ಮಂಜು ಕೋಟೆ
ಕೋಟೆ: ಔಷಧ ಸಿಂಪಡಿಸಿದ ಬಿತ್ತನೆ ಬೀಜ ವಿತರಿಸಿದರೂ ಪ್ರಯೋಜನವಾಗದೆ ಲಕ್ಷಾಂತರ ರೂ. ನಷ್ಟ
ಎಚ್.ಡಿ.ಕೋಟೆ: ಸಾವಿರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಮುಸುಕಿನ ಜೋಳದ ಬೆಳೆಗೆ ರೋಗ ಮತ್ತು ಕೀಟ ಬಾಧೆ ಹೆಚ್ಚಾಗಿದ್ದು ಬೆಳೆಗಳು ನಾಶವಾಗಿ ಈ ಬಾರಿಯೂ ನೂರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಾಲ್ಲೂಕಿನಲ್ಲಿ ಕಬಿನಿ, ತಾರಕ, ನುಗು, ಹೆಬ್ಬಾಳ ಜಲಾಶಯಗಳಿದ್ದರೂ ಈ ಭಾಗದ ರೈತರ ಅನು ಕೂಲಕ್ಕಿಂತ ಹೊರಗಿನವರಿಗೆ ಹೆಚ್ಚು ಅನುಕೂಲವಾಗಿವೆ. ಹೀಗಾಗಿ ಈ ಭಾಗದ ರೈತರು ಆರ್ಥಿಕ ಬೆಳೆಗಳಾದ ಮುಸುಕಿನ ಜೋಳ, ಹತ್ತಿ, ಹೊಗೆ ಸೊಪ್ಪುಗಳಂತಹ ಮಳೆ ಆಶ್ರಿತ ಬೆಳೆಗಳನ್ನೇ ಅವಲಂಬಿಸಿದ್ದಾರೆ.
ಮುಂಗಾರು ಮಳೆ ಅಭಾವದಿಂದಾಗಿ ತಾಲ್ಲೂಕಿನ ಸಾವಿರಾರು ರೈತರು ತಮ್ಮ ಜಮೀನುಗಳಲ್ಲಿ ೨ತಿಂಗಳ ಹಿಂದೆ ಸರ್ಕಾರ, ವಿಜ್ಞಾನಿಗಳು, ಕೃಷಿ ಇಲಾಖೆಯವರು ಪರೀಕ್ಷಿಸಿದ್ದ, ರೋಗ ನಿರೋಧಕ ಶಕ್ತಿ ಒಳಗೊಂಡ ಮುಸುಕಿನ ಜೋಳದ ಬೀಜಗಳನ್ನು ಬಿತ್ತನೆ ಮಾಡಿದ್ದರು. ಆದರೆ ಕಳೆದ ೧೦-೧೫ ದಿನಗಳಿಂದ ನೂರಾರು ರೈತರ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮುಸುಕಿನ ಜೋಳದ ಬೆಳೆಗೆ ಬಿಳಿ ಸುಳಿ ರೋಗ ಮತ್ತು ಸೈನಿಕ ಹುಳುವಿನ ಕೀಟಬಾಧೆ ಕಾಣಿಸಿಕೊಂಡಿದೆ.
ತಾಲ್ಲೂಕಿನ ಹಂಪಾಪುರ, ಮಾದಾಪುರ, ಕೋಳಗಾಲ, ಚಕ್ಕೋಡನಹಳ್ಳಿ, ಮೇಟಿಕುಪ್ಪೆ, ನೂರಲಕುಪ್ಪೆ, ಅಂತರಸಂತೆ, ಬೆಳಗನಹಳ್ಳಿ, ಅಣ್ಣೂರು, ಹೊಸಳ್ಳಿ, ಟೈಗರ್ ಬ್ಲಾಕ್, ನಾಯಕನ ಹುಂಡಿ, ಯರಹಳ್ಳಿ, ಚಾಕಹಳ್ಳಿ, ನಾಗನಹಳ್ಳಿ, ರಾಮೇನಹಳ್ಳಿ, ಗಣೇಶನ ಗುಡಿ, ನೇರಳೆ, ಜಿ.ಬಿ.ಸರಗೂರು, ಕಣಿಯನಹುಂಡಿ ಮುಂತಾದ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳೆಗೆ ರೋಗಬಾಧೆ ಕಾಣಿಸಿಕೊಂಡು ಕೀಟನಾಶಕಗಳನ್ನು ಸಿಂಪಡಿಸಿದರೂ ನಿಯಂತ್ರಣಕ್ಕೆ ಬಾರದೆ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿರುವುದು ರೈತರನ್ನು ಕಂಗಾಲಾಗಿಸಿದೆ.
