Andolana originals

ಗಾಂಧಿ ಅಭಿಯಾನ ಅರಿವಿನ ಯಾನ ; ಸಜ್ಜನನಾದ ಆಂಗ್ಲನಾಗುವ ಪ್ರಯತ್ನ

ಶಾಕಾಹಾರದಲ್ಲಿ ದಿನದಿನಕ್ಕೂ ನನ್ನ ನಂಬಿಕೆ ಹೆಚ್ಚುತ್ತಲೇ ಹೋಯಿತು. ಸಾಲ್ಟ್‌ರ ಗ್ರಂಥದ ವ್ಯಾಸಂಗದಿಂದ, ಆಹಾರದ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಭ್ಯಾಸ ಮಾಡಲು ನನಗೆ ಉತ್ಕಟ ಇಚ್ಛೆಯುಂಟಾಯಿತು. ಶಾಕಾಹಾರದ ಮೇಲೆ ದೊರೆತ ಎಲ್ಲ ಗ್ರಂಥಗಳನ್ನೂ ಕೊಂಡು ನಾನು ವ್ಯಾಸಂಗ ಮಾಡಿದೆ. ಅವುಗಳ ಪೈಕಿ ಒಂದು, ಹೋವರ್ಡ್ ವಿಲಿಯಂಸ್ ‘ಆಹಾರ ನೀತಿ’ ಎಂಬ ಪುಸ್ತಕ, ಪ್ರಾಚೀನ ಕಾಲದಿಂದ ಇಂದಿನವರೆಗಿನ ಮಾನವನ ಆಹಾರದ ಇತಿಹಾಸವೇ ಆಗಿತ್ತು. ಪೈಥಾಗರಸ್ ನಿಂದ ಮೊದಲುಗೊಂಡು ಯೇಸುಕ್ರಿಸ್ತನವರೆಗೆ ಎಲ್ಲ ದಾರ್ಶನಿಕರೂ ದ್ರಷ್ಟಾರರೂ ಶಾಕಾಹಾರಿಗಳೇ ಆಗಿದ್ದರೆಂದು ಸ್ಥಾಪಿಸಲು ಆ ಗ್ರಂಥದಲ್ಲಿ ಪ್ರಯತ್ನ ನಡೆದಿತ್ತು. ಡಾಕ್ಟರ್ ಆಸಾ ಕಿಂಗ್ಸ್ ಫರ್ಡ್ ಎಂಬಾಕೆ ಬರೆದಿದ್ದ ‘ಆಹಾರದ ಅತ್ಯುತ್ತಮ ಮಾರ್ಗ’ ಎಂಬುದೂ ಬಹು ಆಕರ್ಷಕ ಗ್ರಂಥವಾಗಿತ್ತು. ಡಾಕ್ಟರ್ ಆಲಿನ್ಸನ್ರು ಬರೆದ ‘ಆಹಾರದ ನೈರ್ಮಲ್ಯ’ ಎಂಬ ಗ್ರಂಥದಿಂದಲೂ ನನಗೆ ಬಹಳ ಉಪಕಾರವಾಯಿತು. ರೋಗಿಗಳು ಈ ಆಹಾರವನ್ನು ನಿಯಮಿತಗೊಳಿಸುವುದರಿಂದಲೇ, ಅವರ ರೋಗ ಗುಣವಾಗುವ ಒಂದು ವಿಧಾನವನ್ನು ಅವರು ತಮ್ಮ ಗ್ರಂಥದಲ್ಲಿ ಪ್ರತಿಪಾದಿಸಿದರು. ಸ್ವತಃ ಶಾಕಾಹಾರಿಗಳಾದ ಅವರು, ತಮ್ಮಲ್ಲಿ ಬರುತ್ತಿದ್ದ ರೋಗಿಗಳಿಗೂ ಕಟ್ಟುನಿಟ್ಟಾಗಿ ಶಾಕಾಹಾರವನ್ನೇ ನಿಯಮಿಸಿದ್ದರು. ಈ ಎಲ್ಲ ಸಾಹಿತ್ಯವನ್ನೂ ವ್ಯಾಸಂಗಮಾಡಿದುದರ ಫಲವಾಗಿ, ಆಹಾರದ ವಿಷಯದಲ್ಲಿ ಪ್ರಯೋಗಗಳನ್ನು ನಡೆಸುವುದಕ್ಕೆ, ನನ್ನ ಜೀವನದಲ್ಲಿ ಒಂದು ಪ್ರಮುಖ ಅವಕಾಶವುಂಟಾಯಿತು. ಆರೋಗ್ಯವನ್ನು ರಕ್ಷಿಸಿಕೊಳ್ಳುವುದೇ ಪ್ರಾರಂಭದಲ್ಲಿ ಈ ಪ್ರಯೋಗಗಳ ಮುಖ್ಯ ಗುರಿಯಾಗಿತ್ತು. ಆದರೆ ಅನಂತರ ಧಾರ್ಮಿಕ ದೃಷ್ಟಿಯೇ ಸರ್ವಪ್ರಧಾನವಾಯಿತು.

