Andolana originals

ಬಾಲ್ಯವನ್ನು ನೆನಪಿಸಿದ ಗುರು-ಶಿಷ್ಯರ ಸ್ನೇಹ ಸಮ್ಮಿಲನ

ಎಸ್.ಎ.ಹುಸೇನ್

ಡಿ.ಚೆನ್ನಮ್ಮ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಕಾರ್ಯಕ್ರಮ

ಕಣ್ಣಾಲಿಗಳನ್ನು ಒದ್ದೆಯಾಗಿಸಿದ ಗುರು-ಶಿಷ್ಯರ ಬಾಂಧವ್ಯ

ಮಡಿಕೇರಿ: ಕಾಲ ಚಕ್ರ ಉರುಳುತ್ತಾ ಸಾಗುತ್ತದೆ, ತಲೆಗೂದಲು ನರೆಯಬಹುದು, ಮುಖದ ಮೇಲೆ ಸುಕ್ಕುಗಳು ಮೂಡಬಹುದು, ಬದುಕಿನ ಜವಾಬ್ದಾರಿಗಳು ಹೆಗಲೇರಿ ಮನುಷ್ಯ ಜಗತ್ತಿನ ಯಾವುದೋ ಮೂಲೆಯಲ್ಲಿ ನೆಲೆಸಬಹುದು. ಆದರೆ, ಬಾಲ್ಯದ ಸ್ನೇಹ ಮತ್ತು ಅಕ್ಷರ ಕಲಿಸಿದ ಗುರುಗಳ ಮೇಲಿನ ಭಕ್ತಿ ಎಂದಿಗೂ ಮಾಸದ ಹಸಿರು. ಇದಕ್ಕೆ ಸಾಕ್ಷಿಯಾಗಿದ್ದು ಕುಶಾಲನಗರದ ಸುಂದರ ಹಸಿರ ಮಡಿಲಲ್ಲಿರುವ ಖಾಸಗಿ ರೆಸಾರ್ಟ್ ಒಂದರಲ್ಲಿ ನಡೆದ ಅಪೂರ್ವ ಸಮಾರಂಭ.

ಮಾದಾಪುರದ ಪ್ರಸಿದ್ಧ ಡಿ. ಚೆನ್ನಮ್ಮ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ೨೦೦೩-೦೪ರ ಸಾಲಿನಲ್ಲಿ ೧೦ನೇ ತರಗತಿ ಮುಗಿಸಿ ಹೊರಬಂದಿದ್ದ ಹಳೇ ವಿದ್ಯಾರ್ಥಿಗಳ ಬಳಗವು ಬರೋಬ್ಬರಿ ೨೨ ವರ್ಷಗಳ ಬಳಿಕ ಒಟ್ಟಿಗೆ ಸೇರಿತ್ತು. ತಾವು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳನ್ನು ಮರೆತು ಕೌಟುಂಬಿಕ ಜವಾಬ್ದಾರಿಗಳನ್ನು ಬದಿಗಿಟ್ಟು ಬಂದಿದ್ದ ಹಳೇ ವಿದ್ಯಾರ್ಥಿಗಳು, ತಮ್ಮ ನೆಚ್ಚಿನ ಗುರುಗಳನ್ನು ಎದುರು ಕೂರಿಸಿಕೊಂಡು ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಎಂಬ ಹೆಸರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಇಡೀ ದಿನ ಭಾವನೆಗಳ ಮಹಾಪೂರವನ್ನೇ ಹರಿಸಿತು.

ಶಿಷ್ಯರ ಈ ಗುರುಭಕ್ತಿಗೆ ಮನಸೋತ ಶಿಕ್ಷಕ ವೃಂದದವರೂ ಭಾವುಕರಾದರು. ಬಳಿಕ ಹಿತವಚನ ನೀಡಿದ ಗುರುಗಳು, ಶಿಕ್ಷಕನಿಗೆ ತನ್ನ ಶಿಷ್ಯರು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬೆಳೆದು ನಿಲ್ಲುವುದಕ್ಕಿಂತ ದೊಡ್ಡ ಗುರುದಕ್ಷಿಣೆಮತ್ತೊಂದಿಲ್ಲ. ಎರಡು ದಶಕಗಳು ಕಳೆದರೂ ನಮ್ಮನ್ನು ನೆನಪಿನಲ್ಲಿಟ್ಟುಕೊಂಡು, ಈ ರೀತಿ ಗೌರವ ನೀಡುತ್ತಿರುವುದು ನಮ್ಮ ಜನ್ಮವನ್ನು ಸಾರ್ಥಕಗೊಳಿಸಿದೆ.

