Andolana originals

ಪ್ರಕೃತಿ ಪ್ರಿಯರನ್ನು ಸೆಳೆಯುತ್ತಿರುವ ಮೇದುರ ಜಲಪಾತ

ಲಕ್ಷ್ಮೀಕಾಂತ್ ಕೊಮಾರಪ್ಪ

ಸೋಮವಾರಪೇಟೆ: ಪಶ್ಚಿಮ ಘಟ್ಟದ ಸಾಲಿನಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದಂತೆ ಕೊಡಗಿನ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಪ್ರಕೃತಿ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ಬಂದಿದೆ. ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ ಗ್ರಾಮದ ಸಮೀಪದ ಮೇದುರ ಜಲಪಾತವು ಭೋರ್ಗರೆದು ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರು ಹಾಗೂ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತಿದೆ.

ಪಶ್ಚಿಮ ಘಟ್ಟದ ಬೆಟ್ಟವೊಂದರ ಮೇಲಿನಿಂದ ಹರಿದುಬರುವ ಮೇದುರ ಜಲಪಾತವು ಬಂಡೆಗಲ್ಲುಗಳ ನಡುವೆ ಸುಮಾರು ೧೦೦ ಮೀಟರ್‌ಗೂ ಅಧಿಕ ಎತ್ತರದಿಂದ ಧುಮ್ಮಿಕ್ಕಿ ಮುಂದೆ ಸಾಗುತ್ತದೆ. ಮಳೆಗಾಲದಲ್ಲಿ ಜಲಧಾರೆಯ ರಭಸ ಹೆಚ್ಚಾಗುವುದರಿಂದ ಜಲಪಾತದ ಸೌಂದರ್ಯ ಇಮ್ಮಡಿಗೊಳ್ಳುತ್ತದೆ.

ಇದುವರೆಗೆ ಹೆಚ್ಚಿನ ಪ್ರಚಾರಕ್ಕೆ ಬಾರದಿದ್ದ ಮೇದುರ ಜಲಪಾತ ಇದೀಗ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಜಲಪಾತವು ಪ್ರವಾಸೋದ್ಯಮ ನೀತಿಯಡಿ ಪ್ರವಾಸಿ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸುವ ನಿರೀಕ್ಷೆ ಮೂಡಿದೆ. ಕೊಡಗಿನ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಸೂರ್ಲಬ್ಬಿಯೂ ಒಂದಾಗಿದೆ. ಮುಂಗಾರು ಆರಂಭವಾದರೆ ಸಾಕು, ಇಲ್ಲಿ ನಿರಂತರ ಮಳೆ ಸುರಿಯುವುದರಿಂದ ಬೆಟ್ಟಗುಡ್ಡಗಳಿಂದ ಹರಿದುಬರುವ ಸಣ್ಣಪುಟ್ಟ ಜಲಧಾರೆಗಳೆಲ್ಲ ಜೀವ ಪಡೆದುಕೊಳ್ಳುತ್ತವೆ. ಅದರಂತೆ ಈ ಮೇದುರ ಜಲಪಾತವೂ ಮಳೆಗಾಲದಲ್ಲಿ ತನ್ನ ವೈಭವವನ್ನು ತೆರೆದಿಡುತ್ತದೆ.

ಮುಖ್ಯ ರಸ್ತೆಯಲ್ಲಿರುವ ಸೇತುವೆಯ ಮೇಲಿನಿಂದಲೇ ಜಲಪಾತದ ಸಂಪೂರ್ಣ ದೃಶ್ಯವನ್ನು ಕಣ್ತುಂಬಿ ಕೊಳ್ಳಬಹುದಾಗಿದೆ. ನೀರಿನ ಹರಿವು ಕಡಿಮೆ ಇರುವ ಸಂದರ್ಭದಲ್ಲಿ ಜಲಪಾತದ ಹಾದಿಯಲ್ಲಿ ನಡೆದುಕೊಂಡು ಬೆಟ್ಟ ಹತ್ತಿ ಜಲಧಾರೆಯ ಸಮೀಪಕ್ಕೆ ತೆರಳಬಹುದಾದರೂ, ಮಳೆಗಾಲದಲ್ಲಿ ಈ ಸಾಹಸ ಅಪಾಯಕಾರಿಯಾಗುವ ಸಾಧ್ಯತೆ ಇದೆ.

