Andolana originals

ಪ್ರೇಮವೂ ಬಂಡಾಯದ ದನಿಯೇ – ಅಮೃತಾ ಪ್ರೀತಮ್

ರೇಣುಕಾ ನಿಡಗುಂದಿ

ಮತ್ತೆ ಸಿಗುವೆ.. ಆದರೆ ಎಲ್ಲಿ? ಹೇಗೆ ನನಗೂ ತಿಳಿಯದು, ಈ ನಶ್ವರ ಲೋಕದ ಹಂಗು ಆತ್ಮಕ್ಕಿಲ್ಲ ನಾ ಯಾವ ಸ್ವರೂಪದಲ್ಲಾದರೂ ಮತ್ತೆ ಸಿಗುವೆ ಎಂದ ಅಮೃತಾ ಪ್ರೀತಂ ಹೆಸರು ಯಾರಿಗೆ ಗೊತ್ತಿಲ್ಲ! ಸಮಕಾಲೀನ ಭಾರತದ ಶ್ರೇಷ್ಠ ಕವಯಿತ್ರಿ, ಕಾದಂಬರಿಕಾರ್ತಿ, ಕತೆಗಾರ್ತಿಯಾಗಿ ಅಮೃತಾ ಪ್ರೀತಂ ಅಗ್ರಗಣ್ಯರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಪಡೆದ ಪಂಜಾಬಿನ ಮೊದಲ ಬರಹಗಾರ್ತಿ. ಇದೇ ಆಗಸ್ಟ್ ೩೧ ಅವರ ಹುಟ್ಟುಹಬ್ಬ.

ಸ್ವಾತಂತ್ರ್ಯ ಪೂರ್ವದ ಪಂಜಾಬಿನ ಗುಜರನ್ವಾಲಾದಲ್ಲಿ ಆಗಸ್ಟ್ ೩೧ , ೧೯೧೯ರಲ್ಲಿ ಹುಟ್ಟಿದ ಅಮೃತಾ, ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡರು. ಆಗಸ್ಟ್ ೧೯೪೭ ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಬೆನ್ನಿಗೇ ದೇಶ ವಿಭಜನೆಯಾಗಿ ಲಕ್ಷಾಂತರ ಹಿಂದೂ, ಮುಸ್ಲಿಮರು ತಮ್ಮದೆಲ್ಲವನ್ನೂ ತಮ್ಮವರನ್ನೂ ಕಳೆದುಕೊಂಡು ಅಕ್ಷರಶಃ ಅನಾಥರಾದರು. ಪಂಜಾಬಿನಲ್ಲಿ ರಕ್ತದ ಹೊಳೆಯೇ ಹರಿಯಿತು. ಉಡಿಯಲ್ಲಿ ಪುಟ್ಟ ಮಗುವನ್ನು ಕಟ್ಟಿಕೊಂಡ ಅಮೃತಾ ದಿಲ್ಲಿಗೆ ನಡೆದರು. ಕೊಲೆ ಸುಲಿಗೆ ದಂಗೆಯನ್ನು ಕಣ್ಣಾರೆ ಕಂಡ ಆಕೆ, ಸೂಫಿ ಸಂತ ವಾರಿಶ್ ಶಾಹ್ ಮೊರೆಹೋದರು. ವಾರಿಶ್ ಶಾಹ್ ಏಳು ಗೋರಿಯೊಳಗಿಂದಲೇ / ಮಾತಾಡು ಪ್ರೇಮದ ಪುಸ್ತಕದಿಂದ ಹೊಸ ಪುಟ ತೆರೆ / ಪಂಜಾಬದ ಒಬ್ಬ ಮಗಳು ಅತ್ತಾಗ ನೀನು ಮಹಾಕಾವ್ಯವನ್ನೇ ಬರೆದೆ / ಇಂದು ಲಕ್ಷಾಂತರ ಹೆಂಗಳೆಯರು ಕಂಬನಿಗರೆಯುತ್ತಿರುವರು… ಈ ಕವಿತೆಯನ್ನು ಭಾರತ ಪಾಕಿಸ್ತಾನದ ಪ್ರತಿಯೊಬ್ಬರೂ ತಮ್ಮ ಜೇಬಿನಲ್ಲಿಟ್ಟುಕೊಂಡು ಓಡಾಡುತ್ತಿದ್ದರು.

