Andolana originals

ಕಾಡಂಚಿನ ಗ್ರಾಮಗಳಲ್ಲಿ ಮತ್ತೆ ಹುಲಿ ಭೀತಿ

ಚಿರಂಜೀವಿ ಸಿ.ಹುಲ್ಲಹಳ್ಳಿ

ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹುಲಿ ದಾಳಿ ಪ್ರಕರಣಗಳು ವರದಿ

ಮೈಸೂರು: ಚಳಿಗಾಲದ ಆರಂಭದೊಂದಿಗೆ ಮೈಸೂರು ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಹುಲಿ-ಮಾನವ ಸಂಘರ್ಷ ಮತ್ತೆ ತೀವ್ರಗೊಂಡಿದೆ.

ನಂಜನಗೂಡು, ಸರಗೂರು ತಾಲ್ಲೂಕು ಭಾಗಗಳಲ್ಲಿ ಕಳೆದ ಒಂದು ವಾರದಿಂದ ಹುಲಿ ದಾಳಿ ಪ್ರಕರಣಗಳು ವರದಿಯಾಗುತ್ತಿದ್ದು, ಡೋರನಕಟ್ಟೆ ಹಾಡಿಯಲ್ಲಿ ಆದಿವಾಸಿ ಮಹಿಳೆ ಮಾಚಮ್ಮ ಹುಲಿ ದಾಳಿಗೆ ಬಲಿಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಮಂಗಳವಾರ ಆಕಳ ಗ್ರಾಮದ ಸಮೀಪ ರೈತ ಪರಮೇಶ ಅವರ ಮೇಲೆಯೂ ಹುಲಿ ದಾಳಿ ನಡೆದಿತ್ತು. ಜಾನುವಾರುಗಳ ಮೇಲಿನ ದಾಳಿಗಳೂ ಮುಂದುವರಿದಿರುವುದರಿಂದ ರೈತರು ಮತ್ತು ಕಾಡಂಚಿನ ನಿವಾಸಿಗಳು ಆತಂಕದಲ್ಲೇ ಕೃಷಿ ಚಟುವಟಿಕೆ ನಡೆಸುವಂತಾಗಿದೆ.

ಕಳೆದ ವರ್ಷವೂ ಇದೇ ಅವಧಿಯಲ್ಲಿ ನಂಜನಗೂಡು, ಸರಗೂರು, ಎಚ್.ಡಿ.ಕೋಟೆ, ಹುಣಸೂರು ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನ ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿಗಳ ದಾಳಿಯಿಂದ ನಾಲ್ಕೈದು ಮಂದಿ ಮೃತಪಟ್ಟಿದ್ದರು. ಹತ್ತಾರು ಜಾನುವಾರುಗಳ ಕೊಂದು ತಿಂದು ಹಾಕಿದ್ದವು. ಸರಣಿ ದಾಳಿಗಳ ಹಿನ್ನೆಲೆಯಲ್ಲಿ ಸಫಾರಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ದಾಳಿಗಳು ಮರುಕಳಿಸಿರುವುದು ಅರಣ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಶ್ನೆ ಮೂಡಿಸಿದೆ.

