ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ದೀಪಾವಳಿ ಜಾತ್ರಾ ಮಹೋತ್ಸವದ ಅಂಗವಾಗಿ ಮಲೆ ಮಹದೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ಸಂಪ್ರದಾಯಬದ್ಧ ಹಾಲರವಿ ಉತ್ಸವವು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ನೆರವೇರಿತು.
ಶ್ರೀ ಸಾಲೂರು ಬೃಹನ್ಮಠದ ಮಠಾಧ್ಯಕ್ಷರಾದ ಪೂಜ್ಯ ವಿದ್ವಾನ್ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರ ದಿವ್ಯ ನೇತೃತ್ವ ಮತ್ತು ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಹಾಲರವಿ ಉತ್ಸವವು ವಿಶೇಷ ಆಕರ್ಷಣೆಯಾಗಿ ಭಕ್ತರ ಗಮನ ಸೆಳೆಯಿತು.
ಶ್ರೀ ಮಲೆ ಮಹದೇಶ್ವರ ಸ್ವಾಮಿಯವರ ಧಾರ್ಮಿಕ ಪರಂಪರೆ ಮತ್ತು ಸಂಪ್ರದಾಯದ ಪ್ರತೀಕವಾಗಿರುವ ಈ ಉತ್ಸವದಲ್ಲಿ 101 ಬೇಡಗಂಪಣ ಬಾಲಕಿಯರು ಪವಿತ್ರ ಹಾಲರವಿ ಸೇವೆಯಲ್ಲಿ ಪಾಲ್ಗೊಂಡರು.
ಉತ್ಸವದ ಅಂಗವಾಗಿ ಬೆಳಗಿನ ಜಾವ ಸುಮಾರು 3 ಗಂಟೆಗೆ 101 ಬಾಲಕಿಯರು ಹಾಲೇರು ಹಳ್ಳಕ್ಕೆ ತೆರಳಿ, ಉಪವಾಸ ವ್ರತಾಚರಣೆಯೊಂದಿಗೆ ಪವಿತ್ರ ಜಲದಲ್ಲಿ ಪುಣ್ಯಸ್ನಾನ ಮಾಡಿದರು. ನಂತರ ಕಾಡುಬಾಳೆ ಗಿಡದ ನಾರಿನಿಂದ ಸಿಂಬಿಯನ್ನು ಸಿದ್ಧಪಡಿಸಿ, ಹಾಲರವಿಯ ಕುಂಭಗಳ ಬಾಯಿಯನ್ನು ಭದ್ರವಾಗಿ ಕಟ್ಟಿ, ಧೂಪ, ದೀಪ ಮತ್ತು ಮಂಗಳಾರತಿ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಬಳಿಕ ಹಾಲರವಿಯ ಕುಂಭಗಳನ್ನು ತಲೆಯ ಮೇಲೆ ಹೊತ್ತು ಭಕ್ತಿಪೂರ್ವಕವಾಗಿ ಸಾಗಿದ ಬಾಲಕಿಯರು ಬೆಳಿಗ್ಗೆ 6ರಿಂದ 7 ಗಂಟೆಯ ವೇಳೆಗೆ ಹಾಲರವಿಯ ಕತ್ತಿ ಪವಾಡದ ಸ್ಥಳಕ್ಕೆ ಆಗಮಿಸಿದರು. ಅಲ್ಲಿಂದ ಸಂಪ್ರದಾಯದಂತೆ ಉತ್ಸವದ ಮುಂದಿನ ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಈ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ಸಾಮೂಹಿಕವಾಗಿ ಸೇರಿ, ಹಾಲರವಿ ಸೇವೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಬಾಲಕಿಯರಿಗೆ ನೂತನ ಸೀರೆ ಮತ್ತು ರವಿಕೆ ತೊಡಿಸಿ, ಸಂಪ್ರದಾಯಬದ್ಧವಾಗಿ ಅಲಂಕರಿಸಿದರು. ಭಕ್ತ ಮಹಿಳೆಯರು ಬಾಲಕಿಯರಿಗೆ ಕೈಬಳೆಗಳನ್ನು ತೊಡಿಸಿ, ತಲೆಕೂದಲನ್ನು ಅಲಂಕರಿಸಿ ವಿಶೇಷ ಶೃಂಗಾರ ಮಾಡಿದರು.
