Andolana originals

ಡಿಕೆಶಿ ಸಂಪುಟ: ಕುಗ್ಗಿದ ಮೈಸೂರು ಜಿಲ್ಲೆ ಪ್ರಾಬಲ್ಯ

ಕೆ.ಬಿ. ರಮೇಶನಾಯಕ

ಸಿದ್ದರಾಮಯ್ಯ ಸಂಪುಟದಲ್ಲಿ ೮ ವರ್ಷವೂ ಸಚಿವರಾಗಿದ್ದ ಡಾ.ಎಚ್‌ಸಿಎಂ ಹೊರಕ್ಕೆ

ಪಿರಿಯಾಪಟ್ಟಣ ಕ್ಷೇತ್ರದ ಕೆ. ವೆಂಕಟೇಶ್‌ಗೂ ಕೊಕ್

ಮೈಸೂರು: ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಮೈಸೂರು\ ಜಿಲ್ಲೆಗೆ ದಕ್ಕಿದ್ದ ಪ್ರಾಬಲ್ಯವು, ಈಗಿನ ಸಿಎಂ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಕುಗ್ಗಿದೆ. ಸಂಪುಟ ವಿಸ್ತರಣೆಯಲ್ಲಿ ಮೈಸೂರು ಜಿಲ್ಲೆಗೆ ಮತ್ತೆರಡು ಸಚಿವ ಸ್ಥಾನಗಳು ದೊರೆಯಬಹುದೆಂದು ಎರಡು ತಿಂಗಳುಗಳಿಂದ ಇಟ್ಟುಕೊಂಡಿದ್ದ ನಿರೀಕ್ಷೆ ಹುಸಿಯಾಗಿದೆ.

ಡಾ.ಎಚ್.ಸಿ. ಮಹದೇವಪ್ಪ, ತನ್ವೀರ್ ಸೇಠ್ ಅವರ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಿವೆ. ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರೇ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗುವುದು ಖಚಿತವಾಗಿದೆ. ಸಿದ್ದರಾಮಯ್ಯ ಅವರು ಮೊದಲನೇ ಬಾರಿಗೆ ಸಿಎಂ ಆಗಿದ್ದಾಗ ದಲಿತ ನಾಯಕ ವಿ. ಶ್ರೀನಿವಾಸ ಪ್ರಸಾದ್ ಅವರನ್ನು ಕೈ ಬಿಟ್ಟರೆ, ಈಗಿನ ಶಿವಕುಮಾರ್ ಸಂಪುಟದಲ್ಲಿ ಮತ್ತೊಬ್ಬ ದಲಿತ ನಾಯಕ ಮಹದೇವಪ್ಪ ಅವರಿಗೆ ಸ್ಥಾನ ಸಿಗದೆ ಹೊರಗುಳಿಯುವಂತಾಗಿದೆ. ಅಲ್ಪಸಂಖ್ಯಾತರ ಕೋಟಾದಡಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ತನ್ವೀರ್ ಸೇಠ್‌ಗೆ ಈ ಅವಧಿಯಲ್ಲೂ ಕೈತಪ್ಪಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಮೈಸೂರು ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆಯುತ್ತಿತ್ತು. ಅದರಲ್ಲೂ ಕಳೆದ ಎರಡು ದಶಕಗಳಿಂದ ಬಿಜೆಪಿ ನೇತೃತ್ವದ ಸರ್ಕಾರವನ್ನು ಹೊರತುಪಡಿಸಿದರೆ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳದ ಸರ್ಕಾರಗಳಲ್ಲಿ ಜಿಲ್ಲೆಗೆ ಸಿಂಹಪಾಲು ದಕ್ಕುತ್ತಲೇ ಬಂದಿತ್ತು.

೧೯೯೯ರ ಎಸ್.ಎಂ. ಕೃಷ್ಣರ ಸರ್ಕಾರದಲ್ಲಿ ಎ.ಎಚ್. ವಿಶ್ವನಾಥ್, ಎಂ. ಮಹದೇವ್ ಅವರಿಗೆ, ೨೦೦೪ರಲ್ಲಿ ಸಿದ್ದರಾಮಯ್ಯ ಡಿಸಿಎಂ ಆಗಿದ್ದಾಗ ಡಿ.ಟಿ. ಜಯಕುಮಾರ್, ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಅವಕಾಶ ದೊರೆತಿತ್ತು. ೨೦೧೮ರ ಜಾ.ದಳ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್ ಅವರಿಗೆ ಅವಕಾಶ ಲಭಿಸಿತ್ತು.

