ಅಂಕಣಗಳು

ನೀರಸವಾಯಿತು ರಾಜ್ಯ ವಿಧಾನಮಂಡಲ ಅಧಿವೇಶನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ 

ಈ ಬಾರಿಯ ರಾಜ್ಯ ವಿಧಾನಮಂಡಲ ಅಧಿವೇಶನ ನಾಡಿನ ಜನರಿಗೆ ರವಾನಿಸಿರುವ ಸಂದೇಶ ಏನು? ಇಂತಹದೊಂದು ಪ್ರಶ್ನೆಯನ್ನು ಕೇಳಿದರೆ ಉತ್ತರಿಸಲು ಮುಜುಗರವಾಗ ಬಹುದು. ಕಾರಣ ವಿಧಾನಮಂಡಲ ಅಧಿವೇಶನ ಎಂಬುದು ರಾಜ್ಯದ ಜನರ ಸಂಕಷ್ಟಗಳ ಪರಿಹಾರಕ್ಕೆ ವೇದಿಕೆ. ಇಂತಹ ವೇದಿಕೆ ಒಂದು ವಿಷಯಕ್ಕೆ ಅಂಟಿಕೊಂಡು ನೀರಸವಾಗಿ ಮುಗಿಯುವುದಿದೆಯಲ್ಲ ಅದು ರಾಜ್ಯದ ಜನರ ನಿರೀಕ್ಷೆಯನ್ನು ಹುಸಿ ಮಾಡಿದಂತೆ.

ನೇರವಾಗಿ ಹೇಳಬೇಕು ಎಂದರೆ ಈ ಬಾರಿಯ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷಗಳು ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದವು. ಆದರೆ ಅವರು ರಾಜೀನಾಮೆ ಕೊಡದ ಕಾರಣಕ್ಕಾಗಿ ನಿರಂತರವಾಗಿ ಪ್ರತಿಭಟನೆ, ಧರಣಿಯಲ್ಲಿ ಕಾಲ ಕಳೆದವು. ಅಂದ ಹಾಗೆ ಹಗರಣವೊಂದರಲ್ಲಿ ಕೋಟ್ಯಂತರ ರೂಪಾಯಿಗಳನ್ನು ಸಚಿವ ನಾಗೇಂದ್ರ ದುರುಪಯೋಗ ಪಡಿಸಿಕೊಂಡರು ಎಂಬ ಆರೋಪ ಹೊಸದೇನಲ್ಲ. ಹಾಗಂತ ಅವರು ಆರೋಪ ಮುಕ್ತರಾಗದೆ ಸಂಪುಟಕ್ಕೆ ಸೇರ್ಪಡೆಯಾಗಿದ್ದು ಒಳ್ಳೆಯ ಬೆಳವಣಿಗೆಯೂ ಅಲ್ಲ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡಲು ಸಾರ್ವಜನಿಕ ವೇದಿಕೆಗಳಿದ್ದವಲ್ಲ? ಸಚಿವ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡ ಕ್ರಮದ ವಿರುದ್ಧ ಹೋರಾಡಲು ಜನತಾ ನ್ಯಾಯಾಲಯ ಇತ್ತಲ್ಲ?