ದೇಶ ಇಬ್ಭಾಗವಾಯಿತು. ಆದರೆ ಮನಸ್ಸುಗಳು ? ಅಮೃತಾ ದಿಲ್ಲಿಯಲ್ಲಿ ಇದೀಗ ಕಾಣಲು ಪಾಕಿಸ್ತಾನದಿಂದ ಯಾರೋ ಸ್ನೇಹಿತರು ಬರುತ್ತಿದ್ದರು. ಒಬ್ಬ ಬಾಳೆಹಣ್ಣು ಮಾರುವವ ನೀವು ದಿಲ್ಲಿಗೆ ಹೋಗ್ತಿದೀರಾ? ಹೋದರೆ ಈ ಬಾಳೆಹಣ್ಣುಗಳನ್ನು ಅಮೃತಾಗೆ ಕೊಡಿ ಎಂದು ಕೊಟ್ಟು ಕಳಿಸುತ್ತಾನೆ. ಹೀಗೆ ಸರಹದ್ದಿನ ಆಚೆಗೂ ಅಪಾರ ಪ್ರೀತಿಯನ್ನು ಗಳಿಸಿದ್ದರು ಅಮೃತಾ. ಜನ್ಮಭೂಮಿ ಪಾಕಿಸ್ತಾನದ ಗುಜರನ್ವಾಲಾ ಆದರೆ ಕರ್ಮಭೂಮಿ ಭಾರತದ ರಾಜಧಾನಿ. ಜೀವನವೆಂದರೆ ಪ್ರೀತಿಯ ಹುಡುಕಾಟ ! ನಿರಂತರ ಅನ್ವೇಷಣೆ ! ಹತ್ತು ವರ್ಷಕ್ಕೇ ತಾಯಿಯನ್ನು ಕಳೆದುಕೊಂಡ ಅಮೃತಾ ಇಮರೋಜ್ ಅವರ ಬದುಕಿನಲ್ಲಿ ಬರುವವರೆಗೂ ಹಿಡಿ ಪ್ರೀತಿಗಾಗಿ ತಹತಹಿಸುತ್ತಿದ್ದರು. ಸಾಹಿರ್ ಜತೆಗಿನ ವಿಫಲ ಪ್ರೇಮ ಅವರನ್ನು ಖಿನ್ನತೆಗೆ ತಳ್ಳಿತ್ತು. ಪತಿ ಪ್ರೀತಂ ಸಿಂಗ್ ಅವರೊಂದಿಗೆ ಮನಸ್ಸು ಬೆಸಗೊಳ್ಳಲೇ ಇಲ್ಲ. ಕೆಲವರು ಹೇಳುವಂತೆ ಅಮೃತಾ ಸಾಹಿರ್ಗೋಸ್ಕರವೇ ಪತಿಯೊಂದಿಗೆ ವಿಚ್ಛೇದನ ಪಡೆದರೆಂದು, ಆದರೆ ಅದು ನಿಜವಲ್ಲ. ಇಮ್ರೋಜ್ ಕೂಡ ಈ ಮಾತನ್ನು ಒಪ್ಪುವುದಿಲ್ಲ. ಅಮೃತಾ ಯಾವತ್ತೂ ತಮ್ಮ ಷರತ್ತುಗಳ ಪ್ರಕಾರ ಬದುಕಿದರು. ಆಕೆ ಚಿಕ್ಕವಳಿದ್ದಾಗಿನ ಒಂದು ಘಟನೆಯನ್ನು ‘ರಸೀದಿ ಟಿಕೇಟ್’ ನಲ್ಲಿ ಹೇಳುತ್ತಾರೆ.

