ರಾಜ್ಯ

ರೈಲ್ವೆ ಸಚಿವ ವಿ.ಸೋಮಣ್ಣ, ಸಚಿವ ಎಂ.ಬಿ.ಪಾಟೀಲ ಪ್ರಗತಿ ಪರಿಶೀಲನೆ

ಉಪನಗರ ರೈಲು ಯೋಜನೆ
ಕಾರಿಡಾರ್‌-2 & 4: 2026ಕ್ಕೆ ಪೂರ್ಣ

ಬೆಂಗಳೂರು: ಚಿಕ್ಕಬಾಣಾವರ- ಬೈಯ್ಯಪ್ಪನಹಳ್ಳಿ (ಕಾರಿಡಾರ್‌-2, 25 ಕಿ.ಮೀ) ಮತ್ತು ಹೀಲಲಗಿ- ರಾಜಾನುಕುಂಟೆ (ಕಾರಿಡಾರ್‌-4, 46.88 ಕಿ.ಮೀ) ಉಪನಗರ ರೈಲ್ವೆ ಯೋಜನೆಗಳನ್ನು 2026ರ ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸಿ, ನಾಡಿಗೆ ಸಮರ್ಪಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಸೋಮವಾರ ಇಲ್ಲಿ ಪ್ರಕಟಿಸಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಬ್ಬರೂ ಸಚಿವರು ತಮ್ಮ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಕೆ-ರೈಡ್‌ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

ಕೆಲವೊಂದು ಕಡೆ ಭೂಸ್ವಾಧೀನದ ಸಮಸ್ಯೆ ಇದ್ದು, ಮೂರು ತಿಂಗಳ ಒಳಗೆ ಭೂಮಿ ಹಸ್ತಾಂತರಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಕಾಮಗಾರಿ ವಿಳಂಬಕ್ಕೆ ಯಾವ ಸಬೂಬು ಹೇಳದೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸಚಿವರಿಬ್ಬರೂ ಸೂಚಿಸಿದರು.

ಒಟ್ಟು ನಾಲ್ಕು ಕಾರಿಡಾರ್‌ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಕಾಮಗಾರಿಗೆ ಚುರುಕು ಮುಟ್ಟಿಸಲು ಕ್ರಮ ತೆಗೆದುಕೊಂಡಿದ್ದು, ನಿಗದಿತ ಅವಧಿಯೊಳಗೇ ಈ ಎರಡೂ ಕಾರಿಡಾರ್‌ ಯೋಜನೆಗಳನ್ನು ಉದ್ಘಾಟಿಸಲಾಗುವುದು. ಇದರ ನಂತರ ಇತರ ಎರಡು ಕಾರಿಡಾರ್‌ ಯೋಜನೆಗಳ ಜಾರಿ ಸಂಬಂಧ ಚರ್ಚಿಸಲಾಗುವುದು ಎಂದರು.

ಸಮನ್ವಯ ಸಭೆಗೆ ಸೂಚನೆ:
ಬೆಂಗಳೂರು ಮೆಟ್ರೊ, ಉಪನಗರ ರೈಲು ಯೋಜನೆ ಮತ್ತು ರೈಲ್ವೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕಾಗಿದೆ. ಒಂದಕ್ಕೊಂದು ಸ್ಪರ್ಧೆವೊಡ್ಡಿಕೊಳ್ಳುವುದರ ಬದಲು, ಎಲ್ಲಿ ಯಾರ ಸೇವೆ ಇಲ್ಲವೊ ಅಲ್ಲಿ ಮತ್ತೊಬ್ಬರು ಸೇವೆ ನೀಡುವಂತಾಗಲಿ. ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳನ್ನೂ ಸೇರಿಸಿಕೊಂಡು ಸಮನ್ವಯದ ಸಭೆಗಳನ್ನು ನಡೆಸಬೇಕು. ಪರಸ್ಪರ ಪೂರಕವಾಗಿ ಕೆಲಸ ಮಾಡುವುದರಿಂದ ಅನಗತ್ಯ ವಿಳಂಬವನ್ನು ತಡೆಯಬಹುದು ಎಂದು ಅವರು ಸಚಿವ ಸೋಮಣ್ಣ ಸಲಹೆ ನೀಡಿದರು.