ರೈತರು ಸಾಲ ಮಾಡಿ ಬೆಳೆ ಬೆಳೆದರೂ ರೋಗ ಮತ್ತು ಕೀಟ ಬಾಧೆಯಿಂದಾಗಿ ಬೆಳೆಗಳು ನಾಶವಾಗುತ್ತಿರುವುದರಿಂದ ಈಗಾಗಲೇ ನೂರಾರು ರೈತರುಗಳು ಬೆಳೆಗಳನ್ನೇ ಉತ್ತುಹಾಕುತ್ತಿದ್ದಾರೆ. ಮತ್ತೆ ಕೆಲವರು ಔಷಧಗಳನ್ನು ಸಿಂಪಡಿಸುತ್ತಿದ್ದಾರೆ. ಕಳೆದ ಬಾರಿಯೂ ಮುಸುಕಿನ ಜೋಳಕ್ಕೆ ಇದೇ ರೀತಿ ಕೀಟಬಾಧೆ ಮತ್ತು ರೋಗಬಾಧೆ ಕಾಣಿಸಿಕೊಂಡು ಬೆಳೆಗಳು ನಾಶವಾಗಿದ್ದರಿಂದ ಸರ್ಕಾರ ಮತ್ತು ಕೃಷಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳು ಮುಸುಕಿನ ಜೋಳದ ಬಿತ್ತನೆ ಬೀಜಕ್ಕೆ ಮತ್ತಷ್ಟು ಉಪಚಾರ ಮತ್ತು ರೋಗನಿರೋಧಕ ಶಕ್ತಿಯನ್ನು ಒಳಗೊಂಡ ರಾಸಾಯನಿಕಗಳನ್ನು ಮಿಶ್ರಣ ಮಾಡಿ ಮಾರಾಟ ಮಾಡಿಸಿದ್ದರು.
ಹಾಗಿದ್ದರೂ ಈ ಬಾರಿಯೂ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಮುಸುಕಿನ ಜೋಳಕ್ಕೆ ಕೀಟ ಬಾಧೆ ಕಾಣಿಸಿಕೊಂಡು ನೂರಾರು ರೈತರ ಬದುಕು ಬೀದಿ ಪಾಲಾಗುತ್ತಿದೆ. ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಸಚಿವರಾದ ಯತೀಂದ್ರ ಸಿದ್ದರಾಮಯ್ಯ, ಸಂಸದ ಸುನಿಲ್ ಬೋಸ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಕೃಷಿಇಲಾಖೆ ಜಂಟಿ ನಿರ್ದೇಶಕ ರವಿ ಮತ್ತು ವಿಜ್ಞಾನಿಗಳು ಈ ಬಗ್ಗೆ ಕ್ರಮ ಕೈಗೊಂಡು ರೈತರನ್ನು ಸಂಕಷ್ಟದಿಂದ ಕಾಪಾಡಲು ಮುಂದಾಗಬೇಕಿದೆ.
