Andolana originals

ಶಿಕ್ಷಕರಿಗೆ ಪಠ್ಯಪುಸ್ತಕ ಸಾಗಣೆ ಹೊರೆ?

ಬೋಧಿಸಬೇಕೆಂದರೆ  ಪುಸ್ತಕ ಕೊಂಡೊಯ್ಯುವ ಅನಿವಾರ್ಯತೆ

ಮೈಸೂರು: ರಾಜ್ಯದ ಸರ್ಕಾರಿ ಶಾಲೆಗಳ ಆರಂಭದಿಂದಲೇ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಿಸಲಾಗುತ್ತಿದೆ. ಪ್ರತಿವರ್ಷ ಸಾಮಾನ್ಯವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೇ ಪುಸ್ತಕಗಳನ್ನು ಬಿಇಒಗಳ ಕಚೇರಿ ಮೂಲಕ ಆಯಾ ಶಾಲೆಗಳಿಗೆ ರವಾನಿಸುತ್ತಿತ್ತು. ಈ ಬಾರಿ ಆ ಹೊಣೆ ಶಿಕ್ಷಕರ ಹೆಗಲೇರಿದೆ. ಆದರೆ, ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳನ್ನು ನೇರವಾಗಿ ರವಾನಿಸುತ್ತಿರುವುದಾಗಿ ಪ್ರತಿಪಾದಿಸಿದೆ.

ಒಬ್ಬ ವಿದ್ಯಾರ್ಥಿಗೆ ವಿಷಯವಾರು ಭಾಗ-೧ ಮತ್ತು ಭಾಗ-೨, ಡೈರಿ, ಮೌಲ್ಯ ಶಿಕ್ಷಣ ಪುಸ್ತಕ, ದೈಹಿಕ ಶಿಕ್ಷಣ, ಕನ್ನಡ, ಗಣಿತ, ಇಂಗ್ಲಿಷ್ ವಿಷಯಗಳಿಗೆ ವರ್ಕ್ ಬುಕ್ ಸೇರಿದಂತೆ ಸುಮಾರು ೨೦ಕ್ಕೂ ಹೆಚ್ಚು ಪುಸ್ತಕಗಳನ್ನು ಸರ್ಕಾರ ಒದಗಿಸುತ್ತದೆ. ನೂರಾರು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಸಾವಿರಾರು ಪುಸ್ತಕಗಳು ಸರಬರಾಜಾಗುತ್ತವೆ. ಅವುಗಳನ್ನು ಇಲಾಖೆಯೇ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಗಳು ಬಿಆರ್‌ಸಿ ಕಚೇರಿ ಮೂಲಕ ಶಾಲೆಗಳಿಗೆ ತಲುಪಿಸಬೇಕು.

ಪ್ರತಿವರ್ಷ ಶಾಲಾ ಮುಖ್ಯಶಿಕ್ಷಕರಿಗೆ ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಅನುದಾನ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಹಣ ಬಂದಿಲ್ಲ. ಹಾಗಾಗಿ ಶಿಕ್ಷಕರೇ ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎನ್ನಲಾಗಿದೆ. ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಗಳಿಗೆ ಸರ್ಕಾರದಿಂದ ಪುಸ್ತಕಗಳು ತಲುಪಿದ ನಂತರ, ಅಲ್ಲಿಂದ ಶಾಲೆಗಳಿಗೆ ಸಾಗಿಸುವ ಹೊಣೆಗಾರಿಕೆ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರದ್ದಾಗಿರುತ್ತದೆ. ಪರಿಣಾಮವಾಗಿ ಶಿಕ್ಷಕರು ತಮ್ಮ ಬೋಧನಾ ಕರ್ತವ್ಯಗಳನ್ನು ಬದಿಗಿಟ್ಟು ಪುಸ್ತಕ ಸಾಗಣೆ ಮಾಡಬೇಕಿದೆ.

ಕೆಲವು ಶಾಲೆಗಳ ಶಿಕ್ಷಕರು ವೈಯಕ್ತಿಕ ಖರ್ಚಿನಿಂದ ಬಾಡಿಗೆ ವಾಹನಗಳನ್ನು ಮಾಡಿಕೊಂಡು ಪುಸ್ತಕಗಳನ್ನು ಸಾಗಿಸುತ್ತಿದ್ದಾರೆ. ಇನ್ನೂ ಕೆಲವು ಕಡೆ ತಮ್ಮ ಸ್ವಂತ ವಾಹನಗಳಲ್ಲಿ ಹಂತ ಹಂತವಾಗಿ ಪುಸ್ತಕಗಳನ್ನು ಕೊಂಡೊಯ್ಯಲಾಗುತ್ತಿದೆ. ಇದರಿಂದ ಸಮಯ ಹಾಗೂ ಹಣ ಎರಡೂ ವ್ಯಯವಾಗುತ್ತಿದೆ.