ಮಾದಾಪುರದ ಮಣ್ಣಿನಲ್ಲಿ ನಾವು ಬಿತ್ತಿದ ಅಕ್ಷರದ ಬೀಜಗಳು ಇಂದು ಸಮಾಜದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವುದನ್ನುನೋಡುವುದೇ ಕಣ್ಣಿಗೆ ಹಬ್ಬ ಎಂದು ಗದ್ಗದಿತ ಕಂಠದಿಂದ ಆಶೀರ್ವದಿಸಿದರು.

ಕಾರ್ಯಕ್ರಮದ ಅತ್ಯಂತ ಹೃದಯಸ್ಪರ್ಶಿ ಭಾಗವಾಗಿದ್ದು ಹಳೆಯ ನೆನಪುಗಳ ಸ್ಮರಣೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ವೇದಿಕೆಯ ಮೇಲೆ ಬಂದು ತಮ್ಮ ಶಾಲಾ ದಿನಗಳ ನೆನಪುಗಳನ್ನು ಬಿಚ್ಚಿಡುತ್ತಿದ್ದರೆ ಇಡೀ ಸಭಾಂಗಣ ಒಮ್ಮೆ ನಗೆಗಡಲಲ್ಲಿ ತೇಲುತ್ತಿತ್ತು, ಮತ್ತೊಮ್ಮೆ ಭಾವನಾತ್ಮಕ ಮೌನಕ್ಕೆ ಶರಣಾಗುತ್ತಿತ್ತು.

ಆ ದಿನಗಳೇ ಹಾಗಿದ್ದವು. ಕ್ಲಾಸು ಮುಗಿಸಿ ಬೆಲ್ ಆದ ತಕ್ಷಣ ಓಡುತ್ತಿದ್ದುದು, ಮಳೆಗಾಲದಲ್ಲಿ ಕೊಡೆ ಹಿಡಿದು ನೆನೆಯುತ್ತಾ ಶಾಲೆಗೆ ಬರುತ್ತಿದ್ದುದು, ಗಣಿತದ ಹೋಂವರ್ಕ್ ಮಾಡದಿದ್ದಾಗ ಬೆತ್ತ ಹಿಡಿದು ನಿಲ್ಲುತ್ತಿದ್ದ ಗುರುಗಳ ಬಗ್ಗೆ ಹೆದರಿಕೆ, ಕಂಟ್ರೋಲ್ ರೂಮಿನಲ್ಲಿ ಕದನಗಳು, ಗೆಳೆಯರ ಟಿಫನ್ ಬಾಕ್ಸ್ ಅನ್ನು ಮುಗಿಸುತ್ತಿದ್ದ ಕಳ್ಳಾಟಗಳು… ಹೀಗೆ ಪ್ರತಿಯೊಂದು ನೆನಪುಗಳು ಅನಾವರಣಗೊಂಡಾಗ ಎಲ್ಲರೂ ಹಳೆಯ ದಿನಗಳಿಗೇ ಜಾರಿ ಹೋಗಿದ್ದರು.

ಬೆಂಚ್ ಪಾರ್ಟ್ನರ್ ಆಗಿದ್ದವರು, ತರಗತಿಯ ಕೊನೆಯ ಬೆಂಚ್‌ನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದವರು ಇಂದು ಮುಖಾಮುಖಿಯಾಗಿ ಹಳೆಯ ಕಥೆಗಳನ್ನು ಹೇಳುತ್ತಾ, ಕೇಳಿಸಿಕೊಳ್ಳುತ್ತಾ ಕಾಲವನ್ನೇ ಮರೆತಿದ್ದರು. ೨೨ ವರ್ಷಗಳ ಸುದೀರ್ಘ ಅವಧಿಯ ನಡುವೆಯೂ ಸ್ನೇಹದ ಬಾಂಧವ್ಯ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಈ ನೆನಪುಗಳ ಸ್ಮರಣೆ ಸಾಬೀತುಪಡಿಸಿತು.

