Andolana originals

ಪುಟ್ಟ ಜಿಲ್ಲೆ ಕೊಡಗಿನ ಅಭಿವೃದ್ಧಿ ಎಂದು? ರೈಲು ಇಲ್ಲದೆ ಏಕೈಕ ಜಿಲ್ಲೆ 1 ಸ್ಥಾಪನೆಯಾಗದ ಹೈಟೆಕ್ ಆಸ್ಪತ್ರೆ: ಉನ್ನತ ಶಿಕ್ಷಣಕ್ಕಿಲ್ಲ ಒತ್ತು

• ನವೀನ್ ಡಿಸೋಜ

· ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಯಾಗಿದ್ದರೂ ಜಿಲ್ಲಾಸ್ಪತ್ರೆ ಯಲ್ಲಿ ತಜ್ಞ ವೈದ್ಯರು, ಯಂತ್ರೋಪಕರಣ ಕೊರತೆ
· ವಿಶೇಷ ಪ್ರಕರಣಗಳಲ್ಲಿ ನೂರಾರು ಮೈಲಿ ದೂರದ ಮೈಸೂರು ಅಥವಾ ಮಂಗಳೂರು ಆಸ್ಪತ್ರೆಗಳಿಗೆ ಅಲೆಯಬೇಕು
· ರೈಲು ಮಾರ್ಗ ಯೋಜನೆಗೆ ಕೆಲವರ ಬೆಂಬಲ; ಕೆಲವರಿಂದ ವಿರೋಧ
· ಪ್ರವಾಸೋದ್ಯಮದಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ಆದಾಯ, ಆದರೆ ಸೂಕ್ತ ಮೂಲ ಸೌಲಭ್ಯ ಒದಗಿಸಲು ವಿಫಲ

ಕ್ರೀಡೆ, ಸೇನೆ ಹಾಗೂ ಪ್ರವಾಸೋದ್ಯಮಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿರುವ ಪುಟ್ಟ ಜಿಲ್ಲೆ ಕೊಡಗು ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಬೆಟ್ಟ ಗುಡ್ಡಗಳಿಂದ ಕೂಡಿರುವ ಜಿಲ್ಲೆಯಲ್ಲಿ ಜನಸಂಖ್ಯೆ ಕಡಿಮೆ ಇರುವುದು ಜೊತೆಗೆ ಪರಿಸರ ನಾಶದ ಭೀತಿ ಅಭಿವೃದ್ಧಿಗೆ ಹಿನ್ನಡೆಯನ್ನುಂಟು ಮಾಡುತ್ತಿದೆ. ಜನಪ್ರತಿನಿಧಿಗಳು ಹಾಗೂ ಸರ್ಕಾರದ ತಾತ್ಸಾರ ಮನೋಭಾವ ಕೂಡ ಕೊಡಗು ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿಯುವಂತೆ ಮಾಡಿದೆ.

ಬಾರದ ರೈಲು: ಕೊಡಗು ಜಿಲ್ಲೆ ಇಂದಿಗೂ ರೈಲು ಇಲ್ಲದ ಏಕೈಕ ಜಿಲ್ಲೆ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ. ಎರಡು ವರ್ಷಗಳ ಹಿಂದೆ ಕೇರಳ ರಾಜ್ಯದ ಹಿತಾಸಕ್ತಿ ಯಿಂದ ಮಾನಂದವಾಡಿ, ಕುಟ್ಟ, ಕಾನೂರು, ಬಾಳೆಲೆ, ತಿತಿಮತಿ ಮತ್ತು ಆನೆ ಚೌಕೂರು ಮಾರ್ಗ ವಾಗಿ 181 ಕಿ.ಮೀ. ದೂರದ ತಲಚೇರಿ- ಮೈಸೂರು ರೈಲ್ವೆ ಮಾರ್ಗದ ಯೋಜನೆ ಕಾರ್ಯಗತಗೊಳಿಸಲು ಮುಂದಾಗಿದ್ದರು. ಇದಕ್ಕೆ ಕೊಡಗು, ಮೈಸೂರು ವ್ಯಾಪ್ತಿ ಯಲ್ಲಿ ತೀವ್ರ ವಿರೋಧ ವ್ಯಕ್ತವಾ ಗಿತ್ತು. ಒಂದು ವೇಳೆ ಇದು ಕಾರ್ಯಗತ ವಾದರೆ ಕೊಡಗು ಸಂಪೂರ್ಣ ನಾಶವಾಗುತ್ತದೆ ಎನ್ನಲಾಗಿತ್ತು. ಹಾಗಾಗಿ ಈ ಯೋಜನೆ ನನೆಗುದಿಗೆ ಬಿದ್ದಿದೆ.

