Andolana originals

ಮುಕ್ತಾಯ ಹಂತಕ್ಕೆ ತಲುಪಿದ ಬಯೋಮೈನಿಂಗ್

ಕೆ.ಬಿ.ರಮೇಶನಾಯಕ

ವಿದ್ಯಾರಣ್ಯಪುರಂನ ಸಿವೇಜ್ ಫಾರಂನಲ್ಲಿ ಭರದಿಂದ ಸಾಗಿದ ಕಾಮಗಾರಿ

ಮೈಸೂರು: ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸ್ಥಳೀಯ ನಿವಾಸಿಗಳಿಗೆ ಕಂಟಕವಾಗಿದ್ದ ವಿದ್ಯಾರಣ್ಯ ಪುರಂನ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ವಿಲೇವಾರಿ ಮಾಡುವ ಕಾಮಗಾರಿಯು ಬಹುತೇಕ ಮುಕ್ತಾಯ ಹಂತ ತಲುಪಿದ್ದು, ಸದ್ಯದಲ್ಲಿಯೇ ದುರ್ವಾಸನೆ ಮುಕ್ತ ವಲಯವಾಗುವ ನಿರೀಕ್ಷೆ ಇದೆ.

ಸಿವೇಜ್ ಫಾರಂನಲ್ಲಿ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯದಿಂದ ಸುತ್ತಮುತ್ತಲಿನ ನಿವಾಸಿಗಳು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸೊಳ್ಳೆಗಳ ಕಾಟದಿಂದ ರಾತ್ರಿ ನೆಮ್ಮದಿಯಾಗಿ ನಿದ್ರೆ ಮಾಡಲು ಸಾಧ್ಯವಾಗದ ವಾತಾವರಣ ಇದೆ. ಈ ಹಿನ್ನೆಲೆಯಲ್ಲಿ ತ್ಯಾಜ್ಯವನ್ನು ಕೂಡಲೇ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿ ಸಾಕಷ್ಟು ಹೋರಾಟಗಳು ನಡೆದಿದ್ದವು. ಈ ಹೋರಾಟ ಕೃಷ್ಣರಾಜ ಕ್ಷೇತ್ರದ ಮಟ್ಟಿಗೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಯಿತು. ನಂತರ ಪ್ರತಾಪ್ ಸಿಂಹ ಸಂಸದರಾಗಿದ್ದ ಸಂದರ್ಭದಲ್ಲಿ ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ ಬಯೋಮೈನಿಂಗ್ ಕೈಗೊಳ್ಳಲು ೫೮ ಕೋಟಿ ರೂ. ಮಂಜೂರು ಮಾಡಿಸಿದರು.

೨೨ ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ೬ ಲಕ್ಷ ಟನ್ ಹಳೆಯ ತ್ಯಾಜ್ಯವನ್ನು ವಿಲೇವಾರಿ ಮಾಡಲು ೨೦೨೪ರ ಮಾರ್ಚ್ ೧೪ ರಂದು ಡಿ.ಎಚ್. ಪಟೇಲ್ ಎಂಬುವರಿಗೆ ಕಾರ್ಯಾದೇಶ ನೀಡಲಾಯಿತು. ಇದೀಗ ೪ ಲಕ್ಷ ಟನ್ ತ್ಯಾಜ್ಯವಿಲೇವಾರಿ ಮಾಡಲಾಗಿದ್ದು, ಇನ್ನೂ ೨ ಲಕ್ಷ ಟನ್ ತ್ಯಾಜ್ಯ ವಿಲೇವಾರಿ ಬಾಕಿ ಇದೆ. ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ಸ್ಥಾನ ಪಡೆಯಲು ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯ ಆಯಾ ದಿನವೇ ವಿಲೇವಾರಿ ಆಗಬೇಕು. ಆದರೆ, ಸುಯೇಜ್‌ಫಾರಂನಲ್ಲಿ ತ್ಯಾಜ್ಯದ ರಾಶಿಯೇ ತುಂಬಿಕೊಂಡಿದ್ದ ಹಿನ್ನೆಲೆಯಲ್ಲಿ ನಗರ ಸ್ವಚ್ಛ ಸರ್ವೇಕ್ಷಣೆಯಲ್ಲೂ ಹಿನ್ನಡೆ ಅನುಭವಿಸುತ್ತಿದೆ. ಈ ಪಾರಂಪರಿಕ ತ್ಯಾಜ್ಯ ಸಂಪೂರ್ಣವಾಗಿ ವಿಲೇ ವಾರಿಯಾದರೆ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೈಸೂರು ಮತ್ತಷ್ಟು ಸಾಧನೆ ತೋರಲು ಸಹಕಾರಿಯಾಗಲಿದೆ.