ಈ ಪವಿತ್ರ ಸೇವೆಯಲ್ಲಿ ಪಾಲ್ಗೊಂಡ ಎಲ್ಲಾ ಬೇಡಗಂಪಣ ಬಾಲಕಿಯರಿಗೆ ಶ್ರೀ ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಚಿತವಾಗಿ ಸೀರೆ ಮತ್ತು ರವಿಕೆಗಳನ್ನು ವಿತರಿಸಲಾಯಿತು. ದೂರದ ಅರಣ್ಯ ಪ್ರದೇಶಗಳಿಂದ ಆಗಮಿಸುವ ಬೇಡಗಂಪಣ ಸಮುದಾಯದ ಬಾಲಕಿಯರು ತಮ್ಮ ಧಾರ್ಮಿಕ ಸಂಪ್ರದಾಯ ಮತ್ತು ಭಕ್ತಿ ಪರಂಪರೆಯನ್ನು ತಲೆಮಾರುಗಳಿಂದ ಮುಂದುವರಿಸಿಕೊಂಡು ಬರುತ್ತಿರುವುದು ಈ ಉತ್ಸವದ ವಿಶೇಷತೆಯಾಗಿದೆ.
ಮಾದಪ್ಪನ ಸೇವೆಯೇ ಮಹಾಸೇವೆ ಎಂಬ ಭಾವನೆಯಿಂದ ಭಕ್ತರು ಸ್ವಯಂಪ್ರೇರಿತವಾಗಿ ಅಲಂಕಾರ, ಸಿದ್ಧತೆ ಮತ್ತು ಆತಿಥ್ಯದಲ್ಲಿ ಕೈಜೋಡಿಸಿದ್ದು, ಸಮುದಾಯದ ಒಗ್ಗಟ್ಟು, ಭಕ್ತಿ ಮತ್ತು ಪರಂಪರೆಯ ಅನನ್ಯ ಚಿತ್ರಣಕ್ಕೆ ಸಾಕ್ಷಿಯಾಯಿತು.
ಹಾಲರವೆ ಉತ್ಸವವು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಬೇಡಗಂಪಣ ಸಮುದಾಯದ ವಿಶಿಷ್ಟ ಸಾಂಸ್ಕೃತಿಕ ಪರಂಪರೆ, ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ಭಕ್ತಿಸೇವೆಯ ಮಹತ್ವವನ್ನು ಸಾರುವ ವಿಶೇಷ ಉತ್ಸವವಾಗಿದೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಧನ್ಯರಾದರು.
ಈ ಸಂದರ್ಭದಲ್ಲಿ ಶ್ರೀ ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ್, ಬೇಡಗಂಪಣ ಸಮುದಾಯದ ಅರ್ಚಕರು, ಮಹಿಳಾ ಭಕ್ತರು ಹಾಗೂ ಮಾದಪ್ಪನ ಭಕ್ತಾದಿಗಳು ಉಪಸ್ಥಿತರಿದ್ದರು.
ಮಡಿಕೇರಿ: ಮನೆಯ ವಾಷಿಂಗ್ ಮಷಿನ್‌ನೊಳಗೆ ಸುಮಾರು ೧೦ ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವೊಂದು ಅಡಗಿದ್ದ ಘಟನೆ ಮಡಿಕೇರಿ ತಾಲೂಕಿನ…
ಬೆಂಗಳೂರು: ‘ಯೋಜನೆ ಉಚಿತ, ಬೆಲೆ ಏರಿಕೆ ಖಚಿತ.’ ಅಗತ್ಯ ವಸ್ತುಗಳ ದರ ಏರಿಕೆ ಬಗ್ಗೆ ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್ ಪೀಠ…
ಮೈಸೂರು: ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಲಿದ್ದಾರೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಿರುವ ನೂತನ ತಾರಾಲಯವನ್ನು ಅವರು ಉದ್ಘಾಟಿಸಲಿದ್ದಾರೆ…
ಕರ್ನಾಟಕ ಸರ್ಕಾರ ಇತ್ತೀಚೆಗೆ ಎರಡು ದರಗಳನ್ನು ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಿದೆ. ಒಂದು- ಹಾಲಿನ ದರ…
ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ, ಚುನಾವಣೆಯೆಂದರೆ, ಎಲೆಕ್ಟ್ರಾನಿಕ್ ಮತಯಂತ್ರದ ಮುಂದೆ ನಿಂತು…
ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಬೆಡ್ ರೂಮಿನ ಎಲೆಕ್ಟ್ರಿಕ್ ಸ್ವಿಚ್ ಬೋರ್ಡಿನ ತ್ರಿಪಿನ್ ಪ್ಲೇಟಿಗೆ ಫಿಕ್ಸ್ ಆಗಿದ್ದ…