ಸದ್ಯ ಮೈಸೂರು-ಕುಶಾಲನಗರ ನಡುವೆ 1,854.62 ಕೋಟಿ ರೂ. ವೆಚ್ಚದ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ರೈಲು ಮಾರ್ಗದ ಅಂತಿಮ ಹಂತದ ಯೋಜನಾ ವರದಿ ಸಿದ್ದಪಡಿಸಲಾಗುತ್ತಿದೆ ಎಂದು ಸಂಸದರಾಗಿದ್ದಾಗ ಪ್ರತಾಪ್ ಸಿಂಹ ಹೇಳಿದ್ದರು. ಆದರೆ, ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿರು ವುದರಿಂದ ಕೊಡಗಿನವರ ಪಾಲಿಗೆ ರೈಲು ಸೌಲಭ್ಯ ಗಗನ ಕುಸುಮವಾಗಿ ಉಳಿದರೂ ಅಚ್ಚರಿಪಡ ಬೇಕಾಗಿಲ್ಲ. ಈ ನಡುವೆ ರೈಲ್ವೆ ಕಾಮಗಾರಿಗೆ ಮತ್ತೆ ವಿರೋಧ ವ್ಯಕ್ತವಾಗಿದೆ. ಉದ್ದೇಶಿತ ಮಾರ್ಗದಲ್ಲಿ ಪಿರಿಯಾಪಟ್ಟಣ-ಕುಶಾಲನಗರ ಮಧ್ಯೆ ಅರಣ್ಯ ಪ್ರದೇಶ ಇದ್ದು, ಈ ಭಾಗದಲ್ಲಿ ಕಾಡಾನೆಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ರೈಲ್ವೆ ಮಾರ್ಗದಿಂದ ಆಸು ಪಾಸಿನ ಗ್ರಾಮ ಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗುವ ಭೀತಿ ಕೂಡ ಇದೆ. ಹೀಗಾಗಿ ಕೆಲವು ಸಂಸ್ಥೆಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಹೈಟೆಕ್ ಆಸ್ಪತ್ರೆ ಬೇಡಿಕೆಗೆ ಸಿಗದ ಮನ್ನಣೆ: ಕೊಡಗು ಜಿಲ್ಲೆಯಲ್ಲಿ ಹೈಟೆಕ್ ಆಸ್ಪತ್ರೆಯ ಕೊರತೆ ಇದೆ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿದ್ದರೂ ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರು ಹಾಗೂ ಯಂತ್ರೋಪ ಕರಣಗಳ ಕೊರತೆಯಿದೆ. ಜಿಲ್ಲೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ವೈದ್ಯರ ಕೊರತೆ ಇದೆ. ಅಪಘಾತ ಅಥವಾ ದಿಢೀ‌ ಅನಾರೋಗ್ಯ ಕ್ಕೊಳಗಾದಾಗ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರಕುವುದಿಲ್ಲ. ಇಂದಿಗೂ ಉತ್ತಮ ಚಿಕಿತ್ಸೆ ಬೇಕೆಂದರೆ 100 ಕಿ.ಮೀ.ಗೂ ಹೆಚ್ಚು ದೂರವಿರುವ ಮೈಸೂರು ಅಥವಾ ಮಂಗಳೂರನ್ನು ಅವಲಂಬಿಸ ಬೇಕಾಗಿದೆ. ಇಲ್ಲಿ ಸೂಕ್ತ ಚಿಕಿತ್ಸೆಯಿಲ್ಲದೆ ರೋಗಿಗಳನ್ನು ಹೊರಜಿಲ್ಲೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದ ಅನೇಕ ಪ್ರಕರಣಗಳು ಇವೆ.

ಸಾಕಷ್ಟು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲೊಂದು ಹೈಟೆಕ್‌ ಆಸ್ಪತ್ರೆ ನಿರ್ಮಾಣವಾಗಬೇಕೆನ್ನುವ ಬೇಡಿಕೆಯಿದೆ. ಆದರೆ, ಜನಸಂಖ್ಯೆ ಕಡಿಮೆ ಇರುವುದರಿಂದ ಖಾಸಗಿಯವರು ಆಸ್ಪತ್ರೆಗಳನ್ನು ಸ್ಥಾಪಿಸುವ ಧೈರ್ಯ ಮಾಡುತ್ತಿಲ್ಲ. ಸರ್ಕಾರ ಇರುವ ಜಿಲ್ಲಾಸ್ಪತ್ರೆಗೆ ಸೂಕ್ತ ಸೌಕರ್ಯ ಕಲ್ಪಿಸಲು ಪರ ದಾಡುತ್ತಿದೆ. ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನಸು ಕನಸಾಗಿಯೇ ಉಳಿದಿದೆ.

