ರಾಜ್ಯ

‌ರಾಜ್ಯ ರೈಲ್ವೆ ಯೋಜನೆಗಳ ಬಗ್ಗೆ ಕೇಂದ್ರ ಸಚಿವ ಸೋಮಣ್ಣ ಬೇಡಿಕೆ ಇಟ್ಟ ಸಚಿವ ಎಂ.ಬಿ ಪಾಟೀಲ್

ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಸಚಿವ ವಿ.ಸೋಮಣ್ಣ ಸಭೆ, ಸಚಿವ ಎಂ.ಬಿ.ಪಾಟೀಲ ಹಾಜರು
ಬೆಂಗಳೂರು- ಮಂಗಳೂರು ಜೋಡಿ ಮಾರ್ಗಕ್ಕೆ ರಾಜ್ಯದ ಮನವಿ
ಚಿತ್ರದುರ್ಗ- ಆಲಮಟ್ಟಿ ಹೊಸ ಮಾರ್ಗದ ಸಮೀಕ್ಷೆ: ಸೋಮಣ್ಣ

ಬೆಂಗಳೂರು: ಬೆಂಗಳೂರು- ಮಂಗಳೂರು ಹಾಗೂ ಹುಬ್ಬಳ್ಳಿ- ಅಂಕೋಲ ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣ; ಚಿತ್ರದುರ್ಗ- ಹೊಸಪೇಟೆ- ಆಲಮಟ್ಟಿ ನಡುವೆ ಹೊಸ ರೈಲು ಮಾರ್ಗ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎನ್ನುವ ಬೇಡಿಕೆಯನ್ನು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಮುಂದೆ ಸೋಮವಾರ ಮಂಡಿಸಿದರು.

ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ಸಲುವಾಗಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಪಾಟೀಲ ಅವರು ಇವು ಸೇರಿದಂತೆ ಹಲವು ರೈಲ್ವೆ ಯೋಜನೆಗಳ ಬಗ್ಗೆ ಸಚಿವ ಸೋಮಣ್ಣ ಅವರ ಗಮನ ಸೆಳೆದರು. ಬಳಿಕ ಈ ಕುರಿತ ಪತ್ರಗಳನ್ನೂ ಸಚಿವರು ಸೋಮಣ್ಣ ಅವರಿಗೆ ನೀಡಿದರು.

ಬಂದರು ನಗರವಾದ ಮಂಗಳೂರಿಗೆ ರೈಲ್ವೆ ಸಂಪರ್ಕ ಇದ್ದರೂ ಅದು ಜೋಡಿ ಮಾರ್ಗವಾಗಿ ಇನ್ನೂ ಮಾರ್ಪಾಡಾಗಿಲ್ಲ. ಹೀಗಾಗಿ ಸರಕು ಸಾಗಣೆ ಸೇರಿದಂತೆ ಕೈಗಾರಿಕಾ ಬೆಳವಣಿಗೆಯೂ ಕುಂಠಿತವಾಗಿದೆ. ಇದೇ ರೀತಿ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಯಾದರೂ ಅಲ್ಲಿನ ಬಂದರನ್ನು ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಹೀಗೆ ಮಾಡುವುದರಿಂದ ರಾಜ್ಯದ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ಅನುಕೂಲ ಆಗುತ್ತದೆ ಎಂದು ಪಾಟೀಲ ಅವರು ರೈಲ್ವೆ ಸಚಿವರ ಗಮನ ಸೆಳೆದರು.