ಹೀಗಾಗಿ ವಿಧಾನಮಂಡಲ ಅಧಿವೇಶನದಲ್ಲಿ ಒಂದು ದಿನ ಈ ವಿಷಯದ ಬಗ್ಗೆ ಪ್ರಸ್ತಾಪಿಸಿ,ತಮ್ಮ ಮಾತಿಗೆ ಸರ್ಕಾರ ಮನ್ನಣೆ ನೀಡದೆ ಇದ್ದರೆ ಅಧಿವೇಶನ ಮುಗಿದ ನಂತರ ಜನತಾ ನ್ಯಾಯಾಲಯಕ್ಕೆ ಹೋಗುವುದಾಗಿ ಘೋಷಿಸುವ ಕೆಲಸವಾಗಬೇಕಿತ್ತು. ಆದರೆ ಅದನ್ನು ಮಾಡದೆ ಅಧಿವೇಶನದುದ್ದಕ್ಕೂ ಇದೇ ವಿಷಯಕ್ಕೆ ಅಂಟಿಕೊಂಡ ಪರಿಣಾಮವಾಗಿ ರಾಜ್ಯ ಎದುರಿಸುತ್ತಿರುವ ಗಂಭೀರ ವಿಷಯಗಳ ಬಗ್ಗೆ ಸಮಗ್ರ ಚರ್ಚೆ ನಡೆಸಲು ಸಾಧ್ಯವಾಗಲೇ ಇಲ್ಲ. ಅಂದ ಹಾಗೆ ಇವತ್ತು ರಾಜ್ಯ ಬರಗಾಲದ ಮೆಟ್ಟಿಲ ಮೇಲೆ ಬಂದು ನಿಂತಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದ ಕೇಂದ್ರ ಸರ್ಕಾರ ರಾಜ್ಯಕ್ಕೆ ಒಂದು ಸಂದೇಶ ರವಾನಿಸಿ, ಈ ವರ್ಷ ಕರ್ನಾಟಕ ಭಾಗಶಃ ಬರಗಾಲಕ್ಕೆ ತುತ್ತಾಗಲಿದೆ ಮತ್ತು ಮುಂದಿನ ವರ್ಷ ದೊಡ್ಡ ಮಟ್ಟದ ಬರಗಾಲಕ್ಕೆ ತುತ್ತಾಗಲಿದೆ ಎಂದು ಸ್ಪಷ್ಟವಾಗಿ ಹೇಳಿತ್ತು. ಅಂದ ಹಾಗೆ ಭಾಗಶಃ ಬರಗಾಲವೆಂದರೆ ಅದು ಕೃಷಿ ಸೇರಿದಂತೆ ಎಲ್ಲ ವಲಯಗಳ ಮೇಲೆ ಪರಿಣಾಮ ಬೀರಿ ಆಂತರಿಕ ಉತ್ಪನ್ನಕ್ಕೆ ಹೊಡೆತ ಕೊಡುವ ವಿಷಯ ತಾನೇ?ಹೀಗೆ ಭಾಗಶಃ ಬರಗಾಲವೆಂಬುದು ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೆ ಜನ ಜೀವನ ಎಷ್ಟು ಕಷ್ಟಕ್ಕೆ ಸಿಲುಕುತ್ತದೆ?

ಅಷ್ಟೇ ಅಲ್ಲ, ಈ ವರ್ಷದ ನಂತರ ಅಂದರೆ ಮುಂದಿನ ವರ್ಷ ಪೂರ್ಣ ಬರಗಾಲದ ಪರಿಸ್ಥಿತಿಯನ್ನು ಎದುರಿಸಬೇಕೆಂದರೆ ಗತಿ ಏನು? ಇವತ್ತು ಪ್ರತಿಪಕ್ಷಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಬರಗಾಲ ಎಂಬುದು ಮೆಟ್ಟಿಲ ಮೇಲೆ ನಿಂತಿದೆ ಎಂದರೆ ಬರಲಿರುವ ದಿನಗಳನ್ನು ಎದುರಿಸಲು ಏನು ಮಾಡಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ಕೆಲಸ ಅವುಗಳಿಂದ ಆಗಬೇಕಿತ್ತು. ಇವತ್ತು ದೇಶದ ಒಟ್ಟಾರೆ ಪರಿಸ್ಥಿತಿ ಹೇಗಿದೆ ಎಂದರೆ ಹಲ ರಾಜ್ಯಗಳಲ್ಲಿ ಅತಿವೃಷ್ಟಿ, ಕೆಲ ರಾಜ್ಯಗಳಲ್ಲಿ ಅನಾವೃಷ್ಟಿ. ಇಂತಹ ಸ್ಥಿತಿಗೆ ಏನು ಕಾರಣ? ಮತ್ತು ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ? ಎಂಬ ಬಗ್ಗೆ ಸವಿವರವಾಗಿ ಚರ್ಚಿಸುವ ಕೆಲಸ ವಿಧಾನ ಮಂಡಲದಲ್ಲಿ ಆಗಬೇಕಿತ್ತು. ಆದರೆ ಜನರ ಕಷ್ಟಕ್ಕಿಂತ ವಿಧಾನಮಂಡಲ ಅಧಿವೇಶನದಲ್ಲಿ ಸಚಿವ ನಾಗೇಂದ್ರ ಅವರ ವಿಷಯವೇ ಪ್ರತಿಪಕ್ಷಗಳಿಗೆ ಆದ್ಯತೆಯಾಯಿತು.

