ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೆಗ್ಗುರುತುಗಳಲ್ಲಿ ಪಾರಂಪರಿಕ ಕಟ್ಟಡಗಳೂ ಪ್ರಮುಖವಾದವು. ಪ್ರವಾಸಿಗರಿಗೂ ಇವುಗಳ ಸೆಳೆತ ಇದ್ದೇ ಇದೆ. ಇಂತಹ ಕಟ್ಟಡಗಳ ನಿರ್ವಹಣೆ, ಸಂರಕ್ಷಣೆಗೆ ಆದ್ಯತೆ ನೀಡಲೇ ಬೇಕಲ್ಲವೇ? ವಿಪರ್ಯಾಸವೆಂದರೆ ಇವುಗಳ ನಿರ್ವಹಣೆ ಬಗ್ಗೆ ಜಿಲ್ಲಾಡಳಿತದಲ್ಲಿ ಯಾವುದೇ ಸ್ಪಷ್ಟ ಉತ್ತರ ಇಲ್ಲ.
ನಗರದ ಪಾರಂಪರಿಕ ಕಟ್ಟಡಗಳ ಸ್ಥಿತಿಗತಿ ಕುರಿತು ‘ಆಂದೋಲನ’ ದಿನಪತ್ರಿಕೆಯಲ್ಲಿ ಪ್ರಕಟವಾದ ಸರಣಿ ಲೇಖನಗಳನ್ನು ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ತಜ್ಞರು ನೀಡಿದ ಪ್ರತಿಕ್ರಿಯೆ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯ ಬಗ್ಗೆ ಅನುಮಾನ ಹುಟ್ಟುಹಾಕಿವೆ.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಪುರಾತತ್ವ , ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜು ಮತ್ತು ಪಾರಂಪರಿಕ ಕಟ್ಟಡಗಳ ತಜ್ಞ ಶೆಲ್ವಪಿಳ್ಳೈ ಅಯ್ಯಂಗಾರ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಒಂದೆಡೆ ಪಾರಂಪರಿಕ ಕಟ್ಟಡಗಳ ಅಳಿವು ಮತ್ತು ಉಳಿವಿನ ಬಗ್ಗೆ ಅಸ್ಪಷ್ಟತೆ ಕಾಣುತ್ತಿದ್ದರೆ, ಮತ್ತೊಂದೆಡೆ ಅವುಗಳ ಸಂರಕ್ಷಣೆ, ನಿರ್ವಹಣೆಯ ತುರ್ತು ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ಪ್ರಮುಖವಾಗಿ ಲ್ಯಾನ್ಸ್‌ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಪುನರ್ ನಿರ್ಮಿಸಬೇಕೋ ಅಥವಾ ಕೆಡವಿ ಹೊಸದಾಗಿ ಕಟ್ಟಬೇಕೋ ಎಂಬ ಗೊಂದಲಗಳ ನಡುವೆಯೇ ಉಳಿದ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಆಯಾ ಇಲಾಖೆಗಳ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ಹೇಳಿದರು.
ಒಂದು ಹಂತದಲ್ಲಿ ದೇವರಾಜ ಮಾರುಕಟ್ಟೆ ಜಾಗದಲ್ಲಿ ಬಹುಮಹಡಿ ಕಟ್ಟಡವನ್ನು ನಿರ್ಮಿಸಿ ಕೆಳ ಭಾಗದಲ್ಲಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕು. ಇದರಿಂದ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ ಎಂಬ ವಾದಕ್ಕೆ ಪಾರಂಪರಿಕ ಕಟ್ಟಡ ತಜ್ಞರು ವಿರೋಧ ವ್ಯಕ್ತಪಡಿಸಿದ್ದರು.
ಏಕೆಂದರೆ ದೇವರಾಜ ಮಾರುಕಟ್ಟೆಯನ್ನು ಕೆಡವಿ ಬಹುಮಹಡಿಯ ಮಾರುಕಟ್ಟೆಯ ನಿರ್ಮಾಣ ಮಾಡಿದರೆ, ಇತರೆ ಕಟ್ಟಡಗಳನ್ನು ಕೆಡವಲು ದಾರಿ ಮಾಡಿಕೊಟ್ಟಂತಾಗುತ್ತದೆ. ಎಂದು ಪಾರಂಪರಿಕ ಕಟ್ಟಡಗಳತಜ್ಞ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ಅಭಿಪ್ರಾಯಪಟ್ಟರು.
ಮಹಾರಾಜ ಕಾಲೇಜು, ಪುರಭವನ, ವಾಣಿವಿಲಾಸ ಮಾರುಕಟ್ಟೆ, ಕಮಾನುಗಳು ಸೇರಿದಂತೆ ನಗರದಲ್ಲಿ ೨೦೦ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳನ್ನು ನಿರ್ವಹಣೆ ಮಾಡಲು ಸಂಬಂಧಪಟ್ಟ ಇಲಾಖೆಯವರು ಹಣ ಇಲ್ಲ ಎನ್ನುತ್ತಾರೆ. ಜಗನ್ಮೋಹನ ಅರಮನೆಯನ್ನು ರಾಜವಂಶಸ್ಥರು ನಿರ್ವಹಣೆ ಮಾಡಿಕೊಂಡು ಸುಸ್ಥಿತಿಯಲ್ಲಿಟ್ಟಿದ್ದಾರೆ. ಕಾರಂಜಿ ಕೆರೆ ಬಳಿಯ ಅಂಚೆ ಕಚೇರಿ (ಕಾರಂಜಿ ಅರಮನೆ)ಯನ್ನು ಕೂಡ ನಿರ್ವಹಣೆ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರದ ಸುಪರ್ದಿನಲ್ಲಿರುವ ಪಾಂಪರಿಕ ಕಟ್ಟಡಗಳು ದುಸ್ಥಿತಿಯಲ್ಲಿವೆ ಎಂದು ಅಯ್ಯಂಗಾರ್ ಅಸಮಾಧಾನ ವ್ಯಕ್ತಪಡಿಸಿದರು.