ಸಿದ್ದರಾಮಯ್ಯ ಸಂಪುಟದಲ್ಲಿ ಸಿಂಹಪಾಲು: ೨೦೧೩-೨೦೧೮ರ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಮಹದೇವಪ್ಪ, ಶ್ರೀನಿವಾಸ ಪ್ರಸಾದ್, ಚಾಮರಾಜನಗರ ಜಿಲ್ಲೆಯ ಪುಟ್ಟರಂಗಶೆಟ್ಟಿ, ಎಚ್.ಎಸ್. ಮಹದೇವಪ್ರಸಾದ್‌ಗೆಅವಕಾಶ ದೊರೆತಿತ್ತು. ೨೦೧೬ರಲ್ಲಿ ಶ್ರೀನಿವಾಸ ಪ್ರಸಾದ್ರನ್ನು ಕೈಬಿಟ್ಟು ತನ್ವೀರ್ ಸೇಠ್‌ರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ೨೦೨೩ರಲ್ಲಿ ಸಿದ್ದರಾಮಯ್ಯರು ಎರಡನೇ ಬಾರಿ ಸಿಎಂ ಆಗಿದ್ದಾಗಲೂ ಮಹದೇವಪ್ಪ, ಕೆ. ವೆಂಕಟೇಶ್ ಅವರನ್ನು ಸೇರ್ಪಡೆ ಮಾಡಿಕೊಂಡು ಪ್ರಭಾವಿ ಖಾತೆಗಳನ್ನು ನೀಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ತೆರವಾದ ಸಿಎಂ ಸ್ಥಾನಕ್ಕೆ ಬಂದಿರುವ ಶಿವಕುಮಾರ್ ಅವರ ಸಂಪುಟದಲ್ಲಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೂ ಸ್ಥಾನ ಕಲ್ಪಿಸಿಕೊಡಲಾಗಿತ್ತು. ಹಾಗಾಗಿ, ಸಚಿವ ಸಂಪುಟ ವಿಸ್ತರಣೆ ವೇಳೆ ವೆಂಕಟೇಶ್‌ಗೆ ದೊರೆಯದೆ ಇದ್ದರೂ ಮಹದೇವಪ್ಪ, ತನ್ವೀರ್ ಸೇಠ್ ಅವರಿಗೆ ಪ್ರಾತಿನಿಧ್ಯ ದೊರೆಯಬಹುದೆಂಬುದು ಜಿಲ್ಲೆಯ ಜನರ ನಿರೀಕ್ಷೆಯಾಗಿತ್ತು. ಆದರೆ, ಹೈಕಮಾಂಡ್ ಸೋಮವಾರ ಅಂತಿಮವಾಗಿ ಕಳುಹಿಸಿದ ಪಟ್ಟಿಯಲ್ಲಿ ಮೈಸೂರು ಜಿಲ್ಲೆಯ ಇಬ್ಬರು ನಾಯಕರಿಗೆ ಸ್ಥಾನ ತಪ್ಪಿದ್ದು, ಆ ಮೂಲಕ ಸಂಪುಟದಲ್ಲಿ ಜಿಲ್ಲೆಯ ಪ್ರಾಬಲ್ಯ ಕುಸಿದಿದೆ.