ಬೆಂಗಳೂರು- ಮಂಗಳೂರು ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣದ ಜತೆಗೆ ಸಕಲೇಶಪುರ- ಸುಬ್ರಹ್ಮಣ್ಯ ನಡುವೆ ಸುರಂಗ ರೈಲ್ವೆ ಮಾರ್ಗ ನಿರ್ಮಾಣದ ಅಗತ್ಯವನ್ನೂ ಸಚಿವರು ರೈಲ್ವೆ ಸಚಿವರ ಗಮನಕ್ಕೆ ತಂದಿದ್ದಾರೆ. ಇತ್ತೀಚೆಗೆ ಮಳೆ ಕಾರಣಕ್ಕೆ ಭೂಕುಸಿತವಾಗಿ, ಹಲವು ಬಾರಿ ರೈಲ್ವೆ ಸಂಚಾರವನ್ನು ಈ ಮಾರ್ಗದಲ್ಲಿ ರದ್ದು ಮಾಡಲಾಯಿತು. ಹೀಗಾಗಿ ಸುರಂಗ ರೈಲ್ವೆ ಮಾರ್ಗ ನಿರ್ಮಾಣದ ಸಾಧ್ಯತೆ ಕಡೆಗೂ ಹೆಚ್ಚಿನ ಗಮನ ನೀಡಬೇಕು ಎಂದು ಪಾಟೀಲ ಅವರು ಮನವಿ ಮಾಡಿದರು.

ಚಿತ್ರದುರ್ಗ- ಹೊಸಪೇಟೆ- ಕೊಪ್ಪಳ- ಆಲಮಟ್ಟಿ- ವಿಜಯಪುರ ಮಾರ್ಗದ ಹೊಸ ರೈಲ್ವೆ ಯೋಜನೆಗೆ ಒಪ್ಪಿಗೆ ನೀಡುವಂತೆಯೂ ಸಚಿವರು ಕೋರಿಕೆ ಸಲ್ಲಿಸಿದರು. ಇದರಿಂದ ಬೆಂಗಳೂರು- ವಿಜಯಪುರ ಮತ್ತು ಸೊಲ್ಲಾಪುರ ನಡುವಿನ ಪ್ರಯಾಣ ಅವಧಿ ಕಡಿಮೆ ಆಗಲಿದೆ. ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವ ಸೋಮಣ್ಣ ಅವರು ಈ ಮಾರ್ಗದ ಸಮೀಕ್ಷೆ ನಡೆಯುತ್ತಿದ್ದು, ಬಳಿಕ ಯೋಜನೆ ಅನುಷ್ಠಾನ ಕುರಿತು ತೀರ್ಮಾನಿಸಲಾಗುವುದು ಎಂದು ಪ್ರತಿಕ್ರಿಯೆ ನೀಡಿದರು.

ವಿಜಯಪುರ: 4 ಗಂಟೆ ಉಳಿತಾಯ:
ಬೆಂಗಳೂರು- ವಿಜಯಪುರ ನಡುವಿನ ರೈಲ್ವೆ ಪ್ರಯಾಣವನ್ನ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಕನಿಷ್ಠ ನಾಲ್ಕು ಗಂಟೆ ಕಡಿಮೆ ಮಾಡಬಹುದು. ಸದ್ಯ 14 ಗಂಟೆ ಆಗುತ್ತಿದೆ. ಅದನ್ನು 10 ಗಂಟೆಗೆ ಇಳಿಸಲು ಕೆಲವು ಮಾರ್ಗೋಪಾಯಗಳು ಇವೆ ಎಂದೂ ಸಚಿವ ಪಾಟೀಲ ವಿವರಿಸಿದರು. ವಿಜಯಪುರ ಕಡೆಗೆ ಹೋಗುವ ರೈಲುಗಳನ್ನು ಹುಬ್ಬಳ್ಳಿ ಕೇಂದ್ರ ನಿಲ್ದಾಣಕ್ಕೆ ಬರದ ಹಾಗೆ ತಡೆದು, ಹುಬ್ಬಳ್ಳಿ ದಕ್ಷಿಣ ರೈಲ್ವೆ ಸ್ಟೇಷನ್ ನಿಂದ ನೇರವಾಗಿ ಗದಗ ಕಡೆ ಹೋಗುವ ಹಾಗೆ ಮಾಡಬೇಕು. ಗದಗದಲ್ಲೂ ಬೈಪಾಸ್ ಮೂಲಕ ವಿಜಯಪುರದ ಕಡೆ ಹೋಗುವ ಹಾಗೆ ಮಾಡುವುದರಿಂದ ಸಾಕಷ್ಟು ಸಮಯ ಉಳಿತಾಯ ಮಾಡಬಹುದು‌ ಎಂದು ಸಚಿವರು ಸಲಹೆ ನೀಡಿದರು. ಈ ಪರಿಕಲ್ಪನೆಯನ್ನು ರೈಲ್ವೆ ಸಚಿವರು ಪರಿಶೀಲಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚಿಸಿದರು. ಗದಗ ಬೈಪಾಸ್‌ ಮೂಲಕ ರೈಲು ಹಾದು ಹೋಗಲು ಸ್ಥಳೀಯರ ವಿರೋಧ ಇದೆ ಎಂದು ಅಧಿಕಾರಿಗಳು ಹೇಳಿದ್ದಕ್ಕೆ ಹೊಸ ರೈಲು ಬಿಟ್ಟಾಗ ಆ ಸಮಸ್ಯೆ ಬರುವುದಿಲ್ಲ ಎಂದು ಪಾಟೀಲ ಸಲಹೆ ನೀಡಿದರು.

