Andolana originals

137 ವರ್ಷ ದಾಟಿ ಮುನ್ನಡೆದ ಸರ್ಕಾರಿ ಶಾಲೆ!

ಹೇಮಂತ್ ಕುಮಾರ್

ಮಂಡ್ಯ: ಈ ಸರ್ಕಾರಿ ಶಾಲೆಗೆ ೧೩೭ ವರ್ಷ… ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ೪೧… ಒಂದು ಕಾಲದಲ್ಲಿ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಕ್ಷರ ಕಲಿಕೆಗೆ ಸಾಕ್ಷಿಯಾಗಿದ್ದ ಶಾಲೆ ಇಂದು ವಿದ್ಯಾರ್ಥಿಗಳ ಬರ ಎದುರಿಸುತ್ತಿದೆ.

ಇದು ಮಂಡ್ಯ ದಕ್ಷಿಣ ವಲಯ ವ್ಯಾಪ್ತಿಯ ಹಳೇ ನಗರದ ಟೌನ್ ಮಿಡ್ಲ್ ಸ್ಕೂಲ್ (ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ) ಸ್ಥಿತಿಗತಿ. ೧೮೮೯ರಲ್ಲಿ ಸ್ಥಾಪನೆಗೊಂಡ ಈ ಶಾಲೆಗೀಗ ೧೩೭ವರ್ಷ. ಇತ್ತೀಚಿನ ವರ್ಷಗಳವರೆಗೆ ತನ್ನದೇ ಆದ ಖದರ್ ಹೊಂದಿದ್ದ ಈ ಶಾಲೆ ಹಳೇ ಮಂಡ್ಯದ ಏಕೈಕ ಶಾಲೆಯಾಗಿದೆ. ವಿಶಾಲವಾದ ಆವರಣ ಹೊಂದಿದ್ದ ಈ ಶಾಲೆ ಬಹಳಷ್ಟು ವರ್ಷಗಳ ಕಾಲ ತಾಲ್ಲೂಕು ಕಚೇರಿಗೂ ಅವಕಾಶ ನೀಡಿತ್ತು. ಇದು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಶಾಸಕ ದಿ.ಎಚ್.ಡಿ.ಚೌಡಯ್ಯ ಸೇರಿದಂತೆ ಅನೇಕ ಗಣ್ಯರು ಓದಿದ ಶಾಲೆ.

೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಹೊಂದಿದ್ದ ಶಾಲೆಯಲ್ಲೀಗ ೪೧ ವಿದ್ಯಾರ್ಥಿಗಳಷ್ಟೇ ವ್ಯಾಸಂಗ ಮಾಡುತ್ತಿದ್ದಾರೆ. ೧೩ ಕೊಠಡಿಗಳಿವೆ! ಓರ್ವ ಮುಖ್ಯ ಶಿಕ್ಷಕ, ಮೂವರು ಶಿಕ್ಷಕರು ಇರುವ ಈ ಶಾಲೆ ಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಇತ್ತೀಚೆಗೆ ಈ ಶಾಲೆಯಲ್ಲಿ ೧ನೇ ತರಗತಿಯಲ್ಲಿ ಇಂಗ್ಲಿಷ್ ಮಾಧ್ಯಮ ಕೂಡ ಆರಂಭವಾಗಿದೆ. ಸದ್ಯ ಸ್ಮಾರ್ಟ್ ಕ್ಲಾಸ್ ಸೌಲಭ್ಯಗಳನ್ನುಆರಂಭಿಸಲಾಗುತ್ತಿದ್ದು, ಟಿವಿ, ಡೆಸ್ಕ್‌ಗಳೂ, ಕುರ್ಚಿಗಳ ವ್ಯವಸ್ಥೆ ಇದೆ. ಆದರೆ ಇನ್ನೂ ಹಲವು ಸೌಲಭ್ಯಗಳ ಅಗತ್ಯವಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಡಿ.ಕೆ.ನಾಗರಾಜು ಅವರು. ಶಾಲಾವರಣದಲ್ಲಿ ನೆರಳು ನೀಡುವ ಮರಗಳಿದ್ದು, ಮಕ್ಕಳು ಊಟ ಮಾಡಲು ಸೂಕ್ತವಾದ ವಾತಾವರಣವಿದೆ. ಇತ್ತೀಚೆಗೆ ಸುಣ್ಣ ಬಣ್ಣ ಬಳಿದು ಹೊಸ ರೂಪ ನೀಡಲಾಗಿದೆ. ಹಳೆಯ ಹೆಂಚಿನ ಮನೆಯ ಎತ್ತರದ ಶಾಲೆ ಕಟ್ಟಡವು ಇಂದಿಗೂ ಸುಸ್ಥಿತಿಯ ಲ್ಲಿದ್ದು, ಹಿಂಭಾಗದಲ್ಲಿ ಹೆಚ್ಚುವರಿ ಕೊಠಡಿಗಳಿವೆ. ಆದರೆ,ಕಾಂಪೌಂಡ್ ಅಲ್ಲಲ್ಲಿ ಕುಸಿದಿದ್ದು ಸರಿಪಡಿಸಬೇಕಿದೆ.