ಉನತ ಶಿಕ್ಷಣ ಸಂಸ್ಥೆಗಳ ಕೊರತೆ: ಕೊಡಗು ಪುಟ್ಟ ಜಿಲ್ಲೆ ಯಾಗಿದ್ದರೂ ಇಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೊರ ಜಿಲ್ಲೆಯನ್ನು ಅವಲಂಬಿಸುವಂತಾಗಿದೆ. ಇಂಜಿನಿಯರಿಂಗ್, ಅರಣ್ಯ ಕಾಲೇಜು, ಸ್ನಾತಕೋತ್ತರ ಕೇಂದ್ರ, ದಂತ ವೈದ್ಯಕೀಯ ಕಾಲೇಜು, ಸೈನಿಕ ಶಾಲೆಗಳಂತಹ ಶಿಕ್ಷಣ ಸಂಸ್ಥೆಗಳು ಇದ್ದರೂ ಖಾಸಗಿ ವಿದ್ಯಾಸಂಸ್ಥೆಗಳ ಕೊರತೆ ಜಿಲ್ಲೆಯಲ್ಲಿದೆ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ಹೊರ ಜಿಲ್ಲೆಗಳಲ್ಲಿ ಉತ್ತಮ ಅಂಕ ಪಡೆದು ಆ ಶಿಕ್ಷಣ ಸಂಸ್ಥೆಗಳ ಕೀರ್ತಿ ಹೆಚ್ಚಿಸುತ್ತಿದ್ದಾರೆ. ಕೊಡಗಿನಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳು ಆರಂಭವಾದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲೂ ಕೊಡಗು ಸಾಧನೆ ಮಾಡುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಹೀಗೆ ಅಭಿವೃದ್ಧಿ ವಿಚಾರದಲ್ಲಿ ಕೊಡಗು ಸಾಕಷ್ಟು ಹಿಂದುಳಿದಿದೆ. ಸೂಕ್ತ ಮೂಲಭೂತ ಸೌಲಭ್ಯಗಳು ದೊರೆತಲ್ಲಿ ಪುಟ್ಟ ಜಿಲ್ಲೆ ಕೊಡಗು ಇನ್ನಷ್ಟು ಹೆಸರುವಾಸಿ ಯಾಗಲಿದೆ. ಜಿಲ್ಲೆಗೆ ಬೇಕಾದ ಮೂಲಭೂತ ಸೌಲಭ್ಯ ಒದಗಿಸುವ ಕಾರ್ಯವನ್ನು ಸರ್ಕಾರ, ಜನಪ್ರತಿನಿಧಿ ಗಳು ಮಾಡಬೇಕಿದೆ.

ರಸ್ತೆ ಅಭಿವೃದ್ಧಿಗೂ ವಿರೋಧ: ಕೊಡಗು ಜಿಲ್ಲೆ ಅಪಾರ ಪ್ರಮಾಣದ ಪ್ರಕೃತಿ ಸಂಪತ್ತನ್ನು ಹೊಂದಿದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಗಳಿದ್ದರೂ ಚತುಷ್ಪಥ ರಸ್ತೆಗಳಿಲ್ಲ. ಜಿಲ್ಲೆ ಯಲ್ಲಿ ಪ್ರವಾಸೋ ದ್ಯಮ ಅಭಿವೃದ್ಧಿ ಹೊಂದುತ್ತಿದೆ. ಲಕ್ಷಾಂತರ ಸಂಖ್ಯೆಯ ವಾಹನಗಳು ಜಿಲ್ಲೆ ಯಲ್ಲಿ ಸಂಚಾರ ಮಾಡು ತ್ತವೆ. ವಾರಾಂತ್ಯಗಳಲ್ಲಂತೂ ವಾಹನ ದಟ್ಟಣೆಯಿಂದ ಸ್ಥಳೀಯರೂ ಸಮಸ್ಯೆ ಎದುರಿಸುವಂತಾಗಿದೆ. ನಗರ ಪ್ರದೇಶಗಳಲ್ಲಿ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ರಸ್ತೆ ಅಗಲೀಕರಣ ಅನಿವಾರ್ಯವಾಗಿದೆ. ಪ್ರವಾಸೋದ್ಯ ಮದಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ಆದಾಯದ ಮೂಲವಾಗಿರುವ ಕೊಡಗು ಜಿಲ್ಲೆಗೆ ಸೂಕ್ತ ಮೂಲ ಸೌಲಭ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾ ಗುತ್ತಿದೆ. ಸಾಕಷ್ಟು ವಿರೋಧ ವ್ಯಕ್ತವಾಗಿರುವುದರಿಂದ ಕೊಡಗಿನಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ನಡೆಸುವುದಿಲ್ಲ ಎಂದು ಸಂಸದರಾಗಿದ್ದ ಪ್ರತಾಪ್ ಸಿಂಹ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಕೊಡಗಿಗೆ ಚತುಷ್ಪಥ ರಸ್ತೆ ವಿಸ್ತರಿಸುವ ನಿರ್ಧಾರ ಮಾಡಿದಲ್ಲಿ ವಿರೋಧ ವ್ಯಕ್ತ ಪಡಿಸಲು ಕೂರ್ಗ್ ವೈಲ್ಡ್ ಲೈಫ್‌ ಸಂಸ್ಥೆ ನಿರ್ಧರಿಸಿದೆ.