ಬಹಳಷ್ಟು ಸ್ಟೀಲ್ ಗ್ಲಾಸುಗಳನ್ನು ಅಜ್ಜಿ ತೊಳೆದು , ಒರೆಸಿ ಶೆಲ್ಫಿನ ಮೇಲೆ ಜೋಡಿಸುತ್ತಿದ್ದಳಂತೆ. ಮೂರು ಗ್ಲಾಸುಗಳು ಮಾತ್ರ ಅಡುಗೆಕೋಣೆಯ ಹೊರಗೆ ಅನಾಥ ಮಕ್ಕಳಂತೆ ಕೂತಿರುತ್ತಿದ್ದವು, ಪುಟ್ಟ ಹುಡುಗಿ ಅಮೃತಾ ಅಜ್ಜಿಗೆ ಕೇಳುತ್ತಾಳೆ, ಈ ಮೂರು ಗ್ಲಾಸುಗಳು ಇಲ್ಲ್ಯಾಕೆ ಇಟ್ತಿದ್ದೀ, ಅವೇಕೆ ಒಳಗಿಲ್ಲ ? ಅಂತಾ. ಅಜ್ಜಿ ಹೇಳುತ್ತಾಳೆ, ಇವು ಮನೆಗೆ ಬರುವ ಮುಸ್ಲಿಮರಿಗೆ ಚಹ ಮತ್ತು ಲಸ್ಸಿ ಕುಡಿಯಲು ಕೊಡೋಕೆ ಇಟ್ಟದ್ದು ಅಂತಾ. ಆ ಮಾತು ಅಮೃತಾರಿಗೆ ಚೂರು ಹಿಡಿಸುವುದಿಲ್ಲ. ಆಕೆ ಅಜ್ಜಿಯೊಂದಿಗೆ ಜಗಳಕಾದು, ಉಪವಾಸ ಹೂಡಿ, ಮನೆಯಲ್ಲಿ ‘ಹಿಂದೂ’ ಗ್ಲಾಸು, ‘ಮುಸ್ಲಿಂ’ ಗ್ಲಾಸು ಅಂತಾ ಬೇರೆ ಬೇರೆ ಇರಕೂಡದು ಎಂದು ಹಠಹಿಡಿಯುತ್ತಾರೆ. ಕೊನೆಗೆ ಅಜ್ಜಿ ಸೋತು, ಮೊಮ್ಮಗಳು ಗೆಲ್ಲುತ್ತಾಳೆ. ಆಗ ಬಹುಶಃ ಅಜ್ಜಿಗೂ ಗೊತ್ತಿರಲಿಕ್ಕಿಲ್ಲ ಮೊಮ್ಮಗಳು ಮುಂದೆ ಮುಸ್ಲೀಮನೊಬ್ಬನ ಪ್ರೇಮದಲ್ಲಿ ಬೀಳುತ್ತಾಳೆಂದು. ಸಾಹಿರ್ ಲೂಧಿಯನ್ವಿಯನ್ನು ಹುಚ್ಚಳಂತೆ ಪ್ರೀತಿಸುತ್ತಿದ್ದ ಅಮೃತಾ ಬಹಳಷ್ಟು ಪದ್ಯಗಳನ್ನು ಬರೆದರು. ನೋವು- ಹತಾಶೆಯಲ್ಲಿ ಖಿನ್ನತೆ ಅವರನ್ನು ಸಾಯಿಸುತ್ತಿತ್ತು. ಸಿಗರೇಟಿನಂತೆ ನಾನು ಮೌನವಾಗಿ ನೋವನ್ನು ಕುಡಿಯುತ್ತಿದ್ದೆ, ಸಿಡಿಸಿದ ಬೂದಿಯಿಂದ ಕೆಲವು ಕವಿತೆಗಳು ಉದುರಿದವು !

**

ಆಯುಷ್ಯದ ಸಿಗರೇಟು ಉರಿದುಹೋಯಿತು

ನನ್ನ ಪ್ರೇಮದ ಗಂಧ

ಒಂದಿಷ್ಟು ನಿನ್ನುಸಿರಲ್ಲಿ

ಒಂದಿಷ್ಟು ಗಾಳಿಯಲ್ಲಿ ಬೆರೆಯಿತು !