” ಶತಮಾನ ಪೂರೈಸಿರುವ ಶಾಲೆಗಳನ್ನು ಪಾರಂಪರಿಕ ಶಾಲೆಗಳೆಂದು ಗುರುತಿಸಿ, ಕಟ್ಟಡಗಳ ಪರಂಪರೆಯನ್ನು ಸಂರಕ್ಷಿಸಿ ಮುಂದುವರಿಸಿಕೊಂಡು ಹೋಗಬೇಕಿದೆ.”

-ಮಧು ಜಿ.ಮಾದೇಗೌಡ, ವಿಧಾನಪರಿಷತ್ ಸದಸ್ಯ,

” ದಕ್ಷಿಣ ಪದವೀಧರರ ಕ್ಷೇತ್ರ ಶತಮಾನೋತ್ಸವ ಕಂಡ ಶಾಲೆಗಳನ್ನು ಗುರುತಿಸಿ ಹಂತ ಹಂತವಾಗಿ ಅನುದಾನ ದೊರಕಿಸುವ ಕೆಲಸ ನಡೆದಿದೆ. ಈಗಾಗಲೇ ಶಾಲೆಗೆ ಸೇರಿದ ಜಾಗದ ಹದ್ದುಬಸ್ತು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ತಹಸಿಲ್ದಾರ್ ಅವರ ಗಮನಕ್ಕೆ ತರಲಾಗಿದೆ. ಶಾಲಾಭಿವೃದ್ಧಿ ಸಮಿತಿಗಳಿಗೂ ಶಾಲೆಗೆ ಸೇರಿದ ಸರ್ಕಾರಿ ಜಾಗವನ್ನು ಸಂರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗಿದೆ.”

-ಮಹದೇವು, ಬಿಇಒ, ಮಂಡ್ಯ ದಕ್ಷಿಣ ವಲಯ

” ಮಂಡ್ಯ ಹಳೇ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಾನು ಮುಖ್ಯೋಪಾಧ್ಯಾಯನಾಗಿ ಬಂದು ನಾಲ್ಕೈದು ವರ್ಷಗಳಾಗಿವೆ. ಒಂದನೇ ತರಗತಿ ಆರಂಭಿಸಿದ್ದು, ಕಟ್ಟಡವನ್ನು ಇಂದಿನ ಅಗತ್ಯಗಳಿಗೆ ಮಾರ್ಪಾಡು ಮಾಡಲಾಗಿದೆ. ಸುಣ್ಣಬಣ್ಣ ಮಾಡಿಸಿ ಒಂದು ಹೊಸ ರೂಪು ನೀಡಿದ್ದರಿಂದ ಮಕ್ಕಳ ಪ್ರವೇಶಾತಿ ಏರಿಕೆ ಕಂಡಿದೆ. ಶಾಲೆಯಲ್ಲೀಗ ೪೧ ವಿದ್ಯಾರ್ಥಿಗಳಷ್ಟೇ ವ್ಯಾಸಂಗ ಮಾಡುತ್ತಿದ್ದಾರೆ. ಮೂವರು ಶಿಕ್ಷಕರಿದ್ದಾರೆ. ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಶೀಘ್ರದಲ್ಲೇ ಸ್ಮಾರ್ಟ್ ಕ್ಲಾಸ್ ಸೌಲಭ್ಯವನ್ನೂ ಆರಂಭಿಸಲಾಗುವುದು.”