ಫಲ ನೀಡದ ಮಾಜಿ ಸಿಎಂ ಒತ್ತಡ: ಕಳೆದ ನಾಲ್ಕು ದಶಕಗಳ ಪರಮಾಪ್ತ ಮಹದೇವಪ್ಪ ಅವರಿಗೆ ಸಚಿವ ಸ್ಥಾನ ಕೊಡುವಂತೆ ಹೈಕಮಾಂಡ್ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಕೊನೆಯವರೆಗೂ ನಡೆಸಿದ ಪ್ರಯತ್ನ ಫಲಪ್ರದವಾಗಲೇ ಇಲ್ಲ. ತಮ್ಮ ಆಪ್ತರಿಗೆ ಅಧಿಕಾರ ಕೊಡಿಸಲು ಸಿದ್ದರಾಮಯ್ಯ, ಪ್ರತ್ಯೇಕ ಪಟ್ಟಿಯೊಂದನ್ನು ಕೊಟ್ಟು ಪ್ರಬಲವಾಗಿ ವಾದ ಮಂಡಿಸಿದ್ದರು. ಅದರಲ್ಲೂ ತಮ್ಮೊಂದಿಗೆ ಸದಾ ಹೆಜ್ಜೆ ಹಾಕುತ್ತಿರುವ ಡಾ.ಎಚ್‌ಸಿಎಂ ಅವರಿಗೆ ಅವಕಾಶ ಕೊಡುವಂತೆ ಹೇಳಿದ್ದರೂ, ಅದು ಯಶಸ್ವಿಯಾಗಲಿಲ್ಲ.

ದಲಿತ ಕೋಟಾದಡಿ ಪಿ.ಎಂ.ನರೇಂದ್ರಸ್ವಾಮಿ (ಬಲಗೈ), ಶಿವರಾಜ್ ತಂಗಡಗಿ (ಭೋವಿ), ರುದ್ರಪ್ಪಲಮಾಣಿ (ಲಂಬಾಣಿ)ಗೆ ಅವಕಾಶ ನೀಡಿದ್ದರಿಂದಾಗಿ ಮಹದೇವಪ್ಪರಿಗೆ ಸಚಿವಗಿರಿ ಕೈತಪ್ಪಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹಲವಾರು ಯೋಜನೆಗಳ ಜಾರಿಗೆ ಮುಖ ಪಾತ್ರವಹಿಸಿದ್ದ ಮಹದೇವಪ್ಪ ದಲಿತ ನಾಯಕರ ಪೈಕಿ ಮುಂಚೂಣಿಯಲ್ಲಿದ್ದರೂ, ಆಂತರಿಕವಾಗಿ ಕೆಲವರು ಎಚ್‌ಸಿಎಂಗೆ ಸಚಿವ ಸ್ಥಾನ ನೀಡದಂತೆ ನಡೆಸಿದ ಷಡ್ಯಂತ್ರಕ್ಕೆ ಹೈಕಮಾಂಡ್ ಮಣಿದಿದೆ ಎಂದು ಮೂಲಗಳು ಹೇಳಿವೆ.

ಅತಿಯಾದ ಆತ್ಮವಿಶ್ವಾಸವೇ ಮುಳುವು: ಹಿರಿತನ, ಪಕ್ಷನಿಷ್ಠೆ ಹಾಗೂ ಅಲ್ಪಸಂಖ್ಯಾತರ ಕೋಟಾದಡಿ ಈ ಬಾರಿ ಸಚಿವ ಸ್ಥಾನ ಸಿಗುತ್ತದೆ ಎಂಬ ಅತಿಯಾದ ಆತ್ಮವಿಶ್ವಾಸವೇ ತನ್ವೀರ್‌ಸೇಠ್ ಅವರಿಗೆ ಮುಳುವಾಗಿದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಅಧಿಕಾರ ಹಸ್ತಾಂತರ ವೇಳೆ ಸಂಪುಟದಲ್ಲಿ ಅವಕಾಶ ಕೊಡಲಾಗುವುದು ಎಂಬ ಮಾತನ್ನು ನಂಬಿಕೊಂಡಿದ್ದ ತನ್ವೀರ್ ಸೇಠ್, ಹೊಸದಿಲ್ಲಿಯ ಮಟ್ಟದಲ್ಲಿ ಯಾವುದೇ ಲಾಬಿ ಮಾಡುವುದಿಲ್ಲ ಎನ್ನುವುದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಆರು ಬಾರಿ ಶಾಸಕನಾಗಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವುದು ನನಗೆ ಸಚಿವ ಸ್ಥಾನದ ಅವಕಾಶದ ಬಾಗಿಲನ್ನು ತೆರೆಯುತ್ತದೆ ಎನ್ನುವ ನಂಬಿಕೆ ಇಟ್ಟಿದ್ದರು.