” ತಾಲ್ಲೂಕಿನಲ್ಲಿ ಮುಸುಕಿನ ಜೋಳ ಬೆಳೆಯಲ್ಲಿ ಕಾಣಿಸಿಕೊಂಡಿರುವ ಬೂಜುರೋಗ /ಬಿಳಿ ಸುಳಿರೋಗವನ್ನು ಪರಿಶೀಲಿಸಿ, ರೈತರೊಂದಿಗೆ ಸಂವಾದ ನಡೆಸಿ, ರೋಗದ ನಿಯಂತ್ರಣ ಕ್ರಮಗಳು, ಬೆಳೆ ನಿರ್ವಹಣೆ ಹಾಗೂ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಸಲಹೆ ಹಾಗೂ ಸೂಚನೆಗಳನ್ನು ನೀಡಲು ಮಂಡ್ಯ ವಿ.ಸಿ. ಫಾರಂನ ಕೃಷಿ ವಿಜ್ಞಾನಿಗಳಾದ ಡಾ. ಮಹದೇವ್, ಡಾ.ಮಲ್ಲಿಕಾರ್ಜುನ್, ಕೃಷಿ ಇಲಾಖೆ ಉಪ ನಿರ್ದೇಶಕರಾದ ಧನಂಜಯ್, ಸಹಾಯಕ ಕೃಷಿ ನಿರ್ದೇಶಕರಾದ ಪ್ರಸಾದ್, ಕೃಷಿ ಅಧಿಕಾರಿಗಳಾದ ಸಿದ್ದಪ್ಪ ಸ್ವಾಮಿ, ಪ್ರವೀಣ್ ಅವರ ನಿಯೋಗಕ್ಕೆ ತಿಳಿಸಲಾಗಿದೆ. ಈ ಕುರಿತು ರೈತರು ಜಾಗೃತರಾಗಬೇಕಾಗಿದೆ.”
-ಪ್ರಸಾದ್ ಅರಸ್, ಸಹಾಯಕ ಕೃಷಿ ನಿರ್ದೇಶಕರು
” ೧೨ ಎಕರೆ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆ ಬೆಳೆದಿದ್ದು, ಯಾವುದೇ ಔಷಧಗಳನ್ನು ಸಿಂಪಡಿಸಿದರೂ ರೋಗ ಮತ್ತು ಕೀಟಬಾಧೆ ನಿಯಂತ್ರಣವಾಗಿಲ್ಲ. ಹೀಗಾಗಿ ಸಂಪೂರ್ಣವಾಗಿ ಬೆಳೆಯನ್ನು ಹುತ್ತುಹಾಕಿದ್ದೇನೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ.”
-ಸುರೇಂದ್ರ, ರೈತ, ಕೋಳಗಾಲ
ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…
ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…
ಡಾ. ಕೆ. ಪಿ. ಸಿದ್ಧಲಿಂಗಸ್ವಾಮಿ, ಸಂಶೋಧಕರು, ಸಿಎಸ್‌ಎಸ್‌ಐ, ಮಂಗಳೂರು ವಿಶ್ವವಿದ್ಯಾನಿಲಯ ಸೆಪ್ಟೆಂಬರ್ ೧೦ ವಿಶ್ವ ಆತ್ಮಹತ್ಯೆ ತಡೆ ದಿನ. ಇದು…
ಎಸ್.ಎಸ್.ಭಟ್ ಕೃಷ್ಣಾಪುರ-ದೊಡ್ಡಹುಂಡಿ ಗ್ರಾಮಗಳ ನಡುವೆ ವಿವಾದ ನಂಜನಗೂಡು: ಕೆರೆ ನೀರಿನ ವಿಚಾರವಾಗಿ ನಂಜನಗೂಡು ತಾಲ್ಲೂಕಿನ ಕೃಷ್ಣಾಪುರ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ…
ಹೇಮಂತ್‌ಕುಮಾರ್ ಎಚ್ಚರ ತಪ್ಪಿದರೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಖಚಿತ ಮಂಡ್ಯ: ನಗರದ ಜಯಚಾಮರಾಜ ವೃತ್ತ(ಸಂಜಯ ಸರ್ಕಲ್)ದಿಂದ ಹೊಳಲು ವೃತ್ತ, ಪೇಟೆ…