ಕಾರ್ಯಕ್ರಮದ ಕೊನೆಯಲ್ಲಿ, ಇನ್ನು ಮುಂದೆಯೂ ಇದೇ ರೀತಿ ಪರಸ್ಪರ ಸಂಪರ್ಕದಲ್ಲಿರಲು ಮತ್ತು ಕಷ್ಟ-ಸುಖಗಳಿಗೆ ಹೆಗಲು ಕೊಡಲು ಹಳೇ ವಿದ್ಯಾರ್ಥಿಗಳ ಬಳಗ ನಿರ್ಧರಿಸಿತು.

ಅಂತಿಮವಾಗಿ, ಗುರುಗಳ ಪಾದಗಳಿಗೆ ಮತ್ತೊಮ್ಮೆ ನಮಿಸಿ, ಗೆಳೆಯರನ್ನು ಬಿಟ್ಟು ಹೋಗಲು ಮನಸ್ಸಿಲ್ಲದಿದ್ದರೂ, ಮತ್ತೆ ಸಿಗೋಣ ಎಂಬ ಭರವಸೆಯೊಂದಿಗೆ, ಕಣ್ಣುಗಳಲ್ಲಿ ಮಧುರ ನೆನಪುಗಳ ಬುತ್ತಿಯನ್ನು ಕಟ್ಟಿಕೊಂಡು ಎಲ್ಲರೂ ಭಾರವಾದ ಮನಸ್ಸಿನಿಂದ ಪರಸ್ಪರ ಬೀಳ್ಕೊಟ್ಟರು. ಈ ಕಾರ್ಯಕ್ರಮ ಕೇವಲ ಒಂದು ಗೆಟ್-ಟು-ಗೆದರ್ ಆಗಿರದೆ, ಗುರು-ಶಿಷ್ಯರ ಬಾಂಧವ್ಯದ ಮತ್ತು ನಿಷ್ಕಲ್ಮಷ ಸ್ನೇಹದ ಸಾಕ್ಷ್ಯ ಚಿತ್ರದಂತೆ ಮೂಡಿಬಂದಿತು.

ಗುರುಪಾದಕ್ಕೆ ನಮಿಸಿದ ಶಿಷ್ಯರು..!:  ಯಾವ ಕೈಗಳು ಅಂದು ತಪ್ಪು ಬರೆದಾಗ ತಿದ್ದಿ ಮುನ್ನಡೆಸಿದ್ದವೋ, ಯಾವ ಧ್ವನಿ ಅಂದು ಹೆದರಿಸಿ, ಪ್ರೀತಿಯಿಂದ ಬುದ್ಧಿ ಹೇಳಿ ಬದುಕಿನ ದಾರಿ ತೋರಿಸಿತ್ತೋ, ಆ ಗುರುಗಳನ್ನು ಇಂದು ಕೃತಜ್ಞತಾ ಭಾವದಿಂದ ಸನ್ಮಾನಿಸುವ ಸೌಭಾಗ್ಯ ಹಳೇ ವಿದ್ಯಾರ್ಥಿಗಳ ಬಳಗಕ್ಕೆ ಲಭಿಸಿತ್ತು. ಶಾಲಾ ದಿನಗಳ ನೆಚ್ಚಿನ ಶಿಕ್ಷಕರನ್ನು ವೇದಿಕೆಯ ಮೇಲೆ ಸನ್ಮಾನಿಸಿ, ಅವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದಾಗ ನೆರೆದಿದ್ದ ಎಲ್ಲರ ಕಣ್ಣುಗಳು ತೇವವಾಗಿದ್ದವು. ಈ ಅಪೂರ್ವ ಗುರುವಂದನಾ ಕಾರ್ಯಕ್ರಮದಲ್ಲಿ ಗುರುಗಳಾದ ಶ್ರೀಧರ್ ಆರಾಧ್ಯ, ಶಂಕ್ರಯ್ಯ, ರೇವತಿ, ರಾಜಸುಂದರಂ, ಸವಿತಾ ರಾಜಸುಂದರಂ, ಸೋಮಯ್ಯ, ಸತೀಶ್, ಮಂಜುಳ ಶ್ರೀಧರ್ ಆರಾಧ್ಯ ಹಾಗೂ ಪಾಲಾಕ್ಷ ಅವರುಗಳು ಉಪಸ್ಥಿತರಿದ್ದು, ಶಿಷ್ಯರ ಗೌರವವನ್ನು ಸ್ವೀಕರಿಸಿ ಆಶೀರ್ವದಿಸಿದರು.