ಬದುಕಿನ ಎಲ್ಲ ಸ್ತರಗಳಲ್ಲೂ ಅವರ ಅದಮ್ಯವಾದ ಜೀವನಪ್ರೀತಿ, ಸಂಘರ್ಷ, ಹಿಡಿ ಪ್ರೀತಿಗಾಗಿ ತಹತಹಿಸಿದ ಯಾತನೆಗಳೆಲ್ಲವೂ ಎಲ್ಲೋ ಒಂದು ಕಡೆ ನಮ್ಮೆಲ್ಲರದೂ ಆಗಿಬಿಡುವ ಅನನ್ಯತೆಯ ಅಮೃತಾ ಆಪ್ತವಾಗುತ್ತಾರೆ. ನಾಲ್ಕು ದಶಕಗಳ ಕಾಲ ಬರೆದ ಅವರ ಬರಹಗಳು ಕೇವಲ ಒಂದು ಕಾಲಘಟ್ಟಕ್ಕೆ, ಒಂದು ಸಮುದಾಯಕ್ಕೆ, ಒಂದು ವರ್ಗಕ್ಕೆ, ಒಂದು ಭಾಷೆಗೆ ಬದ್ಧವಾಗಿದ್ದರೂ ಅಷ್ಟಕ್ಕೆ ಸೀಮಿತವಾಗದೇ ಕಾಲಾತೀತವಾಗುವುದರಿಂದಲೇ ಈಗಲೂ ಅಮೃತಾ ಪ್ರೀತಂ ಪ್ರಸ್ತುತರಾಗುತ್ತಾರೆ.

 

ಆಂದೋಲನ ಡೆಸ್ಕ್

Recent Posts

ಮಳೆ ಬಂದರೆ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಫಜೀತಿ!

ಆರ್.ಎಲ್.ಮಂಜುನಾಥ್ ದಸರಾ ನೋಡಲು ಬಂದವರ ಪಾಡು ಅಯೋಮಯ; ತಾತ್ಕಾಲಿಕ ಶೆಲ್ಟರ್ ಅಳವಡಿಸಲು ಆಗ್ರಹ  ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಮಹೋತ್ಸವದ…

9 mins ago

ಎಚ್.ಡಿ.ಕೋಟೆಯಲ್ಲಿ ಕಳೆಗಟ್ಟಿದ ನವರಾತ್ರಿ ಉತ್ಸವ

ಮಂಜು ಕೋಟೆ ವರದರಾಜಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ವಿವಿಧ ಕಾರ್ಯಕ್ರಮಗಳು; ಪ್ರತಿನಿತ್ಯ ನೂರಾರು ಮಂದಿ ಭಾಗಿ ಎಚ್.ಡಿ.ಕೋಟೆ: ನವರಾತ್ರಿ ಉತ್ಸವ ಮತ್ತು…

20 mins ago

ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಡಾನೆ ದಾಳಿ

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನದ ತೇರು ಪಕ್ಕದಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ಅಂಗಡಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿ…

20 hours ago

ರೈತನನ್ನು ಬಲಿ ಪಡೆದಿದ್ದ ಆನೆ ಕೊನೆಗೂ ಸೆರೆ!

ನಂಜನಗೂಡು: ತಾಲ್ಲೂಕಿನ ಹಂಚೀಪುರ ಗ್ರಾಮದಲ್ಲಿ ರೈತನ ಸಾವಿಗೆ ಕಾರಣವಾಗಿದ್ದ ಆನೆಯನ್ನು ಅರಣ್ಯ ಇಲಾಖೆ ಇಂದು ಸೆರೆ ಹಿಡಿದಿದೆ. ಸಾಕಾನೆಗಳ ನೆರವಿನಿಂದ…

20 hours ago

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್‌ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ…

21 hours ago