” ಪುಸ್ತಕಗಳನ್ನು ತರಬೇಕಾದ ಹೊಣೆ ಬಿದ್ದಿರುವುದು ಗ್ರಾಮೀಣ ಪ್ರದೇಶದ ಶಾಲೆಯ ಶಿಕ್ಷಕರನ್ನು ಬಹಳಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಬಿಆರ್‌ಸಿ ಕೇಂದ್ರ, ಬಿಇಒ ಕಚೇರಿಗಳಿಂದ ಪುಸ್ತಕ ತೆಗೆದುಕೊಂಡು ಹೋಗಿ ಎನ್ನುತ್ತಾರೆ. ಶಿಕ್ಷಕರನ್ನು ಇತರೆ ಕೆಲಸಕ್ಕೆ ಬಳಕೆ ಮಾಡಿಕೊಂಡು ಪರದಾಡಿಸುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಅನ್ಯಾಯವಾಗುವ ಜೊತೆಗೆ ಶಿಕ್ಷಕರು ತಮಗೂ ಅನ್ಯಾಯ ಮಾಡಿಕೊಳ್ಳುತ್ತಿದ್ದಾರೆ.”

– ಕೆ.ಬಿ.ಸೋಮೇಗೌಡ, ಮಾಜಿ ಅಧ್ಯಕ್ಷ, ಜಿಲ್ಲಾ ಶಾಲಾ ಶಿಕ್ಷಕರ ಸಂಘ

” ಶಾಲೆಯ ಮುಖ್ಯ ಶಿಕ್ಷಕರು ಅಥವಾ ಶಿಕ್ಷಕರು ಬಿಇಒ, ಬಿಆರ್‌ಸಿ ಕೇಂದ್ರ ಕಚೇರಿಯಿಂದ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಆರೋಪ ಸತ್ಯಕ್ಕೆ ದೂರವಾದದ್ದು. ಜಿಲ್ಲೆಯ ಪ್ರತಿ ಶಾಲೆಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದಲೇ ಪುಸ್ತಕಗಳನ್ನು ತಲುಪಿಸಲಾಗುತ್ತಿದೆ. ಯಾವುದೇ ಶಿಕ್ಷಕರೂ ಜಿಲ್ಲಾ ಕೇಂದ್ರ ಸ್ಥಳಕ್ಕೆ ಬಂದು ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿಲ್ಲ. ಹಂತ ಹಂತವಾಗಿ ಪುಸ್ತಕಗಳನ್ನು ತಲುಪಿಸಲಾಗುತ್ತಿದೆ.”

– ಡಿ.ಉದಯಕುಮಾರ್, ಉಪ ನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

” ಪಠ್ಯ ಪುಸ್ತಕಗಳನ್ನು ಆಯಾ ಶಾಲೆಗಳಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಕೆಲವು ತಾಲ್ಲೂಕುಗಳಿಗೆ ಎಲ್ಲ ಪುಸ್ತಕಗಳೂ ತಲುಪಿವೆ. ಕೆಲವೊಂದು ತಾಲ್ಲೂಕುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತಲುಪದೇ ಇರಬಹುದು. ಒಬ್ಬ ವಿದ್ಯಾರ್ಥಿಯ ಪುಸ್ತಕ ಸಾಗಣೆ ವೆಚ್ಚ ೪ ರೂ. ಇರುತ್ತದೆ. ಯಾವ ಶಾಲೆಗೂ ಮೊದಲೇ ‘ಸಿಜಿ’ ಅನುದಾನ ಬ್ಯಾಂಕ್ ಖಾತೆಗೆ ಬರುವುದಿಲ್ಲ. ಈ ಬಾರಿ ಕೊಂಚ ತಡವಾಗಿರಬಹುದು.”