ಕಾಡಿನಿಂದ ಹೊರಬರುವ ಹುಲಿಗಳ ನಿರ್ವಹಣೆ ಯಾರ ಹೊಣೆ?: ಚಳಿಗಾಲದ ಅವಧಿ ಹುಲಿಗಳ ಸಂತಾನೋತ್ಪತ್ತಿ ಹಾಗೂ ಸಂಚಾರದ ದೃಷ್ಟಿಯಿಂದ ಮಹತ್ವದ ಕಾಲವಾಗಿದೆ. ಈ ಸಂದರ್ಭದಲ್ಲಿ ಹುಲಿಗಳ ಚಲನವಲನ ಹೆಚ್ಚಾಗುವ ಸಾಧ್ಯತೆ ಇದ್ದು, ಕೆಲವು ಹುಲಿಗಳು ಕಾಡಿನ ಗಡಿಯನ್ನು ದಾಟಿ ಕಾಡಂಚಿನ ಗ್ರಾಮಗಳ ಸಮೀಪ ಸಂಚರಿಸುತ್ತವೆ. ಅದರಲ್ಲೂ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳ ಗಡಿ ಭಾಗದಿಂದ ಸುಮಾರು ೧೦-೧೫ ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಕೃಷಿ ಭೂಮಿ, ಬೆಟ್ಟಗುಡ್ಡ, ಪೊದೆ ಪ್ರದೇಶ ಹಾಗೂ ಅರಣ್ಯಕ್ಕೆ ಹೊಂದಿಕೊಂಡಿರುವ ಹಾಡಿಗಳಲ್ಲಿ ಹುಲಿಗಳು ನೆಲೆ ಕಂಡುಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಹುಲಿಗಳು ಕಾಡಿನಿಂದ ಹೊರಬಂದಾಗ ಅವುಗಳ ಚಲನವಲನದ ಮೇಲೆ ನಿಗಾ ವಹಿಸುವುದು, ಜನವಸತಿ ಪ್ರದೇಶಗಳಿಗೆ ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸುವುದು, ಅಪಾಯದ ಸಾಧ್ಯತೆ ಇರುವ ಗ್ರಾಮಗಳನ್ನು ಗುರುತಿಸಿ ಜನರಿಗೆ ಎಚ್ಚರಿಕೆ ನೀಡುವುದು ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದೆ. ಆದರೆ, ಸರಣಿ ದಾಳಿಗಳು ನಡೆದ ನಂತರವೇ ಇಲಾಖೆಯ ಕಾರ್ಯಾಚರಣೆಗಳು ಚುರುಕಾ ಗುವುದಾದರೆ ಅದರಿಂದ ಪ್ರಯೋಜನವೇನು? ಎಂಬ ಪ್ರಶ್ನೆ ಕಾಡಂಚಿನ ಜನರನ್ನು ಕಾಡುತ್ತಿದೆ. ಕಾಡಂಚಿನಲ್ಲೇ ಕೆಲ ಹುಲಿಗಳ

ಸಂತಾನೋತ್ಪತ್ತಿ: ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹುಲಿಗಳು ಈಗಷ್ಟೇ ಕಾಡಿನಿಂದ ಹೊರಬಂದವುಗಳಲ್ಲ. ಕೆಲವು ಹುಲಿಗಳು ಕಾಡಂಚಿನ ಗ್ರಾಮಗಳ ಸುತ್ತಮುತ್ತಲೇ ನೆಲೆಸಿ ಸಂತಾನೋತ್ಪತ್ತಿ ಮಾಡುತ್ತಿವೆ. ವಿಶೇಷವಾಗಿ ಹೆಣ್ಣು ಹುಲಿಗಳು ಮರಿ ಹಾಕುವ ಸಂದರ್ಭದಲ್ಲಿ ಕಾಡಿನೊಳಗಿನ ಪ್ರದೇಶದ ಹಕ್ಕಿಗಾಗಿ ಇತರೆ ಹುಲಿಗಳೊಂದಿಗೆ ಸಂಘರ್ಷ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮರಿಗಳ ಮೇಲೆ ದಾಳಿಯಾಗುವ ಭೀತಿಯಿಂದ ಕೆಲವು ಹೆಣ್ಣು ಹುಲಿಗಳು ಕಾಡಂಚಿಗೆ ಬಂದು ಮರಿ ಹಾಕಿ ಸಾಕುತ್ತಿವೆ.

ಹುಲಿಗಳ ಚಲನವಲನದ ಮೇಲೆ ಡ್ರೋನ್, ಕ್ಯಾಮೆರಾಗಳ ಮೂಲಕ ನಿಗಾ ಇರಿಸಲಾಗಿದ್ದು, ಪ್ರತಿ ೪ ಕಿಲೋ ಮೀಟರ್‌ಗೆ ಅರಣ್ಯ ಇಲಾಖೆ ಕ್ಯಾಂಪ್‌ಗಳನ್ನು ಸ್ಥಾಪಿಸಿ ಸೆರೆ ಕಾರ್ಯಾಚರಣೆಗೆ ಕಾರ್ಯಪ್ರವೃತ್ತವಾಗಿದೆ ಎಂದು ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್ ) ಕುಮಾರ್ ಪುಷ್ಕರ್ ಮಾಹಿತಿ ನೀಡಿದ್ದಾರೆ. ನಂಜನಗೂಡು, ಎಚ್.ಡಿ.ಕೋಟೆ, ಸರಗೂರು ಹಾಗೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಭಾಗಗಳಲ್ಲಿ ಇಂತಹ ಚಲನವಲನ ಕಂಡುಬರುತ್ತಿವೆ.

