ಬೆಂಗಳೂರು : ಆಡಳಿತರೂಢ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಎಲ್ಲವೂ ಸರಿಹೋಗಿದೆ ಎನ್ನುವಷ್ಟರಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಿರುವ ಅದೊಂದೇ ಮಾತು ರಾಜ್ಯ ರಾಜಕೀಯದಲ್ಲಿ ಹಲವು ಸಂಶಯಗಳನ್ನ ಹುಟ್ಟು ಹಾಕಿದೆ.
ಮಂಗಳವಾರ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮಾಡಿ, ನಮ್ಮಿಬ್ಬರ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಮಾಧ್ಯಮಗಳ ಮುಂದೆ ಗಟ್ಟಿಯಾಗಿ ಹೇಳಿದರು.
ಇದರ ಬೆನ್ನಲ್ಲೇ ವಿಧಾನ ಸೌಧ ಕೆಂಗಲ್ ಗೇಟ್ ಬಳಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಬಳಿ ಆಪ್ತವಾಗಿ ಆಡಿರುವ ಅದೊಂದು ಮಾತು ಕಾಂಗ್ರೆಸ್ ಪಕ್ಷದಲ್ಲಿ ಮುಂದೆ ನಡೆಯಬಹುದಾದ ವಿದ್ಯಮಾನಗಳಿಗೆ ಮುನ್ನುಡಿ ಬರೆಯುವಂತಿದೆ.
ವಿಧಾನಸೌಧ ಕೆಂಗಲ್ ಗೇಟ್ ಬಳಿ ಸಿಎಂ ಸಿದ್ದರಾಮಯ್ಯ ಶಾಸಕ ಬೇಳೂರು ಗೋಪಾಲಕೃಷ್ಣ ಜೊತೆಗಿನ ಈ ಅನೌಪಚಾರಿಕ ರಾಜಕೀಯ ಮಾತು ಸಾಕಷ್ಟು ಕುತೂಹಲ ಕೆರಳಿಸಿತು. ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ಉದಯ ಕದಲೂರು ಜೊತೆ ವಿಧಾನಸೌಧದಿಂದ ತೆರಳುವ ವೇಳೆ ಲೋಕಾಭಿರಾಮವಾಗಿ ಮಾತನಾಡುತ್ತಾ ಪ್ರಸಕ್ತ ರಾಜಕೀಯ ವಿದ್ಯಮಾನದ ಬಗ್ಗೆ ಮಾತನಾಡಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಸಿಎಂ ಸಿದ್ದರಾಮಯ್ಯ , ರಾಜಕೀಯ ಶಾಶ್ವತ ಅಲ್ಲ. ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ರಾಜಕೀಯ ನಮ್ಮಪ್ಪನ ಆಸ್ತಿ ಅಲ್ಲ. ಏನ್ ಆಗುತ್ತೋ ಆಗಲಿ. ಯಾವತ್ತೂ ಯೋಚನೆ ಮಾಡಿ ಗೊತ್ತೇ ಇಲ್ಲ ನಂಗೆ. ಏನ್ ಆಗುತ್ತೋ ಆಗಲಿ. ರಾಜಕೀಯ ನಮ್ಮಪ್ಪನ ಆಸ್ತಿನಾ? ಏನು ಆಗುತ್ತೋ ಆಗಲಿ. ರಾಜಕೀಯ ಶಾಶ್ವತ ಅಲ್ಲ ಎಂದು ವೈರಾಗ್ಯದ ರೀತಿಯಲ್ಲಿ ಮಾತನಾಡಿದರು. ಅಧಿಕಾರ ಹಂಚಿಕೆ ಚರ್ಚೆ, ಪವರ್ ಫೈಟ್ ಮಧ್ಯೆ ಸಿಎಂ ಸಿದ್ದರಾಮಯ್ಯ ಅನೌಪಚಾರಿಕವಾಗಿ ಪ್ರಸಕ್ತ ರಾಜಕೀಯ ವಿದ್ಯಮಾನದ ಹಿನ್ನೆಲೆ ಈ ರೀತಿ ಶಾಸಕರ ಜೊತೆ ಸಂಭಾಷಣೆ ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ರಾಜ್ಯದಲ್ಲಿ ಪವರ್ ಶೇರಿಂಗ್ ಹಾಗೂ ಸಿಎಂ ಬದಲಾವಣೆ ಕುರಿತು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಬಳಗದ ಶಾಸಕರು ತಮ್ಮದೇ ಆದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ತಾವೇ ಪೂರ್ಣಾವಧಿ ಸಿಎಂ ಎನ್ನುವ ರೀತಿ ಹೇಳಿಕೆಗಳನ್ನು ನೀಡುತ್ತಿದ್ದರೆ, ಇತ್ತ ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಾನೂ ಸಿಎಂ ಕುರ್ಚಿಯ ಆಕಾಂಕ್ಷಿ, ಕೊಟ್ಟ ಮಾತಿನಂತೆ ತನಗೆ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಅವರು ತನಗೆ ಬಿಟ್ಟುಕೊಡಬೇಕು ಎನ್ನುವಂತೆ ಹೇಳಿಕೆ ಕೊಡುವುದರ ಜೊತೆಗೆ ಎಕ್ಸ್ ಪೋಸ್ಟ್ಗಳನ್ನು ಸಹ ಮಾಡುತ್ತಿದ್ದಾರೆ.