ಈ ಮಧ್ಯೆ ನನ್ನ ಮಿತ್ರರಿಗೆ ನನ್ನ ವಿಷಯದ ಚಿಂತೆ ಬಿಡಲಿಲ್ಲ. ನನ್ನಲ್ಲಿ ಅವರು ಇಟ್ಟಿದ್ದ ಪ್ರೇಮದ ದೆಸೆಯಿಂದ ಅವರು, ನಾನು ಮಾಂಸಾಹಾರ ವಿರೋಧವನ್ನೇ ಮುಂದುವರಿಸಿದರೆ, ನನ್ನ ದೇಹ ದುರ್ಬಲವಾಗುವುದಲ್ಲದೆ, ಇಂಗ್ಲಿಷ್ ಸಮಾಜದಲ್ಲಿ ಸ್ವಾಭಾವಿಕವಾಗಿ ಜೀವಿಸಲಾಗದ ಅಪ್ರಯೋಜಕನಾದೇನೆಂದು ಅವರು ಚಿಂತಿಸಿದರು. ನನಗೆ ಶಾಕಾಹಾರ ವಿಷಯಕ್ಕೆ ಸಂಬಂಽಸಿದ ಗ್ರಂಥಗಳಲ್ಲಿ ಶ್ರದ್ಧೆ ಇರುವುದನ್ನು ತಿಳಿದು, ಆ ವ್ಯಾಸಂಗ ನನ್ನ ತಲೆ ಕೆಡಿಸಬಹುದೆಂದು ಅವರು ಹೆದರಿದರು. ನನ್ನ ಕಾರ್ಯವನ್ನು ನಾನು ಮರೆತು ಪ್ರಯೋಗಗಳಲ್ಲಿ ತೊಡಗಿ, ಹುಚ್ಚನಾಗಿ ಬಾಳನ್ನು ವ್ಯರ್ಥಮಾಡಿಕೊಳ್ಳಬಹುದೆಂದೂ ಅವರು ಹೆದರಿದರು. ಆದುದರಿಂದ ನನ್ನನ್ನು ತಿದ್ದಲು ಅವರು ಒಂದು ಕಡೆಯ ಪ್ರಯತ್ನವನ್ನು ಮಾಡಿದರು. ಒಂದು ದಿನ ಅವರು ನನ್ನನ್ನು ನಾಟಕ ಶಾಲೆಗೆ ಕರೆದುಕೊಂಡು ಹೋದರು. ನಾಟಕ ಪ್ರಾರಂಭವಾಗುವುದಕ್ಕೆ ಮುಂಚೆ ನಾವು ಹಾಲ್ಬ ಹೋಟೆಲಿನಲ್ಲಿ ಊಟ ಮಾಡಬೇಕಾಗಿತ್ತು. ಅದು ಅರಮನೆಯಂತೆ ನನಗೆ ಕಂಡಿತು. ವಿಕ್ಟೋರಿಯ ಹೋಟಲನ್ನು ಬಿಟ್ಟ ಮೇಲೆ, ನಾನು ಅಂತಹ ದೊಡ್ಡ ಹೋಟಲಿಗೆ ಹೋಗಿರಲಿಲ್ಲ. ವಿಕ್ಟೋರಿಯ ಹೋಟಲಿನಲ್ಲಿ ಸಹ, ನನಗೆ ವಸತಿ ಸುಖಕರವಾಗಿರಲಿಲ್ಲ. ನನ್ನ ಬುದ್ಧಿ ಎಲ್ಲಿಯೋ ಅಲೆಯುತ್ತಿತ್ತು. ನಾಚಿಕೆಯಿಂದಲಾದರೂ ನಾನು ಯಾವ ಪ್ರಶ್ನೆಗಳನ್ನೂ ಕೇಳುವುದಿಲ್ಲವೆಂದು ಭಾವಿಸಿ ನನ್ನ ಮಿತ್ರರು ನನ್ನನ್ನು ಅಲ್ಲಿಗೆ ಕರೆತಂದಿದ್ದರು. ಅಲ್ಲಿ ಊಟ ಮಾಡುತ್ತಿದ್ದವರ ಸಂಖ್ಯೆ ಬಹು ದೊಡ್ಡದಾಗಿತ್ತು. ಅವರ ಮಧ್ಯದಲ್ಲಿ ನಾನೂ, ನನ್ನ ಮಿತ್ರರೂ ಒಂದು ಮೇಜಿನ ಮುಂದೆ ಕುಳಿತೆವು. ಮೊದಲು ಬಂದುದು ಸೂಪ್, ಒಂದು ತರಹ ಸಾರು. ಅದು ಯಾವುದರ ಸಾರು ಎಂಬ ಯೋಚನೆ ನನಗೆ ಬಂತು. ಆದರೆ ಮಿತ್ರರನ್ನು ಕೇಳುವ ಧೈರ್ಯವಾಗಲಿಲ್ಲ. ಸೇವಕನನ್ನು ಕರೆದೆ. ಇದನ್ನು ನೋಡಿ ಮಿತ್ರರು ಕೋಪದಿಂದ, ‘ಏನು ಸಮಾಚಾರ’ ಎಂದು ಕೇಳಿದರು. ನಾನು ಸಂಕೋಚದಿಂದ ‘ಇದರಲ್ಲಿ ಮಾಂಸವೇನಾದರೂ ಇದೆಯೇ ಎಂದು ವಿಚಾರಿಸೋಣವೆಂದು ಕರೆದೆ’ ಎಂದೆನು.