ಜಲಪಾತ ಸ್ಥಳಕ್ಕೆ ತಲುಪುವುದು ಹೇಗೆ?: ಮಾದಾಪುರದಿಂದ ಈ ಜಲಪಾತ ಸುಮಾರು ೧೪ ಕಿ.ಮೀ. ದೂರದಲ್ಲಿದೆ. ಮಡಿಕೇರಿಯಿಂದ ಮಾದಾಪುರ ಮಾರ್ಗವಾಗಿ ಜಲಪಾತ ತಲುಪಬಹುದು. ಕುಶಾಲನಗರದಿಂದ ಸುಂಟಿಕೊಪ್ಪ-ಮಾದಾಪುರ ಮಾರ್ಗವಾಗಿಯೂ ಬರಬಹುದಾಗಿದೆ. ಸೋಮವಾರಪೇಟೆಯಿಂದ ತಾಕೇರಿ ಅಥವಾ ಶಾಂತಳ್ಳಿ ಮಾರ್ಗದ ಮೂಲಕ ಸೂರ್ಲಬ್ಬಿಗೆ ತೆರಳಬಹುದು.

ಸೂರ್ಲಬ್ಬಿ ಹಾಗೂ ಸುತ್ತಮುತ್ತ ಕೆಲವು ಹೋಂಸ್ಟೇ ಮತ್ತು ರೆಸಾರ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ದೂರದ ಊರುಗಳಿಂದ ಆಗಮಿಸುವ ಪ್ರವಾಸಿಗರಿಗೆ ಊಟ ಹಾಗೂ ವಸತಿ ಸೌಲಭ್ಯ ದೊರೆಯುತ್ತಿದೆ. ಸೂಕ್ತ ಪ್ರಚಾರದ ಜತೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿದರೆ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತಷ್ಟು ಬೆಳೆಯುವ ಸಾಧ್ಯತೆ ಇದೆ.

ಜಲಪಾತದ ಸೌಂದರ್ಯಕ್ಕೆ ಮನಸೋತು ಪ್ರವಾಸಿಗರು ಅಪಾಯವನ್ನು ಮೈಮೇಲೆಳೆದು ಕೊಳ್ಳದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಜಲಪಾತದ ತಳಭಾಗದ ಬಂಡೆಗಲ್ಲುಗಳ ಬಳಿ ನೀರಿನ ರಭಸ ಹೆಚ್ಚಿರುವ ಸಂದರ್ಭದಲ್ಲಿ ತೆರಳಬಾರದು. ಆದರೆ ಸ್ಥಳ ದಲ್ಲಿ ಪ್ರವಾಸಿಗರಿಗೆ ಅಗತ್ಯವಾದ ಎಚ್ಚರಿಕೆ ಸೂಚನಾ ಫಲಕಗಳ ಕೊರತೆ ಕಂಡುಬರುತ್ತಿದೆ. ಮಾರ್ಗದರ್ಶಕರು, ರಕ್ಷಣಾ ಸಿಬ್ಬಂದಿ ಹಾಗೂ ಸೂಕ್ತ ಸುರಕ್ಷತಾ ವ್ಯವಸ್ಥೆಯೂ ಇಲ್ಲ. ಜಲಪಾತದತ್ತ ಸಾಗುವ ರಸ್ತೆ ಕಿರಿದಾಗಿದ್ದು, ಹಲವು ಕಡೆ ತಿರುವುಗಳಿವೆ. ರಸ್ತೆ ಬದಿಯಲ್ಲಿ ಕಾಡು ಇರುವುದರಿಂದ ಎದುರಿನಿಂದ ಬರುವ ವಾಹನಗಳು ತಕ್ಷಣ ಗೋಚರಿಸುವುದಿಲ್ಲ. ಕೆಲ ಪ್ರವಾಸಿಗರು ಹಳೆಯ ಸೇತುವೆಯ ಪಕ್ಕದಲ್ಲಿಯೇ ಬೈಕ್‌ಗಳನ್ನು ನಿಲ್ಲಿಸಿ ಅತಿರೇಕದ ವರ್ತನೆ ತೋರುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿರುವ ಘಟನೆಗಳೂ ನಡೆದಿವೆ. ಜಲಪಾತದ ಪಕ್ಕದಲ್ಲೇ ವಾಹನ ನಿಲ್ಲಿಸಿ ವೀಕ್ಷಿಸುವುದರಿಂದಲೂ ಅಪಾಯ ಸಂಭವಿಸುವ ಸಾಧ್ಯತೆ ಇದೆ.