-ಡಿ.ಕೆ.ನಾಗರಾಜು, ಮುಖ್ಯ ಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಳೇನಗರ, ಮಂಡ್ಯ

” ಈ ಶಾಲೆಯಲ್ಲಿ ನಾವು ಓದುತ್ತಿದ್ದ ಸಂದರ್ಭದಲ್ಲಿ ಒಂದರಿಂದ ೭ನೇ ತರಗತಿಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು. ಆಗ ಆಟೋಟಗಳಿಗೆ ಸಾಕಷ್ಟು ಜಾಗವಿತ್ತು. ಸುತ್ತಮುತ್ತಲ ಹಳ್ಳಿಗಳಿಂದ ಹುಡುಗರು ಸೈಕಲ್‌ನಲ್ಲೇ ಬಂದು – ಹೋಗುತ್ತಿದ್ದರು. ಈಗ ಎಲ್ಲ ಬದಲಾವಣೆಯಾಗಿದೆ. ಶಾಲೆಯ ಜಾಗವನ್ನು ಇತರೆ ಉದ್ದೇಶಕ್ಕೆ ಸರ್ಕಾರ ಬಳಸಿಕೊಂಡಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ಕ್ಷೀಣಿಸಿದೆ.”

-ಗುರುಮೂರ್ತಿ, ಹಿರಿಯ ವಿದ್ಯಾರ್ಥಿ, ಟೌನ್ ಮಿಡ್ಲ್ ಸ್ಕೂಲ್

” ಇದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಾದ್ದರಿಂದ ಈ ವ್ಯಾಪ್ತಿಯಲ್ಲಿ ಟೌನ್ ಮಿಡ್ಲ್ ಸ್ಕೂಲ್ ಎಂದೇ ಕರೆಯಲಾಗುತ್ತಿತ್ತು. ಆ ದಿನಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳಿಂದ ಶಾಲೆ ತುಂಬಿ ತುಳುಕುತ್ತಿತ್ತು. ವಿಶಾಲವಾದ ಜಾಗವೂ ಇತ್ತು. ಈಗ ಮಕ್ಕಳ ಸಂಖ್ಯೆ ಕ್ಷೀಣಿಸಿದಂತೆ, ಜಾಗವೂ ಕಿರಿದಾಗುತ್ತಿದೆ.”

 -ಚಂದ್ರಕುಮಾರ್, ಉದ್ಯಮಿ

ಜಿಲ್ಲಾದ್ಯಂತ ಶತಮಾನ ಪೂರೈಸಿದ ೬೬ ಶಾಲೆಗಳು:  ಮಂಡ್ಯ ಜಿಲ್ಲಾದ್ಯಂತ ಶತಮಾನ ಪೂರೈಸಿರುವ ೬೬ ಶಾಲೆಗಳಿವೆ ಎಂದು ಮಂಡ್ಯ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ. ಕೆಆರ್.ಪೇಟೆ ತಾಲ್ಲೂಕಿನಲ್ಲಿ ೧೩ ಶಾಲೆಗಳು,ಮಳವಳ್ಳಿಯಲ್ಲಿ ೪, ಮಳವಳ್ಳಿಯಲ್ಲಿ ೧೨, ಉತ್ತರ ವಲಯದಲ್ಲಿ ೪, ದಕ್ಷಿಣ ವಲಯದಲ್ಲಿ ೨, ನಾಗಮಂಗಲದಲ್ಲಿ ೧೦ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ೧೫ ಶಾಲೆಗಳಿವೆ ಎಂದು ತಿಳಿದುಬಂದಿದೆ.

 

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

1 hour ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

1 hour ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

1 hour ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

5 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

5 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ:  ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ…

5 hours ago