‘ಈ ಅಸಭ್ಯತೆ ಈ ಭೋಜನಾಲಯದಲ್ಲಿ ನಡೆಯದು. ನಿನಗೆ ಸರಿಯಾಗಿ ನಡೆದುಕೊಳ್ಳಲು ಬಾರದಿದ್ದರೆ ಹೋಗಿ ಬೇರೆ ಎಲ್ಲಾದರೂ ಊಟ ಮುಗಿಸಿ, ಹೊರಗೆ ನನಗಾಗಿ ಕಾದಿರು’ ಎಂದರು.

ಈ ಮಾತಿನಿಂದ ನನಗೆ ಸಂತೋಷವಾಯಿತು. ನಾನು ಹೊರಗೆ ಹೋಗಿ ಬೇರೆ ಭೋಜನಾಲಯವನ್ನು ಹುಡುಕಿದೆ. ಸಮೀಪದಲ್ಲಿಯೇ ಒಂದು ಶಾಕಾಹಾರಿ ಭೋಜನಾಲಯವಿತ್ತು. ಆದರೆ ಅದು ಮುಚ್ಚಿತ್ತು. ಏನು ಮಾಡುವುದೆಂದು ನನಗೆ ತಿಳಿಯಲಿಲ್ಲ. ಕೊನೆಗೆ, ಆ ರಾತ್ರಿ ಉಪವಾಸವಿದ್ದೆ. ನಾವು ನಾಟಕವನ್ನು ನೋಡಲು ಹೋದೆವು. ನನ್ನ ಮಿತ್ರರು ನಾನು ಮಾಡಿದ ಗೊಂದಲವನ್ನು ಕುರಿತು ನನ್ನೊಂದಿಗೆ ಒಂದು ಮಾತನ್ನೂ ಆಡಲಿಲ್ಲ. ನಾನಂತೂ ಹೇಳಬೇಕಾದುದೇನೂ ಇರಲೇ ಇಲ್ಲ.
ಅದೇ ನಮ್ಮಿಬ್ಬರ ಕೊನೆಯ ಜಗಳ. ಇದರಿಂದ ನಮ್ಮ ಸಂಬಂಧಕ್ಕೆ ಎಳ್ಳಷ್ಟೂ ಚ್ಯುತಿ ಬರಲಿಲ್ಲ. ಅವರ ಈ ಎಲ್ಲ ಪ್ರಯತ್ನಗಳಿಗೂ ನನ್ನ ಮೇಲಿದ್ದ ಅವರ ಪ್ರೇಮವೇ ಮೂಲವೆಂದು ಅರಿತಿದ್ದೆ. ಅವರ ಮತ್ತು ನನ್ನ ಆಚಾರಗಳಲ್ಲಿ ಭಿನ್ನತೆಯಿದ್ದರೂ ಅವರಲ್ಲಿ ನನ್ನ ಆದರ ಕಡಿಮೆಯಾಗಲಿಲ್ಲ. ಹೆಚ್ಚೇ ಆಯಿತು.