ಹಾಗಂತ ಇವತ್ತು ಬರಗಾಲದ ಬಗ್ಗೆ ಮಾತ್ರವಲ್ಲ, ಇದರ ಜತೆ ಅಂಟಿಕೊಳ್ಳುವ ಇನ್ನಿತರ ಸಮಸ್ಯೆಗಳೂ ಇವೆಯಲ್ಲ?ಉದಾಹರಣೆಗೆ ಕಾವೇರಿ ಸಮಸ್ಯೆ. ರಾಜ್ಯದಲ್ಲಿ ಸಮರ್ಪಕ ಪ್ರಮಾಣದ ಮಳೆ ಆಗದೆ ಇರುವುದರಿಂದ ಬಹುತೇಕ ಜಲಾಶಯಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಮತ್ತು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮಿಳುನಾಡಿನ ವರಾತ ಸಹಜವಾಗಿದ್ದರಿಂದ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳಾಗಲೀ, ನ್ಯಾಯಾ ಲಯಗಳಾಗಲೀ ತಮಿಳುನಾಡಿನ ವಾದಕ್ಕೆ ಆದ್ಯತೆ ನೀಡುವುದರಿಂದ ಸಹಜವಾಗಿಯೇ ಕರ್ನಾಟಕದ ಸಂಕಷ್ಟ ಹೆಚ್ಚಾಗುತ್ತಿದೆ. ವಿಪರ್ಯಾಸವೆಂದರೆ, ಕಾವೇರಿ ನದಿ ನೀರಿನ ಹಂಚಿಕೆ ಬಗ್ಗೆ ಅಂತಿಮ ತೀರ್ಪು ಬಂದರೂ ಮಳೆ ಕೊರತೆಯಾದ ವರ್ಷಗಳಲ್ಲಿ ನೀರಿನ ಹಂಚಿಕೆ ಹೇಗಿರಬೇಕು ಎಂಬ ವಿಷಯದಲ್ಲಿ ಪರಿಣಾಮಕಾರಿಯಾದ ಸಂಕಷ್ಟ ಸೂತ್ರ ರಚನೆಯಾಗಿಲ್ಲ.

