ಹ್ಯಾಂಗ್‌ಝೌ : ಚೀನಾದ ಹಾಂಗ್ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ನ ಪುರುಷ ಹಾಕಿ ಕ್ವಾರ್ಟರ್ ಫೈನಲ್ನಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್ಗೇರಿದೆ.
ಗೊಂಗ್‌ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಇತ್ತ ಭಾರತ ಮುನ್ಪಡೆ ಆಟಗಾರರ ಸಾಂಘಿಕ ಪ್ರದರ್ಶನ ಕಂಡು ಪಾಕಿಸ್ತಾನ್ ತಂಡದ ರಕ್ಷಣಾತ್ಮಕ ಆಟಗಾರರು ನಿಬ್ಬೆರಗಾಗಿ ನಿಂತರು. ಪರಿಣಾಮ 8ನೇ ನಿಮಿಷದಲ್ಲಿ ಅಭಿಷೇಕ್ ನೀಡಿದ ಉತ್ತಮ ಪಾಸ್ ಅನ್ನು ಮಂದೀಪ್ ಗೋಲಾಗಿ ಪರಿವರ್ತಿಸಿದರು.
ಇದರ ಬೆನ್ನಲ್ಲೇ 11ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಗೋಲಾಗಿಸುವಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಯಶಸ್ವಿಯಾದರು. ಅಲ್ಲದೆ ಭಾರತ ತಂಡವು 2-0 ಅಂತರದಿಂದ ಮೊದಲ ಕ್ವಾರ್ಟರ್ ಅನ್ನು ಅಂತ್ಯಗೊಳಿಸಿತು. ಇನ್ನು ದ್ವಿತೀಯ ಸುತ್ತಿನ 17ನೇ ನಿಮಿಷದಲ್ಲೇ ಹರ್ಮನ್‌ಪ್ರೀತ್ ಸಿಂಗ್ ಡ್ರ್ಯಾಗ್ ಫ್ಲಿಕ್‌ನೊಂದಿಗೆ ಗೋಲು ಗಳಿಸಿದರು.
30ನೇ ನಿಮಿಷದಲ್ಲಿ ರಿವರ್ಸ್ ಸ್ಟಿಕ್ ಶಾಟ್‌ನೊಂದಿಗೆ ಸುಮಿತ್ ಚೆಂಡನ್ನು ಗೋಲು ಬಲೆಯತ್ತ ತಲುಪಿಸಿದರು. ಇದನ್ನು ಅತ್ಯಾಕರ್ಷಕವಾಗಿ ಗೋಲಾಗಿ ಪರಿವರ್ತಿಸುವಲ್ಲಿ ಗುರ್ಜಂತ್ ಯಶಸ್ವಿಯಾದರು. 33ನೇ ನಿಮಿಷದಲ್ಲಿ ಪಾಕ್ ಗೋಲ್ ಕೀಪರ್ ಅನ್ನು ವಂಚಿಸಿದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಭಾರತ ತಂಡಕ್ಕೆ 5ನೇ ಯಶಸ್ಸು ತಂದುಕೊಟ್ಟರು. ಅಂದರೆ ಮೊದಲಾರ್ಧದಲ್ಲೇ ಭಾರತ ತಂಡವು 5-0 ಅಂತರದಿಂದ ಮುನ್ನಡೆ ಸಾಧಿಸಿತ್ತು.
ಈ ಮುನ್ನಡೆಯೊಂದಿಗೆ ದ್ವಿತಿಯಾರ್ಧ ಆರಂಭಿಸಿದ ಭಾರತೀಯ ಆಟಗಾರರು ರಣ ಉತ್ಸಾಹದಲ್ಲಿ ಮೈದಾನದಲ್ಲಿ ಮೆರೆದಾಡಿದರು. ಅತ್ತ ಪಾಕ್ ಪಡೆಯು ಭಾರತೀಯ ಗೋಲಿನತ್ತ ಸತತ ದಾಳಿ ನಡೆಸಲು ಯತ್ನಿಸಿದರೂ ಚೆಂಡನ್ನು ಗೋಲು ಬಲೆಯತ್ತ ತಲುಪಿಸಲು ಮಾತ್ರ ಸಾಧ್ಯವಾಗಿರಲಿಲ್ಲ.