– ಶಶಿಕುಮಾರ್, ಅಧ್ಯಕ್ಷರು, ಜಿಲ್ಲಾ ಶಾಲಾ ಶಿಕ್ಷಕರ ಸಂಘ

ಪಠ್ಯಪುಸ್ತಕಗಳ ಕೊರತೆ: 

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ಆರಂಭವಾಗಿ ತಿಂಗಳು ತುಂಬುತ್ತಾ ಬಂದರೂ ಸಮರ್ಪಕವಾಗಿ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕೈ ಸೇರಿಲ್ಲ. ಸಾಮಾನ್ಯವಾಗಿ ಶಾಲೆ ಆರಂಭವಾಗಿ ಮೊದಲ ತಿಂಗಳಲ್ಲಿಯೇ ಪಠ್ಯಪುಸ್ತಕಗಳು ಶಾಲೆಗೆ ಬರುತ್ತಿದ್ದವು. ಆದರೆ, ಈ ಬಾರಿ ಸಮಪರ್ಕವಾಗಿ ಪುಸ್ತಕಗಳು ದೊರೆತಿಲ್ಲ. ೧೦ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ ಭಾಗ ೧ ಬಂದಿಲ್ಲ. ಇದರ ಜೊತೆಗೆ ಶಿಕ್ಷಕರೇ ಪಠ್ಯಪುಸ್ತಕಗಳನ್ನು ತರಬೇಕಾಗಿರುವುದೂ ವಿಳಂಬಕ್ಕೆ ಮತ್ತೊಂದು ಕಾರಣವಾಗಿದೆ ಎಂಬುದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರೊಬ್ಬರ ಮಾತು.

 

 

ಆಂದೋಲನ ಡೆಸ್ಕ್

Recent Posts

10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ: ಸ್ನೇಕ್ ಮಧು ಕಾರ್ಯಕ್ಕೆ ಮೆಚ್ಚುಗೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿತ್ತಾಪುರ ಗ್ರಾಮದ ವಿಜಿ…

2 hours ago

ವಿದ್ಯುತ್ ಸ್ಪರ್ಶ: ಲೈನ್‌ಮ್ಯಾನ್ ಕಾರ್ತಿಕ್‌ ಸ್ಥಿತಿ ಗಂಭೀರ, ಆದರೆ ಸ್ಥಿರ: ವೈದ್ಯರಿಂದ ಮಾಹಿತಿ

ಮೈಸೂರು: ವಿದ್ಯುತ್ ಸ್ಪರ್ಶದಿಂದ ತೀವ್ರವಾಗಿ ಗಾಯಗೊಂಡಿದ್ದ ಲೈನ್‌ಮ್ಯಾನ್ ಕಾರ್ತಿಕ್ ಅವರ ಆರೋಗ್ಯ ಸ್ಥಿತಿ ಗಂಭೀರ, ಆದರೆ ಸ್ಥಿರವಾಗಿದೆ ಎಂದು ವೈದ್ಯರು…

3 hours ago

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ ರಾಜೀನಾಮೆ

ವಿಜಯಪುರ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದಾರೆ. ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಕೈಬಿಟ್ಟಿರುವುದಕ್ಕೆ…

3 hours ago

ನಿರೋಡಿ ನಿಧನ; ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟ

ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮಾಂತ್ರಿಕ ಗಾಯಕ ಪಂಡಿತ್ ಇಂದೂಧರ ನಿರೋಡಿ ಮಂಗಳವಾರ ಮಹಾರಾಷ್ಟ್ರದ ಪನವೇಲ್‌ನಲ್ಲಿ ನಿಧನರಾದರು. ಅವರು ಕೆಲ ವರ್ಷಗಳ…

6 hours ago

ಭರದಿಂದ ಸಾಗಿದ ದಸರಾ ಕಾಮಗಾರಿ

೫.೯೬ ಕೋಟಿ ರೂ.ವೆಚ್ಚದಲ್ಲಿ ಪೇಂಟಿಂಗ್, ಫುಟ್‌ಪಾತ್ ಅಂಚುಗಳಿಗೆ ಬಣ್ಣ, ವೃತ್ತಗಳ ದುರಸ್ತಿ ಸೆ.೩೦ರೊಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ತಾಕೀತು ಮೈಸೂರು:…

10 hours ago

ಮಣ್ಣಾದ ಸತ್ಯಕ್ಕೆ ಮರುಜೀವ

ಸೌಜನ್ಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ನ್ಯಾಯಾದೀಪ’ ರಾಜ್ಯದ ಜನಮಾನಸವನ್ನು ತೀವ್ರವಾಗಿ ಕಾಡುತ್ತಿರುವ ಹಾಗೂ ಇಡೀ ವ್ಯವಸ್ಥೆಯ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿರುವ ಧರ್ಮಸ್ಥಳದ…

10 hours ago