ಅವರ ಚಿಂತೆಯನ್ನು ದೂರಮಾಡಬೇಕೆಂದು ನಾನು ನಿಶ್ಚಯಿಸಿದೆ. ಇನ್ನು ಮುಂದೆ ಅನಾಗರಿಕತೆಯನ್ನು ಬಿಟ್ಟು, ಸಭ್ಯನಾಗಲು ಪ್ರಯತ್ನಿಸಿ, ಇತರ ಮಾರ್ಗಗಳಿಂದ ಸಮಾಜದಲ್ಲಿ ಬೆರೆಯಲು ಯೋಗ್ಯನಾಗಿ, ನನ್ನ ಶಾಕಾಹಾರದಿಂದ ನನಗೆ ಉಂಟಾಗಿರುವ ವಿಚಿತ್ರ ಸ್ಥಿತಿಯನ್ನು ಮರೆಸುವೆನೆಂದು, ಅವರಿಗೆ ಭರವಸೆ ಕೊಡಲು ನಿಶ್ಚಯಿಸಿದೆನು. ಅದಕ್ಕಾಗಿ ಅಂಗ್ಲ ಸಭ್ಯನಾಗುವ ಕಷ್ಟವಾದ ಕಾರ್ಯಕ್ಕೆ ಕೈಹಾಕಿದೆ.
ಬೊಂಬಾಯಿಯಲ್ಲಿ ಹೊಲಿಸಿದ್ದ ಉಡುಪುಗಳು ಅಂಗ್ಲ ಸಮಾಜಕ್ಕೆ ತಕ್ಕವಲ್ಲವೆಂದು, ಅರ್ಮಿ ಅಂಡ್ ನೇವಿ ಸ್ಟೋರ‍್ಸ್‌ನಲ್ಲಿ ಬೇರೆ ಉಡುಪುಗಳನ್ನು ಹೊಲಿಸಿದೆ. ಹತ್ತೊಂಬತ್ತು ಪಿಲಿಂಗಿಗೆ (ಆಗ ಇದು ಬಹಳ ಹೆಚ್ಚು ಬೆಲೆ) ಒಂದು ಚಿಮ್ಮಿ ಪಾಟ್ ಹ್ಯಾಟ್ (ಟೋಪಿ) ಕೊಂಡುಕೊಂಡೆನು. ಇಷ್ಟರಿಂದ ನಾನು ಸಂತುಷ್ಟನಾಗಲಿಲ್ಲ. ಸೊಗಸುಗಾರರ ಕ್ಷೇತ್ರವಾದ ಬಾಂಡ್‌ಸ್ಪೀಟ್‌ಗೆ ಹೋಗಿ ಹತ್ತು ಪೌಂಡ್ ಕೊಟ್ಟು ಒಂದು ಈವನಿಂಗ್ ಸೂಟ್ ಕೊಂಡುಕೊಂಡ. ಉದಾರಿಯಾದ ಸರಳ ಮನಸ್ಸಿನ ನಮ್ಮಣ್ಣನಿಗೆ ಬರೆದು, ಜೇಬುಗಳಲ್ಲಿ ಇಳಿಬಿಡುವ ಗಡಿಯಾರದ ಬಂಗಾರದ ಎರಡೆಳೆ ಸರಪಣಿಯನ್ನು ತರಿಸಿದೆ. ಸಿದ್ಧವಾದ ನೆಕ್‌ಟೈ ಧರಿಸುವುದು ಸರಿಯಲ್ಲ. ಆದುದರಿಂದ ಅದನ್ನು ಕಟ್ಟಿಕೊಳ್ಳುವ ಕಲೆಯನ್ನು ಕಲಿತೆ. ಭಾರತದಲ್ಲಿ ನಾನು ಕನ್ನಡಿ ನೋಡುತ್ತಿದ್ದುದು ಕ್ಷೌರ ಮಾಡಿಕೊಳ್ಳುತ್ತಿದ್ದಾಗ ಮಾತ್ರ. ಇಲ್ಲಿ ಪ್ರತಿದಿನವೂ ಒಂದು ದೊಡ್ಡ ಕನ್ನಡಿಯ ಮುಂದೆ ನಿಂತು, ಕಂಠಬಂಧ (ನೆಕ್‌ಟೈ) ಕಟ್ಟಿಕೊಳ್ಳುತ್ತಾ ತಲೆಗೂದಲನ್ನು ಬಾಚಿಕೊಳ್ಳುತ್ತಾ ನಿತ್ಯವೂ ಹತ್ತು ನಿಮಿಷ ವ್ಯರ್ಥ ಮಾಡುತ್ತಿದ್ದೆ. ಇನ್ನು ನನ್ನ ಕೂದಲು ಮೃದುವಲ್ಲ. ಅದನ್ನು ಸರಿಮಾಡಲು ಬ್ರಟ್‌ನೊಡನೆ ನಿತ್ಯಯುದ್ಧ. ಟೋಪಿಯನ್ನು ಹಾಕಿಕೊಳ್ಳುವಾಗ ಮತ್ತು ತೆಗೆಯುವಾಗ, ಕೂದಲನ್ನು ಸರಿಮಾಡಲು ಕೈ ತಾನಾಗಿಯೇ ತಲೆಯ ಮೇಲೆ ಹೋಗುತ್ತಿತ್ತು. ನಾಲ್ಕು ಜನರೊಡನೆ ಕುಳಿತಿರುವಾಗ ಪದೇ ಪದೇ ಕೂದಲನ್ನು ಸರಿಮಾಡಿಕೊಳ್ಳಲು ಕೈ ಹೋಗುವ ಸಭ್ಯತೆ ಬೇರೆ. ಆದರೆ ಇಷ್ಟೆಲ್ಲ ಸಂಭ್ರಮ ಸಾಕಾಗಲಿಲ್ಲ. ಬರಿಯ ನಾಗರಿಕ ಉಡುಪನ್ನು ಧರಿಸುವುದರಿಂದ ಮಾತ್ರ ನಾಗರಿಕನಾಗುವೆನೇ? ಆದುದರಿಂದ ನಾಗರಿಕನಾಗಲು ಬೇಕಾದ ಇತರ ವಿಷಯಗಳ ಕಡೆ ಮನಸ್ಸನ್ನು ತಿರುಗಿಸಿದೆ. ಅದರಂತೆ ನಡೆಯಬೇಕಲ್ಲ. ಸಭ್ಯ ಪುರುಷನಿಗೆ ನರ್ತನ ಮಾಡುವುದು, ಫ್ರೆಂಚ್ ಭಾಷೆಯಲ್ಲಿ ಸಂಭಾಷಣೆ, ಇವು ಇರಬೇಕೆಂದು ಹೇಳಿದರು. ಏಕೆಂದರೆ ಫ್ರೆಂಚ್, ನೆರೆ ರಾಷ್ಟ್ರದ ಭಾಷೆ ಮಾತ್ರವಲ್ಲ. ಅದು ಸಮಗ್ರ ಯೂರೋಪಿನ ಸಾರ್ವತ್ರಿಕ ಭಾಷೆಯೂ ಸಹ. ಯೂರೋಪಿನಲ್ಲಿ ಸಂಚರಿಸಲು ನನಗೆ ಇಚೆಯೂ ಇತ್ತು. ಸಭ್ಯ ಪುರುಷನಾಗಲು ಕಲೆಗಳಲ್ಲಿಯೂ ನಿಪುಣನಾಗಬೇಕಾಗಿತ್ತು. ನರ್ತನ ಮಾಡುವುದನ್ನು ಕಲಿಯಬೇಕೆಂದು ನಾನು ನಿಶ್ಚಯಿಸಿದೆ. ಒಂದು ನರ್ತನ ಶಾಲೆಯನ್ನು ಸೇರಿದೆ. ಒಂದು ಅವಧಿಗಾಗಿ ಮೂರು ಪೌಂಡ್ ಶುಲ್ಕವನ್ನೂ ಕೊಟ್ಟುದಾಯಿತು. ಮೂರು ವಾರಗಳಲ್ಲಿ ನಾನು ಐದು ಅಥವಾ ಆರು ಪಾಠಗಳಿಗೆ ಹೋಗಿದ್ದಿರಬಹುದು. ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕಲು ನನಗೆ ಬರಲಿಲ್ಲ. ಪಿಯಾನೋವನ್ನೇನೋ ನುಡಿಸುತ್ತಿದ್ದರು. ಆದರೆ ಏನನ್ನು ನುಡಿಸುತ್ತಿದ್ದರೆಂಬುದು ನನಗೆ ತಿಳಿಯಲಿಲ್ಲ.