ಪ್ರವಾಸೋದ್ಯಮ ನೀತಿಯಡಿ ಈ ಜಲಪಾತಕ್ಕೆ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ ಕೇವಲ ಪ್ರಚಾರ ಹಾಗೂ ಅಭಿವೃದ್ಧಿಗೆ ಮಾತ್ರ ಒತ್ತು ನೀಡದೆ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಎಚ್ಚರಿಕೆ ಫಲಕಗಳು, ಸುರಕ್ಷತಾ ಬೇಲಿ, ವಾಹನ ನಿಲುಗಡೆ ವ್ಯವಸ್ಥೆ, ಮಾರ್ಗದರ್ಶಕರು ಹಾಗೂ ಅಗತ್ಯ ಸಂದರ್ಭದಲ್ಲಿ ರಕ್ಷಣಾ ಸಿಬ್ಬಂದಿ ನಿಯೋಜಿಸಿದರೆ ಪ್ರವಾಸಿಗರ ಸುರಕ್ಷತೆಯ ಜತೆಗೆ ಈ ಅಪರೂಪದ ಪ್ರಕೃತಿ ತಾಣವನ್ನು ಸುಸ್ಥಿರ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಬಹುದಾಗಿದೆ.

” ಜಲಪಾತದಲ್ಲಿ ಕಬ್ಬಿಣದ ರಕ್ಷಣಾ ಸಲಾಕೆ ಹಾಗೂ ಮೆಶ್ ಅಳವಡಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿದೆ. ಪೊಲೀಸ್ ಸಿಬ್ಬಂದಿ ನಿಯೋಜನೆ ಕುರಿತು ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.”

-ರಜನಿ, ಪಿಡಿಒ, ಗರ್ವಾಲೆ ಗ್ರಾಮ ಪಂಚಾಯಿತಿ

” ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಸಾಕಷ್ಟು ಸಣ್ಣಪುಟ್ಟ ಜಲಪಾತಗಳಿವೆ. ಚಾರಣಕ್ಕೆ ಸೂಕ್ತವಾದ ಪುಷ್ಪಗಿರಿ ಬೆಟ್ಟವೂ ಇದೆ. ಮಾಹಿತಿ ಕೊರತೆಯಿಂದಾಗಿ ಕೆಲವು ಸಣ್ಣ ಪುಟ್ಟ ಜಲಪಾತಗಳು ಹೊರ ಜಗತ್ತಿನಿಂದ ದೂರ ಉಳಿದಿವೆ. ಪ್ರವಾಸೋದ್ಯಮ ಪಟ್ಟಿಗೆ ಸೂರ್ಲಬ್ಬಿ ಜಲಪಾತವನ್ನು ಸೇರಿಸಿರುವುದು ಸ್ವಾಗತಾರ್ಹ ಕ್ರಮ. ಆದರೆ ನಿರೀಕ್ಷಿತ ಅಭಿವೃದ್ಧಿ ಇನ್ನೂ ಆಗಬೇಕಿದೆ.”