ಧಾರವಾಡ- ಕಿತ್ತೂರು- ಬೆಳಗಾವಿ ನಡುವಿನ ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಸಮಸ್ಯೆ ಇದ್ದು ಆದಷ್ಟು ಬೇಗ ಭೂಮಿ ಕೊಡಿಸಲು ಕ್ರಮ ವಹಿಸಲಾಗುವುದು. ಈ‌ ನಿಟ್ಟಿನಲ್ಲಿ ಸದ್ಯದಲ್ಲೇ ಸ್ಥಳೀಯ ಜನಪ್ರತಿನಿಧಿಗಳ ಜತೆ ಸಭೆ ನಡೆಸಲಾಗುವುದು ಎಂದು ಸಚಿವ ಪಾಟೀಲ ಅವರು ಸೋಮಣ್ಣ ಅವರಿಗೆ ಅಭಯ ನೀಡಿದರು.

ತುಮಕೂರು- ದಾವಣಗೆರೆ ಮತ್ತು ತುಮಕೂರು- ರಾಯದುರ್ಗ ಯೋಜನೆಗಳನ್ನು ನಿಗದಿಗಿಂತ‌ ಮೊದಲೇ ಮುಗಿಸಲು ಆದ್ಯತೆ ನೀಡಬೇಕೆಂದೂ ಪಾಟೀಲ ಅವರು ಮನವಿ ಮಾಡಿದರು.
ಬಿಡದಿ- ಕನಕಪುರ- ಚಾಮರಾಜನಗರ ರೈಲ್ವೆ ಯೋಜನೆ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದೆ. ಇದಕ್ಕೆ ಕಾಯಕಲ್ಪ ನೀಡಬೇಕು ಎನ್ನುವ ಮನವಿಗೂ ಸಚಿವ ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸದ್ಯದಲ್ಲೇ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

ವಿಜಯಪುರಕ್ಕೆ ವಂದೇ ಭಾರತ ರೈಲು?
ಇನ್ನೂ 10 ವಂದೇ ಭಾರತ ರೈಲುಗಳ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ. ಅದರಲ್ಲಿ ಒಂದು ಕರ್ನಾಟಕಕ್ಕೂ ಬರಲಿದೆ. ಅದು ಯಾವ ಮಾರ್ಗದಲ್ಲಿ ಸಂಚರಿಸಲಿದೆ ಎಂಬುದು ಇನ್ನೂ ನಿಖರವಾಗಿ ಗೊತ್ತಿಲ್ಲ. ಮೂಲಸೌಕರ್ಯ ಅಭಿವೃದ್ಧಿ ಸಚಿವರ ಜಿಲ್ಲೆಯಾದ ವಿಜಯಪುರಕ್ಕೇ ಒಂದು ವಂದೇ ಭಾರತ ರೈಲು ಬಂದರೂ ಆಶ್ಚರ್ಯ ಇಲ್ಲ ಎಂದು ಸಚಿವ ಸೋಮಣ್ಣ ಅವರು ಪಾಟೀಲ ಅವರ ಮನವಿಗೆ ಸ್ಪಂದಿಸಿದರು.