ಇನ್ನು ಮಾಡುವುದೇನು? ಬೈರಾಗಿ ಮತ್ತು ಲಂಗೋಟಿಯ ಕಥೆಯಾಯಿತಲ್ಲ. ಅವನು ಲಂಗೋಟಿಯನ್ನು ರಕ್ಷಿಸಲು ಬೆಕ್ಕನ್ನು ಸಾಕಿದ. ಬೆಕ್ಕಿನ ಹಾಲಿಗಾಗಿ ಹಸು, ಹಸುವನ್ನು ಕಾಪಾಡಲು ಆಳು. ಹೀಗೆ ಬೆಳೆಯಿತು ಬೈರಾಗಿಯ ಸಂಸಾರ, ಪಿಟೀಲು ಬಾರಿಸುವುದನ್ನು ಕಲಿತರೆ ತಾಳ ಮತ್ತು ಸ್ವರ ಜ್ಞಾನ ಉಂಟಾಗುವುದೆಂದು ಯೋಚಿಸಿದೆ. ಪಿಟೀಲನ್ನು ಕೊಂಡುಕೊಳ್ಳಲು ಮೂರು ಪೌಂಡು, ಅದನ್ನು ಕಲಿಯಲು ಸ್ವಲ್ಪ ಹಣ, ವೆಚ್ಚ ಮಾಡಿದೆ. ಭಾಷಣ ಕಲೆಯನ್ನು ಕಲಿಯುವುದಕ್ಕಾಗಿ ಮತ್ತೊಬ್ಬ ಶಿಕ್ಷಕನನ್ನು ಹುಡುಕಿದೆ. ಅವನಿಗೂ ಅದಕ್ಕಾಗಿ ಒಂದು ಗಿನಿ ಕೊಡಬೇಕಾಯಿತು. ಅವನ ಪ್ರೇರಣೆಯಂತೆ ಬೆಲ್ಸ್ ಬರೆದ ‘ಸ್ಟಾಂಡರ್ಡ್ ಎಲೊಕ್ಯೂಷನಿಸ್ಟ್’ ಎಂಬ ಪುಸ್ತಕವನ್ನು ಕೊಂಡುಕೊಂಡು ಪಿಟ್ಸ ಭಾಷಣವೊಂದರಿಂದ ಪ್ರಾರಂಭಿಸಿದನು.