ಆದರೆ 34ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಟೀಮ್ ಇಂಡಿಯಾ ನಾಯಕ 6ನೇ ಗೋಲಾಗಿ ಪರಿವರ್ತಿಸಿದರು. ಇದರ ಬೆನ್ನಲ್ಲೇ ಆಕ್ರಮಣಕಾರಿಯಾಗಿ ಮುನ್ನುಗಿದ ಪಾಕ್ ಮುನ್ಪಡೆ ಆಟಗಾರರು ಭಾರತದ ಗೋಲ್ನತ್ತ ಸತತ ದಾಳಿಯಿಟ್ಟರು. ಪರಿಣಾಮ 38ನೇ ನಿಮಿಷದಲ್ಲಿ ಸುಫಿಯಾನ್ ಮೊಹಮ್ಮದ್ ಬಾರಿಸಿದ ಪ್ರಬಲ ಡ್ರ್ಯಾಗ್ ಫ್ಲಿಕ್ ಭಾರತದ ಗೋಲು ಕೀಪರ್ನನ್ನು ವಂಚಿಸಿ ಗೋಲು ಬಲೆಯೊಳಗೆ ತಲುಪಿತು.
ಇತ್ತ ಮತ್ತಷ್ಟು ಸಂಘಟಿತ ಪ್ರದರ್ಶನ ನೀಡಿದ ಭಾರತದ ಪರ ವರುಣ್ ಕುಮಾರ್ 41ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು. ಆದರೆ ಮೂರನೇ ಕ್ವಾರ್ಟರ್ನ ಅಂತ್ಯದ ವೇಳೆಗೆ ಅಬ್ದುಲ್ ರಾಣಾ ಗೋಲುಗಳಿಸಿ ಅಂತರವನ್ನು 7-2 ಕ್ಕೆ ಇಳಿಸಿದರು. ಆದರೆ ಅಂತಿಮ ಸುತ್ತಿನ ಆರಂಭದಲ್ಲೇ ಶಂಶರ್ ರಿವರ್ಸ್ ಸ್ಟಿಕ್ ಶಾಟ್‌ನೊಂದಿಗೆ ಭಾರತಕ್ಕೆ 8ನೇ ಯಶಸ್ಸು ತಂದುಕೊಟ್ಟರು.
ಇನ್ನು 49ನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ ಗೋಲು ಬಾರಿಸಿದರೆ, 53ನೇ ನಿಮಿಷದಲ್ಲಿ ವರುಣ್ ಕುಮಾರ್ ಚೆಂಡನ್ನು ಗುರಿಗೆ ತಲುಪಿಸಿದರು. ಈ ಮೂಲಕ 10-2 ಅಂತರದೊಂದಿಗೆ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದು ಭಾರತೀಯ ಹಾಕಿ ಪಡೆ ಏಷ್ಯನ್ ಗೇಮ್ಸ್ ಸೆಮಿಫೈನಲ್ಗೇರಿದೆ.
ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ 4 ಗೋಲು ಬಾರಿಸಿದರೆ, ವರುಣ್ ಕುಮಾರ್ ಎರಡು, ಶಂಶೇರ್, ಮಂದೀಪ್, ಸುಮಿತ್, ಗುರ್ಜಂತ್ ತಲಾ ಒಂದು ಗೋಲು ಗಳಿಸಿ ಮಿಂಚಿದರು.
ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ…
ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ…
ಕುವೈತ್/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್ ಮಿಶಾಲ್ ಅಲ್…
ಕಲಬುರ್ಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ…
ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್…