ಸಿದ್ದರಾಮಯ್ಯ ಅವರೊಂದಿಗೆ ಅಂತರ ಕಾಯ್ದು ಕೊಂಡಿರುವ ತನ್ವೀರ್ ಸೇಠ್ ಅವರು, ಶಿವಕುಮಾರ್ ಅವರ ಅತ್ಯಾಪ್ತವಲಯದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಅವರಿಗೆ ಡಿಕೆಶಿ ಕೃಪೆಯೂ ಕೈತಪ್ಪಿದೆ. ಅಲ್ಪಸಂಖ್ಯಾತರ ಕೋಟಾದಡಿ ರಿಜ್ವಾನ್ ಹರ್ಷದ್, ಜಮೀರ್ ಅಹ್ಮದ್ ಖಾನ್‌ಗೆ ಸ್ಥಾನ ಸಿಕ್ಕಿರುವುದರಿಂದ ತನ್ವೀರ್ ಸೇಠ್ ಹೊರಗುಳಿಯಬೇಕಾಗಿದೆ.

ಮೆಲ್ಲನೆ ದೂರ ಸರಿದ ಕೆ. ವೆಂಕಟೇಶ್: ಸಿದ್ದರಾಮಯ್ಯರ ಆಪ್ತವಲಯದ ಕೆ. ವೆಂಕಟೇಶ್ ಮೆಲ್ಲನೆ ದೂರ ಸರಿದಿದ್ದಾರೆ. ರೇಷ್ಮೆ, ಪಶುಸಂಗೋಪನಾ ಸಚಿವರಾಗಿದ್ದ ವೆಂಕಟೇಶ್ ಒಕ್ಕಲಿಗ ಸಮುದಾಯದಲ್ಲಿ ಹಿರಿಯರಾದರೂ ಕಾಂಗ್ರೆಸ್ ವಲಯದಲ್ಲಿ ಅವರು ಪ್ರಾಬಲ್ಯ ಹೊಂದಿದವರಲ್ಲ. ಸದಾ ಸಿದ್ದರಾಮಯ್ಯರ ಅನುಯಾಯಿಯಾಗಿ ಕಾಣಿಸಿಕೊಂ ಡಿದ್ದರಿಂದಾಗಿ ಹೈಕಮಾಂಡ್ ಅಷ್ಟೇನೂ ಒಲವು ತೋರಲಿಲ್ಲ. ಒಕ್ಕಲಿಗ ಕೋಟಾದಡಿ ಕೆ.ಎಂ.ಶಿವಲಿಂಗೇಗೌಡ, ಎಚ್.ಸಿ.ಬಾಲಕೃಷ್ಣ, ಎನ್.ಚಲುವರಾಯಸ್ವಾಮಿ ಅವರಿಗೆ ಸಂಪುಟದಲ್ಲಿ ಅವಕಾಶ ದೊರೆತ ಹಿನ್ನೆಲೆಯಲ್ಲಿ ವೆಂಕಟೇಶ್ ಸದ್ದಿಲ್ಲದೆ ದೂರ ಉಳಿದಿರಬಹುದು. ಇನ್ನು ಹಿಂದುಳಿದ ವರ್ಗಕ್ಕೆ ಸೇರಿದ ಸಿ. ಪುಟ್ಟರಂಗಶೆಟ್ಟಿ ಅವರಿಗೆ ನಿರೀಕ್ಷೆಯಂತೆ ಸ್ಥಾನ ದೊರೆತಿರುವುದು, ಉಪ್ಪಾರ ಸಮಾಜಕ್ಕೆ ಸಂತಸವನ್ನುಂಟು ಮಾಡಿದೆ.

ಡಾ.ಯತೀಂದ್ರರೇ ಕಿಂಗ್: 