ಆದರೆ ಬೆಲ್ ಸಾಹೇಬ, ನನ್ನ ಕಿವಿಯಲ್ಲಿ ಎಚ್ಚರಿಕೆಯ ಗಂಟೆ ಬಾರಿಸಿದ. ನಾನು ಎಚ್ಚೆತ್ತೆ.‘ನನ್ನ ಪೂರ್ಣ ಆಯಸ್ಸನ್ನು ನಾನು ಇಂಗ್ಲೆಂಡಿನಲ್ಲಿ ಕಳೆಯಬೇಕಾದುದಿಲ್ಲ. ಭಾಷಣ ಕಲೆಯನ್ನು ಕಲಿತು ಮಾಡಬೇಕಾದುದೇನು. ಕುಣಿಯುವುದನ್ನು ಕಲಿತರೆ ಸಭ್ಯನಾಗುತ್ತೇನೆಯೇ. ಪಿಟೀಲನ್ನು ನಮ್ಮ ದೇಶದಲ್ಲಿಯೇ ಕಲಿಯಬಹುದು. ಇನ್ನೂ ನಾನು ವಿದ್ಯಾರ್ಥಿ, ವಿದ್ಯಾರ್ಜನೆ ಮಾಡುವುದು ನನ್ನ ಕೆಲಸ. ನನ್ನ ವಕೀಲ ವ್ಯಾಸಂಗಕ್ಕೆ ಅವಶ್ಯಕವಾದ ಸಿದ್ಧತೆಯನ್ನು ನಾನು ಮಾಡಿಕೊಳ್ಳಬೇಕು. ನನ್ನ ಸದಾಚಾರದಿಂದ ನಾನು ಸಭ್ಯನೆನಿಸಿಕೊಂಡರೆ ಸಾಕು. ಇಲ್ಲದಿದ್ದರೆ ಆ ಆಸೆಯನ್ನು ಬಿಡಬೇಕು’ ಎಂದುಕೊಂಡೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮನವಿಗೆ ಸ್ಪಂದಿಸಿದಕ್ಕಾಗಿ ಅಭಿನಂದನೆಗಳು