ಮೈಸೂರಿನಂತೆ ಮಹಾರಾಷ್ಟ್ರದ ನಾಗಪುರದಲ್ಲೂ ಹಳೆಯ ತ್ಯಾಜ್ಯ ವಿಲೇವಾರಿ ದೊಡ್ಡ ತಲೆನೋವಾಗಿತ್ತು. ನಂತರ ನಾಗಪುರ ನಗರ ಸ್ಥಳೀಯ ಸಂಸ್ಥೆಯು ಹಳೆಯ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ತೆರವುಗೊಳಿಸುವ ತೀರ್ಮಾನ ಕೈಗೊಂಡಿತ್ತು. ಮೈಸೂರು ನಗರ ಪಾಲಿಕೆಯ ತಂಡ ನಾಗಪುರಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಬಯೋಮೈನಿಂಗ್ ಕುರಿತು ಮಾಹಿತಿ ಸಂಗ್ರಹಿಸಿತ್ತು. ಆ ನಂತರ ನಾಗಪುರದ ಮಾದರಿಯಲ್ಲಿ ನಗರದ ಸುಯೇಜ್‌ಫಾರಂನಲ್ಲಿರುವ ಹಳೆಯ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಕೈಗೊಳ್ಳಲಾಯಿತು.

ಕಂಪ್ರೆಸ್ಡ್ ಬಯೋಗ್ಯಾಸ್ ತಯಾರಿಕೆಗೆ ಒಪ್ಪಂದ: ಅರಮನೆ ನಗರಿ ಮೈಸೂರಿನಲ್ಲಿ ನಿತ್ಯ ೫೦೦ರಿಂದ ೬೦೦ ಟನ್ ತ್ಯಾಜ್ಯ ಉತ್ಪತಿಯಾಗುತ್ತಿದೆ. ದಸರಾ ವೇಳೆ ತ್ಯಾಜ್ಯ ಮತ್ತಷ್ಟು ಹೆಚ್ಚಾಗುತ್ತದೆ. ತ್ಯಾಜ್ಯ ಸಂಸ್ಕರಣೆಗೆ ಕೆಸರೆಯಲ್ಲಿ ೨೨ ಕೋಟಿ ರೂ.ವೆಚ್ಚದಲ್ಲಿ ೨೦೦ ಟನ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ, ರಾಯನಕೆರೆಯಲ್ಲಿ ೯.೨ ಕೋಟಿ ರೂ.ವೆಚ್ಚದಲ್ಲಿ ೧೫೦ ಟನ್ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಪ್ರಾರಂಭಿಸಲಾಗಿದೆ. ಇದರ ಜತೆಗೆ ಸಿವೇಜ್‌ಫಾರಂನಲ್ಲಿ ಹೊಸದಾಗಿ ಮತ್ತೊಂದು ಘಟಕ ಪ್ರಾರಂಭಿಸಲು ನಗರ ಪಾಲಿಕೆ ಯೋಜನೆ ರೂಪಿಸುತ್ತಿದೆ. ಅಲ್ಲದೆ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಸಹಯೋಗದಲ್ಲಿ ಹಸಿ  ತ್ಯಾಜ್ಯವನ್ನು ಬಳಕೆ ಮಾಡಿಕೊಂಡು ಕಂಪ್ರೆಸ್ಡ್ ಬಯೋ ಗ್ಯಾಸ್ (ಸಿಬಿಜಿ) ತಯಾರಿಸಲು ಈಗಾಗಲೇ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ೬೫.೯೮ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ನಿತ್ಯ ೧೪೫ ಟನ್ ತ್ಯಾಜ್ಯವನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಈ ಎಲ್ಲ ಯೋಜನೆಗಳು ಕಾರ್ಯಗತವಾದರೆ ನಗರದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವ ಸಾಧ್ಯತೆ ಇದೆ.

ಏನಿದು ಬಯೋಮೈನಿಂಗ್?:  ನಿತ್ಯ ಸಂಗ್ರಹವಾಗುವ ತ್ಯಾಜ್ಯ ಆಯಾ ದಿನವೇ ಸಂಸ್ಕರಣೆಯಾಗದೆ ಬೆಟ್ಟದ ರೀತಿಯಲ್ಲಿ ಬೆಳೆಯುತ್ತಾ ಹೋಗುವುದು ನಗರ ಪ್ರದೇಶಗಳಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ. ಈ ರೀತಿ ಸಂಗ್ರಹವಾಗುವ ಪಾರಂಪರಿಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವಿಧಾನಕ್ಕೆ ಬಯೋಮೈನಿಂಗ್ ಎಂದು ಕರೆಯಲಾಗುತ್ತದೆ. ಬಯೋಮೈನಿಂಗ್‌ನಲ್ಲಿ ತ್ಯಾಜ್ಯದಲ್ಲಿರುವ ಪ್ಲಾಸ್ಟಿಕ್, ಗಾಜು, ಕಬ್ಬಿಣ ಮುಂತಾದ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ. ಗಾಜು, ಕಬ್ಬಿಣ ಮುಂತಾದ ವಸ್ತುಗಳನ್ನು ಮರು ಬಳಕೆ ಮಾಡಲಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್ ಕಂಪೆನಿಗಳಲ್ಲಿ ಉರುವಲಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಉಳಿದ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ. ತ್ಯಾಜ್ಯ ಮಣ್ಣಾಗಿ ಪರಿವರ್ತನೆಯಾದರೆ ಆ ಮಣ್ಣನ್ನು ಲ್ಯಾಂಡ್ ಫಿಲ್ಲಿಂಗ್‌ಗೆ ಬಳಕೆ ಮಾಡಲಾಗುತ್ತದೆ.