ಸಭೆ ಮುಗಿಸಿ ಹೊರಬರುತ್ತಿದ್ದ ಸಿಎಂ ಸಿದ್ದರಾಮಯ್ಯಗೆ ಅಡ್ಡ ಬಂದು ನಿಂತ ಬೇಳೂರು ಗೋಪಾಲಕೃಷ್ಣ, ಮೊದಲು ಹಾಸ್ಯದ ಲಹರಿಯಲ್ಲಿ ನಾಟಿ ಕೋಳಿ ಸಾಂಬಾರ್ ಹೇಗಿತ್ತು ಸಾರ್? ಎಂದು ಪ್ರಶ್ನಿಸಿದ್ದಾರೆ. ಆದರೆ ಸಿಎಂ ಅವರ ಉತ್ತರ ಸಂಪೂರ್ಣ ಗಂಭೀರವಾಗಿತ್ತು. ರಾಜಕೀಯ ಶಾಶ್ವತ ಅಲ್ಲ ಗೋಪಾಲಕೃಷ್ಣ. ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ರಾಜಕೀಯ ನಮ್ಮಪ್ಪನ ಆಸ್ತಿಯಾ? ಏನ್ ಆಗುತ್ತೋ ಆಗಲಿ” ಎಂದು ಸಿಎಂ ಅಚ್ಚರಿ ಮಾತುಗಳನ್ನು ಆಡಿದ್ದಾರೆ.
ಇದನ್ನೂ ಓದಿ:-ಕಣ್ಮನ ಸೆಳೆದ ಕೃಷಿ ಪ್ರಾತ್ಯಕ್ಷಿಕೆಗಳು
ಕಳೆದ ಕೆಲವು ತಿಂಗಳುಗಳಿಂದ ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ಮಾಡುತ್ತಿರುವ ಬೇಳೂರು ಗೋಪಾಲಕೃಷ್ಣ ದೆಹಲಿಯಲ್ಲಿಯೂ ಹೈಕಮಾಂಡ್‌ಗೆ ಒತ್ತಡ ಹೇರಿದ್ದರು. ಆದರೆ ಸಿಎಂ ಅವರ ಈ ಮಾತುಗಳು ಸಚಿವ ಸ್ಥಾನ ಖಾತರಿಯಿಲ್ಲ ಎಂಬ ಸ್ಪಷ್ಟ ಸಂದೇಶವನ್ನೇ ನೀಡಿವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ನಾನು ಯಾವತ್ತೂ ಯೋಚನೆ ಮಾಡಿ ಗೊತ್ತಿಲ್ಲ. ಏನ್ ಆಗುತ್ತೋ ಆಗಲಿ ಎಂಬ ಸಿಎಂ ಅವರ ಮಾತುಗಳು ಕೇವಲ ಬೇಳೂರಿಗಲ್ಲ, ಪಕ್ಷದೊಳಗಿನ ಎಲ್ಲ ಸಚಿವ ಸ್ಥಾನಾಕಾಂಕ್ಷಿಗಳಿಗೂ ಮತ್ತು ತಮ್ಮ ಸಿಎಂ ಕುರ್ಚಿ ವಿಚಾರವಾಗಿಯೂ ಒಂದು ಎಚ್ಚರಿಕೆಯ ಸಂದೇಶವಾಗಿದೆ ಎನ್ನಲಾಗಿದೆ.