ಹೀಗಾಗಿ ಇಂತಹ ಸಂಕಷ್ಟ ಸೂತ್ರ ರಚಿಸುವ ವಿಷಯದಲ್ಲಿ ರಾಜ್ಯದ ಪ್ರತಿಪಕ್ಷಗಳು ಸರ್ಕಾರಕ್ಕೆ ಸಲಹೆ ನೀಡಲು ಸಾಧ್ಯವಿತ್ತು. ಇವತ್ತು ಜಗತೀಕರಣದ ಪರಿಣಾಮ ಮತ್ತು ಯುದ್ಧಪೀಡಿತ ಜಗತ್ತಿನ ಅನಿವಾರ್ಯತೆಗಳ ಮಧ್ಯೆ ಜನಜೀವನ ದುಬಾರಿಯಾಗುತ್ತಿದೆ. ಗಮನಿಸಬೇಕಾದ ಸಂಗತಿ ಎಂದರೆ, ಕೇವಲ ಒಂದು ವರ್ಷದ ಹಿಂದೆ ಒಂದು ಮನೆಯ ನಿರ್ವಹಣೆಗೆ ಯಾವ ಪ್ರಮಾಣದ ವೆಚ್ಚವಾಗುತ್ತಿತ್ತೋ ಅದರ ದುಪ್ಪಟ್ಟು ಹಣ ಖರ್ಚಾಗುತ್ತಿದೆ. ಇದು ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯ ಪರಿಣಾಮ. ಹೋಗಲಿ ಎಂದರೆ ಹೊಸ ಉದ್ಯೋಗಗಳು ಸೃಷ್ಟಿಯಾಗದೆ, ಇರುವ ಉದ್ಯೋಗವೂ ಹೋಗಿ ಲಕ್ಷಾಂತರ ಮಂದಿ ಬೀದಿ ಪಾಲಾಗಿzರೆ. ಕೃತಕ ಬುದ್ಧಿಮತ್ತೆಯ(ಎಐ) ಹೊಡೆತಕ್ಕೆ ಎಷ್ಟು ಮಂದಿ ಉದ್ಯೋಗ ಕಳೆದುಕೊಳ್ಳುತ್ತಿzರೆ ಎಂದರೆ ದೊಡ್ಡ ದೊಡ್ಡ ಕಂಪೆನಿಗಳು ಸಾವಿರಾರು ಮಂದಿಯನ್ನು ಕೆಲಸದಿಂದ ತೆಗೆದು ಹಾಕುತ್ತಿವೆ.

ಅರ್ಥಾತ್, ಒಂದು ನಿರಾಶಾದಾಯಕ ವಾತಾವರಣದ ಮಧ್ಯೆ ಮನುಷ್ಯ ಬದುಕುವ ಸ್ಥಿತಿ ಉದ್ಭವವಾಗಿದೆ. ಇವತ್ತು ವಿಧಾನಮಂಡಲದಂತಹ ವೇದಿಕೆಯಲ್ಲಿ ಚರ್ಚೆಯಾಗಬೇಕಾದ ವಿಷಯಗಳು ಇಂತವೇ ಹೊರತು ಸಂಪುಟದಲ್ಲಿ ಇಂತಹವರು ಇರಬೇಕು, ಇಂತಹವರು ಇರಬಾರದು ಎಂಬುದಲ್ಲ. ಸಚಿವ ನಾಗೇಂದ್ರ ಅವರ ವಿರುದ್ಧ ಹೋರಾಡಬೇಕು ಎಂಬುದು ಮುಖ್ಯವಾಗಿದ್ದರೆ ಮೊದಲೇ ಹೇಳಿದಂತೆ ಅದಕ್ಕೆ ಜನತಾ ನ್ಯಾಯಾಲಯವಿತ್ತು. ಅಂದ ಹಾಗೆ ಇದನ್ನು ಒತ್ತಿ ಹೇಳಲು ಇರುವ ಕಾರಣವೆಂದರೆ, ವಿದಾನಮಂಡಲದ ಉಭಯ ಸದನಗಳನ್ನು ನಡೆಸಲು ಆಗುವ ವೆಚ್ಚ. ಪ್ರತಿ ನಿತ್ಯ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಫಲವೇ ಇಲ್ಲದೆ ಹೋದರೆ ಅರ್ಥವೇನು? ಇದು ನೇರವಾಗಿ ಜನರ ತೆರಿಗೆ ದುಡ್ಡನ್ನು ಪೋಲು ಮಾಡಿದ ಹಾಗೇ ಹೊರತು ಬೇರೆನಲ್ಲ. ಅಂದಹಾಗೆ ಪ್ರತಿಪಕ್ಷಗಳು ಹೋರಾಟ ಮಾಡಲಿ, ಮಾಡದೇ ಇರಲಿ, ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡುವುದು ನಿಶ್ಚಿತವಾಗಿತ್ತು. ಕೊಟ್ಟರು ಕೂಡಾ.