ಡೋರನಕಟ್ಟೆ ಹಾಡಿಯಲ್ಲಿ ಮಹಿಳೆಯ ಮೇಲೆ ದಾಳಿ ನಡೆಸಿದ ಹುಲಿಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳಲಾಗಿದೆ. ಹುಲಿಗಳಿರುವ ಶಂಕಿತ ಪ್ರದೇಶಗಳಲ್ಲಿ ಡ್ರೋನ್ಗಳು ಮತ್ತು ಕ್ಯಾಮೆರಾಗಳನ್ನು ಅಳವಡಿಸಿ ನಿಗಾವಹಿಸಲಾಗುತ್ತಿದೆ. ಕಾಡಂಚಿನಲ್ಲಿ ಪ್ರತಿ ೪ ಕಿಲೋಮೀಟರ್‌ಗೆ ಒಂದು ಕ್ಯಾಂಪ್ ಸ್ಥಾಪಿಸಿ, ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಇಬ್ಬರು ಕಾಡಿನ ಮಿತ್ರರನ್ನು ನಿಯೋಜಿಸಲಾಗಿದೆ. ನಿರಂತರವಾಗಿ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮಗಳೇ ಶಾಶ್ವತ ಪರಿಹಾರ:  ಹುಲಿ ದಾಳಿ ಸಂಭವಿಸಿದ ಬಳಿಕ ಕಾರ್ಯಾಚರಣೆ ನಡೆಸುವುದು ಅಥವಾ ಪರಿಹಾರ ನೀಡುವುದಷ್ಟೇ ಸಮಸ್ಯೆಗೆ ಪರಿಹಾರವಲ್ಲ. ಹುಲಿಗಳ ಸಂಚಾರ ಮಾರ್ಗಗಳನ್ನು ಗುರುತಿಸಿ ನಿರಂತರ ಗಸ್ತು, ಕ್ಯಾಮೆರಾ ಟ್ರ್ಯಾಪ್, ಡ್ರೋನ್ ಸಮೀಕ್ಷೆ ಹಾಗೂ ಅಪಾಯದ ಗ್ರಾಮಗಳಿಗೆ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆ ಬಲಪಡಿಸಬೇಕು. ಅರಣ್ಯ ಸಂರಕ್ಷಣೆಯಷ್ಟೇ ಕಾಡಂಚಿನಲ್ಲಿ ವಾಸಿಸುವ ಜನರ ಜೀವ ಸುರಕ್ಷತೆಯೂ ಮುಖ್ಯವಾಗಿದೆ.

ಬರಡನಪುರ ನಾಗರಾಜ್, ರೈತ ಮುಖಂಡ.

” ಕಾಡಂಚಿನಲ್ಲಿ ಕಾಣಿಸಿಕೊಳ್ಳುವ ಕೆಲವು ಹುಲಿಗಳು ಅಲ್ಲಿಯೇ ನೆಲೆಸಿ ಸಂತಾನೋತ್ಪತ್ತಿ ಮಾಡುತ್ತಿವೆ. ಹೆಣ್ಣು ಹುಲಿಗಳು ಮರಿಗಳ ರಕ್ಷಣೆಗಾಗಿ ಕಾಡಂಚಿಗೆ ಬಂದು ನೆಲೆಸುವ ಸಾಧ್ಯತೆ ಇದೆ. ಡ್ರೋನ್ ಮತ್ತು ಕ್ಯಾಮೆರಾಗಳ ಮೂಲಕ ಹುಲಿಗಳ ಚಲನವಲನದ ಮೇಲೆ ನಿಗಾವಹಿಸಲಾಗಿದ್ದು, ಪ್ರತಿ ನಾಲ್ಕು ಕಿ.ಮೀ.ಗೆ ಒಂದು ಕ್ಯಾಂಪ್ ಸ್ಥಾಪನೆ ಮಾಡಲಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಬದಲು ಮುನ್ನಚ್ಚೆರಿಕೆ ವಹಿಸಿ ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು.”‌