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಕಿತ್ತಾಟ, ಪವರ್ ಶೇರಿಂಗ್ ಪಾಲಿಟಿಕ್ಸ್, ಸಚಿವ ಸ್ಥಾನಕ್ಕಾಗಿ ಬೇಡಿಕೆಗಳು ಇವೆಲ್ಲಾ ಭಾರೀ ಸದ್ದು ಮಾಡುತ್ತಿದೆ. ಬೇಳೂರು ಗೋಪಾಲಕೃಷ್ಣ, ರಾಜು ಕಾಗೆ, ರಾಕೇಶ್ ಪಾಟೀಲ್, ವಿನಯ್ ಕುಲಕರ್ಣಿ ಸೇರಿದಂತೆ ಹಲವು ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಇನ್ನೂ ಯಾರಿಗೂ ಭರವಸೆ ನೀಡಿಲ್ಲ, ಯಾರನ್ನೂ ನಿರಾಶೆಗೊಳಿಸಿಲ್ಲ ಎಂಬ ನಿಲುವಿನಲ್ಲಿದ್ದಾರೆ. ಇತ್ತೀಚೆಗೆ ಡಿಕೆಶಿ ಮನೆಯಲ್ಲಿ ನಡೆದ ಬ್ರೇಕ್‌ಫಾಸ್ಟ್ ಭೇಟಿ, ಅಧಿಕಾರ ಹಂಚಿಕೆ ಯುದ್ಧ, ದೆಹಲಿಯಲ್ಲಿ ನಡೆಯುತ್ತಿರುವ ಸಭೆಗಳು ಎಲ್ಲದರ ನಡುವೆಯೂ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಮಾತೇ ಅಂತಿಮ ಎಂದು ಹೇಳುತ್ತಿದ್ದಾರೆ. ಇದೀಗ ಮತ್ತೆ ಅಚ್ಚರಿ ಹೇಳಿಕೆ ಕೊಟ್ಟ ಸಿಎಂ ಏನ್ ಆಗುತ್ತೋ ಆಗಲಿ, ನಾನು ತಲೆ ಕಡೆಸಿಕೊಳ್ಳುವುದಿಲ್ಲ, ರಾಜಕೀಯ ಶಾಶ್ವತ ಅಲ್ಲ, ನಮ್ಮಪ್ಪನ ಆಸ್ತಿಯೂ ಅಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ರಾಜಕೀಯದಲ್ಲಿ 40 ವರ್ಷಗಳ ಅನುಭವವಿರುವ ಸಿದ್ದರಾಮಯ್ಯ ಈ ಹಿಂದೆಯೂ ನಾನು ರಾಜಕೀಯಕ್ಕೆ ಶಾಶ್ವತನಲ್ಲ, ರಾಜಕೀಯ ನನ್ನನ್ನು ಶಾಶ್ವತವಾಗಿ ಬಿಟ್ಟಿಲ್ಲ ಎಂಬ ಮಾತುಗಳನ್ನು ಹಲವು ಬಾರಿ ಹೇಳಿದ್ದಾರೆ. ಈ ಬಾರಿ ಬೇಳೂರಿಗೆ ನೇರವಾಗಿ ಹೇಳಿರುವುದು ಪಕ್ಷದೊಳಗೆ ದೊಡ್ಡ ಸಂದೇಶವಾಗಿದೆ. ಆದರೆ ಪಕ್ಷದೊಳಗೆ ಸಿಎಂ ಸಿದ್ದರಾಮಯ್ಯ ಬೇಸರಗೊಂಡಿದ್ದಾರಾ? ಎಂಬ ಚರ್ಚೆ ಆರಂಭವಾಗಿದೆ. ರಾಜಕೀಯ ಶಾಶ್ವತ ಅಲ್ಲ, ಆದರೆ ಸಿಎಂ ಅವರ ಈ ಮಾತುಗಳು ರಾಜ್ಯ ಕಾಂಗ್ರೆಸ್‌ನಲ್ಲಿ ಶಾಶ್ವತ ಚರ್ಚೆಗೆ ಕಾರಣವಾಗಲಿವೆ ಎಂಬುದರಲ್ಲಿ ಸಂದೇಹವಿಲ್ಲ.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…
ಮಂಡ್ಯ: ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಮಂಡ್ಯದ ವಿ.ಸಿಫಾರಂನಲ್ಲಿ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು…
ಬೆಂಗಳೂರು: ಆರ್.ಅಶೋಕ್ ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ಇಳಿಸದೇ ಹೋದರೆ ಬಿಜೆಪಿ ಶಾಶ್ವತವಾಗಿ ವಿಪಕ್ಷದಲ್ಲಿ ಇರುತ್ತದೆ ಎಂದು ಸಚಿವ ಎಂ.ಬಿ.ಪಾಟೀಲ್…
ನವದೆಹಲಿ: ಭಾರತ-ರಷ್ಯಾ ಉಭಯ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ನವದೆಹಲಿಯ…