” ಸಿವೇಜ್ ಫಾರಂನಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ಬಯೋ ಮೈನಿಂಗ್ ಮೂಲಕ ವಿಲೇವಾರಿ ಮಾಡುವ ಕಾಮಗಾರಿ ನಡೆಯುತ್ತಿದ್ದು, ಒಟ್ಟು ೬ ಲಕ್ಷ ಟನ್ ತ್ಯಾಜ್ಯದ ಪೈಕಿ ಈಗಾಗಲೇ ೪ ಲಕ್ಷ ಟನ್ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ಶೀಘ್ರದಲ್ಲಿಯೇ ಹಳೆಯ ತ್ಯಾಜ್ಯ ಸಂಪೂರ್ಣ ವಿಲೇವಾರಿ ಆಗಲಿದೆ. ಇನ್ನು ಮುಂದೆ ನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು ಆಯಾ ದಿನವೇ ಸಂಸ್ಕರಣೆಯಾಗುವಂತೆ ಮಾಡಲು ಸಿವೇಜ್ ಫಾರಂನಲ್ಲಿ ನೂತನ ತ್ಯಾಜ್ಯ ಸಂಸ್ಕರಣ ಘಟಕವನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಹೊಸ ಘಟಕವನ್ನು ಅಳವಡಿಸಿದರೆ ನಗರದ ತ್ಯಾಜ್ಯದ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿದೆ.”

-ಶೇಖ್ ತನ್ವೀರ್ ಆಸಿಫ್, ಆಯುಕ್ತರು, ನಗರ ಪಾಲಿಕೆ 

 

 

ಆಂದೋಲನ ಡೆಸ್ಕ್

Recent Posts

ಮಾನನಷ್ಟ ಪ್ರಕರಣಗಳಲ್ಲಿ ಮೂಗುತೂರಿಸುವ ಅಧಿಕಾರ ಪೊಲೀಸರಿಗಿಲ್ಲ!

ಪಿ.ಜೆ.ರಾಘವೇಂದ್ರ, ನ್ಯಾಯವಾದಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂದು ಹಿರಿಯ ಕೆಎಎಸ್ ಅಧಿಕಾರಿ ಹಾಗೂ ಮುಡಾ ಮಾಜಿ…

36 mins ago

ಸೌಂದರ್ಯ ಹದಗೆಡಿಸುವ ಫ್ಲೆಕ್ಸ್ ಹಾವಳಿ ತಡೆ ಅಗತ್ಯ

ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಅರಮನೆ ನಗರಿ ಮೈಸೂರಿನ ಸೌಂದರ್ಯವನ್ನು ಹದಗೆಡಿಸುವಂತಹ ಜಾಹೀರಾತು ಫಲಕಗಳು, ಫ್ಲೆಕ್ಸ್‌ಗಳ ಹಾವಳಿ ತಡೆಗಟ್ಟಲು ರೂಪಿಸಿರುವ…

42 mins ago

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವ ಚಿಂತೆಯಲ್ಲಿದ್ದಾರೆ?

ಸಿದ್ದರಾಮಯ್ಯರನ್ನು ಸಿಎಂ ಪಟ್ಟದಿಂದ ಕೆಳಗಿಳಿಸಿದರೆ ಪಕ್ಷಕ್ಕೆ ಆಪತ್ತು ಎಂಬ ಆತಂಕ ಇಂತಹದೊಂದು ಪ್ರಶ್ನೆ ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಳೆಯಗಳಲ್ಲಿ…

48 mins ago

ಅಕಾಲಿಕ ಮಳೆ; ೮ ಲಕ್ಷ ರೂ. ಮೌಲ್ಯದ ರಾಗಿ ನಾಶ

ಅವಳಿ ತಾಲ್ಲೂಕುಗಳ ಹಲವೆಡೆ ಅವಾಂತರ; ಕಾವಲು ಹೊಸೂರು ಗ್ರಾಮದಲ್ಲಿ ರಾಗಿ ಬೆಳೆದಿದ್ದ ರೈತರು ಕಂಗಾಲು ಕೆ.ಆರ್.ನಗರ: ಕೆ.ಆರ್.ನಗರ ಮತ್ತು ಸಾಲಿಗ್ರಾಮ…

1 hour ago

ಶೋಚನೀಯ ಸ್ಥಿತಿಯಲ್ಲಿ ಶತಮಾನ ದಾಟಿದ ಶಾಲೆ

ಎಸ್.ಎಸ್.ಭಟ್ ನಂಜನಗೂಡು: ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪೂರಕವಾಗಿ ೧೯೨೪ರಲ್ಲೇ ಆರಂಭವಾದ ಈ ಪ್ರೌಢಶಾಲೆ ಪ್ರಸ್ತುತ ಉದುರಿಬೀಳುವ ಹಂತದ ಗೋಡೆ ಹಾಗೂ ಮಳೆ…

1 hour ago