ಕುಮಾರ್ ಪುಷ್ಕರ್, ಪಿಸಿಸಿಎಫ್

 

 

ಆಂದೋಲನ ಡೆಸ್ಕ್

Recent Posts

ದರಗಳ ಏರಿಕೆಯಿಂದ ಸಂಕಷ್ಟದಲ್ಲಿ ಜನರು

ಕರ್ನಾಟಕ ಸರ್ಕಾರ ಇತ್ತೀಚೆಗೆ ಎರಡು ದರಗಳನ್ನು ಹೆಚ್ಚಿಸುವ ಮೂಲಕ ಜನರ ಮೇಲೆ ಹೆಚ್ಚಿನ ಹೊರೆ ಹೊರಿಸಿದೆ. ಒಂದು- ಹಾಲಿನ ದರ…

2 hours ago

ನಾಯಿಗೆ ಮೇಯರ್ ಗಿರಿ…!!

ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ, ಚುನಾವಣೆಯೆಂದರೆ, ಎಲೆಕ್ಟ್ರಾನಿಕ್ ಮತಯಂತ್ರದ ಮುಂದೆ ನಿಂತು…

2 hours ago

ಸಿಎಂ ಅಚ್ಯುತರಾಯರು ಮತ್ತು ಮಂತ್ರಿ ಗುಲ್ಗುಲೆಯೂ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಬೆಡ್ ರೂಮಿನ ಎಲೆಕ್ಟ್ರಿಕ್ ಸ್ವಿಚ್ ಬೋರ್ಡಿನ ತ್ರಿಪಿನ್ ಪ್ಲೇಟಿಗೆ ಫಿಕ್ಸ್ ಆಗಿದ್ದ…

2 hours ago

ದೀಪಾವಳಿ ಬಳಿಕ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ

ಕೆ.ಬಿ.ರಮೇಶನಾಯಕ ಕಾಮಗಾರಿ ವೇಳೆ ಒಂದು ಕಡೆ ಸಂಚಾರ ನಿರ್ಬಂಧ; ಮತ್ತೊಂದು ಕಡೆ ಓಡಾಟಕ್ಕೆ ಅವಕಾಶ ವೈಟ್ ಟಾಪಿಂಗ್ ಕಾಮಗಾರಿಗೆ ಅತ್ಯಾಧುನಿಕ…

2 hours ago

ಅವ್ಯವಸ್ಥೆಗಳ ಆಗರ ಕುವೆಂಪುನಗರ ಪಾರ್ಕ್

ಪ್ರಶಾಂತ್ ಎಸ್. ಮೈಸೂರು: ನಗರದ ಸೌಂದರ್ಯಕ್ಕೆ ಕನ್ನಡಿ ಹಿಡಿದಂತಿದ್ದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ವಾರ್ಡ್ ಸಂಖ್ಯೆ ೪೭ರ ಕುವೆಂಪುನಗರದ ಉದ್ಯಾನ…

2 hours ago

ಬೆಳಕಿನ ಹಬ್ಬಕ್ಕಿಲ್ಲ ಪಟಾಕಿ ವ್ಯಾಪಾರದ ಕಳೆ

ಅಣ್ಣೂರು ಸತೀಶ್ ಶೇ.೫೦ರಷ್ಟು ವಹಿವಾಟು ಇಳಿಕೆ; ಗ್ರಾಹಕರಿಲ್ಲದೆ ಕಂಗಾಲಾದ ವ್ಯಾಪಾರಿಗಳು ಭಾರತೀನಗರ: ದೀಪಾವಳಿ ಎಂದರೆ ಮನೆಮನೆಗಳಲ್ಲಿ ದೀಪಗಳ ಬೆಳಕಿನೊಂದಿಗೆ ಪಟಾಕಿಗಳ…

3 hours ago