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ನಮ್ಮ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್‌, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ, ಕೆ-ರೈಡ್‌ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್.ಮಂಜುಳಾ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮೈಸೂರಿನಲ್ಲಿ 300 ಎಕರೆ ಜಮೀನಿನಲ್ಲಿ ಲೇಔಟ್‌ ನಿರ್ಮಾಣ: ಸಚಿವ ಭೈರತಿ ಸುರೇಶ್‌

ಬೆಳಗಾವಿ: ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿದರೆ ಅತಿವೇಗವಾಗಿ ಬೆಳೆಯುತ್ತಿರುವ ಮೈಸೂರಿನಲ್ಲಿ ಸುಮಾರು 300 ಎಕರೆ ಜಮೀನಿನಲ್ಲಿ ಲೇಔಟ್ ನಿರ್ಮಾಣ ಮಾಡಿ ಸಾರ್ವಜನಿಕರಿಗೆ…

34 mins ago

ಋತುಚಕ್ರ ರಜೆ: ತಡೆಯಾಜ್ಞೆ ಮಾರ್ಪಡಿಸಿ ನಾಳೆಗೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ರಾಜ್ಯ ಸರ್ಕಾರ ನೀಡಿದ್ದ ರಜೆ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಆದರೆ ಈ…

55 mins ago

482 ಎಕರೆ ಅರಣ್ಯ ಭೂಮಿ ಕಬಳಿಕೆ ಯತ್ನ: ಸಿಐಡಿ ತನಿಖೆ ಕೋರಿ ಸಿಎಂಗೆ ಪತ್ರ ಬರೆದ ಈಶ್ವರ್‌ ಖಂಡ್ರೆ

ಬೆಳಗಾವಿ:  532 ಎಕರೆ ಅರಣ್ಯ, ಸರ್ಕಾರಿ ಭೂಮಿ ಕಬಳಿಸಲು ನಕಲಿ ದಾಖಲೆ ಸಲ್ಲಿಸಿ ನ್ಯಾಯಾಲಯದಿಂದ ಆದೇಶ ಪಡೆದಿರುವ ವ್ಯಕ್ತಿಯ ಹಿಂದಿರುವವರ…

1 hour ago

ಟಾಕ್ಸಿಕ್‌ ಚಿತ್ರದ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರಾಕಿಂಗ್‌ ಸ್ಟಾರ್‌ ಯಶ್‌

ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್‌ನ ಹೊಸ ಪೋಸ್ಟರ್‌ ಅನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಬಗ್ಗೆ…

1 hour ago

ಮೈಸೂರು: ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಜಾಗೃತಿ ರಥಯಾತ್ರೆಗೆ ಚಾಲನೆ

ಮೈಸೂರು: ಡ್ರಗ್ಸ್‌ ಮುಕ್ತ ಕರ್ನಾಟಕ ಅಭಿಯಾನ ಜನಜಾಗೃತಿ ಆಂದೋಲನದ ರಥಯಾತ್ರೆಗೆ ಮೈಸೂರಿನಲ್ಲಿ ಇಂದು ಚಾಲನೆ ದೊರೆಯಿತು. ಮೈಸೂರು ನಗರದ ಜೆ.ಕೆ…

2 hours ago

ರಾಜ್ಯದಲ್ಲಿ ಮತ್ತೆ ಟಿಪ್ಪು ಜಯಂತಿ: ಆಡಳಿತಾರೂಢ ಕಾಂಗ್ರೆಸ್‌ ನಡೆಗೆ ವಿಪಕ್ಷ ಬಿಜೆಪಿ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ ಶಾಸಕ ಕಾಶಪ್ಪನವರ್‌…

3 hours ago