ಮೈಸೂರು ಜಿಲ್ಲೆಗೆ ಸದ್ಯದ ಮಟ್ಟಿಗೆ ಡಾ. ಯತೀಂದ್ರ ಸಿದ್ದರಾಮಯ್ಯ ಅವರೇ ಕಿಂಗ್ ಆಗಿದ್ದಾರೆ. ಕಳೆದ ಮೂರು ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದರೆ, ಬದಲಾದ ರಾಜಕೀಯದಲ್ಲಿ ಈಗ ಡಾ. ಯತೀಂದ್ರ ನಗರಾಭಿವೃದ್ಧಿ ಖಾತೆ ಜತೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಹೊಣೆಯನ್ನು ಹೊರಲಿದ್ದಾರೆ. ಹಿಂದುಳಿದ ವರ್ಗಗಳ ನಾಯಕರಾಗಿರುವ ಡಾ. ಯತೀಂದ್ರ ಈಗ ದಲಿತ, ನಾಯಕ, ಒಕ್ಕಲಿಗ ಸಮುದಾಯಗಳ ತಮ್ಮ ಜತೆಗೆ ಕರೆದುಕೊಂಡು ಹೋಗಬೇಕಾಗಿದೆ. ಡಾ.ಎಚ್ ಸಿಎಂ, ವೆಂಕಟೇಶ್, ತನ್ವೀರ್ ಸೇಠ್‌ರಂತಹ ಹಿರಿಯ ನಾಯಕರನ್ನು ಬದಿಗಿಟ್ಟು ಕೆಲಸ ಮಾಡುವುದು ಸುಲಭವಲ್ಲ. ಹಾಗಾಗಿ, ಯತೀಂದ್ರ ಅವರು, ತಮ್ಮ ತಂದೆಯ ಮಾರ್ಗದರ್ಶನದಡಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಿ ಸಾಗಬೇಕಾಗಿದೆ.

 

 

ಆಂದೋಲನ ಡೆಸ್ಕ್

Recent Posts

ಮಂಡ್ಯ | ಕೆರೆಯಲ್ಲಿ ಬಾಲಕನ ಶವ ಪತ್ತೆ ; ಕೊಲೆ ಶಂಕೆ

ಮಿಮ್ಸ್ ಎದುರು ಪ್ರತಿಭಟನೆ ಮಂಡ್ಯ: 15 ವರ್ಷದ ಬಾಲಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯ…

4 hours ago

10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ: ಸ್ನೇಕ್ ಮಧು ಕಾರ್ಯಕ್ಕೆ ಮೆಚ್ಚುಗೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿತ್ತಾಪುರ ಗ್ರಾಮದ ವಿಜಿ…

9 hours ago

ವಿದ್ಯುತ್ ಸ್ಪರ್ಶ: ಲೈನ್‌ಮ್ಯಾನ್ ಕಾರ್ತಿಕ್‌ ಸ್ಥಿತಿ ಗಂಭೀರ, ಆದರೆ ಸ್ಥಿರ: ವೈದ್ಯರಿಂದ ಮಾಹಿತಿ

ಮೈಸೂರು: ವಿದ್ಯುತ್ ಸ್ಪರ್ಶದಿಂದ ತೀವ್ರವಾಗಿ ಗಾಯಗೊಂಡಿದ್ದ ಲೈನ್‌ಮ್ಯಾನ್ ಕಾರ್ತಿಕ್ ಅವರ ಆರೋಗ್ಯ ಸ್ಥಿತಿ ಗಂಭೀರ, ಆದರೆ ಸ್ಥಿರವಾಗಿದೆ ಎಂದು ವೈದ್ಯರು…

10 hours ago

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ ರಾಜೀನಾಮೆ

ವಿಜಯಪುರ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದಾರೆ. ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಕೈಬಿಟ್ಟಿರುವುದಕ್ಕೆ…

10 hours ago

ನಿರೋಡಿ ನಿಧನ; ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟ

ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮಾಂತ್ರಿಕ ಗಾಯಕ ಪಂಡಿತ್ ಇಂದೂಧರ ನಿರೋಡಿ ಮಂಗಳವಾರ ಮಹಾರಾಷ್ಟ್ರದ ಪನವೇಲ್‌ನಲ್ಲಿ ನಿಧನರಾದರು. ಅವರು ಕೆಲ ವರ್ಷಗಳ…

13 hours ago

ಭರದಿಂದ ಸಾಗಿದ ದಸರಾ ಕಾಮಗಾರಿ

೫.೯೬ ಕೋಟಿ ರೂ.ವೆಚ್ಚದಲ್ಲಿ ಪೇಂಟಿಂಗ್, ಫುಟ್‌ಪಾತ್ ಅಂಚುಗಳಿಗೆ ಬಣ್ಣ, ವೃತ್ತಗಳ ದುರಸ್ತಿ ಸೆ.೩೦ರೊಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ತಾಕೀತು ಮೈಸೂರು:…

18 hours ago