ವಸ್ತುಸ್ಥಿತಿ ಎಂದರೆ ಸಚಿವ ನಾಗೇಂದ್ರ ಅವರ ರಾಜೀನಾಮೆಯನ್ನು ಸ್ವತಃ ಕಾಂಗ್ರೆಸ್ ಪಕ್ಷದ ಪ್ರಮುಖರೇ ಬಯಸಿದ್ದರು. ಕಾರಣ ಇತ್ತೀಚಿನ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಯ ನಂತರ ಅಲ್ಲಿ ಬಂಡಾಯದ ಆರ್ಭಟ ಹೆಚ್ಚಿತ್ತು. ಇಂತಹ ಬಂಡಾಯಕ್ಕೆ ಪ್ರತಿಯಾಗಿ ಸಚಿವ ಸಂಪುಟದಿಂದ ಹೊರಗಿರುವ ಕೆಲವರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಕಾಂಗ್ರೆಸ್ ನಾಯಕರ ನಿರ್ಧಾರ. ಆ ದೃಷ್ಟಿಯಿಂದ ಆರೋಪಗಳ ಹೊರೆ ಹೊತ್ತು ನಾಗೇಂದ್ರ ಹೊರಹೋದ ಮೇಲೆ ಅವರ ಜಗದಲ್ಲಿ ಬೇರೊಬ್ಬರಿಗೆ ಅವಕಾಶ ಕಲ್ಪಿಸುವುದೂ ಇದರ ಭಾಗ. ಹಾಗಂತ ನಾಗೇಂದ್ರ ಅವರ ವಿರುದ್ಧ ಮಾತ್ರವಲ್ಲ, ಇನ್ನೂ ಹಲ ಸಚಿವರು ಮುಂದಿನ ದಿನಗಳಲ್ಲಿ ರಾಜೀನಾಮೆ ಕೊಡುವಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಕಾರಣ ಅವರ ಜಗಕ್ಕೆ ಬೇರೊಬ್ಬರನ್ನು ತಂದು ಬಂಡಾಯದ ಬಿಸಿಯನ್ನು ಕಡಿಮೆ ಮಾಡುವುದು ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರ.

ಹೀಗಾಗಿ ತಾನೇ ತಾನಾಗಿ ಘಟಿಸಲಿರುವ ಬೆಳವಣಿಗೆಗೆ ತಮ್ಮೆಲ್ಲ ಬಲವನ್ನು ಧಾರೆ ಎರೆಯುವುದು ಮತ್ತು ಅದಕ್ಕಾಗಿ ಜನರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡಬೇಕಾದ ವಿಧಾನಮಂಡಲದ ವೇದಿಕೆಯನ್ನು ನಿಶ್ಯಕ್ತಗೊಳಿಸುವುದು ಪ್ರಜಪ್ರಭುತ್ವದ ದೃಷ್ಟಿಯಿಂದ ಸರಿಯಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದದ್ದು ಇಂದಿನ ತುರ್ತು ಅಗತ್ಯ.

ಕೊನೆಯ ಮಾತು:  ಅಂದ ಹಾಗೆ ಪ್ರತಿಪಕ್ಷಗಳ ಅದರಲ್ಲೂ ಬಿಜೆಪಿಯ ಹೋರಾಟ ಕಾಂಗ್ರೆಸ್ ವರಿಷ್ಠರ ಆಶೋತ್ತರವನ್ನು ಪೂರೈಸಿದೆ. ಆರ್ತಾಥ್, ವಿಧಾನಮಂಡಲ ಅಧಿವೇಶನ ಕಾಂಗ್ರೆಸ್ ವರಿಷ್ಠರ ಆಶೋತ್ತರಗಳಿಗೆ ಪೂರಕವಾಗಿ ನಡೆದಿದೆ. ಆದರೆ ಇದರಿಂದ ರಾಜ್ಯದ ಜನರಿಗೆ ಸಿಕ್ಕ ಫಲವೇನು?

