಕಿದರೆ ಸರ್ಕಾರಕ್ಕೆ ಅಪಾಯವಾಗಲಿದೆ ಎಂಬ ಎಚ್ಚರಿಕೆ ನೀಡಿದರು.”

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸಿಗಲಿ ನ್ಯಾಯ!

ಸಿಗಲಿ ನ್ಯಾಯ! ಮರುಜೀವ ಬಂದಿದೆ ಹೊಸಬೆಳಕು ಮೂಡಿದೆ ಸುಪ್ರೀಂಕೋರ್ಟಿನ ಸೌಜನ್ಯಾ ಪ್ರಕರಣದ ಮರುತನಿಖೆಯ ಆದೇಶ! ಸಲಾಂ ಸುಪ್ರೀಂಗೆ! ನಡೆಯಲಿ ತನಿಖೆ…

2 hours ago

ಓದುಗರ ಪತ್ರ: ಸರ್ಕಾರಿ ಶಾಲಾ, ಕಾಲೇಜುಗಳೆಂದರೆ ತಾತ್ಸಾರವೇಕೆ?

ಇತ್ತೀಚೆಗೆ ಮೈಸೂರಿನ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ನಡೆದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ನಗರದ ಸರ್ಕಾರಿ ಹಾಗೂ…

2 hours ago

ಓದುಗರ ಪತ್ರ: ಕೆಪಿಎಸ್‌ಸಿ ರದ್ದತಿಗಿಂತ ‘ಶುದ್ಧೀಕರಣ’ ತುರ್ತು ಅಗತ್ಯ

ಕರ್ನಾಟಕ ಲೋಕಸೇವಾ ಆಯೋಗವನ್ನು ರದ್ದುಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು…

2 hours ago

ಆರೋಗ್ಯಕರ ನಾಳೆಗಾಗಿ ಆಯುರ್ವೇದ – ಒಂದು ಆರೋಗ್ಯ, ಒಂದು ಭವಿಷ್ಯ

ಡಾ. ಮಾನಸ ಎಸ್.ಡಿ. ವೈಯಕ್ತಿಕ ಆರೋಗ್ಯದ ಜೊತೆಗೆ ಸಾಮೂಹಿಕ ಆರೋಗ್ಯ ಹಾಗೂ ಪರಿಸರದ ಅರೋಗ್ಯವನ್ನೂ ಕಾಪಾಡುವುದು ಅಗತ್ಯ ಆರೋಗ್ಯವೆಂದರೆ ಕೇವಲ…

2 hours ago

ಡಾ.ಎಸ್.ಜೆ. ನಾಗಲೋಟಿಮಠ ಅವರ ಸ್ಛೂರ್ತಿದಾಯಕ ನಡವಳಿಕೆ

ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಅಧಿಕಾರದ ಶಕ್ತಿಯಿಂದಲ್ಲ, ಆದರ್ಶದ ನಡವಳಿಕೆಯಿಂದ ಮುನ್ನಡೆಸುವುದೇ ನಿಜವಾದ ನಾಯಕತ ಕೆಲವೊಮ್ಮೆ…

2 hours ago

ಯುವನಿಧಿ; ೨,೧೭೯ ಮಂದಿಗೆ ೬.೩೦ ಕೋಟಿ ರೂ. ನೆರವು

ನವೀನ್ ಡಿಸೋಜ ೨,೪೫೯ ನಿರುದ್ಯೋಗಿ ಯುವಕ-ಯುವತಿಯರಿಂದ ನೋಂದಣಿ; ಶೇ.೮೮.೦೬ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ  ಮಡಿಕೇರಿ: ಉದ್ಯೋಗದ ನಿರೀಕ್ಷೆಯಲ್ಲಿರುವ…

2 hours ago