-ಚಾಮೇರ ದಿನೇಶ್ ಬೆಳ್ಯಪ್ಪ, ಮಂಕ್ಯ ಗ್ರಾಮ, ಗರ್ವಾಲೆ ಪಂಚಾಯಿತಿ

” ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿರುವ ಈ ಜಲಪಾತದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡ ಬೇಕು. ರಸ್ತೆ ವಿಸ್ತರಣೆ, ಅಗತ್ಯ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಕೆ ಹಾಗೂ ನಿರಂತರ ಪೊಲೀಸ್ ಗಸ್ತು ವ್ಯವಸ್ಥೆ ಕಲ್ಪಿಸಬೇಕು. ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಂಡು ಸುರಕ್ಷಿತ ಪ್ರವಾಸಕ್ಕೆ ಪ್ರವಾಸಿಗರಿಗೆ ಅನುವು ಮಾಡಿ ಕೊಡಬೇಕು.”

-ಆದರ್ಶ್ ತಮ್ಮಯ್ಯ, ಕಾರ್ಯದರ್ಶಿ, ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ

 

 

ಆಂದೋಲನ ಡೆಸ್ಕ್

Recent Posts

ರಾಜಕೀಯ ಮೇಲಾಟ ನಿಲ್ಲಲಿ; ಸಾಮಾನ್ಯರ ವಿಷಯ ಚರ್ಚೆಯಾಗಲಿ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ಕೇಂದ್ರ ಬಿಂದುವಾಗಿದ್ದು,…

14 mins ago

ಪ್ರೇಮವೂ ಬಂಡಾಯದ ದನಿಯೇ – ಅಮೃತಾ ಪ್ರೀತಮ್

ರೇಣುಕಾ ನಿಡಗುಂದಿ ಮತ್ತೆ ಸಿಗುವೆ.. ಆದರೆ ಎಲ್ಲಿ? ಹೇಗೆ ನನಗೂ ತಿಳಿಯದು, ಈ ನಶ್ವರ ಲೋಕದ ಹಂಗು ಆತ್ಮಕ್ಕಿಲ್ಲ ನಾ…

17 mins ago

ನೀರಸವಾಯಿತು ರಾಜ್ಯ ವಿಧಾನಮಂಡಲ ಅಧಿವೇಶನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಈ ಬಾರಿಯ ರಾಜ್ಯ ವಿಧಾನಮಂಡಲ ಅಧಿವೇಶನ ನಾಡಿನ ಜನರಿಗೆ ರವಾನಿಸಿರುವ ಸಂದೇಶ ಏನು? ಇಂತಹದೊಂದು…

21 mins ago

ಮಳೆ ಕೊರತೆ; ಹುಣಸೂರು ತಾಲ್ಲೂಕಿನಲ್ಲಿ ರೈತರಿಗೆ ಸಂಕಷ್ಟ

ಎಂ.ಯೋಗಾನಂದ ಬಿತ್ತನೆ ಮಾಡಿದ ಬೆಳೆಗಳು ಕೈ ಸೇರದೆ ಆತಂಕ, ಸೂಕ್ತ ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ ಹುಣಸೂರು: ತಾಲ್ಲೂಕಿನಲ್ಲಿ ಈ…

32 mins ago

ಸರ್ವರ್ ಸಮಸ್ಯೆ; ಪಡಿತರ ಪಡೆಯಲು ಪಡಿಪಾಟಲು

ಭೇರ್ಯ ಮಹೇಶ್ ಅವಳಿ ತಾಲ್ಲೂಕುಗಳಲ್ಲಿ ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಆಗ್ರಹ  ಕೆ.ಆರ್.ನಗರ: ಕೇಂದ್ರ ಸರ್ಕಾರದ ನಿರ್ದೇಶನದಂತೆ ಆಗಸ್ಟ್…

38 mins ago