ಪಾರಂಪರಿಕ ಕಟ್ಟಡಗಳು ಉರುಳಿದರೆ ನಗರದ ಸೌಂದರ್ಯ ಮತ್ತು ಇತಿಹಾಸವೂ ಕಳಚಿ ಬೀಳಲಿದೆ. ಹೀಗಾಗಿ ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಅನುದಾನ ಕೊಡುವುದು-ಬಿಡುವುದು ನಂತರದ ವಿಚಾರ. ಮೊದಲು ನಿರ್ವಹಣೆಗಾಗಿ ಇಚ್ಛಾಶಕ್ತಿ ತೋರಿಸಲಿ ಎಂಬುದು ಪಾರಂಪರಿಕ ಕಟ್ಟಡಗಳ ತಜ್ಞ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ವಾದವಾಗಿದೆ.
” ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್ಡೌನ್ ಕಟ್ಟಡಗಳ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು. ಇತರೆ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಆಯಾ ಇಲಾಖೆಗೆ ಸಂಬಂಧಿಸಿದೆ. ಹೀಗಾಗಿ ಇಲಾಖೆಗಳ ಹಣ ಮೀಸಲಿಟ್ಟು ಕಟ್ಟಡ ನಿರ್ವಹಣೆ ಮಾಡಿಕೊಳ್ಳಬೇಕು. ಪಾರಂಪರಿಕ ಕಟ್ಟಡಗಳ ನಿರ್ವಹಣೆಗಾಗಿ ಯಾವುದೇ ಪ್ರತ್ಯೇಕ ಅನುದಾನ ಇಲ್ಲ.”
-ಜಿ.ಲಕ್ಷ್ಮೀಕಾಂತರೆಡ್ಡಿ, ಜಿಲ್ಲಾಧಿಕಾರಿ
” ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡಗಳೂ ಸೇರಿದಂತೆ ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳುವ ಬಗ್ಗೆ ಅಧಿಕಾರಿಗಳು ಮಾತಾಡುತ್ತಿಲ್ಲ. ಕಟ್ಟಡಗಳ ಉಳಿವಿಗೆ ಪರ್ಯಾಯ ಮಾರ್ಗವನ್ನಾದರೂ ಹುಡುಕಬೇಕು.”
-ಡಾ.ಶೆಲ್ವಪಿಳ್ಳೈ ಅಯ್ಯಂಗಾರ್, ಪಾರಂಪರಿಕ ತಜ್ಞ
” ಪಾರಂಪರಿಕ ಕಟ್ಟಡಗಳ ನಿರ್ವಹಣೆ ಆಯಾ ಇಲಾಖೆಯ ಜವಾಬ್ದಾರಿ. ಇನ್ನೂ ಕೆಲವು ಪಾರಂಪರಿಕ ಕಟ್ಟಡಗಳು ಕಾಲ ಕಾಲಕ್ಕೆ ನಿರ್ವಹಣೆಯಾಗದೆ ದುಸ್ಥಿತಿ ತಲುಪಿವೆ. ಮಳೆಗಾಲದ ಆರಂಭಕ್ಕೂ ಮುಂಚೆಯೇ ನೀರು ಸೋರದಂತೆ, ಕಟ್ಟಡಗಳಲ್ಲಿ ಗಿಡಗಳು ಬೆಳೆಯದಂತೆ ನಿರ್ವಹಣೆ ಮಾಡಿಕೊಳ್ಳಬೇಕು. ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಲ್ಲಿ ಕಟ್ಟಡಗಳ ನಿರ್ವಹಣೆಗೆ ಅನುದಾನ ಇಲ್ಲ. ತಾಂತ್ರಿಕ ಸಹಾಯವನ್ನು ಇಲಾಖೆ ಮಾಡಲಿದೆ.”
-ಎ.ದೇವರಾಜು, ಆಯುಕ್ತರು, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ಈ ನಡೆ ಶೋಷಿತ ಸಮುದಾಯಗಳ ಪ್ರಗತಿಗೆ ಸಹಕಾರಿ -ಟಿ.ಕೆ.ಹರೀಶ್ ಶಿಕ್ಷಣ ಕೇವಲ ವೈಯಕ್ತಿಕ ಬೆಳವಣಿಗೆಗೆ ಮಾತ್ರ ಸೀಮಿತವಾಗಿರಬಾರದು. ಅದು…
ಡಾ.ಎಂ.ಡಿ.ಉಮೇಶ್, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ, ಮೈಸೂರು ವಿ.ವಿ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದಲ್ಲಿ ಬಾಲ ಕೃಷ್ಣ ಮತ್ತು ರಾಧಾಬಾಯಿ…
ಡಾಕ್ಟರ್ ಮೆಹತಾ ಮತ್ತು ನಾನು ಅವರ ಮಿತ್ರನ ಮನೆಗೆ ಹೋದೆವು. ಅವರು ನನ್ನ ವಿಷಯದಲ್ಲಿ ತುಂಬಾ ಕರುಣೆ ಮತ್ತು ಆದರವುಳ್ಳವರಾಗಿದ್ದರು.…
ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…
ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…