” ವಿಧಾನಮಂಡಲ ಅಧಿವೇಶನ ಎಂಬುದು ರಾಜ್ಯದ ಜನರ ಸಂಕಷ್ಟಗಳ ಪರಿಹಾರಕ್ಕೆ ವೇದಿಕೆ. ಇಂತಹ ವೇದಿಕೆ ಒಂದು ವಿಷಯಕ್ಕೆ ಅಂಟಿಕೊಂಡು ನೀರಸವಾಗಿ ಮುಗಿಯುವುದಿದೆಯಲ್ಲ ಅದು ರಾಜ್ಯದ ಜನರ ನಿರೀಕ್ಷೆಯನ್ನು ಹುಸಿ ಮಾಡಿದಂತೆ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನಿಷ್ಪಕ್ಷಪಾತ ತನಿಖೆ ನಡೆಯಲಿ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್‌ಗಳ ವಿಚಾರ…

12 mins ago

ಓದುಗರ ಪತ್ರ: ದೀಪಾಲಂಕಾರ ಸಮಿತಿ ಕೆಲಸಕ್ಕೆ ಒಂದು ಸಲಾಂ

ಈ ವರ್ಷದ ದಸರಾ ಮಹೋತ್ಸವದಲ್ಲಿನ ವಿದ್ಯುತ್ ದೀಪಾಲಂಕಾರಗಳು ಪ್ರತಿ ವರ್ಷದಂತೆ ಈ ವರ್ಷವೂ ಜನರ ಮನಸ್ಸನ್ನು ಆಕರ್ಷಿಸುತ್ತಿದೆ. ಅದರಲ್ಲೂ ದೇವರಾಜ…

14 mins ago

ಓದುಗರ ಪತ್ರ: ‘ಈ ಮಾತು’ ಶೋಭೆ ತರುವುದೇ?

‘ಮತ್ತೆ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ’- ಇದು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರ ಕುರಿತು…

16 mins ago

ದಾರಿ ತೋರಿದ ರಾಘವೇಂದ್ರ?!

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ನನ್ನ ಮನೆಯಲ್ಲಿ ಇಟ್ಟಿದ್ದ ನೋಟಿನ ಕಂತೆಗಳನ್ನು ಪೊಲೀಸ್ ಸಿಬ್ಬಂದಿ ಮತ್ತು ಮಹಜರ್ ಸಾಕ್ಷಿದಾರರು ಎಣಿಸಿದರು.…

22 mins ago

ಮತದಾನದ ಹಕ್ಕು ಕಸಿಯಲು ನಮೂನೆ ೭ ದುರ್ಬಳಕೆ ಆರೋಪ!

ಕೆ.ಎಸ್.ಚಂದ್ರಶೇಖರ ಮೂರ್ತಿ ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ೫೦೦ಕ್ಕೂ ಹೆಚ್ಚು ಮತದಾರರ ವಿರುದ್ಧ ಸುಳ್ಳು ಮಾಹಿತಿ ಸಲ್ಲಿಕೆ ಆರೋಪ; ಪೊಲೀಸ್ ತನಿಖೆ …

36 mins ago

ಮಳೆ ಬಂದರೆ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಫಜೀತಿ!

ಆರ್.ಎಲ್.ಮಂಜುನಾಥ್ ದಸರಾ ನೋಡಲು ಬಂದವರ ಪಾಡು ಅಯೋಮಯ; ತಾತ್ಕಾಲಿಕ ಶೆಲ್ಟರ್ ಅಳವಡಿಸಲು ಆಗ್ರಹ  ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಮಹೋತ್ಸವದ…

49 mins ago