ರೈಲ್ವೆ ಬೋಗಿಗಳ ಸಮಸ್ಯೆ:
ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆ ಬೋಗಿಗಳನ್ನು ಉತ್ಪಾದಿಸಿ, ಸರಬರಾಜು ಮಾಡಲು ಕೆ-ರೈಡ್ ಟೆಂಡರ್‌ ಕರೆದಿದ್ದು, ಯಾವ ಸಂಸ್ಥೆಯೂ ಇದರಲ್ಲಿ ಭಾಗವಹಿಸಿಲ್ಲ. ಹೀಗಾಗಿ ಈ ವಿಷಯದಲ್ಲಿ ರೈಲ್ವೆಯ ನೆರವು ನೀಡಬೇಕೆನ್ನುವ ಸಚಿವ ಎಂ.ಬಿ.ಪಾಟೀಲ ಅವರ ಮನವಿಗೆ ಸ್ಪಂದಿಸಿದ ಸೋಮಣ್ಣ ಅವರು ಆದಷ್ಟು ಬೇಗ ದೆಹಲಿಯಲ್ಲಿ ಸಭೆ ಆಯೋಜಿಸಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ರೈಲ್ವೆ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಇದಕ್ಕೊಂದು ಪರಿಹಾರ ಸೂಚಿಸುವುದಾಗಿಯೂ ಹೇಳಿದರು.
2026ರ ಅಂತ್ಯದಲ್ಲಿ ಎರಡೂ ಕಾರಿಡಾರ್‌ ಕಾಮಗಾರಿ ಮುಗಿಯಲು ಯೋಜನೆ ರೂಪಿಸಿದ್ದು, ಅದಕ್ಕಿಂತ ಕನಿಷ್ಠ ಆರು ತಿಂಗಳು ಮೊದಲು ರೈಲ್ವೆ ಬೋಗಿಗಳ ಸರಬರಾಜು ಆಗಬೇಕಾಗುತ್ತದೆ. ಇಲ್ಲದಿದ್ದರೆ ಆ ವೇಳೆಗೆ ರೈಲ್ವೆ ಸಂಚಾರ ಆರಂಭಿಸಲು ಕಷ್ಟ ಆಗುತ್ತದೆ ಎಂದು ಅಧಿಕಾರಿಗಳು ಹೇಳಿದ ನಂತರ ಇದರ ಗಂಭೀರತೆಯನ್ನು ಗಮನಿಸಿ, ತಕ್ಷಣ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಸೋಮಣ್ಣ ನೀಡಿದರು.

ಉಪನಗರ ರೈಲ್ವೆ ಯೋಜನೆ ವಿಸ್ತರಣೆ:
ಬೆಂಗಳೂರಿನ ನೆರೆಹೊರೆಯ ನಗರ/ಪಟ್ಟಣಗಳಿಗೆ ಸಂಪರ್ಕ ಕಲ್ಪಿಸಲು ಉಪನಗರ ರೈಲ್ವೆ ಯೋಜನೆಯ ವಿಸ್ತರಣೆ ಅಗತ್ಯ ಇದೆ. ಬೆಂಗಳೂರಿನಿಂದ ಸಮೀಪದ ತುಮಕೂರು, ಮೈಸೂರು, ಮಾಗಡಿ, ಗೌರೀಬಿದನೂರು, ಕೋಲಾರ ನಗರಗಳಿಗೆ ಸಂಪರ್ಕ ಕಲ್ಪಿಸುವ ಬಗ್ಗೆಯೂ ಚರ್ಚೆ ಆಗಿದೆ. ಇದನ್ನು ಯಾವ ರೀತಿ ಕೈಗೆತ್ತಿಕೊಳ್ಳಬೇಕು ಎಂಬುದರ ಬಗ್ಗೆಯೂ ಅಧಿಕಾರಿಗಳ ಮಟ್ಟದಲ್ಲಿ ಮೊದಲು ಸಭೆಗಳನ್ನು ಮಾಡಿ ನಂತರ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ಸೋಮಣ್ಣ ಅವರು ಸಚಿವ ಪಾಟೀಲ ಅವರ ಮನವಿಗೆ ಸ್ಪಂದಿಸಿದರು.