ಮೈಸೂರಿನ ವಿ.ವಿ.ಮೊಹಲ್ಲದ ೨ನೇ ಮುಖ್ಯರಸ್ತೆಯಲ್ಲಿರುವ (ಕ್ಲಬ್ ಹಿಂಭಾಗ) ವಾರ್ಡ್ ಸಂಖ್ಯೆ ೧೯ರ ವ್ಯಾಪ್ತಿಗೆ ಒಳಪಡುವ ಕನ್ಸರ್‌ವೆನ್ಸಿಯಲ್ಲಿ ಗಿಡ ಗಂಟಿಗಳು ಬೃಹದಾಕಾರವಾಗಿ…

7 hours ago

ಓದುಗರ ಪತ್ರ: ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಲಿ

ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ತಾಲ್ಲೂಕು ವನಸಿರಿ ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಹಾಗೆ ಹಲವು ದೇವಾಲಯಗಳ ಬೀಡು, ಈ…

7 hours ago

ಓದುಗರ ಪತ್ರ: ಹಳೆ ಪಿಂಚಣಿ ಮರುಜಾರಿಯಿಂದ ಖಜಾನೆಗೆ ಭಾರ ಆಗದೇ?

ಚುನಾವಣಾ ಲಾಭಕ್ಕಾಗಿ ಹಳೆ ಪಿಂಚಣಿ ಯೋಜನೆ ಮರುಜರಿಗೆ ಹೊರಟಿರುವುದು ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ೩.೫…

7 hours ago

ಓದುಗರ ಪತ್ರ: ದಸರಾ ಚಲನಚಿತ್ರೋತ್ಸವ ಕೈಬಿಡಬಾರದು

ಮೈಸೂರಿನ ದಸರಾ ಚಲನಚಿತ್ರೋತ್ಸವವನ್ನು ಕಳೆದ ಸುಮಾರು ೫೦ ವರ್ಷಗಳಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಪ್ರೇಕ್ಷಕರ ಭಾಗವಹಿಸುವಿಕೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಈ…

7 hours ago

ವರ್ಷದಲ್ಲಿ 180 ದ್ವಿಚಕ್ರ ವಾಹನಗಳ ಕಳ್ಳತನ!

ಎಚ್.ಎಸ್.ದಿನೇಶ್ ಕುಮಾರ್ ವರ್ಷದಿಂದೀಚೆಗೆ ೯೬ ವಾಹನಗಳ ಪತ್ತೆ; ೧೦ಕ್ಕೂ ಹೆಚ್ಚು ಆರೋಪಿಗಳ ಬಂಧನ ವಾಹನ ಸವಾರರಿಗೆ ಮುನ್ನೆಚ್ಚರಿಕೆ * ವಾಹನ…

7 hours ago

ಧ್ವನಿವರ್ಧಕ ಬಳಕೆ; ನಿಯಮ ಉಲ್ಲಂಘಿಸಿದಲ್ಲಿ ಕ್ರಮ

ನವೀನ್ ಡಿಸೋಜ ರಾತ್ರಿ ೧೦ರಿಂದ ಬೆಳಿಗ್ಗೆ ೬ರವರೆಗೆ ಧ್ವನಿವರ್ಧಕ, ಡಿಜೆ ಬಳಕೆಗೆ ನಿರ್ಬಂಧ; ನಿಯಮ ಪಾಲಿಸಲು ಪೊಲೀಸ್ ಇಲಾಖೆ ಮನವಿ…

7 hours ago