ಬಾಲ್ಯದ ಉತ್ಸಾಹ ತಂದ ‘ಫನ್ ಗೇಮ್ಸ್: ಕೇವಲ ಭಾವುಕತೆಯಷ್ಟೇ ಅಲ್ಲದೆ, ಇಡೀ ದಿನವನ್ನು ಸಂಭ್ರಮದ ಹೊಳೆಯಾಗಿಸಲು ಹತ್ತಾರು ಮೋಜಿನ ಆಟಗಳನ್ನು ಆಯೋಜಿಸಲಾಗಿತ್ತು. ಕೋಟು, ಬೂಟು ಧರಿಸಿದ್ದ ಕಾರ್ಪೊರೇಟ್ ಉದ್ಯೋಗಿಗಳು, ಉದ್ಯಮಿಗಳು, ಗೃಹಿಣಿಯರು ಎಲ್ಲರೂ ತಮ್ಮ ಇವತ್ತಿನ ಸ್ಥಾನಮಾನಗಳನ್ನು ಮರೆತು ಮತ್ತೆ ೧೦ನೇ ತರಗತಿಯ ಹುಡುಗ-ಹುಡುಗಿಯರಂತೆ ಆಟಗಳಲ್ಲಿ ಭಾಗವಹಿಸಿದ್ದರು. ಶಾಲಾ ದಿನಗಳಲ್ಲಿ ಆಡುತ್ತಿದ್ದ ಆಟಗಳ ನೆನಪು ತರುವಂತಹ ಆಟಗಳನ್ನು ಆಡುವಾಗ ಗೆದ್ದವರ ಹರ್ಷೋದ್ಗಾರ, ಸೋತವರ ಕಾಲೆಳೆಯುವ ಆಟ, ಪರಸ್ಪರ ಹರಟೆ, ಜೋಕ್‌ಗಳ ಸುರಿಮಳೆಯೇ ಆಯಿತು.

 

 

ಆಂದೋಲನ ಡೆಸ್ಕ್

Recent Posts

ಗಾಂಧಿ ಅಭಿಯಾನ ಅರಿವಿನ ಯಾನ | ಭಾಷೆ, ಬದುಕು ಕಲಿಸಿದ ನನ್ನಪ್ಪ

ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…

8 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಮತಗಳ ಪರಿಚಯ

ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…

8 hours ago

ರೆಟ್ರೋ ಫೋಟೋಗಳ ಹೊಸ ಅಲೆ

ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…

9 hours ago

ಮಹಾಪಂಚ್‌ ಕಾರ್ಟೂನ್‌

  ಮಹಾಪಂಚ್‌ ಕಾರ್ಟೂನ್‌ | ಸೆಪ್ಟಂಬರ್‌ 12 ಶನಿವಾರ

9 hours ago

ಒಳ್ಳೆಯತನಕ್ಕೂ ಕೆಟ್ಟತನಕ್ಕೂ ಜಾತಿ ಮಾನದಂಡ ಅಲ್ಲ

ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…

9 hours ago

ಓದುಗರ ಪತ್ರ | ‘ಅಕ್ಕ’ ಸಮ್ಮೇಳನದಲ್ಲೂ ‘ನಂದಿನಿ’ ಮಿಂಚಿಂಗ್!

ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…

9 hours ago