ಕೋಟ್ಸ್‌:

ಕೊಡಗಿನಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳಿಲ್ಲದೆ ಜಿಲ್ಲೆಯ ಬಡಜನರು ತೀವ್ರ ತೊಂದರೆಯನ್ನು ಎದುರಿಸುತ್ತಿದ್ದಾರೆ. ಇದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯಲಾಗಿದ್ದು, ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಲಾಗಿದೆ. ಅಲ್ಲದೆ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ನಮ್ಮ ಸಂಸ್ಥೆ ವತಿಯಿಂದ 1 ಕೋಟಿ ರೂ.ಗಳ ಜೊತೆಗೆ ಅಗತ್ಯವಿರುವ ಜಾಗವನ್ನೂ ನೀಡಲು ಮುಂದಾಗಿದ್ದೇವೆ.
-ಡಾ.ವಿಶ್ವ ಕಾರ್ಯಪ್ಪ, ವ್ಯವಸ್ಥಾಪಕ ನಿರ್ದೇಶಕ, ಸ್ಯಾನ್ ಗ್ರೂಪ್

ಎಲ್ಲ ರೀತಿಯ ಅಭಿವೃದ್ಧಿ ದೃಷ್ಟಿಯಿಂದ ಈಗ ಇರುವ ರಸ್ತೆಗಳು ಕೊಡಗಿಗೆ ಸಾಕಾಗುತ್ತವೆ. ರಸ್ತೆ ಅಗಲೀಕರಣ ಮಾಡುವುದರಿಂದ ಕೊಡಗಿನ ಅಮೂಲ್ಯ ಅರಣ್ಯ ಸಂಪತ್ತಿಗೆ ಹಾನಿಯಾಗಲಿದೆ. ಅಭಿವೃದ್ಧಿ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಪರಿಸರ ನಾಶವಾಗಿದ್ದು, ಕೊಡಗಿನಲ್ಲಿ ಚತುಷ್ಪಥ ರಸ್ತೆ ಯೋಜನೆಯನ್ನು ವಿರೋಧಿಸಲಾಗುವುದು.
-ಚೆಪ್ಪುಡೀರ ಪಿ.ಮುತ್ತಣ್ಣ, ಪರಿಸರ ಪ್ರೇಮಿ

ಕೊಡಗಿನಲ್ಲಿ ಹಿಂದಿನಿಂದ ಬಂದಂತಹ ಎಲ್ಲ ಜನ ಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆಯಿಂದ ಕೊಡಗು ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಕೊರತೆಯಿದೆ. ಇಂದಿಗೂ ಉನ್ನತ ವ್ಯಾಸಂಗಕ್ಕೆ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು
ಮೈಸೂರು, ಮಂಗಳೂರು ಜಿಲ್ಲೆಗಳನ್ನು ಅವಲಂಬಿಸಿದ್ದಾರೆ. ಕೊಡಗಿನಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸುವಂತಹ ಖಾಸಗಿ ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ಇದೆ.

– ಪವನ್ ಪೆಮ್ಮಯ್ಯ, ವಕೀಲರು, ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷರು

ಆಂದೋಲನ ಡೆಸ್ಕ್

Recent Posts

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

1 hour ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

2 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

2 hours ago

ಪಶ್ಚಿಮಘಟ್ಟ: 16114 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಮಿತಿ ಸೂಕ್ತ :ಈಶ್ವರ ಖಂಡ್ರೆ

ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಬಗ್ಗೆ ಬಾಧ್ಯಸ್ಥರ ಸಭೆ ಬೆಂಗಳೂರು: ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ…

2 hours ago