ಬೆಂಗಳೂರು- ಯುಲಂಹಕ- ದೇವನಹಳ್ಳಿ ನಡುವೆ ಸಂಪರ್ಕ ಕಲ್ಪಿಸುವ ಕಾರಿಡಾರ್‌-1 ಉಪನಗರ ರೈಲ್ವೆ ಯೋಜನೆಯನ್ನು ಚಿಕ್ಕಬಳ್ಳಾಪುರ ಮೂಲಕ ಕೋಲಾರಕ್ಕೆ ಸಂಪರ್ಕಿಸುವ ಬದಲು ದೇವನಹಳ್ಳಿಯಿಂದಲೇ ನೇರವಾಗಿ ಕೋಲಾರಕ್ಕೆ ಸಂಪರ್ಕ ಕಲ್ಪಿಸುವ ಸಾಧ್ಯಾಸಾಧ್ಯತೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ವರ್ತುಲ ರೈಲ್ವೆಗೆ ಸಂಪರ್ಕ
ಉಪನಗರ ರೈಲ್ವೆ ಯೋಜನೆಯನ್ನು ಬೆಂಗಳೂರು ಸುತ್ತಲಿನ ವರ್ತುಲ ರೈಲ್ವೆ ಹಳಿಗೆ ಸಂಪರ್ಕ ಕಲ್ಪಿಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಯಿತು. ಇದೊಂದು ಒಳ್ಳೆಯ ಪರಿಕಲ್ಪನೆ ಆಗಿದ್ದು, ಇದರಿಂದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಹೇಳಿದರು.
ಸುಮಾರು 21,000 ಕೋಟಿ ವೆಚ್ಚದ 281 ಕಿ.ಮೀ ವರ್ತುಲ ರೈಲ್ವೆ ಯೋಜನೆಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದ್ದು, ಉಪನಗರ ರೈಲುಗಳನ್ನೂ ಇದರ ಜತೆ ಸಂಪರ್ಕ ಮಾಡುವುದು ಹೆಚ್ಚು ಸೂಕ್ತ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ನಮ್ಮ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್‌, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ, ಕೆ-ರೈಡ್‌ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್.ಮಂಜುಳಾ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಓದುಗರ ಪತ್ರ: ಅನುಮಾನ ಬಗೆಹರಿಸಿ

ರಾಜ್ಯದ ಬಹಳಷ್ಟು ಜನರು ಆನ್‌ಲೈನ್ -ಆಫ್ಲೈನ್ ಮೂಲಕ ನೋಂದಣಿ ಮಾಡಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅನೇಕರಲ್ಲಿ ಗೊಂದಲ…

7 hours ago

ಓದುಗರ ಪತ್ರ: ಕನ್ನಡ ಒಗ್ಗಟ್ಟು

ಕನ್ನಡ ಒಗ್ಗಟ್ಟು ಕಾವೇರಿಯ ಹೆಸರಲ್ಲಿ ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು ಆಳುವವರ ಜೊತೆ ಕೈ ಜೋಡಿಸಿದರೆ ಬಿಡಿಸಲಿವೆ ಹಲವು ಬಿಕ್ಕಟ್ಟು…

7 hours ago

ಓದುಗರ ಪತ್ರ: ರಾಜಕಾರಣದ ಸರಕು!

ರಾಜಕಾರಣದ ಸರಕು! ‘ನೀರಿಗಾಗಿ ತಮಿಳುನಾಡು ಸುಪ್ರೀಂಗೆ ಮೊರೆ!’ ನೀರಿzಗ ಹರಿಸಿದೆ ಕರ್ನಾಟಕ ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು ಇಲ್ಲದಾಗ ಹರಿಸುವುದೆಂತು…

7 hours ago

ಓದುಗರ ಪತ್ರ: ಅಕ್ಕಿ ದರ ಏರಿಕೆಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುಂಗಭದ್ರಾ ಜಲಾಶಯದ ಗೇಟ್ ರಿಪೇರಿಯಿಂದಾಗಿ ಸುಮಾರು ೭…

7 hours ago

ಸತ್ಯದ ಪ್ರತಿಪಾದಕರು ಮಾತ್ರ ಆದರ್ಶ ಆಗಬಲ್ಲರು

ಸಿ.ಹರಕುಮಾರ್, ಲೇಖಕ ಜನರ ನೆಮ್ಮದಿ ಕಸಿದುಕೊಂಡವರು, ನೆಮ್ಮದಿಯಿಂದಿರಲು ಸಾಧ್ಯವೆ? ಸತ್ಯದ ಪ್ರತಿಪಾದನೆ ಆ ಕ್ಷಣಕ್ಕೆ ಇಷ್ಟವಾಗದಿರಬಹುದು, ಶತ್ರುಗಳನ್ನು ಹುಟ್ಟುಹಾಕಬಹುದು, ಜೀರ್ಣಿಸಿಕೊಳ್ಳಲು…

7 hours ago

300 ಮಕ್ಕಳ ಶಿಕ್ಷಣಕ್ಕೆ ಶೇ.96ರಷ್ಟು ಸಂಪತ್ತನ್ನು ದಾನ ಮಾಡಿದ ಟೆಕ್ಕಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಾಲಕಾರ್ಮಿಕರಿಗಾಗಿ ಏಕಲವ್ಯ ಟ್ರಸ್ಟ್ ಸ್ಥಾಪನೆ  ಛತ್ತೀಸ್‌ಘಡದ ಭಿಲಾಯ್‌ಯ ವಿವೇಕ್ ಶಂಗಾರಿಯ ತಾಯಿ ತೀರಿಕೊಂಡಾಗ ಅವನಿಗೆ…

7 hours ago